Wednesday, March 6, 2013

ನಾ ಹೇಗೆ ಬಡವನು ನಾ ಹೇಗೆ ಪರದೇಶಿ...


ಅಭಿವೃದ್ಧಿಯ ಮಾತನಾಡುವಾಗಲೆಲ್ಲಾ ಬಡತನದ ರೇಖೆಯ ಮಾತು ಸಹಜವಾಗಿ ಬರುತ್ತದೆ. ಬಡತನದ ರೇಖೆಯ ಮೇಲಿರುವ ಜನಸಂಖ್ಯೆ ಪ್ರಮಾಣ ಅಭಿವೃದ್ಧಿಯ ಅನೇಕ ಮಾಪಕಗಳಲ್ಲಿ ಒಂದು. ಭಾರತದಲ್ಲಿ ಈ ರೇಖೆಯನ್ನು ನಿರ್ಧರಿಸಲು ಕ್ಯಾಲೋರಿಫಿಕ್ ವ್ಯಾಲ್ಯೂ ಆಧಾರದ ಮೇಲೆ [ಅಂದರೆ ಇಂತಿಷ್ಟು ಶಕ್ತಿಯನ್ನು ಆರ್ಜಿಸಲು ಬೇಕಾದ ಆಹಾರವನ್ನು ಕೊಳ್ಳಲು ಆಗುವ ಖರ್ಚಿನ ಆಧಾರದ ಮೇಲೆ] ವಾರ್ಷಿಕ ಆದಾಯವನ್ನು ನಿಗದಿ ಮಾಡಲಾಗಿದೆ. ಪ್ರತೀ ವರ್ಷ ಸರಕಾರ ಇಂತಿಷ್ಟು ಮಂದಿ ಬಡತನದ ರೇಖೆಯನ್ನು ಉಲ್ಲಂಘಿಸಿದ್ದಾರೆಂದು ಘೋಷಿಸಿ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತದೆ. ಸರಕಾರದ ಯಾವುದೇ ಅಂಕಿ ಅಂಶಗಳನ್ನು ಅನುಮಾನದಿಂದ ನೋಡುವ ಜನ ಈ ಮಾಪನವನ್ನು ಸಹಜವಾಗಿ ಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಬಡತನವನ್ನು ಅಳೆಯಲು [ಸ್ಥಳೀಯ ಹಣದ ಖರೀದಿಯ ಶಕ್ತಿಯನುಸಾರ] ದಿನಕ್ಕೊಂದು ಡಾಲರ್ ಸಮಾನವಾದ ಆದಾಯವನ್ನು ಮಾಪಕವನ್ನಾಗಿ ಇಟ್ಟುಕೊಳ್ಳಲಾಗಿದೆ. ಈಗೀಗ ಇದನ್ನು ಎರಡು ಹಂತಗಳಲ್ಲಿ ಅಳೆಯುವುದೂ ಉಂಟು. ದಿನಕ್ಕೊಂದು ಡಾಲರ್‌ಗಿಂತ ಕಡಿಮೆ ಆರ್ಜಿಸುವ ಅತೀ-ಬಡವರು ಹಾಗೂ ಎರಡು ಡಾಲರ್‌ವರೆಗೆ ಆದಾಯವಿರುವ ಬಡವರು.

ಬಡತನದ ಅಧ್ಯಯನ ನಡೆಸುವ ಹೆಚ್ಚಿನಂಶ ಎಲ್ಲರ ಗಮನವೂ ಕೇಂದ್ರೀಕೃತವಾಗಿರುವುದು ಬಡವರು ಬಡತನದಿಂದ ಬಿಡುಗಡೆ ಪಡೆಯುವ ಪರಿಯ ಬಗ್ಗೆ. ಹೀಗಿರುವಾಗ ಈ ಬಗ್ಗೆ ಒಂದು ಹೊಸ ಒಳನೋಟವನ್ನು ಡ್ಯೂಕ್ ಯೂನಿವರ್ಸಿಟಿಯ ಅನಿರುದ್ಧ ಕೃಷ್ಣ ನಮಗೆ ನೀಡುವ ಯತ್ನ ಮಾಡುತ್ತಿದ್ದಾರೆ. ಅನಿರುದ್ಧ ಕೃಷ್ಣರ ಅಧ್ಯಯನ ಎರಡು ನಿಟ್ಟಿನಿಂದ ನಮಗೆ ಮುಖ್ಯವಾಗುತ್ತವೆ. ಒಂದು: ಅವರು ಬಡತನವನ್ನು ನಿರ್ಧರಿಸುವ ರೀತಿ ಎರಡು: ಅದರ ಬಡತನಕ್ಕೆ ಕಾರಣಗಳ ಅಧ್ಯಯನ.

