Friday, April 5, 2013

ಗ್ರಾಮೀಣ್‌ನಿಂದ ಗ್ರಾಮೀಣ್ ಬ್ಯಾಂಕ್‍ನತ್ತ: ಬೆಳವಣಿಗೆಯ ಪಥ.


(ಗ್ರಾಮೀಣ್ ಅನ್ನುವುದು ಸಂಸ್ಥೆಯ ಹೆಸರೂ ಹೌದು, ಮತ್ತು ಆ ಸಂಸ್ಥೆ ಅನುಸರಿಸುವ ವಿತ್ತಪದ್ಧತಿಯೂ ಹೌದು. ಅನೇಕ ಸಂಸ್ಥೆಗಳು ತಮ್ಮನ್ನು ಗ್ರಾಮೀಣ್ ರೆಪ್ಲಿಕೇಟರ್ಸ್ ಎಂದು ವಿವರಿಸಿಕೊಳ್ಳುತ್ತವೆ. ಹೀಗಾಗಿ ಈ ಲೇಖನದಲ್ಲಿ ಗ್ರಾಮೀಣ್ ಪದವನ್ನು ಎರಡೂ ಅರ್ಥಗಳಲ್ಲಿ ಉಪಯೋಗಿಸನಾಗಿದೆ.) 

ಯೂನಸ್‌ಗೆ ನೊಬೆಲ್ ಪ್ರಶಸ್ತಿ ಬಂದಾಗಿನಿಂದಲೂ ಅವರ ಗ್ರಾಮೀಣ್‍ ವಿತ್ತಪದ್ಧತಿಯ ಬಗ್ಗೆ ಜಗದಾದ್ಯಂತ ಆಸಕ್ತಿ ಬೆಳೆದಿರುವುದಲ್ಲದೇ ಅವರ ಸಂಸ್ಥೆಯ ಕಾರ್ಯವೈಖರಿಯು ಗ್ರಾಮೀಣವಿಕಾಸದಲ್ಲಿ ಹಾಗೂ ಬ್ಯಾಂಕಿಂಗ್‌ನಲ್ಲಿ ಒಲವಿರುವ ಎಲ್ಲರ ಕುತೂಹಲವನ್ನೂ ಕೆರಳಿಸಿದೆ. ಇದು ಸಾಲದ್ದಕ್ಕೆ ಆ ಪದ್ಧತಿಯನ್ನು ಅನುಸರಿಸಿ ಧಂಧೆ ನಡೆಸುವ ಬಂಡವಾಳಹೂಡಿಕೆದಾರರ ಗಮನವನ್ನೂ "ಗ್ರಾಮೀಣ್" ತನ್ನೆಡೆಗೆ ಸೆಳೆದುಕೊಂಡಿದೆ. ಗ್ರಾಮೀಣ್ ಬಗ್ಗೆ ಅನೇಕ ವಿದ್ವಾಂಸರು, ಪತ್ರಕರ್ತರು ಬರೆದಿದ್ದಾರಾದರೂ, ಆ ಸಂಸ್ಥೆಯ ಬಗ್ಗೆ ಈಚೆಗೆ ಬಂದಿರುವ ಹೊಸ  ಪುಸ್ತಕ "ದ ಪೂರ್ ಆಲ್ವೇಸ್ ಪೇ ಬ್ಯಾಕ್"  ಆತ್ಮಚರಿತ್ರೆಯ ಮಾದರಿಯದ್ದು. ಅದರ ಲೇಖಕರಾದ ದೀಪಲ್ ಬರೂವ ಗ್ರಾಮೀಣ್ ಸಂಸ್ಥೆಯ ಉಪ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬ ಲೇಖಕರಾದ ಆಸಿಫ್ ದೌಲಾ ಗ್ರಾಮೀಣ್ ಸಂಸ್ಥೆಯನ್ನು ಸ್ಥಾಪಿಸುವಾಗಿ ಯೂನಸ್ ಜೊತೆಗಿದ್ದ ಮೂಲ ತಂಡದಲ್ಲಿ ಕೆಲಸ ಮಾಡಿದ್ದರು, ಹಾಗೂ ಯೂನಸ್ ರ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಈ ಪುಸ್ತಕದಿಂದ ನಾವು ಗ್ರಾಮೀಣ್ ಬಗೆಗೆ ವಿಮರ್ಶಾತ್ಮಕವಾಗಿ ಏನಾದರೂ ಬರಬಹುದೆಂದು ಅಪೇಕ್ಷಿಸುವುದು ಸಮಂಜಸವಲ್ಲ. ಆದರೆ ಈ ಪುಸ್ತಕದಿಂದ ಗ್ರಾಮೀಣ್ ಬೆಳೆದುಬಂದ ರೀತಿಯನ್ನೂ ಅದರ ನಡಾವಳಿಯಲ್ಲಿ ಈಚಿನ ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ವಿವರಗಳನ್ನೂ ಅಪೇಕ್ಷಿಸಬಹುದಾಗಿದೆ.

ಈ ಪುಸ್ತಕವನ್ನು ನಾವು ಇದೇ ಹಿನ್ನೆಲೆಯಲ್ಲಿ ಬಂದ ಎರಡು ಇತರ ಪುಸ್ತಕಗಳ ಜೊತೆಗೆ ಪರಿಶೀಲಿಸುವುದು
ಉತ್ತಮ. ಯೂನಸ್‌ಅವರ ಆತ್ಮಕಥನ ಬ್ಯಾಂಕರ್ ಟು ದ ಪೂರ್, (ಬಡವರ ಬ್ಯಾಂಕರ್) ಮತ್ತು ಗ್ರಾಮೀಣ್ ಗ್ರಾಹಕರ ಕಥನಗಳಾದ ಜೋರಿಮೋನ್ ಅಂಡ್ ಅದರ್ಸ್ (ಜೊರಿಮೋನ್ ಮತ್ತು ಇತರರು) ಈ ಎರಡೂ ಪುಸ್ತಕಗಳು ಗ್ರಾಮೀಣ್ ಸಂಸ್ಥೆಯ ಮೊದಲ ದಿನಗಳ ಪ್ರಯೋಗಗಳನ್ನು ವಿವರಿಸುತ್ತವೆ. ಬಡವರ ಬ್ಯಾಂಕರ್ ಗ್ರಾಮೀಣ್ ಸಂಸ್ಥೆಯ ಕಾರ್ಯಚಟುವಟಿಕೆಗಳು, ಅದರ ನಿಯಮಗಳು ಹಾಗೂ ಕಡೆಗೆ ಅದು ವಿಕಸನಗೊಂಡು "ಗ್ರಾಮೀಣ್ ಮಾದರಿ" ಆದ ರೀತಿಯನ್ನು ವಿವರಿಸುತ್ತದೆ. ಜೊರಿಮೋನ್ ಮತ್ತು ಇತರರು ಪುಸ್ತಕದಲ್ಲಿ ಗ್ರಾಮೀಣ್ ಸಂಸ್ಥೆ ಮುಂದೆ ಎದುರಿಸಬಹುದಾದ ಸಮಸ್ಯೆಗಳ ಕುರುಹುಗಳನ್ನು ನಾವು ಕಾಣಬಹುದಾಗಿದೆ. ದುರಾದೃಷ್ಟವಶಾತ್ ಯಾವುದೇ ಕಾರ್ಯ ಯಶಸ್ವಿಯಾಗಿ ನಡೆಯುವಾಗ ಆ ಬಗ್ಗೆ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡು ಬರೆವ ಕಾರ್ಯಕರ್ತರಿಗೆ ತಮ್ಮ ಬರವಣಿಗೆಯ ಸಾಲುಗಳ ಮಧ್ಯದಲ್ಲೇ ಇರುವ ಉಪಕಥೆಗಳು ಕಾಣಿಸುವುದಿಲ್ಲ. ಹೀಗಾಗಿ ಈ ಸುಖದ ಲೋಲುಪತೆಯಿಂದ ಹೊರಬರಲು ಅವರುಗಳಿಗೆ ಹೊರಗಿನಿಂದ ಒಂದು ತೀವ್ರ ಚುರುಕು ತಟ್ಟುವುದು ಅವಶ್ಯವಾಗುತ್ತದೆ. ಈ ಚುರುಕು "೧೯೯೮ರ ದೊಡ್ಡ ನೆರೆಯ ನಂತರ ಬಂತು. ದೇಶದ ಮೂರನೇ ಎರಡು ಭಾಗ ಹನ್ನೊಂದು ವಾರಗಳ ಕಾಲ ನೀರಿನಡಿಯಲ್ಲಿ ಮುಳುಗಿದ್ದಾಗ, ಬ್ಯಾಂಕಿನ ಹಲವು ಕಾರ್ಯಕ್ಷೇತ್ರಗಳಲ್ಲಿ ಸಾಲ ಪಡೆದ ಜನ ಅದನ್ನು ಮರುಪಾವತಿ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದರು. ೮೦ ಪ್ರತಿಶತ ಜನ ತಮ್ಮ ಕಂತುಗಳನ್ನು ಕಟ್ಟುತ್ತಿದ್ದರಾದರೂ, ೨೦ ಪ್ರತಿಶತ ಜನ ತಮ್ಮ ಕಂತುಗಳನ್ನು ಕಟ್ಟುತ್ತಿರಲಿಲ್ಲ" (ಪುಟ xii) ಗ್ರಾಮೀಣ್ ಸಂಸ್ಥೆಗೆ ಈ ಪೆಟ್ಟು ತಟ್ಟಿದಾಗ ಅದು ಪ್ರತಿಕ್ರಿಯಿಸಿತಾದರೂ, ಆ ಪ್ರತಿಕ್ರಿಯೆ ಉಂಟುಮಾಡಬಹುದಾದ ಬದಲಾವಣೆಗಳನ್ನು ಸಂಸ್ಥೆ ಊಹಿಸಿರಲಿಲ್ಲ.

ಮತ್ತೊಂದು ಪೆಟ್ಟು ಬಿದ್ದದ್ದು ನವಂಬರ್ ೨೦೦೧ರ ಕಾಲಕ್ಕೆ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಡೆನಿಯಲ್ ಪರ್ಲ್ ಬರೆದ   ಲೇಖನದಿಂದ. ಇದಂತೂ ಗ್ರಾಮೀಣ್ ಸಂಸ್ಥೆಯನ್ನು ಅಲ್ಲಾಡಿಸಿಬಿಟ್ಟಿತು.  ಗ್ರಾಮೀಣ್‍ಗೆ ಮನ್ನಣೆ ದೊರೆತಿದ್ದ ಪಾಶ್ಚಾತ್ಯಲೋಕದಿಂದ ಈ ಲೇಖನ ಬಂದದ್ದು ಅನ್ನುವುದನ್ನು ನಾವು ಗಮನಿಸಬೇಕು. ಗ್ರಾಮೀಣ್‍ಗೆ ಇದು ದೊಡ್ಡ ಆಘಾತವೇ ಹೌದು. ಏಕೆಂದರೆ, ೧೯೯೭ರಲ್ಲಿ ಗ್ರಾಮೀಣ್ ವಾಷಿಂಗ್‍ಟನ್‍ನಲ್ಲಿ ವಿಶ್ವ ಕಿರುಸಾಲದ ಶೃಂಗಸಭೆ ಆಯೋಜಿಸಿ ಜಗತ್ತಿನ ಭೂಪಟದಲ್ಲಿ ಆಗಲೇ ಒಂದು ದೊಡ್ಡ ಸ್ಥಾನವನ್ನು ಸಂಪಾದಿಸಿಬಿಟ್ಟಿತ್ತು. ಹಿಲರಿ ಕ್ಲಿಂಟನ್, ಸ್ಪೇನಿನ ರಾಣಿ ತಮ್ಮ ಹೆಸರನ್ನು ಈ ಶೃಂಗಸಭೆಯ ಜೊತೆ ಜೋಡಿಸಿದ್ದಲ್ಲದೇ ಅಲ್ಲಿ ಮೂರೂ ದಿನ ಹಾಜರಿದ್ದರು. ಅಲ್ಲಿಂದ ಮುಂದೆ ಈ ಬಗ್ಗೆ ಅವರು ಹಲವು ವೇದಿಕೆಗಳಿಂದ ಮಾತನಾಡಿದ್ದರು. ಹೀಗಾಗಿ ಗ್ರಾಮೀಣ್ ಹೆಸರು ವಿಶ್ವವ್ಯಾಪಿಯಾಗಿಬಿಟ್ಟಿತ್ತು. ಪರ್ಲ್‌‍ ಬರೆದ ಲೇಖನದಲ್ಲಿ ಈಚಿನ ಪುಸ್ತಕದಲ್ಲಿ (ದ ಪೂರ್ ಆಲ್ವೇಸ್ ಪೇ ಬ್ಯಾಕ್) ಒಪ್ಪಿರುವ ಮಾತುಗಳೇ ಇದ್ದುವು. ಗ್ರಾಮೀಣ್ ಸಂಸ್ಥೆಯಲ್ಲಿ ಸಾಲದಬಾಕಿ ಬೆಳೆಯುತ್ತಿದ್ದು ಮರುಪಾವತಿಯ ಶಿಸ್ತು ಕುಂಠಿತಗೊಂಡಿದೆ, ಸಾಲಗಳ ಪಾವತಿಯ ದಿನಾಂಕಗಳನ್ನು ಬದಲಾಯಿಸಿ ಸಮಯವನ್ನು ಲಂಬಿಸುತ್ತಿದ್ದಾರೆ ಹಾಗೂ ಅವಧಿಯೊಳಗೆ ೯೯ಪ್ರತಿಶತ ಸಾಲ ವಸೂಲಿ ಎಂದು ಕೊಚ್ಚಿಕೊಳ್ಳುವ ಗ್ರಾಮೀಣ್ ಸಂಸ್ಥೆಯ ಅಂಕೆಸಂಖ್ಯೆಗಳನ್ನು ಪ್ರಶ್ನಿಸಿ ಪರ್ಲ್ ಲೇಖನ ಬರೆದಿದ್ದರು. ಈ ಲೇಖನವು ಕಿರುಸಾಲದ ಜಗತ್ತಿನಲ್ಲಿ ಒಂದು ಸಂಚಲನವನ್ನೇ ಉಂಟುಮಾಡಿದ್ದಲ್ಲದೇ ಬಹಳ ಚರ್ಚೆಗೆ ಒಳಗಾಯಿತು. ಸಾಲದ್ದಕ್ಕೆ ಯೂನಸ್ ಮತ್ತು ಪರ್ಲ್ ನಡುವೆ ನಡೆದ ಇಡೀ ಪತ್ರವ್ಯವಹಾರವನ್ನು ಗ್ರಾಮೀಣ್ ಸಂಸ್ಥೆಯ ವೆಬ್ ಸೈಟಿನಲ್ಲಿಹಾಕಲಾಯಿತು. ಇಷ್ಟೆಲ್ಲಾ ಸಂಚಲನ ಉಂಟುಮಾಡಿದ ಆ ಘಟನೆ ಪ್ರಸ್ತುತ ಪುಸ್ತಕದಲ್ಲಿ ಪ್ರಸ್ತಾಪಗೊಳ್ಳದೇ ಇರುವುದು ಆಶ್ಚರ್ಯಕರವಾದರೂ, ಗ್ರಾಮೀಣ್ ಸಂಸ್ಥೆಯು ತನ್ನ ಬಗೆಗಿನ ಟೀಕೆಗಳನ್ನು ಮರೆಮಾಚಿ ನಡೆಯುವ ಜಾಯಮಾನವನ್ನು ತೋರಿಸುತ್ತದೆ.

