ಹೀಗೆ ಅನೇಕ ಮಾನದಂಡದನುಸಾರ ಧರ್ಮಪುರಿ ಹಿಂದುಳಿದಿದೆ ಅನ್ನುವುದಕ್ಕೆ ನಮಗೆ ಪುರಾವೆ ಸಿಕ್ಕಿತ್ತು. ವಿದ್ಯೆಗೆ ಸಂಬಂಧಿಸಿದಂತೆ ಕೂಡಾ ನಮಗೆ ಇಂಥದೇ ಮಾಹಿತಿ ಎದುರಾಗಬಹುದೆಂದು ನಾವು ಊಹಿಸಿದ್ದೆವು. ಗೋದಾವರಿಯಲ್ಲಿ ೭೧ ಪ್ರತಿಶತ ಜನ ಅಕ್ಷರಸ್ಥರು ಹಾಗೂ ಇದು ಆಂಧ್ರಪ್ರದೇಶದ ಒಟ್ಟಾರೆ ಮಾಹಿತಿಗಿಂತ ಉತ್ತಮವಾಗಿತ್ತು, ಧರ್ಮಪುರಿಯಲ್ಲಿ ೬೧ ಪ್ರತಿಶತ ಜನ ಅಕ್ಷರಸ್ಥರು ಹಾಗೂ ಇದು ತಮಿಳು ನಾಡಿನ ಮಾಹಿತಿಗಿಂತ ಕಡಿಮೆಯಿತ್ತು. ಇವೆಲ್ಲಾ ಸರಕಾರಿ ಮಾಹಿತಿಯಾದರೆ ನಾವು ಈ ಜಿಲ್ಲೆಗಳಲ್ಲಿ ಸುಮಾರು ೧೨೦೦ ಕುಟುಂಬಗಳಿಂದ ಸಂಗ್ರಹಿಸಿದ ಮಾಹಿತಿಯಲ್ಲಿ ಒಂದು ಪುಟ್ಟ ವಿಚರ ಮಾತ್ರ ನಮ್ಮನ್ನು ವಿಚಲಿತಗೊಳಿಸಿದ್ದು ನಿಜ.
ನಾವು ಕುಟುಂಬಗಳಿಂದ ಸಂಗ್ರಹಿಸಿದ ಅಕ್ಷರಸ್ಥರ ಮಾಹಿತಿ ಒಟ್ಟಾರೆ ಮಾಹಿತಿಗೆ ಹೋಲುತ್ತಿತ್ತು. ಆದರೆ ಮಾಹಿತಿಯಲ್ಲಿ ನಾವು ಹೆಚ್ಚಿನ ವಿವರಗಳನ್ನು ಕೇಳಿದ್ದೆವು. ಅಕ್ಷರಸ್ಥರನ್ನು ನಾವು ಐದು ಭಾಗಗಳಲ್ಲಿ ವಿಂಗಡಿಸಿದ್ದೆವು - ಪ್ರಾಥಮಿಕ ಶಾಲೆ ಕಂಡವರು [ಸಹಿ ಹಾಕ ಬಲ್ಲವರು], ಪ್ರಾಥಮಿಕ ಶಾಲೆ ಮುಗಿಸಿದವರು, ಎಸ್ಸೆಸ್ಸೆಲ್ಸಿ ಪಾಸಾದವರು ಪದವಿ ಪಡೆದವರು, ಹಾಗೂ ಉನ್ನತ ಪದವಿ ಪಡೆದವರು. ಪದವಿ ಮುಗಿಸಿದವರ ಮಾಹಿತಿಯಲ್ಲಿ ಪ.ಗೋದಾವರಿಗೂ ಧರ್ಮಪುರಿಗೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಒಟ್ಟಾರೆ ಐದು ಪ್ರತಿಶತ ಜನ ಈ ಘಟ್ಟವನ್ನು ದಾಟಿದ್ದರು. ಆದರೆ ನಮ್ಮನ್ನು ಅವಾಕ್ಕುಗೊಳಿಸಿದ್ದು ನಡುವಿನ ಮಾಹಿತಿ. ನಾವು ಸಂಗ್ರಹಿಸಿದ ಮನೆಗಳಿಂದ ಪ.