Saturday, April 6, 2013

ಚಿಕ್ಕಸಾಲಕ್ಕೆ ವಲಸೆಬಂದ ವಿಕಾಸವಾದಿಗಳುಎರಡು ದಶಕಗಳ ಕೆಳಗೆ ಮೈಕ್ರೊಫೈನಾನ್ಸ್ [ಚಿಕ್ಕಸಾಲ]ದ ಮೊದಲ ಅಲೆ ಪ್ರಾರಂಭವಾಯಿತು ಎನ್ನಬಹುದು. ಚಿಕ್ಕಸಾಲವೆಂದರೆ ಸ್ವ-ಸಹಾಯ ಗುಂಪುಗಳೆಂದು ನಾವುಗಳು ಸರಳವಾಗಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ನಮ್ಮ ದೇಶಕ್ಕೆ ನಮ್ಮದೇ ಆದ ಸಹಕಾರೀ ತತ್ವದ ಮೇಲೆ ಆಧಾರಿತವಾದ ಮಹಿಳೆಯರಿಂದಲೇ ಚಲಾಯಿಸಲ್ಪಡುತ್ತಿದ್ದ ಲಕ್ಷಾಂತರ ಗುಂಪುಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿದ್ದುವು. ಈ ಗುಂಪುಗಳ ಜೊತೆಗೆ ಅಹಮದಾಬಾದಿನ ಸೇವಾ ಬ್ಯಾಂಕನ್ನು ಚಿಕ್ಕಸಾಲಿಗರೆಂದು ಕರೆಯುವುದು ಪ್ರತೀತಿಯಾಗಿತ್ತು. ಈ ಗುಂಪುಗಳನ್ನು ಆಯೋಜಿಸುತ್ತಿದ್ದ ಪ್ರದಾನ್, ಮೈರಾಡಾ, ಧಾನ್ ಫೌಂಡೇಷನ್, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣ ವಿಕಾಸ ವಿಭಾಗದಂತಹ ಸ್ವಯಂ ಸೇವಾ ಸಂಸ್ಥೆಗಳು, ತಮ್ಮದೇ ಮಹಿಳಾ ಸೇವಾ ಸಹಕಾರಿ ಬ್ಯಾಂಕಿನ ಮೂಲಕ ಚಿಕ್ಕಸಾಲವನ್ನು ನೀಡುತ್ತಿದ್ದ ಅಹಮದಾಬಾದಿನ ಸೇವಾ ಈ ಎಲ್ಲ ಸಂಸ್ಥೆಗಳಿಗೂ ತಾವು ನಡೆಸುತ್ತಿದ್ದ ವಿಕಾಸ ಕಾರ್ಯದ ಒಂದು ಭಾಗವಾಗಿ, ಬ್ಯಾಂಕುಗಳು ನೀಡುವ ವಿತ್ತೀಯ ಸೇವೆಗೆ ಪೂರಕವಾಗಿ, ಹಾಗೂ ಬ್ಯಾಂಕುಗಳು ಇಂಥ ಸೇವೆಗಳನ್ನು ಬಡವರಿಗೆ ನೀಡದಿದ್ದಾಗ ಅವುಗಳಿಗೆ ಸವಾಲಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತಿದ್ದುವು. 

