Sunday, October 25, 2009

ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು

"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.

ಮಾ ಬ್ಲಾ ಪೆನ್ನು ತುಂಬಾ ದುಬಾರಿಯಾದದ್ದು. ಆ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಒಂದು ರೀತಿಯಿಂದ ಅಸಮರ್ಪಕವೇ ಅನ್ನಬಹುದು. ಯಾಕೆಂದರೆ ಸರಳತೆಯ ಜೀವನವನ್ನು ಜೀವಿಸಿದ ಮಹಾತ್ಮಾ ಗಾಂಧಿಯ ಹೆಸರಿನ ಜೊತೆಗೆ ಮಾ ಬ್ಲಾ ಪೆನ್ನನ್ನು ಕೊಂಡಿಹಾಕುವ ಯತ್ನ ಅತಿರೇಕದ್ದು ಅನ್ನಿಸದೇ ಇರುವುದಿಲ್ಲ. ಆ ಪೆನ್ನಿನ ಈಚಿನ ಜಾಹೀರಾತು ಇಂತಿದೆ:

ಸ್ವಾತಂತ್ರ. "ಸತ್ಯದ ಮಾರ್ಗ ಅಹಿಂಸೆಯ ಮೂಲಕವೇ ಇದೆ". ಆತನ ನಂಬುಕೆಗಳೇ ಆತನ ಶಕ್ತಿಯಾಗಿತ್ತು, ಸಹಿಷ್ಣುತೆ ಆತನ ನಿಜವಾದ ಜಾತಿಯಾಗಿತ್ತು. ಸಾಧಿಸಿಯೇ ತೀರುತ್ತೇನೆಂಬ ಹುಂಬ ಹಠ ತೋರಿ, ಸಂತ ಜೀವನದ ಉದಾಹರಣೆಯ ಅಸ್ತ್ರವನ್ನು ಹಿಡಿದು ದೇಶಕ್ಕೆ ಸ್ವಾತಂತ್ರವನ್ನೂ ಜಗತ್ತಿಗೆ ಅಹಿಂಸೆ ಎನ್ನುವ ಹೊಸ ಅಸ್ತ್ರವನ್ನೂ ಆತ ನೀಡಿದರು. ಹೀಗೆ ತನ್ನ ಮಾತಿನಿಂದ ಜನಸ್ಥೋಮವನ್ನು ಅವರಾತ್ಮಗಳನ್ನೂ ಕದಲಿಸಬಲ್ಲ ಶಕ್ತಿಯಿದ್ದ ಮನುಷ್ಯನಿಗೆ ಮಾ ಬ್ಲಾ ತನ್ನ ಗೌರವವನ್ನರ್ಪಿಸುತ್ತದೆ.

ನಿಯಮಿತ ಸಂಖ್ಯೆಯಲ್ಲಿ ತಯಾರಿಸಿದ ಮಹಾತ್ಮಾ ಗಾಂಧಿ ಸರಣಿ. ಹತ್ತಿಯ ವಸ್ತ್ರವನ್ನು ಪ್ರತಿನಿಧಿಸುವ ಬಿಳಿಯ ಅರಗಿನ ಪದರ. ಮುಚ್ಚಳದ ಮೇಲೆ ಸ್ಪಿಂಡಲ್ ಮೇಲೆ ಖಾದಿಯ ದಾರ ಸುತ್ತಿದಂತೆ ರೂಪಿಸಿರುವ ೯೨೫ ಸ್ಟರ್ಲಿಂಗ್ ಬೆಳ್ಳಿಯ ಹೊದಿಕೆ, ಕ್ಲಿಪ್ಪಿನ ಮೇಲೆ ಕೇಸರಿ ಬಣ್ಣದ ಮ್ಯಾಂದರಿನ್ ಗಾರ್ನೆಟ್, ಕೈಯಿಂದ ತಯಾರಿಸಿದ ಗಾಂಧಿಯ ಚಹರೆಯಿರುವ ೧೮ ಕ್ಯಾರೆಟ್ ಚಿನ್ನ-ರೋಡಿಯಮ್ ಕವಚದ ನಿಬ್ಬು. ಮಾ ಬ್ಲಾ. ಹೇಳಲೊಂದು ಕಥೆ.

ಈ ಪೆನ್ನಿನ ಬೆಲೆಯೆಷ್ಟಿರಬಹುದು? ಊಹಿಸಲು ಸಾಧ್ಯವಿಲ್ಲ. ದೆಹಲಿ ಏರ್‍ಪೋರ್ಟಿನಲ್ಲಿ ಅದೇ ಕೆಲಸವಾಗಿ ಹೋಗಿ ವಿಚಾರಿಸಿದೆ. ಅದರ ಬೆಲೆ ರೂ. ಒಂದು ಲಕ್ಷ ಅರವತ್ತೇಳು ಸಾವಿರದ ಐನೂರು ರೂಪಾಯಿ. ಇದರಲ್ಲಿ ಮತ್ತೊಂದು ಮಾಡೆಲ್ ಸಹಾ ಉಂಟು ಅದು ಎರಡು ಲಕ್ಷಕ್ಕೂ ಹೆಚ್ಚಿನ ಬೆಲೆಯ ಪೆನ್ನು. ಅದನ್ನು ಮಹಾತ್ಮನ ಮೊಮ್ಮಗ ತುಷಾರ್ ಗಾಂಧಿಯ ಕೈಯಲ್ಲಿಟ್ಟು ಆತನದ್ದೂ ಒಂದು ಚಿತ್ರವನ್ನು ತೆಗೆದು ಆ ಕಂಪನಿಯವರು ಮುದ್ರಿಸಿಬಿಟ್ಟರು.

ಒಂದು ಪೆನ್ನಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ? ಇನ್ನು ಅದರಿಂದ ಬರಬಹುದಾದ ಪದ ಪುಂಜಗಳ ಬೆಲೆ ಎಷ್ಟಿರಬಹುದು? ಆ ಪೆನ್ನಿಗೆ ಅವರದೇ ಆದ ಇಂಕನ್ನೂ ಬಳಸಬೇಕಂತೆ, ಮತ್ತು ಮಾ ಬ್ಲಾ ಪೆನ್ನು ಉಪಯೋಗಿಸುವವರ ಜೀವನಶೈಲಿಯೇ ಭಿನ್ನವಾದದ್ದಗಿರುತ್ತದೆಯೇ? ಈ ಎಲ್ಲ ಪ್ರಶ್ನೆಗಳನ್ನು ನಾವು ಒಟ್ಟಾರೆ ತತ್ತರಿಸಿಹೋಗುತ್ತಿರುವ ಬಡತನವಿರುವ - ಒಂದು ಬಾರಿ ನೆರೆ ಬಂದರೆ ಜೀವನವೇ ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಕೇಳುತ್ತಿದ್ದೇವೆ. ಇದಕ್ಕೆ ಸರಳವಾದ ಉತ್ತರವಿಲ್ಲವಾದರೂ, ಆಗಾಗ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದು ಒಳಿತು. ಈ ಪ್ರಶ್ನೆಗಳು ನೈತಿಕ ಮೌಲ್ಯದ್ದಾದರೂ, ಆ ನೈತಿಕ ಮೌಲ್ಯಗಳು ಎಷ್ಟೋಬಾರಿ ಖಾಸಗಿಯಾದ ಜಾಗಗಳನ್ನು ಆಕ್ರಮಿಸಿದರೂ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ನಮ್ಮ ವಿದೇಶಾಂಗ ವಿಭಾಗದ ರಾಜ್ಯ ಮಂತ್ರಿಗಳಾದ ಶಶ್ ಥರೂರ್ ವಿಷಯವನ್ನೇ ಪರಿಗಣಿಸೋಣ - ಆತ ವಿಶ್ವ ಸಂಸ್ಥೆಯಲ್ಲಿ ಬಹಳ ಕಾಲದವರೆಗೂ ಕೆಲಸ ಮಾಡಿ, ನ್ಯೂ ಯಾರ್ಕಿನಲ್ಲಿ ವಾಸವಾಗಿದ್ದು, ಪ್ರವಾಸ ಹೋದಾಗಲೆಲ್ಲಾ ಪಂಚತಾರಾ ಹೊಟೇಲುಗಳಲ್ಲಿ ಇಳಿದುಕೊಳ್ಳುತ್ತಿದ್ದದ್ದು ಸಹಜವೇ ಆಗಿತ್ತು. ಹಾಗೆಯೇ ಅವರಿಗೆ ವಿಮಾನದ ಮುಂಭಾಗದ ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಪ್ರಯಾಣ ಮಾಡುವುದೂ ಸಹಜವಾಗಿತ್ತು. ಆದರೆ ಈಚೆಗೆ ಕೇಂದ್ರ ಸರಕಾರ ಆದೇಶ ಹೊರಡಿಸಿ ಮಂತ್ರಿಗಳೆಲ್ಲಾ ಎಕಾನಮಿಯಲ್ಲಿ ಪ್ರಯಾಣ ಮಾಡಬೇಕೆಂದು ಹೇಳಿದ್ದರ ಫಲಿತವಾಗಿ ಇದ್ದಕ್ಕಿದ್ದ ಹಾಗೆ ಥರೂರರ ಜೀವನ ಶೈಲಿಯ ಮೇಲೆ ಅನೇಕರ ಗಮನ ಕೇಂದ್ರೀಕೃತವಾಯಿತು. ಆದರೆ ಥರೂರರಿಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲ. ಸರಕಾರದ ನೀತಿಯನ್ನು ಪಾಲಿಸೋಣ, ಆದರೆ ಖರ್ಚಿನ ವಿಷಯಕ್ಕೆ ಬಂದಾಗ ಸರಕಾರೀ ನೀತಿ ತನಗೆ ನೀಡುವುದಕ್ಕಿಂತಾ ಉತ್ತಮವಾದ ಜೀವನಶೈಲಿಯನ್ನು ತಾನು ಸಂಪಾದಿಸಿರುವ ಹಣದಲ್ಲಿ ಪಡೆದುಕೊಂಡರೆ - ಅದು ಬಡವರ, ತೆರಿಗೆ ನೀಡುವ ಜನತೆಯ ಮೇಲೆ ಹೊರೆಯಾಗದಿದ್ದರೆ ಯಾರಾದರೂ ಯಾಕೆ ವಿರೋಧ ವ್ಯಕ್ತ ಪಡಿಸಬೇಕು ಅನ್ನುವ ಸಹಜ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅರ್ಥಾತ್ ತಮ್ಮ ಹಣದಲ್ಲಿ ತಾವು ಐಷಾರಾಮ ಮಾಡಿದರೆ ಸಮಸ್ಯೆ ಏನು? ಅನ್ನುವ ಪ್ರಶ್ನೆಗೆ ನಾವು ಆಷಾಢಭೂತಿಗಳಾಗದೇ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ.

ಇದೇ ಪ್ರಶ್ನೆಯನ್ನು ಯಾರೋ ರಾಹುಲ್ ಗಾಂಧಿಗೆ ಕೇಳಿದಾಗ ಅವರು ನೀಡಿದ ಉತ್ತರ ಕುತೂಹಲದ್ದಾಗಿತ್ತು.. ಸರಳ ಜೀವನ ಎನ್ನುವುದನ್ನು ನೆರೆಯ/ಬರದ ಕಾಲದಲ್ಲಿ ಮಾತ್ರ ಪಾಲಿಸಬೇಕು ಅನ್ನುವುದನ್ನು ತಾವು ನಂಬುವುದಿಲ್ಲವೆಂದೂ, ರಾಜಕೀಯದಲ್ಲಿರುವ ಜನಸಾಮಾನ್ಯರ ನಡುವೆ ಇರುವ ತಮ್ಮಂತಹವರು ಸರಳ ಜೀವನಶೈಲಿಯನ್ನು ಸಹಜವಾಗಿಯೇ ತಮ್ಮದಾಗಿಸಿಕೊಳ್ಳಬೇಕೆಂದು ರಾಹುಲ್ ಹೇಳಿದರು.

ಆದರೆ ನಮ್ಮಲ್ಲೆಲ್ಲ ಈ ದ್ವಂದ್ವ ಯಾವಾಗಲೂ ತಾಂಡವವಾಡುತ್ತಲೇ ಇರುತ್ತದೆ - ನಿರಂತರ ಮೂರು ವರ್ಷಗಳ ಬರವನ್ನು ಕಂಡ ಪ್ರದೇಶಕ್ಕೆ ಯಾವರೀತಿಯ ಧನಸಹಾಯ ಮಾಡಬೇಕು ಎಂದು ಚರ್ಚಿಸಲು ಬರುವ ಅಧಿಕಾರಿಗಳ ಪ್ರಯಾಣ ವಿಮಾನದ ಮುಂಭಾಗದಲ್ಲಿ ನಡೆಯಬೇಕೇ? ಅವರಿಗೂ, ದೇಶದ ವಿದೇಶಾಂಗ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಅಧಿಕಾರಿಗಳಿಗೂ [ಚರ್ಚೆಗೊಳಗಾಗುವ ವಿಷಯವನ್ನು ಹೊರತು ಪಡಿಸಿದರೆ] ಏನು ವ್ಯತ್ಯಾಸ? ಈ ರೀತಿಯಾಗಿ ಸುತ್ತಲೂ ಬಡತನವಿರುವಾಗ ಐಷಾರಾಮಕ್ಕೆ ಹಣ ದುಂದು ಮಾಡಬಾರದು ಎನ್ನುವುದಾದರೆ - ಮುಂಭಾಗ/ಹಿಂಭಾಗವೆನ್ನುವ - ಪಂಚತಾರಾ -ತ್ರಿತಾರಾ ಹೊಟೇಲುಗಳೆನ್ನುವ ವಿಭಾಗಗಳೇಕೆ ಇನ್ನೂ ಇವೆ? ಕೆಲವರಿಗೆ ದೊಡ್ಡ ಕಾರೂ, ಕೆಲವರಿಗೆ ಪುಟ್ಟ ಕಾರೂ, ಕೆಲವರಿಗೆ ಆಫೀಸಿನ ಬಸ್ಸೂ ಯಾಕಿರಬಹುದು?

ಈ ಎಲ್ಲವನ್ನೂ ವಿಚಾರ ಮಾಡಿನೋಡಿದಾಗ ನಮಗೆ ಸರಳ ಸಮಾಧಾನ ಸಿಗದಿದ್ದರೂ ಕೆಲವು ವಿಚಾರಗಳು ಸಾಂಕೇತಿಕ ಮಹತ್ವ ಪಡೆದು ನಿಲ್ಲುತ್ತದೆ ಅನ್ನುವುದು ಮುಖ್ಯವಾದ ವಿಚಾರ. ದೇಶದ ಹಿತವನ್ನು ರಕ್ಷಿಸಬೇಕಾದ ಪ್ರಧಾನ ಮಂತ್ರಿಗಳ ಸಮಯ ಕಿಮ್ಮತ್ತಿನದ್ದು. ಹೀಗಾಗಿ ಅವರಿಗೆ ಪ್ರತ್ಯೇಕ ವಿಮಾನವಿದ್ದರೆ ಅದು ಐಷಾರಾಮಕ್ಕಿಂತ ಅವಶ್ಯಕತೆಗೆ ಸಂಬಂಧಿಸಿದ್ದು. ಹಾಗೆಯೇ ಮಂತ್ರಿಗಳಾಗಿದ್ದವರು ಕಡಿಮೆ ಜನರಿರುವ - ಹೆಚ್ಚು ಅಗಲದ ಸೀಟಿರುವ ಮುಂಭಾಗದಲ್ಲಿ ಕೂತರೆ, ಅಲ್ಲಿ ಕೆಲವು ಕಾಗದ ಪತ್ರಗಳನ್ನು ನೋಡಿ ಸಮಯವನ್ನು ಉಳಿತಾಯ ಮಾಡಬಹುದು. ಎಲ್ಲಕ್ಕೂ ಒಂದು ವಾದವಿರುತ್ತದೆ. ತನ್ನ ಹಣದಲ್ಲಿ ತಾನು ಐಷಾರಾಮ ಮಾಡುತ್ತೇನೆನ್ನುವ ಥರೂರ್ ತಮ್ಮನ್ನು ಕೇಳಿಕೊಳ್ಳಬೇಕಾದ ಒಂದು ಮುಖ್ಯವಾದ ಪ್ರಶ್ನೆ ಹೀಗಿದೆ: ತಾವು ರಾಜಕೀಯಕ್ಕೆ ಬಂದ ಕೂಡಲೇ ಸೂಟು ಬೂಟು ಧರಿಸುವುದನ್ನು ಬಿಟ್ಟು ಕುರ್ತಾ ಬಾಂಧ್‌ಗಲಾ ಧರಿಸುವುದಕ್ಕೆ ಯಾಕೆ ಪ್ರಾರಂಭಿಸಿದರು? ಅರ್ಥಾತ್ ರಾಜಕೀಯದ ಸಾಂಕೇತಿದ ಪೋಷಾಕು ಸೂಟು ಅಲ್ಲ ಎನ್ನುವುದರಿಂದಲೇ? ದೀಪಾವಳಿಯ/ಹಬ್ಬದ ದಿನ ನಾವೆಲ್ಲರೂ ಯಾಕೆ ನಮ್ಮ ಪ್ರತಿದಿನದ ಪೋಷಾಕನ್ನು ಧರಿಸುವುದಿಲ್ಲ?

ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ಮಾ ಬ್ಲಾ ಪೆನ್ನಿಗೂ ಅದರದೇ ಸ್ಥಾನವಿದೆ ಅನ್ನುವುದು ನಮಗೆ ಸಹಜವಾಗಿ ಹೊಳೆಯುತ್ತದೆ. ಆದರೂ ಮಾ ಬ್ಲಾ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಸಾಂಕೇತಿಕವಾಗಿಯಾಗಲೀ, ಸಾಂದರ್ಭಿಕವಾಗಿಯಾಗಲೀ ಸಮಂಜಸವಲ್ಲವಾದ್ದರಿಂದ ಈ ಪ್ರಶ್ನೆ ನಮ್ಮ ಮುಂದೆ ಉದ್ಭವವಾಗುತ್ತದೆ.

ಕಳೆದ ವರ್ಷ ನಾನು ಏರ್ ಇಂಡಿಯಾದ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆ ಸಂಸ್ಥೆಯ ಒಬ್ಬ ಉದ್ಯೋಗಿ ಪಕ್ಕದಲ್ಲಿ ಕೂತು ಮಾತಿಗೆ ತೊಡಗಿದ. ಮಾತು ಮುಂದಕ್ಕೆ ಹೋದಾಗ ಆತ ಇನ್ಫಿಯ ನಾರಾಯಣ ಮೂರ್ತಿ ಮತ್ತು ವಿಪ್ರೋರ ಪ್ರೇಂಜಿ ಬಗ್ಗೆ ಸಿಟ್ಟಾಗಿದ್ದದ್ದು ಕಾಣಿಸಿತು. ಆತನ ವಾದ ಸರಣಿ ಹೀಗಿತ್ತು. "ನೋಡಿ ನಾರಾಯಣ ಮೂರ್ತಿ, ಪ್ರೇಂಜಿ ತಮ್ಮ ಸರಳ ಜೀವನಕ್ಕೆ ಖ್ಯಾತಿ ಪಡೆದಿದ್ದಾರೆ, ಪ್ರತಿಬಾರಿಯೂ ಎಕಾನಮಿಯಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಅವರಿಗೆ ಎಕ್ಸಿಕ್ಯೂಟಿವ್ ಕ್ಲಾಸಿನ ಟಿಕೇಟ್ ಕೊಳ್ಳುವ ತಾಕತ್ತಿರುವಾಗ ಕಡಿಮೆ ಬೆಲೆಯ ಟಿಕೆಟ್ಟನ್ನು ಪಡೆದು ಹಿಂಭಾಗದಲ್ಲಿ ಪ್ರಯಾಣಿಸಬೇಕಾದ ಅವಶ್ಯಕತೆಯೇನು? ಇಂಥವರಿಗಾಗಿಯೇ ಮಾಡಿರುವ ಸೀಟುಗಳನ್ನು ಖಾಲಿ ಬಿಡುವುದರಿಂದ ನಮ್ಮ ಆದಾಯ ಕುಸಿಯುವುದಿಲ್ಲವೇ? ಇದೂ ಸಾಲದ್ದಕ್ಕೆ ನಾವುಗಳು ಅವರನ್ನು ಅಪ್‍ಗ್ರೇಡ್ ಮಾಡಿ ಮುಂದಕ್ಕೆ ಕೂಡಿಸದಿದ್ದರೆ ಜನರೂ - ನೋಡಿ ಈ ಜನರಿಗೆ ನಾರಾಯಣ ಮೂರ್ತಿಯನ್ನು ಗುರುತಿಸುವ ಜ್ಞಾನವೂ ಇಲ್ಲ ಎಂದು ಬೈಯ್ಯುತ್ತಾರೆ." ಹೀಗೆ ನಾರಾಯಣ ಮೂರ್ತಿ, ಪ್ರೇಂಜಿಗಳನ್ನು ತಮ್ಮ ಸರಳತೆಗೆ ಟೀಕಿಸಿದ ವ್ಯಕ್ತಿಯನ್ನು ನಾನು ಮೊದಲಬಾರಿಗೆ ನೋಡಿದ್ದೆ. ಆದರೆ ಆತನ ವಾದದಲ್ಲಿನ ಹುರುಳನ್ನು ನಾನು ಇಂದಿಗೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಈ ಎಲ್ಲವನ್ನೂ ನೋಡಿದಾಗ ಗಾಂಧಿಯ ಮಹತ್ವ ನಮಗೆ ತಿಳಿಯುತ್ತದೆ. ಆತನ ಜೀವನ ಶೈಲಿಯೂ, ಜೀವನ ಸಂದೇಶವೂ ಒಂದೇ ಆಗಿದ್ದರಿಂದ ಈ ರೀತಿಯ ದ್ವಂದ್ವಗಳು ಎಂದೂ ಉದ್ಭವವಾಗುತ್ತಿರಲಿಲ್ಲ. ಅದೇನೇ ಇದ್ದರೂ ಅದು ಇತರರ ಸಮಸ್ಯೆಯಾಗಿತ್ತು. ಹೀಗೆ ಈ ಇಂಥ ವಿಷಯಗಳಲ್ಲಿ ದ್ವಂದ್ವವಿಲ್ಲದಿದ್ದರೆ ಪೆನ್ನು, ವಿಮಾನಯಾನ, ವಾಸ್ತವ್ಯದ ಜಾಗ, ಯಾವುದೂ ಒಂದು ಸಮಸ್ಯೆಯಾಗುವುದಿಲ್ಲ. ಆದರೆ ನಾವೆಲ್ಲರೂ ಗಾಂಧಿಯಂತೆ ಮಹಾತ್ಮರಾಗದೇ ಹುಲು ಮಾನವರಾದ್ದರಿಂದ, ನಮಗೆ ಈ ಸಮಸ್ಯೆಗಳೇ ದೊಡ್ಡದಾಗಿ ದೇಶದ ಸಮಸ್ಯೆಗಳು ಎರಡನೇ ಸ್ಥಾನವನ್ನು ಪಡೆದುಬಡುತ್ತವೆ.