ಗೊದಾವರಿ ಜಿಲ್ಲೆಯಲ್ಲಿ ಸುಮಾರು ೨೮ ಪ್ರತಿಶತ ಅಕ್ಷರಸ್ಥರು, ಕೇವಲ ಅಕ್ಷರಸ್ಥರು ಮಾತ್ರವೇ ಆಗಿದ್ದು ’ವಿದ್ಯಾವಂತ’ರಾಗಿರಲಿಲ್ಲ - ಅರ್ಥಾತ್ ಅವರುಗಳು ಕೇವಲ ಹಸ್ತಾಕ್ಷರ ಹಾಕುವಷ್ಟರ ಮಟ್ಟಿಗೆ ಮಾತ್ರ ಅಕ್ಷರಸ್ಥರಾಗಿದ್ದರು. ಅದೇ ಧರ್ಮಪುರಿಯಲ್ಲಿ ಒಟ್ಟಾರೆ ೭ ಪ್ರತಿಶತ ಜನಮಾತ್ರ ಹಸ್ತಾಕ್ಷರಸ್ಥರಾಗಿದ್ದು ಮಿಕ್ಕವರು ಶಾಲೆಯನ್ನು ದಾಟಿದ್ದಲ್ಲದೇ ೨೬ ಪ್ರತಿಶತ ಜನ ಎಸ್ಸೆಸ್ಸೆಲ್ಸಿಯನ್ನು ಪಾಸುಮಾಡಿದ್ದರು.
ಈ ಮಾಹಿತಿ ಗಮ್ಮತ್ತಿನದ್ದು ಯಾಕೆಂದರೆ ಒಟ್ಟಾರೆ ಮಾಹಿತಿಯಲ್ಲಿ ನಮಗೆ ಧರ್ಮಪುರಿ ಪ.ಗೋದಾವರಿಗಿಂತ ’ಅನಕ್ಷರಸ್ಥ’ ಜಿಲ್ಲೆಯಾಗಿ ಕಾಣಿಸುತ್ತದೆ. ಅಕ್ಷರಸ್ಥರ ಮಾಹಿತಿಯನ್ನು ಬಿಡಿಸಿನೋಡಿದಾಗ ಧರ್ಮಪುರಿಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚು ಎನ್ನುವುದು ವೇದ್ಯವಾಗುತ್ತದೆ. ಇದಕ್ಕೆ ಕಾರಣಗಳೇನಿರಬಹುದು? ಯಾಕೆ ಇದ್ದಕ್ಕಿದ್ದಂತೆ ಧರ್ಮಪುರಿಯಲ್ಲಿ ಈ ಜಾದೂ ನಡೆಯಿತು, ಅಥವಾ ನಮ್ಮ ಮಾಹಿತಿಯಲ್ಲಿಯೇ ಏನಾದರೂ ಹುಳುಕಿದೆಯೇ ಅನ್ನುವ ಅನುಮಾನ ನಮ್ಮನ್ನಾವರಿಸುವುದು ಸಹಜವೇ ಆಗಿತ್ತು.
ಹೀಗೆ ಮಾಹಿತಿಯಲ್ಲಿ ವಿಚಿತ್ರ ಧೋರಣೆಗಳು ಕಂಡಾಗ ಅದನ್ನು ಬಗೆಯಬೇಕು ಅನ್ನಿಸುವುದು ಸಹಜ. ಈ ಮಾಹಿತಿ ನಮ್ಮ ಮುಂದೆ ಬಂದಾಕ್ಷಣಕ್ಕೆ ನಾವು ನೋಡಿದ್ದು ಎರಡೂ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಉನ್ನತ ಪ್ರಾಥಮಿಕ ಶಾಲೆಗಳ ಸಂಖ್ಯೆ. ಎರಡೂ ಜಿಲ್ಲೆಗಳ ವಿಸ್ತಾರ ಮತ್ತು ಜನಸಂಖ್ಯೆ ಭಿನ್ನವಾದ್ದರಿಂದ ಪ್ರತಿ ಲಕ್ಷ ಜನಸಂಖ್ಯೆಗೆ ಎಷ್ಟು ಶಾಲೆಗಳಿವೆ ಎನ್ನುವುದೇ ಸರಿಯಾದ ಮಾಹಿತಿಯಾಗುತ್ತದೆ. ಈ ಮಾಹಿತಿಯನ್ನು ನಾವು ನೋಡಿದಾಗ ಅವಾಕ್ಕಾಗದೇ ಇರಲಾಗಲಿಲ್ಲ. ಧರ್ಮಪುರಿಯಲ್ಲಿ ಪ್ರತಿಲಕ್ಷ ಜನಸಂಖ್ಯೆಗೆ ೮೫ ಪ್ರಾಥಮಿಕ ಶಾಲೆಗಳೂ, ೨೪ ಉನ್ನತ ಪ್ರಾಥಮಿಕ ಶಾಲೆಗಳೂ ಇದ್ದುವು. ಪ.