ನನ್ನ ರಿಸರ್ಚ್ ಪ್ರಾಜೆಕ್ಟುಗಳಿಂದಾಗಿ ಆಗಾಗ ಕೆಲವು ಕುತೂಹಲಕಾರಿ ಜಾಗಗಳಿಗೆ ಹೋಗುವ ಅವಕಾಶ ಸಿಗುತ್ತದೆ. ಗ್ರಾಮೀಣ ಪ್ರದೇಶದ ಕುಟುಂಬಗಳು ತಮ್ಮ ಆರ್ಥಿಕ ವ್ಯವಹಾರಗಳನ್ನು ಯಾವರೀತಿಯಲ್ಲಿ ಕೈಗೊಳ್ಳುತ್ತಾರೆ, ಯಾವ ರೀತಿಯ ಅವಶ್ಯಕತೆಗಳಿಗಾಗಿ ಯಾವ ಮೂಲದಿಂದ ಹಣ ಮತ್ತು ಸವಲತ್ತುಗಳನ್ನು ಸಂಯೋಜಿಸುತ್ತಾರೆನ್ನುವ ಕುತೂಹಲಕಾರಿ ವಿಷಯವನ್ನು ನಾನು ಒಂದೆರಡು ವರ್ಷಗಳಿಂದ ಅಧ್ಯಯನ ಮಾಡುತ್ತಾ ಬಂದಿದ್ದೇನೆ. ಈ ಅಧ್ಯಯನಕ್ಕಾಗಿ ಅನೇಕ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿ ಅದರಿಂದ ಅರ್ಥವಾಗುವಂತಹ ವಿಷಯವೇನಾದರೂ ಹೊರಬರಬಹುದೋ ಅನ್ನುವುದೇ ನಮ್ಮ ಕುತೂಹಲ. ಹೀಗಾಗಿ ಈ ವಿಷಯವಾಗಿ ರಾಜಾಸ್ಥಾನ, ಝಾರಖಂಡ್, ಛತ್ತೀಸಘಡ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಿಂದ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಜೀರ್ಣಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ - ಈ ಅಧ್ಯಯನವನ್ನು ಮಧ್ಯಪ್ರದೇಶದಲ್ಲಿ ಮುಂದುವರೆಸುವ ಅವಕಾಶ ನನಗೆ ಒದಗಿಬಂತು.ಮಧ್ಯಪ್ರದೇಶಕ್ಕೆ ನಾನು ಹಲವುಬಾರಿ ಭೇಟಿನೀಡಿದ್ದೆನಾದರೂ, ಹೆಚ್ಚಿನಂಶ ಹೋಗಿದ್ದದ್ದು ಭೋಪಾಲ ಮತ್ತು ಇಟಾರ್ಸಿಯ ಬಳಿಯಿರುವ ಸುಖತವಾ/ಕೇಸ್ಲಾ ಅನ್ನುವ ಗ್ರಾಮಕ್ಕೆ. ಸುಖತವಾ/ಕೇಸ್ಲಾದಲ್ಲಿ ಪ್ರದಾನ್ ಎಂಬ ಸ್ವಯಂ ಸೇವಾ ಸಂಸ್ಥೆಯ ಟ್ರೇನಿಂಗ್ ವ್ಯವಸ್ಥೆ ಇರುವುದರಿಂದ ಅಲ್ಲಿಗೆ ಹಲವು ಬಾರಿ ಹೋಗಿಬರುವ ಅವಕಾಶ ಸಿಕ್ಕಿದೆ. ಆದರೆ ಈ ಬಾರಿ ಅಧ್ಯಯನಕ್ಕೆ/ಮಾಹಿತಿ ಸಂಗ್ರಹಕ್ಕಾಗಿ ಆಯ್ಕೆಯಾದದ್ದು ರೀವಾ ಮತ್ತು ಸಿದ್ಧಿ ಅನ್ನುವ ಮಧ್ಯಪ್ರದೇಶದ ಎರಡು ಜಿಲ್ಲೆಗಳು.
ಈ ಜಿಲ್ಲೆಗಳು ಆಯ್ಕೆಯಾದದ್ದೇ ಪ್ರಾರಂಭವಾಯಿತು ನಮ್ಮ ಕೆಲಸ. ಎಲ್ಲರ ಆಫೀಸುಗಳಲ್ಲೂ ಗೋಡೆಯ ಮೇಲೆ ಏನಾದರೂ ಪೇಂಟಿಂಗ್, ದೇವರ ಪಟಗಳು ಇತ್ಯಾದಿಗಳಿದ್ದರೆ ನನ್ನ ಆಫೀಸಿನ ಗೋಡೆಯತುಂಬಾ ರಾಜ್ಯಗಳ ನಕ್ಷೆಗಳು.. ಮುಖ್ಯವಾಗಿ ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ನನ್ನ ಹೆಚ್ಚಿನ ಕೆಲಸ ನಡೆದಿದೆ. ಜೊತೆಗೆ ಈಗ ಸೇರಿಕೊಂಡದ್ದು ಮಧ್ಯಪ್ರದೇಶದ ನಕ್ಷೆ. ಛತ್ತೀಸ್‍ಘಡ, ಝಾರ್‌ಖಂಡ್ ಮತ್ತು ಉತ್ತರಪ್ರದೇಶದ ಸಂಗಮದ ಆಸುಪಾಸಿನಲ್ಲಿ ಈ ಪ್ರದೇಶ ಬೀಳುತ್ತದೆ. ಬುಂದೇಲ್‍ಖಂಡ್ ಅನ್ನುವ ಪ್ರದೇಶವೂ ಸಿದ್ಧಿಯನ್ನೊಳಗೊಂಡಿದೆಯಂತೆ. ನಕ್ಷೆ ತೆಗೆದು ರೀವಾ ನಗರವನ್ನು ತಲುಪುವ ಅನೇಕ ಮಾರ್ಗಗಳನ್ನು ತುಲನೆ ಮಾಡಬೇಕಾಯಿತು. ಪ್ರಯಾಣದ ಸಮಯ ಹೆಚ್ಚಾಗಬಾರದು, ಆದಷ್ಟೂ ಸಮಯ ಅಲ್ಲಿ ಓಡಾಡುವುದರಲ್ಲಿ, ಮಾಹಿತಿ ಸಂಗ್ರಹಣೆಯ ಎಲ್ಲ ಲಾಜಿಸ್ಟಿಕ್ಸ್ ನಿರ್ಧರಿಸಿ ಬಂದುಬಿಡಬೇಕು ಅನ್ನುವುದು ಉದ್ದೇಶ. ನಕ್ಷೆ ತಿರುವಿ ಹಾಕಿ, ಜನರೊಂದಿಗೆ ಮಾತನಾಡಿದಾಗ ತಿಳಿದದ್ದು ಇದು: ಭೋಪಾಲದಿಂದ ಪ್ರತಿರಾತ್ರಿ ಹೋಗುವ ರೈಲಿನಲ್ಲಿ ಹತ್ತಿದರೆ ಮುಂಜಾನೆ ರೀವಾ ತಲುಪಬಹುದು. ಆದರೆ ಭೋಪಾಲ ತಲುಪಲು ಅಹಮದಾಬಾದಿನಿಂದ ರಾತ್ರೆಯ ರೈಲು ಹತ್ತಬೇಕು. ಮುಂಜಾನೆ ಭೋಪಾಲ ತಲುಪಿ ರಾತ್ರೆಯ ರೈಲಿಗೆ ಕಾಯುವ ಸಮಯದಲ್ಲಿ ಮಾಡುವುದು ಏನು? ರೈಲು ಹತ್ತುವ ಮಿಕ್ಕ ಸಾಧ್ಯತೆಗಳು ಅದಕ್ಕಿಂತ ಕೆಟ್ಟದಾಗಿ ಕಂಡವು - ಝಾಂಸಿ, ಅಲಹಾಬಾದ್ ನಗರಗಳನ್ನು ರೈಲಿನಲ್ಲಿ ಇಲ್ಲಿಂದ ತಲುಪುವುದು ಇನ್ನೂ ಕಷ್ಟವಾಗಿತ್ತು! ರೀವಾ ತಲುಪುವುದಕ್ಕಿಂತ ಸರಳವಾಗಿ ಬಹುಶಃ ಇನ್ನೂ ಪೂರ್ವದಲ್ಲಿರುವ ಸಿಂಗಾಪುರ್ ತಲುಪಿಬಿಡಬಹುದಿತ್ತೇನೋ. ಫ್ಲೈಟಿನಲ್ಲಿ ಹೋಗಬೇಕೆಂದರೆ, ರೀವಾಕ್ಕೆ ಅತಿ ಹತ್ತಿರವಾದ ವಿಮಾನ ನಿಲ್ದಾಣ - ಖಜುರಾಹೋ ಅಥವಾ ವಾರಾಣಾಸಿ. ಅಲ್ಲಿಗೆ ದಿಲ್ಲಿಯಿಂದ ವಿಮಾನವನ್ನು ಹತ್ತಬೇಕು ಮತ್ತು ಅಹಮದಾಬಾದಿನಿಂದ ದಿಲ್ಲಿಗೆ ಆ ವಿಮಾನವನ್ನು ಹಿಡಿಯುವ ಸಮಯಕ್ಕೆ ತಲುಪುವಂತಹ ವಿಮಾನವನ್ನು ಹುಡುಕಬೇಕಿತ್ತು. ಅಧ್ಯಯನಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ನಡೆಸಲು ಕೈಗೊಳ್ಳಬೇಕಿದ್ದ ಮೂರುದಿನಗಳ ಯಾತ್ರೆಗೆ ಇಷ್ಟೊಂದು ಯೋಚನೆ ಮಾಡಿದ್ದು ಇದೇ ಮೊದಲು. ಕಡೆಗೂ ನಿರ್ಧಾರವಾದದ್ದು ಅಹಮದಾಬಾದು-ದಿಲ್ಲಿ-ಖಜುರಾಹೊ ಮತ್ತು ಅಲ್ಲಿಂದ ಕಾರಿನಲ್ಲಿ ರೀವಾಗೆ ಹೋಗುವ ರೂಟ್ ಪ್ಲಾನ್.
ರಾಜಾಸ್ಥಾನ/ತೆಲಂಗಾಣ ಸುತ್ತಿ "ಹಿಂದುಳಿದ" ಪ್ರದೇಶಗಳ ಮಾನಸಿಕ ಚಿತ್ರಣ ಇಟ್ಟುಕೊಂಡಿದ್ದ ನನಗೆ ಈ ಜಾಗ ಆಶ್ಚರ್ಯವನ್ನುಂಟುಮಾಡಲಿತ್ತು. ಸಾಮಾನ್ಯವಾಗಿ ಹಿಂದುಳಿದ ಜಾಗಗಳು ಫ್ಯೂಡಲ್ ಆಗಿರುತ್ತವೆ. ಬಡವರು ಶ್ರೀಮಂತರ ಮುಂದೆ ಬಹಳ ತಗ್ಗಿಬಗ್ಗಿ ನಡೆಯುತ್ತಾರೆ. ಅದನ್ನು ಮಾತುಕತೆಯ ರೀತಿರಿವಾಜುಗಳಲ್ಲೇ ಕಂಡುಕೊಳ್ಳಬಹುದು -- ರಾಜಾಸ್ಥಾನದಲ್ಲಿ ಆ-ಮೇಲಿನವರನ್ನು ಈ-ಕೆಳಗಿನವರು "ಹುಕುಂ" ಎಂದು ಸಂಬೊಧಿಸುವುದು ಸಾಮಾನ್ಯ. ತೆಲಂಗಾಣಾದಲ್ಲಿ "ದೊರ" ಎನ್ನುವ ಪ್ರಯೋಗ ಕಾಣಿಸುತ್ತದೆ. ಜಾಗೀರುದಾರಿ ಪದ್ಧತಿಯಲ್ಲಿ ಪ್ರತಿಯೊಬ್ಬ ನಾಯಕನೂ ಅರಸನೇ!. ಈ ಫ್ಯೂಡಲ್ ಲೋಕದಲ್ಲಿ ನಮಗೆ ಕಾಣಸಿಗುವುದು ಭಾರೀ ಬಡತನದ ನಡುವೆ ಎದ್ದು ನಿಲ್ಲುವ ಭವ್ಯ ಹವೇಲಿಗಳು. ರಾಜಾಸ್ಥಾನದ ಹವೇಲಿಗಳು ಹೇಗೂ ಜಗದ್ವಿಖ್ಯಾತ, ತೆಲಂಗಾಣಕ್ಕೆ ಬಂದರೆ ಅವೆಲ್ಲವೂ ಹೈದರಾಬಾದಿಗೆ ಸೀಮಿತ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಹಿಂದುಳಿದ ಜಾಗಗಳಲ್ಲಿ ಸಾಧಾರಣವಾಗಿ ನೀರಿಗೆ ಬರ, ಬೇಸಾಯ ಅಷ್ಟಕ್ಕಷ್ಟೇ, ಕೂಲಿಗಳು ಊರಿಂದ ಬೇರೆ ಊರಿಗೆ ವಲಸೆ ಹೋಗಿ ಸಂಪಾದಿಸುವುದು, ಇಂಥಹ ಲಕ್ಷಣಗಳು ಕಾಣಸಿಗುತ್ತವೆ. ಈ ಜಾಗಗಳಲ್ಲಿ ಇರುವ ಸಂಪನ್ಮೂಲಗಳನ್ನು ವೈಯಕ್ತಿಕವಾಗಿ, ಸಮುದಾಯವನ್ನೊಳಗೊಳ್ಳದೆಯೇ ಬಳಸಲು ಸಾಧ್ಯವಿಲ್ಲ. ಉದಾಹರಣೆಗೆ ದಕ್ಷಿಣ ರಾಜಾಸ್ಥಾನದಲ್ಲೂ, ಹಿಂದಿನ ನಿಜಾಂ ಆಳ್ವಿಕೆಯಲ್ಲಿ ಗೋಲ್ಕೊಂಡದಲ್ಲೂ ಅಲ್ಲಿನ ಸಂಪನ್ಮೂಲಗಳು ಗಣಿಗಾರಿಕೆಗೆ ಪೂರಕವಾಗಿರುತ್ತಿದ್ದವು. ಹೀಗಾಗಿ, ಆ ಉದ್ಯಮಿಗಳು ಸಮುದಾಯದ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಿದರಷ್ಟೇ ಆ ಪ್ರಾಂತ ವಿಕಸಿತಗೊಳ್ಳಲು ಸಾಧ್ಯವಿತ್ತು. ಹೀಗೆಲ್ಲಾ ಸರಳೀಕೃತ ಭ್ರಮೆಗಳನ್ನು ನಾನು ಹೊತ್ತು ತಿರುಗುತ್ತಿದ್ದೆ. ಈ ಭ್ರಮೆಯ ಪ್ರಕಾರ - ಮುಖ್ಯವಾಗಿ ನೀರಿನ ಅಭಾವವನ್ನು ನಾನು ತಳಹದಿಯಲ್ಲಿಟ್ಟಿದ್ದೆ ಅನ್ನಿಸುತ್ತದೆ. ಆದರೆ ವಿಷಯಗಳೆಲ್ಲವೂ ಇಷ್ಟು ಸರಳವಾಗಿದ್ದರೆ ಅದಕ್ಕೆ ಹುಡುಕುವ ಪರಿಹಾರವೂ ಸರಳವಾಗಿಯೇ ಇರುತ್ತಿತ್ತು ಅಲ್ಲವೇ? ಹೀಗಾಗಿ ನಾನು ರೀವಾಕ್ಕೆ ಹೊರಟಾಗ ಅಲ್ಲಿನ ಬಗೆಗಿನ ಮಾನಸಿಕ ಚಿತ್ರ ತುಸು ತೆಲಂಗಾಣದ ಚಿತ್ರದಂತಿತ್ತು.
