Saturday, April 6, 2013

ಆತ್ಮಹತ್ಯೆಗಳು: ರೈತರೇ ಏಕೆ?
ಒಂದು ವ್ಯಾಪಾರ ವಿಫಲಗೊಂಡಾಗ ಆ ವ್ಯಾಪಾರಿ ಏನು ಮಾಡಬಹುದು? ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅನೇಕ ಉತ್ತರಗಳು ಕಾಣಸಿಗುತ್ತವೆ. ಆ ವ್ಯಾಪಾರಿ ಹಳೆಯ ವ್ಯಾಪಾರವನ್ನು ಮುಚ್ಚಿ ಹೊಸ ವ್ಯಾಪಾರಕ್ಕೆ ಕಾಲಿಡಬಹುದು, ವ್ಯಾಪಾರವನ್ನೇ ಬಿಟ್ಟು ಹೊಸ ನೌಕರಿಯನ್ನು ಹಿಡಿಯಬಹುದು, ವಿಫಲಗೊಂಡ ವ್ಯಾಪಾರವನ್ನು ಯಾರಿಗಾದರೂ ಮಾರಿ ಸುಮ್ಮನಾಗಬಹುದು, ಆದರೆ ವಿಫಲ ವ್ಯಾಪಾರಿಗಳು ತಮ್ಮ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುವುದಿಲ್ಲ. ಎಲ್ಲೋ ಆಗಾಗ ವ್ಯಾಪಾರಿಗಳು ಸಾಲದ ಹೊರೆಯನ್ನು ತಾಳಲಾರದೇ ಪ್ರಾಣ ತೆಗೆದುಕೊಂಡದ್ದನ್ನು ನಾವು ಕಾಣುತ್ತೇವಾದರೂ ಈ ಆತ್ಮಹತ್ಯೆಗಳ ಸಂಖ್ಯೆ ರೈತರ ಆತ್ಮಹತ್ಯೆಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ.

ವ್ಯಾಪರಗಳ ವೈಫಲ್ಯತೆಗೆ ಕಾರಣಗಳು ಭಿನ್ನವಾಗಿ ಇರುತ್ತವೆ. ಆದರೆ ಕೃಷಿ ಮತ್ತು ಇತರ ದೊಡ್ಡ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯ ಭಿನ್ನತೆಯನ್ನು ನಾವು ಅರ್ಥಮಾಡಿಕೊಂಡರೆ ಆತ್ಮಹತ್ಯೆಗಳು ಕೃಷಿ ಕ್ಷೇತ್ರದಲ್ಲೇ ಯಾಕೆ ಹಚ್ಚು ಅನ್ನುವುದಕ್ಕೆ ಹೊಳಹುಗಳು ಸಿಗಬಹುದು.

ಸಾಮಾನ್ಯತಃ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯನ್ನು ಗಮನಿಸೋಣ - ಅವುಗಳಲ್ಲಿ ಏಕ ಯಾಜಮಾನ್ಯ, ಸಹಭಾಗಿತ್ವ ಹಾಗೂ ಖಾಸಗೀ ಕಂಪನಿಗಳನ್ನು ನಾವು ಕಾಣುತ್ತೇವೆ. ಜೊತೆಗೆ ಸಹಕಾರ ಸಂಘಗಳೂ ನಮಗೆ ಕಾಣಸಿಗಬಹುದು. ಈ ಸಂಸ್ಥೆಗಳು ನಡೆಸುವ ವ್ಯಾಪಾರಗಳು ವಿಫಲವಾಗುವುದಕ್ಕೆ ಹಲವು ಕಾರಣಗಳಿರಬಹುದಾದರೂ ಅದು ಹೆಚ್ಚಿನಂಶ ವ್ಯಾಪಾರಿಯ ಅಂದಾಜು-ಲೆಕ್ಕ ಏರುಪೇರಾಗುವುದರಿಂದಲೇ ವಿಫಲವಾಗುವುದು ಹೆಚ್ಚು. ನೈಸರ್ಗಿಕ ಕಾರಣಗಳಾದ ಮಳೆ, ಬೆಂಕಿ, ಗಾಳಿ, ಹವೆಯಿಂದಾಗಿ ಈ ರೀತಿಯ ವ್ಯಾಪಾರಗಳು ನಷ್ಟ ಹೊಂದುವುದು ವಿರಳ, ಹಾಗೂ ಆ ಥರದ ನಷ್ಟಕ್ಕೆ ವಿಮೆಯ ಸವಲತ್ತೂ ಇದ್ದು ವ್ಯಾಪಾರಿಗಳಿಗೆ ಇತರೆ ಕಾರಣಗಳಿಂದಾಗುವ ನಷ್ಟಕ್ಕೆ ಒಂದು ರಕ್ಷಾಕವಚ ಇರುತ್ತದೆ.