ಅಂದಹಾಗೆ ಗಾಂಧಿ ಮಹಾತ್ಮನಾಗುವ ಪ್ರಕ್ರಿಯೆಯ ಮೊದಲ ಘಟನೆ ನಡೆದದ್ದು ಎಲ್ಲಿ? - ಎಂದು ಒಂದು ಕ್ಷಣದ ಮಟ್ಟಿಗೆ ಯೋಚಿಸಿ! ಅದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯಿತು. ಆ ಘಟನೆಯ ಮುಖ್ಯ ತಕರಾರು ಏನಾಗಿತ್ತು? ಗಾಂಧಿಗೆ ರೈಲಿನ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಅದಕ್ಕೆ ಪರವಾನಗಿ ಸಿಕ್ಕದೇ ರೈಲಿನಿಂದ ಹೊರಕ್ಕೆ ಹಾಕಲಾಗಿತ್ತು. ಗಾಂಧಿ ಸೂಟು ಧರಿಸಿದ್ದರು!

ಈಗ ಯಾರೋ ನನಗೆ ಕೊಟ್ಟ, ನನ್ನ ಬಳಿಯಿರುವ ಮಾ ಬ್ಲಾ ಪೆನ್ನನ್ನು ಏನು ಮಾಡಬೇಕೆನ್ನುವ ವಿಚಾರವನ್ನು ನಾನು ಪರಿಹರಿಸಲಾರದೇ ಒದ್ದಾಡುತ್ತಿದ್ದೇನೆ.




Wednesday, October 7, 2009

ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ



ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.

ಗ್ರಾಮೀಣ್ ಬ್ಯಾಂಕ್ ಬಡವರಿಗೆ ಸಾಲ ನೀಡುತ್ತಿದ್ದ ರೀತಿ ಅತೀ ಸರಳವಾದದ್ದು. ಬಡವರಿಗೆ ವಿತ್ತೀಯ ಸೇವೆಗಳು ಸಂದಬೇಕಾದರೆ ಬ್ಯಾಂಕೇ ಅವರ ಬಳಿಗೆ ಹೋಗಬೇಕೆಂದು ನಂಬಿದವರು ಯೂನಸ್. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಿನ ಬಹುತೇಕ ವ್ಯಾಪಾರ ಹಳ್ಳಿಯ ನಡುವಿನಲ್ಲಿ ನಿಗದಿತ ಸಮಯಾನುಸಾರ ಶಿಸ್ತಿನಿಂದ ನಡೆಯುತ್ತದೆ. ಗ್ರಾಮೀಣ್ ಬ್ಯಾಂಕಿನ ಪದ್ಧತಿ ಎಷ್ಟು ಸರಳವೆಂದರೆ ಅದರ ಸೂತ್ರಗಳನ್ನು ವಿಶ್ವದ ಅನೇಕ ಮೂಲೆಗಳಲ್ಲಿ ಅಳವಡಿಸಿ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಿದೆ. ಭಾರತದಲ್ಲೂ ನಾವು ಮೈಕ್ರೋಫೈನಾನ್ಸ್ ಅಂದಾಗ ನಮಗೆ ಸ್ವಸಹಾಯ ಗುಂಪುಗಳ ಜೊತೆಗೇ ಕಾಣುವುದು ಗ್ರಾಮೀಣ್ ಬ್ಯಾಂಕ್ ಮಾದರಿಯ ಸಂಸ್ಥೆಗಳು. ದೊಡ್ಡದಾಗಿ ಬೆಳೆದಿರುವ ಎಸ್.ಕೆ.ಸ್, ಷೇರ್, ಸ್ಪಂದನಾ, ಕರ್ನಾಟಕದಲ್ಲಿನ ಗ್ರಾಮೀಣ ಕೂಟ - ಎಲ್ಲವೂ ಗ್ರಾಮೀಣ್ ಬ್ಯಾಂಕಿನ ಸೂತ್ರಗಳನ್ನೇ ಅಳವಡಿಸಿ ತಮ್ಮ ಕಾರ್ಯಕ್ರಮವನ್ನು ಮುಂದುವರೆಸುತ್ತಿವೆ. ಆದರೂ ವಿಶ್ವದ ಅನೇಕ ಮೂಲೆಗಳಲ್ಲಿ ಹಬ್ಬಿರುವ ಈ ಕಾರ್ಯಕ್ರಮದ ಬಗ್ಗೆ ಯೂನಸ್ ಆಗಾಗ ಅಸಹನೆ ವ್ಯಕ್ತಪಡಿಸುತ್ತಾರೆ.

ಈಚೆಗೆ ಫೋರ್ಬ್ಸ್ ಪತ್ರಿಕೆಯಲ್ಲಿ ಎಸ್.ಕೆ.ಎಸ್ ಬಗ್ಗೆ ಬಂದ ಲೇಖನದಲ್ಲೂ ಯೂನಸ್ ಆ ಸಂಸ್ಥೆಯ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವಿಷ್ಟೇ: ಮಿಕ್ಕೆಲ್ಲ ಗ್ರಾಮೀಣ್ ಥರದ ಕಾರ್ಯಕ್ರಮಗಳಿಗೂ ಯೂನಸ್ ನಡೆಸುವ ಕಾರ್ಯಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ವ್ಯತ್ಯಾಸವೆಂದರೆ ಕಾರ್ಯಕ್ರಮದ ವ್ಯಾಪಾರದಿಂದ ಆರ್ಜಿಸಿದ ಲಾಭ ಯಾರ ಕೈಗೆ ಹೋಗುತ್ತದೆ ಅನ್ನುವುದಾಗಿದೆ. ಗ್ರಾಮೀಣ್ ಬ್ಯಾಂಕಿನ ೯೦ ಪ್ರತಿಶತಕ್ಕೂ ಹೆಚ್ಚು ಮಾಲೀಕತ್ವ ಇರುವುದು ಆ ಸಂಸ್ಥೆಯ ಗ್ರಾಹಕ ಮಹಿಳೆಯರ ಕೈಯಲ್ಲಿ. ಹೀಗಾಗಿ ಗ್ರಾಹಕರಿಂದ ಆರ್ಜಿಸಿದ ಲಾಭವೆಲ್ಲಾ ಅವರ ಕೈಯಲ್ಲಿಯೇ ಇರುತ್ತದೆ. ನಮ್ಮ ಸ್ವ ಸಹಾಯ ಗುಂಪುಗಳ ಸೂತ್ರವೂ ಇದೇ. ಗುಂಪುಗಳು ಆರ್ಜಿಸಿದ ಲಾಭ ಗುಂಪಿನ ಕೈಯಲ್ಲೇ ಇರುತ್ತದೆ. ಎಸ್.ಕೆ.ಎಸ್ ಅಥವಾ ಗ್ರಾಮೀಣ ಕೂಟದಂಥಹ ಸಂಸ್ಥೆಯಲ್ಲಿ ಹೀಗೆ ಬಡ ಗ್ರಾಹಕರಿಂದ ಆರ್ಜಿಸಿದ ಧನ ಲಾಭಾಂಶವಾಗಿ ಹೂಡಿಕೆದಾರರ ಕೈಗೆ ಹೋಗುತ್ತದೆ.

ವಿತ್ತೀಯ ಸೇವೆಯನ್ನು ಒದಗಿಸುವದೇ ಒಂದು ಉದ್ದೇಶ - ಅದರಿಂದಲೇ ಬಡವರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ, ಹಾಗೂ ಲಾಭವನ್ನು ಹೂಡಿಕೆದಾರರಿಗೆ ನೀಡಿದರೆ ಅವರುಗಳು ಇನ್ನೂ ಹೆಚ್ಚು ಹೂಡಿಕೆಯನ್ನು ಹಾಕುತ್ತಾರೆ, ಅದರಿಂದ ಹೆಚ್ಚಿನ ಜನರಿಗೆ, ಹೆಚ್ಚು ಕ್ಷೇತ್ರಗಳಲ್ಲಿನ ಬಡವರಿಗೆ ವಿತ್ತೀಯ ಸೇವೆಗಳನ್ನೊದಗಿಸಬಹುದು ಅನ್ನುವುದು ಎಸ್.ಕೆ.ಎಸ್.ನ ವಿಕ್ರಂ ಅವರ ವಾದ. ಈ ಬಗ್ಗೆ ಮೈಕ್ರೋಫೈನಾನ್ಸ್ ಜಗತ್ತಿನಲ್ಲಿ ವಾದವಿವಾದಗಳು ನಡೆಯುತ್ತಲೇ ಇವೆ. ಕೆಲ ವರ್ಷಗಳ ಹಿಂದೆ ಮೆಕ್ಸಿಕೊ ದೇಶದ ಕಂಪಾರ್ತಮೋಸ್ ಅನ್ನುವ ಚಿಕ್ಕಸಾಲದ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಷೇರುಗಳನ್ನು ಮಾರಾಟ ಮಾಡಿ ಅದಕ್ಕೆ ಹೆಚ್ಚಿನ ಬೆಲೆ ಬಂದಾಗಲೂ ಈ ಚರ್ಚೆ ತುಂಬಾ ಕಾವನ್ನು ಪಡೆದಿತ್ತು.

ಈ ಎಲ್ಲವನ್ನೂ ಟೀಕಿಸುತ್ತಲೇ ಯೂನಸ್ ಪ್ರಪಂಚಕ್ಕೆ ಒಂದು ಭಿನ್ನ ವ್ಯಾಪಾರ ಮಾದರಿಯನ್ನು ಒದಗಿಸುತ್ತಾರೆ. ಯೂನಸ್ ಒಬ್ಬ ಕನಸುಗಾರ ಅನ್ನುವುದಕ್ಕೆ ಅವರ ಈಚಿನ ಬರವಣಿಗೆಯೇ ಸಾಕ್ಷಿ. ಅವರ ಪ್ರಕಾರ ತಮ್ಮ ಜೀವನದ ಉದ್ದೇಶವೆಂದರೆ ಬಡತನವನ್ನು ಸಂಗ್ರಹಾಲಯದ ಪ್ರದರ್ಶನಕ್ಕೆ ಅಟ್ಟುವುದು. ಅರ್ಥಾತ್: ಮುಂದಿನ ಪೀಳಿಗೆಗೆ ನಾವು ಚರಿತ್ರೆಯನ್ನು ವಿವರಿಸುತ್ತಾ, ಒಂದಾನೊಂದು ಕಾಲದಲ್ಲಿ ಬಡತನವೆನ್ನುವ ಮಾತಿತ್ತು. ಬಡವರೆನ್ನುವವರು ಹೀಗಲ್ಲಾ ಜೀವಿಸುತ್ತಿದ್ದರು - ಅವರಿಗೆ ಊಟಕ್ಕೆ, ಬಟ್ಟೆಗೆ, ವಸತಿಗೆ ಕಷ್ಟವಾಗುತ್ತಿತ್ತು ಅನ್ನುವ ಕಥೆಗಳನ್ನು ಹೇಳುವ, ಬಡತನವೆಂದರೆ ಹೇಗಿತ್ತು ಅನ್ನುವ ಕುತೂಹಲದ ಅಧ್ಯಯನ ಆಗುವ ಸ್ಥಿತಿಗೆ ಬರುವಷ್ಟರ ಮಟ್ಟಿಗೆ ನಾವು ಪ್ರಗತಿ ಸಾಧಿಸಬೇಕು. ಬಡತನವನ್ನು ಹೀಗೆ ಸಂಗ್ರಹಾಲಯಕ್ಕೆ ಅಟ್ಟುವ ಅವರ ಮಹಾದೃಷ್ಟಿಯ ಬಗ್ಗೆ ಯೂನಸ್ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಆ ಪುಸ್ತಕದಲ್ಲಿ ಶಾಂತಿ, ವ್ಯಾಪಾರ, ಮತ್ತು ಬಡತನದ ಬಗ್ಗೆ ಅನೇಕ ಗಮ್ಮತ್ತಿನ ವಿಚಾರಗಳಿವೆ.

ಬಡತನವೇ ಅಶಾಂತಿಗೆ ಮೂಲ ಕಾರಣ ಎಂದು ತಮ್ಮ ನೊಬೆಲ್ ಪುರಸ್ಕಾರದ ಸ್ವೀಕಾರದಲ್ಲಿ ಹೇಳಿ ಯೂನಸ್ ತಮಗೂ ಗ್ರಾಮೀಣ್ ಬ್ಯಾಂಕಿಗೂ ಬಂದಿರುವ ಶಾಂತಿ ಪುರಸ್ಕಾರವನ್ನು ಅರ್ಥೈಸುತ್ತಾರೆ. ಆದರೆ ಬಡತನದ ನಿರ್ಮೂಲನೆಗೆ ದೇಣಿಗೆಯ ರೀತಿಯ ವಿಕಾಸದ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಬದಲು ಸಾಮಾಜಿಕ ವ್ಯಾಪಾರವನ್ನು ಮಾಡುವುದು ಒಳ್ಳೆಯದೆಂದು ಆತ ಹೇಳುತ್ತಾರೆ. ತಮ್ಮ ವಾದವನ್ನು ಮಂಡಿಸುತ್ತಾ ಯೂನಸ್ ಎರಡು ರೀತಿಯ ಸಾಮಾಜಿಕ ವ್ಯಾಪಾರಗಳನ್ನು ವಿಶ್ಲೇಷಿಸುತ್ತಾರೆ.

ಮೊದಲನೆಯ ರೀತಿಯ ವ್ಯಾಪಾರ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬೆಳೆಯುತ್ತಿರುವ ಬಂಡವಾಳಶಾಹಿಗಳೂ - ಸಾಮಾಜಿಕ ಕಾಳಜಿಯುಳ್ಳ ಗ್ರಾಮೀಣ್ ಸಂಸ್ಥೆಯಂತಹ ’ವಿಕಾಸ’ದ ಹೃದಯವುಳ್ಳ ಸಂಸ್ಥೆಗಳ ನಡುವಿನ ಭಾಗಸ್ವಾಮ್ಯದ ಮಾದರಿಯನ್ನು ಅವರು ಪ್ರತಿಪಾದಿಸುತ್ತಾರೆ. ಈ ವ್ಯಾಪಾರದಲ್ಲಿ ಲಾಭ ಉಂಟಾಗಬಹುದಾದರೂ, ಆ ಲಾಭವನ್ನು ಯಾರಿಗೂ ಹಂಚಲು ಸಾಧ್ಯವಿಲ್ಲ, ಬದಲಿಗೆ ಅಂಥಹ ಲಾಭ ಭಿನ್ನಭಿನ್ನ ಸಾಮಾಜಿಕ ವ್ಯಾಪಾರಗಳಲ್ಲಿ ಹೂಡಿಕೆಯಾಗಿ ಮುಂದುವರೆಯುತ್ತದೆ. ಹೀಗಾಗಿ ಸಾಮಾಜಿಕ ಉನ್ನತಿಯೇ ಉದ್ದೇಶವಾಗಿರುವ, ಲಾಭದ ಬಯಕೆಯಿಲ್ಲದ ಸಾಮಾಜಿಕ ವ್ಯಾಪಾರಗಳು ಪ್ರಪಂಚದಾದ್ಯಂತ ಉದ್ಭವವಾಗುತ್ತದೆಂದು ಅವರ ನಂಬಿಕೆ. ಗ್ರಾಮೀಣ್ ಬ್ಯಾಂಕ್ ಮತ್ತು ಡಾನೋನ್ ಸಂಸ್ಥೆಯ ನಡುವಿನ ಭಾಗಸ್ವಾಮ್ಯದಲ್ಲಿ ಬಡವರ ಸೇವನೆಗೆಂದು ಪುಷ್ಟಿಕರ ಮೊಸರಿನ ಕಾರ್ಖಾನೆಯನ್ನು ಸ್ಥಾಪಿಸಿರುವ ಉದಾಹರಣೆಯನ್ನು ಯೂನಸ್ ತಮ್ಮ ಬರವಣಿಗೆಯಲ್ಲಿ ಮಂಡಿಸುತ್ತಾರೆ.

ಎರಡನೆಯ ರೀತಿಯ ವ್ಯಾಪಾರ, ಬಡವರೇ ಮಾಲೀಕತ್ವ ಪಡೆದಿರುವ [ಗ್ರಾಮೀಣ್ ಬ್ಯಾಂಕಿನಂತಹ] ಸಂಸ್ಥೆಗಳು ನಡೆಸುವ ವ್ಯಾಪಾರ. ಅಲ್ಲಿ ಹೂಡಿಕೆಯೆಲ್ಲ ಬಡವರಿಂದಲೇ ಬರುವುದರಿಂದ, ಬಡವರು ಆ ಸಂಸ್ಥೆಯಿಂದ ಪಡೆಯುವ ಲಾಭಾಂಶ ಅವರಿಗೇ ಹೋಗಿ ಒಂದು ರೀತಿಯ ಸಮತಾಭಾವ ಉಂಟಾಗುತ್ತದೆಂದು ಯೂನಸ್ ವಾದಿಸುತ್ತಾರೆ.

ಅರ್ಥಶಾಸ್ತ್ರವನ್ನು ಓದಿರುವ ಯಾರಾದರೂ ಈ ರೀತಿಯ ವ್ಯಾಪಾರ ವಿಧಾನದಲ್ಲಿರುವ ತೊಡಕುಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಹೇಗೆ ಸಾಮಾಜಿಕ ವ್ಯಾಪಾರ ಸಹಜ ಗತಿಯಲ್ಲಿ ಬೆಳೆಯುವುದಿಲ್ಲ, ಹೇಗೆ ಯೂನಸ್ ವಿಚಾರಗಳು ಸಹಜ ಮಾನವ ಪ್ರವರ್ತನೆಯಾದ ’ಸ್ವಾರ್ಥಪರತೆ’ಯಿಂದ ದೂರವಾಗಿದೆ ಎನ್ನುವುದನ್ನು ವಾದಿಸಿ ತೋರಬಹುದು. ಸಾಲದ್ದಕ್ಕೆ ವಿಕ್ರಂ ಆಕುಲಾ ಥರದ ವ್ಯಕ್ತಿಗಳು ಗ್ರಾಮೀಣ್ ಬ್ಯಾಂಕಿನ ಬೆಳವಣಿಗೆಯ ಗತಿಯನ್ನೂ ಎಸ್.ಕೆ.ಎಸ್ ಸಂಸ್ಥೆ ಬೆಳೆದ ಗತಿಯನ್ನೂ ತಾಳೆ ಹಾಕಿ, ಲಾಭಾಂಶದ ಆಮಿಷವಿದ್ದಾಗ ವ್ಯಾಪಾರಗಳು ಹೇಗೆ ಸಹಜವಾಗಿ ಬೆಳೆದು ವಿಕಾಸದ ಗತಿಯನ್ನು ತೀವ್ರಗೊಳಿಸುತ್ತದೆನ್ನುವುದನ್ನು ನಿದರ್ಶನದ ಮೂಲಕ ತೋರಿಸಬಹುದು. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಯೂನಸ್ ಆ ಸೂತ್ರಗಳಿಗೆ ವಿರುದ್ಧವಾಗಿ ವಾದಿಸುವುದನ್ನ ಲೇವಡಿ ಮಾಡಲೂ ಬಹುದು. ಯಾವ ರ್‍ಯಾಷನಲ್ ವ್ಯಕ್ತಿಯೂ ಯೂನಸ್ ಅವರ ವಾದದ ಪ್ರಕಾರ ಸಂಸ್ಥೆಗಳು ಸ್ಥಾಪಿಸಿದರೆ, ಉಳಿದು ಬೆಳೆಯುತ್ತವೆ ಅನ್ನುವುದನ್ನ ನಂಬಲು ಸಾಧ್ಯವಿಲ್ಲ.