ನನ್ನನ್ನು ಒಯ್ಯಲು ಏರ್‌ಪೋರ್ಟಿಗೆ ಬಂದ ಬ್ಯಾಂಕ್ ಅಧಿಕಾರಿ ಕುಲಶ್ರೇಷ್ಟ ಮಿತಭಾಷಿ/ಹಿತಭಾಷಿ. ಕಾರಿನಲ್ಲಿ ಕುಳಿತ ಕೂಡಲೇ "ಏನಾದರೂ ತಿನ್ನುತ್ತೀರಾ?" ಅಂದರು. "ಫ್ಲೈಟಿನಲ್ಲಿ ಆಯಿತು" ಅಂದೆ. ನಾವು ಇಲ್ಲವೇ ಖಜುರಾಹೋದ ಯಾವುದಾದರೂ ಹೋಟೇಲಿನಲ್ಲಿ ತಿನ್ನಬೇಕಿತ್ತು, ಅಥವಾ ಸತ್ನಾದವರೆಗೂ ಕಾಯಬೇಕಿತ್ತು. ಸತ್ನಾಗೆ ತಲುಪಲು ಕನಿಷ್ಥ ಮೂರು ಘಂಟೆ ಆಗುವುದಿತ್ತು. ಆದರೆ ಆತ ಪೂರ್ಣ ತಯಾರಾಗಿ ಬಂದಿದ್ದ. "ಪರವಾಗಿಲ್ಲ ನಿಮಗೆ ಹಸಿವಾದರೆ ಹೇಳಿ ಸ್ಯಾಂಡ್‌ವಿಚ್ ಕಟ್ಟಿಸಿಕೊಂಡು ಬಂದಿದ್ದೇನೆ" ಅಂದ. ನಗರ ಪ್ರಾಂತದಲ್ಲಿ ಪ್ರಯಾಣಿಸದಿದ್ದರೆ ಇದು ಎಂದಿನ ತೊಂದರೆ. ತೆಲಂಗಾಣಾದ ಯಾವುದಾದರೂ ಹಳ್ಳಿಯಲ್ಲಿ ತಂಗಿದರೆ ಮಾರನೆಯ ದಿನದ ಊಟಕ್ಕೆ ನನಗೆ ಮೊಸರು ಬೇಕು ಎಂದು ಹಿಂದಿನ ದಿನ ಹೇಳದಿದ್ದರೆ ಮೊಸರು ಸಿಗುತ್ತಿರಲಿಲ್ಲ. ಸಂಜೆ ಆರರ ನಂತರ ಚಹಾ ಸಿಗುವುದೂ ಕಷ್ಟ - ಕಾರಣ ಹಾಲು ಆಗಿಹೋಗಿರುತ್ತದೆ. ಶುದ್ಧ ಶಾಖಾಹಾರಿಯಾಗಿದ್ದ ನಾನು ಮೊಟ್ಟೆ-ಆಮ್ಲೆಟ್ ತಿನ್ನಲು ಪ್ರಾರಂಭಿಸಿದ್ದೇ ತೆಲಂಗಾಣಾ ಪ್ರಾಂತದ ಪ್ರಯಾಣದ ಹಸಿವೆಯನ್ನು ತಾಳಲಾರದೇ. ಆದರೆ ಅದು ಹತ್ತಾರು ವರುಷಗಳ ಹಿಂದಿನ ಮಾತು.
ಖಜುರಾಹೋದಿಂದ ರೀವಾಕ್ಕೆ ದಾರಿಯಲ್ಲಿ ಹೋಗುತ್ತಿರುವಾಗಲೇ ನನಗೆ ಅನೇಕ ವರ್ಷಗಳ ಹಿಂದಿನ ಗುಜರಾತಿನ ರಾಜಕೀಯ ನೆನಪಾಯಿತು. ೧೯೯೫ರಲ್ಲಿ ಬಿಜೆಪಿ ಪಕ್ಷದಲ್ಲಿದ್ದ ಶಂಕರ್ ಸಿಂಗ್ ವಾಘೇಲಾ ಅಂದಿನ ಮುಖ್ಯಮಂತ್ರಿಯಾಗಿದ್ದ ಕೇಶೂಭಾಯಿ ಪಟೇಲ್ ವಿರುದ್ಧ ಪಿತೂರಿ ಹೂಡಿ ೪೫ ಶಾಸಕರನ್ನು ಖಜುರಾಹೋಗೆ ಕರೆದೊಯ್ದು ಅಲ್ಲಿ ಅವರನು ತಾಜ್ ಚಂಡೇಲಾ ಹೋಟೇಲಿನಲ್ಲಿ ಇರಿಸಿದ್ದರು. ಬಿಜೆಪಿ ಸರಕಾರದ, ಅದರಲ್ಲೂ ಆರ್.ಎಸ್.ಎಸ್‍ನ ಕಾರ್ಯಕರ್ತರಾಗಿದ್ದಂತಹ ವಾಘೇಲಾ ಇದನ್ನು ಮಾಡಿದ್ದು ಪಕ್ಷಕ್ಕೆ ದೊಡ್ಡ ಧಕ್ಕೆಯನ್ನು ಆಘಾತವನ್ನೂ ಉಂಟುಮಾಡಿತ್ತು. ಶಿಸ್ತಿನ ಪಕ್ಷ ಎಂದು ಖ್ಯಾತಿಯಿದ್ದ ಕೇಡರ್ ಬೇಸ್ಡ್ ಬಿಜೆಪಿಯಲ್ಲಿನ ಮೊದಲ ಬಿರುಕು ಖಜೂರಾಹೋಗೆ ವಾಘೇಲಾ ಜೊತೆ ಹೋದ ಖಜೂರಿಯಾಗಳಿಂದ ಆಗಿತ್ತು. ಆಗ ಖಜೂರಾಹೊಗೆ ವಾಘೇಲಾ ಜೊತೆ ಹೋದವರನ್ನು ಖಜೂರಿಯ ಎಂದು, ಉಳಿದವರನು ಹಜೂರಿಯಾ ಎಂದೊ ಕರೆವುದು ಗುಜರತಿನ ರಾಜಕೀಯದ ವಾಡಿಕೆಯಾಗಿಬಿಟ್ಟಿತು. ಹೀಗೆ ಗುಪ್ತಜಾಗಕ್ಕೆ ಶಾಸಕರನ್ನು ಕರೆದೊಯ್ದು ಎಲ್ಲರಿಂದ ದೂರವಿಡುವ ವಾಡಿಕೆಯನ್ನು ಪ್ರರಂಭಿಸಿದವರು ಎನ್.ಟಿ.ಆರ್. ಹಾಗೂ ಮೊದಲ ಗುಪ್ತಜಾಗ ಕರ್ನಾಟಕದ ನಂದೀ ಬೆಟ್ಟ! ಇತಿಹಾಸದ ತುಕಿಡಿಯಲ್ಲಿ ಕರ್ನಾಟಕಕ್ಕೆ ಈ ಅಗ್ಗಳಿಕೆಯೊ ಉಂಟು!! ಇರಲಿ, ಆಗ ವಾಘೇಲಾ ಜನರನ್ನು ಖಜುರಾಹೋಗೆ ಕರೆದೊಯ್ದರು ಅಂದರೆ ನನಗೇನೂ ಅನ್ನಿಸಿಯೇ ಇರಲಿಲ್ಲ. ಮಧ್ಯಪ್ರದೇಶ ಗುಜರಾತಿನ ಪಕ್ಕದ ರಾಜ್ಯ. ಹೀಗಾಗಿ ಖಜುರಾಹೋಗೆ ಹೋಗುವುದು ನನಗೆ ದೊಡ್ಡ ವಿಷಯ ಅನ್ನಿಸಿರಲಿಲ್ಲ. ಆದರೆ ನಾನು ಅಹಮದಾಬಾದಿನಿಂದ ಖಜುರಾಹೊ ತಲುಪಿದಾಗಲೇ ಅದು ಎಷ್ಟು ದೂರವೆಂಬ, ಮತ್ತು ಆ ಘಟನೆಯ ರಾಜಕೀಯ ಮಹತ್ವ ನನಗೆ ಅರ್ಥವಾದದ್ದು. ನಿಧಾನವಾಗಿಯಾದರೂ, ಹತ್ತಾರು ವರ್ಷಗಳ ನಂತರವಾದರೂ ಜ್ಞಾನೋದಯವಾಯಿತಲ್ಲ ಸದ್ಯ!
