Wednesday, March 6, 2013

ಮಕ್ಕಳಿಸ್ಕೂಲು ಮನೇಲಲ್ಲ



ಆಂಧ್ರಪ್ರದೇಶ - ರಂಗಾರೆಡ್ಡಿ ಜೆಲ್ಲೆ - ಶಂಕರಪಲ್ಲಿ ಮಂಡಲದ ಪೊದ್ದುಟೂರು ಗ್ರಾಮ ಸರಪಂಚ್ ಕಟಿಕೇ ಶ್ರೀನಿವಾಸ್ ಸಾಮಾನ್ಯ ಗ್ರಾಮೀಣ ರಾಜಕಾರಣಿಯಂತೆ ಕಾಣುವುದಿಲ್ಲ. ಯುವಕನೂ ವಿದ್ಯಾವಂತನೂ ಆಗಿರುವ ಆತ ತನ್ನ ಗ್ರಾಮದ ಬಗ್ಗೆ ಯೋಚಿಸುತ್ತಲೇ ಆ ಗ್ರಾಮದ ನಸೀಬು ವಿಸ್ತಾರವಾದ ಆರ್ಥಿಕ-ರಾಜಕೀಯ-ಸಾಮಾಜಿಕ ಆಗುಹೋಗುಗಳ ಜೊತೆ ಹೇಗೆ ಬೆಸೆದಿದೆ ಎಂದು ನೋಡಬಲ್ಲವ. ಹೀಗಾಗಿ ಆತನ ಜೊತೆ ಮಾತನಾಡುವುದೂ ಒಂದು ಒಳ್ಳೆಯ ಅನುಭವವೇ. ಆತ ಯಾವ ಪಕ್ಷಕ್ಕೆ ಸೇರಿದವ ಅನ್ನುವುದು ಮುಖ್ಯವಲ್ಲ, ಆದರೆ ಸರಪಂಚರಲ್ಲಿ ಇಂಥ ಯೋಚನಾಧೋರಣೆ ಇರುವುದು ನಿಜಕ್ಕೂ ಒಂದು ಉತ್ತಮ ಲಕ್ಷಣ ಅನ್ನಿಸುತ್ತದೆ.

ಆತನ ಸಹಜ ಬುದ್ಧಿವಂತಿಕೆಗೆ ತುಸುವಾದರೂ ಪೂರಕವಾಗಿರಬಹುದಾದ ಕಾರಣ ಆತ ಹಿಂದೆ ಎಂ.ವಿ.ಫೌಂಡೇಶನ್ [ಎಂ.ವಿ.ಎಫ್] ಜೊತೆಗೆ ಒಡನಾಡಿ ಅಲ್ಲಿನ ಗ್ರಾಮಾಂತರ ಶಾಲೆಯಲ್ಲಿ ಸ್ವಯಂ-ಪ್ರೇರಣೆಯಿಂದ ಪಾಠಮಾಡಿದ್ದ. ಎಂ.ವಿ.ಎಫ್ ರಂಗಾರೆಡ್ಡಿ ಜಿಲ್ಲೆಯಲ್ಲಿ ಹಲವಾರು ವರುಷಗಳಿಂದ ಕಷ್ಟ ಎನ್ನಿಸಬಹುದಾದ ಕೆಲಸವನ್ನು ಮಾಡುತ್ತಿದೆ. ಆ ಸಂಸ್ಥೆಯ ಮೂಲೋದ್ದೇಶ ಮಕ್ಕಳಿಗೆ ತಮ್ಮ ಸಹಜವಾದ ಹಕ್ಕುಗಳನ್ನು ಕೊಡಿಸುವುದು. ಹೀಗಾಗಿ ಅವರು ಹೇಳುವ ಮಾತುಗಳು ರಾಜಿಗೆ ಒಗ್ಗದ ಈ ಅಂಶಗಳ ಆಧಾರದಿಂದ ಕೂಡಿದೆ:

