"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.
ಒಂದು ಪೆನ್ನಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ? ಇನ್ನು ಅದರಿಂದ ಬರಬಹುದಾದ ಪದ ಪುಂಜಗಳ ಬೆಲೆ ಎಷ್ಟಿರಬಹುದು? ಆ ಪೆನ್ನಿಗೆ ಅವರದೇ ಆದ ಇಂಕನ್ನೂ ಬಳಸಬೇಕಂತೆ, ಮತ್ತು ಮಾ ಬ್ಲಾ ಪೆನ್ನು ಉಪಯೋಗಿಸುವವರ ಜೀವನಶೈಲಿಯೇ ಭಿನ್ನವಾದದ್ದಗಿರುತ್ತದೆಯೇ? ಈ ಎಲ್ಲ ಪ್ರಶ್ನೆಗಳನ್ನು ನಾವು ಒಟ್ಟಾರೆ ತತ್ತರಿಸಿಹೋಗುತ್ತಿರುವ ಬಡತನವಿರುವ - ಒಂದು ಬಾರಿ ನೆರೆ ಬಂದರೆ ಜೀವನವೇ ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಕೇಳುತ್ತಿದ್ದೇವೆ. ಇದಕ್ಕೆ ಸರಳವಾದ ಉತ್ತರವಿಲ್ಲವಾದರೂ, ಆಗಾಗ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದು ಒಳಿತು. ಈ ಪ್ರಶ್ನೆಗಳು ನೈತಿಕ ಮೌಲ್ಯದ್ದಾದರೂ, ಆ ನೈತಿಕ ಮೌಲ್ಯಗಳು ಎಷ್ಟೋಬಾರಿ ಖಾಸಗಿಯಾದ ಜಾಗಗಳನ್ನು ಆಕ್ರಮಿಸಿದರೂ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.
ಮಾ ಬ್ಲಾ ಪೆನ್ನು ತುಂಬಾ ದುಬಾರಿಯಾದದ್ದು. ಆ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಒಂದು ರೀತಿಯಿಂದ ಅಸಮರ್ಪಕವೇ ಅನ್ನಬಹುದು. ಯಾಕೆಂದರೆ ಸರಳತೆಯ ಜೀವನವನ್ನು ಜೀವಿಸಿದ ಮಹಾತ್ಮಾ ಗಾಂಧಿಯ ಹೆಸರಿನ ಜೊತೆಗೆ ಮಾ ಬ್ಲಾ ಪೆನ್ನನ್ನು ಕೊಂಡಿಹಾಕುವ ಯತ್ನ ಅತಿರೇಕದ್ದು ಅನ್ನಿಸದೇ ಇರುವುದಿಲ್ಲ. ಆ ಪೆನ್ನಿನ ಈಚಿನ ಜಾಹೀರಾತು ಇಂತಿದೆ:
ಸ್ವಾತಂತ್ರ. "ಸತ್ಯದ ಮಾರ್ಗ ಅಹಿಂಸೆಯ ಮೂಲಕವೇ ಇದೆ". ಆತನ ನಂಬುಕೆಗಳೇ ಆತನ ಶಕ್ತಿಯಾಗಿತ್ತು, ಸಹಿಷ್ಣುತೆ ಆತನ ನಿಜವಾದ ಜಾತಿಯಾಗಿತ್ತು. ಸಾಧಿಸಿಯೇ ತೀರುತ್ತೇನೆಂಬ ಹುಂಬ ಹಠ ತೋರಿ, ಸಂತ ಜೀವನದ ಉದಾಹರಣೆಯ ಅಸ್ತ್ರವನ್ನು ಹಿಡಿದು ದೇಶಕ್ಕೆ ಸ್ವಾತಂತ್ರವನ್ನೂ ಜಗತ್ತಿಗೆ ಅಹಿಂಸೆ ಎನ್ನುವ ಹೊಸ ಅಸ್ತ್ರವನ್ನೂ ಆತ ನೀಡಿದರು. ಹೀಗೆ ತನ್ನ ಮಾತಿನಿಂದ ಜನಸ್ಥೋಮವನ್ನು ಅವರಾತ್ಮಗಳನ್ನೂ ಕದಲಿಸಬಲ್ಲ ಶಕ್ತಿಯಿದ್ದ ಮನುಷ್ಯನಿಗೆ ಮಾ ಬ್ಲಾ ತನ್ನ ಗೌರವವನ್ನರ್ಪಿಸುತ್ತದೆ.