"ಬಡವರ ಬ್ಯಾಂಕರ್" ಪುಸ್ತಕದಲ್ಲಿ ಗ್ರಾಮೀಣ್ ಪದ್ಧತಿಯನ್ನು ಹೇಗೆ ರೂಪಿಸಿ ತೀಡಿ ತಿದ್ದಿ ಒಂದು ಮಟ್ಟಕ್ಕೆ ತರಲಾಯಿತು ಅನ್ನುವುದನ್ನು ಯೂನಸ್ ವಿವರಿಸುತ್ತಾರೆ. ಜೊರ್ಬಾದಲ್ಲಿ ಮೊದಲ ಸಾಲ ಕೊಟ್ಟಾಗಿನಿಂದ ಅದನ್ನು ವಸೂಲಿ ಮಾಡುವ, ಮತ್ತೆ ನೀಡುವ ಪದ್ಧತಿಯನ್ನು ಕಲಿಯಲು ಸಾಕಷ್ಟು ಸಮಯವನ್ನು ಯೂನಸ್ ಮತ್ತು ಅವರ ಮಿತ್ರರು ತೆಗೆದುಕೊಂಡರು. ಆಗ ಅವರು ಅಳವಡಿಸಿದ್ದ ಮೂಲ ರೂಪುರೇಷೆಯಲ್ಲಿ ಹಲವು ಹುಳುಕುಗಳಿದ್ದು, ಸಾಲ ವಸೂಲಾತಿಯ ಸರಿಯಾದ ಮತ್ತು ಅತ್ಯಂತ ಸೂಕ್ತವಾದ ಪದ್ಧತಿಯ ಬಗ್ಗೆಯೇ ಅನುಮಾನಗಳಿದ್ದುವು. ಕಡೆಗೆ ಗ್ರಾಮೀಣ್ ಪದ್ಧತಿಯ ಸಾರವನ್ನು ಗ್ರಹಿಸಿದಾಗ ಅದನ್ನು ಬ್ಯಾಂಕಿಗ್‌ನ ಎರಡು ಸೂತ್ರಗಳಾಧಾರದ ಮೇಲೆ ವಿವರಿಸಬಹುದಿತ್ತು - ಗ್ರಾಹಕನ[ಳ] ಜೊತೆ ನಿರಂತರ ಸಂಪರ್ಕದಲ್ಲಿರುವುದು, ಮತ್ತು ಶಿಸ್ತು. ನಿರಂತರ ಸಂಪರ್ಕದಿಂದಾಗಿ ಗ್ರಾಹಕರ ಸ್ಥಿತಿಗತಿಯನ್ನು ಮತ್ತು ಮರುಪಾವತಿಯ ತೊಂದರೆಗಳನ್ನು ಬೇಗಲೇ ಗ್ರಹಿಸುವ ಸಾಧ್ಯತೆಯಿತ್ತು. ಹೀಗಾಗಿ ಯಾರೂ ಮರುಪಾವತಿಸದಿರುವ ಸ್ಥಿತಿ ಉಂಟಾಗದಂತೆ ಕೆಲವು ಚರ್ಯೆಗಳನ್ನು ಸಂಸ್ಥೆ ತೆಗೆದುಕೊಳ್ಳುವ ಸಾಧ್ಯತೆಯಿತ್ತು. ಅಷ್ಟೇನೂ ಆರೋಗ್ಯದಾಯಕವಾಗಿರದ ಬಾಂಗ್ಲಾದೇಶದ ಬ್ಯಾಂಕಿಂಗ್  ಆಗ ಇದ್ದ ಪರಿಸ್ಥಿತಿಯಲ್ಲಿ ಗ್ರಾಮಿಣ್ ಪದ್ಧತಿಯ ಅತೀ ಶಿಸ್ತು ಒಂದು ಮದ್ದಿನ ರೂಪದಲ್ಲಿ ಬಂದಿರಬಹುದು. ಆದರೆ ನಿಜವಾದ ಕಾರಣಗಳಿಗೆ ಸಾಲ ಮರುಪಾವತಿ ಮಾಡಲಾರದವರ ಅಸಹಾಯಕತೆಯನ್ನೂ ಸಹಿಸದ ಗ್ರಾಮೀಣ್ ಪದ್ಧತಿ ಅತಿರೇಕಕ್ಕೆ ಹೋಯಿತೇನೋ.

ಈ ಕಾರಣಕ್ಕಾಗಿಯೇ ಗ್ರಾಮೀಣ್ ಸಂಸ್ಥೆಯ ಉದ್ಯೋಗಿಗಳೇ ಗ್ರಾಹಕರ ಜೊತೆ ಮಾತನಾಡಿ ಬರೆದುಕೊಂಡ ಗ್ರಾಹಕರ ಕಥೆಗಳಲ್ಲೇ ನಮಗೆ ಆತಂಕ ಕೇಳಿಬರುತ್ತದೆ. ಪುಟ್ಟ ವ್ಯಾಪಾರಗಳನ್ನು ಪ್ರಾರಂಭಿಸಿ ನಿಜಕ್ಕೂ ಹಣವನ್ನು ಸಂಪಾದಿಸಬಹುದೇ ಅನ್ನುವ ಅನುಮಾನವೂ, ತೆಗೆದ ಸಾಲವನ್ನು ಗ್ರಾಮೀಣ್ ಪದ್ಧತಿಯ ಶಿಸ್ತಿನನುಸಾರವಾಗಿ ಮರುಪಾವತಿಸಲಾರೆವೆನೋ ಎನ್ನುವ ಆತಂಕ ಅವರನ್ನು ಕಾಡುತ್ತಿರುತ್ತದೆ. ಸಾಖೀನಾ ಮತ್ತು ಫುಲ್‍ಜಾನ್‌ರ ಕಥೆಗಳಲ್ಲಿ ಜೊರಿಮೋನಳ ಧ್ವನಿಯಲ್ಲಿ ಈ ಭಯ, ಮತ್ತು ಆ ಕಾರಣಕ್ಕಾಗಿ ಗ್ರಾಮೀಣ್ ಕಾರ್ಯಕ್ರಮವನ್ನು ಸೇರಬೇಕೇ ಬೇಡವೇ ಅನ್ನುವ ಅನುಮಾನ ನಮಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಹೀಗಾಗಿ ಅವರುಗಳು ಗ್ರಾಮೀಣ್ ಸಂಸ್ಥೆಯ ಹಿಡಿತಕ್ಕೆ ಸಿಗಬಾರದೆಂದು ಪ್ರಯತ್ನಿಸುತ್ತಾರೆ. 