ಆದರೂ, ಯೂನಸ್ ತಮ್ಮ ವಿಚಾರಗಳನ್ನು ಮಂಡಿಸುವಲ್ಲಿ ಹಿಂಜರಿಯುವುದಿಲ್ಲ. ಯೂನಸ್ ವಾದದಲ್ಲಿರುವ - ಹಾಗೂ ವಿಕ್ರಂ ವಾದದಲ್ಲಿ ಕಾಣಸಿಗದ ಮೂಲ ಅಂಶವೇನು? ಏಕೆಂದರೆ ಲಾಭ ಹೆಚ್ಚಾದಷ್ಟೂ ಆ ವ್ಯಾಪಾರದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಅನ್ನುವುದು ಸ್ವಯಂ-ವೇದ್ಯವಾಗಿದೆ. ಆದರೆ ಬಡವರೇ - ಹಾಗೂ ಕೇವಲ ಬಡವರು ಮಾತ್ರವೇ - ನಿಮ್ಮ ವ್ಯಾಪಾರದ ಗ್ರಾಹಕರಾಗಿದ್ದರೆ ಅದರಲ್ಲಿ ಒಟ್ಟಾರೆ ನ್ಯಾಯದ ಪ್ರಶ್ನೆ ಉದ್ಭವವಾಗುತ್ತದೆ. ಅತೀ ಬಡವರಿಗೆ ಸಾಲ ನೀಡಿ ಅದರಿಂದ ಆರ್ಜಿಸಿದ ಬಡ್ಡಿಯ ಲಾಭದಲ್ಲಿ ಒಂದು ದೊಡ್ಡ ಸೌಧವನ್ನು ಕಟ್ಟಿ ಅದರಲ್ಲಿ ಜೀವಿಸಿದರೆ - ಆ ಲಾಭವನ್ನು ನ್ಯಾಯವಾದ ಮಾರ್ಗದಲ್ಲಿ ಆರ್ಜಿಸಿದ್ದರೂ - ಅನೇಕ ಹುಬ್ಬುಗಳು ಮೇಲೆ ಹೋಗುವುದನ್ನು ನಾವು ಕಾಣಬಹುದು. ಈ ಪ್ರಶ್ನೆ ಬೇರೆ ವ್ಯಾಪಾರದಿಂದ ಧನಾರ್ಜನೆ ಮಾಡಿದಾಗ ಉದ್ಭವವಾಗುವುದಿಲ್ಲ. ಒಂದು ರೀತಿಯಲ್ಲಿ ಏನೂ ಇಲ್ಲದ ಜನರಿಂದ ಲಾಭ ಮಾಡಿ ಸುಖಜೀವನ ನಡೆಸಿದರೆ ಅದು ಇರುವವರ -ಇಲ್ಲದವರ ಬಡವ-ಬಲ್ಲಿದರ ನಡುವಿನ ವ್ಯತ್ಯಾಸವನ್ನು ತೀವ್ರಗೊಳಿಸಿ ತೋರಿಸುತ್ತದಲ್ಲದೆ, ಬಡವರಿಂದ ಬಲ್ಲಿದರು ಹೆಚ್ಚೆಚ್ಚು ಶ್ರೀಮಂತರಾಗುವುದನ್ನೂ ನಿದರ್ಶಿಸುತ್ತದೆ. ಹೀಗಾಗಿ ಆ ಲಾಭವನ್ನು ಗ್ರಾಹಕರೊಂದಿಗೆ ಹಂಚಿಕೊಂಡರೆ, ಅಥವಾ ಆ ಲಾಭವನ್ನು ವ್ಯಾಪಾರಿಗಳು ಸ್ವೀಕರಿಸದಿದ್ದರೆ - ಒಟ್ಟಾರೆ ಒಂದು ಸಮತಾಭಾವ ಉಂಟಾಗಿ ಅದರಿಂದ ಶಾಂತಿ ಉದ್ಭವವಾಗಬಹುದು ಅನ್ನುವುದು ಯೂನಸ್ ಅವರ ವಾದ.

ಆ ವಾದವನ್ನು ಒಪ್ಪಿದರೂ, ಮೂಲಭೂತವಾಗಿ ಸ್ವಾರ್ಥ ಮತ್ತು ಅತಿಯಾಸೆಯ ಸೂತ್ರಗಳ ಮೇಲೆ ಬದುಕುವ ಮಾನವಸಹಜ ಪ್ರವೃತ್ತಿಗೆ ಇದು ವಿರುದ್ಧವಾಗಿದೆ ಅನ್ನುವುದನ್ನು ನಾವು ಮನಗಾಣಬೇಕು. ಯೂನಸ್, ಮಹಾತ್ಮಾಗಾಂಧಿಯಂತಹ ದೊಡ್ಡ ಹೃದಯದ ವ್ಯಕ್ತಿಗಳು ಮಾತ್ರ ಈ ಸೂತ್ರವನ್ನು ಮೀರಿ, ಮಿತವಾದ ಆದಾಯದಲ್ಲಿ, ಮಿತವಾದ ಬಯಕೆಗಳೊಂದಿಗೆ ಜೀವಿಸಬಲ್ಲರಾದ್ದರಿಂದ ಯೂನಸ್ ವಾದಗಳನ್ನು ಒಂದು ರೊಮ್ಯಾಂಟಿಕ್ ಕನಸುಗಾರನ - ನಿಜಜೀವನದಲ್ಲಿ ಪ್ರದರ್ಶಿಸಲು ಸಾಧ್ಯವಾಗದ - ವಾದ ಎಂದು ತಳ್ಳಿಹಾಗಬಹುದು.

ಆದರೆ ಯೂನಸ್ ತಮ್ಮ ಈ ಕನಸುಗಳನ್ನ ಜನರಿಗೆ ಹೇಳಲು ಹಿಂಜರಿಯುವುದಿಲ್ಲ. ಬಡತನವನ್ನು ಸಂಗ್ರಹಾಲಕ್ಕೆ ಕಳಿಸುತ್ತೇನೆ ಎನ್ನುವ ಉದಾತ್ತ ಆದರೆ ಇಂಪ್ರಾಕ್ಟಿಕಲ್ ಆಗಿ ಕಾಣುವ ಕನಸನ್ನು ವಿವರಿಸುವುದಕ್ಕೆ ಹಿಂಜರಿಯುವುದಿಲ್ಲ. ಬಹುಶಃ ಈ ರೀತಿಯ ಆಶಾವಾದಿ ಕನಸುಗಳು ಮತ್ತು ಆ ಕನಸುಗಳ ಮೇಲಿನ ನಂಬಿಕೆಯಿಂದಾಗಿಯೇ ಯೂನಸ್ ಅಂತಹವರು ಯಶಸ್ವಿಯಾಗುತ್ತಾರೇನೋ. ಅವರ ಅಸಹಜ ಆರ್ಥಿಕ ಸೂತ್ರಗಳ ’ಸಾಮಾಜಿಕ ವ್ಯಾಪಾರ’ಗಳನ್ನು ಹುಟ್ಟುಹಾಕುವ ಪ್ರಯತ್ನವನ್ನು ಕನಸುಗಾರ ಯೂನಸ್ ಮಾಡುತ್ತಲೇ ಇದ್ದಾರೆ. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಲ್ಲದೇ ೨೪ ಇತರ ವ್ಯಾಪಾರಗಳನ್ನು ಆತ ತನ್ನ ಸೂತ್ರದನುಸಾರ ಪ್ರಾರಂಭಿಸಿದ್ದಾರೆ. ಎಲ್ಲವೂ ಸಫಲವಾಗಿಲ್ಲ. ಆದರೆ ಪ್ರಯತ್ನವೇ ಮಾಡದಿದ್ದರೆ ಸಫಲವಾಗುವುದು ಹೇಗೆ? ವೈಫಲ್ಯದಿಂದ ಪಾಠ ಕಲಿತು ಮತ್ತೆ ಪ್ರಯೋಗ ಮಾಡಬೇಕೆನ್ನುವುದೇ ಅವರ ಸೂತ್ರ.

ತಮ್ಮ ವಿಚಾರಗಳನ್ನು ಮಂಡಿಸುತ್ತಾ ಯೂನಸ್ ಹೀಗನ್ನುತ್ತಾರೆ "ನಾನು ಪ್ರಾರಂಭ ಮಾಡಿದ ಅನೇಕ ವರ್ಷಗಳ ನಂತರ ನನಗನ್ನಿಸುತ್ತಿರುವುದು ಇದು - ಬ್ಯಾಂಕುಗಳು ಹೇಗೆ ಕೆಲಸ ಮಾಡುತ್ತವೆಂದು ತಿಳಿಯದ ಅಜ್ಞಾನವೇ ನನ್ನನ್ನು ಈ ದಿಶೆಯಲ್ಲಿ ಅಟ್ಟಿದ ಅಸ್ತ್ರವಾಯಿತು. ಬ್ಯಾಂಕಿಂಗ್ ಪದ್ಧತಿಗಳನ್ನು ತಿಳಿಯದ, ಬ್ಯಾಂಕನ್ನು ನಡೆಸುವ ಬಗ್ಗೆ ಯಾವತರಬೇತಿಯನ್ನೂ ಪಡೆಯದಿದ್ದದ್ದರಿಂದ ನಾನು ಭಿನ್ನ ರೀತಿಯಲ್ಲಿ ಆಲೋಚಿಸಲು ಸಾಧ್ಯವಾಯಿತು. ಬಹುಶಃ ನಾನು ಬ್ಯಾಂಕಿಂಗ್ ತಿಳಿದಿದ್ದರೆ ಅದನ್ನು ಬಡವರಿಗೆ ಹೇಗೆ ಅನ್ವಯಿಸಬಹುದು ಅನ್ನುವುದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲವೇನೋ.."

ಹೀಗೆ ಜಗತ್ತಿನ ಅತೀ ಕಷ್ಟದ ಸವಾಲುಗಳನ್ನೆದುರಿಸಲು ಸುಲಭ ಮಾರ್ಗಗಳನ್ನು ಕಂಡುಕೊಳ್ಳಬಹುದು, ಆ ಮಾರ್ಗಗಳು ಅಸಹಜವೆನ್ನಿಸಿದರೂ, ಅದರಲ್ಲಿ ನಂಬುಗೆಯಿದ್ದರೆ, ಜಗತ್ತಿನ ಟೀಕೆಗೆ ತಲೆಬಾಗಿಸದೇ ಹಠ ಹಿಡಿದು ಮುಂದುವರೆದರೆ ಬಹುಶಃ ಅನಿರೀಕ್ಷಿತ ಸಾಫಲ್ಯ ಸಿಕ್ಕಬಹುದೆಂದು ಯೂನಸ್ ನಿರೂಪಿಸುತ್ತಾರೆ. ಅವರಿಗೆ ಬೇಕಾದ್ದದ್ದು ಮೂರೇ ವಿಚಾರಗಳು - ೧. ತಮ್ಮ ವಿಚಾರದ ಬಗ್ಗೆ ಅದಮ್ಯ ನಂಬುಗೆ, ೨.ಜಗತ್ತನ್ನು ಬದಲಾಯಿಸಲೇಬೇಕೆಂಬ - ಬಡತನವನ್ನು ಪ್ರಪಂಚದಿಂದ ಕಿತ್ತೊಗೆಯಬೇಕೆಂಬ ಹಠವಾದಿಯ ಕನಸು ಹಾಗೂ ೩. ಟನ್ನುಗಟ್ಟಲೆ ಸಂಯಮ. ಈ ಎಲ್ಲವನ್ನೂ ಯೂನಸ್ ಒಂದು ಬಾರಿಯಲ್ಲ, ಅನೇಕ ಬಾರಿ ತೋರಿಸಿದ್ದಾರೆ.




Thursday, September 24, 2009

ರುದ್ರಮಾತಾದ ರಾಮಜೀಭಾಯಿ

ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!

ರುದ್ರಮಾತಾ ಅನ್ನುವುದು ಹೊಸದಾಗಿ - ಭೂಕಂಪದ ನಂತರ ನಿರ್ಮಾಣವಾದ ಗ್ರಾಮ. ಈ ಗ್ರಾಮದ ಮನೆಗಳೆಲ್ಲಾ ಗೋಳಾಕಾರ! ೧೯ನೇ ಶತಮಾನದಲ್ಲಿ ಆದ ಭೂಕಂಪದ ನಂತರ ಉತ್ತರ ಕಛ್ ಪ್ರದೇಶದಲ್ಲಿ ಈ ಗೋಳಾಕಾರದ ಮನೆಗಳು ನಿರ್ಮಾಣವಾದುವಂತೆ. ಯಾವುದೇ ಕೋನವಿಲ್ಲದ ಕಟ್ಟಡ ಭೂಕಂಪವನ್ನು ತಡೆದು ನಿಲ್ಲುತ್ತದೆ ಅನ್ನುವ ಮಾತನ್ನು ಅವರುಗಳು ಕಂಡುಕೊಂಡರಂತೆ. ಹೀಗಾಗಿ ಈ ಬಾರಿಯ ಭೂಕಂಪಾನಂತರ ಬನ್ನಿ ಪ್ರದೇಶದಲ್ಲೂ ಇದೇ ರೀತಿಯ ಗೋಳಾಕಾರದ ಮನೆಗಳು. ಒಂದೇ ಕೋಣೆ ಹಾಗೂ ಹಂಚಿನ ಸೂರು. ಈ ಸೂರಿನ ಕೆಳಗೆ ರಾಮಜಿಭಾಯಿ, ಅವನ ತಮ್ಮ, ಅಮ್ಮ, ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದಾರೆ.

ರಾಮಜಿಭಾಯಿ ಚರ್ಮಶಿಲ್ಪಿ. ಆದರೆ ಎಲ್ಲ ಚರ್ಮೋದ್ಯೋಗದವರೂ ಮಾಡುವಂತೆ ಬ್ಯಾಗುಗಳು, ಚಪ್ಪಲಿಗಳು, ಹೀಗೆ ಭಿನ್ನ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದೆಯೇ ಒಂದೇ ಪದಾರ್ಥವನ್ನು ಮಾಡುವ ’ಸ್ಪೆಷಲೈಸೇಷನ್’ ಹೊಂದಿದ್ದಾನೆ. ಈತ ತಯಾರಿಸುವ ಆ ಪದಾರ್ಥವೆಂದರೆ ಕುದುರೆಗಳಿಗೆ ಜೀನು, ಲಗಾಮು ತಯಾರಿಸುವುದು. ಕುದುರೆಯ ಬೆನ್ನಿಗೆ ಹಾಕುವ ಜೀನು, ಮತ್ತು ಅದಕ್ಕೆ ಹೊಂದುವ ಮಿಕ್ಕ ಚರ್ಮದ ಪರಿಕರಗಳನ್ನು ರಾಮಜಿಭಾಯಿ ತಯಾರಿಸುತ್ತಾನೆ. ಮಿಕ್ಕ ಪ್ರಾಂತದಲ್ಲಾದರೆ ಜೀನುಗಳು ಕುದುರೆಯ ಬೆನ್ನಮೇಲೆ ಸರಿಯಾಗಿ ಕುಳಿತುಕೊಳ್ಳುತ್ತದೆಯೇ ಹಾಗೂ ಅದರ ಮೇಲೆ ಸವಾರ ಕುಳಿತುಕೊಳ್ಳಲು ಆರಾಮವಾಗಿದೆಯೇ ಎಂದು ಪರೀಕ್ಷಿಸುತ್ತಾರಾದರೂ, ಈ ಪ್ರಾಂತದಲ್ಲಿ ಅದು ನೋಡಲು ಅಂದವಾಗಿದೆಯೇ ಹಾಗೂ ಅದರ ಮೇಲೆ ಮಾಡಿರುವ ಕೈಕುಸುರಿಕೆಲಸ ಸರಿಯಿದೆಯೇ ಎನ್ನುವುದನ್ನೂ ನೋಡುತ್ತಾರೆ.

ಒಂದು ಜೀನನ್ನು ತಯಾರಿಸಬೇಕಾದರೆ ಅದರ ಚರ್ಮದ ಕೆಲಸ ಮುಗಿಸಿ, ಬಂಗಾರ ಹಾಗೂ ಬೆಳ್ಳಿಯ ಬಣ್ಣದ ಡಿಸೈನನ್ನು ಅದಕ್ಕೆ ಹೆಣೆಯ ಬೇಕು. ಈ ಕುಸುರಿಕೆಲಸಕ್ಕೆ ಸಮಯ ಹಿಡಿಯುತ್ತದೆ. ಭುಜ್‌ನಿಂದ ದೊಡ್ಡ ಬಂಗಾರ ಬಣ್ಣದ ಪ್ಲಾಸ್ಟಿಕ್ ಷೀಟುಗಳನ್ನು ಕೊಂಡುತಂದು ಅವುಗಳಲ್ಲಿ ಎರಡು ಮಿ.ಮಿ ಅಗಲದ ’ದಾರ’ವನ್ನು ಮಾಡಿಕೊಂಡು ಅದರಲ್ಲಿ ರಾಮಜಿಭಾಯಿ ಡಿಸೈನುಗಳನ್ನು ಹಣೆಯುತ್ತಾನೆ. ಒಂದು ಜೀನು ತಯಾರಿಸಲು ಅವನಿಗೆ ಸುಮಾರು ಒಂದು ತಿಂಗಳು ಹಿಡಿಯುತ್ತದೆ. ಪ್ರತಿ ಜೀನೂ ಸುಮಾರು ಹತ್ತು ವರ್ಷಕಾಲ ಬಾಳಿಕೆ ಬರುತ್ತದಂತೆ. ಒಂದು ಜೀನನ್ನು ತಯಾರಿಸಲು ಬೇಕಾದ ಸಾಮಾನು - ತೊಗಲು, ಇತರ ಅಲಂಕಾರದ ವಸ್ತುಗಳು ಸುಮಾರು ಎರಡು ಸಾವಿರ ರೂಪಾಯಿಯ ಖರ್ಚನ್ನು ಹೊಂದಿರುತ್ತದೆ. ಒಂದು ತಿಂಗಳುಕಾಲ ಇಬ್ಬರು ಅದರ ಮೇಲೆ ಕೆಲಸ ಮಾಡುತ್ತಾರೆ. ಅದು ಹತ್ತುಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಅಂದರೆ ಶ್ರಮಕ್ಕೆ ನಾವು ಲೆಕ್ಕ ಕಟ್ಟದಿದ್ದರೆ ಆ ಸಂಸಾರಕ್ಕೆ ನಿವ್ವಳ ಆದಾಯ ಎಂಟು ಸಾವಿರ ರೂಪಾಯಿ. ರಾಮಜಿಭಾಯಿ ಸಂತೋಷದಿಂದ ನನ್ನ ಸಂಸಾರ ನಡೆಸಲು ಇಷ್ಟು ಸಾಕು ಅನ್ನುತ್ತಾನೆ.

ನಮ್ಮ ವ್ಯಾಪಾರದ ಮಕ್ಕಾದಲ್ಲಿ ಈ ಸಮಸ್ಯೆಯನ್ನು ನಿರೂಪಿಸಿದರೆ ಅದರ ವಿಶ್ಲೇಷಣೆ ನಡೆಯುವುದು ಈ ರೀತಿಯಾಗಿ: ಕುದುರೆಗಳಿಗೆ ಅಲಂಕಾರದ ಜೀನುಗಳನ್ನು ತಯಾರಿಸುವ ಕಾಯಕವನ್ನು ಸನ್‍ಸೆಟ್ [ಅಂದರೆ ಹೆಚ್ಚು ಭವಿಷ್ಯವಿಲ್ಲದ ಸೂರ್ಯಾಸ್ತದತ್ತ ಹೋಗುತ್ತಿರುವ] ಕಾಯಕ ಎನ್ನಬಹುದು. ಅದಕ್ಕೆ ಕಾರಣಗಳನ್ನು ಅಂಕಿ ಸಂಖ್ಯೆಗಳೊಂದಿಗೆ ನಿರೂಪಿಸಲೂಬಹುದು - ಒಟ್ಟಾರೆ ಕುದುರೆಗಳ ಸಂಖ್ಯೆ - ಅವುಗಳಲ್ಲಿ ರೇಸಿಗೆ, ಸೈನ್ಯಕ್ಕೆ, ಪೊಲೀಸ್ ಪಡೆಗೆ ಬಳಸುತ್ತಿರುವ ಕುದುರೆಗಳ ಸಂಖ್ಯೆ ಎಷ್ಟು - ಆಚೆ ಖಾಸಗಿಯಾಗಿ ಇರುವ ಕುದುರೆಗಳೆಷ್ಟು ಎನ್ನುವುದನ್ನು ಲೆಕ್ಕ ಕಟ್ಟಿಬಿಡಬಹುದು. ಈಗ ರಾಜರೂ ರಾಜ್ಯಗಳೂ, ಕುದುರೆ ಸಾರೋಟುಗಳೂ, ಟಾಂಗಾಗಳೂ ಇಲ್ಲದ್ದರಿಂದ - ಖಾಸಗೀ ಮಾಲೀಕತ್ವದಲ್ಲಿ ಇರುವುದು ಕೆಲವಷ್ಟೇ ಕುದುರೆಗಳೆಂದೂ ನಿರೂಪಿಸಬಹುದು. ಇದರ ಮೇಲೆ ಒಂದು ಕುದುರೆಯ ಜೀನು ಹತ್ತು ವರ್ಷಕಾಲ ಬಾಳುವುದಾದರೆ ರಾಮ್‍ಜಿಭಾಯಿ ಜೀವನವನ್ನು ಇದೇ ರೀತಿ ಬೆಳೆಸಲು ಎಷ್ಟು ಕುದುರೆಗಳು ಆ ಪ್ರಾಂತದಲ್ಲಿರಬೇಕು ಅನ್ನುವುದನ್ನೂ ಲೆಕ್ಕ ಕಟ್ಟಬಹುದು.