ಸ್ವ-ಸಹಾಯ ಗುಂಪುಗಳನ್ನು ಪಾಶ್ಚಾತ್ಯಲೋಕ ತುಸು ಅನುಮಾನದಿಂದಲೇ ನೋಡುತ್ತಿದ್ದುವು - ಹಾಗೂ ನೋಡುತ್ತಿವೆ. ಈ ಅನುಮಾನಕ್ಕೆ ಪಾಶ್ಚಾತ್ಯಲೋಕದ ಕಾರಣ ಹೀಗಿದೆ: ಸ್ವ-ಸಹಾಯ ಗುಂಪುಗಳನ್ನು ಆಯೋಜಿಸುವವರು ಹೊರಗಿನ ಸ್ವಯಂ-ಸೇವಾ ಸಂಸ್ಥೆಗಳು. ಅವುಗಳಿಗೆ ಹೊರಗಿನಿಂದ ಧನಸಹಾಯ ಬರುತ್ತದಾದ್ದರಿಂದ, ಸ್ವ-ಸಹಾಯ ಗುಂಪುಗಳ ಒಟ್ಟಾರೆ ಖರ್ಚುಗಳು ಒಂದು ಜಾಗದಲ್ಲಿ ಇಡಿಯಾಗಿ ಸಿಗುವುದಿಲ್ಲವಾದ್ದರಿಂದ ಇದಕ್ಕೆ ಹಿಂಬಾಗಿಲಿನಿಂದ ಸಬ್ಸಿಡಿ ಕೊಟ್ಟಂತಾಗುತ್ತದೆ ಅನ್ನುವುದು ಆ ಲೋಕದ ವಾದ. ಸ್ವಯಂಭೂ ಆಗಿ ಗುಂಪುಗಳು ಉದ್ಭವವಾದರೆ ಅವುಗಳ ಉಸ್ತುವಾರಿಯ ಖರ್ಚು ಇನ್ನೂ ಹೆಚ್ಚೆನ್ನುವ ವಾದವನ್ನು ಒಪ್ಪುತ್ತಲೇ ನಾವು ಪಾಶ್ಚಾತ್ಯ ಲೋಕದ ಅನುಮಾನಗಳನ್ನು ಪಕ್ಕಕ್ಕಿಟ್ಟು ಮುನ್ನಡೆಯಬೇಕಾಗಿದೆ.

ಈಗ ಒಂದು ದಶಕದಿಂದಾದಿಯಾಗಿ ನಮಗೆ ಬೇರೊಂದೇ ಮಾದರಿಯ [ಎರಡನೆಯ ಅಲೆಯ] ಚಿಕ್ಕಸಾಲಿಗರು ಕಾಣಸಿಗುತ್ತಿದ್ದಾರೆ. ಈ ಚಿಕ್ಕಸಾಲಿಗರು ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕಿನ ಮಾದರಿಯನ್ನು ಕಾರ್ಯರೂಪಕ್ಕಿಳಿಸಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಜೊತೆಯಾಗಿ ಪಾಶ್ಚಾತ್ಯಲೋಕದಿಂದ ಆಮದಾದ ಬಂಡವಾಳ-ಆಧಾರಿತ ಮಾರುಕಟ್ಟೆಯ ಸೂತ್ರಗಳ ಮೇಲೆ ನಡೆವ ಒಂದು ಹೊಸ ಮಾದರಿಯನ್ನು ಮೈಗೂಡಿಸಿಕೊಂಡು ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸುವತ್ತ ಹೊಸ ಧಂಧೆಯನ್ನು ಪ್ರಾರಂಭಮಾಡಿದ್ದಾರೆ. ಈ ಎಲ್ಲ ಸಂಸ್ಥೆಗಳ ಹಿನ್ನೆಲೆ ಕುತೂಹಲದಿಂದ ಕೂಡಿದ್ದು. ಮೊದಲಿಗೆ ಬಡವರಿಗೆ ಸೇವೆಗಳನ್ನು ಒದಗಿಸಬೇಕೆಂದು ಪ್ರಾರಂಭ ಮಾಡಿದ ಈ ಸಂಸ್ಥೆಗಳು ಆ ಸೇವೆಯನ್ನೊದಗಿಸುತ್ತಲೇ - ಲಾಭವನ್ನೂ ಮಾಡಬಹುದು ಅನ್ನುವ ಸತ್ಯವನ್ನು ಕಂಡುಕೊಂಡವು. ಹೀಗೆ ಆರ್ಥಿಕ ಚೌಕಟ್ಟಿನ ಬುಡದಲ್ಲಿ [bottom of the pyramid] ಇರುವ ಮಾರುಕಟ್ಟೆಯ ಅವಕಾಶವನ್ನು ಗಳಿಸಿ ಬಡವರಿಗೆ ಸೇವೆ ಒದಗಿಸುತ್ತಲೇ ಲಾಭವನ್ನೂ ಗಿಟ್ಟಿಸಬಹುದಾದ ಸಾಧ್ಯತೆಗಳನ್ನು ಇವರುಗಳು ಕಂಡುಕೊಂಡರು.