ಬಾಂಗ್ಲಾದೇಶದ ಗುಂಪುಗಳಿಗೆ ಹೋಲಿಸಿದರೆ ಭಾರತದ ಸ್ವಸಹಾಯ ಗುಂಪುಗಳು ಭಿನ್ನವಾಗಿ ಕಾಣಿಸುತ್ತವೆ. ಸಮುದಾಯದಲ್ಲಿರುವ ಸಂಬಂಧಗಳ ಆಧಾರದ ಮೇಲೆ, ಕಾಗದ ಪತ್ರಗಳ ಉಪಯೋಗವಿಲ್ಲದೇ ಯಾವುದೇ ಆಸ್ತಿಯನ್ನು ಅಡ ಇಡಬೇಕಾದ ಅವಶ್ಯಕತೆಯಿಲ್ಲದೆ, ನಂಬಿಕೆಯ ಆಧಾರದ ಮೇಲೆ ನಮ್ಮ ಸ್ವಸಹಾಯ ಗುಂಪುಗಳು ನಡೆಯುತ್ತವೆ. ಹೀಗಾಗಿ ಈ ಗುಂಪುಗಳಲ್ಲಿ ಕಾಗದಪತ್ರಗಳನ್ನು ತಯಾರಿಸಬೇಕಾದ, ವಿಸ್ತಾರವಾದ ದಾಖಲಾತಿಯ ಖರ್ಚು ಇರುವುದಿಲ್ಲ. ಸಮುದಾಯದ ನಂಬುಗೆಯನ್ನು ಮುರಿದರೆ ಆಗುವ ಅವಮಾನ ಬ್ಯಾಂಕಿನ ನಂಬುಗೆಯನ್ನು ಮುರಿದಾಗ ಆಗುವ ಅವಮಾನದ ಪರಿಮಾಣಕ್ಕಿಂತ ಹೆಚ್ಚು ಅನ್ನುವ ಸೂತ್ರದ ಮೇಲೆ ಇದು ಆಧಾರಿತವಾಗಿದೆ. 
ಆದರೆ ಗ್ರಾಮೀಣ್ ಪದ್ಧತಿ ಈ ಸಮುದಾಯದ ನಂಬುಗೆಯನ್ನು ಬೆದರಿಕೆಯ ರೀತಿಯಲ್ಲಿ ಉಪಯೋಗಿಸುತ್ತದೆ. [ಈ ಬಗ್ಗೆ ಹೆಚ್ಚಿನ ತಾಂತ್ರಿಕತೆಯನ್ನು ಅರ್ಥಮಾಡಿಕೊಳ್ಳಬಯಸಿದವರು ನನ್ನ ಇಂಗ್ಲೀಷ್ ಲೇಖನವನ್ನು ಇಲ್ಲಿ ಪಡೆಯಬಹುದು]. ಕಾಲಕ್ರಮೇಣ ಗ್ರಾಮೀಣ್ ಪದ್ಧತಿಯೇ ಶಿಸ್ತಿನ ಒಂದು ಪ್ರತೀಕವಾಗಿಬಿಟ್ಟಿದೆ. 
ಗ್ರಾಮೀಣ್ ಗುಂಪುಗಳ ಸಭೆಗಳಲ್ಲಿ ಶಿಸ್ತಿಗೆ ಕೊಡುವ ಪ್ರಾಮುಖ್ಯತೆ ಸಾಲ ಮರುಪಾವತಿಗೇ ಸೀಮಿತವಾಗಿಲ್ಲ. ಸಮಯ ಪಾಲನೆ, ಆಂತರಿಕ ನಡಾವಳಿಯಲ್ಲಿಯೂ ಶಿಸ್ತು ಕಂಡುಬರುತ್ತದೆ. ಇದೂ ಸಾಲದೆಂಬಂತೆ ಈ ಎಲ್ಲ ಶಿಸ್ತನ್ನೂ ಪಾಲಿಸುತ್ತೇವೆಂಬ ಪ್ರಮಾಣವನ್ನೂ ಗ್ರಾಹಕರು ಮಾಡಬೇಕು. ಶಿಸ್ತನ್ನು ಮುರಿದಾಗ ಸಮಾಜದಲ್ಲಿ ಅಪಮಾನವೂ ಆಗಬಹುದು. ಈ ಎಲ್ಲವೂ ನಂಬಿಕೆಯಾಧಾರದ ಮೇಲೆ ಕಟ್ಟಿದ ಶಿಸ್ತಾಗಿರದೇ ಭೀತಿಯ ಆಧಾರದ ಮೇಲೆ ಕಟ್ಟಿದ ಶಿಸ್ತಾಗಿದೆ. ಇದೂ ಅಲ್ಲದೇ ಗ್ರಾಮೀಣ್ ಸಾಲದ ಒಂದು ನಿರಂತರ ಯಂತ್ರವಾಗಿದ್ದು, ಅದರಿಂದ ಹೊರಬರುವುದೇ ಕಷ್ಟ ಅನ್ನುವ ಸ್ಥಿತಿಗೆ ಬಂದುಬಿಟ್ಟಿತ್ತು. ಅದಕ್ಕೆ ಕಾರಣವೆಂದರೆ ಗ್ರಾಹಕರು ಸಾಲ ಪಡೆಯದಿದ್ದಲ್ಲಿ ಗುಂಪಿನ ಸದಸ್ಯತ್ವವನ್ನು ಪಡೆಯುವುದೇ ಸಾಧ್ಯವಿದ್ದಿಲ್ಲ.