- ಎಲ್ಲ ಮಕ್ಕಳೂ ಕಾನೂನಿನನ್ವಯ ಗುರುತಿಸಲ್ಪಟ್ಟ ಶಾಲೆಗಳಲ್ಲಿ ಪೂರ್ಣಾವಧಿ ವಿದ್ಯಾರ್ಥಿಗಳಾಗಿ ನೋಂದಾಯಿತರಾಗಿರಬೇಕು
- ಶಾಲೆಯಲ್ಲಿಲ್ಲದ ಮಗುವನ್ನು ಬಾಲಕಾರ್ಮಿಕ ಎಂದು ಪರಿಗಣಿಸಲಾಗುವುದು
- ಮಕ್ಕಳು ಮಾಡುವ ಯಾವುದೇ ಕಾಯಕ ಅಪಾಯದಿಂದ ಕೂಡಿದ್ದು - ಅವರ ಬೆಳವಣಿಗೆಗೆ ಮಾರಕವಾದದ್ದು
- ಎಲ್ಲ ರೀತಿಯ ಬಾಲಕಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಬೇಕು - ಬಾಲಕಾರ್ಮಿಕರನ್ನು ಒಪ್ಪಿ ನಿಯಂತ್ರಿಸುವ ಯಾವುದೇ ಕಾನೂನು ಸಹ ಇರಬಾರದು.
- ಹಾಗೂ ಬಾಲಕಾರ್ಮಿಕರನ್ನು ಸಮರ್ಥಿಸುವ ಯಾವುದೇ ವಿಚಾರವನ್ನು ಧಿಕ್ಕರಿಸಬೇಕು.

ಹೀಗೆ ಒಂದು ವಿಪರೀತವಾದ ಮಕ್ಕಳಪರವಾದ ನಿಲುವನ್ನು ಎಂ.ವಿ.ಎಫ್. ತೆಗೆದುಕೊಂಡಿರುವುದಲ್ಲದೇ ಆ ಉದ್ದೇಶವನ್ನು ಸಾಧಿಸಲು ಅನೇಕ ಜಾಗಗಳಲ್ಲಿ ಕೆಲಸ ಮಾಡುತ್ತಿದೆ. ಈ ರೀತಿಯ ಕೆಲಸ ಕಷ್ಟದ್ದು ಹಾಗೂ ತುಂಬಾ ಮುಗ್ಗಟ್ಟಿನಿಂದ ಕೂಡಿದ್ದು. ಈ ಕೆಲಸವನ್ನು ಮುಂದುವರೆಸಬೇಕಾದರೆ ಮೊದಲು ಮಕ್ಕಳ ತಂದೆ-ತಾಯಿಯರನ್ನು ಗೆಲ್ಲಬೇಕು. ಉದಾಹರಣೆಗೆ ಮಕ್ಕಳ ತಂದೆ-ತಾಯಿಗಳು ಕೊಡುವ ವಾದವೇನಿರಬಹುದು? ಅದನ್ನು ಎದುರಿಸುವುದು ಹೇಗೆ?

ಉದಾಹರಣೆಗೆ,
-  ತಂದೆ ತಾಯಿಯರು ತಾವೇ ಅನಕ್ಷರಸ್ಥರಾಗಿದ್ದು, ತಮ್ಮ ಜೀವನವನ್ನು ಒಂದು ಸಾಧಾರಣ ಸ್ಥರದಲ್ಲಿ ನಡೆಸಲು ಸಾಧ್ಯವಾಗಿದ್ದೇ ಆಗಿದ್ದರೆ, ಮಕ್ಕಳು ಶಾಲೆಗೆ ಹೋಗುವುದು ಒಂದು ಅಪರಾಧವೆಂದು ಪರಿಗಣಿಸದೇ ಇರಬಹುದು.
- ಸಾಮಾಜಿಕ ಒತ್ತಡಗಳು ಮಕ್ಕಳನ್ನು ದೀರ್ಘಕಾಲದವರೆಗೆ ಶಾಲೆಗೆ ಕಳಿಸುವುದನ್ನು ತಡೆಗಟ್ಟಬಹುದು - ಇದಕ್ಕೆ ಶಾಲೆ ತಲುಪಲು ಮಾಡಬೇಕಾದ ಪ್ರಯಾಣ, ಹಾಗೂ ಬಾಲ್ಯವಿವಾಹ ಪ್ರಚಲಿತವಿರುವ ಜಾಗಗಳಲ್ಲಿ ಆ ಒತ್ತಡ, ಮತ್ತು ಮನೆಗೆಲಸದ ಒತ್ತಡಗಳು ಪೂರ್ಣಾವಧಿ ಶಾಲೆಗೆ ಹೋಗುವುದನ್ನ ತಡೆಗಟ್ಟಬಹುದು
- ಕುಟುಂಬ ಬಡತನದಲ್ಲಿದ್ದು ಬಾಲಕಾರ್ಮಿಕ ತರುವ ಆದಾಯ ಅವರಿಗೆ ಸ್ವಾಗತಾರ್ಹವಾಗಿರಬಹುದು. ಸಾಲದ್ದಕ್ಕೆ ಮಕ್ಕಳು ವಿದ್ಯೆಪಡೆದು ಅದರಾಧಾರದ ಮೇರೆಗೆ ದಿನಗೂಲಿ, ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ತಯಾರಿಲ್ಲದಿದ್ದು, ವಿದ್ಯೆಗೆ ತಕ್ಕ ಕೆಲಸವೂ ಸಿಗದೇ ನಿರುದ್ಯೋಗಿ ಆಗುವು ಪರಿಸ್ಥಿತಿಯೂ ಉಂಟಾಗಬಹುದು - ಈ ಆಲೋಚನೆಯೇ ದೀರ್ಘಕಾಲ ವಿದ್ಯಾರ್ಜನೆಯ ವಿರುದ್ಧ ಕೆಲಸ ಮಾಡಬಹುದು. 
- ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ಅವರಿಂದ ಉಂಟಾಗಬಹುದಾದ ಆದಾಯ ನಷ್ಟವಾಗುವುದಲ್ಲದೇ ಶಾಲೆಗಾಗಿ - ಯೂನಿಫಾರ್ಮ್, ಪುಸ್ತಕ ಇತ್ಯಾದಿ ಎಂದು ಖರ್ಚೂ ಆದೀತು...