ಈ ಜನರ ಹಿನ್ನೆಲೆ ಕುತೂಹಲದ್ದು. ಹೈದರಾಬಾದಿನಲ್ಲಿ ಪ್ರಾರಂಭವಾದ ಎಸ್.ಕೆ.ಎಸ್, ಷೇರ್, ಸ್ಪಂದನಾ, ಬೆಂಗಳೂರಿನಲ್ಲಿ ಪ್ರಾರಂಭವಾದ ಗ್ರಾಮೀಣ ಕೂಟ, ತಮಿಳುನಾಡಿನಲ್ಲಿನ ಆಸಾ, ಬಂಗಾಳದಲ್ಲಿನ ವಿಲೇಜ್ ವೆಲ್ಫೇರ್ ಸೊಸೈಟಿ ಮತ್ತು ಬಂಧನ್ - ಹೀಗೆ ಈ ಎಲ್ಲ ಸಂಸ್ಥೆಗಳ ಹಿಂದಿನ ಜನ ಸ್ವಯಂಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿ, ವಿಕಾಸದಬಗ್ಗೆ ತಲೆಕೆಡಿಸಿಕೊಂಡವರು. ಮೂಲಭೂತವಾಗಿ ಈ ಸಂಸ್ಥೆಗಳ ಜನರ ಬಳಿ ಇದ್ದದ್ದು ಬಡವರ ಬದುಕಿನ ಬಗೆಗಿನ ಜ್ಞಾನ, ಜನರ ಸಂಪರ್ಕ, ಹಾಗೂ ಹಳೆಯ ಕೆಲಸದ ಒಳ್ಳೆಯ ಹೆಸರು. ಆದರೆ ಇವರುಗಳ ಬಳಿ ಆರ್ಥಿಕ ಬಂಡವಾಳ ಇರಲಿಲ್ಲ. ಯಾರೂ ಶ್ರೀಮಂತರೂ ಅಲ್ಲ, ವ್ಯಾಪಾರ ಮನೋಭಾವದ ಕುಟುಂಬಕ್ಕೆ ಸಂದವರೂ ಅಲ್ಲ, ವ್ಯಾಪಾರಿಗಳೂ ಆಗಿರಲಿಲ್ಲ. ಆದರೆ ಅವರುಗಳಿಗೆ ಬಹುಶಃ ಸ್ವ-ಸಹಾಯ ಗುಂಪುಗಳ ಮೊದಲ ಅಲೆಯ ಕೆಲಸ ಇಷ್ಟವಾಗಲಿಲ್ಲ ಅನ್ನಿಸುತ್ತದೆ. ಸ್ವ-ಸಹಾಯ ಗುಂಪುಗಳ ಕೆಲಸಮಾಡಿದಾಗ ಅದರ ಫಲ ಸುಲಭವಾಗಿ ಕಾಣುವುದಿಲ್ಲ. ಅದನ್ನು ಅಳೆಯುವುದೂ ಕಷ್ಟ. ಹಾಗೂ ಇವರ ಕೆಲಸಕ್ಕೂ - ಫಲಿತಕ್ಕೂ ಕಾರ್ಯಕಾರಣ ಸಂಬಂಧ ಏರ್ಪಡಿಸುವುದು ಸರಳವೂ ಆಗಿರಲಿಲ್ಲ. ಆದರೆ ಗ್ರಾಮೀಣ್ ಮಾದರಿಯ ಚಿಕ್ಕಸಾಲ ಒಂದು ಚೌಕಟ್ಟಿನಲ್ಲಿ ನಡೆಯುತ್ತದೆ ಹಾಗೂ ಒಂದು ಶಿಸ್ತಿನಿಂದ ಕೂಡಿದ್ದಾಗಿದೆ. ಹೀಗಾಗಿ ಬಡವರಿಗೆ ಸಾಲ ಕೊಟ್ಟು ವಾಪಸ್ಸು ಪಡೆಯುವುದು ಸಾಧ್ಯ ಎನ್ನುವುದನ್ನು ಈ ಚಿಕ್ಕಸಾಲಿಗರು ನಿರೂಪಿಸಿದರು.