ಯಾವ ವ್ಯಾಪಾರಕ್ಕಾಗಿ ಸಾಲವನ್ನು ಗ್ರಾಹಕರು ಪಡೆದುಕೊಂಡಿರುತ್ತಾರೋ ಆ ಚಟುವಟಿಕೆ ಎಲ್ಲಿಯವರೆಗೆ ಲಾಭದಾಯಕವಾಗಿ ನಡೆಯುತ್ತದೋ ಅಲ್ಲಿಯವರೆಗೆ ಈ ಪದ್ಧತಿ ಕೆಲಸ ಮಾಡುತ್ತದೆ. ಒಂದೆರಡು ಸಣ್ಣ ಪುಟ್ಟ ವಿಫಲತೆಗಳನ್ನು ಗುಂಪಿನ ಇತರೆ ಸದಸ್ಯರು ಒಪ್ಪಿ ತಮ್ಮ ಸಹ ಸಾಲಿಗರ ಜೊತೆಗೆ ಹೆಗಲು ಸೇರಿಸಿ ನಿಲ್ಲುತ್ತಾರೆ.  ಸಾಲ ಕಟ್ಟದವರನ್ನು ಕ್ರಮೇಣ ಗುಂಪಿನಿಂದ ಹೊರಹಾಕಿಯೂ ಮುಂದುವರೆಯುವ ಸಾಧ್ಯತೆಯನ್ನೂ ತೋರಿದ್ದಾರೆ. ಈ ಯಂತ್ರವನ್ನು ನಡೆಸಲು ಗುಂಪಿನ ಒಂದು ದೊಡ್ಡ ಪರಿಮಾಣ ಸದಾ ಯಶಸ್ವಿಯಾದ ವ್ಯಾಪಾರವನ್ನು ನಡೆಸುತ್ತಿರಬೇಕು. ಆದರೆ ೧೯೯೮ರ ನೆರೆ ಈ ಆಟದ ಹಲವು ನಿಯಮಗಳನ್ನು ಪ್ರಶ್ನಿಸಿಬಿಟ್ಟಿತ್ತು. ಅನೇಕ ಗುಂಪುಗಳ ಅನೇಕ ಜನರಿಗೆ ಒಂದೇ ಬಾರಿ, ಏಕಕಾಲಕ್ಕೆ ನಷ್ಟವಾಯಿತು. ಇಂಥಹ ಏಕಕಾಲ ನಷ್ಟದಿಂದ ಸಾಲದ ಯಂತ್ರಕ್ಕೆ ಧಕ್ಕೆ ಉಂಟಾದದ್ದು ಸಹಜ.

ದ್ವಿತೀಯ ಗ್ರಾಮೀಣ್ ಮೂಲಭೂತ ಪದ್ಧತಿಯಲ್ಲಿದ್ದ ಅನೇಕ ಅಂಶಗಳನ್ನು ಪರಿಗಣಿಸಿ ಪದ್ಧತಿಯನ್ನು ಬದಲಾಯಿಸುವ ಕಾರ್ಯಕ್ರಮವಾಯಿತು. ಈ ಕೆಲಸವನ್ನು ಗ್ರಾಮೀಣ್ ಸಂಸ್ಥೆ ಮೊದಲೇ ಮಾಡಬಹುದಿತ್ತು. ವಿಶ್ವದಾದ್ಯಂತ ಅನೇಕರು ಈ ಪದ್ಧತಿಯಲ್ಲಿನ ತೊಂದರೆಗಳ ಬಗ್ಗೆ ಅದರಿಂದ ಆಗುವ ನಷ್ಟದ ಬಗ್ಗೆ ಬರೆದಿದ್ದರೂ, ಗ್ರಾಮೀಣ್ ಸಂಸ್ಥೆ ಅದನ್ನು ಆತ್ಮಾವಲೋಕನಕ್ಕಾಗಿ ಪರಿಗಣಿಸಲೇ ಇಲ್ಲ. ಆದರೆ ಒಂದು ಪೆಟ್ಟು ಬಿದ್ದಾಗ ಮಾತ್ರ ಈ ವಿಚಾರದ ಬಗ್ಗೆ ಗ್ರಾಮೀಣ್ ಸಂಸ್ಥೆ ಪ್ರತಿಕ್ರಿಯಿಸಿತು. ಆದರೆ ಗ್ರಾಮೀಣ್ ಸಂಸ್ಥೆ ಪ್ರತಿಕ್ರಿಯಿಸಿದಾಗ ಅದು ಅತ್ಯಂತ ಸೃಜನಾತ್ಮಕವಾಗಿ ಪ್ರತಿಕ್ರಿಯಿಸಿತು. ೧೯೯೮ ರ ನೆರೆಯ ನಂತರ ಗ್ರಾಮೀಣ್ ತನ್ನ ಪದ್ಧತಿಯನ್ನು ಗ್ರಾಮೀಣ್-೨ ಗೆ ಬದಲಾಯಿಸಿತು. ಆ ಬದಲಾವಣೆ ಗ್ರಾಮೀಣ್ ಪದ್ಧತಿಯ ಮೂಲಭೂತ ಸೂತ್ರಗಳನ್ನು ಬುಡಮೇಲು ಮಾಡಿತ್ತು. ಈ ಬದಲಾವಣೆಯು ಗ್ರಾಮೀಣ್ ಸಂಸ್ಥೆಯನ್ನು ಮುಖ್ಯಪ್ರವಾಹದ ಬ್ಯಾಂಕಿಂಗ್ ಪದ್ಧತಿಯತ್ತ ಕರೆದೊಯ್ದಿತು. 