ಅವರ ಪ್ರಕಾರ ಬಡತನ ಎನ್ನುವುದು ಒಂದು ಕಟ್ಟುನಿಟ್ಟಿನ ಗೆರೆಯಲ್ಲ. ಬದಲಿಗೆ ಯಾರು ಬಡವರು ಎನ್ನುವ ವರ್ಗೀಕರಣವನ್ನು ಸ್ಥಳೀಯ ಸಮಾಜ ಡೈನಮಿಕ್ ಆಗಿ ಮಾಡುತ್ತಲೇ ಇರುತ್ತದೆ. ಹೀಗಾಗಿ ಅವರು ಬಡತನವನ್ನು ಪ್ರಗತಿಯ ಹಂತಗಳ ಮೂಲಕ ಅಳೆಯಲು ಪ್ರಯತ್ನಿಸುತ್ತಾರೆ. ಇದನ್ನು ನಿರ್ಧರಿಸುವ ಅವರ ರೀತಿಯೂ ಕುತೂಹಲದ್ದು:

ಮೊದಲಿಗೆ ಅವರು ಒಂದು ಪ್ರಾಂತಕ್ಕೆ ಹೋಗಿ ಜನರನ್ನು ಒಂದೆಡೆ ಸೇರಿಸಿ "ಇಲ್ಲಿ ನೀವು ಯಾರನ್ನು ಬಡವರೆಂದು ಕರೆಯುತ್ತೀರಿ?" ಅನ್ನುವ ಪ್ರಶ್ನೆಯನ್ನು ಚರ್ಚಿಸುತ್ತಾರೆ. ಅವರ ಇತ್ತೀಚಿನ ಅಧ್ಯಯನದಲ್ಲಿ ಮೂರು ರಾಜ್ಯಗಳಲ್ಲಿ ಜನರನ್ನು ಕೇಳಿದಾಗ ಅವರಿಗೆ ಬಡತನದ ಪರಿಭಾಷೆ ಭಿನ್ನವಾಗಿ ಬಂದದ್ದು ಕುತೂಹಲದ ವಿಷಯವಾಗಿದೆ. ಮೊದಲಿಗೆ ಅವರು ಈ ಮಾಪನಕ್ಕೆ ಬಳಸಿದ [ಜನರೇ ನಿರ್ಧರಿಸಿದ] ಪಟ್ಟಿಯನ್ನು ಗಮನಿಸೋಣ - [೧] ಕುಟುಂಬಕ್ಕೆ ಉಣ್ಣಲು ಸಾಕಷ್ಟು ಆಹಾರ ಸಿಗುತ್ತದೆಯೇ? [೨] ಮಕ್ಕಳನ್ನು ಶಾಲೆಗೆ ಕಳಿಸುವ ತಾಕತ್ತಿದೆಯೇ? [೩] ಮನೆಯಾಚೆ ಧರಿಸಲು ಉತ್ತಮ ಬಟ್ಟೆಗಳಿವೆಯೇ? [೪] ಸಾಲದ ಕಂತನ್ನು ನಿಯಮಿತವಾಗಿ ಮರುಪಾವತಿ ಮಾಡುವ ತಕತ್ತಿದೆಯೇ? [೫] ಬಾವಿ ತೋಡುವ/ಹೈನು ಕೊಳ್ಳುವ/ ಮೋಟರ್ ಸೈಕಲ್ ಕೊಳ್ಳುವ ಶಕ್ತಿಯಿದೆಯೇ? ಹೀಗೆ ಊಟದಿಂದಾರಂಭವಾಗಿ ಬೈಕ್ ಕೊಳ್ಳುವವರೆಗೂ ಒಂದು ಪ್ರಗತಿಯ ಮೆಟ್ಟಿಲನ್ನು ಜನರೇ ಪಟ್ಟಿಮಾಡುತ್ತಾರೆ. ರಾಜಾಸ್ಥಾನದಲ್ಲಿ ಊಟ, ಬಟ್ಟೆ, ಮಕ್ಕಳ ಸ್ಕೂಲು, ಸಾಲಮರುಪವತಿಯ ಘಟ್ಟಗಳನ್ನು ದಾಟಿದವರನ್ನು ಬಡತನದ ರೇಖೆಯನ್ನು ಉಲ್ಲಂಘಿಸಿದವರೆಂದು ಸಮುದಾಯ ನಿರ್ಧರಿಸಿದೆ. ಅದೇ ಗುಜರಾತಿಗೆ ಬಂದರೆ ಈ ನಾಲ್ಕೂ ಅಲ್ಲದೇ, ಮನೆಯ ಸಣ್ಣ ಪುಟ್ಟ ಮರಮ್ಮತ್ತು ಮಡಿಸಬಲ್ಲವರೂ, ಗುತ್ತಿಗೆಗೆ ಭೂಮಿ ಪಡೆದು ಕೃಷಿ ಮಾಡಬಲ್ಲವರೂ ಬಡವರೇ - ಹೀಗಾಗಿ ರಾಜಾಸ್ಥಾನದ ನಾಲ್ಕೂ ಅಂಶಗಳಲ್ಲದೇ ಇನ್ನೆರಡು ಅಂಶಗಳ ಉಲ್ಲಂಘನೆಯೂ ಗುಜರಾತಿನಲ್ಲಿ ಸೇರಿಕೊಳ್ಳುತ್ತದೆ. ರಾಜಾಸ್ಥಾನಕ್ಕಿಂತ ಹೆಚ್ಚು ವಿಕಾಸಗೊಂಡಿರುವ ಗುಜರಾತ್ ರಾಜ್ಯದಲ್ಲಿ, ಗುತ್ತಿಗೆಗೆ ಭೂಮಿ ಪಡೆಯಬಲ್ಲವರೂ ಬಡವರೇ! ಆಂಧ್ರಪ್ರದೇಶದ್ದು ಗಮ್ಮತ್ತಿನ ವಿಚಾರ. ಅಲ್ಲಿ - ಮಕ್ಕಳನ್ನು ಸ್ಕೂಲಿಗೆ ಕಳಿಸುವವರನ್ನು ಬಡತನದ ರೇಖೆಯ ಉಲ್ಲಂಘನೆ ಮಾಡಿದವರನ್ನಾಗಿ ಸಮುದಾಯದವರು ಪರಿಗಣಿಸಿದ್ದಾರೆ! ಆದರೆ ಮನೆಯ ಮರಮ್ಮತ್ತು ಮಾಡಿಸುವ ತಾಕತ್ತಿರುವವರು ಬಡವಾಗಿಯೇ ಪರಿಗಣಿಸಲ್ಪಡುತ್ತಾರೆ!