ಒಂದು ನಿಟ್ಟಿನಲ್ಲಿ ಈ ಎರಡನೆಯ ಅಲೆಯ ಚಿಕ್ಕಸಾಲಿಗರು ಬ್ಯಾಂಕುಗಳು ಪ್ರವೇಶ ಮಾಡಲು ಸಾಧ್ಯವಾಗದ ಒಂದು ಕ್ಷೇತ್ರಕ್ಕೆ ಪ್ರವೇಶ ಮಾಡಿ - ಹೀಗೂ ವಿತ್ತೀಯ ಸೇವೆಗಳನ್ನು ಒದಗಿಸಬಹುದು ಅನ್ನುವುದನ್ನು ನಿರೂಪಿಸಿದರು. ಚಿಕ್ಕಸಾಲದ ಈ ಕ್ರಾಂತಿ ನಿರೂಪಿಸಿದ್ದು ಆ ವರೆಗೂ ನಾವು ಒಪ್ಪಿಕೊಳ್ಳಲು ತಯಾರಿಲ್ಲದ ಎರಡು ವಿಚಾರಗಳನ್ನು - ಬಡವರಿಗೆ ಸಾಲ ನೀಡಿದರೆ - ಅದನ್ನು ಮರುಪಾವತಿ ಮಾಡುವ ಚೌಕಟ್ಟು ಒದಗಿಸಿದಾಗ - ಆ ಚೌಕಟ್ಟಿನಲ್ಲಿ ತುಸು ಪಾಪಪ್ರಜ್ಞೆ ಹಾಗೂ ಭಯದ ಅಂಶವನ್ನು ಸೇರಿಸಿದಾಗ - ವಸೂಲಿ ಕಷ್ಟದ ಮಾತಲ್ಲ ಅನ್ನುವುದು ಒಂದು ಅಂಶವಾದರೆ, ಎರಡನೆಯ ಅಂಶ ಪುಟ್ಟ ಸ್ಥರದಲ್ಲಿ ಸಾಲ ಕೊಡುವಾಗ ಬಡ್ಡಿದರ ಹೆಚ್ಚಿನ ಮಹತ್ವವನ್ನು ಒಳಗೊಂಡಿಲ್ಲ - ಬದಲಿಗೆ ೨೪ ರಿಂದ ೩೦ ಪ್ರತಿಶತ ಬಡ್ಡಿಯನ್ನು ಈ ಸಾಲಗಳ ಮೇಲೆ ಪಾವತಿ ಮಾಡಿ ಬಡವರು ಸಾಲ ಪಡೆಯಲು ತಯಾರಿದ್ದಾರೆ ಅನ್ನುವುದು.