ತಮ್ಮ ಗ್ರಾಹಕರು ಕಾಲಾಂತರದಲ್ಲಿ ಬೆಳೆದಿದ್ದಾರೆ, ಅವರ ಅವಶ್ಯಕತೆಗಳು ಬೆಳೆದಿವೆ, ಅವರುಗಳು ಹೆಚ್ಚು ಸಾಲವನ್ನು ಪಡೆಯಬಲ್ಲವರಾಗಿದ್ದಾರೆ, ಈ ಎಲ್ಲವೂ ಪದ್ಧತಿಯಲ್ಲಿನ ಮಾರ್ಪಾಡನ್ನು ಬಯಸುತ್ತವೆ ಎಂದು ಗ್ರಾಮೀಣ್ ಸಂಸ್ಥೆ ಹೇಳಿದರೂ ಇಲ್ಲಿ ಗ್ರಾಹಕರ ಬೆಳವಣಿಗೆಗಿಂತ ಗಹನವಾದ ಮಾತಿದೆ. ಹಳೇ ಗ್ರಾಮೀಣ್ ಪದ್ಧತಿಯಲ್ಲಿ ಕೆಲ ಗ್ರಾಹಕರು ಸಾಲಮರುಪಾತಿ ಮಾಡದಿರುವುದರಿಂದ ಆಗಬಹುದಾದ ನಷ್ಟವನ್ನು ಗುಂಪಿನ ಮೂಲಕ - ಆ ಗುಂಪು ಕಟ್ಟುತ್ತಿದ್ದ ಕಡ್ಡಾಯ ತರಿಗೆ ಹಾಗೂ ಕಡ್ಡಾಯ ಉಳಿತಾಯದ ಮೂಲಕ - ತುಂಬಲಾಗುತ್ತಿತ್ತು. ಸಣ್ಣಪುಟ್ಟ ನಷ್ಟಗಳನ್ನು ಒಂದೆರಡು ಕಂತುಗಳನ್ನು ಕಟ್ಟಲಾಗದ ಪರಿಸ್ಥಿತಿಯನ್ನು ಮೀರಿ ಮುಂದುವರೆಯಲು ಈ ತೆರಿಗೆ-ಉಳಿತಾಯ ಸಾಕಾಗುತ್ತಿತ್ತು. ಜೊತೆಗೆ ಇದರಿಂದಾಗಿ ಗ್ರಾಮೀಣ್ ಸಂಸ್ಥೆಯ ಲೆಕ್ಕ ಪುಸ್ತಕಗಳಲ್ಲೂ ಯಾವ ಬಾಕಿಯನ್ನೂ ತೋರಿಸದೇ ಮುಂದುವರೆಯಲು ಸಾಧ್ಯವಾಗುತ್ತಿತ್ತು. ನಿಜವಾದ ಬಾಕಿ ಮೊತ್ತ ಇನ್ನೂ ಹೆಚ್ಚಾಗಿದ್ದರೂ ಈ ಏರ್ಪಾಟಿನಿಂದ ಎಲ್ಲವೂ ಸಾಫಾಗಿ-ಶುದ್ಧವಾಗಿ ಕಾಣುತ್ತಿತ್ತು. ಗ್ರಾಮೀಣ್ ಪದ್ಧತಿಯಲ್ಲಿ ಕೊಟ್ಟ ಸಾಲಗಳೆಲ್ಲವೂ ಒಂದೇ ರೀತಿಯದ್ದಾಗಿದ್ದವು. ಯಾವ ಕಾರಣಕ್ಕಾಗಿ ಸಾಲ ನೀಡಿದ್ದಾರೆ ಅನ್ನುವುದು ಮುಖ್ಯವಾಗದೇ ಎಲ್ಲಕ್ಕೂ ಪೂರ್ವನಿಗದಿತ ಸಮಾನ ಬಡ್ಡಿದರ ಇರುತ್ತಿತ್ತು, ವಾರಕ್ಕೊಮ್ಮೆ ಕಂತನ್ನು ಕಟ್ಟಬೇಕಿತ್ತು. ಹೀಗಾಗಿ ಹಣವನ್ನು ಯಾವುದೇ ಕೆಲಸಕ್ಕೆ ಉಪಯೋಗಿಸಬಹುದು ಅನ್ನುವ ವಾದವನ್ನು ಒಂದು ರೀತಿಯಲ್ಲಿ ಗ್ರಾಮೀಣ್ ಸಂಸ್ಥೆ ಅತಿರೇಕಕ್ಕೆ ಒಯ್ದಿತ್ತು ಅನ್ನಿಸುತ್ತದೆ. ಹೀಗಾಗಿ ಗ್ರಾಮೀಣ್ ಸಂಸ್ಥೆಯ ಅಂತರಿಕ ನಿಯಂತ್ರಣ, ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುವ ರೀತಿ, ಎಲ್ಲವೂ ಸರಳವಾಗಿ ನೇರವಾಗಿತ್ತು. ಹೀಗಾಗಿಯೇ ಈ ಪದ್ಧತಿಯನ್ನು ಅನೇಕ ಜಾಗಗಳಲ್ಲಿ ಒಂದು ಮಾದರಿಯಾಗಿ ಉಪಯೋಗಿಸಲೂ ಸಾಧ್ಯವಾಯಿತು. 

ಮಾರ್ಕ್ ಟ್ವೇನ್ ಹೇಳಿದ್ದನಂತೆ: "ನಾನು ಹದಿನಾಲ್ಕು ವರ್ಷದವನಾಗಿದ್ದಾಗ ನನ್ನ ತಂದೆ ಎಷ್ಟು ಮೂರ್ಖರಾಗಿದ್ದರೆಂದರೆ, ಅವರು ನನ್ನ ಆಜುಬಾಜುವಿನಲ್ಲಿದ್ದರೂ ನನಗೆ ಕಿರಿಕಿರಿಯಾಗುತ್ತಿತ್ತು. ಆದರೆ ನನಗೆ ಇಪ್ಪತ್ತೊಂದಾಗುವ ವೇಳೆಗೆ, ಈ ಮನುಷ್ಯ ಕಳೆದ ಏಳು ವರ್ಷಗಳಲ್ಲಿ ಎಷ್ಟೊಂದು ಕಲಿತು ಪ್ರಬುದ್ಧನಾಗಿದ್ದಾನೆ ಅಂತ ನನಗೆ ಆಶ್ಚರ್ಯವಾಗುತ್ತಿದೆ" ಅಂದಿದ್ದನಂತೆ. ಗ್ರಾಮೀಣ್ ಕಥೆಯೂ ಅಂಥದ್ದೇ ಆಗಿದೆ. ಈ ಬೆಳವಣಿಗೆಯನ್ನು ಆ ಸಂಸ್ಥೆಯ (ಜೊರಿಮೋನ್‌ಳಂತಹ) ಅನೇಕ ಗ್ರಾಹಕರ ಬೆಳವಣಿಗೆಯೆಂದು ಹೇಳಲಾಗತ್ತದಾದರೂ ಅದು ನಿಜಕ್ಕೂ ಗ್ರಾಮೀಣ್ ಸಂಸ್ಥೆಯ ಬೆಳವಣಿಗೆಯ ಕಥೆಯೋ ಆಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ್ ಸಂಸ್ಥೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ನಾವು ಕೇಳುವುದು ಸಮಂಜಸವೆನ್ನಿಸಬಹುದು. 

  • ಕಡು ಬಡವರೊಂದಿಗೆ ಮಾತ್ರ ವ್ಯವಹಾರ ನಡೆಸುವ ಈ ಸಂಸ್ಥೆ, ಬಡವರು ಎಂದು ಹಣೆಪಟ್ಟಿ ಹಚ್ಚಲಾಗದ (ಅಂದರೆ ಬಡತನದಿಂದ ಆಚೆ ಬಂದ) ಗ್ರಾಹಕರೊಂದಿಗೆ ಏನು ಮಾಡುತ್ತದೆ? ಅವರುಗಳನ್ನು ಸಂಸ್ಥೆಯಿಂದ ತೇರ್ಗಡೆಗೊಳಿಸಿ ಬೇರೆ ದೊಡ್ಡ ಬ್ಯಾಂಕುಗಳ ಸುಪರ್ದಿಗೆ ಒಪ್ಪಿಸುತ್ತದೆಯೇ ಅಥವಾ, ಆ ಗ್ರಾಹಕರಿಗೆ ಬೇಕಾದ  ಸೇವೆಗಳನ್ನುಗ್ರಾಮೀಣ್ ಒದಗಿಸಿಕೊಡುತ್ತದೆಯೇ? ಪುಸ್ತಕದಲ್ಲಿ ಕೊಟ್ಟಿರುವ ಅಂಕಿ ಅಂಶಗಳ ಪ್ರಕಾರ ೫೮.೪ ಪ್ರತಿಶತ ಗ್ರಾಮೀಣ್ ಗ್ರಾಹಕರು, ಅವರೇ ನಿರ್ಮಿಸುವ ಹತ್ತು ಅಂಶಗಳ ಮಾಪನದ ಪ್ರಕಾರ ಬಡತನದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಗ್ರಾಮೀಣ್ ಸಂಸ್ಥೆಯ ಬಹುಸಂಖ್ಯಾತ ಗ್ರಾಹಕರು ಅವರದೇ ಮಾಪನದ ಪ್ರಕಾರ ಬಡವರಲ್ಲ.