ಈ ರೀತಿಯ ವರ್ಗೀಕರಣದಿಂದಾಗಿ ನಮಗೆ ದೇಶದ ಭಿನ್ನ ಪ್ರಾಂತದಲ್ಲಿರುವ ನಂಬುಗೆಗಳ ಪರಿಚಯವಾಗುತ್ತದೆ. ಇದರಿಂದ ಸ್ಪಷ್ಟ ನೀತಿಗಳನ್ನೂ ಸರಕಾರಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಅಂಕಿಸಂಖ್ಯೆಗಳ ಮಾತಿಗೆ ಬಂದಾಗ ಈ ಪದ್ಧತಿಯ ಪ್ರಯೋಜನ ಅಷ್ಟಕ್ಕಷ್ಟೇ. ಯೂನಿವರ್ಸಿಟಿಗಳಲ್ಲಿ ಅನಿರುದ್ಧ ಮತ್ತು ನನ್ನಂತಹವರು ಮಾಡುವ ಅಧ್ಯಯನಕ್ಕೂ ಸರಕಾರದ ನೀತಿ ರೂಪುಗೊಳ್ಳುವುದಕ್ಕೂ ಇರುವ ಅಂತರ ಇದೇ. ನಾವುಗಳು ಒಂದು ಪ್ರಾಂತದ ವಿವರವನ್ನು ಹಿಡಿದು ತೋರಿಸಬಲ್ಲೆವು. ಆದರೆ ನಮ್ಮ ಪದ್ಧತಿಯನ್ನು ಸರಕಾರ ಅಳವಡಿಸ ಹೋದರೆ ಇರುವ ಬಜೆಟ್ಟೆಲ್ಲಾ ಮಾಹಿತಿ ಸಂಗ್ರಹಿಸುವುದರಲ್ಲೇ ಖರ್ಚಾಗಿಬಿಡಬಹುದು! ಹೀಗಿದ್ದಾಗ್ಯೂ ಈ ಅಧ್ಯಯನಗಳಿಂದ ಸರಕಾರದ ಪದ್ಧತಿಗಳಿಗೆ ಉಂಟುಮಾಡಬಹುದಾದ ಸುಧಾರಣೆಯನ್ನು ನಾವು ಸೂಚಿಸಲು ಸಾಧ್ಯವಾಗುತ್ತದೇನೋ.