ಈ ಸ್ಥರದ ಗ್ರಾಹಕರಿಗೆ ಸಾಲ ನೀಡುವುದೂ ವಸೂಲಿ ಮಾಡುವುದೂ ಹೆಚ್ಚಿನ ಖರ್ಚಿನ ಬಾಬತ್ತಾದ್ದರಿಂದ ಈ ರೀತಿಯ ಬಡ್ಡಿಯನ್ನು ಸ್ವೀಕರಿಸುವುದು ಸಹಜ ಎಂದು ಈ ಚಿಕ್ಕ ಸಾಲಿಗರು ವಾದಿಸಿದರು. ಸ್ವ ಸಹಾಯ ಗುಂಪುಗಳೂ ಈ ರೀತಿಯ ಬಡ್ಡಿಯನ್ನೇ ವಸೂಲು ಮಾಡುತ್ತಿವೆ ಎನ್ನುವುದನ್ನು ಈ ಜನ ನಮಗೆ ಎತ್ತಿ ತೋರಿಸಿದರು. ಹಾಗೂ ಸ್ಥಳೀಯವಾಗಿ ೩೬ ರಿಂದ ೪೮/೬೦ ಪ್ರತಿಶತ ಸಾಲ ಸಿಗುವ ಸಂದರ್ಭದಲ್ಲಿ ಸಾಲ ದೊರೆಯುವುದೇ ಕಷ್ಟದ ಮಾತಾದಾಗ ಮೊದಲಿಗೆ ಬೇಕಾದ್ದು ವಿತ್ತೀಯ ಸೇವೆ - ಬಡ್ಡಿಯ ಮಾತು ಆಮೇಲೆ ಅನ್ನುವ ವಾದ ಚಾಲ್ತಿಗೆ ಸರಳವಾಗಿ ಬಂದುಬಿಟ್ಟಿತು. ಒಬ್ಬ ತರಕಾರಿ ವ್ಯಾಪಾರಿ ದಿನದ ಪ್ರಾರಂಭದಲ್ಲಿ ಐನೂರು ರೂಪಾಯಿಯ ಸಾಲ ಪಡೆದು, ಅದಕ್ಕೆ [ಆ ದಿನಕ್ಕೆ] ಐವತ್ತು ರೂಪಾಯಿಯ ಬಡ್ಡಿ ಕಟ್ಟಿ, ಸಂಜೆಗೆ ಆರುನೂರು ರೂಪಾಯಿಯ ವ್ಯಾಪಾರ ಮಾಡಿದಲ್ಲಿ ಆ ವ್ಯಾಪಾರಕ್ಕೆ ಮೂಲತಃ ಪ್ರತಿದಿನ ೨೦ ಪ್ರತಿಶತದಂತೆ ಲಾಭ ಬರುವಾಗ ಚಿಕ್ಕಸಾಲಿಗರ ಬಡ್ಡಿ ಹೆಚ್ಚೆಂದು ಅನ್ನಿಸುವುದಿಲ್ಲ ಅನ್ನುವ ವಾದವನ್ನು ನನ್ನನ್ನೊಳಗೊಂಡಂತೆ ಅನೇಕರು ಮಂಡಿಸಿದರು. ಆದರೆ ಸ್ವ-ಸಹಾಯ ಗುಂಪುಗಳಿಗೂ ಎರಡನೆಯ ಅಲೆಯ ಗ್ರಾಮೀಣ್ ಮಾದರಿಯ ಚಿಕ್ಕಸಾಲಿಗರಿಗೂ ಒಂದು ಮೂಲಭೂತ ವ್ಯತ್ಯಾಸವಿತ್ತು ಸ್ವ-ಸಹಾಯ ಗುಂಪುಗಳು ಆರ್ಜಿಸಿದ ಲಾಭಾಂಶ ಅವರುಗಳ ನಡುವೆಯೇ ಇರುತ್ತಿತ್ತು ಆದರೆ ಈ ಚಿಕ್ಕಸಾಲಿಗರ ಲಾಭಾಂಶ ಸಂಸ್ಥೆಯ ಕೈವಶವಾಗುತ್ತಿತ್ತು.