ಕೃಷಿ ವಿಫಲವಾಗುವುದಕ್ಕೆ ಮೂಲತಃ ನೈಸರ್ಗಿಕ ಕಾರಣಗಳೇ ಹೆಚ್ಚು. ಅಧಿಕ ಮಳೆ, ಬಿರುಗಾಳಿ, ಬರ, ಕೀಟಗಳ ಕಾಟ - ಹೀಗೆ ಕೃಷಿ ವ್ಯಾಪಾರಿಯ ಸ್ವಂತ ಬುದ್ಧಿವಂತಿಕೆಗೆ ಮೀರಿದ, ಚಾಣಾಕ್ಷತೆಗೆ ಸಂಬಂಧವಿಲ್ಲದ ಘಟನೆಗಳೇ ಕೃಷಿ ವಿಫಲವಾಗುವುದಕ್ಕೆ ಕಾರಣೀಭೂತವಾಗಿಬಿಡುತ್ತವೆ. ಕೃಷಿಯ ನಷ್ಟಕ್ಕೆ ಪರಿಹಾರವಾಗಿ ವಿಮಾ ಯೋಜನೆಗಳನ್ನು ರೂಪಿಸುವುದೂ ಕಷ್ಟ. ವಿಮೆಯ ವ್ಯಾಪಾರ ಸಫಲವಾಗಬೇಕಾದರೆ ಒಟ್ಟಾರೆ ವೈಫಲ್ಯದ ಮಟ್ಟ ಕಡಿಮೆಯಾಗಿದ್ದಾಗಲೇ ಅದಕ್ಕೆ ಸಲ್ಲುವ ಪ್ರೀಮಿಯಂ ಮೊತ್ತವನ್ನು ಕಟ್ಟಿ ಮುಂದುವರೆಯಲು ಸಾಧ್ಯ. ಆದರೆ ಮೂರು-ನಾಲ್ಕುವರ್ಷಗಳಿಗೊಮ್ಮೆ ಕೃಷಿ ಯಾವುದೇಕಾರಣಕ್ಕಾಗಿ ವಿಫಲವಾಯಿತೆಂದು ನಾವು ಅಂದುಕೊಂಡರೂ ಅದಕ್ಕೆ ಸಲ್ಲಬೇಕಾದ ಪ್ರೀಮಿಯಂ ಕನಿಷ್ಟ ಒಟ್ಟಾರೆ ಮೊತ್ತದ ೨೫ ಪ್ರತಿಶತಕ್ಕಿಂತ ಹೆಚ್ಚಾಗಿರಬೇಕೆನ್ನುವುದನ್ನು ಸರಳ ಲೆಕ್ಕಾಚಾರ ತಿಳಿಸುತ್ತದೆ. ಹೀಗಾಗಿ ಮೂಲತಃ ಹೆಚ್ಚಿನ ವೈಫಲ್ಯತೆಯಿಂದ ಕೂಡಿರುವ ಕೃಷಿಗೆ ವಿಮಾಕವಚ ತೊಡಿಸುವದೂ ಆಗದ ಮಾತು.