ಹೀಗೆ ಎಂ.ವಿ.ಎಫ್ ತೆಗೆದುಕೊಂಡಿರುವ ನಿಲುವಿಗೆ ವಿರುದ್ಧವಾದ ವಾದಸರಣಿಯೂ ಕೇಳಿಬರಬಹುದು. ಆದರೆ, ಈ ವಾದಗಳನ್ನು ಪರಿಗಣಿಸುವುದೂ ತಪ್ಪೆಂದು ಎಂ.ವಿ.ಎಫ್ ಮುಖ್ಯಸ್ಥೆ ಶಾಂತಾ ಸಿನ್ಹಾ ಹೇಳುತ್ತಾರೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಸಂಸ್ಥೆಯ ಹಲವು ವರ್ಷಗಳ ಕೆಲಸದ ಫಲವನ್ನು ನಾವು ನೋಡಬಹುದು. ಅದರ ಒಂದು ಉದಾಹರಣೆ ಪೊದ್ದುಟೂರಿನ ಕಟಿಕೇ ಶ್ರೀನಿವಾಸ್.

ಶಾಲೆಯಲ್ಲಿಲ್ಲದ ಮಕ್ಕಳನ್ನು ಶಾಲೆಗೆ ಹಾಕುವುದು ಸುಲಭದ ಕೆಲಸವೇನೂ ಅಲ್ಲ. ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ಅಲ್ಲಿಂದ ಹೊರಗೆಳೆಯುವುದೂ ಕಷ್ಟದ ಮಾತೇ. ಉದಾಹರಣೆಗೆ ಮಹಬೂಬನಗರದಲ್ಲಿ ಹತ್ತಿಬೀಜ ಉತ್ಪಾದನೆಯ ಕೃಷಿಯಲ್ಲಿ ಬಾಲಕಾರ್ಮಿಕರನ್ನು [ಅದರಲ್ಲೂ ಹೆಣ್ಣುಮಕ್ಕಳನ್ನು] ಕೆಲಸಕ್ಕಿಟ್ಟುಕೊಳ್ಳುವುದು ವಾಡಿಕೆ. ಮಕ್ಕಳು ಕೆಲಸ ಮಾಡುವಾಗ ಗೊಣಗುವುದಿಲ್ಲ. ಹತ್ತಿಬೀಜ ಉತ್ಪದನೆಯಲ್ಲಿ ಬೇಕಾದ ಸೂಕ್ಷ್ಮ ಕೆಲಸಕ್ಕೆ ಮಕ್ಕಳ ಕೋಮಲ ಬೆರಳುಗಳು ಹೇಳಿ ಮಾಡಿಸಿವೆಯಂತೆ, ಹೆಣ್ಣು ಮಕ್ಕಳಿಗೆ ಆಗಾಗ ಒಂದಿಷ್ಟು ಬಳೆ, ಟೇಪು, ಒಂದು ಸಿನೇಮಾ, ಚಾಕಲೇಟುಗಳ ಆಮಿಷ ತೋರಿದರೆ, ಅವರು ಯಾವ ಬಲಪ್ರಯೋಗವೂ ಇಲ್ಲದೇ ಖುಷಿಯಿಂದ ಕೆಲಸ ಮಾಡುತ್ತಾರೆ. ಹಾಗೂ ಬೀಡಿ ಸೇದಲು ಜಗಳವಾಡಲು ಅವರಿಗೆ ತೋಚುವುದಿಲ್ಲ. ಹೀಗಾಗಿ ಅರ್ಧ ಸಂಬಳಕ್ಕೆ ದುಪ್ಪಟ್ಟು ಕೆಲಸವನ್ನು ಮಕ್ಕಳಿಂದ ತೆಗೆಯಬಹುದು ಎಂದು ದಾವುಲೂರಿ ವೆಂಕಟೇಶ್ವರುಲು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. 