ಆದರೆ ಈ ವಿಶ್ಲೇಷಣೆಯನ್ನು ಹಿಡಿದು ಹೊರಟರೆ, ರಾಮಜಿಭಾಯಿ ಜೀನುಗಳನ್ನು ತಯಾರಿಸುವುದನ್ನು ಬಿಟ್ಟು ತಕ್ಷಣವೇ ಡೈವರ್ಸಿಫೈ ಮಾಡಬೇಕು. ಯಾವುದಾದರೂ ಉತ್ತಮ ಡಿಸೈನರ್ ಜೊತೆ ಸೇರಿ, ಹೆಂಗಸರ ಪರ್ಸುಗಳನ್ನು ತಯಾರಿಸಿ ಅದಕ್ಕೆ ಕುಸುರಿ ಕೆಲಸವನ್ನು ಮಾಡಬೇಕು - ತೊಗಲಿನ ವ್ಯಾಪಾರದಲ್ಲಿ ಭವಿಷ್ಯವಿರುವುದೇ ಅಲ್ಲಿ. ಹೀಗೆ ನಾವುಗಳು ಉಪದೇಶ ನೀಡಲು ಸಾಧ್ಯ.

ಆದರೆ ರಾಮಜಿಭಾಯಿಗೆ ಇದು ಯಾವುದೂ ಬೇಕಿಲ್ಲ. ತಿಂಗಳಿಗೊಂದು ಜೀನು ತಯಾರಿಸುತ್ತೇನೆ. ಅದು ಮಾರಾಟವಾಗುತ್ತದೆ. ನಾನು ಸಂತೋಷದಿಂದ ಇದ್ದೇನೆ ಅನ್ನುತ್ತಾನೆ. ಆ ಪ್ರಾಂತದಲ್ಲಿ ಒಂದೈವತ್ತು ಕುದುರೆಗಳಿವೆ, ಅವುಗಳನ್ನು ಶೋಕಿಗಾಗಿ ಜನ ಸಾಕಿಕೊಂಡಿದ್ದಾರೆ. ತಾನು ಕುದುರೆಯ ಜೀನುಗಳನ್ನು ಮಾಡುವುದನ್ನು ಜನರು ಬಲ್ಲರು. ಹೀಗಾಗಿ ಜೀನುಗಳಿಗೆಂದೇ ರಾಮಜಿಭಾಯಿಯ ಬಳಿ ಬಂದು ಅದು ತಯಾರಾದ ಕೂಡಲೇ ತೆಗೆದೊಯ್ಯುವ ಗಿರಾಕಿಗಳಿದ್ದಾರೆ. ರಾಮಜಿಭಾಯಿಯ ಪ್ರಕಾರ ತನ್ನ ಕಲೆಗೆ ಸಾಕಷ್ಟು ಗ್ರಾಹಕರೂ, ಬೆಲೆಯೂ, ಮನ್ನಣೆಯೂ, ದೊರೆತಿದೆ. ಹೀಗಾಗಿ ಬೇರೇನನ್ನೂ ಮಾಡಬೇಕೆಂದಾದಲೀ, ತಾನು ಮಾಡುವ ಜೀನುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಹೊರಗೆ ಮಾರಟ ಮಾಡಬೇಕೆಂದಾಗಲೀ ಅವನಿಗನ್ನಿಸುವುದಿಲ್ಲ.


ಬರುವ ಸಂಪಾದನೆಯಲ್ಲಿ ಸಂತೋಷದಿಂದಿರುವ ರಾಮಜಿಭಾಯಿಯ ಸಂತೃಪ್ತಿ ಇನ್ನಷ್ಟು ಜಾಗಗಳಲ್ಲಿ ಇದ್ದರೆ ನಮ್ಮ ದೇಶದ ಸ್ವಯಂಸೇವಾ ಸಂಸ್ಥೆಗಳ ಗತಿಯೇನು ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಎಲ್ಲರೂ ರಾಮಜಿಭಾಯಿಯ ಹಾಗಿದ್ದರೆ ಕುದುರೆಗಳನ್ನು ಸಾಕುವ ಶೊಕಿಯೂ ಇರುವುದಿಲ್ಲ - ಅವುಗಳಿಗೆ ಜೀನುಗಳನ್ನು ಕೊಳ್ಳುವ ಶೋಕಿಯೂ ಇರುವುದಿಲ್ಲವೇನೋ! ಭೂಕಂಪದಿಂದ ಮನೆ ಕಳೆದುಕೊಂಡು, ತನ್ನು ಊರಿನಿಂದ ಈ ಹೊಸದಾಗಿ ನಿರ್ಮಾಣಗೊಂಡ ರುದ್ರಮಾತಾಗೆ ಬಂದು ನೆಲೆಸಿರುವ ರಾಮಜಿಭಾಯಿ ನಮಗೆ ಸಂತೋಷದಿಂದ ಜೀವಿಸುವ ಪಾಠಗಳನ್ನೂ ಸಂತೃಪ್ತಿಯನ್ನೂ ಕಲಿಸುತ್ತಾನೆ. ಅವನ ಸಂತೋಷಕ್ಕಾಗಿ ಅವನು ಎಲ್ಲೂ ಹೋಗಬೇಕಿಲ್ಲ. ತನಗೆ ತಿಳಿದಿರುವ ಕಲೆಯನ್ನು ಅಭ್ಯಸಿಸುತ್ತಾ ಇದ್ದಲ್ಲಿ, ಅವನಿಗವಶ್ಯವಿದ್ದಷ್ಟು ಮಾರುಕಟ್ಟೆ ಅವನನ್ನೇ ಹುಡುಕಿ ಬರುತ್ತದೆ. ತಿಂಗಳಿಗೆ ಹತ್ತು ಸಾವಿರ ರೂಪಾಯಿಯ ವ್ಯಾಪಾರ ನನಗೆ ಸಾಕು ಅನ್ನುವ ತೃಪ್ತಿ ಹೊಂದಿದಾಗ ಸಮಸ್ಯೆಗಳೇ ಕಾಣಿಸುವುದಿಲ್ಲ. ಇಂಥ ಖುಷಿಯ ಜೀವನ ನಡೆಸುತ್ತಿರುವ ತೃಪ್ತರನ್ನು ಉದ್ಧಾರ ಮಾಡುವ ತೆವಲು ನಮಗೆ - ಸ್ವಯಂ ಸೇವಾ ಸಂಸ್ಥೆ, ವಿದ್ಯಾಸಂಸ್ಥೆಗಳಿಗೆ - ಯಾಕೆ ಅನ್ನುವುದೂ ಒಂದು ಆಸಕ್ತಿಕರ ವಿಚಾರವೇ.

ರಾಮಜಿಭಾಯಿ ಹಾಗೂ ಇತರ ಕುಶಲ ಕರ್ಮಿಗಳನ್ನು ಮಾರುಕಟ್ಟೆಗಳೊಂದಿಗೆ ಯಾಕೆ ಸೇರಿಸಬೇಕು ಅನ್ನುವ ಪ್ರಶ್ನೆಯನ್ನು ಆಗಾಗ ನಾವು ಕೇಳಿಕೊಳ್ಳಬೇಕು. ನಾಳೆ ಜೀನುಗಳನ್ನು ತೊಡಿಸಲು ಕುದುರೆಗಳೇ ಇಲ್ಲವಾದಲ್ಲಿ ರಾಮಜಿಭಾಯಿ ಉಪವಾಸ ಸಾಯುವುದಿಲ್ಲ. ಬದಲಿಗೆ ಆ ಕಾಲಕ್ಕೆ ತಕ್ಕ ಯಾವುದಾದರೂ ಚರ್ಮದ ಕೆಲಸವನ್ನು ಕೈಗೊಂಡು ತನ್ನ ಕುಶಲತೆಯಾಧಾರದ ಮೇಲೆಯೇ ಜೀವಿಸಬಲ್ಲ ಶಕ್ತಿ ಅವನಿಗಿದೆ. ಕುದುರೆಗಳಿಲ್ಲದಿದ್ದರೆ ಆ ಪ್ರಾಂತದಲ್ಲಿ ಒಂಟೆಗಳಿವೆ. ಏನೂ ಇಲ್ಲದಿದ್ದಾಗ ಲೂಯಿ ವುಟ್ಟೋನ್ ಜೊತೆ ಸೇರಿ ಹೆಂಗಸರ ಪರ್ಸುಗಳನ್ನೂ ಆತ ಮಾಡಬಲ್ಲನೇನೋ.

ಹಿಂದೊಮ್ಮೆ ಕಂಜರಿ ಗ್ರಾಮದಲ್ಲಿ ಕೆಲಸಮಾಡುವ ಕುಂಬಾರ ದಯಾಭಾಯಿ ಪ್ರಜಾಪತಿಯ ಜೊತೆ ಹರಟುತ್ತಾ ನಾನು ಕೇಳಿದ್ದೆ: "ಇಲ್ಲಿ ನೀನು ಮಾರಾಟ ಮಾಡುವು ಈ ಹುಕ್ಕಾ, ದಿಯಾ, ಮತ್ತು ಮಿಕ್ಕ ಮಡಿಕೆಗಳಿಗೆ ಟೆರ್ರಾಕೋಟಾ ಅನ್ನುವ ಹೆಸರಿಟ್ಟು ಇಲ್ಲಿಂದ ಕೇವಲ ೪೦ ಕಿಲೋಮೀಟರ್ ದೂರದಲ್ಲಿರುವ ಬರೋಡಾದಲ್ಲಿ ಎಷ್ಟಕ್ಕೆ ಮಾರುತ್ತಿದ್ದಾರೆ ಗೊತ್ತಾ?" - ಅದಕ್ಕೆ ದಯಾಭಾಯಿ ಉತ್ತರಿಸಿದ್ದ: "ಗೊತ್ತು. ನಾನು ಇಲ್ಲಿ ಮಾರಾಟ ಮಾಡುವ ಬೆಲೆಗೆ ಮೂರರಷ್ಟು ಬೆಲೆಯನ್ನು ಆತ ಪಡೆಯುತ್ತಾನೆ. ಅದು ವಿದೇಶಕ್ಕೆ ಹೋದರೆ ಇನ್ನೂ ಹೆಚ್ಚು ಹಣ. ಆದರೆ ನಾನು ಕುಂಬಾರ, ನನಗಿರುವ ಸಮಯದಲ್ಲಿ ನಾನು ಮಣ್ಣಿನ ಮೇಲೆ ಕೆಲಸ ಮಾಡಲೋ - ಮಾರುಕಟ್ಟೆ ಅಲೆಯಲೋ? ಹೀಗೆ, ಇಲ್ಲಿ ಕೂತು ನನ್ನ ಜೀವನಕ್ಕೆ ಅಗತ್ಯವೆನ್ನುವ ರೀತಿಯಲ್ಲಿ ನನ್ನ ಶ್ರಮಕ್ಕೆ ಫಲ ಸಿಗುವ ರೀತಿಯಲ್ಲಿ ನಾನು ಬೆಲೆ ಕಟ್ಟುತ್ತೇನೆ. ಈ ಬೆಲೆಗೆ ಯಾರಾದರೂ ಕೊಂಡರೆ ನನ್ನ ಜೀವನ ಸಾಗುತ್ತದೆ. ಆ ನಂತರ ಅವರೇನು ಮಾಡುತ್ತಾರೆ ಅನ್ನುವುದನ್ನು ಯೋಚಿಸುತ್ತಾ ತಲೆ ಕೆಡಿಸಿಕೊಂಡರೆ ನನ್ನ ಕಾಯಕ ಎಲ್ಲಿಗೆ ಹೋಗುತ್ತದೋ ಯೋಚಿಸಿ!"

ಹೀಗೆ ರಾಮಜಿಭಾಯಿ, ದಯಾಭಾಯಿಗಳನ್ನು ಭೇಟಿಯಾದಾಗ - ಮಹಾತ್ಮಾ ಗಾಂಧಿ ಹೇಳಿದ ನೀಡ್ [ಅವಶ್ಯಕತೆ]ಗೂ ಗ್ರೀಡ್ [ದುರಾಸೆ]ಗೂ ಇರುವ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಕಾಣುತ್ತದೆ.


Wednesday, September 9, 2009

ವಾಡಾಗಳ ಅರಗಿನರಮನೆ

ನಿರುನಾ ಗ್ರಾಮದಲ್ಲಿ ಮಾತ್ರವಲ್ಲ ಇಡೀ ಕಛ್ ಪ್ರಾಂತದಲ್ಲೇ ನಿಜಕ್ಕೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಈ ಬಾರಿ ನಾವು ರೋಗನ್ ಕಲೆಯಿಂದ ಮುಂದಕ್ಕೆ ಹೋಗಿ ಮರ ಮತ್ತು ಅರಗಿನ ಕಲಸ ಮಾಡುವ ’ವಾಡಾ’ಬುಡಕಟ್ಟಿನ ಜನಗಳ ಬಗ್ಗೆ ಯೋಚಿಸೋಣ. ವಾಡಾ ಬುಡಕಟ್ಟಿನವರು ಮೂಲಭೂತವಾಗಿ ಅಲೆಮಾರಿಗಳು, ಅರಣ್ಯ ಪ್ರಾಂತದಲ್ಲಿ ತಿರುಗಾಡುತ್ತಿರುವ ಈ ಬುಡಕಟ್ಟಿನ ಜನಾಂಗಕ್ಕೆ ಒಂದೇ ಜಾಗದಲ್ಲಿದ್ದು ಕೆಲಸ ಮಾಡುವುದು ತುಸು ಮುಜುಗರದ ಮಾತೇ. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಮರಗಳ ಬಗೆಗಿನ ಅವರ ಜ್ಞಾನ ಅದ್ಭುತವಾದದ್ದು. ಅವರ ಕರಕುಶಲತೆಯನ್ನು ನೋಡಿಯೇ ನಂಬಬೇಕು. ಆದರೆ ಕಲಾವಿದರಿಗೆ ತಮ್ಮ ಕಲೆಯ ಆಧಾರವಾಗಿಯೇ ಜೀವನ ಹೊರೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಲೋ ಎಂಬಂತೆ ಇವರುಗಳು ಸೈಡ್ ಬಿಜನೆಸ್ ಆಗಿ ಸಾರಾಯಿ ತಯಾರಿಸುವ ಕೆಲಸವನ್ನೂ ಮಾಡುತ್ತಾರೆ.

ವಾಡಾಗಳನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಯತ್ನಗಳು ಅಲ್ಲಲ್ಲಿ ನಡೆದಿವೆಯಾದರೂ ಅವರುಗಳು ಅಸ್ಪೃಷ್ಯರಾಗಿಯೇ ಉಳಿದಿದ್ದಾರೆ. ಹಲವು ವರ್ಷಗಳ ಕೆಳಗೆ ಇವರುಗಳೆಲ್ಲ ಇಸ್ಲಾಂಗೆ ಮತಾಂತರಗೊಂಡರೂ ಅವರ ಅಸ್ಪೃಷ್ಯತೆ ಮುಂದುವರೆದಿದೆ. ಕಛ್ ಪ್ರಾಂತದಲ್ಲಿ ಓಡಾಡಿದ ಪ್ರತಿಯೊಂದು ಜಾಗದಲ್ಲೂ ನಮಗೆ ನೀರು ಮತ್ತು ಚಹಾದ ಸೇವೆಯಿತ್ತಾದರೂ ವಾಡಾಗಳನ್ನು ನೋಡಹೋದಾಗ ಏನೂ ದಕ್ಕಲಿಲ್ಲ. ಅದಕ್ಕೆ ಕಾರಣ: ಅವರು ನೀಡುವುದನ್ನು ನಾವು ನಿರಾಕರಿಸಬಹುದು ಅನ್ನುವ ಅವರ ಭೀತಿ.

ಅಲೆಮಾರಿ ವಾಡಾಗಳು ಕುಶಲ ಕರ್ಮಿಗಳು. ಒಂದು ಕೊಡಲಿ, ಒಂದು ಕೆತ್ತುವ ಪರಿಕರ, ಒಂದಿಷ್ಟು ಅಗಲದ ಸ್ಯಾಂಡ್ ಪೇಪರ್ ಹಾಗೂ ಬಬೂಲ್ ಮರ ಇವುಗಳಷ್ಟೇ ಕೈಯಲ್ಲಿ ಹಿಡಿದು ಆಟಿಕೆಗಳನ್ನೂ, ಲಟ್ಟಣಿಗೆಯನ್ನೂ, ಮರದ ಚಮಚಾ, ಸ್ಪಾಟುಲಾಗಳನ್ನು ಐದೇ ನಿಮಿಷದಲ್ಲಿ ಮಾಡಿ ತೋರಿಸಬಲ್ಲರು. ಎರಡು ಮರದ ತುಕಡಿಗಳಿಗೆ ಅಂಚಿನಲ್ಲಿ ಚೂಪಾದ ಮೊಳೆಯಾಕಾರದ ಅಂಚುಗಳನ್ನು ಮಾಡಿ ಎರಡೂ ಚೂಪಾದ ಅಂಚಿನ ನಡುವೆ ಒಂದು ಮರದ ಚೂರನ್ನು ಸಿಗಿಸಿ ಒಂದು ಪ್ಲಾಸ್ಟಿಕ್ ಹುರಿದಾರ ಸುತ್ತಿ ಅದನ್ನು ತಿರುಗಿಸುತ್ತಾ, ಚೂಪಾದ ಒಂದು ಕಬ್ಬಿಣದ ಪರಿಕರವನ್ನು ಹಿಡಿದು ಆ ಮರದ ತುಂಡನ್ನು ಗುಂಡಾಗಿ ಕೆತ್ತಿಡಬಲ್ಲರು. ಅದಕ್ಕೆ ಒಂದಿಷ್ಟು ಸ್ಯಾಂಡ್ ಪೇಪರ್ ತಿಕ್ಕಿದರೆ ಲೇಥಿನ ಮೇಲೆ ಯಂತ್ರದಿಂದ ಮಾಡಿದರೆ ಬರುವಷ್ಟೇ ಉತ್ತಮ ಫಿನಿಶ್ ಬರುತ್ತದೆ. ಆ ಗುಂಡು ಹಿಡಿಕೆಯ ಮೇಲೆ ಭಿನ್ನ ಬಣ್ಣಗಳಿಂದ ರಂಗಿಸಿದ ಅರಗಿನ ಚೂರುಗಳಿಂದ ಬಣ್ಣ ಲೇಪಿಸಿ ಒಂದು ಬಟ್ಟೆಯನ್ನು ಹಿಡಿದು ಮತ್ತೆ ಆ ಚೂಪಾದ ಅಂಚಿನ ನಡುವೆ ಇರುವ ಮರದ ತುಂಡನ್ನು ತಿರುಗಿಸುತ್ತಾ - ವೇಗವನ್ನೂ ಬಟ್ಟೆ ಒತ್ತುವ ತೀವ್ರತೆಯನ್ನೂ ಬದಲಾಯಿಸುತ್ತಾ ಹೋದರೆ ಲಟ್ಟಣಿಗೆಯ ಮೇಲೊಂದು ಅದ್ಭುತವಾದ ಡಿಜೈನು ಬರುತ್ತದೆ. ಬ್ರಶ್ ಹಿಡಿದು ಗಂಟೆಗಟ್ಟಲೆ ಪೈಂಟ್ ಮಾಡಿರಬಹುದು ಅನ್ನಿಸುವ ಈ ಕಲಾಕೃತಿಯನ್ನು ಹಲವು ನಿಮಿಷಗಳಲ್ಲಿ ಮಾಡಿ ನಿಮ್ಮ ಮುಂದಿಡುವ ಕುಶಲತೆಯನ್ನು ಈ ವಾಡಾಗಳು ಹೊಂದಿದ್ದಾರೆ.

ನಿರುನಾದಲ್ಲಿ ಈ ಅರಗಿನ ಕೆಲಸ ಮಾಡುವ ವಾಡಾಗಳ ಸಂಸಾರಗಳ ಸಂಖ್ಯೆ ೧೦, ಅವರುಗಳಲ್ಲಿ ನಾಲ್ಕು ಮನೆಗಳು ಅರಗಿನ ಕಲೆಯ ವ್ಯಾಪಾರ ಮಾಡುತ್ತಿದ್ದಾರೆ. ಎಲ್ಲಾದರೂ ಕಛ್ ಕಲೆಗಳ ಪ್ರದರ್ಶನವಾದರೆ ಈ ಅರಗಿನ ಕಲಾಕೃತಿಗಳನ್ನು ಒಯ್ದು ಮಾರಾಟ ಮಾಡಿಬರುತ್ತಾರೆ. ನಿರುನಾಗೆ ಬರುವ ಒಂದೋ ಎರಡೋ ಪ್ರವಾಸಿಗಳಿಗೆ ಮಾರುತ್ತಾರೆ. ಈ ಕಲೆಯ ವಸ್ತುಗಳನ್ನು ಜೋಪಾನವಾಗಿಡುವುದೂ ಕಷ್ಟವೇ. ಏನಾದರೂ ತಗುಲಿ ಗೆರೆ ಬಿದ್ದಲ್ಲಿ ಡಿಸೈನನ್ನು ಸರಿಮಾಡಲಾಗುವುದಿಲ್ಲ. ಅಷ್ಟೇ ಅಲ್ಲ, ಅದು ಹಳೆತಾದಂತೆ ಕಂಡು ಅದಕ್ಕೆ ಯಾವ ಬೆಲೆಯೂ ಗಿಟ್ಟುವುದಿಲ್ಲ. ಮೇಲಾಗಿ ಈ ಲಟ್ಟಣಿಗೆ - ಮರದ ಚಮಚಾಗಳನ್ನು ದಿನನಿತ್ಯದ ಉಪಯೋಗಕ್ಕೆ ಹಾಕಿಕೊಳ್ಳಬಹುದಾದರೂ, ಅದನ್ನು ಕೊಂಡವರು ಅದರ ಮೇಲಿರುವ ಚಿತ್ತಾರದಿಂದಾಗಿ ಹೆಚ್ಚಾಗಿ ಅವುಗಳನ್ನು ಪ್ರದರ್ಶಿಸುವುದೇ ಹೆಚ್ಚು.