ಅನಿರುದ್ಧರ ಮಾಹಿತಿ ಸಂಗ್ರಹಣೆ ಬಡತನವನ್ನು ನಿರ್ಧರಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಬದಲಿಗೆ ಅವರು ಮಾಡಿದ ಅಧ್ಯಯನದ ಮುಖ್ಯ ಭಾಗವೆಂದರೆ - ಬಡತನದಿಂದ ಮುಕ್ತರಾದವರ ಸಂಖ್ಯೆಯನ್ನು ಸರಕಾರ ನೀಡುತ್ತಲೇ ಇರುತ್ತದಾದರೂ, ಬಡವರಾಗಿಲ್ಲದಿದ್ದು - ಬಡತನಕ್ಕೆ ಜಾರಿದವರ ಸಂಖ್ಯೆಯನ್ನು ಯಾರೂ ನೋಡುವುದೇ ಇಲ್ಲ ಅನ್ನುವ ಅತೀ ಮುಖ್ಯ ಅಂಶಕ್ಕೆ ಸಂಬಂಧಿಸಿದ್ದು. ಅವರು ಅಧ್ಯಯನ ಮಾಡಿದ ಮೂರು ರಾಜ್ಯಗಳಲ್ಲಿ, ಕಳೆದ ಇಪ್ಪತ್ತೈದು ವರ್ಷಗಳಲ್ಲಿನ ಅಂಕಿ ಸಂಖ್ಯೆಯಿಂದ ತಿಳಿಯುದು ಇದು: ರಾಜಾಸ್ಥಾನದಲ್ಲಿ ೧೧ ಪ್ರತಿಶತ ಜನ ಬಡತನವನ್ನು ಉಲ್ಲಂಘಿಸಿ ಮುಂದುವರೆದರೆ, ೮ ಪ್ರತಿಶತ ಬಡವರಲ್ಲದ ಜನ ಬಡತನಕ್ಕೆ ಜಾರಿದರು. ಒಟ್ಟಾರೆ ನಿವ್ವಳ ಪ್ರಗತಿ ೩ ಪ್ರತಿಶತ ಮಾತ್ರ. ಹಾಗೇ ಗುಜರಾತಿನಲ್ಲಿ ೩ ಮತ್ತು ಆಂಧ್ರಪ್ರದೇಶದಲ್ಲಿ ೨ ಪ್ರತಿಶತ ಮಾತ್ರ ನಿವ್ವಳ ಪ್ರಗತಿಯಾಗಿದೆ.

ಅಂದರೆ ಸರಕಾರೀ ನೀತಿಗಳಲ್ಲಿ ಬಡವರನ್ನು ಮೇಲೆತ್ತುವ ಕಾರ್ಯಕ್ರಮಗಳು ನಮಗೆ ಕಾಣಿಸಿದರೂ ಜನ ಬಡತನಕ್ಕೆ ಜಾರದಿರುವಂತೆ ನೋಡಿಕೊಳ್ಳುವ, ಬಡತನಕ್ಕೆ ಪತನವಾಗದಿರುವ ನೀತಿಗಳು ಹೆಚ್ಚಾಗಿ ಕಾಣುವುದಿಲ್ಲ. ಇದನ್ನು ಬಗೆದು ನೋಡುವುದು ಅವಶ್ಯಕ. ಬಡತನವನ್ನು ಭೇದಿಸಿ ಹೊರಬರುವುದಕ್ಕೆ ಮತ್ತು ಪತನಕ್ಕೆ ಕಾರಣಗಳು ತೀರಾ ಭಿನ್ನ ಎಂದು ಅನಿರುದ್ಧ ಹೇಳುತ್ತಾರೆ.

ಬಡತನದಿಂದ ಹೊರಬರಲು ಕಾರಣಗಳು ಮುಖ್ಯತಃ ಮಾಡುತ್ತಿರುವ ವೃತ್ತಿಯ ವೈವಿಧ್ಯತೆಯಿಂದಾಗಿ ಉಂಟಾಗುತ್ತದೆ. ಅರ್ಥಾತ್: ಕೃಷಿಯ ಜೊತೆಜೊತೆಗೇ ಮತ್ತೊಂದು ಆದಾಯವೂ ಆ ಕುಟುಂಬಕ್ಕೆ ಇದ್ದಲ್ಲಿ ಅನೇಕ ದಾರಿಗಳಿಂದ ಮನೆಗೆ ಹಣ ಬರುತ್ತಿದ್ದಲ್ಲಿ ಆರ್ಥಿಕವಾಗಿ ಕುಟುಂಬಗಳು ಉದ್ಧಾರವಾಗಲು ಸಾಧ್ಯ. ಹಾಗೆಯೇ ಸರಕಾರಿ ಅಥವಾ ಖಾಸಗೀ ನೌಕರಿ ಸಿಕ್ಕಾಗ, ಕೃಷಿಗೆ ನೀರಿನ ಸದುಪಾಯ ಒದಗಿ ಬಂದಾಗ ಜನ ಬಡತನದಿಂದ ಹೊರಬರುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

