ಕರೀಂನಗರ ಜಿಲ್ಲೆಯ ಕೊತ್ತಪಲ್ಲಿ ಕೈಮಗ್ಗ ಸಹಕಾರ ಮಂಡಲಿಯ ಅಧ್ಯಕ್ಷರಾದ ಕಮಟಂ ರಾಜೇಶಂ ಮೆಲುದನಿಯಲ್ಲಿ ತಮ್ಮ ಮಂಡಳಿಯ ಕೆಲಸಕಾರ್ಯಗಳನ್ನು ವಿವರಿಸುತ್ತಾ ಹೇಳುತ್ತಾರೆ: "ನಾಲ್ಕಾರು ವರ್ಷಗಳ ಕೆಳಗೆ ನಾವು ೯೫ ಲಕ್ಷ ರೂಪಾಯಿಯ ವ್ಯಾಪಾರ ಮಾಡಿದ್ದೆವು. ಈ ವರ್ಷ ಅದು ೭೦ ಲಕ್ಷಗಳಿಗೆ ನಿಲ್ಲಲಿದೆ. ಹಾಗೂ ಆ ಸ್ಥರದಲ್ಲೇ ನಮ್ಮ ವ್ಯಾಪಾರ ಸ್ಥಗಿತಗೊಳ್ಳುತ್ತದೆ ಅನ್ನಿಸುತ್ತದೆ."
"ಮುಂದಿನ ಐದಾರು ವರ್ಷಗಳಲ್ಲಿ ನಿಮ್ಮ ವ್ಯಾಪಾರ ಒಂದು ಕೋಟಿ ದಾಟಬಹುದು" ಅನ್ನುವ ನನ್ನ ಪ್ರಶ್ನೆಗೆ ಅಡ್ಡಡ್ಡವಾಗಿ ಆತ ಕಡಾಖಂಡಿತವಾಗಿ ತಲೆಯಾಡಿಸುತ್ತಾರೆ. ಕೃಷಿಯ ನಂತರ ಅತೀ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿರುವ ಕೈಮಗ್ಗ ಕ್ಷೇತ್ರದಲ್ಲಿ ೧೨೪ ಲಕ್ಷ ಜನ [ಮತ್ತು ಅವರ ಕುಟುಂಬಗಳು] ಕೆಲಸಮಾಡುತ್ತಿದ್ದಾರೆ ಎಂದು ವಸ್ತ್ರ ಮಂತ್ರಾಲಯದ ವರದಿ ಹೇಳುತ್ತದೆ. ಆದರೆ ಕೈಮಗ್ಗ ಕ್ಷೇತ್ರ ಕ್ಷೀಣಿಸುತ್ತಿದೆ ಎಂಬ ಮಾತು ಎಲ್ಲೆಡೆಯೂ ಕೇಳಿಬರುತ್ತಿದೆ. ಹೀಗೆ ಅತೀ ಹೆಚ್ಚು ಜನರಿಗೆ ಉಪಾಧಿ ಕಲ್ಪಿಸಿರುವ ಕ್ಷೇತ್ರ ಅವಸಾನದಲ್ಲಿದೆ ಎನ್ನುವ ಚರ್ಚೆ ಬಹಳ ಸಮಯದಿಂದ ನಡೆದಿದೆಯಾದರೂ ಅದಕ್ಕೆ ನಾವು ಸರಳ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕೊತ್ತಪಲ್ಲಿ ಮಂಡಲಿ - ಇತರ ಕೈಮಗ್ಗ ಮಂಡಲಿಗಳಂತಿಲ್ಲ. ಕೈಮಗ್ಗ ಕೆಲಸ ಇರುವ ಜಾಗದಲ್ಲಿ ಮಾಸ್ಟರ್ ವೀವರ್ ಅನ್ನುವ ಮಧ್ಯವರ್ತಿ ಇರುವುದು ಸಹಜ. ಕೃಷಿಯಲ್ಲಿ ’ಅಡತಿಯ’ ಇದ್ದಹಾಗೆ ಈತ ನೇಕಾರರಿಗೆ ಹರ್ತಾ ಕರ್ತಾ. ಅವರಿಗೆ ಆರ್ಡರುಗಳನ್ನು ಜೋಡಿಸುವುದರಿಂದ ಹಿಡಿದು ಅವರು ನೇಯ್ದ ಬಟ್ಟೆಗಳನ್ನು ಮಾರಾಟ ಮಾಡುವವರೆಗೂ ಅವನದ್ದು ಮಹತ್ವದ ಪಾತ್ರವಿರುತ್ತದೆ. ಆದರೆ ಕರೀಂನಗರ ಜಿಲ್ಲೆಯಲ್ಲಿ ಮಾಸ್ಟರ್ ವೀವರ್ ಪರಿಪಾಠವೇ ಇಲ್ಲ. ಮಂಡಲಿಗೆ ಸರಕಾರದ ಯಾವುದೋ ಯೋಜನೆಯನ್ವಯ ಬಂದ ಹಣದಲ್ಲಿ ಕೆಲವು ಫ್ರೇಮ್ ಮಗ್ಗಗಳನ್ನು ತಂದು ತಂದು ಕೇಂದ್ರೀಕೃತ ಕಾರ್ಯಕ್ಷೇತ್ರದಲ್ಲಿ ನೇಯ್ಗೆಯನ್ನು ಮಾಡಿಸುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಈ ಕೆಲಸ ಮನೆಯಲ್ಲಿಯೇ ನಡೆಯುತ್ತದೆ - ಮಹಿಳೆಯರು ನೂಲನ್ನು ಸುತ್ತಿ ಮಗ್ಗಕ್ಕೆ ಏರಿಸುವುವ ಕೆಲಸವನ್ನೂ, ಆಗಾಗ ನೇಯ್ಗೆಯ ಕೆಲಸವನ್ನೂ ಮಾಡುತ್ತಾರೆ.
ಕೊತ್ತಪಲ್ಲಿ ಮಂಡಲಿಯಲ್ಲಿ ನೇಯುತ್ತಿದ್ದವರಲ್ಲಿ ಮೂರುಪಾಲು ಜನ ಕನ್ನಡಕ ಧರಿಸಿದ್ದರು.
ಒಬ್ಬನನ್ನು ಬಿಟ್ಟರೆ ಎಲ್ಲರೂ ನಲವತ್ತರ ವಯಸ್ಸು ದಾಟಿದವರು. ಕೈಮಗ್ಗ ನೇಯ್ಗೆಯ ಕಥೆಯನ್ನು ಹೇಳಲು ಮುಂದಿನ ತಲೆಮಾರಿನಲ್ಲಿ ಹೆಚ್ಚು ಜನರು ಇರುವುದಿಲ್ಲವೇ? ರಾಜೇಶಂ ತಮ್ಮ ಮಂಡಲಿಯ ವ್ಯಾಪಾರ ಒಂದು ಕೋಟಿ ದಾಟುವುದಿಲ್ಲ ಅನ್ನುವುದಕ್ಕೆ ಮೂಲ ಕಾರಣ ನೇಯುವವರು ಕಡಿಮೆಯಾಗುತ್ತಿದ್ದಾರೆ, ನೇಯ್ಗೆ ತಿಳಿದವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಅನ್ನುವುದು. ಹೀಗಾಗಿ ಈ ವೃತ್ತಿ ಅವಸಾನದ ದಿಕ್ಕಿನಲ್ಲಿದೆ ಅನ್ನುವ ಕಾಳಜಿ ಜನಜನಿತವಾಗಿದೆ. ಇತರೆ ಜಿಲ್ಲೆಗಳಲ್ಲಿ ಮಾಸ್ಟರ್ ವೀವರುಗಳೂ ಕೈಮಗ್ಗ ಕ್ಷೇತ್ರವನ್ನು ಬಿಟ್ಟು ಇತರೆ ವ್ಯಾಪಾರಗಳತ್ತ ವಾಲುತ್ತಿದ್ದಾರಂತೆ.
ಆದರೆ ಕೊತ್ತಪಲ್ಲಿ ಮಂಡಲಿಯ ಬಿಕ್ಕಟ್ಟೇ ಒಟ್ಟಾರೆ ಕೈಮಗ್ಗ ಕ್ಷೇತ್ರದ ಬಿಕ್ಕಟ್ಟೂ ಸಹ. ಅಲ್ಲಿ ಹೆಚ್ಚಾಗಿ ಒಂದು ಪದರದ ಪಂಚೆ, ಟವಲ್ಲು ಮತ್ತು ದುಪಟಿಗಳನ್ನು ನೇಯುತ್ತಾರೆ. ಈ ಎಲ್ಲ ರೀತಿಯ ವಸ್ತ್ರಗಳನ್ನು ಮಿಲ್ಲುಗಳು ತಯಾರಿಸುತ್ತವೆ ಹಾಗೂ ಅದರ ಬೆಲೆ ಕೈಮಗ್ಗಕ್ಕಿಂತ ಅಗ್ಗವಾಗಿರುತ್ತದೆ. ಹೀಗಾಗಿ ನೇಕಾರರ ಸಹಜ ಮಾರುಕಟ್ಟೆಯಾದ ತಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ಮಿಲ್ಲಿನ ಬಟ್ಟೆಗಳ ಮಾರಾಟವೇ ಹೆಚ್ಚಾಗಿದೆ ಅನ್ನುವುದರಲ್ಲಿ ಆಶ್ಚರ್ಯವಿಲ್ಲ. ಕೊತ್ತಪಲ್ಲಿಯ ಬಟ್ಟೆಗಳನ್ನು ಆಪ್ಕೋದವರು ಕೊಂಡು ತಮ್ಮ ಎಂಪೋರಿಯಂಗಳ ಮೂಲಕ ಮಾರಾಟ ಮಾಡುತ್ತಾರಂತೆ. ಆಪ್ಕೋ ಅನ್ನುವ ಸರಕಾರಿ ಸಂಸ್ಥೆ ಅದನ್ನು ಕೊಳ್ಳದಿದ್ದರೆ ಅವರಿಗೆ ಮಾರುಕಟ್ಟೆಯೇ ಇಲ್ಲ!
ಕೈಮಗ್ಗ ಕ್ಷೇತ್ರ ತನ್ನ ಪ್ರತ್ಯೇಕತೆಯನ್ನು ಸ್ಥಾಪಿಸಿಕೊಳ್ಳುವುದು ಸಾಧ್ಯವೇ? ಪ್ರತ್ಯೇಕತೆ ಸ್ಥಾಪಿಸಿಕೊಳ್ಳಬೇಕಾದರೆ ಆ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಕೌಶಲ್ಯವಿರುವ ಕುಶಲ ಕರ್ಮಿಗಳ ಅವಶ್ಯಕತೆ ಇರುತ್ತದೆ. ಪೋಚಂಪಲ್ಲಿ, ಕಂಚಿ, ಗದ್ವಾಲ್ ಮಂಗಳಗಿರಿ, ಬನಾರಸಿ ಸೀರೆಗಳನ್ನು ನೇಯುವ ಕುಶಲತೆ ಕ್ಷಣಮಾತ್ರದಲ್ಲಿ ಪ್ರಾಪ್ತವಾಗುವುದಿಲ್ಲ. ಹೀಗೆ ಹೆಚ್ಚಿನ ಕೌಶಲ್ಯವನ್ನು ಪಡೆಯಬೇಕಾದರೆ, ಆ ಮಟ್ಟಕ್ಕೆ ಏರಬೇಕಾದರೆ ಒಂದು ಕೆಳಗಿನ ಮಟ್ಟದಲ್ಲಿ ಪ್ರಾರಂಭಿಸಬೇಕು ಹಾಗೂ ಆ ಕೌಶಲ್ಯವನ್ನು ಪ್ರಾಪ್ತಿ ಮಾಡಿಕೊಳ್ಳಬಹುದಾದ ದೊಡ್ಡ ಮಟ್ಟದ ಮಧ್ಯಮಗತಿ ಕೌಶಲ್ಯದ ಮಾರುಕಟ್ಟೆ ಇರಬೇಕು. ಆ ಮಧ್ಯಮ ಮಟ್ಟ ಕೈಮಗ್ಗದಲ್ಲಿ ಅದೃಶ್ಯವಾಗುತ್ತಿದೆ.