ನಿಯಮಿತ ಸಂಖ್ಯೆಯಲ್ಲಿ ತಯಾರಿಸಿದ ಮಹಾತ್ಮಾ ಗಾಂಧಿ ಸರಣಿ. ಹತ್ತಿಯ ವಸ್ತ್ರವನ್ನು ಪ್ರತಿನಿಧಿಸುವ ಬಿಳಿಯ ಅರಗಿನ ಪದರ. ಮುಚ್ಚಳದ ಮೇಲೆ ಸ್ಪಿಂಡಲ್ ಮೇಲೆ ಖಾದಿಯ ದಾರ ಸುತ್ತಿದಂತೆ ರೂಪಿಸಿರುವ ೯೨೫ ಸ್ಟರ್ಲಿಂಗ್ ಬೆಳ್ಳಿಯ ಹೊದಿಕೆ, ಕ್ಲಿಪ್ಪಿನ ಮೇಲೆ ಕೇಸರಿ ಬಣ್ಣದ ಮ್ಯಾಂದರಿನ್ ಗಾರ್ನೆಟ್, ಕೈಯಿಂದ ತಯಾರಿಸಿದ ಗಾಂಧಿಯ ಚಹರೆಯಿರುವ ೧೮ ಕ್ಯಾರೆಟ್ ಚಿನ್ನ-ರೋಡಿಯಮ್ ಕವಚದ ನಿಬ್ಬು. ಮಾ ಬ್ಲಾ. ಹೇಳಲೊಂದು ಕಥೆ.
ಈ ಪೆನ್ನಿನ ಬೆಲೆಯೆಷ್ಟಿರಬಹುದು? ಊಹಿಸಲು ಸಾಧ್ಯವಿಲ್ಲ. ದೆಹಲಿ ಏರ್‍ಪೋರ್ಟಿನಲ್ಲಿ ಅದೇ ಕೆಲಸವಾಗಿ ಹೋಗಿ ವಿಚಾರಿಸಿದೆ. ಅದರ ಬೆಲೆ ರೂ. ಒಂದು ಲಕ್ಷ ಅರವತ್ತೇಳು ಸಾವಿರದ ಐನೂರು ರೂಪಾಯಿ. ಇದರಲ್ಲಿ ಮತ್ತೊಂದು ಮಾಡೆಲ್ ಸಹಾ ಉಂಟು ಅದು ಎರಡು ಲಕ್ಷಕ್ಕೂ ಹೆಚ್ಚಿನ ಬೆಲೆಯ ಪೆನ್ನು. ಅದನ್ನು ಮಹಾತ್ಮನ ಮೊಮ್ಮಗ ತುಷಾರ್ ಗಾಂಧಿಯ ಕೈಯಲ್ಲಿಟ್ಟು ಆತನದ್ದೂ ಒಂದು ಚಿತ್ರವನ್ನು ತೆಗೆದು ಆ ಕಂಪನಿಯವರು ಮುದ್ರಿಸಿಬಿಟ್ಟರು.