ಅದೇ ಬಡತನಕ್ಕೆ ಜಾರಲು ಕಾರಣಗಳೇನಿರಬಹುದು? ಸೋಮಾರಿತನದಿಂದ ಅಥವಾ ಮದ್ಯಪಾನದಿಂದ ಸಂಸಾರ ಸರ್ವನಾಶವಾಗುತ್ತದೆ ಅನ್ನುವುದಕ್ಕೆ ತಮ್ಮ ಬಳಿ ಯಾವುದೇ ಮಾಹಿತಿಯಿಲ್ಲವೆಂದು ಅನಿರುದ್ಧ ಹೇಳುತ್ತಾರೆ. ಪತನಕ್ಕೆ - ಅನಾರೋಗ್ಯದಿಂದಾಗಿ ಆಗುವ ಖರ್ಚು, ಮದುವೆ, ಶ್ರಾದ್ಧ, ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳಿಗಾಗುವ ಖರ್ಚು ಮತ್ತು ಅನಾವೃಷ್ಟಿಯಿಂದಾಗ ಕೃಷಿ ವಿಫಲಗೊಳ್ಳುವುದು ಹೀಗೆ ಮೂರು ಮುಖ್ಯ ಕಾರಣಗಳನ್ನು ಹಾಗೂ ಈ ಎಲ್ಲಕ್ಕಾಗಿ ಮಾಡುವ ಸಾಲ ಮತ್ತು ಅದನ್ನು ತೀರಿಸಲಾರದ ಪರಿಸ್ಥಿತಿ ನಾಲ್ಕನೇ ಕಾರಣವೆಂದೂ ಅವರು ಕಂಡುಕೊಂಡಿದ್ದಾರೆ.

ಹೀಗೆ ಬಡತನವನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಸರಿಯಾದ ನೀತಿಗಳನ್ನು ರೂಪಿಸಲು ಈ ರೀತಿಯ ಅಧ್ಯಯನಗಳಿಂದ ಸಾಧ್ಯವಾಗಬಹುದು. ಇದನ್ನು ಗಮನದಲ್ಲಿಟ್ಟಾಗ ಬಹುಶಃ ಹಿಂದಿನ ಸರಕಾರ ಮಾಡಿದ ಸಾಲಮನ್ನಾ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ ಎಂದು ಒಪ್ಪಿಕೊಳ್ಳಬೇಕಾಗಬಹುದೇನೋ. ಆದರೂ ಅದು ನಾಲ್ಕನೆಯ ಕಾರಣ. ಮೂಲಭೂತ ಕಾರಣದ ಬಗ್ಗೆ ಯಾವ ರೀತಿಯ ನೀತಿಗಳನ್ನು ರೂಪಿಸಬಹುದು ಅನ್ನುವುದೇ ಸರಕಾರ ನಡೆಸಬೇಕಾದ ಕಸರತ್ತಿನ ವಿಷಯ. ಈ ನಿಟ್ಟಿನಲ್ಲಿ ಅನಿರುದ್ಧ ಕೇವಲ ದಿಕ್ಕು ತೋರಿಸಿ ಏನೂ ಹೇಳದೇ ಇದ್ದುಬಿಟ್ಟಿದ್ದಾರೆ. ಐ‌ಏ‌ಎಸ್ ಅಧಿಕಾರಿಯಾಗಿದ್ದು ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಆ ಕೆಲಸವನ್ನು ಒಗೆದು ಯೂನಿವರ್ಸಿಟಿಯಲ್ಲಿ ಅಧ್ಯಯನಗಳನ್ನು ಮಾಡುವುದಕ್ಕೆ ಯಾಕೆ ತೊಡಗಿದರೋ ಅನ್ನುವಷ್ಟೇ ಚಿದಂಬರ ರಹಸ್ಯ, ಸರಕಾರವನ್ನು ಒಳಗಿನಿಂದ ಬಲ್ಲ ಅವರು ತಮ್ಮ ಅಧ್ಯಯನದಿಂದ ನೀತಿಗಳನ್ನು ಹೇಗೆ ರೂಪಿಸಬಹುದು ಅನ್ನುವುದನ್ನು ಯಾಕೆ ಸೂಚಿಸಿಲ್ಲ ಅನ್ನುವುದು.


No comments:

Post a Comment