  • ವಾರಕ್ಕೊಮ್ಮೆ ಸೇರುವುದು, ಪ್ರಮಾಣ ವಚನವನ್ನು ಪಠಿಸುವುದು, ಮುಂತಾದ ಪದ್ಧತಿಗಳು ಬಹಳ ಸಮಯವನ್ನು ಬೇಡುತ್ತವೆ. ಗ್ರಾಹಕರಿಗೆ ಈಗಿರುವ ವ್ಯಾಪಾರದ ಚೌಕಟ್ಟಿನಲ್ಲಿ ಈ ಶಿಸ್ತನ್ನು ಪಾಲಿಸುವುದು ಕಠಿಣವಾದ ಮಾತು ಅನ್ನುವ ತೀರ್ಮಾನಕ್ಕೆ ಗ್ರಾಹಕರುಬಂದಾಗ ಏನಾಗುತ್ತದೆ?
  • ಹಿಗ್ಗುತ್ತಿರುವ ಗ್ರಾಹಕ ಬಳಗ, ಹಿಗ್ಗುವ ಅವರ  ವಶ್ಯಕತೆಗಳು ಇವುಗಳಿಗಾಗಿ ಹಿಂದೆ ಹಣನೀಡುತ್ತಿದ್ದ ವಿದೇಶೀ ಅನುದಾನ ಸಂಸ್ಥೆಗಳು ತಮ್ಮ ಹಣವನ್ನು ಬಿಗಿ ಮಾಡಿದಾಗ ಅಥವಾ ಅವರುಗಳ ಸಂಪನ್ಮೂಲಗಳು ಗ್ರಾಮೀಣ್ ಸಂಸ್ಥೆಯ ಪ್ರಗತಿಯ ಗತಿಯಲ್ಲೇ ಹೆಜ್ಜೆ ಹಾಕಲು ಸಾಧ್ಯವಾಗದಾಗ ಗ್ರಾಮೀಣ್ ಏನು ಮಾಡುತ್ತದೆ?
ಈ ವಿಚಾರಗಳನ್ನು ಗ್ರಾಮೀಣ್ ತುರ್ತಾಗಿ ಅವಲೋಕನ ಮಾಡಬೇಕಿತ್ತು. ಜೊತೆಗೆ ಗ್ರಾಮೀಣ್ ಬಾಂಗ್ಲಾದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಂದು ಪ್ರಮುಖ ಸಂಸ್ಥೆಯಾಗಿದ್ದದ್ದರಿಂದ ಆ ವ್ಯವಸ್ಥೆಯ ಒಟ್ಟಾರೆ ನಿಯಮಾವಳಿ ಮತ್ತು ನಡಾವಳಿಗೆ ಒಗ್ಗಿಕೊಳ್ಳಬೇಕಾದ ಅವಶ್ಯಕತೆಯೂ ಇತ್ತು. ಅದಕ್ಕೆ ಒಗ್ಗದಿದ್ದರೆ, ತನ್ನ ಗ್ರಾಹಕ ಸಮುದಾಯವನ್ನು ಪ್ರಾರಂಭಿಕ - ಆಗಷ್ಟೇ ವಿತ್ತಸೇವೆಗಳನ್ನು ಪಡೆವ ಜನರೆಂದು - ಪರಿಗಣಿಸಿ, ಅವರೊಂದಿಗೇ ಕೆಲಸ ಮಾಡುತ್ತಾ, ಅವರುಗಳು ಬೆಳೆದಂತೆ ಅವರನ್ನು ಮುಖ್ಯಧಾರೆಯ ಇತರ ಸಂಸ್ಥೆಗಳಿಗೆ ಒಪ್ಪಿಸುತ್ತಾ ಮುಂದುವರೆಯಬೇಕಿತ್ತು. ಈ ಅಂಶವನ್ನು ನೀಲಂ ಮಹೇಶ್ವರೀ ಅಜಮೇರ್‌‍ನಲ್ಲಿ ನಡೆಸಿದ ತಮ್ಮ ಅಧ್ಯಯನದಲ್ಲಿ ಗ್ರಹಿಸಿದ್ದಾರೆ. ಸ್ವಸಾಹಯ ಗುಂಪಿನ ಕೆಲ ಮಹಿಳೆಯರು ಇತರರಿಗಿಂತ ತ್ವರಿತಗತಿಯಲ್ಲಿ ಮುಂದುವರೆದಾಗ, ಅವರ ಅವಶ್ಯಕತೆಗಳನ್ನು ಗುಂಪಿನಿಂದ ಪೂರೈಸುವುದು ಸಾಧ್ಯವಾಗುವುದಿಲ್ಲ, ಹೀಗಾಗಿ ಅನೇಕ ಗುಂಪುಗಳಿಂದ ಬಂದ 'ತ್ವರಿತ ಪ್ರಗತಿ ಸಾಧಿಸಿದ' ಮಹಿಳೆಯರು 'ಕಂಪನಿ' ಎಂದು ಕರೆವ ತಮ್ಮದೇ ಗುಂಪುಗಳನ್ನು ಆಯೋಜಿಸಿಕೊಂಡು, ಗುಂಪನಂಥದೆ ನಿಯಮಗಳ ಆಧಾರದ ಮೇಲೆ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ಆದರೆ ಇಲ್ಲಿ ಈ ಕಂಪನಿ ಗುಂಪುಗಳು ಒಂದು ನಿಯಮಿತ ಕಾಲದ ನಂತರ ತಾನಾಗಿಯೇ ಮುಚ್ಚಿಹೋಗುತ್ತದೆ. ಸ್ವಸಹಾಯ ಗುಂಪಿನ ನಿಯಮದ ಆಧಾರದ ಮೇಲೆಯೇ ನಡೆವ ಈ ಕಂಪನಿಗಳು ಮಹಿಳೆಯರೇ ತಮ್ಮ ಅವಶ್ಯಕತೆಗನುಸಾರ ಕಂಡುಕೊಂಡಿರುವ ವಿಧಾನವಾಗಿದೆ. 