ಒಂದು ಪೆನ್ನಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ? ಇನ್ನು ಅದರಿಂದ ಬರಬಹುದಾದ ಪದ ಪುಂಜಗಳ ಬೆಲೆ ಎಷ್ಟಿರಬಹುದು? ಆ ಪೆನ್ನಿಗೆ ಅವರದೇ ಆದ ಇಂಕನ್ನೂ ಬಳಸಬೇಕಂತೆ, ಮತ್ತು ಮಾ ಬ್ಲಾ ಪೆನ್ನು ಉಪಯೋಗಿಸುವವರ ಜೀವನಶೈಲಿಯೇ ಭಿನ್ನವಾದದ್ದಗಿರುತ್ತದೆಯೇ? ಈ ಎಲ್ಲ ಪ್ರಶ್ನೆಗಳನ್ನು ನಾವು ಒಟ್ಟಾರೆ ತತ್ತರಿಸಿಹೋಗುತ್ತಿರುವ ಬಡತನವಿರುವ - ಒಂದು ಬಾರಿ ನೆರೆ ಬಂದರೆ ಜೀವನವೇ ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಕೇಳುತ್ತಿದ್ದೇವೆ. ಇದಕ್ಕೆ ಸರಳವಾದ ಉತ್ತರವಿಲ್ಲವಾದರೂ, ಆಗಾಗ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದು ಒಳಿತು. ಈ ಪ್ರಶ್ನೆಗಳು ನೈತಿಕ ಮೌಲ್ಯದ್ದಾದರೂ, ಆ ನೈತಿಕ ಮೌಲ್ಯಗಳು ಎಷ್ಟೋಬಾರಿ ಖಾಸಗಿಯಾದ ಜಾಗಗಳನ್ನು ಆಕ್ರಮಿಸಿದರೂ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.
ಉದಾಹರಣೆಗೆ ನಮ್ಮ ವಿದೇಶಾಂಗ ವಿಭಾಗದ ರಾಜ್ಯ ಮಂತ್ರಿಗಳಾದ ಶಶ್ ಥರೂರ್ ವಿಷಯವನ್ನೇ ಪರಿಗಣಿಸೋಣ - ಆತ ವಿಶ್ವ ಸಂಸ್ಥೆಯಲ್ಲಿ ಬಹಳ ಕಾಲದವರೆಗೂ ಕೆಲಸ ಮಾಡಿ, ನ್ಯೂ ಯಾರ್ಕಿನಲ್ಲಿ ವಾಸವಾಗಿದ್ದು, ಪ್ರವಾಸ ಹೋದಾಗಲೆಲ್ಲಾ ಪಂಚತಾರಾ ಹೊಟೇಲುಗಳಲ್ಲಿ ಇಳಿದುಕೊಳ್ಳುತ್ತಿದ್ದದ್ದು ಸಹಜವೇ ಆಗಿತ್ತು. ಹಾಗೆಯೇ ಅವರಿಗೆ ವಿಮಾನದ ಮುಂಭಾಗದ ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಪ್ರಯಾಣ ಮಾಡುವುದೂ ಸಹಜವಾಗಿತ್ತು. ಆದರೆ ಈಚೆಗೆ ಕೇಂದ್ರ ಸರಕಾರ ಆದೇಶ ಹೊರಡಿಸಿ ಮಂತ್ರಿಗಳೆಲ್ಲಾ ಎಕಾನಮಿಯಲ್ಲಿ ಪ್ರಯಾಣ ಮಾಡಬೇಕೆಂದು ಹೇಳಿದ್ದರ ಫಲಿತವಾಗಿ ಇದ್ದಕ್ಕಿದ್ದ ಹಾಗೆ ಥರೂರರ ಜೀವನ ಶೈಲಿಯ ಮೇಲೆ ಅನೇಕರ ಗಮನ ಕೇಂದ್ರೀಕೃತವಾಯಿತು. ಆದರೆ ಥರೂರರಿಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲ. ಸರಕಾರದ ನೀತಿಯನ್ನು ಪಾಲಿಸೋಣ, ಆದರೆ ಖರ್ಚಿನ ವಿಷಯಕ್ಕೆ ಬಂದಾಗ ಸರಕಾರೀ ನೀತಿ ತನಗೆ ನೀಡುವುದಕ್ಕಿಂತಾ ಉತ್ತಮವಾದ ಜೀವನಶೈಲಿಯನ್ನು ತಾನು ಸಂಪಾದಿಸಿರುವ ಹಣದಲ್ಲಿ ಪಡೆದುಕೊಂಡರೆ - ಅದು ಬಡವರ, ತೆರಿಗೆ ನೀಡುವ ಜನತೆಯ ಮೇಲೆ ಹೊರೆಯಾಗದಿದ್ದರೆ ಯಾರಾದರೂ ಯಾಕೆ ವಿರೋಧ ವ್ಯಕ್ತ ಪಡಿಸಬೇಕು ಅನ್ನುವ ಸಹಜ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅರ್ಥಾತ್ ತಮ್ಮ ಹಣದಲ್ಲಿ ತಾವು ಐಷಾರಾಮ ಮಾಡಿದರೆ ಸಮಸ್ಯೆ ಏನು? ಅನ್ನುವ ಪ್ರಶ್ನೆಗೆ ನಾವು ಆಷಾಢಭೂತಿಗಳಾಗದೇ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ.