ವಿತ್ತೀಯ ವ್ಯಾಪಾರದಲ್ಲಿ ತೊಡಗಿದ್ದ ವಿಕಾಸವಾದಿಗಳಿಗೆ ಈ ಲಾಭಾಂಶ ಎದ್ದುಕಾಣಿಸತೊಡಗಿತು. ಜೊತೆಗೆ ವ್ಯಾಪಾರವೂ ತೀವ್ರಗತಿಯಲ್ಲಿ ಬೆಳೆಯುತ್ತಿತ್ತು. ಹೀಗಾಗಿ ಚಿಕ್ಕಸಾಲಕ್ಕೆ ಬಂದ ವಿಕಾಸವಾದಿಗಳು ನಿಧಾನವಾಗಿ ದೂಡ್ಡ ಸಂಬಳಗಳನ್ನು ಪಡೆಯುವುದಕ್ಕೂ, ದೊಡ್ಡ ಮಾತುಗಳನ್ನು ಆಡುವುದಕ್ಕೂ ಪ್ರಾರಂಭಿಸಿದರು. ವಿಕಾಸದ ಅಥವಾ ಬಡವರನ್ನು ವಿತ್ತೀಯ ಕ್ಷೇತ್ರದಲ್ಲಿ ಒಳಗೊಳ್ಳುವ ಮಾತಾಡುತ್ತಲೇ ಇವರುಗಳು ಮಾರುಕಟ್ಟೆಯ ಮಾತನ್ನೂ ಲಾಭಾಂಶದ ಮಾತನ್ನೂ ಆಡತೊಡಗಿದ್ದರು. ಈ ಸಂಸ್ಥೆಗಳನ್ನು ನಡೆಸುವವರ ಜೀವನಶೈಲಿಯಲ್ಲಿ ತುಸು ಬದಲಾವಣೆಯೂ ಕಂಡುಬಂತು. ಹಾಗೂ ಎಲ್ಲಕ್ಕಿಂತ ಮಹತ್ವದ್ದೆಂದರೆ ಅವರುಗಳಲ್ಲಿ ಸುಮಾರಷ್ಟು ಜನ ತಮ್ಮ ಈ ವಿತ್ತೀಯ ಸಂಸ್ಥೆಯನ್ನು ಬಂಡವಾಳವನ್ನು ಹೂಡುವ ಅನೇಕ ವಿದೇಶೀ ಪ್ರೈವೇಟ್ ಈಕ್ವಿಟಿ ಸಂಸ್ಥೆಗಳಿಗೆ ಮಾರಿಬಿಟ್ಟರು. ಎಲ್ಲ ಪತ್ರಿಕೆ, ದೂರದರ್ಶನ ವಾಹಿನಿ, ಜಿ-೨೦, ಡ್ಯಾವೋಸ್, ಎಂದು ಮಿಂಚುತ್ತಿದ್ದ, ಬಡವರ ಮಸೀಹ ಎಂದು ಬೀಗುತ್ತಿದ್ದ ವಿಕ್ರಂ ಆಕುಲಾ ತಮ್ಮ ಸಂಸ್ಥೆ ಎಸ್.ಕೆ.ಎಸ್ ನಲ್ಲಿದ್ದ ತಮ್ಮಹೂಡಿಕೆಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿ ಕೈತೊಳೆದುಕೊಂಡುಬಿಟ್ಟರು. ಹಾಗೆಯೇ ಷೇರ್ ಸಂಸ್ಥೆಯ ಉದಯಕುಮಾರ್ ಮತ್ತು ಸ್ಪಂದನಾದ ಪದ್ಮಜಾ ರೆಡ್ಡಿಯವರೂ ತಮ್ಮ ಬಂಡವಾಳದ ಭಾಗವನ್ನು ಮಾರಿಕೊಂಡಿದ್ದಾರೆ. ಹೀಗೆ ಎರಡನೆಯ ಅಲೆಯ ಚಿಕ್ಕಸಾಲಿಗರು ವಿಕಾಸದ ಮಾತುಗಳನ್ನಾಡುತ್ತಾ, ತಮ್ಮ ಬಡತನವನ್ನು ನೀಗಿಸಿಕೊಂಡುಬಿಟ್ಟರು. ಅದು ಸರಿಯೇ ತಪ್ಪೇ ಅನ್ನುವ ಪ್ರಶ್ನೆಯನ್ನು ಉತ್ತರಿಸುವುದು ಜಟಿಲವಾದ ಮಾತು. ಅದು ನೈತಿಕತೆಯನ್ನು ಆಧರಿಸಿದ್ದು. ಹಾಗೆ ನೋಡಿದರೆ ಅವರು ಮಾಡಿದ ಕೆಲಸವನ್ನು ಯಾವುದೇ ವ್ಯಾಪಾರಿ ಮಾಡಿದ್ದರೆ ಅದನ್ನು ಸಹಜವೆನ್ನುವಂತೆ ನಾವು ಸ್ವೀಕರಿಸುತ್ತಿದ್ದೆವು.