ವಾಡಾಗಳ ಜೊತೆ ಕೆಲಸ ಮಾಡಬೇಕೆಂದು ಹೊರಟರೆ ಯಾವರೀತಿಯಿಂದಾಗಿ ಅವರಿಗೆ ಸಹಾಯ ಮಾಡಬಹುದು? ಈ ದಿನದ ತಂತ್ರಜ್ಞಾನದ ಸಹಾಯದಿಂದಾಗಿ ಅವರ ಆರ್ಥಿಕ ಪರಿಸ್ಥಿತಿಯನ್ನಾಗಲೀ ಸಾಮಾಜಿಕ ಸ್ಥಿತಿಯನ್ನಾಗಲೀ ಉತ್ತಮಗೊಳಿಸುವುದು ಸಾಧ್ಯವೇ? ಸಾಧುವೇ? ಈ ಪ್ರಶ್ನೆಗಳನ್ನು ಸ್ವಯಂಸೇವಾ ಸಂಸ್ಥೆಗಳು ಎದುರಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಅವರಿಗೆ ಬೇಡದ ’ವಿಕಾಸ’ ಉತ್ತಮಿಕೆಯನ್ನು ಅವರ ಮೇಲೆ ಹೇರುವುದು ಎಷ್ಟು ಸಮಂಜಸ - ಹೊರಗಿನ ಸಂಸ್ಥೆ/ವ್ಯಕ್ತಿಗಳು ಅವರ ಜೀವನ ಶೈಲಿಯಲ್ಲಿ ಕೈ ಹಾಕುವುದು ಎಷ್ಟು ಸಮಂಜಸ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಲೇ ಇರಬಹುದಾದ ಸಾಧ್ಯತೆಗಲನ್ನು ಪರಿಶೀಲಿಸಬೇಕಾಗುತ್ತದೆ.

ಉದಾಹರಣೆಗೆ ಅಲ್ಲೇ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಯ ಇಂಜಿನಿಯರ್ ಒಬ್ಬ ಅವರುಗಳು ಉಪಯೋಗಿಸುವ ಮರದ ಚೂರುಗಳ ಜಾಗಕ್ಕೆ ಒಂದು ಕೈಯಲ್ಲಿ ನಡೆಸಬಹುದಾದ ಲೇಥ್ ಥರದ ಒಂದು ಚೌಕಟ್ಟನ್ನು ರೂಪಿಸಿದ್ದಾನೆ. ಆ ಚೌಕಟ್ಟನ್ನು ಉಪಯೋಗಿಸಿದರರೆ ಮರದ ಚೂರುಗಳನ್ನು ನೆಲಕ್ಕೆ ಕುಟ್ಟುವ ಹಾಗೂ ಅಂಚುಗಳ ನಡುವೆ ಮರದ ದಿಮ್ಮಿಯನ್ನು ಕೂಡಿಸುವ ಕೆಲಸ ಸರಳವಾಗುತ್ತದೆ. ಒಂದಿಷ್ಟು ಸಮಯ ಉಳಿಯುತ್ತದೆ. ವಾಡಾಗಳ ಕುಶಲತೆ ಅರಗಿನ ಬಣ್ಣ ಲೇಪಿಸುವುದರಲ್ಲಿದ್ದರೆ ಮತ್ತೆ ಈ ಹೆರೆಯುವ, ಕೆರೆಯುವ, ಹ್ಯಾಂಡಲ್ಲನ್ನು ಗುಂಡಾಗಿಸುವ ಕೆಲಸವನ್ನು ಯಂತ್ರದಲ್ಲಿಯೇ ಯಾಕೆ ಮಾಡಬಾರದು ಅನ್ನುವ ಪ್ರಶ್ನೆಯನ್ನೂ ಹೊರಗಿನವರು ಕೇಳಬಹುದು. ಆದರೆ ಅಂಥಹ ಸಲಹೆಯನ್ನು ವಾಡಾಗಳು ಒಪ್ಪಿಲ್ಲವಂತೆ.

ಅವರುಗಳ ಕಲೆಯನ್ನು ಅವರೇ ಗ್ರಹಿಸುವ ರೀತಿಗೂ, ಹೊರಗಿನವರು ಗ್ರಹಿಸುವ ರೀತಿಗೂ ಇರುವ ವ್ಯತ್ಯಾಸದಿಂದಾಗಿ ಹೀಗಾಗುತ್ತದೆಯೇನೋ. ಅವರುಗಳಿಗೆ ಅರಗಿನ ರಂಗನ್ನು ಅಂಟಿಸುವುದು ಎಷ್ಟು ಮುಖ್ಯವಾದ ಕಲೆಗಾರಿಕೆಯೋ, ಇರುವ ಕೊಡಲಿ, ಹಾಗೂ ಚೂಪಾದ ಹೆರೆಯುವ ಯಂತ್ರದಲ್ಲಿ ಅದ್ಭುತವಾದ ನಾಜೂಕುತನವನ್ನು ತರಿಸುವುದೂ ಅಷ್ಟೇ ಕಲೆಗಾರಿಕೆಯ ವಿಷಯ. ಹೊರಗಿನವರಾದ ನಮಗೆ ಯಂತ್ರದಲ್ಲಿ ಆ ಮರವನ್ನು ಆ ಆಕಾರಕ್ಕೆ ತರಲು ಸಾಧ್ಯ ಎನ್ನುವುದು ಗೊತ್ತು. ಆದರೆ ಅದರ ಮೇಲಿನ ಅರಗಿನ ಚಿತ್ತಾರವನ್ನು ನಾವು ಯಂತ್ರದಿಂದ ತರಿಸಲು ಸಾಧ್ಯವಿಲ್ಲ ಅನ್ನುವುದೂ ನಮಗೆ ಮನವರಿಕೆಯಾಗಿದೆ. ಹೀಗಾಗಿ, ಯಂತ್ರದಿಂದಾಗುವ ಕೆಲಸವನ್ನು ಅಲ್ಲಿ ಮಾಡಿಸಿ ಕುಶಲತೆಗೆ ಮಾತ್ರ ವಾಡಾಗಳು ತಮ್ಮ ಸಮಯವನ್ನು ಕಳೆಯಬೇಕೆಂದು ನಮ್ಮಂಥಹ ಹೊರಗಿನವರು ಹೇಳಬಹುದು. ಆದರೆ ಇಲ್ಲಿರುವ ಪ್ರಶ್ನೆ ಅವರು ಮಾರಟ ಮಾಡುವ ವಸ್ತುವಿಗೆ ಸಂಬಂಧಿಸಿದ್ದಲ್ಲ. ಅದು ಅ ವಸ್ತು ತಯಾರಾಗುವ ಪ್ರಕ್ರಿಯೆಗೆ ಸಂಬಂಧಿಸಿದ್ದು. ಇದೇ ವಾದವನ್ನು ನಾವು ಜವಳಿಯ ಕ್ಷೇತ್ರಕ್ಕೆ ಅನ್ವಯಿಸಿದರೆ, ನೇಯ್ಗೆಯನ್ನು ಮಿಲ್ಲಿನಲ್ಲಿ ಮಾಡಿಸಿ, ಅದರ ಮೇಲಿನ ಕಸೂತಿಗೆ ಮಾತ್ರ ಜನರ ಕುಶಲತೆಯನ್ನು ಉಪಯೋಗಿಸಬೇಕು ಎಂದು ವಾದಿಸಿದಂತೆ ಆಗುತ್ತದೆ. ಆದರೂ ನೇಕಾರರಿಗೆ ಕೈಮಗ್ಗ ಕೇವಲ ಬಟ್ಟೆ ನೇಯುವ ರೀತಿ ಮಾತ್ರವಾಗಿರದೇ ಅದು ಜೀವನವನ್ನು ಜೀವಿಸುವ ವಿಧಾನವೇ ಆಗಿದೆ ಅನ್ನುವುದನ್ನು ಮನಗಂಡರೆ, ವಾಡಾಗಳು ಯಂತ್ರದಿಂದ ಮೂರುನಿಮಿಷದಲ್ಲಾಗಬಹುದಾದ ಕೆಲಸಕ್ಕೆ ತಮ್ಮ ಕೈಯಿಂದ ಕೆತ್ತಿ ಅರ್ಧ ಗಂಟೆ ಯಾಕೆ ವ್ಯಯ ಮಾಡುತ್ತಾರೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.

ಅರಗಿನ ರಂಗಿರದ ಮರದ ಕೆತ್ತನೆಯ ಕೆಲಸವನ್ನು ಮಾಡಿ ಕೊಡಿ ಎಂದು ಮಾರುಕಟ್ಟೆಯಲ್ಲಿ ಯಾರೋ ಕೇಳಿದರೆಂದು ಅದನ್ನು ಖುಷಿಯಿಂದ ಮಾಡುವ ಇವರುಗಳು, ಕೆತ್ತನೆಯನ್ನು ಬಿಟ್ಟು ಕೇವಲ ಅರಗಿನ ರಂಗನ್ನು ಹಾಕಿ ಎನ್ನುವುದಕ್ಕೆ ಯಾವರೀತಿಯಲ್ಲಿ ಪ್ರತಿಕ್ರಿಯಿಸಬಹುದು ಅನ್ನುವುದನ್ನು ಊಹಿಸಿಕೊಂಡೇ ಹೊರಗಿನವರು ಅವರಿಗೆ ’ಉತ್ತಮ ಜೀವನ’ದ ಕನಸನ್ನು ’ಮಾರ’ಬೇಕಾಗಿದೆ! ನಮಗೆ ಉತ್ತಮವೆನ್ನಿಸಿದ್ದು ಅವರಿಗೂ ಉತ್ತಮವೆನ್ನಿಸಬೇಕಲ್ಲವೇ!

ಈಗಿರುವ ಅವರ ಕರಕುಶಲ ತಂತ್ರಜ್ಞಾನದಲ್ಲಿ ಕೆಲವು ಮಿತಿಗಳ ಅಂತರ್ಗತವಾಗಿ ಇವರುಗಳು ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುವ ಮರದ ಉದ್ದ ಹೆಚ್ಚಿನಂಶ ಒಂದು-ಒಂದೂವರೆ ಅಡಿಗಿಂತ ಕಡಿಮೆಯಿರುತ್ತದೆ. ಹೆಚ್ಚೆಂದರೆ ಎರಡು ಮೂರು ಅಡಿಯ ದಿಮ್ಮಿಯಲ್ಲಿ ಕೆಲಸ ಮಾಡಿ ಒಂದು ಸ್ಟೂಲಿನ ಕಾಲನ್ನು ಚಿತ್ತಾರಗಳೊಂದಿಗೆ ಅವರು ಮಾಡಿಯಾರು. ಅವರು ಮಾಡುವ ಕೆಲಸ ಹೆಚ್ಚಾಗಿ ಗುಂಡಾಗಿ ಉದ್ದಕ್ಕಿರುತ್ತದೆ. ಈಗ ಅವರನ್ನು ಹೊಸ ಎಥ್ನಿಕ್ ಮನೆಗಳಿಗೆ ಮರದ ಕಂಬಗಳನ್ನು ರೂಪಿಸುವ ಕೆಲಸವನ್ನು ಮಾಡಲು ಒಂದು ಸ್ವಯಂ ಸೇವಾ ಸಂಸ್ಥೆ ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಅವರ ಮಾರುಕಟ್ಟೆ ಉತ್ತಮವಾಗಿ ಅರ್ಥಿಕತೆಯೂ ಉತ್ತಮಗೊಂಡೀತು ಅನ್ನುವುದು ಆ ಸಂಸ್ಥೆಯ ನಂಬುಗೆ. ಆದರೆ ಇದಕ್ಕೆ ವಾಡಾಗಳು ತಮ್ಮ ಕೈಕೆಲಸವನ್ನು ಬಿಟ್ಟು ದೊಡ್ಡ ದಿಮ್ಮಿಗಳನ್ನು ಲೇಥಿನ ಮೂಲಕ ಒಂದು ರೂಪಕ್ಕೆ ಹೆರೆಯಬೇಕು, ಆ ನಂತರ ಲೇಥ್ ನಡೆವ ವೇಗದ ಗತಿಯಲ್ಲಿ ಅರಗಿನ ಬಣ್ಣಗಳನ್ನು ಲೇಪಿಸಬೇಕು. ಇದಕ್ಕೆ ಹೊಸ ಅಭ್ಯಾಸ ಬೇಕಾಗುತ್ತದೆ. ವಾಡಾಗಳು ಈ ತಂತ್ರವನ್ನು ಕಲಿಯಲು ರಾಜಿಯಾಗುತ್ತಾರೆಯೇ? ಈ ತಂತ್ರವನ್ನು ಕಲಿತರೆ ಅವರ ಮಾರುಕಟ್ಟೆ ಉತ್ತಮವಾಗುವುದೇ? ಅಕಸ್ಮಾತ್ ಈ ತಂತ್ರಕ್ಕೆ ಶಾಶ್ವತವಾದ ಮಾರುಕಟ್ಟೆಯಿಲ್ಲವೆಂದಾದರೆ ಅವರುಗಳು ಕರಕುಶಲ ಮರದ ಕೆಲಸಕ್ಕೆ ವಾಪಸ್ಸಾಗಲು ತಯಾರಿರುತ್ತಾರೆಯೇ? ಹೊರಗಿನವರಾದ ನಾವುಗಳು ಇದನ್ನೆಲ್ಲಾ ಯೋಚಿಸಿಯೇ ಹೆಜ್ಜೆ ಮುಂದಿಡಬೇಕಾಗುತ್ತದೆ.

ಮಿಕ್ಕವರ ಜೀವನವನ್ನು ’ಉತ್ತಮ’ಗೊಳಿಸುವ ಕೆಲಸ ಸರಳವಾದದ್ದೇನೂ ಅಲ್ಲ!!




Tuesday, August 25, 2009

ರೋಗನ್ ಕಲೆ, ಎಷ್ಟು ಬೆಲೆ?

ಗುಜರಾತಿನ ಕಛ್ ಪ್ರಾಂತದಲ್ಲಿ ಆದ ೨೦೦೧ರ ಭೂಕಂಪದ ಕಂಪನಗಳು ಈಗ್ಗೆ ಕಡಿಮೆಯಾಗುತ್ತಾ ಬಂದಿದೆಯೇನೋ. ಭೂಕಂಪವಾದ ನಂತರ ವಿಶ್ವದ ವಿವಿಧೆಡೆಗಳಿಂದ ಕಛ್ ಪ್ರಾಂತಕ್ಕೆ ಅನೇಕ ರೀತಿಯ ಅನುದಾನಗಳು ಬಂದುವು. ನಾನಾ ರೀತಿಯ ಸಂಸ್ಥೆಗಳು ಭೂಕಂಪದ ತಕ್ಷಣದ ದಿನಗಳಲ್ಲಿ ಆ ಜಿಲ್ಲೆಗೆ ಬಂದು ಗ್ರಾಮಗಳನ್ನು ದತ್ತು ತೆಗೆದು ಆ ಪ್ರಾಂತದ ಪುನರ್ನಿರ್ಮಾಣಕ್ಕೆ ಕೈಕೈ ಕೂಡಿಸಿದುವು. ಆದರೆ ಎಂಟು ವರ್ಷಗಳ ನಂತರ ಆ ಪ್ರಾಂತದ ಜನ ಹೇಗೆ ಜೀವಿಸುತ್ತಿದ್ದಾರೆ? ಭೂಕಂಪದಿಂದ ತತ್ತರಿಸಿದ ಹಲವು ಸಮುದಾಯಗಳು ಈಗ ಜೀವನ ಹೇಗೆ ನಡೆಸುತ್ತಿವೆ? ಈ ಎಲ್ಲ ಸಹಾಯ ಮತ್ತು ಒಳ್ಳೆಯತನದ ಫಲಿತವಾಗಿ ಏನಾದರೂ ಆಗಿದೆಯೇ ಅನ್ನುವುದು ಕುತೂಹಲದ ಮಾತು.

ಕಛ್ ಜಿಲ್ಲೆಯ, ನಕತ್ರಾಣ ತಾಲೂಕಿನ ನಿರೋನಾ ಗ್ರಾಮದಲ್ಲಿ ಒಂದೇ ಕುಟುಂಬ ’ರೋಗನ್’ ಅನ್ನುವ ಕಲಾಪ್ರಕಾರವನ್ನು ಅಭ್ಯಸಿಸುತ್ತಾ ಬಂದಿದೆ. ರೋಗನ್ ಕಲೆ ಅಪರೂಪದ್ದು, ಹಾಗೂ ಭೂಕಂಪ ಆಗದಿದ್ದರೆ ಬಹುಶಃ ಅದು ನಮಗೆ ದೃಷ್ಟಿಗೆ ಬೀಳುತ್ತಿರಲಿಲ್ಲವೇನೋ. ಮೊದಲಿಗೆ ಹರಳೆಣ್ಣೆಗೆ ಹಲವು ಸಹಜ-ಶಿಲಾವರ್ಣವನ್ನು ಸೇರಿಸಿ ಎರಡುದಿನಗಳ ಕಾಲ ಭಿನ್ನ ಭಿನ್ನ ರೀತಿಯಲ್ಲಿ ಕುದಿಸಿ ಬಣ್ಣದ ದಪ್ಪ ಲೋಳೆಯನ್ನು ತಯಾರಿಸಬೇಕು. ಆ ಲೋಳೆಯನ್ನು ಅಂಗೈಯಲ್ಲಿ ಬಳಿದು ಆ ಬೊಟ್ಟಿನಿಂದ ಒಂದು ಸ್ಟೀಲಿನ ಕಡ್ಡಿಯಲ್ಲಿ - ಒಂದು ತುಂಡು ಬಟ್ಟೆಯ ಮೇಲೆ - ಒಂದು ಬದಿಗೆ ಮಾತ್ರ ಅದ್ಭುತ ಚಿತ್ರ ಬರುವಂತೆ ಕುಸುರಿಕಲೆ ಮಾಡಬೇಕು. ನಂತರ ಆ ಬಟ್ಟೆಯನ್ನು ಅರ್ಧಕ್ಕೆ ಮಡಚಿ ಎದುರಿನ ಬದಿಗೂ ಇದೇ ಕುಸುರಿ ಕಲೆಯ ನಕಲು ಬರುವಂತೆ ಮಾಡಬೇಕು. ನಾಲ್ಕಾರು ಘಂಟೆ ಬಿಸಿಲಲ್ಲಿ ಒಣಗಿಸಿದಾಗ ಒಂದು ಘಟ್ಟದ ಕೆಲಸ ಮುಗಿಯುತ್ತದೆ. ಈ ಅದ್ಭುತ ಕಲೆಯನ್ನು ಖತ್ರಿ-ದೌಡ್ ಸಂಸಾರದವರು [ಅಬ್ದುಲ್ ಗಫೂರ್, ಆರಬ್ ಹಾಶಮ್, ಸುಮರ್] ಮುಂದುವರೆಸುತ್ತಾ ಬಂದಿದ್ದಾರೆ.

ಇದರಲ್ಲಿ ಇರುವ ಕ್ಲಿಷ್ಟತೆ ನಮಗೆ ಅರ್ಥವಾಗುವುದು ಅಲ್ಲಿರುವ ಕಲೆಯ ವಿವರಗಳನ್ನು ಹಾಗೂ ಅವುಗಳ ವರ್ಣಗಳನ್ನು ಗಮನಿಸುವುದರಿಂದ. ಒಂದು ಬಾರಿಗೆ ಒಂದೇ ವರ್ಣವನ್ನು ಲೇಪಿಸಬೇಕು. ಅದು ಒಣಗಿದ ನಂತರ ಎರಡನೆಯ ವರ್ಣ. ಹಾಗೂ ಎರಡು ಬಾರಿಯೂ ಬಟ್ಟೆ ಮಡಚುವಾಗ ಏರುಪೇರಾಗದಂತೆ ಮಡಚಬೇಕು. ಎರಡು ವರ್ಣಗಳನ್ನು ತುಂಬಿದ ನಂತರ ಈ ಮಡಚುವ ಪ್ರಕ್ರಿಯೆ ಕಷ್ಟದ್ದಾಗುತ್ತದಾದ್ದರಿಂದ, ಮಿಕ್ಕ ವರ್ಣಗಳನ್ನೂ ವಿವರಗಳನ್ನೂ ನೇರವಾಗಿ ತುಂಬಿ ಒಣಗಿಸಬೇಕು. ಇಂಥದೊಂದು ಕಲಾಕೃತಿಯನ್ನು ತಯಾರಿಸಲು ನಾಲ್ಕು ದಿನಗಳಿಂದ ಹಲವು ತಿಂಗಳುಗಳ ವರೆಗಿನ ಕಾಲ ಹಿಡಿಯಬಹುದು!