ಹೀಗೆ, ಮೂಲತಃ ವೈಫಲ್ಯತೆಯ ಅಪಾಯವಿರುವ, ವೈಫಲ್ಯತೆಗೆ ಕಾರಣಗಳು ನೈಸರ್ಗಿಕವಾಗಿರುವ, ವಿಮೆಯ ಸುರಕ್ಷಾಕವಚವಿಲ್ಲದ ವ್ಯಾಪಾರವನ್ನು ನಮ್ಮ ದೇಶದ ಕೃಷಿಕರು ನಡೆಸುತ್ತಾ ಬಂದಿದ್ದಾರೆ! ಮೂಲತಃ ಕೃಷಿಯಲ್ಲಿ ರಿಸ್ಕ್ ಹೆಚ್ಚಿದೆ ಅನ್ನುವುದನ್ನು ಒಪ್ಪುವುದಾದರೆ ಅದು ಆಯೋಜಿತವಾಗಿರುವ ರೀತಿಯಲ್ಲಿ ಆ ರಿಸ್ಕನ್ನು ಮೈಗೂಡಿಸಿಕೊಂಡು ಮುಂದುವರೆಯುವ ತಾಕತ್ತನ್ನು ಈ ವ್ಯಾಪಾರ ನೀಡುವುದಿಲ್ಲ. ಹಾಕಿದ ಬೆಳೆಗೆ ಎಷ್ಟು ಇಳುವರಿ ಬರುತ್ತದೆ ಅನ್ನುವುದು ಒಂದು ಆಯಾಮವಾದರೆ, ಆ ಇಳುವರಿಗೆ ಎಷ್ಟು ಬೆಲೆ ಬರಬಹುದು ಅನ್ನುವುದೂ ಅಪಾಯವಾಗಿಯೇ ಇರುತ್ತದೆ. ಕೃಷಿ ಉತ್ಪನ್ನ ಮಾಡುವುದು ಎಲ್ಲರ ಅಸ್ತಿತ್ವಕ್ಕೂ ಅವಶ್ಯಕವಾದ ಆಹಾರವನ್ನಾದ್ದರಿಂದ ಅದರಲ್ಲಿ ಮಿಕ್ಕ ವ್ಯಾಪಾರಗಳಂತೆ ವಿಪರೀತವಾದಂತಹ ಲಾಭವನ್ನು ಆರ್ಜಿಸುವುದು ಸಾಧ್ಯವೇ ಇಲ್ಲ. ಆಹಾರ ಪದಾರ್ಥಗಳ ಬೆಲೆಯನ್ನು ಹದ್ದುಬಸ್ತಿನಲ್ಲಿಡುವುದೂ ಸರಕಾರದ ಒಂದು ಜವಾಬ್ದಾರಿಯಾದ್ದರಿಂದ ಕೃಷಿಯ ಲಾಭಾಂಶಕ್ಕೆ ಒಂದು ರೀತಿಯ ಮೇಲ್ಮಿತಿಯನ್ನು ಸಹಜವಾಗಿಯೇ ಸರಕಾರ ಹಾಕಿಬಿಡುತ್ತದೆ. ಈ ವ್ಯಾಪಾರದಲ್ಲಿ ಇರುವ ಅಪಾಯಕ್ಕೂ ಬರುವ ಬೆಲೆಗೂ ಇರುವ ಸಂಬಂಧ ತೆಳುವಾದದ್ದಾಗಿದೆ.