ಈಗ ಮೂರನೆಯ ಅಲೆಯ ಚಿಕ್ಕಸಾಲಿಗರು ದೊಡ್ಡ ಬಂಡವಾಳ ಹೂಡಿ ಬಡವರಿಗೆ ಸಾಲ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರುಗಳಿಗೆ ಬಡವರು ಒಂದು ವ್ಯಾಪಾರದ ಅಂಗ [market segment] ಮಾತ್ರ. ಇವರಿಗೂ, ಇವರು ಮಾತನಾಡುವ ಭಾಷೆಗೂ ಮಾರುಕಟ್ಟೆಗೂ ಅದ್ಭುತವಾದ ತಾಳಮೇಳವಿದೆ. ತೀವ್ರಗತಿಯಲ್ಲಿ ಈ ವ್ಯಾಪಾರ ಎಲ್ಲೆಡೆಯೂ ಬೆಳೆಯುತ್ತಿದೆ. ಸಧ್ಯಕ್ಕಿರುವ ಲಾಭಗಳನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಆದರೆ, ಚಿಕ್ಕಸಾಲ ಕೊಡುವ ಸಂಸ್ಥೆಗಳು ವರ್ಷಕ್ಕೆ ೧೦೦ ಪ್ರತಿಶತ ಗತಿಯಲ್ಲಿ ಬೆಳೆಯುತ್ತಾ, ಗ್ರಾಮೀಣ ಕ್ಷೇತ್ರದ/ಬಡವರ ಆರ್ಥಿಕತೆ ಮಾತ್ರ - ಅದರಲೂ ಕೃಷಿ ಮಾತ್ರ ೩-೪ ಪ್ರತಿಶತ ಗತಿಯಲ್ಲಿ ಬೆಳೆದರೆ, ಈ ಚಿಕ್ಕ ಸಾಲದ ಸ್ಥಾವರಗಳು ಎಷ್ಟು ಸೂಕ್ಷ್ಮವಾದ ಅಡಿಪಾಯದ ಮೇಲೆ ನಿಂತಿದೆ ಅನ್ನುವುದು ನಮಗೆ ವೇದ್ಯವಾಗುತ್ತದೆ. ಹೀಗಾಗಿ ಎಲ್ಲೋ ಈ ಸ್ಥಾವರ ಅಮೆರಿಕದಲ್ಲಾದ ಸಬ್-ಪ್ರೈಂನ ದಾರಿ ಹಿಡಿಯುವ ಅಪಾಯ ಇದ್ದೇ ಇದೆ. ಹೀಗಾಗಿ ನಾವೊಂದು ಟೈಂಬಾಂಬಿನ ಮೇಲೆ ಕೂತಿದ್ದೇವೆಯೇ ಅನ್ನುವ ಪ್ರಶ್ನೆಯನ್ನು ಸಹಜವಾಗಿ ಎತ್ತಬೇಕಾಗುತ್ತದೆ.