ಹೀಗೆ ಮಕ್ಕಳೂ ತುಸುಮಟ್ಟಿಗೆ ಸಂತೋಷವಾಗಿರುವ, ತಂದೆ-ತಾಯಿಯರೂ ಗೊಣಗದ, ಕೆಲಸ ನೀಡುವವರೂ ಖುಷಿಯಾಗಿರುವ ಈ ಅಸಮಂಜಸ ಮಾರುಕಟ್ಟೆಯನ್ನು ಪ್ರವೇಶಿಸಿ ಮಕ್ಕಳಿಗೆ ಬಾಲ್ಯವನ್ನು ಮತ್ತೆ ನೀಡುವ ಕೆಲಸ ಸುಲಭದ್ದೇನೂ ಅಲ್ಲ.

ಮೊದಲಿಗೆ ಮಕ್ಕಳನ್ನು ತಮ್ಮ ಕೆಲಸದಿಂದ ಬಿಡಿಸಬೇಕು; ಬಿಡಿಸಿದ ನಂತರ ಅವರುಗಳನ್ನು ಶಾಲೆಗೆ ಸೇರಿಸಬೇಕು. ಇಲ್ಲಿ ಮಕ್ಕಳು ತಮ್ಮ ವಯಸ್ಸಿಗನುಸಾರವಾದ ತರಗತಿಗೆ ನೇರವಾಗಿ ಹೋಗಬೇಕೆಂದರೆ [ಹತ್ತುವರ್ಷದ ಮಗು ನಾಲ್ಕನೆಯ ಕ್ಲಾಸಿಗೆ ನೇರವಾಗಿ ಹೋಗಬೇಕಾದರೆ] ಅದಕ್ಕೆ ಸಮರ್ಪಕವಾದ ಸೇತುವೆಯನ್ನು ಹಾಕಿ ಆ ಮಗುವನ್ನು ಮಾನಸಿಕವಾಗಿ, ಅಕ್ಷರಗಳ ಮೂಲಕ ತಯಾರು ಮಾಡಬೇಕು; ಹಾಗೂ ಗ್ರಾಮದಲ್ಲಿರುವ ಶಾಲೆಗಳು ಆ ಮಕ್ಕಳನ್ನು ಸ್ವೀಕರಿಸುವಂತೆ ನೋಡಿಕೊಳ್ಳಬೇಕು.

ಎಷ್ಟೋ ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರುಹಾಕಿಕೊಳ್ಳುವಂತಹ ಈ ಕೆಲಸ ಸರಳವಾದದ್ದೇನೂ ಅಲ್ಲ. ಮಕ್ಕಳು ಶಾಲೆಗೆ ಸೇರಿದ ನಂತರ ಅವರುಗಳು ತಮಗೆ ಬೇಕಾದಷ್ಟು ಕಾಲ ವಿದ್ಯಾಭ್ಯಾಸವನ್ನು ಮುಂದುವರೆಸುವ ಹಾಗೂ ನೋಡಿಕೊಳ್ಳಬೇಕು. ಶಾಲೆಯಲ್ಲಿ ಅವರುಗಳು ಪಡೆವ ವಿದ್ಯಾಭ್ಯಾಸವೂ, ವಿದ್ಯಾರ್ಜನೆಯ ಅನುಭವವೂ ಹಿತಕರವಾಗಿರಬೇಕು. ಹೀಗೆ ಮಕ್ಕಳ ಹಕ್ಕುಗಳನ್ನು ಅವರಿಗೆ ಒದಗಿಸುವುದು ಸುಲಭವಾದ ಮಾರ್ಗವೇನೂ ಅಲ್ಲ.