ಮೇಲ್ಮಿತಿಯಿರುವ ಈ ವ್ಯಾಪಾರದಲ್ಲಿ ಆಗುವ ನಷ್ಟಕ್ಕೆ ತಳಮಿತಿ ಇಲ್ಲವೇ ಇಲ್ಲ. ಹಾಗೆಂದರೇನು? ಏಕಸ್ವಾಮ್ಯ ಮತ್ತು ಭಾಗಸ್ವಾಮ್ಯ ಸಂಸ್ಥೆಗಳನ್ನು ಬಿಟ್ಟರೆ, ಮಿಕ್ಕ ವ್ಯಪಾರಗಳು ಆಯೋಜಿತವಾಗಿರುವುದು ಕಂಪನಿ ಅಥವಾ ನಿಗಮಗಳಾಗಿ. ಈ ಸಂಸ್ಥೆಗಳ ಹೆಸರಿನ ಅಂತ್ಯದಲ್ಲಿ ಬರುವ "ಲಿಮಿಟೆಡ್" ಅಥವಾ "ನಿಯಮಿತ" ಅನ್ನುವ ಪದದಲ್ಲಿರುವ ಜಾದೂವಿನಿಂದಾಗಿ ನಮ್ಮ ದೇಶದಲ್ಲೇ ಅಲ್ಲ, ಬದಲಿಗೆ ಪ್ರಪಂಚದಾದ್ಯಂತ ’ವಿಫಲ’ ಸಂಸ್ಥೆಗಳಿದ್ದರೂ ಅದನ್ನು ನಡೆಸಿದ ವ್ಯಾಪಾರಿಗಳು ’ಸಫಲ’ರಾಗಿರುವುದನ್ನು ನಾವು ಕಾಣಬಹುದು. ಒಂದು ನಿಯಮಿತ ಕಂಪನಿಯಲ್ಲಿ ಹಣ ಹೂಡಿದರೆ - ಹೂಡಿಕೆದಾರರ ನಷ್ಟ ಅವರು ಒಪ್ಪಿರುವ ಮೊತ್ತಕ್ಕೆ ನಿಯಮಿತವಾಗಿರುತ್ತದೆ. ಹೀಗಾಗಿ ಆ ಸಂಸ್ಥೆ ನಷ್ಟಕ್ಕೆ ಹೋದರೂ, ಸಂಸ್ಥೆಯ ಮಾಲೀಕರು ಆ ಸಂಸ್ಥೆಯಲ್ಲಿ ಹೂಡಿದ ಹಣದ ಮಟ್ಟಿಗೆ ನಷ್ಟವನ್ನು ಅನುಭವಿಸಿ ಬಚಾವಾಗಬಹುದು! ಹೀಗಾಗಿ ಅವರ ವೈಯಕ್ತಿಕ ಸಂಪತ್ತು ಮತ್ತು ಆಸ್ತಿಯನ್ನು ಒಂದು ರೀತಿಯಲ್ಲಿ ಕಾಪಾಡಿಕೊಂಡೇ ವ್ಯಾಪಾರ ಮಾಡಬಹುದು. ಆಧುನಿಕ ಜಗತ್ತಿನ ಈ ಅದ್ಭುತ ಸಂಸ್ಥಾಗತ ಚೌಕಟ್ಟು ಇರುವುದರಿಂದ ’ವಿಫಲ’ತೆಗೆ ತಕ್ಕ ನಷ್ಟ ಇಲ್ಲದೇ ಹೋಗುತ್ತದೆ. ಒಂದು ವೇಳೆ ಹೂಡಿಕೆದಾರ ಹಾಕಿದ ಹಣಕ್ಕಿಂತ ಹೆಚ್ಚಿನ ನಷ್ಟವನ್ನು ಆ ಸಂಸ್ಥೆ ಅನುಭವಿಸಿದರೆ ಅದರ ವಿ’ಫಲ’ವನ್ನು ಪಡೆಯುವವರು ಅಂಥ ಸಂಸ್ಥೆಗೆ ಹಣ ನೀಡಿದ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳು [ಇದಕ್ಕೆ ಇಂಗ್ಲೀಷಿನಲ್ಲಿ ಹೇರ್‌ಕಟ್ ಅನ್ನುವ ಘನತೆಯ ಹೆಸರಿದ್ದರೂ, ನಾವು ಮಾತ್ರ ’ತಲೆ ಬೋಳಿಸುವುದು’ ಎನ್ನುವ ವಾಸ್ತವವನ್ನು ಯಾವ ಮುಲಾಜೂ ಇಲ್ಲದೇ ನೇರವಾಗಿ ಹೇಳುತ್ತೇವೆ].