ಕುಲಶ್ರೇಷ್ಟ ನಿಧಾನವಾಗಿ "ಇಲ್ಲಿ ಜೆಪಿ ಗ್ರೂಪಿನವರ ಸಿಮೆಂಟ್ ಫ್ಯಾಕ್ಟರಿಯಿದೆ. ಅಲ್ಲಿನ ಗೆಸ್ಟ್ ಹೌಸಿನಲ್ಲಿ ನಿಮಗೆ ತಂಗುವ ಏರ್ಪಾಟು ಮಾಡಿದ್ದೇನೆ. ರೀವಾದಿಂದ ಕೇವಲ ೧೮ ಕಿಲೋಮೀಟರು ದೂರವಷ್ಟೇ.." ಅಂದರು. ಹೆಚ್ಚಿನ ವಾಣಿಜ್ಯ ಇಲ್ಲದ ಜಾಗಗಳಲ್ಲಿ ಹೊಟೇಲುಗಳು ಇರುವುದುಲ್ಲ. ಲಾಡ್ಜುಗಳು ಅಷ್ಟಕ್ಕಷ್ಟೇ. ಆದರೂ ನಾನು ಬೇಡ ರೀವಾಕ್ಕೇ ಹೋಗೋಣ - ಅಲ್ಲೇ ಏನಿದ್ದರೂ ಪರವಾಗಿಲ್ಲ ಅಂದೆ. ಅಲ್ಲಿ ರಾಜ್‍ವಿಲಾಸ್ ಅನ್ನುವ ದೊಡ್ಡ ಹೋಟೇಲು ಇದೆ ಎಂದು ಅಲ್ಲಿಯೇ ಸ್ವಸಹಾಯ ಸಂಸ್ಥೆಯನ್ನು ನಡೆಸುತ್ತಿದ್ದ ಪ್ರಸೀದಾ ಹೇಳೀದ್ದು ನನಗೆ ನೆನಪಿತ್ತು. - ಜೊತೆಗೆ ಒಂದಷ್ಟು ಪುಟ್ಟ ಲಾಡ್ಜುಗಳು. ರಾಜ್‍ವಿಲಾಸ್ ಚೆನ್ನಾಗಿಲ್ಲ ಸರ್ವಿಸ್ ಸರಿಯಿಲ್ಲ ಎಂದು ಆತ ಹೇಳಿದ. ಆತ ಹೇಳಿದ ಲ್ಲಡ್ಜಿನಲ್ಲಿಯೇ ತಂಗಿದ್ದಾಯಿತು. ರಸ್ತೆಯಬದಿಯ ಲಾಡ್ಜು, ರಾತ್ರೆಯಿಡೀ ವಾಹನಗಳ ಸದ್ದು, ಸಂಜೆಯಾಗುತ್ತಿದ್ದಂತೆ ಅನೇಕ ಥರದ ಕ್ರಿಮಿಕೀಟಗಳ ಆಗಮನ, ಮತ್ತು ಬಂದಿರುವ ಮಹಾನ್ ವ್ಯಕ್ತಿಗೆಂದೇ ಖಾಸ್ - ಮಲ್ಲಿಗೆಯ ಸುವಾಸನೆಯ ರೂಮ್ ಫ್ರೆಶ್ನರ್... ಇದಕ್ಕಿಂದ ನರಕ ಬೇರೊಂದು ಇರಬಹುದೇ.. ಅಂದುಕೊಂಡರೂ, ಪಾಪ ಎಲ್ಲವೂ ನನ್ನನ್ನು ಹೊನ್ನಶೂಲಕ್ಕೇರಿಸಲೆಂದೇ ಮಾಡಿದ್ದಂತಿತ್ತು. ಅದರಿಂದ ಆದ ಉಪಯೋಗ ಒಂದೇ.. ಆದಷ್ಟೂ ರೂಮಿನಿಂದ ಆಚೆ, ರಸ್ತೆಯ ಮೇಲೇ ಇರುವುದು ಒಳಿತು ಎನ್ನುವ ಮಾತು ನನಗೆ ಮನದಟ್ಟಾಯಿತು. ಹೀಗಾಗಿ ಇರಬೇಕಿದ್ದ ಮೂರೂ ದಿನವೂ ಸುತ್ತ ಮುತ್ತ ನಾವು ಯಾವೆಲ್ಲ ಹಳ್ಳಿಗಳಿಂದ ಮಾಹಿತಿ ಸಂಗ್ರಹಿಸಬೇಕಿತ್ತೋ ಆ ಎಲ್ಲ ಹಳ್ಳಿಗಳಿಗೂ, ಅದರ ಸುತ್ತಮುತ್ತ ಇರುವ ಬ್ಯಾಂಕಿನ ಶಾಖೆಗಳಿಗೂ ಹೋಗುವುದೆಂದು ನಿರ್ಧರಿಸೆದೆವು.