ಇದೇ ಪ್ರಶ್ನೆಯನ್ನು ಯಾರೋ ರಾಹುಲ್ ಗಾಂಧಿಗೆ ಕೇಳಿದಾಗ ಅವರು ನೀಡಿದ ಉತ್ತರ ಕುತೂಹಲದ್ದಾಗಿತ್ತು.. ಸರಳ ಜೀವನ ಎನ್ನುವುದನ್ನು ನೆರೆಯ/ಬರದ ಕಾಲದಲ್ಲಿ ಮಾತ್ರ ಪಾಲಿಸಬೇಕು ಅನ್ನುವುದನ್ನು ತಾವು ನಂಬುವುದಿಲ್ಲವೆಂದೂ, ರಾಜಕೀಯದಲ್ಲಿರುವ ಜನಸಾಮಾನ್ಯರ ನಡುವೆ ಇರುವ ತಮ್ಮಂತಹವರು ಸರಳ ಜೀವನಶೈಲಿಯನ್ನು ಸಹಜವಾಗಿಯೇ ತಮ್ಮದಾಗಿಸಿಕೊಳ್ಳಬೇಕೆಂದು ರಾಹುಲ್ ಹೇಳಿದರು.
ಆದರೆ ನಮ್ಮಲ್ಲೆಲ್ಲ ಈ ದ್ವಂದ್ವ ಯಾವಾಗಲೂ ತಾಂಡವವಾಡುತ್ತಲೇ ಇರುತ್ತದೆ - ನಿರಂತರ ಮೂರು ವರ್ಷಗಳ ಬರವನ್ನು ಕಂಡ ಪ್ರದೇಶಕ್ಕೆ ಯಾವರೀತಿಯ ಧನಸಹಾಯ ಮಾಡಬೇಕು ಎಂದು ಚರ್ಚಿಸಲು ಬರುವ ಅಧಿಕಾರಿಗಳ ಪ್ರಯಾಣ ವಿಮಾನದ ಮುಂಭಾಗದಲ್ಲಿ ನಡೆಯಬೇಕೇ? ಅವರಿಗೂ, ದೇಶದ ವಿದೇಶಾಂಗ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಅಧಿಕಾರಿಗಳಿಗೂ [ಚರ್ಚೆಗೊಳಗಾಗುವ ವಿಷಯವನ್ನು ಹೊರತು ಪಡಿಸಿದರೆ] ಏನು ವ್ಯತ್ಯಾಸ? ಈ ರೀತಿಯಾಗಿ ಸುತ್ತಲೂ ಬಡತನವಿರುವಾಗ ಐಷಾರಾಮಕ್ಕೆ ಹಣ ದುಂದು ಮಾಡಬಾರದು ಎನ್ನುವುದಾದರೆ - ಮುಂಭಾಗ/ಹಿಂಭಾಗವೆನ್ನುವ - ಪಂಚತಾರಾ -ತ್ರಿತಾರಾ ಹೊಟೇಲುಗಳೆನ್ನುವ ವಿಭಾಗಗಳೇಕೆ ಇನ್ನೂ ಇವೆ? ಕೆಲವರಿಗೆ ದೊಡ್ಡ ಕಾರೂ, ಕೆಲವರಿಗೆ ಪುಟ್ಟ ಕಾರೂ, ಕೆಲವರಿಗೆ ಆಫೀಸಿನ ಬಸ್ಸೂ ಯಾಕಿರಬಹುದು?