ಹೀಗಿರುವಾಗ ವಿಫಲ ಸಂಸ್ಥೆಗಳನ್ನು ನಡೆಸಿದ ಹೂಡಿಕೆದಾರರು ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕಿ ಮರುಜನ್ಮ ಪಡೆಯಬಹುದು. ಗ್ಲೋಬಲ್ ಟ್ರಸ್ಟ್ ಬ್ಯಾಂಕನ್ನು ಸ್ಥಾಪಿಸಿ ಮುಳುಗಿಸಿದ ರಮೇಶ್ ಗೆಲ್ಲಿಯವರ ಖಾಸಗೀ ಆಸ್ತಿ, ಅಥವಾ ಸತ್ಯಂ ರಾಮಲಿಂಗ ರಾಜು ಅವರ ವೈಯಕ್ತಿಕ ಆಸ್ತಿಗೆ ಆ ಸಂಸ್ಥೆಗಳ ಗೊಂದಲಗಳಿಂದ ಯಾವ ಧಕ್ಕೆಯೂ ಬಂದಿಲ್ಲ. ಹೀಗೆ ಕೃಷಿಯೇತರ ಕ್ಷೇತ್ರದಲ್ಲಿ ನಮಗೆ ಲಭ್ಯವಿರುವ ಸಂಸ್ಥಾಗತ ಚೌಕಟ್ಟಿನಲ್ಲಿ ಹೂಡಿಕೆದಾರರು ತಮ್ಮ ರಿಸ್ಕನ್ನು ಒಂದು ಹದ್ದುಬಸ್ತಿನಲ್ಲಿಟ್ಟಿರಲು ಸಾಧ್ಯವಿದೆ. ಅದೇ ಆ ಸಂಸ್ಥೆ ಲಾಭವನ್ನು ಆರ್ಜಿಸಿದಲ್ಲಿ ಮೇಲ್ಮಿತಿಯಿಲ್ಲದೇ ಆ ಎಲ್ಲ ಲಾಭವೂ ಹೂಡಿಕೆದಾರರಿಗೇ ಸಂದುತ್ತದೆ. ಇಂದು ನಾವು ನೋಡುತ್ತಿರುವ ಅನೇಕ ಕೋಟ್ಯಾಧಿಪತಿಗಳು ಈ ಮೇಲ್ಮಿತಿಯಿಲ್ಲದಿರುವ ಲಾಭಾಂಶದ ಫಲಧಾರಿಗಳೇ.