ರಾತ್ರೆ ಫ್ಲೇವರ್ಸ್ ಅನ್ನುವ ಪುಟ್ಟ ರೆಸ್ಟುರಾದಲ್ಲಿ ಊಟ, ಅದನ್ನು ಕಂಡುಹಿಡಿದವಳು ಪ್ರಸೀದಾ. ಅದಕ್ಕಿಂತ ಉತ್ತಮವಾದ ಜಾಗ ರೀವಾದಲ್ಲಿ ಸಿಗುವುದಿಲ್ಲ ಎನ್ನುವುದು ಅವಳ ಅಭಿಪ್ರಾಯ. ಮುಂಜಾನೆ ಪಚಾಮ ಅನ್ನುವ ಜಾಗಕ್ಕೆ ಹೋಗುವುದಿತ್ತು. ಮುಂಜಾನೆ ಏಳಕ್ಕೆ ರೀವಾದ ಇಂಡಿಯನ್ ಕಾಫೀ ಹೌಸ್‌ನಲ್ಲಿ ಭೇಟಿಯಾಗಿ, ಅವರು "ಇಡ್ಲಿ" ಅನ್ನಲಾದ ತಿನಿಸನ್ನು ತಿಂದು ಬೊಲೇರೊ ಹತ್ತಿದ್ದಾಯಿತು. ಅಷ್ಟುಹೊತ್ತಿಗಾಗಲೇ ನನಗೆ ಈ "ಹಿಂದುಳಿದ ಪ್ರದೇಶ" ತೆಲಂಗಾಣಾದ ಥರದ್ದಲ್ಲ ಅನ್ನಿಸಿತ್ತು. ಖಜುರಾಹೊದಿಂದ ಬರುವ ದಾರಿಯಲ್ಲಿ ಪನ್ನಾ ವನ್ಯಜೀವಿ ಅಭಯಾರಣ್ಯದ ಮುಖ್ಯದ್ವಾರ ಕಾಣಿಸಿತ್ತು. ಸುತ್ತಲೂ ಹಸಿರೇ ಹಸಿರು. ಹಾಗಾದರೆ ನೀರು ಇಲ್ಲದಿರುವುದೇ ಒಂದು ಜಾಗ ಹಿಂದುಳಿಯಲು ಏಕಮಾತ್ರ ಕಾರಣವಲ್ಲವೇ? ಹಾಗೆ ನೋಡಿದರೆ ಅಡವಿ ಪ್ರದೇಶಗಳೂ ಹಿಂದುಳಿವಿಕೆಯಿಂದ ನರಳಬಹುದು. ರೀವಾದಲ್ಲಿ ನೀರಿನ ಸವಲತ್ತು ಇಲ್ಲ ಅಂತ ಅನ್ನಿಸಲಿಲ್ಲ. ಆದರೆ ಎಲ್ಲ ಪ್ರದೇಶಗಳಲ್ಲೂ ಸಮಾನವಾಗಿ ಈ ಸವಲತ್ತು ಒದಗದಿರಬಹುದು. ಆ ಬಗ್ಗೆ ಈ ಮನೆಗಳಿಂದ ಸಂಗ್ರಹಿಸಿರುವ, ಮಿಕ್ಕ ಮಾಹಿತಿಯನ್ನು ಕಂಡಾಗ ಹೆಚ್ಚಿನ ವಿವರಗಳು ತಿಳಿಯುವುದು. ಆದರೆ ಅಲ್ಲಿ ಓಡಾಡಿದಾಗ ಈ ಜಾಗ ಇಷ್ಟು ಹಿಂದುಳಿಯಲು ಸಹಜವಾದ ಕಾರಣಗಳೇ ಇಲ್ಲ ಅನ್ನಿಸಿತು.
ಎರಡನೇ ದಿನ ಸಿದ್ದಿಯ ಕಡೆಗೆ ಹೋದೆವು. ದಾರಿಯಲ್ಲೇ ನಮಗೆ ಯಾರೋ ಅಡ್ಡಗಾಲು ಹಾಕಿದರು. ಸಿದ್ದಿಯಿಂದ ಚಿತ್ರಂಗಿ ಅನ್ನುವ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ವಿಎಚ್‍ಪಿಯವರು ರಸ್ತೆಯನ್ನು ಬಂದ್ ಮಾಡಿದ್ದರು. ಕಾರಣ, ಸೇತುಸಮುದ್ರ ಯೋಜನೆ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧ ಇದೇ ಅಂತ ತಿಳಿಯಿತು.. ಒಂದು ಕಡಿದಾದ ಅಡ್ಡದಾರಿಯಲ್ಲಿ ಹೋಗಿ ಚಿತ್ರಂಗಿ ತಲುಪಿದ್ದಾಯಿತು. ತಮಾಷೆಯೆಂದರೆ, ಅಲ್ಲಿನ ರಸ್ತೆ ಬಂದನ್ನು ಪರಾಮರ್ಶಿಸುತ್ತಿದ್ದ ಪೋಲೀಸರೂ ನಮ್ಮ ಬೊಲೇರೋ ಹತ್ತಿದರು. ಅವರೇ ಚಿತ್ರಂಗಿಗೆ ಅಡ್ಡದಾರಿಯನ್ನು ತೋರಿಸುವುದಾಗಿ ಹೇಳಿದರು. ಪರವಾಗಿಲ್ಲ... ಬ್ಯಾಂಕು ಕಳಿಸಿದ ವಾಹನ ಅಂದ ಕೂಡಲೇ ನಮಗೆ ಎಸ್.ಪಿ.ಜಿ. ರಕ್ಷಣೆ ದೊರಕಿದೆ ಅಂತ ನಾನು ಮನದಲ್ಲೇ ಬೀಗಿದೆ. ದಾರಿಯ ಆಜುಬಾಜುವಿನಲ್ಲಿ ದಟ್ಟ ಅಡವಿ. ಒಂದು ಪಂಚರ್ ಅಂಗಡಿಯೂ ಇಲ್ಲ. ಒಬ್ಬ ಮಳಯಾಳಿಯೂ ಇಲ್ಲ.. ಎಂಭತ್ತು ಕಿಲೋಮೀಟರು ಉದ್ದ ಜನರ ಮುಖವೇ ನೋಡದೇ, ಹೆಚ್ಚಿನ ಜೀವನವನ್ನು ನೋಡದೇ ಚಿತ್ರಂಗಿ ಸೇರಿದೆವು. ಚಿತ್ರಂಗಿಯ ಹೆಚ್ಚಿನ ಸಂಪರ್ಕ ಅದರಾಚೆಬದಿಯ ಸರಿಹದ್ದಿನಿಂದ ಬರುತ್ತದಂತೆ.. ಅದು ಉತ್ತರಪ್ರದೇಶದ ಸರಿಹದ್ದು. ಚಿತ್ರಂಗಿ ತಲುಪಿದಾಗ ನಮಗೆ ಒದಗಿದ ಪೋಲೀಸು ರಕ್ಷಣೆಯ ಗುಟ್ಟು ತಿಳಿಯಿತು.. ನಮ್ಮ ಬೊಲೇರೋದಲ್ಲಿ ಕೂತ ಪೋಲೀಸರು, ಚಿತ್ರಂಗಿ ಠಾಣೆಯವರು.. ಅವರು ಆ ಜಾಗದಿಂದ ಆಚೆಬಿದ್ದು ತಮ್ಮ ಠಾಣೆಗೆ ಬರುವವರಿದ್ದವರು ನಮ್ಮ ವಾಹನವನ್ನು ಉಪಯೋಗಿಸಿದ್ದರಷ್ಟೇ.
