ರಾಜಾಸ್ಥಾನದ ಡುಂಗರ್-ಪುರದಲ್ಲಿ ನಮ್ಮ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಶಾಶ್ವತೀ ಒಂದು ದಿನ ಬಂದು ಒಂದು ವಿಚಿತ್ರವಾದ ಮಾತನ್ನು ಹೇಳಿದಳು. ಈ ಮಾತು ಮಾಹಿತಿಯನ್ನಾಧರಿಸಿದ್ದಲ್ಲ, ಬದಲಿಗೆ ತಾನು ಗಮನಿಸಿದ್ದ ವಿಷಯವೆಂದೂ ಹೇಳಿದಳು. ನಾವುಗಳು ಮಾಹಿತಿ ಸಂಗ್ರಹಿಸುತ್ತಿದ್ದದ್ದು ಬಡ ಕುಟುಂಬಗಳು ತಮ್ಮ ಆರ್ಥಿಕ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಹಾಗೂ ಎಲ್ಲೆಲ್ಲಿಂದ ಸಾಲ ಪಡೆಯುತ್ತಾರೆ ಅನ್ನುವ ವಿಷಯದ್ದಾಗಿತ್ತು. ಮಾಹಿತಿ ಸಂಗ್ರಹಿಸುವುದು ಒಂದು ಕೆಲಸವಾದರೆ ಆ ಮಾಹಿತಿಯನ್ನು ಅರ್ಥೈಸಲು ಕೆಲ ಒಳನೋಟಗಳೂ ಅವಶ್ಯಕವಾಗುತ್ತವೆ. ಹೀಗಾಗಿ ಶಾಶ್ವತೀ ಹೇಳಿದ್ದ ಮಾತಿಗೆ ನಾನು ಮಹತ್ವ ನೀಡುವ ಅಗತ್ಯವಿತ್ತು.
ಶಾಶ್ವತೀ ನನಗೆ ಹೇಳಿದ ಆ ಗಮ್ಮತ್ತಿನ ವಿಷಯವೇನೆಂದರೆ: "ಸ್ಕೂಲಿಗೆ ಹೋಗುವ ಮಕ್ಕಳಿರುವ ಮನೆಗಳಲ್ಲಿ ಗೋಡೆಗಡಿಯಾರಗಳು ಖಂಡಿತವಾಗಿಯೂ ಇರುತ್ತವೆ ಅನ್ನುವುದು ನನ್ನ ಗಮನಕ್ಕೆ ಬಂದಿದೆ." ಸಾಮಾನ್ಯವಾಗಿ ಮಾಹಿತಿ ಸಂಗ್ರಹಣೆಯಲ್ಲಿ ಇಂಥಹ ಸೂಕ್ಷ್ಮ ಗ್ರಹಿಕೆಗಳು ನಮಗೆ ಮಾಹಿತಿಯನ್ನು ಅರ್ಥೈಸಲು ಹೆಚ್ಚು ಸಹಾಯ ಉಂಟುಮಾಡುತ್ತದೆ. ಹೀಗಾಗಿ ಶಾಶ್ವತೀ ಹೇಳಿದ ಈ ಮಾತಿನಿಂದಾಗಿ ನಾನು ಅದರ ಮಹತ್ವವನ್ನು ಗ್ರಹಿಸಲು ಯತ್ನಿಸಿದೆ. ಇದನ್ನು ನಾನು ಬರೆಯುತ್ತಿದ್ದ ವರದಿಯಲ್ಲಿ ಅರ್ಥೈಸಲು ಮಾನಸಿಕ ತಯಾರಿಯನ್ನೂ ನಡೆಸಿದ್ದೆ - ಬಡ ಗ್ರಾಮೀಣ ಕುಟುಂಬಗಳನ್ನು ಪರಿಗಣಿಸಿದಾಗ ಅವರ ಹೆಚ್ಚಿನ ಕೆಲಸ ಕೃಷಿಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಯದ ನಿಖರತೆಯ ಮೇಲೆ ನಡೆಯುವ ಚಟುವಟಿಕೆಗಳು ಬಹಳ ಕಡಿಮೆ. ಒಂದರ್ಧ ಘಂಟೆ ಹಿಂದೆ-ಮುಂದೆಯಾದರೂ ಆಕಾಶ ಬೀಳುವಂತಹದ್ದು ಏನೂ ಇರುವುದಿಲ್ಲ. ಹೀಗೆ ಯೋಚಿಸಿದಾಗ ಸಮಯಾನುಸಾರ ನಿಖರವಾಗಿ ನಡೆವ ಒಂದು ಚಟುವಟಿಕೆ ವಿದ್ಯೆಗೆ ಸಂಬಂಧಿಸಿದ್ದು. ಅಲ್ಲಿ ಮಕ್ಕಳ ಸಮೂಹವನ್ನು ಒಂದೆಡೆ ಜೋಡಿಸಿ ಪಾಠಮಾಡಬೇಕಾದ್ದರಿಂದ ಸಮಯದ ಮಹತ್ವ ಮುಖ್ಯವಾಗುತ್ತದೆ. [ಹಾಗೆಯೇ ಸ್ವ-ಸಾಹಾಯ ಗುಂಪುಗಳಿರುವ ಜಾಗದಲ್ಲೂ ಇದರ ಮಹತ್ವವಿರುತ್ತದೆ ಎಂದೂ ಆಲೋಚಿಸಿದೆ, ಆದರೆ ಈ ಜಾಗದಲ್ಲಿ ಹೆಚ್ಚು ಅಂಥ ಗುಂಪುಗಳಿರಲಿಲ್ಲ]. ಈ ಕಥೆಯನ್ನು ನಾನು ಇನ್ನೂ ಹೆಚ್ಚು ಬೆಳೆಸಲು ತಯಾರಿದ್ದೆ ಆದರೆ ಒಮ್ಮೆ ಮಾಹಿತಿಯನ್ನು ಪರೀಕ್ಷಿಸುವುದು ಒಳ್ಳೆಯದೆನ್ನಿಸಿ ನೋಡಿದರೆ ಯಾವರೀತಿಯಿಂದಲೂ ಶಾಶ್ವತೀ ಹೇಳಿದ್ದನ್ನು ನಾನು ಸಮರ್ಥಿಸಿಕೊಳ್ಳುವ ಮಾಹಿತಿ ನನಗೆ ಸಿಗಲಿಲ್ಲ.
ಸಂಶೋಧನೆ ಮಾಡುವಾಗ ಈ ಥರದ ’ಒಳನೋಟ’ಗಳು ನಮಗೆ ಸಿಗುತ್ತಲೇ ಇರುತ್ತವೆ. ಆದರೆ ಅದು ಮಾಹಿತಿಯಾಧಾರವಾಗಿದೆಯೇ ಇಲ್ಲವೇ ಅನ್ನುವುದು ಗಮ್ಮತ್ತಿನ ವಿಷಯವಾಗುತ್ತದೆ. ನಮಗೆ ಸಂಶೋಧನಾ ಪದ್ಧತಿಯನ್ನು ಅರ್ಥಮಾಡಿಕೊಳ್ಳಲೆಂದು ಕೆಲವು ವಿಶೇಷ ಲೆಕ್ಚರ್ ಕೊಟ್ಟಿದ್ದ ಅಹಮದಾಬಾದಿನ ಪ್ರೊಫೆಸರ್ ಎಂ.ವೈ. ತ್ರಿವೇದಿ ಒಮ್ಮೆ ಹೇಳಿದ್ದರು. "Torture the data, and the data will confess" [ಮಾಹಿತಿಗೆ ಚಿತ್ರಹಿಂಸೆ ಕೊಟ್ಟರೆ ಅದು ತಪ್ಪೊಪ್ಪಿಗೆ ನೀಡುತ್ತದೆ]. ಹಲವಾರು ಬಾರಿ ನಾವು ಮನಸ್ಸಿನಲ್ಲಿ ಒಂದು ತೀರ್ಮಾನವನ್ನಿಟ್ಟುಕೊಂಡೇ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತೇವೆ. ಆದರೆ ಮಾಹಿತಿ ನಮ್ಮ ಅನಿಸಿಕೆಗೆ - ಗ್ರಾಂಡ್ ಥಿಯರಿಗೆ - ವಿರುದ್ಧವಾಗಿದ್ದರೆ ಏನು ಮಾಡುವುದು? ಈ ಇಂಥಹ ಒಳನೋಟವನ್ನು ಸಾಕಾರಗೊಳಿಸಲಾಗದ ಕ್ಷಣಗಳೇ ಸಂಶೋಧಕನ ಜೀವನದಲ್ಲಿನ ಚಡಪಡಿಕೆಯ ಕ್ಷಣಗಳೆನ್ನಬಹುದು.