ಹತ್ತು ಸಾವಿರ ರೂಪಾಯಿನ ಹೂಡಿಕೆಯಿಂದ ಪ್ರಾರಂಭಿಸಿ ಇನ್ಫಿಯನ್ನು ಈ ಮಟ್ಟಕ್ಕೆ ತಂದಿರುವ ಯಶೋಗಾಥೆ ನಮ್ಮ ಮುಂದಿದೆ. ಆದರೆ ಈ ಜಾದೂ ಕೃಷಿಕ್ಷೇತ್ರದಲ್ಲಿ ಕೆಲಸ ಮಾಡಿದ ಯಾರಿಗಾದರೂ [ಸಣ್ಣ, ದೊಡ್ಡ, ಮಧ್ಯಮವರ್ಗದ ರೈತರಿಗೆ] ಆಗಿದೆಯೇ ಅನ್ನುವ ಪ್ರಶ್ನೆ ಬಂದಾಗ ನಮಗೆ ಇಲ್ಲಿರುವ ಸಂಸ್ಥಾಗತ ಚೌಕಟ್ಟಿನ ಪದರಗಳ ಅರಿವು ಹೆಚ್ಚಾಗಿ ಆಗುತ್ತದೆ. ಕೃಷಿ ಅಷ್ಟು ಲಾಭದಾಯಕವಲ್ಲ. ರೈತರು ಹಣ ಮಾಡುತ್ತಿಲ್ಲ. ಆದರೆ ಆ ಕ್ಷೇತ್ರವನ್ನೇ ನಂಬಿ ಮುಂದುವರೆದ ಎಷ್ಟೋ ಸಂಸ್ಥೆಗಳು - ಐಟಿಸಿ, ಬ್ರಿಟಾನಿಯಾ, ಆಹಾರ ವ್ಯಾಪಾರದಲ್ಲಿ ತೊಡಗಿರುವ ಬೃಹತ್ ಸೂಪರ್ ಬಜಾರುಗಳು - ಎಲ್ಲರೂ ಲಾಭವನ್ನು ಆರ್ಜಿಸುವ ಸಾಧ್ಯತೆಯನ್ನು - ಮೇಲ್ಮಿತಿಯಿಲ್ಲದ ಲಾಭಾರ್ಜನೆಯ ಕನಸನ್ನು ಕಾಣಬಹುದಾದರೂ ಆ ಕನಸು ಕೃಷಿಕರಿಗೆ ಮಾತ್ರ ಇಲ್ಲವಾಗುತ್ತದೆ.

ಹೀಗಾಗಿ ಕೃಷಿ ಕೈಕೊಟ್ಟಾಗ - ಅನಿಯಮಿತ ಆರ್ಥಿಕ ಜವಾಬ್ದಾರಿಯನ್ನು ಹೊತ್ತು ನಡೆವ ರೈತರು ಮನೆ, ಆಸ್ತಿ, ಆಭರಣಗಳನ್ನು ಮಾರಿಕೊಳ್ಳಬೇಕಾಗಿ ಬಂದಾಗ - ಅವರಿಗೆ ಕಾಣುವ ದಾರಿ ಕರಾಳವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾದರೂ ಸಂಸ್ಥಾಗತ ಮೂಲಗಳು ಕೃಷಿಯಲ್ಲಿ ತೊಡಗಲು ನಮ್ಮ ಸರಕಾರಗಳು ಪರವಾನಗಿ ನೀಡುತ್ತಿಲ್ಲ - ಗುತ್ತಿಗೆ ಕೃಷಿಯೂ ನಮ್ಮ ದೇಶದಲ್ಲಿ ಪ್ರಚಲಿತವಿಲ್ಲ. ಮಿಕ್ಕ ವಿಕಸಿತ ದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ಜನಸಂಖ್ಯೆ ಕಡಿಮೆಯಾದ್ದರಿಂದ ಅವರಿಗೆ ಹೊಂದುವ ಪ್ರಣಾಲಿಗಳನ್ನು ರೂಪಿಸುವುದು ಆ ಸರಕಾರಗಳಿಗೆ ಸಾಧ್ಯವಾಗಿದೆಯಾದರೂ, ನಮ್ಮ ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಯನ್ನು ನಾವು ಗುರುತಿಸಿಯೇ ಇಲ್ಲ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿ ಆತ್ಮಹತ್ಯೆಗೆ ರೈತರೇ ಏಕೆ ಎಂದು ಕೇಳುವ ಪ್ರಶ್ನೆಯನ್ನು ರೈತರಲ್ಲದೆ ಇನ್ಯಾರು ಎಂದು ಕೇಳುವ ದುರಂತಮಯ ಸ್ಥಿತಿಗೆ ನಾವು ಬಂದುಬಿಟ್ಟಿದ್ದೇವೆ.

No comments:

Post a Comment