ಚಿತ್ರಂಗಿಯ ಮ್ಯಾನೇಜರ್ ಗೊಣಗುವ ಉತ್ಸಾಹೀ ಯುವಕ. ಮದುವೆಯಾಗಿ ಐದು ವರ್ಷವಾದರೂ ಅವನ ಶ್ರೀಮತಿಯೊಂದಿಗೆ ಸಂಸಾರವನ್ನು ಮಾಡಲು ಸಾಧ್ಯವಾಗಿರಲಿಲ್ಲ. ಕಾರಣ: ಅವನ ಪೋಸ್ಟಿಂಗೆಲ್ಲಾ ಚಿತ್ರಂಗಿಯಂತಹ ದೂರದ ಶಾಖೆಗಳಲ್ಲಿ ಆಗಿತ್ತು!! ಆದರೆ ಅವನ ಉತ್ಸಾಹಕ್ಕೇನೂ ಕಮ್ಮಿಯಿರಲಿಲ್ಲ. ಚಿತ್ರಂಗಿಯ ಊಟ ಮತ್ತು ಅಲ್ಲಿ ಸಿಕ್ಕ ಅತಿ ದಟ್ಟವಾದ ಮೊಸರು ನಮ್ಮನ್ನು ಸ್ವರ್ಗಕ್ಕೇ ಒಯ್ಯಿತು. ಮಾಹಿತಿ ಸಂಗ್ರಹ ಇಲ್ಲಿಂದಲೇ ಪ್ರಾರಂಭ ಮಾಡುತ್ತೇನೆಂದು ನನ್ನ ಟೀಮಿನ ಸೂಪರ್‌ವೈಸರ್ ಶಾಶ್ವತೀ ಹೇಳಿದಳು. ಸಂಜೆಗೆ ದಟ್ಟ ಕತ್ತಲಲ್ಲಿ ಹೆದರುತ್ತಲೇ ನಾವು ವಾಪಸ್ಸಾದೆವು. ಸಾಲದ್ದಕ್ಕೆ ಬೊಲೇರೋದ ಡ್ರೈವರ್ ಇದ್ದಕ್ಕಿದ್ದಂತೆ ಗಾಡಿಯನ್ನು ರಸ್ತೆಯ ಬದಿ ನಿಲ್ಲಿಸಿ, ನೀರಿನ ಬಾಟಲಿ ತೆಗೆದು ಕತ್ತಲಲ್ಲಿ ಬಯಲಿಗೆ ಹೋಗಲೆಂದು ಮಾಯವಾದ. ನಿಜಕ್ಕೂ ಆ ಪ್ರಾಂತದಲ್ಲಿ ಹೀಗೆ ಕತ್ತಲಲ್ಲಿ ಅವನು ಗಾಡಿಯನ್ನು ನಿಲ್ಲಿಸುವುದರಲ್ಲಿ ಯಾವುದಾದರೂ ಪಿತೂರಿಯಿರಬಹುದೇನೋ ಎಂದು ನಾನು ಹೆದರಿದೆ. ಗಾಡಿಯಲ್ಲಿ ಇದ್ದವರು ಪ್ರಸೀದಾ ಮತ್ತು ಶಾಶ್ವತೀ.. ಇಬ್ಬರೂ ಹೆಣ್ಣುಮಕ್ಕಳು!! ಆದರೆ ಊಟದ ಬಗ್ಗೆ ಗೊಣಗುತ್ತಲೇ ಆತ ಒಂದು ಕಾಲು ಘಂಟೆಯಲ್ಲಿ ವಾಪಸ್ಸಾದ. ಚಿತ್ರಂಗಿಯ ರಸ್ತೆ, ಅಲ್ಲಿನ ವಾತಾವರಣ ಎಲ್ಲವೂ ನೋಡಿ ಹಿಂದುಳಿದ ಪ್ರದೇಶದ ಮತ್ತೊಂದು ಪರಿಭಾಷೆ ನನಗೆ ಅರ್ಥವಾಗುತ್ತಾ ಹೋಯಿತು.
ಮತ್ತೆ ಮಾರನೆಯ ದಿನ ಇದೇ ಕೆಲಸದ ಮೇಲೆ ಮತ್ತೆ ಥೀಂಥರ್ ಅನ್ನುವ ಜಾಗಕ್ಕೆ ಹೋದೆವು. ಅಲ್ಲಲ್ಲಿ ಜನ ಕಾಣಿಸಿದರೂ, ರಸ್ತೆಯ ಗತಿ ಕಂಡಾಗ ಉಮಾಭಾರತಿಯ "ಬಿಜಲಿ, ಸಡಕ್, ಪಾನಿ"ಯ ರಾಜಕೀಯ ಏನೆಂದು ಅರ್ಥವಾಯಿತು. ಬೆನ್ನು ಉಳಿಯುವುದೋ ಹೇಗೆ ಅನ್ನುವ ಭೀತಿಯಲ್ಲಿಯೇ ಹಳ್ಳಿಯನ್ನು ಸುತ್ತಾಡಿ ಬಂದದ್ದಾಯಿತು. ನಮ್ಮ ಸ್ಯಾಂಪ್ಲಿಂಗ್ ಯೋಜನೆಯನುಸಾರ ಸೆನ್ಸಸ್ ಮಾಹಿತಿಯಿಂದ ಆಯ್ಕೆ ಮಾಡಿದ ಹತ್ತಾರು ಹಳ್ಳಿಗಳ ಹೆಸರಿದ್ದ ನಮ್ಮ ಯಾದಿಯನ್ನು ಶಾಖೆಯ ಮ್ಯಾನೇಜರ್‌ಗೆ ತೋರಿಸಿದೆವು. ಆತ ನಾಲ್ಕು ಹಳ್ಳಿಗಳನ್ನು ಆ ಯಾದಿಯಿಂದ ತೆಗೆಯಬೇಕೆಂದು ಸೂಚಿಸಿದ. "ಯಾಕೆ? ನಮ್ಮ ರ್‍ಯಾಂಡಮ್ ಸಾಂಪಲ್ ಯೋಜನೆಯಡಿ ಈ ಹಳ್ಳಿಗಳಲ್ಲೇ ಮಾಹಿತಿ ಸಂಗ್ರಹಿಸಬೇಕಾಗಿದೆ" ಅಂತ ನಾನು ಹಠದಿಂದೆಂಬಂತೆ ಹೇಳಿದೆ. "ಅಲ್ಲಿಗೆ ನೀವು ಹೋಗಲೇಬೇಕನ್ನುವುದಾದರೆ ಜಿಲ್ಲಾ ಕಲೆಕ್ಟರ್‌ಗೆ ಹೇಳಿಹೋಗಿ, ಜೊತೆಗೆ ನಮ್ಮ ಸಹಕಾರವನ್ನು ಕೋರಬೇಡಿ" ಅಂದ. ಅಲ್ಲಿ ಸ್ಥಳೀಯರೇ ಹೆದರುವಂಥಹ ಮಾತೇನಿರಬಹುದು? ಆದರೂ ನಮ್ಮ ಉದ್ದೇಶ ಇಲ್ಲಿ ಕ್ರಾಂತಿ ಮಾಡುವುದಾಗಲೀ, ಸಾಮಾಜಿಕ/ಕನೂನು ಪರಿಸ್ಥಿತಿಯನ್ನು ಉದ್ಧಾರ ಮಾಡುವುದಾಗಲೀ ಆಗಿರಲಿಲ್ಲವಾದ್ದರಿಂದ, ಈ ಬಗ್ಗೆ ಯೋಚಿಸುತ್ತೇವೆ ಅಂತಷ್ಟೇ ಹೇಳಿ ವಾಪಸ್ಸಾದೆವು.