ಆದರೆ ನನಗೆ ಶಾಶ್ವತೀ ನೀಡಿದ ಒಳನೋಟ ಮತ್ತು ಅದರ ಅರ್ಥೈಸುವಿಕೆಯ ಕಾಯಕ ಎಷ್ಟು ಆಕರ್ಷಕವಾಗಿಬಿಟ್ಟಿತ್ತೆಂದರೆ ನಾನು ನನ್ನ ಕುತೂಹಲವನ್ನು ಇನ್ನೂ ಹೆಚ್ಚು ವಿಸ್ತರಿಸಿದೆ. ಕೈಗಡಿಯಾರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಮಾತು ನಿಜವೇ? ಅನ್ನುವುದು ನನ್ನ ಕುತೂಹಲವಾಗಿತ್ತು. ಆ ಮಾಹಿತಿಯೂ ನಮ್ಮ ಬಳಿಯಿತ್ತು. ಒಟ್ಟಾರೆ ಸ್ಕೂಲಿಗೆ ಹೋಗುವ ಮಕ್ಕಳಿದ್ದ ಮನೆಗಳಲ್ಲೆಲ್ಲಾ ಒಂದಾದರೂ ಗಡಿಯಾರವಿದ್ದರೆ ಈ ಒಳನೋಟ ನಿಲ್ಲುತ್ತಿತ್ತು. ಆದರೆ ಅಲ್ಲಿಯೂ ಮಾಹಿತಿ ನನಗೆ ಕೈ ಕೊಟ್ಟಿತು. ಆದರೆ ಆ ಮಾಹಿತಿಯನ್ನು ಪರಿಶೀಲಿಸುತ್ತಲೇ ನನಗೆ ತಿಳಿದ ಮತ್ತೊಂದು ಆಸಕ್ತಿಯ ವಿಷಯವೆಂದರೆ - ನಾವು ಮಾಹಿತಿ ಸಂಗ್ರಹಿಸಿದ ೪೧೬ ಬಡವರ ಮನೆಗಳಲ್ಲಿ ೩೨ ಪ್ರತಿಶತ ಮನೆಗಳಲ್ಲಿ ಗಡಿಯಾರವೇ ಇಲ್ಲ, ೪೫ ಪ್ರತಿಶತ ಮನೆಗಳಲ್ಲಿ ಗೋಡೆಗಡಿಯಾರ ಮಾತ್ರವಿದೆ. ೧೭ ಪ್ರತಿಶತ ಮನೆಗಳಲ್ಲಿ ಗೋಡೆ ಮತ್ತು ಕೈಗಡಿಯಾರಗಳಿವೆ ಮತ್ತು ಕೇವಲ ೬ ಪ್ರತಿಶತ ಮನೆಗಳಲ್ಲಿ ಗೋಡೆಗಡಿಯಾರವೇ ಇಲ್ಲದೇ ಕೈಗಡಿಯಾರ ಮತ್ರವಿದೆ.