ಭೂಕಂಪಕ್ಕೆ ಮುನ್ನವೂ ಬಹುಶಃ ಖತ್ರಿ-ದೌಡ್ ಸಂಸಾರ ಈ ಕಲೆಯನ್ನೇ ಆಧಾರವಾಗಿರಿಸಿಕೊಂಡು ಜೀವಿಸಿರಬೇಕು. ಅಬ್ದುಲ್ ಗಫೂರ್‌ಗೆ ೧೯೯೭ರಲ್ಲಿ ರಾಷ್ಟ್ರೀಯ ಪುರಸ್ಕಾರ ಬಂದಿತ್ತು. ಅರಬ್ ಹಾಶಮ್‍ಗೆ ಇನ್ನೂಮೊದಲು ೧೯೯೧ರಲ್ಲಿ ರಾಜ್ಯಪ್ರಶಸ್ತಿ ಬಂದಿತ್ತು. ಸುಮರ್ ದೌಡ್‌ಗೆ ಮಾತ್ರ ಭೂಕಂಪದ ನಂತರ ೨೦೦೩ರಲ್ಲಿ ರಾಜ್ಯ ಪ್ರಶಸ್ತಿ ಬಂದಿದೆ. ಮೂರೂ ಜನರನ್ನು ಸರಕಾರ ಹಾಗೂ ಮಾರುಕಟ್ಟೆ ಗುರುತಿಸಿದೆ. ಇದು ಸಾಲದ್ದಕ್ಕೆ ಈ ಕಲೆ ನಿರ್ನಾಮವಾಗಬಾರದೆಂದು ಬಯಸುವ ಹಿತೈಷಿಗಳು ರೋಗನ್ ಕಲಾಕೃತಿಗಳನ್ನು ಕೊಂಡು ಅದಕ್ಕೆ ಮಾರುಕಟ್ಟೆಯನ್ನೊದಗಿಸುತ್ತಾ ಬಂದಿದ್ದಾರೆ.

ಈ ರೀತಿಯ ಕಲಾವಿದರಿಗೆ ಹೊರಗಿನ ಸಹಾಯ - ಆ ಕಲೆ ಅಳಿಯದಂತೆ ಉಳಿಸುವ ಕೆಲಸವನ್ನು ಯಾವರೀತಿಯಲ್ಲಿ ಮಾಡಬಹುದು? ಮಿಕ್ಕೆಲ್ಲ ರೀತಿಯ ವಿಕಾಸ ಕಾರ್ಯದಲ್ಲಿ ಉತ್ತಮ ತಂತ್ರಜ್ಞಾನವನ್ನು ಉತ್ತಮ ಡಿಸೈನುಗಳನ್ನು ಅಳವಡಿಸಿ ಅವುಗಳನ್ನು ಆಧುನಿಕಗೊಳಿಸಬಹುದು. ಆದರೆ ಒಂದು ಕಲಾಪ್ರಕಾರವನ್ನು ಆಧುನಿಕಗೊಳಿಸಲು ಸಾಧ್ಯವೇ? ಈ ಪ್ರಶ್ನೆ ಎದ್ದಾಗ ಹೊರಗಿನಿಂದ ಆಗಬಹುದಾದ ಸಹಾಯ ಒಂದೇ - ಈ ಇಂಥ ಕಲೆಗೆ ಒಂದು ಮಾರುಕಟ್ಟೆ ಮತ್ತು ಅದರದೇ ವ್ಯಕ್ತಿತ್ವ ಮತ್ತು ಪ್ರತ್ಯೇಕತೆಯನ್ನು ಗುರುತಿಸಬಲ್ಲ ಸ್ಥಾನಮಾನಗಳನ್ನು ಒದಗಿಸುವುದರಿಂದ ಮಾತ್ರ ಒಂದು ರೀತಿಯ ಸಹಾಯ ಮಾಡಬಹುದು. ಕಛ್‍ನಲ್ಲಿ ಆಗಿರುವುದೂ ಅದೇ. ರೋಗನ್ ಕಲೆಗೆ ಒಂದು ಖ್ಯಾತಿ ಭೂಕಂಪದ ನಂತರ ಬಂದಿದೆ. ಅಲ್ಲಿಗೆ ಬಂದಿರುವ ಅನೇಕ ಸಂಸ್ಥೆಗಳು, ಹಾಗೂ ಅನೇಕ ವಿದೇಶೀ ಪ್ರವಾಸಿಗಳ ಆಗಮನದ ಫಲವಾಗಿ ಖತ್ರಿ-ದೌಡ್ ಸಂಸಾರಕ್ಕೆ ಒಳ್ಳೆಯ ಮಾರುಕಟ್ಟೆ ದೊರೆತಿದೆ. ಈಚೆಗೆ ಇಫ್ಕೋ ಸಂಸ್ಥೆ ವರ್ಷಕ್ಕೆ ಇಂತಿಷ್ಟು ಕಲಾಕೃತಿಗಳನ್ನು ಕೊಳ್ಳುವ ಭರವಸೆ ನೀಡಿದೆಯಂತೆ. ಹೀಗಾಗಿ ಈ ಕಲೆಯನ್ನು ನಶಿಸುವುದರಿಂದ ಬಚಾವು ಮಾಡುವುದರಲ್ಲಿ, ಇದಕ್ಕೆ ಒಂದು ವ್ಯಕ್ತಿತ್ವವನ್ನು ನೀಡುವುದರಲ್ಲಿ ಭೂಕಂಪದ್ದೂ ಒಂದು ಪಾತ್ರವಿದೆ!

ಆದರೆ ಭೂಕಂಪದ ನಂತರದ ಅನುಕಂಪ ಮತ್ತು ’ಸಹಾಯ’ ಎಷ್ಟುದಿನಗಳ ಕಾಲ ಉಳಿಯುವುದು ಅನ್ನುವುದು ಯೋಚಿಸಬೇಕಾದ ಮಾತು. ಹಾಗೆ ನೋಡಿದರೆ ೨೦೦೧ರ ನಂತರದ ಕಛ್‍ನ ಅರ್ಥವ್ಯವಸ್ಥೆ ’ನಿಜ’ವಾದ ಅರ್ಥವ್ಯವಸ್ಥೆಯೇ ಅಲ್ಲ. ಕಛ್ ಪ್ರಾಂತ ಕಲೆಗಾರಿಕೆಗೆ ಪ್ರಖ್ಯಾತಿಯನ್ನು ಪಡೆದಿತ್ತು. ಅಲ್ಲಿ ಮನೆ ಕಟ್ಟಿದರೆ ಗೋಡೆಯ ಮೇಲೆ ಕುಸುರಿ ಕೆಲಸ, ದೇವಸ್ಥಾನಗಳ ಮೇಲೆ ಎಲ್ಲಿಗಿಂತಲೂ ಹೆಚ್ಚು ರಂಗು, ಬಟ್ಟೆಗಳ ಬಣ್ಣಗಳೂ ಭವ್ಯವಾದವೇ, ಕಡೆಗೆ ಒಂದು ಕುರ್ಚಿ ಮೇಜನ್ನು ಮಾಡಿದರೂ ಅದರ ಮೇಲೆ ನಾಲ್ಕಾರು ಚಿತ್ತಾರಗಳು. ಹೀಗಾಗಿ ಭೂಕಂಪದ ನಂತರ ಆ ಪ್ರಾಂತದ ಪುನರ್ನಿಮಾಣಕ್ಕಾಗಿ ಬಂದವರೆಲ್ಲಾ, ಅಲ್ಲಿಯ ಕಲೆಗೆ ಒಂದು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ನಿಸಿದವರೇ. ಒಳ್ಳೆಯ-ಕೆಟ್ಟ ಸಾಧಾರಣ ಅನ್ನುವ ಪ್ರಮೇಯವಿಲ್ಲದೆಯೇ ಎಲ್ಲ ಕಲಾಪ್ರಕಾರಗಳಿಗೂ ಇದ್ದಕ್ಕಿದ್ದಂತೆ ಒಂದು ಮಾರುಕಟ್ಟೆ ಉದ್ಭವವಾಯಿತು. ಈಗ ಎಂಟು ವರ್ಷಗಳ ನಂತರ, ಪುನರ್ನಿರ್ಮಾಣಕ್ಕಾಗಿ ಬಂದ್ದಿದ ಎಲ್ಲ ಸಹಾಯಕ ಸಂಸ್ಥೆಗಳೂ [ಏಡ್ ಏಜೆನ್ಸಿ] ಅಲ್ಲಿಂದ ಒಂದೊಂದಾಗಿ, ಕ್ರಮಕ್ರಮೇಣ ಹೊರಬೀಳುವ ಪ್ರಕ್ರಿಯೆಯಲ್ಲಿರುವಾಗ ಈ ಸ್ಥಳೀಯ ಕಲೆಗೆ ಮಾರುಕಟ್ಟೆಯೊಂದಿಗಿದ್ದ ಕೊಂಡಿ ಹೇಗೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

ಖತ್ರಿ-ದೌಡ್ ಸಂಸಾರ ಭೂಕಂಪದ ನಂತರ ತೆರೆದುಕೊಂಡ ಮಾರುಕಟ್ಟೆಯ ಲಾಭವನ್ನು ಪಡೆದಿದ್ದಾರೆ. ಇಂದು ಅವರ ರೋಗನ್ ಕಲಾಕೃತಿಯ ಬೆಲೆ ರೂ.೨,೦೦೦ದಿಂದ ಪ್ರಾರಂಭವಾಗಿ ಎರಡೂವರೆ ಲಕ್ಷದ ವರೆಗೆ ಮುಟ್ಟಿದೆ. ರೋಗನ್ ಕಲೆಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳೂ ಬಂದು ಈಗ ಈ ಸಂಸಾರಕ್ಕೆ ಟೂರಿಸ್ಟ್ ಮಾರುಕಟ್ಟೆ ದೊರೆತಿದೆ. ಈ ಮಾರುಕಟ್ಟೆಯ ಫಲಿತವೂ ಗಮ್ಮತ್ತಿನದ್ದು. ಅವರನ್ನು ನೋಡಲು ನಾನು ನಿರೋನಾಗೆ ಹೋದಾಗ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳನ್ನೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನೂ ತೋರಿಸಿದ ಆ ಸಂಸಾರ, ತಮ್ಮ ಕಲೆಯ ಬಗ್ಗೆಗೂ ಮಾತನಾಡಿತು. ಆದರೆ ೨೦೦೫ರಲ್ಲಿ ಬಂದ ಒಂದು ಇಂಡಿಯಾ ಟುಡೇ ಲೇಖನದಲ್ಲಿ ಅವರ ಕೈಯಿಂದ ಒಂದು ತಿದ್ದುಪಡಿ ಕಂಡಿತ್ತು - ಲೇಖನದ ಒಂದು ಭಾಗ ಇಂತಿದೆ:

"ಹೂವಿನ ಚಿತ್ತಾರಗಳು, ಪ್ರಾಣಿಗಳು ಹಾಗೂ ಹಳೆಯ ಶಾಸ್ತ್ರೀಯ ಕಟ್ಟಡಗಳು ಈ ಕಲಾವಿದರ ಪ್ರಮುಖ ಆಸಕ್ತಿಯ ಪ್ರತೀಕಗಳು. ಒಂದು ಚಿತ್ರ ಮುಗಿಸಲು ಮೂರು ತಿಂಗಳ ಕಾಲವೂ ಹಿಡಿಯಬಹುದು. ರೋಗನ್ ಕಲೆಯ ಚಿತ್ರಕ್ಕೆ ರೂ.೮,೦೦೦ದಿಂದ ರೂ.೧೨,೦೦೦ರದ ವರೆಗೆ ಬೆಲೆ ಬರಬಹುದು. ಇತ್ತೀಚೆಗೆ ಮಾರಾಟವಾದ ’ಜೀವನ ವೃಕ್ಷ’ಕ್ಕೆ ರೂ.೧೮,೦೦೦ರದ ಬೆಲೆ ಬಂತು."

ಲೇಖನವೇನೋ ಚೆನ್ನಾಗಿಯೇ ಇತ್ತು. ಆದರೆ ಖತ್ರಿ-ದೌಡ್ ಸಂಸಾರದಲ್ಲಿ ಇದ್ದ ಇಂಡಿಯಾ ಟುಡೇದ ಪ್ರತಿಯಲ್ಲಿ ೧೮,೦೦೦ ವನ್ನು ಪೂರ್ತಿಯಾಗಿ ಕರ್ರಗಾಗಿಸಿ ಆ ಜಾಗದಲ್ಲಿ ರೂ.೧,೫೦,೦೦೦ ಎಂದು ಕೈಯಲ್ಲಿ ಬರೆಯಲಾಗಿತ್ತು. ಹೆಚ್ಚು ಹೆಚ್ಚು ಗ್ರಾಹಕರು ಬರುತ್ತಿದ್ದಂತೆ ಈ ಅಪರೂಪದ ಕಲೆಯ ಜಟಿಲತೆಯೂ ಹೆಚ್ಚಾಗುತ್ತಾ ಹೋಗಿರಬಹುದು ಅದಕ್ಕೆ ಮಾರುಕಟ್ಟೆಯೂ ಜಾಸ್ತಿಯಾಗುತ್ತಾ ಹೋಗಿರಬಹುದು. ಆದರೆ ಕೆಲಸ ಮಾಡುತ್ತಿರುವವರು ಈ ಖತ್ರಿ-ದೌಡ್ ಸಂಸಾರದವರು ಮಾತ್ರ. ಪುನರ್ನಿರ್ಮಾಣದ ಫಲಿತ ಇಲ್ಲಿನ ಜನರಿಗೆ ತಲುಪಿದೆಯೇ ಅನ್ನುವ ಪ್ರಶ್ನೆಗೆ ಇದು ಒಂದು ಒಳ್ಳೆಯ ಉದಾಹರಣೆ ಅನ್ನಬಹುದು.

ಆದರೆ ನನ್ನ ಯೋಚನೆ ಇಷ್ಟೇ. ಈ ಎಂಟು ವರ್ಷಗಳಲ್ಲಿ ಇದ್ದ ಸಹಾಯಕ ಸಂಸ್ಥೆಗಳು ಇಲ್ಲಿಂದ ಹೊರಟ ಮೇಲೆ, ಪ್ರವಾಸಿಗಳ ಸಂಖ್ಯೆ ಕಡಿಮೆಯಾದ ಮೇಲೆ, ಇನ್ನೈದು ವರ್ಷಗಳ ನಂತರ ಖತ್ರಿ-ದೌಡ್ ಸಂಸಾರದ ಕೆಲಸಕ್ಕೆ ಇಷ್ಟೇ ಬೆಲೆ ದಕ್ಕಬಹುದೇ? ಅದೇ ರೀತಿಯ ಬೆಲೆ ದಕ್ಕುವುದಾದರೆ ಹೆಚ್ಚು ಜನ ಈ ರೋಗನ್ ಕಲೆಯನ್ನು ಅಭ್ಯಾಸ ಮಾಡಬಹುದೇ? ಅಥವಾ ಮಾರುಕಟ್ಟೆ ಕುಸಿದು ಈ ಕಲೆ ಕ್ಷೀಣಿಸಬಹುದೇ? ಇನ್ನೂ ಹೊರಗಿನವರ ಆಸಕ್ತಿಯಿರುವ ಈ ಸಮಯದಲ್ಲಿ ಇದಕ್ಕೆ ಸುಲಭ ಉತ್ತರವಿಲ್ಲ. ಆದರೆ ಪುನರ್ನಿರ್ಮಣದ ಅತಿವೃಷ್ಟಿಯನಂತರ ಕಛ್ ಈಗ ಸಮಾನ್ಯ ಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ರೋಗನ್ ಕಲೆಯ ಭವಿಷ್ಯ ಹಾಗೂ ಖತ್ರಿ-ದೌಡ್ ಸಂಸಾರದ ಕಲಾನೈಪುಣ್ಯ ಮತ್ತು ಅದರಿಂದ ಬರುತ್ತಿರುವ ಹಣದ ಪರಿಮಾಣವನ್ನು ನಾವು ಒಂದೈದು ವರ್ಷಗಳ ನಂತರ ಅಧ್ಯಯನ ಮಾಡಿದಾಗ ಈ ಅತಿವೃಷ್ಟಿಯ ಪೂರ್ಣ ಪರಿಣಾಮ ನಮಗೆ ಅರ್ಥವಾಗಬಹುದು.



Tuesday, August 11, 2009

ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ


ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.

ಮೂಲತಃ ದೀಪ್ ನಡೆಸಿದ್ದ ಪ್ರದಾನ್ [Professional Assistance for Development Action] ಅನ್ನುವ ಸಂಸ್ಥೆಯ ಮೂಲಸೆಲೆ ಹುಟ್ಟಿದ್ದು ವಿಜಯ್ ಮಹಾಜನ್ ಅವರ ಮನಮಸ್ತಕದಲ್ಲಿ. ವಿಜಯ್ ಐಐಎಂ, ಅಹಮದಾಬಾದಿನಲ್ಲಿ ಓದುತ್ತಿದ್ದ ಕಾಲದಲ್ಲಿ ಅಲ್ಲಿನ ಮೊದಲ ನಿರ್ದೇಶಕರಾಗಿದ್ದ ರವಿ ಮಥಾಯಿಯಿಂದ ಬಹಳವೇ ಪ್ರಭಾವಿತರಗಿದ್ದರು. ರವಿ ತಮ್ಮ ೩೮ನೇ ವಯಸ್ಸಿನಲ್ಲಿ ಐಐಎಂನ ಪ್ರಥಮ ಪೂರ್ಣಾವಧಿ ನಿರ್ದೇಶಕರಾಗಿ ನಿಯಮಿತಗೊಂಡರು. ೪೫ನೇ ವಯಸ್ಸಿಗೆ ಆತ ಆ ಪದವಿಯನ್ನು ತ್ಯಜಿಸಿ ಸಾಧಾರಣ ಪ್ರೊಫೆಸರ್ ಆಗಿ ಅಲ್ಲಿ ಮುಂದುವರೆದರು. ಆಗ ಅವರು ರಾಜಾಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತೊಗಲು ಕಾರ್ಮಿಕರನ್ನು ಒಟ್ಟುಗೂಡಿಸಿ ಅವರ ಉತ್ಪತ್ತಿಗೆ ಮಾರುಕಟ್ಟೆಯನ್ನು ಹುಡುಕಿಕೊಡುವ - ಆಕ್ಷಣ್ ರಿಸರ್ಚ್ ಮಾಡುತ್ತಿದ್ದರು. ವಿಜಯ್ ರವಿಯ ವಿಕಾಸದ ಕೆಲಸದಿಂದಲೂ, ಹಾಗೂ ಅವರು ತಮ್ಮ ಪದವಿಯನ್ನು ಕಿರಿವಯಸ್ಸಿನಲ್ಲಿಯೇ ಕೈಬಿಟ್ಟು ಬೇರೆ ಅರ್ಥಗಭಿತ ಕೆಲಸವನ್ನು ಹುಡುಕಿ ಹೊರಟಿದ್ದನ್ನೂ ಕಂಡು ಪ್ರಭಾವಿತರಾದರು. ಹೀಗಾಗಿ ಐಐಎಂನಿಂದ ಪಾಸಾದ ಕೂಡಲೇ ವಿಜಯ್ ಯಾವುದೇ ಕಾರ್ಪೊರೇಟ್ ಕೆಲಸವನ್ನು ಹುಡುಕದೇ ಸೀದಾ ಬಿಹಾರಕ್ಕೆ ಒಂದು ಸ್ವಯಂ ಸೇವಾಸಂಸ್ಥೆಯ ಜೊತೆ ಕೆಲಸ ಮಾಡಲು ಹೊರಟರು.

ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಕೆಲಸ ಮಾಡಿದ ವಿಜಯ್‌ಗೆ ತಿಳಿದ ಮೊದಲ ವಿಚಾರವೆಂದರೆ, ಈ ಥರದ ಸಂಸ್ಥೆಗಳಲ್ಲಿ ಒಳಿತು ಮಾಡಬೇಕೆಂಬ ತೀವ್ರ ಬಯಕೆಯಿರುವ ಹೃದಯವಂತರಿರುತ್ತಾರೆ. ಆದರೆ ಅವರುಗಳಿದೆ ಆಧುನಿಕ ನಿರ್ವಹಣಾ ತಂತ್ರಗಳ ಪರಿಚಯವಿರುವುದಿಲ್ಲವಾದ್ದರಿಂದ, ಅವರುಗಳ ಕೆಲಸ ಒಂದು ಸೀಮಿತ ಪರಧಿಯಲ್ಲಿದ್ದುಬಿಡುತ್ತದೆ. ಒಂದು ರೀತಿಯಲ್ಲಿ ಒಳಿತುಮಾಡುವ ಸ್ವಯಂಸೇವಾ ಸಂಸ್ಥೆಗಳ ಹೃದಯವಂತಿಕೆಗೂ, ನಿರ್ವಹಣಾತಂತ್ರಗಳನ್ನು ತಿಳಿದ ಐಐಎಂನಂತಹ ’ಬುದ್ಧಿವಂತ’ರ ಪರಿಣಿತಿಗೂ ಬೆಸುಗೆ ಹಾಕಿದರೆ ವಿಕಾಸದ ಪರಿಭಾಷೆಯನ್ನೇ ಬದಲಾಯಿಸಬಹುದೆಂದು ವಿಜಯ್ ನಂಬಿದ್ದರು.