ವಾಪಸ್ಸಾಗುತ್ತಿದ್ದ ದಾರಿಯಲ್ಲಿ ತಿರುವಿನಲ್ಲಿ ಒಂದು ಸುಂದರ ದೃಶ್ಯ.. ನಾನು ಬೊಲೆರೋ ನಿಲ್ಲಿಸಲು ಹೇಳಿದೆ. ನೀರೇ ಇಲ್ಲ ಎಂದು ನಂಬಿ ಬಂದಿದ್ದ ಜಾಗದಲ್ಲಿ ಕಂಡದ್ದು ಏನು.. ಅತ್ಯಂತ ಅತ್ಯಂದ ಜಲಪಾತ!... ಸುತ್ತ ಮುತ್ತ ತಿರುಗಾಡಿ ನೋಡುತ್ತೇನೆ.. ಒಬ್ಬ ನರಪಿಳ್ಳೆಯೂ ಇಲ್ಲ. ಒಂದೇ ಒಂಡು ಟೂರಿಸ್ಟೂ ಇಲ್ಲ.. ನಮಗೆ ಕಂಡದ್ದು ಕೇವಟೀ ಫಾಲ್ಸ್ ನ ದೃಶ್ಯ. ಹೆಚ್ಚಿನ ಮಾತು ಬೇಡ. ಆಗ ತೆಗೆದ ಎಂಟು ಚಿತ್ರಗಳೇ ಇದರ ಕಥೆಯನ್ನು ಹೇಳುತ್ತದೆ. ಅಲ್ಲಿ ಕೇವಲ ಪಕೃತಿಯನ್ನು ನೋಡುತ್ತಾ ಅರ್ಧಘಂಟೆ ಕಳೆದೆವು.
ರೀವಾದಿಂದ ವಾಪಸ್ಸಾಗುವ ದಾರಿಯಲ್ಲಿ ಸತ್ನಾದಲ್ಲಿ ಗಾಡಿನಿಲ್ಲಿಸಿ ಮತ್ತೆ ಇಂಡಿಯನ್ ಕಾಫಿ ಹೌಸಿನಲ್ಲಿ ಇಡ್ಲಿ ತಿಂದೆವು. ಅಲ್ಲಿನ ಗಲ್ಲಾದ ಮೇಲೆ ಕೂತಿದ್ದದ್ದು ಒಬ್ಬ ಮಳಯಾಳಿ.. ಯಾಕೋ ಉಡುಪಿ ಹೋಟೆಲು ಕಾಣಲಿಲ್ಲ. ಅಲ್ಲಿಂದ ಖಜುರಾಹೊಗೂ ಹೋದೆ. ಆದರೆ ಆ ಬಗ್ಗೆ ಇನ್ನೂಮ್ಮೆ. ಅಹಮದಾಬಾದಿಗೆ ಬಂದು ನನ್ನಕೆಲಸಕ್ಕೆ ತೊಡಗಿದೆ.ಶಾಶ್ವತೀ ಹಾಗೂ ನಮ್ಮ ಟೀಂ ಒಂದು ವಾರದ ನಂತರ ಚಿತ್ರಂಗಿಗೆ ಹೋದರು. ಮಾಹಿತಿ ಸಂಗ್ರಹದ ಕಾಲದಲ್ಲಿ ಪ್ರತಿದಿನ ಸಂಜೆ ನನಗೆ ಒಂದು ಫೋನ್ ಹಾಕಿ ಪ್ರಗತಿಯನ್ನು ತಿಳಿಸುವುದು ಶಾಶ್ವತಿಯ ಜವಾಬ್ದಾರಿ. ಆದರೆ ಅವಳ ಮಾಹಿತಿಯ ಸಂಗ್ರಹಣೆಯ ಎರಡನೆಯ ದಿನವೇ ಅಲ್ಲಿಂದ ರಾತ್ರೆ ಹತ್ತಕ್ಕೆ ಪೋನ್ ಬಂತು.. "ನಮ್ಮನ್ನು ಚಿತ್ರಂಗಿ ಠಾಣೆಯಲ್ಲಿ ಹಿಡಿದಿಟ್ಟಿದ್ದಾರೆ, ಯಾರಿಗಾದರೂ ಪೋನ್ ಮಾಡಿ, ನಾವು ನಿಮಗಾಗಿ ಕೆಲಸ ಮಾಡುತ್ತಿದ್ದೇವೆ ಅಂದರೆ ಯಾರೂ ನಂಬುತ್ತಿಲ್ಲ. ನಮ್ಮ ಬಳಿ ಮಾಹಿತಿ ಸಂಗ್ರಹಣೆಗಾಗಿ ಯಾವ ಪರಿಚಯ ಪತ್ರವೂ ಇಲ್ಲ.. ಬ್ಯಾಂಕಿನ ಮ್ಯಾನೇಜರ್ ರೀವಾಕ್ಕೆ ಹೋಗಿದ್ದಾನೆ." ಎಂದಳು. "ಇದು ಹೇಗಾಯಿತು?" ಕೇಳಿದೆ. "ನಮ್ಮ ಜೀಪು ಕಂಡು ಅವರಿಗೆ ಅನುಮಾನವಂತೆ, ಬಿಳಿ ಸುಮೋ, ಬಿಹಾರದ ನಂಬರು, ಹತ್ತು ಜನ ಒಂದೇ ಗಾಡಿಯಲ್ಲಿ.. ನಕ್ಸಲ್‌ಗಳಿರಬಹುದೆಂದು ಅನುಮಾನ.."..