ಈ ಎಲ್ಲವನ್ನೂ ವಿಚಾರ ಮಾಡಿನೋಡಿದಾಗ ನಮಗೆ ಸರಳ ಸಮಾಧಾನ ಸಿಗದಿದ್ದರೂ ಕೆಲವು ವಿಚಾರಗಳು ಸಾಂಕೇತಿಕ ಮಹತ್ವ ಪಡೆದು ನಿಲ್ಲುತ್ತದೆ ಅನ್ನುವುದು ಮುಖ್ಯವಾದ ವಿಚಾರ. ದೇಶದ ಹಿತವನ್ನು ರಕ್ಷಿಸಬೇಕಾದ ಪ್ರಧಾನ ಮಂತ್ರಿಗಳ ಸಮಯ ಕಿಮ್ಮತ್ತಿನದ್ದು. ಹೀಗಾಗಿ ಅವರಿಗೆ ಪ್ರತ್ಯೇಕ ವಿಮಾನವಿದ್ದರೆ ಅದು ಐಷಾರಾಮಕ್ಕಿಂತ ಅವಶ್ಯಕತೆಗೆ ಸಂಬಂಧಿಸಿದ್ದು. ಹಾಗೆಯೇ ಮಂತ್ರಿಗಳಾಗಿದ್ದವರು ಕಡಿಮೆ ಜನರಿರುವ - ಹೆಚ್ಚು ಅಗಲದ ಸೀಟಿರುವ ಮುಂಭಾಗದಲ್ಲಿ ಕೂತರೆ, ಅಲ್ಲಿ ಕೆಲವು ಕಾಗದ ಪತ್ರಗಳನ್ನು ನೋಡಿ ಸಮಯವನ್ನು ಉಳಿತಾಯ ಮಾಡಬಹುದು. ಎಲ್ಲಕ್ಕೂ ಒಂದು ವಾದವಿರುತ್ತದೆ. ತನ್ನ ಹಣದಲ್ಲಿ ತಾನು ಐಷಾರಾಮ ಮಾಡುತ್ತೇನೆನ್ನುವ ಥರೂರ್ ತಮ್ಮನ್ನು ಕೇಳಿಕೊಳ್ಳಬೇಕಾದ ಒಂದು ಮುಖ್ಯವಾದ ಪ್ರಶ್ನೆ ಹೀಗಿದೆ: ತಾವು ರಾಜಕೀಯಕ್ಕೆ ಬಂದ ಕೂಡಲೇ ಸೂಟು ಬೂಟು ಧರಿಸುವುದನ್ನು ಬಿಟ್ಟು ಕುರ್ತಾ ಬಾಂಧ್‌ಗಲಾ ಧರಿಸುವುದಕ್ಕೆ ಯಾಕೆ ಪ್ರಾರಂಭಿಸಿದರು? ಅರ್ಥಾತ್ ರಾಜಕೀಯದ ಸಾಂಕೇತಿದ ಪೋಷಾಕು ಸೂಟು ಅಲ್ಲ ಎನ್ನುವುದರಿಂದಲೇ? ದೀಪಾವಳಿಯ/ಹಬ್ಬದ ದಿನ ನಾವೆಲ್ಲರೂ ಯಾಕೆ ನಮ್ಮ ಪ್ರತಿದಿನದ ಪೋಷಾಕನ್ನು ಧರಿಸುವುದಿಲ್ಲ?
ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ಮಾ ಬ್ಲಾ ಪೆನ್ನಿಗೂ ಅದರದೇ ಸ್ಥಾನವಿದೆ ಅನ್ನುವುದು ನಮಗೆ ಸಹಜವಾಗಿ ಹೊಳೆಯುತ್ತದೆ. ಆದರೂ ಮಾ ಬ್ಲಾ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಸಾಂಕೇತಿಕವಾಗಿಯಾಗಲೀ, ಸಾಂದರ್ಭಿಕವಾಗಿಯಾಗಲೀ ಸಮಂಜಸವಲ್ಲವಾದ್ದರಿಂದ ಈ ಪ್ರಶ್ನೆ ನಮ್ಮ ಮುಂದೆ ಉದ್ಭವವಾಗುತ್ತದೆ.
ಕಳೆದ ವರ್ಷ ನಾನು ಏರ್ ಇಂಡಿಯಾದ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆ ಸಂಸ್ಥೆಯ ಒಬ್ಬ ಉದ್ಯೋಗಿ ಪಕ್ಕದಲ್ಲಿ ಕೂತು ಮಾತಿಗೆ ತೊಡಗಿದ. ಮಾತು ಮುಂದಕ್ಕೆ ಹೋದಾಗ ಆತ ಇನ್ಫಿಯ ನಾರಾಯಣ ಮೂರ್ತಿ ಮತ್ತು ವಿಪ್ರೋರ ಪ್ರೇಂಜಿ ಬಗ್ಗೆ ಸಿಟ್ಟಾಗಿದ್ದದ್ದು ಕಾಣಿಸಿತು. ಆತನ ವಾದ ಸರಣಿ ಹೀಗಿತ್ತು. "ನೋಡಿ ನಾರಾಯಣ ಮೂರ್ತಿ, ಪ್ರೇಂಜಿ ತಮ್ಮ ಸರಳ ಜೀವನಕ್ಕೆ ಖ್ಯಾತಿ ಪಡೆದಿದ್ದಾರೆ, ಪ್ರತಿಬಾರಿಯೂ ಎಕಾನಮಿಯಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಅವರಿಗೆ ಎಕ್ಸಿಕ್ಯೂಟಿವ್ ಕ್ಲಾಸಿನ ಟಿಕೇಟ್ ಕೊಳ್ಳುವ ತಾಕತ್ತಿರುವಾಗ ಕಡಿಮೆ ಬೆಲೆಯ ಟಿಕೆಟ್ಟನ್ನು ಪಡೆದು ಹಿಂಭಾಗದಲ್ಲಿ ಪ್ರಯಾಣಿಸಬೇಕಾದ ಅವಶ್ಯಕತೆಯೇನು? ಇಂಥವರಿಗಾಗಿಯೇ ಮಾಡಿರುವ ಸೀಟುಗಳನ್ನು ಖಾಲಿ ಬಿಡುವುದರಿಂದ ನಮ್ಮ ಆದಾಯ ಕುಸಿಯುವುದಿಲ್ಲವೇ? ಇದೂ ಸಾಲದ್ದಕ್ಕೆ ನಾವುಗಳು ಅವರನ್ನು ಅಪ್‍ಗ್ರೇಡ್ ಮಾಡಿ ಮುಂದಕ್ಕೆ ಕೂಡಿಸದಿದ್ದರೆ ಜನರೂ - ನೋಡಿ ಈ ಜನರಿಗೆ ನಾರಾಯಣ ಮೂರ್ತಿಯನ್ನು ಗುರುತಿಸುವ ಜ್ಞಾನವೂ ಇಲ್ಲ ಎಂದು ಬೈಯ್ಯುತ್ತಾರೆ." ಹೀಗೆ ನಾರಾಯಣ ಮೂರ್ತಿ, ಪ್ರೇಂಜಿಗಳನ್ನು