ಹೀಗೆ, ೧೯೮೩ರಲ್ಲಿ ಪ್ರದಾನ್ ವಿಜಯ್ ಮಹಾಜನ್ ಅವರ ನೇತೃತ್ವದಲ್ಲಿ ಜನ್ಮ ತಾಳಿತು. ಆಗಿನ ದಿನಗಳಲ್ಲಿ ವಿಜಯ್ ತಮ್ಮಂತೆಯೇ ಇದ್ದ ಇತರರನ್ನೂ ತಮ್ಮ ಜೊತೆಗೂಡಿಸಿಕೊಂಡರು - ಈಗ ಧಾನ್ ಫೌಂಡೇಷನ್ ನಡೆಸುವ ವಾಸಿಮಲೈ, ಬೆಂಗಳೂರಿನ ವಿದ್ಯಾಪೋಷಕ/ಪ್ರೇರಣಾ ಸಂಸ್ಥೆಯ ಪ್ರಮೋದ್ ಕುಲಕರ್ಣಿ, ಐಐಟಿಯಿಂದ ಆಗಷ್ಟೇ ಹೊರಬಿದ್ದಿದ್ದ ಅಚಿಂತ್ಯ ಘೋಷ್, ಐಐಎಂ ಸಹಪಾಠಿ ವೇದ್ ಆರ್ಯ - ಹೀಗೆ ಈ ಆಲೋಚನಾಲಹರಿಯನ್ನು ಹೊತ್ತ ಜನರ ಒಂದು ಗುಂಪು ಒಂದಾಗಿದ್ದರು. ಈ ಸಂಸ್ಥೆಯ ಮೂಲ ಪ್ರವರ್ತಕರಲ್ಲಿ ಎಲ್ಲರೂ ಸಮಾನರು. ಎರಡೆರಡು ವರ್ಷಗಳ ನಾಯಕತ್ವವನ್ನು ಅವರುಗಳು ನಿರ್ವಹಿಸಿ ಮತ್ತೆ ವಿಕಾಸದ ಕೆಲಸದಲ್ಲಿ ತೊಡಗುವುದು ಎನ್ನುವಂತಹ ಪ್ರಕ್ರಿಯೆಯನ್ನು ಅವರ ನಾಯಕತ್ವದ ಸೂತ್ರದಲ್ಲಿ ಅಳವಡಿಸಲಾಯಿತು. ಆಗ ದೀಪ್ ಜೋಶಿ ಫೋರ್‍ಡ್ ಫೌಂಡೇಷನ್ ಅನ್ನುವ ಅನುದಾನಗಳನ್ನು ನೀಡುವ ಸಂಸ್ಥೆಯಲ್ಲಿ ಪ್ರೋಗ್ರಾಮ್ ಆಫೀಸರ್ ಆಗಿದ್ದರು. ಪ್ರದಾನ್ ತಮ್ಮ ಕೆಲಸಕ್ಕೆ ಅನುದಾನವನ್ನು ಪಡೆಯಲು ಹೋದಾಗ ಈ ವಿಚಾರವನ್ನು ಪ್ರೋತ್ಸಾಹಿಸಿ, ಮೊದಲ ಅನುದಾನ ಬರುವಂತೆ ನೋಡಿದ ಜವಾಬ್ದಾರಿ ದೀಪ್ ಜೋಶಿಯದ್ದಾಗಿತ್ತು. ಆಗಲೇ ದೀಪ್‍ಗೆ ಈ ಕೆಲಸದ ಬಗ್ಗೆ ಎಷ್ಟು ಅದಮ್ಯ ನಂಬಿಕೆ ಉಂಟಾಗಿತ್ತೆಂದರೆ, ಆತ ತನ್ನ ಡಾಲರ್ ಸಂಬಳದ ಕೆಲಸವನ್ನು ಬಿಟ್ಟು ಈ ಗೆಳೆಯರೊಂದಿಗೆ ಸೇರಿಬಿಟ್ಟರು.

ಪ್ರದಾನ್ ಸಂಸ್ಥೆಯ ರಚನಾ ಸೂತ್ರ ಸರಳವಾಗಿತ್ತು. ಐಐಟಿ, ಐಐಎಂ, ಇರ್ಮಾ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಫಾರೆಸ್ಟ್ ಮ್ಯಾನೇಜ್‍ಮೆಂಟ್ ಇತ್ಯಾದಿ ಸಂಸ್ಥೆಗಳಿಂದ ನಿರ್ವಹಣಾಸೂತ್ರಗಳನ್ನು ಕಲಿತ, ತಂತ್ರಜ್ಞಾನದಲ್ಲಿ ತರಬೇತಿಯಿದ್ದ ಯುವಕರನ್ನು ಆಯ್ದು ಒಂದೆಡೆಗೆ ಹಾಕುವುದು. ಈ ಪ್ರದಾನ್ ಗುಂಪು ದೇಶದ ಯಾವುದೇ ಭಾಗದಲ್ಲಿ ಹಂಚಿಹೋಗಿರುವ ವಿಕಾಸದ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತದೆ. ಹೀಗೆ ತಮಗೆ ಆಸಕ್ತಿಯಿರುವ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದ ಈ ಜನ ಎರವಲಿನ ಮೇಲೆ ಹೋಗಿ ಕೆಲಸ ಮಾಡಬಹುದು. ಹಾಗೆ ಕೆಲಸ ಮಾಡಿದ ಸಂಸ್ಥೆ ಅವರಿಗೆ ಒಗ್ಗಿ ಬಂದರೆ, ಅಲ್ಲಿಯೇ ಕೆಲಸಕ್ಕೆ ಖಾಯಂ ಆಗಿ ಸೇರಿಬಿಡಲೂ ಬಹುದು. ಅಕಸ್ಮಾತ್ ಅವರಿಗೆ ಆ ಸಂಸ್ಥೆಗಳು ಒಗ್ಗಲಿಲ್ಲವೆಂದರೆ ಅವರು ಪ್ರದಾನ್‍ಗೆ ವಾಪಸ್ಸಾಗಿ ಮಿಕ್ಕ ಯಾವುದೇ ಸಂಸ್ಥೆಗಳಲ್ಲಿ ಸೇರುವ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಾಗ ಹೃದಯದಿಂದಲೇ ಕೆಲಸ ಸಾಗಿಸುವ ಏಕ್ಟಿವಿಸ್ಟ್ ಸಂಸ್ಥೆಗಳಿಗೂ, ಮಸ್ತಕದಿಂದ ಎಲ್ಲವನ್ನೂ ವಿಶ್ಲೇಷಿಸಿ ಮುಂದುವರೆವ ತಂತ್ರಿಕರಿಗೂ ಒಂದು ಅದ್ಭುತ ಬೆಸುಗೆಯನ್ನು ಹಾಕಿದ ಹಾಗಾಗುತ್ತದೆ. ಅಕಸ್ಮಾತ್ ಈ ಬೆಸುಗೆ ಕುಸಿದರೆ ಆ ವ್ಯಕ್ತಿ ವಿಕಾಸದ ಕ್ಷೇತ್ರವನ್ನು ಬಿಟ್ಟು ಹೊರಹೋಗುವುದಕ್ಕೆ ಬದಲು, ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೂ
ಅಲ್ಲಿ ಇಲ್ಲಿ ಚದುರಿ ಹೋಗಿರುವ ಈ ’ಬುದ್ಧಿವಂತ’ರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಹಾಗೂ ವರುಷಕ್ಕೊಮ್ಮೆ ತಮ್ಮ ಹಿಂದಿನ ವರ್ಷದ ಪುನರಾವಲೋಕನ ಮಾಡಿಕೊಳ್ಳಲೂ ಈ ಸಂಸ್ಥೆ ಅನುವು ಮಾಡಿಕೊಟ್ಟಿತ್ತು. ಈ ದಿನ ನಾವುಗಳು ಹಿಂದಿರುಗಿ ನೋಡಿದಾಗ - ಉತ್ತಮ ವಿಕಾಸ ಶೀಲ ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿರುವ ಅನೇಕರು ಪ್ರದಾನ್‍ನಲ್ಲಿ ತಮ್ಮ ಆರಂಭದ ಜೀವನವನ್ನು ಕಳೆದು ಕಡಿದಾದ ಈ ಕೆಲಸದ ಸೂತ್ರಗಳನ್ನು ಕಂಡುಕೊಂಡವರೇ.

ಈ ಆರಂಭದ ಘಟ್ಟದಲ್ಲಿ ವಿಜಯ್ ಪ್ರದಾನ್ ಸಂಸ್ಥೆಯ ನಾಯಕತ್ವವನ್ನು ನಿರ್ವಹಿಸುತ್ತಿದ್ದರು. ಆದರೆ ವಿಜಯ್ ಮೊದಲೇ ತಮ್ಮ ಎರಡು ವರ್ಷಗಳ ಅವಧಿಯ ನಂತರ ದೀಪ್ ಜೋಶಿಗೆ ನಾಯಕತ್ವವನ್ನು ಹಸ್ತಾಂತರ ಮಾಡುವುದಾಗಿ ಘೋಷಿಸಿದ್ದರು. ವಿಜಯ್ ನಾಯಕತ್ವದಲ್ಲಿ ಪ್ರದಾನ್ ಸಂಸ್ಥೆ ತನ್ನ ಮೂಲ ಸೂತ್ರಗಳಿಗೆ ಬದ್ಧವಾಗಿ ಒಳ್ಳೆಯ ವಿದ್ಯೆ-ಹೃದಯವಂತಿಕೆ ಇದ್ದ ಜನರನ್ನು ಹುಡುಕುವ ಅವರುಗಳನ್ನು ಸ್ವಯಂಸೇವಾ ಸಂಸ್ಥೆಗಳಲ್ಲಿ ಸೇರಿಸುವ ಕೆಲಸವನ್ನು ಮಾಡುತ್ತಿತ್ತು. ದೀಪ್ ಈ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಳ್ಳುವ ವೇಳೆಗೆ ಈ ಸೂತ್ರಗಳನ್ನು ಪ್ರಶ್ನಿಸುವ ಸಮಯ ಬಂದಿತ್ತು. ಹೊರಗಿನ ಜಗತ್ತು ಬದಲಾಗಿದ್ದು - ಐಐಂ-ಐಐಟಿಯಂತಹ ಸಂಸ್ಥೆಗಳಿಂದ ಉತ್ತೀರ್ಣರಾಗುವ ತಂತ್ರಜ್ಞರಿಗೆ ಸಿಗುವ ಸಂಬಳಗಳು ತಾರಕಕ್ಕೇರಿ ಅವರುಗಳು ಇಂಥಹ ಒಂದು ಉದ್ಯೋಗಾವಕಾಶವನ್ನು ಸ್ವೀಕರಿಸುವುದು ಕಡಿಮೆಯಾಗುತ್ತಾ ಹೋಯಿತು. ಪ್ರದಾನ್ ಸಂಸ್ಥೆಗೂ ತನ್ನದೇ ಚಟುವಟಿಕೆಗಳನ್ನು ಮಾಡಬೇಕೆನ್ನುವ - ಒಂದು ಮೂಲ ಸೂತ್ರವನ್ನು ಹಿಡಿದು ಹೊರಡಬೇಕೆನ್ನುವ ತುರ್ತೂ ಉಂಟಾಯಿತು. ಹೀಗಾಗಿ ಪ್ರದಾನ್ ತಾನೇ ಒಂದು ಸ್ವಯಂಸೇವಾ ಸಂಸ್ಥೆಯ - ನೇರವಾಗಿ ಕಾರ್ಯಮಾಡುವ ಸಂಸ್ಥೆಯಾಗಿ ರೂಪುಗೊಂಡಿತು. ಹೀಗೆ ರೂಪುಗೊಂಡ ಮೇಲಿನ ನಂತರದ ನಾಯಕತ್ವವನ್ನು ದೀಪ್, ನೇರವಾಗಿ ಹಾಗೂ ಪರೋಕ್ಷವಾಗಿ ನಿರ್ವಹಿಸಿ ಬಂದರು.

ಪ್ರದಾನ್ ಸಂಸ್ಥೆ ನೇರವಾಗಿ ವಿಕಾಸದ ಕೆಲಸವನ್ನು ಕೈಗೊಂಡಾಗ ಅಳವಡಿಸಿಕೊಂಡ ಕೆಲವು ಸೂತ್ರಗಳನ್ನು ಇಂದಿಗೂ ಪಾಲಿಸುತ್ತಿದೆ. ಮೊದಲನೆಯ ಸೂತ್ರವೆಂದರೆ ಆ ಸಂಸ್ಥೆ ನಡೆಸುವ ಕೆಲಸಗಳಲ್ಲಿ ಸಮೂಹದ ಪಾತ್ರ ಹಿರಿಯದ್ದಾಗಿರುತ್ತದೆ. ಹೀಗಾಗಿಯೇ ಅವರು ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಸ್ವ-ಸಹಾಯ ಗುಂಪುಗಳ ಸೂತ್ರವನ್ನು ಹಿಡಿದು ಹೊರಡುತ್ತಾರೆಯೇ ಹೊರತು - ಅತೀ ಶೀಘ್ರವಾಗಿ ಬೆಳೆಯುವ ಗ್ರಾಮೀಣ್ ಮಾದರಿಯನ್ನು ಹಿಡಿದು ಹೊರಡುವುದಿಲ್ಲ. ದೇಶದ ದೊಡ್ಡ ರಾಜ್ಯಗಳಾದ - ಮಧ್ಯಪ್ರದೇಶ ಝಾರ್‌ಖಂಡ್, ಛತ್ತೀಸ್‌ಘಡ, ಬಿಹಾರ್, ರಾಜಾಸ್ಥಾನ ದಂತಹ ಕಠಿಣ ಪ್ರದೇಶಗಳಲ್ಲಿ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಪ್ರದಾನ್ ತನ್ನ ಕೆಲಸದ ವ್ಯಾಪ್ತಿಯನ್ನು ಹೊತ್ತು ನಡೆದಿದೆ. ಲಘುವಿತ್ತ ಅಲ್ಲದೇ, ಜಲಸಂಪನ್ಮೂಲ, ಸ್ಥಳೀಯ ಜೀವನೋಪಾಧಿಗಳನ್ನು ಪೋಷಿಸುವ ಕೆಲಸವನ್ನು ಪ್ರದಾನ್ ನಡೆಸುತ್ತಾ ಬಂದಿದೆ. ಪ್ರತೀ ಕ್ಷೇತ್ರಕ್ಕೂ ಭಿನ್ನವಾದ ಉಪಾಯ, ಪ್ರತೀ ಸಮಸ್ಯೆಗೂ ಭಿನ್ನವಾದ ಸಮಾಧಾನವಿರುತ್ತದೆನ್ನುವುದನ್ನು ಆ ಸಂಸ್ಥೆ ಗುರುತಿಸಿದೆ. ಹೀಗಾಗಿಯೇ ಬಿಹಾರದ ಗೊಡ್ಡಾದಲ್ಲಿ ಅವರ ಕೆಲಸ ಟಸರ್ ರೇಷ್ಮೆಗೆ ಸಂಬಂಧಿಸಿದ್ದೂ, ಮಧ್ಯಪ್ರದೇಶದ ಸುಖತವಾದಲ್ಲಿ ಕೋಳಿಸಾಕಣೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಿದ್ದನ್ನು ನಾವು ಕಾಣಬಹುದು.

ಉನ್ನತ ವಿದ್ಯಾಸಂಸ್ಥೆಗಳಿಂದ ಉತ್ತೀರ್ಣರಾದ ಯುವಕರನ್ನು ನಿಯಮಿಸುವುದನ್ನು ನಿಲ್ಲಿಸಿದ ಪ್ರದಾನ್ ತನ್ನ ಹೆಸರಿನಲ್ಲಿನ ’ಪ್ರೊಫೆಷನಲ್’ ಅನ್ನುವ ಪದಕ್ಕೆ ಇನ್ನೂ ನ್ಯಾಯ ಒದಗಿಸುತ್ತಿದೆಯೇ? ದೀಪ್ ಜೋಶಿ ನಾಯಕತ್ವದಲ್ಲಿ ನಡೆದ ರೂಪಾಂತರದಲ್ಲಿ ಆತ ಕಂಡುಕೊಂಡದ್ದು ಒಂದು ನಿಜ - ಪ್ರೊಫೆಷನಲ್ ಅಂದ ಕೂಡಲೇ ಅದು ಐಐಟಿ, ಐಐಎಂ ಆಗಿರಬೇಕಿಲ್ಲ. ಅಲ್ಲಿಂದ ಪ್ರಾರಂಭ ಮಾಡಿದರೂ ದೇಶದಲ್ಲಿ ಅನೇಕ ಭಾಗಗಳಲ್ಲಿರುವ ಉತ್ತಮ ಇಂಜಿನಿಯರಿಂಗ್ ಹಾಗೂ ಇತರ ತಂತ್ರಿಕ, ನಿರ್ವಹಣಾ ಸಂಸ್ಥೆಗಳಿವೆ. ಅಲ್ಲಿಂದಲೂ ಜನರನ್ನು ನಿಯಮಿಸಬಹುದು ಅನ್ನುವುದನ್ನು ಆತ ತೋರಿಸಿಕೊಟ್ಟರು. ಪ್ರತೀ ವರ್ಷ ಸುಮಾರು ನೂರಕ್ಕೂ ಹೆಚ್ಚು ಜನರನ್ನು ದೇಶಾದಾದ್ಯಂತ ಹಂಚಿಹೋಗಿರುವ ಕಾಲೇಜುಗಳಿಂದ ಹೆಕ್ಕಿ ಅವರಿಗೆ ಒಂದು ವರುಷದ ’ಅಪ್ರೆಂಟಿಸ್ ಶಿಪ್’ ತರಬೇತಿ ನೀಡಿ ವಿಕಾಸದ ಕೆಲಸಕ್ಕೆ, ಕಡಿದಾದ, ಕಠಿಣವಾದ ಜಾಗದಲ್ಲಿ ಜೀವನ ನಡೆಸಲು - ಹೃದಯವಂತಿಕೆಯನ್ನು ಬೆಳೆಸಿಕೊಳ್ಳಲು ತಯಾರು ಮಾಡುವ ಕೆಲಸವನ್ನು ಪ್ರದಾನ್ ಮಾಡುತ್ತಿದೆ.

ಈ ಅಪ್ರೆಂಟಿಸಿಶಿಪ್ ಕೂಡ ಎಷ್ಟು ಯೋಜನಾಬದ್ಧವಾಗಿದೆಯೆಂದರೆ ತರಬೇತಿಗೇ ಒಂದು ಭಿನ್ನ ಕ್ಯಾಂಪಸ್ಸನ್ನು ಮಧ್ಯಪ್ರದೇಶದ ಗ್ರಾಮಾಂತರ ಇಲಾಖೆಯಲ್ಲಿ ಇಟಾರ್ಸಿ ಬಳಿಯಿರುವ ಕೇಸ್ಲಾ ಗ್ರಾಮದಲ್ಲಿ ಕಟ್ಟಿಸಿದ್ದಾರೆ. ಅಲ್ಲಿನ ತರಬೇತಿಗೆ ಬೇಕಾದ ಓದಿನ ಪರಿಕರಗಳನ್ನು ಪರಿಣಿತರಿಂದ ತಯಾರು ಮಾಡಿಸಿದ್ದಾರೆ. ಒಂದು ರೀತಿಯಲ್ಲಿ ಐ.ಎ.ಎಸ್ ಅಧಿಕಾರಿಗಳಿಗೆ ಮಸೂರಿಯಲ್ಲಿ ನಡೆಯುವ ತರಬೇತಿಯ ರೀತಿಯಲ್ಲಿ ಒಂದು ವರ್ಷದ ತರಬೇತಿಯನ್ನು ಪ್ರದಾನ್ ನೀಡುತ್ತದೆ. ಈ ನೂರೂ ಜನ ಪ್ರದಾನ್ ನಲ್ಲಿ ಕೆಲಸ ಮುಂದುವರೆಸದಿರಬಹುದು. ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ಸೇರಬಹುದು ಅಥವಾ ಎಲ್ಲವನ್ನೂ ಬಿಟ್ಟು ಕಾರ್ಪರೇಟ್ ಜಗತ್ತಿಗೂ ಹೋಗಬಹುದು. ಆದರೆ ಈ ಒಂದು ವರ್ಷದ ಅನುಭವದ ಫಲವಾಗಿ ಅವರ ಮೂಲ ವಿಚಾರಗಳು ವಿಕಾಸರ ಹೃದಯವಂತಿಯತ್ತ ತಿರುಗುವುದರಲ್ಲೆಯೇ ಈ ಕಾರ್ಯಕ್ರಮದ ಸಾಫಲ್ಯತೆಯಿದೆ!