ರಾಜಾಸ್ಥಾನದಲ್ಲಿ, ಕರ್ನಾಟಕದಲ್ಲಿ, ತಮಿಳಿನಾಡಿನಲ್ಲಿ, ಆಂಧ್ರಪ್ರದೇಶದಲ್ಲಿ ನಮಗಿಷ್ಟವಾದ ಮನೆಗೆ ಹೋಗಿ ಯಾವ ಹಂಗೂ ಇಲ್ಲದೇ ಮಾಹಿತಿ ಸಂಗ್ರಹಿಸಿದ್ದೆವು. ಆದರೆ ಛತ್ತೀಸ್‍ಘಡದಲ್ಲಿ, ಝಾರ್‌ಖಂಡ್‌ನಲ್ಲಿ ಶಾಶ್ವತೀ ಮತ್ತು ಟೀಂ ಹಳ್ಳಿಗಳಿಗೆ ಹೋಗುವ ಮುನ್ನ ನಾನು ಕಲೆಕ್ಟರ್‌ಗೆ, ಎಸ್.ಪಿಗೆ ಅಧ್ಯಯನದ ವಿವರಗಳನ್ನು ನೀಡುತ್ತಾ ಪತ್ರ ಕಳಿಸಿದ್ದೆ. ಅದು ಶಾಶ್ವತಿಯ ಕೋರಿಕೆಯಾಗಿತ್ತು. ಯಾಕೆಂದು ನನಗೆ ಅರ್ಥವಾಗಿರಲಿಲ್ಲ. ಇಲ್ಲಿ ಬ್ಯಾಂಕಿಗಾಗಿ ಈ ಅಧ್ಯಯನವನ್ನು ಮಾಡುತ್ತಿದ್ದುದರಿಂದ ಬಹುಶಃ ಅವಳು ಈ ಪತ್ರದ ಅವಶ್ಯಕತೆ ಇಲ್ಲವೆಂದು ಭಾವಿಸಿದ್ದಳೇನೋ.. ಪೋನಿನ ಮೇಲೆ ಅವಳ ಶಾಪವನ್ನು ಕೇಳಿದ್ದಾಯಿತು. ಅಲ್ಲಿಂದ ಮುಂಬೈ, ಭೋಪಾಲ, ಅಲಹಾಬಾದ್, ರೀವಾ.. ಹೀಗೆ ಅನೇಕ ಜಾಗಗಳಿಗೆ ಫೋನ್ ಹಾಕಿದನಂತದ ಅವಳ ಮತ್ತು ನಮ್ಮ ಟೀಂನ ಬಿಡುಗಡೆಯಾಯಿತು. ಮಧ್ಯಪ್ರದೇಶ, ಝಾರ್‌ಖಂಡ, ಛತ್ತೀಸ್‌ಘಡ ಗಳಿಗೂ - ಮತ್ತು ಕರ್ನಾಟಕ, ಆಂಧ್ರ, ತಮಿಳುನಾಡು, ರಾಜಾಸ್ಥಾನ ಗಳಿಗೂ ಇರುವ ಮೂಲಭೂತ ವ್ಯತ್ಯಾಸದ ಬಗ್ಗೆ ನಾನು ಯೋಚಿಸಿದೆ. ಮ್ಯಾನೇಜರ್ ಯಾಕೆ ಥೀಂಥರ್‌ನ ಕೆಲ ಹಳ್ಳಿಗಳಲ್ಲಿ ಮಾಹಿತಿ ಸಂಗ್ರಹಿಸುವುದು ಬೇಡ ಅಂದದ್ದಕ್ಕೆ ಅರ್ಥ ಕಾಣಿಸತೊಡಗಿತು.. ಅದೇ ಸಮಯಕ್ಕೆ ನಾವು ಚಿತ್ರಂಗಿಯ ಠಾಣೆಯ ಪೋಲೀಸರನ್ನೇ ಅಂದು ನಮ್ಮ ಬೊಲೇರೋದಲ್ಲಿ ಕೂಡಿಸಿಕೊಂಡು ಬಂದಿದ್ದೆವು ಅನ್ನುವುದೂ ನನಗೆ ನೆನಪಾಯಿತು.. ಒಟ್ಟಾರೆ ಅಂದು ನಾನು ದೂರದ ಅಹಮದಾಬಾದಿನಲ್ಲಿದ್ದತೂ ಚಿತ್ರಂಗಿಯಲ್ಲಿದ್ದಷ್ಟೇ ವಿಚಲಿತನಾಗಿದ್ದೆ. ಆದರೆ ಅಲ್ಲಿಗೆ ತಕ್ಷಣಕ್ಕೆ ಹೋಗಲಾಗದ ನನ್ನ ಚಡಪಡಿಕೆ ಮತ್ತು ಅಸಹಾಯಕತೆ ನನ್ನನ್ನು ಅಲ್ಲಡಿಸಿತ್ತು. ಕೇವ್‌ಟಿ ಫಾಲ್ಸ್ ನ ಚಿತ್ರಕ್ಕೂ ಈ ಮನಸ್ಸಿನ ಸ್ಥಿತಿಗೂ ಸಂಬಂಧವೇ ಇರಲಿಲ್ಲವೇನೋ!
ಈ ಜಾಗಗಳಲ್ಲಿ ಸುತ್ತಾಡಿದಾಗ ಒಂದು ವಿಷಯ ಮನಸ್ಸಿಗೆ ತಟ್ಟಿತು.. ಸತ್ನಾ, ಸಿದ್ದಿ, ಚಿತ್ರಂಗಿಯ ದಾರಿಯಲ್ಲಿ ಕಂಡ ಚುರ್‌ಹಟ್.. ಎಲ್ಲಕ್ಕೂ ಒಂದು ಸಾಮಾನ್ಯ ವಿಚಾರವಿದೆ. ಈ ಎಲ್ಲ ಜಾಗಗಳೂ ಒಂದಲ್ಲ ಒಂದು ಕಾಲದಲ್ಲಿ ಅರ್ಜುನ್ ಸಿಂಗ್ ಅವರ ಚುನಾವಣಾ ಕ್ಷೇತ್ರವಾಗಿತ್ತು. ಕೇಂದ್ರದಲ್ಲಿ ಅನೇಕ ದಶಕಗಳಿಂದ ಮಂತ್ರಿಯಾಗಿರುವ, ರಾಜಕೀಯ ಧುರೀಣ ಅರ್ಜುನ್ ಸಿಂಗ್ ಪ್ರತಿನಿಧಿಸಿದ ಕ್ಷೇತ್ರ ಯಾಕೆ ಇಷ್ಟು ಹಿಂದುಳಿದಿದೆ? ಅಲ್ಲಿನ ಜನರೂ ಈ ಪ್ರಶ್ನೆ ಕೇಳುತ್ತಿರುವಂತೆ ಅನ್ನಿಸಿತು.
ಒಟ್ಟಾರೆ, ಮಾಹಿತಿ ಸಂಗ್ರಹಣೆ ಈಗ ಮುಗಿದಿದೆ. ಈ ಮಧ್ಯದಲ್ಲಿ ಶಾಶ್ವತಿ ಮತ್ತವಳ ಸಂಗಡಿಗರನ್ನು ಮತ್ತೊಂದು ಜಾಗದಲ್ಲೂ ಪೋಲೀಸರು ಹಿಡಿದರೆಂದು ಮತ್ತೊಮ್ಮೆ ಸುದ್ದಿ ಬಂತು. ಈ ಬಾರಿಯ ಕಾರಣ "ಬ್ಯಾಂಕಿನವರು ಈ ರೀತಿಯ ಮಾಹಿತಿಯನ್ನು ಹಿಂದೆಂದೂ ಸಂಗ್ರಹಿಸಿಲ್ಲ.. ಹಾಗಾಗಿ ಇದು ಬ್ಯಾಂಕಿನ ಅಧ್ಯಯನ ಆಗುವುದಕ್ಕೆ ಸಾಧ್ಯವಿಲ್ಲ.." ಮಾಹಿತಿಯನ್ನು ಈಗ ಅರಗಿಸಿಕೊಂಡು ಆಬಗ್ಗೆ ಬರೆಯಲು ಪ್ರಾರಂಭಿಸಬೇಕು.ಈ ಎಲ್ಲ ಮಾತುಗಳು ಮುಗಿದರೂ, ರೀವಾದಲ್ಲಿ ರಾಜ್‍ವಿಲಾಸ್‌ನಲ್ಲಿ ನನ್ನನ್ನು ಯಾಕೆ ಉಳಿಸಲಿಲ್ಲ ಅನ್ನುವುದು ನನಗೆ ಇಂದಿಗೂ ಕುತೂಹಲದ ವಿಷಯವಾಗಿಯೇ ಇದೆ. ಒಂದು ಸಂಜೆ ರಾಜ್‌ವಿಲಾಸ್‌ಗೆ ಹೋಗಿ ಊಟವನ್ನೂ ಮಾಡಿದೆ. ಹೋಟೇಲು ಚೆನ್ನಾಗಿಯೇ ಇದೆ. ಆದರೆ ಕುಲಶ್ರೇಷ್ಟನಿಗೆ ಇದಕ್ಕೆ ಖಾಸ್ ಕಾರಣವಿರಬೇಕು. ಕಾರಣ ಏನು ಎಂದು ಕೇಳುವ ಧೈರ್ಯ ಆಗುತ್ತಿಲ್ಲ.

Labels: ಅಧ್ಯಯನ, ಮಧ್ಯಪ್ರದೇಶ, ರಿಸರ್ಚು, ರೀವಾ, ಶ್ರೀರಾಮ್
No comments:
Post a Comment