ತಮ್ಮ ಸರಳತೆಗೆ ಟೀಕಿಸಿದ ವ್ಯಕ್ತಿಯನ್ನು ನಾನು ಮೊದಲಬಾರಿಗೆ ನೋಡಿದ್ದೆ. ಆದರೆ ಆತನ ವಾದದಲ್ಲಿನ ಹುರುಳನ್ನು ನಾನು ಇಂದಿಗೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಈ ಎಲ್ಲವನ್ನೂ ನೋಡಿದಾಗ ಗಾಂಧಿಯ ಮಹತ್ವ ನಮಗೆ ತಿಳಿಯುತ್ತದೆ. ಆತನ ಜೀವನ ಶೈಲಿಯೂ, ಜೀವನ ಸಂದೇಶವೂ ಒಂದೇ ಆಗಿದ್ದರಿಂದ ಈ ರೀತಿಯ ದ್ವಂದ್ವಗಳು ಎಂದೂ ಉದ್ಭವವಾಗುತ್ತಿರಲಿಲ್ಲ. ಅದೇನೇ ಇದ್ದರೂ ಅದು ಇತರರ ಸಮಸ್ಯೆಯಾಗಿತ್ತು. ಹೀಗೆ ಈ ಇಂಥ ವಿಷಯಗಳಲ್ಲಿ ದ್ವಂದ್ವವಿಲ್ಲದಿದ್ದರೆ ಪೆನ್ನು, ವಿಮಾನಯಾನ, ವಾಸ್ತವ್ಯದ ಜಾಗ, ಯಾವುದೂ ಒಂದು ಸಮಸ್ಯೆಯಾಗುವುದಿಲ್ಲ. ಆದರೆ ನಾವೆಲ್ಲರೂ ಗಾಂಧಿಯಂತೆ ಮಹಾತ್ಮರಾಗದೇ ಹುಲು ಮಾನವರಾದ್ದರಿಂದ, ನಮಗೆ ಈ ಸಮಸ್ಯೆಗಳೇ ದೊಡ್ಡದಾಗಿ ದೇಶದ ಸಮಸ್ಯೆಗಳು ಎರಡನೇ ಸ್ಥಾನವನ್ನು ಪಡೆದುಬಡುತ್ತವೆ.
ಅಂದಹಾಗೆ ಗಾಂಧಿ ಮಹಾತ್ಮನಾಗುವ ಪ್ರಕ್ರಿಯೆಯ ಮೊದಲ ಘಟನೆ ನಡೆದದ್ದು ಎಲ್ಲಿ? - ಎಂದು ಒಂದು ಕ್ಷಣದ ಮಟ್ಟಿಗೆ ಯೋಚಿಸಿ! ಅದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯಿತು. ಆ ಘಟನೆಯ ಮುಖ್ಯ ತಕರಾರು ಏನಾಗಿತ್ತು? ಗಾಂಧಿಗೆ ರೈಲಿನ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಅದಕ್ಕೆ ಪರವಾನಗಿ ಸಿಕ್ಕದೇ ರೈಲಿನಿಂದ ಹೊರಕ್ಕೆ ಹಾಕಲಾಗಿತ್ತು. ಗಾಂಧಿ ಸೂಟು ಧರಿಸಿದ್ದರು!
ಈಗ ಯಾರೋ ನನಗೆ ಕೊಟ್ಟ, ನನ್ನ ಬಳಿಯಿರುವ ಮಾ ಬ್ಲಾ ಪೆನ್ನನ್ನು ಏನು ಮಾಡಬೇಕೆನ್ನುವ ವಿಚಾರವನ್ನು ನಾನು ಪರಿಹರಿಸಲಾರದೇ ಒದ್ದಾಡುತ್ತಿದ್ದೇನೆ.
No comments:
Post a Comment