ಗೋದಾವರಿಯಲ್ಲಿ ಇದು ೬೯ ಮತ್ತು ೧೧ರ ಮಟ್ಟದಲ್ಲಿತ್ತು. ಧರ್ಮಪುರಿಯ ಸರಾಸರಿ ತಮಿಳುನಾಡಿನ ಒಟ್ಟಾರೆ ಸರಾಸರಿಯಾದ ೫೦ ಪ್ರಾಥಮಿಕ, ೧೩ ಉನ್ನತ ಪ್ರಾಥಮಿಕ ಶಾಲೆಗಳಿಗಿಂತ ಉತ್ತಮ. ಅದೇ ಪ.ಗೋದಾವರಿಯಲ್ಲಿ ಪ್ರಾಥಮಿಕ ಶಾಲೆಗಳ ಸರಾಸರಿ ತುಸು ಉತ್ತಮವಾದರೂ ಉನ್ನತ ಪ್ರಾಥಮಿಕ ಶಾಲೆಗಳ ಸರಾಸರಿ ರಾಜ್ಯಕ್ಕಿಂತ ಕಡಿಮೆಯಿತ್ತು.
ಇದರ ಜೊತೆಗೇ ಮತ್ತೊಂದು ಮಾಹಿತಿಯೂ ನಮಗೆ ಮುಖ್ಯ ಅಂತ ಅನ್ನಿಸಿತು. ಧರ್ಮಪುರಿಯ ಜನಸಂಖ್ಯಾಸಾಂದ್ರತೆ ಪ.ಗೋದಾವರಿಗಿಂತ ಬಹಳವೇ ಕಡಿಮೆ. ಅರ್ಥಾತ್ ಒಂದು ಚದರ ಕಿಲೋಮೀಟರಿನಲ್ಲಿ ಪ.ಗೋದಾವರಿ ಜಿಲ್ಲೆಯಲ್ಲಿ ಧರ್ಮಪುರಿಗಿಂತ ಹೆಚ್ಚು ಜನ ಕಾಣಸಿಗುತ್ತಾರೆ. ಆದರೆ ಧರ್ಮಪುರಿಯ ೬೫ ಪ್ರತಿಶತ ಹಳ್ಳಿಗಳಿಗೆ ಪಕ್ಕಾ ರಸ್ತೆಯಿದೆ. ವಿಕಸಿತ ಪ.ಗೋದಾವರಿ ಜಿಲ್ಲೆಯಲ್ಲಿ ಈ ಅಂಕಿ ಕೇವಲ ೨೨ ಪ್ರತಿಶತ ಮಾತ್ರವಿದೆ.
ಈ ಮಾಹಿತಿಯ ಬಗ್ಗೆ ಯೋಚಿಸಿದರೆ ಧರ್ಮಪುರಿ ಯಾಕೆ ಇಷ್ಟು ವಿಚಿತ್ರ ಅನ್ನಿಸದಿರುವುದಿಲ್ಲ. ಮಿಕ್ಕ ಸವಲತ್ತುಗಳಲ್ಲೆಲ್ಲಾ - ಪೋಸ್ಟಾಫೀಸು, ಬ್ಯಾಂಕುಗಳ ಸಂಖ್ಯೆ ಇತರ ಮಾಹಿತಿಯೆಲ್ಲವೂ ಗೋದಾವರಿಯ ಪರವಾಗಿಯೇ ಇದೆ. ಇದಕ್ಕೆ ಕಾರಣವೇನಿರಬಹುದು? ಈ ಬಗ್ಗೆ ನನ್ನ ಅಭಿಪ್ರಾಯ ಸ್ಪಷ್ಟವಾದದ್ದಲ್ಲ. ಯಾಕೆಂದರೆ ಈ ಮಾತುಗಳನ್ನು ಹೇಳಲು ನನಗೆ ಬಲವಾದ ಮಾಹಿತಿಯಿಲ್ಲ. ಆದರೂ ಯಾಕೆ ಹೀಗಾಗಿರಬಹುದೆನ್ನುವ ಕೆಲವು ಊಹೆಗಳನ್ನು ಹರಿಯಬಿಟ್ಟು ಚರ್ಚೆ ಮಾಡುವುದರಿಂದ ವಿಕಾಸದ ಗತಿ/ದಿಕ್ಕನ್ನು ಅರ್ಥೈಸಲು ಹೆಚ್ಚು ಉಪಯೋಗವಾಗಬಹುದೇನೋ.