ಕೃಷಿಯಲ್ಲಿ ಸಬ್ಸಿಡಿಗಳನ್ನು ಕೊಟ್ಟ ಹಾಗೆಯೇ ಕೈಮಗ್ಗದಲ್ಲೂ ಕೊಡಬೇಕು ಎಂದು ವಾದಿಸುವ ಮಂದಿ ಇದ್ದಾರೆ. ಆದರೆ ಅದೂ ಸರಳವಾದ ಉಪಾಯವಲ್ಲವೇನೋ. ಹಿಂದ ಸರಕಾರ ಜನತಾ ಸೀರೆ ಪಂಚೆಗಳ ಒಂದು ಯೋಜನೆಯನ್ನು ಹಮ್ಮಿತ್ತು. ಆ ಯೋಜನೆಯಡಿ ಕೈಮಗ್ಗದ ಕ್ಷೇತ್ರ ಉತ್ಪಾದಿಸಿದ ಈ ಸೀರೆ ಪಂಚೆಗಳನ್ನು ಸರಕಾರ ನಿಗದಿತ ಬೆಲೆಗೆ ಕೊಂಡು ಪಿ.ಡಿ.ಎಸ್ [ರೇಷನ್ ಅಂಗಡಿಗಳ] ಮೂಲಕ ಮಾರಾಟ ಮಾಡುವ ಯೋಜನೆಯಾಗಿತ್ತು. ಇದನ್ನು ತುಸುಮಟ್ಟಿಗೆ ಕೃಷಿಯಲ್ಲಿ ಅಕ್ಕಿಯನ್ನು ಮಿನಿಮಂ ಸಪೋರ್ಟ್ ಪ್ರೈಸ್ ಮೂಲಕ ಕೊಂಡು ರೇಷನ್ ಅಂಗಡಿಗಳ ಮೂಲಕ ಸರಬರಾಜು ಮಾಡುವ ಯೋಜನೆಯ ಹಾಗೆಯೇ ರೂಪಿಸಲಾಗಿತ್ತು. ಆಗ ಬೇರೆ ವಸ್ತ್ರಗಳನ್ನು ನೇಯಬಲ್ಲ ಕುಶಲ ಕರ್ಮಿಗಳೂ ಸಸ್ತಾ ಸೀರೆ ಪಂಚೆಗಳನ್ನು ನೇಯುವುದಕ್ಕೆ ಪ್ರಾರಂಭ ಮಾಡಿದರು - ಆದರೆ ರೇಷನ್ ಅಂಗಡಿಗಳಿಂದ ಯಾರೂ ಆ ವಸ್ತ್ರಗಳನ್ನು ಕೊಳ್ಳಲೇ ಇಲ್ಲ! ಹೀಗಾಗಿ ಆ ಯೋಜನೆ ಕುಸಿದುಬಿತ್ತು!