ಮೇಲಿನ ಮಾಹಿತಿಯ ಒಳನೋಟ ಏನಿರಬಹುದು? ಸ್ವಲ್ಪ ಯೋಚಿಸಿ ನೋಡಿದಾಗ ನನಗೆ ಹೊಳೆದದ್ದೇ ಬೇರೆ. ಅದೇನೆಂದರೆ: ಅತೀ ಬಡ ಕುಟುಂಬಗಳು ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳುವ ಪರಿಯಬಗ್ಗೆ ಒಂದು ಹೊಸ ಅರ್ಥ ಹುಟ್ಟಿಕೊಳ್ಳುತ್ತಿರುವಂತೆ ಅನ್ನಿಸಿತು. ಗೋಡೆ/ಕೈ ಗಡಿಯಾರವಿದ್ದ ಕುಟುಂಬಗಳ ಆದಾಯಕ್ಕಿಂತ ಅವು ಇಲ್ಲದಿದ್ದ ಕುಟುಂಬಗಳ ಆದಾಯ ಸುಮಾರಷ್ಟು ಕಡಿಮೆಯಿತ್ತು. ಸಾಮಾನ್ಯವಾಗಿ ಕುಟುಂಬಗಳು ಸಾಮೂಹಿಕವಾಗಿ ಉಪಯೋಗಿಸಲ್ಪಡುವ ವಸ್ತುಗಳನ್ನು [ಗೋಡೆಗಡಿಯಾರ]ಮೊದಲು ಕೊಳ್ಳುತ್ತಿದ್ದವು, ಮತ್ತು ಎರಡನೆಯ ಹಂತದಲ್ಲಿ ಖಾಸಗೀ ಉಪಯೋಗದ ವಸ್ತುಗಳನ್ನು [ಕೈಗಡಿಯಾರ] ಕೊಳ್ಳುತ್ತಿದ್ದುವು. ಹಾಗೂ ಗೋಡೆ ಮತ್ತು ಕೈಗಡಿಯಾರಗಳೆರಡೂ ಇದ್ದ ಮನೆಗಳ ಆದಾಯ ಯಾವುದಾದರೂ ಒಂದೇ ಇದ್ದ ಮನೆಗಳಿಗಿಂತ ಸರಾಸರಿ ಹೆಚ್ಚಾಗಿ ಇರುತ್ತಿತ್ತು! ಈ ಒಳನೋಟವನ್ನು ನಾನು ಇತರ ಆಸ್ತಿಗಳ ಮೇಲೂ ಪ್ರಯೋಗ ಮಾಡಿ ನೋಡಿದ್ದೆ - ಸಾಮಾನ್ಯವಾಗಿ ಮೊದಲಿಗೆ ಎಲ್ಲರಿಗೂ ಉಪಯೋಗವಾಗುವಂತಹ ವಸ್ತು/ಆಸ್ತಿಗಳನ್ನು ಕೊಂಡ ಮೇಲೆಯೇ ಖಾಸಗೀ ಉಪಯೋಗದ ವಸ್ತುಗಳ ಮೇಲಿನ ಖರ್ಚು ಪ್ರಾರಂಭವಾಗುತ್ತಿತ್ತು ಅನ್ನುವುದು ನಮ್ಮ ಮಿಕ್ಕ ಅಧ್ಯಯನಗಳಿಂದಲೂ ವೇದ್ಯವಾಯಿತು.
ಡುಂಗರ್-ಪುರದಲ್ಲಿ ನಾವು ಬಡಕುಟುಂಬಗಳಿಂದ ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿದುಬಂದದ್ದು ಮತ್ತಷ್ಟು. ಸುಮಾರು ಎಲ್ಲ ಮನೆಗಳಲ್ಲೂ [ಅವರೆಷ್ಟೇ ಬಡವರಾಗಿದ್ದರೂ] ಚಾರ್-ಪಾಯಿ [ನೂಲಿನ ಮಂಚ] ಇದ್ದೇ ಇರುತ್ತಿತ್ತು. ಅಷ್ಟೇ ಮಾತ್ರವಲ್ಲ, ಮನೆಯಲ್ಲಿದ್ದ ಪ್ರತಿ ಹಿರಿಯ ವ್ಯಕ್ತಿಗೊಂದರಂತೆ ಚಾರ್-ಪಾಯಿಗಳು ಮನೆಯಲ್ಲಿರುತ್ತಿದ್ದುವು. ಇದೂ ಮಲ್ಟೀಪರ್ಪಸ್ ವಸ್ತುವೇ. ಅತಿಥಿಗಳು ಬಂದಾಗ ಕೂರಲೂ ಇದೇ, ರಾತ್ರೆ ಮಲಗಲೂ ಇದೇ. ಹೆಚ್ಚೆಚ್ಚು ಕಚ್ಚಾ ಮನೆಗಳಿದ್ದ ಜಾಗದಲ್ಲಿ, ಒಳ್ಳೆಯ ನೆಲವಿಲ್ಲದ ಜಾಗದಲ್ಲಿ ಚಾರ್-ಪಾಯಿಗಳು ಹೆಚ್ಚು. ಚಾರ್-ಪಾಯಿಗಳನ್ನು ಬಿಟ್ಟರೆ ಎಲ್ಲರ ಹೆಚ್ಚಿನ ಮನೆಗಳಲ್ಲಿ ಕಾಣಸಿಗುವುದು ದೊಡ್ಡ ದೊಡ್ಡ ಪಾತ್ರೆಗಳ ಭಂಡಾರ. ಗುಜರಾತ್ ರಾಜಾಸ್ಥಾನಗಳಲ್ಲಿ ತಮ್ಮ ಮನೆಯಲ್ಲಿರುವ ದೊಡ್ಡ ಪಾತ್ರೆಗಳನ್ನು ಮುಂದಿನ ಕೋಣೆಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು ವಾಡಿಕೆ. ಎಷ್ಟು ದೊಡ್ಡ ಪಾತ್ರೆಗಳಿದ್ದರೆ [ಬಡತನದ ನಡುವೆಯೇ] ಅಷ್ಟು ಶ್ರೀಮಂತರೆಂದು ತೋರಿಸಿಕೊಂಡಂತೆ! ಮತ್ತು ಈ ಎರಡೂ ವಸ್ತುಗಳನ್ನು ಬಿಟ್ಟರೆ ಹೆಚ್ಚು ಮನೆಗಳಲ್ಲಿದ್ದ ವಸ್ತು ಗಡಿಯಾರ!