- ಪ್ರಧಾನ ವೃತ್ತಿ ಕೃಷಿಯಾದಾಗ, ಕೃಷಿ ಲಾಭದಾಯಕವಾಗಿ ನಡೆಯುವಾಗ ಅದು ಹೆಚ್ಚು ಬಂಡವಾಳದ ಮೇಲೆ ಆಧಾರಿತವಾಗಿರುತ್ತದೆ. ಹೀಗಾದಾಗ ಬಂಡವಾಳವನ್ನು ಹೂಡುವವರ ಕೈಯಲ್ಲಿ ಭೂಮಿ ಸೇರಿಕೊಳ್ಳುತ್ತದೆ. ಪ.ಗೋದಾವರಿಯಲ್ಲಿ ವ್ಯವಸಾಯ ನಡೆಸುವವರು ಸರಾಸರಿ ಕಡಿಮೆ. ವ್ಯವಸಾಯ ಕೂಲಿಗಳು ಸರಾಸರಿ ಹೆಚ್ಚು. ಧರ್ಮಪುರಿಯಲ್ಲಿ ಸ್ವಂತ ಕೃಷಿ ನಡೆಸುವವರು ಹೆಚ್ಚು [ಆದರೆ ಅವರಡಿಯಿರುವ ಭೂಭಾಗ ಕಡಿಮೆ] ವ್ಯವಸಾಯ ಕೂಲಿಗಳು ಕಡಿಮೆ. ಕೃಷಿಯನ್ನು ಆಧಾರವಾಗಿಟ್ಟುಕೊಳ್ಳದೇ ಇತರ ಕೆಲಸ ಮಾಡುವವರ ಪರಿಮಾಣ ಹೆಚ್ಚು.
- ಧರ್ಮಪುರಿ ಜಿಲ್ಲೆಯಲ್ಲಿ ಪ್ರಾಥಮಿಕ, ಉನ್ನತ ಪ್ರಾಥಮಿಕ ಶಾಲೆಗಳು ಹೆಚ್ಚಾಗಿವೆ. ರಸ್ತೆಯೂ ತಕ್ಕಮಟ್ಟಿಗಿದೆ. ಕೃಷಿಯಲ್ಲಿ ಭವಿಷ್ಯ ಕಾಣದಿರುವುದರಿಂದ, ಜನ ವಿದ್ಯೆಯಾಧಾರಿತ ಕೆಲಸಗಳ ಮೊರೆ ಹೋಗಬೇಕು. ಹೀಗಾಗಿ ಮಕ್ಕಳು ಶಾಲೆಗೆ ಹೋದರೆ, ಅಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚು.
- ಪ.ಗೋದಾವರಿಯಲ್ಲಿ ಶಾಲೆಗೆ ಹೋದರೂ, ವಿದ್ಯೆಯಿಂದ ಭವಿಷ್ಯ ಬಹುಶಃ ಭೂಮಾಲೀಕರಿಗೆ ಮಾತ್ರ ಕಾಣಿಸುತ್ತಿರಬಹುದು. ವ್ಯವಸಾಯ ಕೂಲಿಯಿಂದ ಒಳ್ಳೆಯ ಆದಾಯ ಬರಬಹುದಾದ್ದರಿಂದ ಸ್ಕೂಲಿನಲ್ಲಿ ಮುಂದುವರೆಯುವುದರ ಅರ್ಥ ಜನರಿಗೆ ಕಾಣುತ್ತಿಲ್ಲವೇನೋ. ಹೀಗಾಗಿ ಸಮೀಪದಲ್ಲಿ ಸ್ಕೂಲು ಕಾಣದಾಗ ವಿದ್ಯೆ ಮುಕ್ತಾಯವಾಗುತ್ತಿದೆ.