ಈ ಬಿಕ್ಕಟ್ಟಿನ ತಾಂಡವ ಇಲ್ಲಿಗೇ ನಿಲ್ಲುವುದಿಲ್ಲ. ಕೃಷಿ ಕ್ಷೇತ್ರದ ಹೆಚ್ಚಿನ ಆತ್ಮಹತ್ಯೆಗಳು ವರದಿಯಾಗುತ್ತಿರುವುದು ಹತ್ತಿ ಬಳೆಗಾರರ ವರ್ಗದಿಂದ. ಹೀಗಾಗಿ ಅವರ ಹಿತಕ್ಕೆ ಹತ್ತಿಯ ಧರಗಳನ್ನು ಸರಕಾರ ಯಾವಾಗಲೂ ಒಂದು ಹದ್ದುಬಸ್ತಿನಲ್ಲಿ ಇಡಲು ಪ್ರಯತ್ನಿಸುವುದು ಸಹಜವೇ. ಹತ್ತಿ ರೈತರಿಗೆ ಹೆಚ್ಚು ಬೆಲೆ ಬಂದಷ್ಟೂ ಕೈಮಗ್ಗದವರ ತೊಂದರೆ ಹೆಚ್ಚಾಗುತ್ತಾ ಹೋಗುತ್ತದೆ. ಕೈಮಗ್ಗದ ಕೆಲಸ ಪ್ರಾರಂಭವಾಗುವುದೇ ಹತ್ತಿಯ ನೂಲಿನಿಂದ!
ಕೈಮಗ್ಗಕ್ಕೂ ಮಿಲ್ಲುಗಳಿಗೂ ನಡುವಿನ ಪವರ್ ಲೂಮುಗಳದ್ದು ಮತ್ತೊಂದೇ ಕಥೆ. ಪವರ್ ಲೂಮುಗಳಿಂದ ಹೊರಬರುವ ಉತ್ಪತ್ತಿ ಕೈಮಗ್ಗ ಕ್ಷೇತ್ರಕ್ಕೆ ಒಂದು ರೀತಿಯಿಂದ ಮಾರಕವಾಗಿವೆ. ಯಾಕೆಂದರೆ ಕೈಮಗ್ಗದ ಬಹಳಷ್ಟು ಪ್ರತ್ಯೇಕತೆಯನ್ನು ದೊಡ್ಡಮಿಲ್ಲುಗಳು ನಕಲು ಮಾಡಲಾಗದಿದ್ದರೂ ಪವರ್ ಲೂಮುಗಳು ನಕಲು ಮಾಡುವುದನ್ನು ಕಲಿತಿವೆ. ಹೀಗಾಗಿ ಕೈಮಗ್ಗದಿಂದ ದೊರೆಯುತ್ತಿದ್ದ ಹಲವು ’ಪ್ರತ್ಯೇಕ’ ವಸ್ತ್ರಗಳನ್ನು ಪವರ್ ಲೂಮುಗಳು ಕಡಿಮೆ ದರಕ್ಕೆ ಮಾರಾಟಮಾಡಿ ಕೈಮಗ್ಗಕ್ಕೆ ಮಾರಕವಾಗಿವೆಯಂತೆ!
ಆದರೆ ಪವರ್ ಲೂಮುಗಳನ್ನು ನಡೆಸುವವರನ್ನು ಮಾತನಾಡಿಸಿರದೇ ಅವರದೇ ವ್ಯಥೆಯನ್ನು ಅವರು ಹೇಳುತ್ತಾರೆ - ವಿದ್ಯುತ್ ಸರಬರಾಜಿನಲ್ಲಿನ ತೊಂದರೆಗಳೂ, ವಿದ್ಯುತ್ ಕ್ಷೇತ್ರದಲ್ಲಿ ಆದ ’ಸುಧಾರಣೆ’ಯಿಂದಾಗಿ ವಿದ್ಯುತ್ ಧರದ ಏರಿಕೆ ಹಾಗೂ ಅದರಿಂದಾಗಿ ಎದುರಾಗುತ್ತಿರುವ ತೊಂದರೆ. ಆ ಕಥೆಯ ವ್ಯಥೆಯೇ ಬೇರೆ. ಕೊತ್ತಪಲ್ಲಿಯಿಂದ ಹೆಚ್ಚೇನೂ ದೂರವಿಲ್ಲದ ಸಿರಸಿಲ್ಲಾದಲ್ಲಿ ಪವರ್ ಲೂಮಿನ ನೇಕಾರರ ಆತ್ಮಹತ್ಯೆ ಸರಕಾರಕ್ಕೆ ಒಂದು ಬಿಕ್ಕಟ್ಟನ್ನೇ ಉಂಟುಮಾಡಿತ್ತು.