ನಮ್ಮ ಮಾಹಿತಿಯ ಪ್ರಕಾರ ವರ್ಷ ೨೦೦೦ದಲ್ಲಿ ಬಹಳಷ್ಟು ವಸ್ತುಗಳ ಖರೀದಿಯನ್ನು ಈ ಬಡಕುಟುಂಬಗಳವರು ಮಾಡಿದ್ದರು - ಮನೆ ರಿಪೇರಿ ಮಾಡಿಸುವುದು, ಹೊಸ ಸೈಕಲ್ ಕೊಳ್ಳುವುದು, ಹೊಸ ಗಡಿಯಾರಗಳನ್ನು ಕೊಳ್ಳುವುದು ಹೀಗೆ ಆ ವರ್ಷ ಅದ್ಭುತ ಲಾಟರಿಯ ವರ್ಷದಂತೆ ಕಂಡಿತು. ಬಹುಶಃ ಯಾವಾಗಲೂ ಬರಪೀಡಿತವಾಗಿರುವ ಜಾಗದಲ್ಲಿ ಆ ವರ್ಷ ಒಳ್ಳೆಯ ಮಳೆಯಾಗಿದ್ದಿರಬಹುದು ಎಂಬ ನಮ್ಮ ’ಒಳನೋಟ’ವನ್ನು ಪರೀಕ್ಷಿಸಲು ಅಲ್ಲಿ ಸ್ವ-ಸಹಾಯ ಸಂಸ್ಥೆ ನಡೆಸುತ್ತಿದ್ದ ದೇವೀಲಾಲ್ ವ್ಯಾಸರ ಜೊತೆ ಮಾತನಾಡಿದರೆ ತಿಳಿದದ್ದೇ ಬೇರೆ. ಆ ವರ್ಷ್ ದಶಕದ ಅತೀ ಕೆಟ್ಟ ಬರಗಾಲವಾಗಿತ್ತಂತೆ. ಹಾಗಾಗಿ ರಾಜ್ಯ ಸರಕಾರ ಬರಪೀಡಿತ ಜಾಗಗಳಿಗೆ ಸಹಾಯ ಘೋಷಿಸಿ ಉಪಾಧಿಯ ಕೆಲಸಗಳನ್ನು ಕೈಗೊಂಡಿತ್ತಂತೆ. ಹೀಗಾಗಿ ಹೆಚ್ಚುಜನರಿಗೆ ಕೃಷಿಯೇತರ ಕೆಲಸ ದೊರೆತದ್ದರಿಂದ ಆದಾಯ ಹೆಚ್ಚಿ ಇವುಗಳನ್ನೆಲ್ಲಾ ಕೊಂಡಿದ್ದರು. ಸಾಯಿನಾಥ್ ಅವರ ಪುಸ್ತಕದ ಶೀರ್ಷಿಕೆಯೇ "Everybody loves a good drought" [ಎಲ್ಲರಿಗೂ ಒಂದು ಉತ್ತಮ ಬರಗಾಲವೆಂದರೆ ವಿಶೇಷ ಪ್ರೀತಿ] ಇದು ಎಷ್ಟು ನಿಜ ಎಂದು ಡುಂಗರ್-ಪುರದಿಂದ ಬಂದಾಗ ತಿಳಿಯಿತು.
No comments:
Post a Comment