ಶಂಕರಪಲ್ಲಿ ಮಂಡಲದಲ್ಲಿ ಮಕ್ಕಳ ಹಕ್ಕುಗಳನ್ನು ಒದಗಿಸುವ ಕೆಲಸವನ್ನು ಗ್ರಾಮ ಪಂಚಾಯಿತಿಗಳು ಕೈಗೊಂಡಿವೆ. ಹೀಗಾಗಿ ಕಟಿಕೇ ಶ್ರೀನಿವಾಸ್ ಅಂತಹ ಸರಪಂಚರು ಗರ್ವದಿಂದ ಆ ನಿಟ್ಟಿನ ಸಾಧನೆಯನ್ನು ತೋರಿಸಿಕೊಳ್ಳುತ್ತಾರೆ. ಗ್ರಾಮ ಪಂಚಾಯ್ತಿಯ ಕಾರ್ಯಾಲಯದಲ್ಲಿ ಒಂದು ದೊಡ್ಡ ಕಪ್ಪು ಫಲಕದ ಮೇಲೆ ಊರಲ್ಲಿರುವ ಮಕ್ಕಳ ಸಂಖ್ಯೆ - ಅದರಲ್ಲಿ ೬ ವರ್ಷಕ್ಕೂ ಪುಟ್ಟವರು, ೬-೧೫ ವರ್ಷದ ಮಕ್ಕಳು, ೧೫-೧೮ ವರ್ಷದ ಮಕ್ಕಳು, ಅವರುಗಳಲ್ಲಿ ಎಷ್ಟು ಮಕ್ಕಳು ಅಂಗನವಾಡಿಯಲ್ಲಿದ್ದಾರೆ, ಎಷ್ಟು ಮಕ್ಕಳು ಶಾಲೆಯಲ್ಲಿದ್ದಾರೆ, ಎಷ್ಟು ಮಂದಿ ಶಿಕ್ಷಕರು, ಪ್ರೈವೇಟು ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ ಎಲ್ಲವೂ ಇದೆ.
  

ಪ್ರತೀ ತಿಂಗಳೂ ಶಾಲಾ ಮಾಸ್ತರರೊಂದಿಗೆ ಒಂದು ಮೀಟಿಂಗ್ ನಡೆಯುತ್ತದೆ. ಅಲ್ಲಿ ಶಾಲೆಯಲ್ಲಿ ಮಕ್ಕಳ ಹಾಜರಿಯಿಂದ ಹಿಡಿದು ಶಾಲೆಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಚರ್ಚಿತವಾಗುತ್ತವೆ. ಶಾಲೆ ರಾಜ್ಯ ಸರಕಾರದ ವಿದ್ಯಾ ಇಲಾಖೆಯಡಿಯಲ್ಲಿ ಬರುತ್ತದಾದರೂ ಪಂಚಾಯ್ತಿ ಆಸಕ್ತಿ ವಹಿಸುವುದರಿಂದ ಅನೇಕ ತೊಂದರೆಗಳು ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತದೆ. ಉದಾಹರಣೆಗೆ ಮಕ್ಕಳಿಗೆ ಶೌಚಾಲಯ ಕಟ್ಟಿಸಬೇಕೆಂದರೆ ಅದಕ್ಕೆ ಹೈದರಾಬಾದಿನಿಂದ ಬಜೆಟ್ಟು ಬರುವವರೆಗೂ ಕಾಯಬೇಕಾಗಿದ್ದ ಶಾಲೆ ಈಗ ಪಂಚಾಯತಿಯ ಸಹಕಾರದೊಂದಿಗೆ ಅದಕ್ಕೊಂದು ಸ್ಥಳೀಯ ಪರಿಷ್ಕಾರವನ್ನು ಪಡೆಯುವ ಸ್ಥಿತಿಯನ್ನು ಮುಟ್ಟಿದೆ. ಶಿಕ್ಷಕರು ರೆಜೆಯ ಮೇಲೆ ಹೋದರೆ, ಅಥವಾ ಹುದ್ದೆಗಳು ಖಾಲಿ ಬಿದ್ದರೆ, ಪಂಚಾಯತಿಯ ವತಿಯಿಂದ ಹಂಗಾಮಿ ಶಿಕ್ಷಕರನ್ನು ನಿಯಮಿಸುವ ಅವಕಾಶವಿದೆ. ಅದಕ್ಕೆ ಬೇಕಾದ ಹಣವನ್ನು ಪಂಚಾಯಿತಿ ಸ್ಥಳೀಯವಾಗಿ ಸ್ಥಾಪಿತವಾಗಿರುವ ಒಂದು ರೆಜಾರ್ಟ್ ಆಯೋಜಕರಿಂದ ಕಲೆಹಾಕಿದ್ದಾರೆ. ಸಾಲದ್ದಕ್ಕೆ ಅಲ್ಲಿ ರೆಜಾರ್ಟಿಗೆ ಪರವಾನಗಿ ಕೊಡುವಾಗಲೇ ಅವರಿಂದ ಕೆಲ ಆಶ್ವಾಸನೆಗಳು ಪಂಚಾಯತಿ ಪಡೆದಿತ್ತು. ಇದು ವಿದ್ಯಾ ಇಲಾಖೆಗೆ ಸಾಧ್ಯವಾಗದ ಕಾರ್ಯ. ಪ್ರತಿ ವಿದ್ಯಾರ್ಥಿಗೂ ಶಾಲಾ ಬಟ್ಟೆ ಮತ್ತು ಪುಸ್ತಕಗಳಿಗಾಗುವ ಖರ್ಚುಗಳನ್ನು ಪಂಚಾಯತಿ ಆಯೋಜಿಸುತ್ತದೆ. 