ಸ್ವ-ಸಹಾಯ ಗುಂಪುಗಳಿಗೆ ಈ ದೊಡ್ಡ ಮಟ್ಟದ ಸವಾಲು ಇಲ್ಲ. ಈ ಗುಂಪುಗಳ ಬೆಳವಣಿಗೆಯ ಗತಿ ನಿಧಾನ. ಅವುಗಳು ವಿಫಲಗೊಂಡರೆ ಸ್ಥಳೀಯವಾಗಿ ಮಾತ್ರ ಅದರ ಪರಿಣಾಮವಿರುತ್ತದೆ. ಹಾಗೂ ಈ ಗುಂಪುಗಳ ಬೆಳವಣಿಗೆ ವಿತ್ತೀಯ ಚೌಕಟ್ಟಿನಲ್ಲಿ ಬ್ಯಾಂಕುಗಳೊಂದಿಗೆ ಸೇರಿಹೋಗಿರುವುದರಿಂದ ಆ ಬೆಳವಣಿಗೆಯೂ ಸಹಜಗತಿಯಲ್ಲಿ ನಡೆಯುತ್ತದೆ. ಆದರೆ ಈ ದಾರಿಯಲ್ಲಿ ಪ್ರಗತಿ ನಿಧಾನ ಗತಿಯದ್ದು. ಹೊಸ ಪೀಳಿಗೆಯ ವಿಕಾಸವಾದಿಗಳಿಗೆ ಅಷ್ಟು ತಾಳ್ಮೆಯಿರಲಿಲ್ಲವಾದ್ದರಿಂದ ಈ ರೀತಿಯ ಫಾಸ್ಟ್ ಫುಡ್ ಫೈನಾನ್ಸ್ ನ ಶರಣು ಹೋದರೇನೋ. ರಿಜಲ್ಟ್ ಕಾಣಬೇಕೆಂದರೆ, ಯಶಸ್ಸಿನ ಕೀರ್ತಿ ಒಂದು ವ್ಯಕ್ತಿ ಅಥವಾ ಸಂಸ್ಥೆಗೆ ಉಂಟಾಗಬೇಕಾದರೆ ಈ ದಾರಿ ಹಿಡಿಯುವುದು ಸಹಜವೇ ಆಗಿದೆ. ಆದರೂ ಆಂಧ್ರ ಪ್ರದೇಶದ ವೆಲುಗು, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ, ಪ್ರದಾನ್, ಮೈರಾಡಾ, ಧಾನ್ ಸಂಸ್ಥೆಗಳ ಮೂಲಕ ಸಮೂಹ ಕೇಂದ್ರಿತ ವಿತ್ತೀಯ ಸೇವೆಯ ಕೆಲಸ ಮುಂದುವರೆಯುತ್ತಲೇ ಇದೆ. ನಮ್ಮ ಸ್ವಂತ ಮಾದರಿಯನ್ನು ನಾವು ಹೊರಪ್ರಪಂಚಕ್ಕೆ ತೋರುತ್ತಾ ವಿದೇಶದಿಂದ ಬಂದ ಫಾಸ್ಟ್ ಫುಡ್ ಫೈನಾನ್ಸ್ ಅನ್ನು ಅನುಮಾನದಿಂದ ನೋಡುತ್ತಲೇ ಅದರಿಂದ ಕಲಿಯುತ್ತಲೇ ಮುಂದುವರೆಯ ಬೇಕಾಗಿದೆ. ಆದರೂ ನಮಗೆ ವಿದೇಶದ ಮೋಹ ಹೆಚ್ಚೇ. ಈಗ ಬಡವರಿಗೆ ಸಾಲವೂ ವಿದೇಶೀ ಸಂಸ್ಥೆಗಳಿಂದಲೇ ಬರುತ್ತದೆ, ಎಂ.ಟಿ.ಆರ್. ಇಡ್ಲಿಯೂ ವಿದೇಶೀ ಸಂಸ್ಥೆಗಳಿಂದ ಬರುತ್ತದೆ. ವಸುಧೈವ ಕುಟುಂಬಕಂ ಆಗಿರುವ ನಮಗೆ ಇದರಿಂದ ದುಃಖವಾಗಬಾರದಾದರೂ, ನಿಧಾನಗತಿಯ ಆದರೆ ಧೃಡ ಬೆಳವಣಿಗೆಯ ಸಮೂಹವನ್ನೂಳಗೊಳ್ಳುವ ಮಾದರಿಗಳನ್ನು ನಾವು ಮರುಶೋಧಿಸಬೇಕಾಗಿದೆ.  

೨೦ ಏಪ್ರಿಲ್ ೨೦೦೯


No comments:

Post a Comment