"ಇದಕ್ಕೆಲ್ಲಾ ಕಾರಣ ಎನ್.ಆರ್.ಈ.ಜಿ.ಎ ಬಂದಿರೋದು" ಅಂತ ವ್ಯಂಗ್ಯದಿಂದ ರಾಜೇಶಂ ಹೇಳಿದಾಗ ನಾನು ಅವಾಕ್ಕಾದೆ. ನೂರು ದಿನದ ಉಪಾಧಿಯ ಗ್ಯಾರೆಂಟಿಕೊಡುವ ಗ್ರಾಮೀಣ ನಿರುದ್ಯೋಗವನ್ನು ನಿವಾರಿಸುವ ಯೋಚನೆ ಕೈಮಗ್ಗಕ್ಕೆ ಹೇಗೆ ಮಾರಕವಾಯಿತು? "ಉಪಾಧಿ ಯೋಜನೆಯ ಕೆಳಗೆ, ನೆಲವನ್ನು ಎಂಟು ಘಂಟೆಗಳ ಕಾಲ ಅಗೆಯುವುದಕ್ಕೆ ನೂರೈದು ರೂಪಾಯಿ ಕೂಲಿ. ದಿನಕ್ಕೆ ಹದಿನಾಲ್ಕು ಘಂಟೆ ನೇಯುವ ಹಾಗೂ ಅದಕ್ಕೆ ತಯಾರಿಯಾಗಿ ಅವನ ಹೆಂಡತಿಯೂ ಕೆಲಸ ಮಾಡುವ ನೇಕಾರರು ಪಂಚೆ ಟವಲ್ಲು ಲುಂಗಿಗಳನ್ನು ನೇಯ್ದರೆ ಸಂಪಾದಿಸಬಲ್ಲ ಕೂಲಿ ೭೦ರಿಂದ ೮೦ ರೂಪಾಯಿಗಳು. ಕೌಶಲ್ಯವಿದ್ದು ಪ್ರಯೋಜನವೇನು? ನೇಕಾರರು ದಿನಕ್ಕೆ ೨೫೦ ರೂಪಾಯಿ ಸಂಪಾದಿಸ ಬಲ್ಲರಾದರೆ ನೀವು ಇಲ್ಲಿ ೩೦ ವರ್ಷಕ್ಕೂ ಕಡಿಮೆ ವಯಸ್ಸಿನ ಯುವಕರನ್ನು ಕಾಣುತ್ತೀರಿ" ಅನ್ನುತ್ತಾರೆ.
ಮನೆಯಲ್ಲೂ ಪಂಚೆ ಉಡುವುದನ್ನು ಬಿಟ್ಟು ಪೈಜಾಮಾ, ಟ್ರಾಕ್ ಸೂಟುಗಳನ್ನು ಧರಿಸುವ - ಟರ್ಕಿಶ್ ಟವಲನ್ನು ಉಪಯೋಗಿಸುವ ನಾನು ಒಂದು ಪಂಚೆ ನಾಲ್ಕು ಟವಲುಗಳನ್ನು ಕೊತ್ತಪಲ್ಲಿ ಮಂಡಲಿಯಿಂದ ೨೦ ಪ್ರತಿಶತ ರಿಯಾಯಿತಿ ಧರದಲ್ಲಿ ಕೊಳ್ಳುತ್ತೇನೆ. ಹೀಗೆ ಮಾಡಿದ್ದರಿಂದ ಅವರ ಸಮಸ್ಯೆಗಳ ಪರಿಹಾರದತ್ತ ಒಂದು ಪುಟ್ಟ ಹೆಜ್ಜೆ ನಾನಿಟ್ಟೆ ಅನ್ನುವ ಭ್ರಮೆಯೂ ನನಗಿಲ್ಲ.
No comments:
Post a Comment