ಪಂಚಾಯ್ತಿಯ ಮೆಂಬರುಗಳು ಶಾಲೆಯನ್ನು ಆಗಾಗ ಸಂದರ್ಶಿಸುವುದರಿಂದ ಎಲ್ಲವೂ ಒಂದು ಪದ್ಧತಿಯಂತೆ ನಡೆಯುತ್ತದೆ. ಹೀಗೆ ಜವಾಬ್ದಾರಿಯನ್ನು ಸ್ಥಳೀಯಗೊಳಿಸುವುದರಿಂದ ಈ ಏರ್ಪಾಟು ಎಂ.ವಿ.ಎಫ್ ನಂತಹ ಸಂಸ್ಥೆಗಳು ಹೊರಗಿನಿಂದ ಬಂದು ಮಾಡುವ ಕೆಲಸಕ್ಕೆ ಪೂರಕವಾಗಿ ಒಂದು ಶಾಶ್ವತ ಏರ್ಪಾಡಾಗಿ ತಯಾರಾಗುತ್ತದೆ.

ಪೊದ್ದುಟೂರಿನಲ್ಲಿ ರೆಜಾರ್ಟ್ ಇದ್ದದ್ದರಿಂದ ಆರ್ಥಿಕ ಸವಲತ್ತು ಉಂಟಾಯಿತು ಎಂದರೆ - ಪಕ್ಕದ ಕೊಲ್ಕುಂಡದಲ್ಲಿ ಸರಪಂಚ ಹಂಗಾಮಿ ಶಿಕ್ಷಕರಿಗೆ ಸಂಬಳ ನೀಡಲು ಪ್ರತೀ ಮನೆಯಿಂದಲೂ ಹತ್ತು ರೂಪಾಯಿಯ ದೇಣಿಗೆಯನ್ನು ಪಡೆದಿದ್ದರು.

ಆದರೂ ಎಲ್ಲಕಡೆಯೂ ಈ ಕಾರ್ಯಕ್ರಮವನ್ನು ಇಷ್ಟು ಸರಳವಾಗಿ ಕೈಗೊಳ್ಳಬಹುದೇ? ಇದರಿಂದ ರಾಜಕೀಯವಾಗಿ ಕಟಿಕೇ ಶ್ರೀನಿವಾಸ್‍ಗೆ ಏನು ಲಾಭ? ಈ ಪ್ರಶ್ನೆಗೆ ಅವರು ಎರಡು ಸ್ಥರದಲ್ಲಿ ಉತ್ತರ ನೀಡುತ್ತಾರೆ:

"ರಾಜಕೀಯವಾಗಿ ವಿದ್ಯೆಯಬಗ್ಗೆ ಮಾತನಾಡುವುದು ವಿವಾದಾತೀತವಾಗುತ್ತದೆ. ಪ್ರತಿ ಮನೆಯಲ್ಲೂ ಮಕ್ಕಳಿರುತ್ತಾರೆ, ಆ ಮಕ್ಕಳು ಹೋಗುವ ಶಾಲೆಯ ಸುಧಾರಣೆಯಾದರೆ ಆ ಕೆಲಸ ಪ್ರತೀ ಸಂಸಾರವನ್ನೂ ತಟ್ಟುತ್ತದೆ. ಅದರಲ್ಲಿ ಒಂದು ಲೆಕ್ಕಕ್ಕೆ ಸಿಕ್ಕದಿರುವುದು ಅದು ಶಾಲೆಯ ವಿದ್ಯೆಯ ಗುಣಮಟ್ಟ, ಶಿಕ್ಷಕರ ಗುಣಮಟ್ಟದಂತಹ ಅಂಶ: ಇವುಗಳು ಹೆಚ್ಚಾಗಿ ಪಂಚಾಯತಿಯ ಕೈಯಲ್ಲಿಲ್ಲ, ಆದರೂ ತಿಂಗಳ ಮೀಟಿಂಗಿನ ಮೂಲಕ ಸ್ವಲ್ಪ ಈ ಬಗ್ಗೆ ನಿಗಾ ಇಡಬಹುದು. ಎರಡು ಭೌತಿಕ ಸದುಪಾಯಗಳಿಗೆ ಸಂಬಂಧಿಸಿದ್ದು. ಶಾಲಾ ಕಟ್ಟಡ, ಶೌಚಾಲಯ, ಗ್ರಂಥಾಲಯ, ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಊಟ... ಈ ಎಲ್ಲವೂ ಪಂಚಾಯ್ತಿಗಳ ವತಿಯಿಂದ ಆಗಬಹುದಾದ ಕಾಣುವ ಕೆಲಸ. ಹೀಗಾಗಿ ವಿದ್ಯೆಯ ಎಜೆಂಡಾ ತೆಗೆದುಕೊಂಡರೆ ರಾಜಕೀಯವಾಗಿಯೂ ಗೆಲ್ಲಬಹುದು"