ಹೀಗೆ ಪ್ರದಾನ್‍ಗೆ ಬಂದ ಯುವಕರನ್ನು ಯೋಚಿಸಲು, ಹೊಸ ಯೋಜನೆಗಳನ್ನು, ಸಮಸ್ಯೆಗಳಿಗೆ ಹೊಸ ಸೃಜನಶೀಲ ಸಮಾಧಾನಗಳನ್ನು ಕಂಡುಕೊಳ್ಳಲು ಅದನ್ನು ಕಾರ್ಯರೂಪಕ್ಕಿಳಿಸಲು ಪ್ರದಾನ್ ಪ್ರೋತ್ಸಾಹಿಸಿದೆ. ಈ ಎಲ್ಲದರ ಹಿಂದಿನ ಹಾಗೂ ಈ ಎಲ್ಲ ಭಿನ್ನ ಸೂತ್ರಗಳನ್ನು ಒಂದೆಡೆಗೆ ಜೋಡಿಸುವ ಶಕ್ತಿ ದೀಪ್ ಜೋಶಿ.

ದೀಪ್ ಜೋಶಿಗೆ ಈ ಪ್ರಶಸ್ತಿ ಬಂದದ್ದು ಅವರನ್ನು ಬಲ್ಲವರಿಗೆಲ್ಲ ಸಮಾನ ಖುಷಿಯನ್ನು ನೀಡಿದೆ. ಆ ಸಾಫಲ್ಯತೆ ಅವರಿಗೆ ಸಹಜವಾಗಿಯೇ ಸಲ್ಲಬೇಕಾಗಿದೆ. ಅಭಿನಂದನೆಗಳು.



Sunday, August 2, 2009

ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು

ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?

ಐಟಿಸಿ ಸಂಸ್ಥೆಯ ಈಚಿನ ಖ್ಯಾತಿ ಅವರು ರೈತರಿಗಾಗಿ ನಡೆಸುತ್ತಿರುವ ಈ-ಚೌಪಾಲ್ ಕಾರ್ಯಕ್ರಮದಿಂದಾಗಿ ಹೆಚ್ಚಿದೆ. ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಒಯ್ದು ಅದರಿಂದಾಗಿ ಒಳಿತು ಮಾಡಿರುವುದಕ್ಕಾಗಿ ಈ ಸಂಸ್ಥೆ ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಚೌಪಾಲ್ ನಿಂದಾಗಿ ರೈತರಿಗೆ ಮಂಡಿಗೆ ಹೋಗುವುದಕ್ಕೆ ಮುನ್ನವೇ ಬೆಲೆಯ ಅರಿವಾಗುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸ್ಥಳದಲ್ಲೇ ಲಭ್ಯವಾಗುತ್ತದೆ. ಕೃಷಿಯಿಂದಾಗಿ ಬರುವ ಆದಾಯ ಹೆಚ್ಚುವುದರಲ್ಲೂ, ಖರ್ಚನ್ನು ಕಡಿಮೆ ಮಾಡುವುದರಲ್ಲೂ ಚೌಪಾಲ್ ಸಹಾಯಕವಾಗಿದೆ. ಇದರಿಂದಾಗಿ ರೈತರ ಇಳುವರಿಯನ್ನು ಕೊಳ್ಳುವ ಐಟಿಸಿಗೂ ಒಟ್ಟಾರೆ ಖರ್ಚು ಕಡಿಮೆಯಾಗಿ ಎಲ್ಲರೂ ಗೆಲ್ಲುವ ವಿನ್-ವಿನ್ ಪರಿಸ್ಥಿತಿ ಉಂಟಾಗಿದೆಯಂತೆ. ಹೀಗೆ ಐಟಿಸಿ ಅದ್ಭುತವಾದ ತಂತ್ರಜ್ಞಾನವನ್ನೂ ಲಾಭವನ್ನೂ ಒಳಿತಿಗೆ ಉಪಯೋಗಿಸಿದ ಸಂಸ್ಥೆಯಾಗಿ ಕೊಂಡಾಡಲ್ಪಡುತ್ತದೆ.

ಆದರೆ ಇದರಲ್ಲಿರುವ ವ್ಯಂಗ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಬಾರಿಯ ವಾರ್ಷಿಕ ವರದಿಯಲ್ಲಿ ಐಟಿಸಿಯ ಮುಖ್ಯಸ್ಥ ದೇವೇಶ್ವರ್ ತಮ್ಮ ಭಾಷಣದಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ಮಾತಾಡುತ್ತಾ ಸಂಸ್ಥೆಯ ವಿವಿಧ ವಿಭಾಗಗಳನ್ನು ಕೊಂಡಾಡುತ್ತಾರೆ. ಹಾಗೂ ಜಾಗತಿಕ ಹವಾಮಾನದಲ್ಲಾಗುತ್ತಿರುವ ಏರುಪೇರು ಮತ್ತು ಪರಿಸರದ ಬಗ್ಗೆ ಮಾತನಾಡುತ್ತಾರೆ. ತಾವು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಈ ಮಧ್ಯೆ ನಮ್ಮ ಕಣ್ಣಿಗೆ ಕಾಣದಿರಬಹುದಾದ ವಿವರಗಳು - ತಂಬಾಕು ವ್ಯಾಪಾರದಿಂದ ಕಳೆದ ವರ್ಷದ ವ್ಯಾಪಾರದ ಆಧಾರದ ಮೇಲೆ ಬೆಳೆದ ಮಾರಾಟ ರೂ ೧೩೦೦ ಕೋಟಿ, ಒಟ್ಟಾರೆ ಮಿಕ್ಕ ವ್ಯಾಪಾರಗಳಿಂದ ಹೆಚ್ಚಾದ ಮಾರಾಟ ರೂ.೫೦೦ ಕೋಟಿ. ತಂಬಾಕಿನಿಂದ ಬಂದ ಲಾಭಾಂಶ ಸುಮಾರು ರೂ.೪,೨೦೦ ಕೋಟಿ, ಮಿಕ್ಕೆಲ್ಲ ವ್ಯಾಪಾರಗಳಿಂದ ಬಂದ ಲಾಭಾಂಶ ಸುಮಾರು ರೂ.೪೦೦ ಕೋಟಿ. ಆದರೂ ಒಟ್ಟಾರೆ ಲಾಭಾಂಶದ ೮೯% ತರುವ ತಂಬಾಕಿನ ವ್ಯಾಪಾರದ ಬಗ್ಗೆ ಮುಖ್ಯಸ್ಥರು ಒಂದೂ ಪದವನ್ನು ತಮ್ಮ ಭಾಷಣದಲ್ಲಿ ಆಡುವುದಿಲ್ಲ. ಯಾಕೆಂದರೆ ತಾವು ’ಒಳಿತು’ ಮಾಡಿ ಲಾಭ ಮಾಡುತ್ತಿರುವ ಸಂಸ್ಥೆ ಎಂದು ಹೇಳಿಕೊಳ್ಳುವ, ಅದನ್ನು ಚೌಪಾಲ್ ವ್ಯಾಪಾರಗಳಂತಹ ಪ್ರಯೋಗಗಳಿಂದ ತೋರಿಸಿಕೊಳ್ಳುವ ತುರ್ತು ಇರುವ ಸಂಸ್ಥೆ ಕ್ಯಾನ್ಸರಿನಂತಹ ಭಯಾನಕ ರೋಗವನ್ನುಂಟು ಮಾಡುವ ತಂಬಾಕು ವ್ಯಪಾರವಿರುವಾಗಲೂ ಈ ಸಂಸ್ಥೆ ಮಾಡುತ್ತಿರುವ ಒಳಿತನ್ನು ನಾವು ಹೇಗೆ ಗ್ರಹಿಸಬೇಕು? ತಂಬಾಕಿನ ಲಾಭದಿಂದ ಮಿಕ್ಕ ವ್ಯಾಪಾರಗಳ ಒಳಿತು ನಡೆಯುತ್ತಿದೆ ಅನ್ನಬಹುದೇ?


ಫ್ಯಾಬ್ಇಂಡಿಯಾ ಅನ್ನುವ ಸಂಸ್ಥೆಯನ್ನು ಜಾನ್ ಬಿಸೆಲ್ ೧೯೬೦ನೇ ಇಸವಿಯಲ್ಲಿ ಸ್ಥಾಪಿಸಿದರು. ಜಾನ್ ಬಿಸೆಲ್ ಕೈಮಗ್ಗದ ಮತ್ತು ಗ್ರಾಮೀಣ ಕುಶಲ ಕರ್ಮಿಗಳ ಒಳಿತನ್ನು ಯೋಚಿಸುತ್ತಲೇ ಫ್ಯಾಬ್‍ಇಂಡಿಯಾದ ಮೂಲಕ ವ್ಯಪಾರವನ್ನು ಮಾಡಲು ಹೊರಟವರು. ಹೀಗಾಗಿ ಫ್ಯಾಬ್‍ಇಂಡಿಯಾದ ವ್ಯಾಪಾರಕ್ಕೆ ಒಂದು ರೀತಿಯ ವ್ಯಕ್ತಿತ್ವವನ್ನು ಒದಗಿಸಿದ, ಹಾಗೂ ಆ ಮೂಲಕ ಕುಶಲಕರ್ಮಿಗಳಿಗೆ ಕೆಲಸವನ್ನು ಕಲ್ಪಿಸಿಕೊಟ್ಟ - ಒಳಿತು ಮಾಡುತ್ತಲೇ ಲಾಭವನ್ನೂ ಆರ್ಜಿಸುವ ಕೆಲಸವನ್ನು ಆತ ಪ್ರಾರಂಭಿಸಿದರು.

ಖಾದೀ ಗ್ರಾಮೋದ್ಯೋಗ ಸಂಸ್ಥೆಗಳು, ಸರಕಾರಗಳು ನಡೆಸುವ ಹ್ಯಾಂಡ್‍ಲೂಮ್ ಹೌಸ್, ಕೋ-ಆಪ್ಟೆಕ್ಸ್, ಪ್ರಿಯದರ್ಶಿನಿ, ಆಪ್ಕೋಗಳನ್ನೂ - ಫ್ಯಾಬ್‍ಇಂಡಿಯಾ ಅಂಗಡಿಗಳನ್ನೂ ನೋಡಿದರೆ ಎರಡಕ್ಕೂ ಇರುವ ವ್ಯತ್ಯಾಸ ನಮಗೆ ವೇದ್ಯವಾಗುತ್ತದೆ. ಹೀಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಗ್ರಾಮೀಣ ಕುಶಲ ಕರ್ಮಿಗಳಿಗೆ ಹೆಚ್ಚು ಉಪಾಧಿಯನ್ನು ಕಲ್ಪಿಸುವ ಕೆಲಸವನ್ನು ಫ್ಯಾಬ್‍ಇಂಡಿಯಾ ತನ್ನ ಮಟ್ಟಿಗೆ ತಾನು ಮಾಡುತ್ತಿತ್ತು. ಪಾರ್ಟಿಗಳಿಗೆ ಹೋಗುವ ದೆಹಲಿಯ ಸಿರಿವಂತರಲ್ಲಿ ಫ್ಯಾಬ್‍ಇಂಡಿಯಾ ಕುರ್ತಾಧರಿಸಿ ಹೋಗುವುದೂ ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗುವ ಮಟ್ಟಿಗೆ ಫ್ಯಾಬ್‍ಇಂಡಿಯಾ ಬೆಳೆದುಬಿಟ್ಟಿತು. ಆದರೆ ೧೯೬೦ರಿಂದ ೧೯೯೪ರವರೆಗೆ ಫ್ಯಾಬ್‍ಇಂಡಿಯಾ ದೆಹಲಿಯಲ್ಲಿ ಒಂದು ಅಂಗಡಿಯ ಮೂಲಕ ವ್ಯಾಪಾರ ಮಾಡುತ್ತಿತ್ತು. ೧೯೯೪ರಲ್ಲಿ ಜಾನ್ ಬಿಸೆಲ್ ಮಗ ವಿಲಿಯಂ ಬಿಸೆಲ್ ಕಂಪನಿಯ ರೂವಾರಿಯಾದರು. ಅಲ್ಲಿಂದ ಫ್ಯಾಬ್‍ಇಂಡಿಯಾದ ಬೆಳವಣಿಗೆಯ ಕಥೆ ಪ್ರಾರಂಭವಾಗಿ ಇಂದು ಭಾರತದಾದ್ಯಂತ ಈ ಲಾಭಾರ್ಜನೆಯ ವ್ಯಾಪಾರ ೧೦೪ ಅಂಗಡಿಗಳ ಮೂಲಕ ನಡೆಯುತ್ತಿದೆ.

ಇದ್ದಕ್ಕಿದ್ದ ಹಾಗೆ ಫ್ಯಾಬ್‍ಇಂಡಿಯಾದ ವ್ಯಾಪಾರದ ಬಗ್ಗೆ ನಮಗೆ ಯಾಕೆ ಕುತೂಹಲ ಉಂಟಾಗಬೇಕು? ಕಾರಣವಿಷ್ಟೇ - ಒಳಿತನ್ನೂ ಲಾಭವನ್ನೂ ಆರ್ಜಿಸುವ ಉದ್ದೇಶ ಹೊತ್ತ ಸಂಸ್ಥೆಗಳು ಒಳಿತು-ಲಾಭಗಳ ಸಮತೌಲ್ಯವನ್ನು ಕಾಪಾಡುವುದರಲ್ಲಿ ತುಸು ವಿಫಲರಾಗಬಹುದಾದ್ದರಿಂದ ಅಂಥಹ ಸಂಸ್ಥೆಯ ಯಶಸ್ಸನ್ನು ತೀಕ್ಷ್ಣ ಪರಿಶೀನನೆಗೆ ಹಚ್ಚುವುದು ಸಹಜವೇ ಆಗುತ್ತದೆ. ಆದರೆ ಈ ರೀತಿಯ ಸಂಸ್ಥೆಗಳು ’ಬೆಳವಣಿಗೆ’ಯ ಪಥ ಹಿಡಿದಾಗ, ಕುಶಲಕರ್ಮಿಗಳ ಬೆಳವಣಿಗೆಯ ಗತಿಗಿಂತಾ ಹೆಚ್ಚಿನ ಗತಿಯಲ್ಲಿ ಸಂಸ್ಥೆ ಬೆಳೆಯಲು ತೊಡಗಿದಾಗ ’ಒಳಿತು’ ಹಿನ್ನೆಲೆಗೆ ಹೋಗಿ ’ಲಾಭ’ ಮುಂಚೂಣಿಗೆ ಬರುತ್ತದೆ. ಹೀಗಾಗಿಯೇ ಫ್ಯಾಬ್‍ಇಂಡಿಯಾದ ಈಚಿನ ಬೆಳವಣಿಗೆಯ ಗತಿಯಲ್ಲಿ ನೇಕಾರರು - ಕುಶಲ ಕರ್ಮಿಗಳಿಂದ ಬಂದ ಉತ್ಪತ್ತಿಯನ್ನು ಮಾತ್ರ ಮಾರುತ್ತಿದ್ದ ಸಂಸ್ಥೆ ನಿಧಾನವಾಗಿ ನಾವು ಮಾರುವ ಯಾವುದೇ ವಸ್ತುವಿನಲ್ಲಿ ಕುಶಲ ಕರ್ಮಿಗಳ ’ಕೆಲಸದ’ ಅಂಶ ಇರುತ್ತದೆ ಅನ್ನುವ ಮಾತನ್ನು ಹೇಳುತ್ತಾರೆ. ಹೀಗೆ ಹೇಳಿದಾಗ ಮಿಲ್ಲಿನ ಬಟ್ಟೆಗೆ ಹಾಕಿದ ಬ್ಲಾಕ್ ಪ್ರಿಂಟು, ಅಥವಾ ಕೈಯಿಂದ ಮಾಡಿದ ಕಸೂತಿಯ ವಸ್ತ್ರಗಳೂ ಆ ವ್ಯಾಪಾರಕ್ಕೆ ಸೇರುತ್ತವೆ, ಜೊತೆಗೆ ಸಂಬಂಧವೇ ಇಲ್ಲದ ಆರ್ಗ್ಯಾನಿಕ್ ಉಪ್ಪಿನಕಾಯಿ ಇತರ ವಸ್ತುಗಳು ಆ ವ್ಯಾಪಾರದಲ್ಲಿ ಮನೆ ಮಾಡುತ್ತವೆ. ಹೀಗೆ ಒಳಿತು ಕ್ರಮಕ್ರಮೇಣ ಹಿನ್ನೆಲೆಗೆ ಹೋಗಿ ಲಾಭ ಮತ್ತು ಬೆಳವಣಿಗೆ ಮುಖ್ಯವಾಗುತ್ತವೆ. ಹೀಗಾಗಿ ಈ ಇಂಥ ಸಂಸ್ಥೆಗಳು ಒಳಿತನ್ನು ಮಾಡುವುದನ್ನು ಮುಂದುವರೆಸಿದರೂ ಈ ಕಷ್ಟದ ಪ್ರಶ್ನೆಗಳನ್ನು ಎದುರಿಸಲೇ ಬೇಕಾಗಿದೆ! ಹೌದು ಇಂದಿಗೂ ಫ್ಯಾಬ್‍ಇಂಡಿಯಾ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅದರ ಒಟ್ಟಾರೆ ಮಾರಾಟದಲ್ಲಿ ಕುಶಲಕರ್ಮಿಗಳ ಪ್ರತಿಶತ ಕಡಿಮೆಯಾಗುತ್ತಿದೆ. ಹೀಗೆ ಲಾಭ ಒಳಿತನ್ನು ನಿಧಾನವಾಗಿ ಕಬಳಿಸಿಬಿಡುತ್ತದೆ.

ಅದೇ ಲಾಭ ಗಳಿಸುವುದೇ ಒಳಿತು ಮಾಡಲು ಅನ್ನುವಂಥಹ ಸಂಸ್ಥೆಗಳೂ ನಮ್ಮಲ್ಲಿವೆ. ಇಂಥ ಸಂಸ್ಥೆಗಳಲ್ಲಿ ಬಂಡವಾಳ ಮತ್ತು ಲಾಭ ಮುಂಚೂಣಿಗೆ ಬರದೇ ಮೂಲ ಉದ್ದೇಶ ಒಳಿತು ಮಾಡುವುದೇ ಆಗಿದೆ. ಮದುರೈನಲ್ಲಿರುವ ಅರವಿಂದ ಐ ಕೇರ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದನ್ನು ಸ್ಥಾಪಿಸಿದ [ಹಾಗೂ ಈಚೆಗೆ ತೀರಿಕೊಂಡ] ಗೋವಿಂದಪ್ಪಾ ವೆಂಕಟಸ್ವಾಮಿಯವರ ಉದ್ದೇಶ ಜನರ ದೃಷ್ಟಿಯನ್ನು ಉತ್ತಮಗೊಳಿಸುವುದೇ ಆಗಿತ್ತು. ಆತನಿಗೆ ಅದರಿಂದ ಯಾವ ಲಾಭವೂ ಬೇಕಿರಲಿಲ್ಲ. ಆದರೆ ಆತ ಕೇಳುತ್ತಿದ್ದ ಪ್ರಶ್ನೆಗಳೆಲ್ಲಾ ಲಾಭಗಳಿಸುವ ಸಂಸ್ಥೆಗಳು ಕೇಳಬಹುದಾದ ಪ್ರಶ್ನೆಗಳೇ. ಹೇಗೆ ಕುಶಲತೆಯಿಂದ ಕೆಲಸ ಮಾಡಬಹುದು, ಎಲ್ಲಿ ಖರ್ಚನ್ನು ಕಡಿಮೆ ಮಾಡಬಹುದು, ಗುಣಮಟ್ಟವನ್ನು ಹೇಗೆ ಕಾಯ್ದಿಟ್ಟುಕೊಳ್ಳಬಹುದು.. ಹೀಗೆ ಅವರು ಕೇಳಿದ ಪ್ರಶ್ನೆಗಳ ಫಲವಾಗಿ ಅರವಿಂದ್ ಐ ಕೇರ್ ಸಂಸ್ಥೆಗಳು ಗುಣಮಟ್ಟದ ಸೇವೆಗಳನ್ನೊದಗಿಸುತ್ತಾ ತನ್ನ ಲಾಭಾಂಶವನ್ನು ಶ್ರೀಮಂತರಿಂದ ಗಳಿಸಿ ಬಡವರಿಗೆ ಒಳಿತನ್ನು ಮಾಡುತ್ತಿದೆ. ಅಕಸ್ಮಾತ್ ಹೆಚ್ಚಿನ ಲಾಭಾಂಶವನ್ನು ಗಳಿಸಿದರೂ ಅದನ್ನು ಹಂಚುವ ಭಾರ ಆ ಸಂಸ್ಥೆಯ ಮೇಲೆ ಇಲ್ಲವಾದ್ದರಿಂದ ಆ ಸಂಸ್ಥೆಯ ಬೆಳವಣಿಗೆಯ ಗತಿ, ಫ್ಯಾಬ್‍ಇಂಡಿಯಾದ ಲಾಭಾರ್ಜನೆಯ ಬೆಳವಣಿಗೆಯ ಗತಿಗಿಂತ ಭಿನ್ನವಾಗಿರುತ್ತದೆ. ಆದರೂ ಅರವಿಂದ್ ಥರದ ಸಂಸ್ಥೆಗಳು ಒಳಿತನ್ನು ಮಾಡಲು ಯಾರ ಅನುದಾನವನ್ನೂ ಅಪೇಕ್ಷಿಸುವಿದಿಲ್ಲ.

ಒಳಿತಿಗೂ ಲಾಭಕ್ಕೂ ಇರುವ ಸಂಬಂಧ ಹೀಗೆ ಬಹಳ ಗಹನವಾದದ್ದು!