- ವಿದ್ಯೆಗೂ ಭ್ರೂಣಹತ್ಯೆಯಂತಹ ಕ್ರಿಯೆಗೂ ಯಾವ ಬಾದರಾಯಣ ಸಂಬಂಧವೂ ಇದ್ದಂತಿಲ್ಲ. ಹೆಚ್ಚು ವಿದ್ಯಾವಂತರಿರುವ ಧರ್ಮಪುರಿಯಲ್ಲಿ ಒಟ್ಟಾರೆ ಮಹಿಳೆಯರ ಜನಸಂಖ್ಯೆ ಕಡಿಮೆಯೇ. ಆದರೆ ವಿಕಸಿತ ಪ್ರದೇಶಗಳಲ್ಲಿ ಇದು ಉತ್ತಮ ಎಂದು ಪ.ಗೋದಾವರಿಯ ಜಿಲ್ಲೆಯ ಮಾಹಿತಿಯ ಆಧಾರದ ಮೇಲೆ ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದಾಗ ಅಭಿವೃದ್ಧಿಗೊಂಡ ಪಂಬಾಜ್ ಹರ್ಯಾಣ ನಮ್ಮನ್ನು ಅಣಕಿಸುತ್ತವೆ.
- ಹಾಂ, ಧರ್ಮಪುರಿಯಲ್ಲಿ ಚಿಕ್ಕಸಾಲದ ಸ್ವ-ಸಹಾಯ ಗುಂಪುಗಳು ಬಹಳ ಹಿಂದೆಯೇ ಏರ್ಪಾಟಾಗಿದ್ದುವು. ಬಹುಶಃ ಭಾರತದಲ್ಲೇ ಮೊದಲ ಗುಂಪುಗಳು ಇಲ್ಲಿ ಮೈರಾಡಾ ಮತ್ತು ತಮಿಳುನಾಡು ಸರಕಾರದ ವತಿಯಿಂದ ಏರ್ಪಾಟಾಗಿತ್ತು. ಹೆಚ್ಚು ಮಹಿಳೆಯರು ಈ ಕ್ರಾಂತಿಯ ಭಾಗವಾಗಿರುವುದನ್ನು ನಾವು ಕಾಣಬಹುದು. ಹೀಗಾಗಿ ಮಹಿಳೆಯರ ಕೈಯಲ್ಲಿ ಹಣ ಹೆಚ್ಚು ಓಡಾಡಿದಾಗ ಮಕ್ಕಳ ವಿದ್ಯೆಗೆ ದಾರಿಕಾಣಬಹುದು ಅನ್ನುವ ಮತ್ತೊಂದು ಬಾದರಾಯಣ ಸಂಬಂಧವನ್ನು ಹುಡುಕಬಹುದು. ಆದರೆ ಆ ಬಾದರಾಯಣ ಸಂಬಂಧದಿಂದ ಭ್ರೂಣ ಹತ್ಯೆ ಇಲ್ಲಿ ಯಾಕೆ ಗೋದಾವರಿಗಿಂತ ಹೆಚ್ಚು ಅನ್ನುವುದಕ್ಕೆ ಉತ್ತರ ದೊರೆಯುವುದಿಲ್ಲ.
ಹೀಗೆ ಸತ್ಯದ ಶೋಧನೆಯನ್ನು ಮುಂದುವರೆಸಲೇಬೇಕಾಗಿದೆ. ಒಂದಕ್ಕೊಂದು ಕೊಂಡಿಹಾಕಿಕೊಂಡಿರುವ ವಿಚಾರಗಳ ಈರುಳ್ಳಿಯನ್ನು ಬಿಡಿಸಬೇಕಾಗಿದೆ. ಆದರೆ ಈ ಎಲ್ಲದರ ನಡುವೆ ಯಾವ ವಿವರಣೆಯನ್ನೂ ನೀಡದೇ ಎದ್ದುನಿಂತಿರುವ ವಿಚಾರವೆಂದರೆ, ಧರ್ಮಪುರಿಯಲ್ಲಿ ಇಷ್ಟೊಂದು ಶಾಲೆಗಳು ಯಾವ ಜಾದೂವಿನಿಂದ ಬಂತು ಅನ್ನುವುದೇ......
೫ ಮೇ ೨೦೦೯
No comments:
Post a Comment