ಶಂಕರಪಲ್ಲಿ ಮಂಡಲದಲ್ಲಿ ಈ ಪಂಚಾಯ್ತಿ-ಶಾಲೆಗಳ ತಾಳಮೇಳ ನಡೆಯುತ್ತಿರುವುದಕ್ಕೆ ಇತರ ಕಾರಣಗಳೂ ಇರಬಹುದು ಎಂದು ಶಾಲೆಯ ಹೆಡ್ ಮಾಸ್ಟರ್ ಚಂದ್ರಶೇಖರ್ ಹೇಳುತ್ತಾರೆ. ಹೈದರಾಬಾದಿಗೆ ಹತ್ತಿರವಾಗಿರುವುದರಿಂದ, ಹಾಗೂ ನಗರದಲ್ಲಿ ಕೆಲಸ ಸಿಗುವುದರಿಂದ ಜನ ಮಕ್ಕಳನ್ನು ಕೆಲಸಕ್ಕೆ ಹೆಚ್ಚಾಗಿ ಹಾಕುವುದಿಲ್ಲ. ಮಕ್ಕಳು ಕೆಲಸಕ್ಕೆ ಲಭ್ಯವಿಲ್ಲದ್ದರಿಂದ ಹಿರಿಯರಿಗೆ ಹೆಚ್ಚು ಕೆಲಸ ಸಿಗುತ್ತಿದೆ. ಜೊತೆಗೆ ಮಕ್ಕಳ ಹಕ್ಕಿನಬಗ್ಗೆ ಹೆಚ್ಚಿನ ಮಾಹಿತಿಯಿರುವುದರಿಂದ ಶಂಕರಪಲ್ಲಿಯಲ್ಲಿ ಬಾಲಕಾರ್ಮಿಕರನ್ನು ಉಪಯೋಗಿಸುತ್ತಿದ್ದ ಮಲ್ಲಿಗೆ ತೋಟಗಳು ಮಾಯವಾಗಿ ಬತ್ತದ ಬೆಳವಣಿಗೆಯತ್ತ ಕೃಷಿ ವಾಲಿದೆ.

ಇದರ ಜೊತೆಗೆ ಕಟಿಕೇ ಶ್ರೀನಿವಾಸ್ ಹೇಳುವ ಇನ್ನಷ್ಟು ವಿಚಾರಗಳು:
ಕೃಷಿಯಲ್ಲಿ ಯಂತ್ರಗಳನ್ನು ಬಳಸುವುದು ಹೆಚ್ಚಾದಂತೆ ಕಾರ್ಮಿಕರ ಅವಶ್ಯಕತೆ-ಹಾಗೆಯೇ ಬಾಲಕಾರ್ಮಿಕರ ಅವಶ್ಯಕತೆ ಕಡಿಮೆಯಾಗುತ್ತದೆ.
ರಾಷ್ಟ್ರೀಯ ಗ್ರಾಮೀಣ ಉಪಾಧಿ ಕಾರ್ಯಕ್ರಮ ಚೆನ್ನಾಗಿ ಕಾರ್ಯಗತವಾಗುತ್ತಿರುವ ಸ್ಥಳಗಳಲ್ಲಿ ಹಿರಿಯರಿಗೆ ಉಪಾಧಿ ಸಿಕ್ಕಿ ಮಕ್ಕಳನ್ನು ಕೆಲಸಕ್ಕೆ ಹಾಕುವ ಅವಶ್ಯಕತೆ ಕಡಿಯಾಗುತ್ತಿದೆ.
ಶಂಕರಪಲ್ಲಿ ವಿಶಾಲ ಹೈದರಾಬಾದಿನ ಭಾಗವಾಗಬಹುದು. ಹೀಗಾಗಿ ಹೊಸ ನೀರಾವರಿ ಯೋಜನೆಗಳು ಪೊದ್ದುಟೂರಿನಂತಹ ಗ್ರಾಮವನ್ನು ಬಳಸಿ ಹೋಗುತ್ತಿವೆ. ಕೃಷಿ ಕಡಿಮೆಯಾಗುತ್ತಿದೆ. ಜಮೀನು ಸೈಟುಗಳಾಗುವ ಸಾಧ್ಯತೆಯಿದೆ. ಹೀಗೆ ಕೃಷಿಯೇ ಪೊದ್ದುಟೂರಿನಿಂದ ನಾಪತ್ತೆಯಾಗುವುದಾದರೆ, ಕೃಷಿಯೇತರ ಕೆಲಸಗಳಿಗೆ ವಿದ್ಯೆಯೇ ಗತಿ ಎಂದು ಜನ ಅರಿತಿದ್ದಾರೆ.

ಹೀಗೆ ಮಕ್ಕಳಿಸ್ಕೂಲು ಮನೆಯಲ್ಲಲ್ಲದೇ ಗ್ರಾಮದಲ್ಲಿರುವುದಕ್ಕೆ ಕಾರಣಗಳು ಅನೇಕ. ಕೆಲವನ್ನು ನಾವು ಪೊದ್ದುಟೂರಿನಿಂದ ಬೇರೆ ಗ್ರಾಮಗಳಿಗೂ, ರಾಜ್ಯಗಳಿಗೂ ಒಯ್ಯಬಹುದು. ಕೆಲವು ಕಟಿಕೇ ಶ್ರೀನಿವಾಸ್ ಮಾತ್ರ ಕಂಡುಕೊಳ್ಳುವ ಸಮಾಧಾನ ಮಾತ್ರ.

ಎಲ್ಲವೂ ಚೆನ್ನಾಗಿದೆ ಅನ್ನುವ ವೇಳೆಗೆ ಹೊಸ ಸಮಸ್ಯೆ:

ಈಗ ಶಾಲಾವಯಸ್ಸಿನ ಎಲ್ಲ ಮಕ್ಕಳೂ ಶಾಲೆಯಲ್ಲಿದ್ದಾರೆ. ಆದರೆ, ಜನ ಸರಕಾರಿ ಶಾಲೆ ಬಿಟ್ಟು ಖಾಸಗೀ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಅಲ್ಲಿ ಇಂಗ್ಲೀಷ್ ಕಲಿಸುತ್ತಾರೆ ಅನ್ನುವುದೇ ಕಾರಣ. ಗುಣಮಟ್ಟದಲ್ಲಿ ಸರಕಾರೀ ಶಾಲೆಗಳು ಉತ್ತಮವಾಗಿದ್ದರೂ ಜನ ಅತ್ತ ವಾಲುತ್ತಿದ್ದಾರೆ. ಪಂಚಾಯ್ತಿಯ ವತಿಯಿಂದ ಖಾಸಗೀ ಶಾಲೆಗಳ ಗುಣಮಟ್ಟವನ್ನು ಪರಿಶೀಲಿಸುವುದು, ಅಲ್ಲಿನ ಹಾಜರಿಯ ಬಗ್ಗೆ ಪ್ರಶ್ನೆ ಕೇಳುವುದೂ, ಅಲ್ಲಿನ ಶಿಕ್ಷಕರ ಗುಣಮಟ್ಟ ಪರಿಶೀಲಿಸುವುದೂ ಸಾಧ್ಯವಿಲ್ಲ. ಹೆಚ್ಚುಜನ ಆ ದಿಕ್ಕಿನಲ್ಲಿ ಹೋಗುತ್ತಿರುವಾಗ ನಾಲ್ಕಕ್ಷರ ಇಂಗ್ಲೀಷು ತಿಳಿದಿರುವುದೇ ಸಾಕಾಗಿರುವ ಶಿಕ್ಷಕರನ್ನು ನಿಯಮಿಸುವ ಖಾಸಗೀ ಶಾಲೆಗಳ ಗುಣಮಟ್ಟದ ಗತಿಯೇನು?

ಹೀಗೇ ಒಂದು ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ವೇಳೆಗೆ ಮತ್ತೊಂದು ಉದ್ಭವವಾಗುತ್ತದೆ.



  

No comments:

Post a Comment