ಗ್ರಾಮೀಣ್ ಸಂಸ್ಥೆಯು ಮಾರುಕಟ್ಟೆಯ ನಿಯಮಕ್ಕೆ ಒಗ್ಗಿಕೊಂಡು ಮುಂದುವರೆದರೆ, ಕಡುಬಡವರ ಜೊತೆ ಕೆಲಸ ಮಾಡುತ್ತಿದ್ದ ತನ್ನ ಮೂಲ ಉದ್ದೇಶವನ್ನು ಮರೆತುಬಿಡುವ ಸಾಧ್ಯತೆ ಇದೆ - ಕಾಲಾಂತರದಲ್ಲಿ ಬೇರೆ ದಾರಿಯನ್ನು ಅಪ್ರಯತ್ನವಾಗಿ ಕ್ರಮಿಸುವ ಸಾಧ್ಯತೆ ಇದೆ ಎನ್ನುವ ಎಚ್ಚರವನ್ನು ವಹಿಸಬೇಕಾಗುತ್ತದೆ. ಗ್ರಾಮೀಣ್-೨ ಎಂಬ ಹಂತವು ಆ ಸಂಸ್ಥೆ ಮಾರುಕಟ್ಟೆಯ ನಿಯಮಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮರುರೂಪಿಸುವ ಒಂದು ಸಾಹಸವೇ ಎನ್ನಬೇಕಾಗಿದೆ. ಮುಖ್ಯಧಾರೆಯ ಬ್ಯಾಂಕಿನ ಪದ್ಧತಿಗಳನ್ನು ಅನುಸರಿಸುತ್ತಲೇ ಕಡುಬಡವರಿಗೆ ಸಾಲ ಮತ್ತು ಇತರ ವಿತ್ತೀಯ ಸೇವೆಗಳನ್ನು ಒದಗಿಸುವ ಪ್ರಯತ್ನವು ಗ್ರಾಮೀಣ್-2 ಮೂಲಕ ನಡೆಯುತ್ತಿದೆ. ಸಂಸ್ಥೆಯ ಮೂಲ ಆಧಾರ ಸೂತ್ರಗಳಾದ - ಬಡಗ್ರಾಹಕರೇ ಬ್ಯಾಂಕಿನ ಮಾಲೀಕತ್ವ ಪಡೆದಿರುವುದು, ಮತ್ತು ಅದರ ಕಾರ್ಯಪ್ರಣಾಲಿಯನ್ನು ರೂಪಿಸುವಲ್ಲಿ ಅವರು ಹಿರಿಯ ಪಾತ್ರವನ್ನು ನಿರ್ವಹಿಸುವುದು ಇವನ್ನು ಗ್ರಾಮೀಣ್-2 ಬಿಟ್ಟುಕೊಟ್ಟಿಲ್ಲ. ಬದಲಾಗಿರುವುದು ಸಾಲ ನೀಡುವ, ಮರುಪಾವತಿಸುವ, ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವ ರೀತಿರಿವಾಜುಗಳಷ್ಟೇ.

ಗ್ರಾಮೀಣ್-೨ರಲ್ಲಿ ಇರುವ ನಿಯಂತ್ರಣಾ ಸೂತ್ರಗಳು ಮೊದಲಿಗಿಂತ ಭಿನ್ನವಾಗಿವೆ. ಗುಂಪುಗಳು ನಿಯಮಿತವಾಗಿ ವಾರಕ್ಕೊಮ್ಮೆ ಭೇಟಿಯಾಗುತ್ತವಾದರೂ, ಒಬ್ಬರು ಮರುಪಾವತಿಸದ ಕಂತಿಗೆ ಗುಂಪಿನ ಇತರರನ್ನು ಜವಾಬ್ದಾರರನ್ನಾಗಿ ಮಾಡುವ ಪದ್ಧತಿಯನ್ನು ಕೈಬಿಡಲಾಗಿದೆ. ಇದರ ವಿರುದ್ಧ ಸಾಲ ಪಡೆದವರದ್ದೇ ಉಳಿತಾಯದ ಮೊತ್ತ ಮತ್ತು ವಿಮೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಹಿಂದಿನ ಪದ್ಧತಿಯಲ್ಲಿ ಗುಂಪು ತೆರಿಗೆಯ ಮೂಲಕ ಇಡೀ ಗುಂಪಿನ ಸಾಲದ ಜವಾಬ್ದಾರಿಯನ್ನು ಹೊರುತ್ತಿದ್ದ ಗ್ರಾಹಕರು ಈಗ ತಮ್ಮ ಉಳಿತಾಯದ ಆಧಾರದ ಮೇಲೆ ತಮ್ಮದೇ ಸಾಲದ ಜವಾಬ್ದಾರಿಯನ್ನು ಹೊರುತ್ತಾರೆ. ಸಾಲಗಾರರ ಹೆಸರಿನಲ್ಲಿ "ಬ್ರಿಡ್ಜ್" ಅಥವಾ "ಫ್ಲೆಕ್ಸಿಬಲ್" ಸಾಲ (ಅಂದರೆ ಕಂತುಗಳನ್ನು ನಿಯಮಿತವಾಗಿ ಕಟ್ಟದಿರುವುದರಿಂದ ಉಂಟಾಗಿರುವ ಸ್ಪೆಷಲ್ ಸಾಲಗಳು!) ಇಲ್ಲದಿದ್ದಲ್ಲಿ ತಮ್ಮ ಉಳಿತಾಯವನ್ನು ಅವರು ವಾಪಸ್ಸು ಪಡೆಯಲೂ ಬಹುದು. ಪ್ರತೀ ಗ್ರಾಹಕಳೂ ಒಂದು ವ್ಯಕ್ತಿ, ಆ ವ್ಯಕ್ತಿಗೆ ತನ್ನದೇ ಲಾವಾದೇವಿಯ ಚರಿತ್ರೆಯಿದೆ ಅನ್ನುವುದನ್ನು ಈ ಹೊಸ ಪದ್ಧತಿ ಗುರುತಿಸುತ್ತದೆ. ಉಳಿತಾಯ ಮಾಡುವವರು - ಸಾಲ ಪಡೆವವರು ಎಂದು ಎರಡು ಭಿನ್ನ ಪೆಟ್ಟಿಗೆಗಳಲ್ಲಿ ಗ್ರಾಹಕರನ್ನು ನೋಡದೇ, ಆಗಾಗ ಉಳಿಸುವ, ಆಗಾಗ ಸಾಲ ಪಡೆವ ವ್ಯಕ್ತಿಗಳಂತೆ ನೋಡುವುದರಲ್ಲಿಯೇ ಗ್ರಾಮೀಣ-2 ಪದ್ಧತಿಯ ಪ್ರಾಮುಖ್ಯತೆಯಿದೆ. ಹೀಗಾಗಿ ತ್ವರಿತಗತಿಯಲ್ಲಿ ಬೆಳೆವವರು ಗುಂಪಿನ ಮಿಕ್ಕ ಸದಸ್ಯರ ಮಟ್ಟಕ್ಕೇ ಕಟ್ಟುಬೀಳುವ ಅವಶ್ಯಕತೆಯಿಲ್ಲ. ಎಲ್ಲಕ್ಕಿಂತ ಮುಖ್ಯವಾದ ಬದಲಾವಣೆ - ವಾರದ ಸಭೆಯಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಿದ್ದ ರೂಢಿಯ ಬಗೆಗಿನದು. ಮುಂಚೆ, ಮಿಲಿಟರಿ ಕವಾಯತಿನಂತೆ ಐದು ಜನರ ಗುಂಪು ಒಂದು ಸಾಲಿನಲ್ಲಿ, ಹಾಗೂ ಈ ಇಂಥ ಎಂಟು ಗುಂಪುಗಳು ಒಂದು ಗುಂಪಿನ ಹಿಂದೆ ಮತ್ತೊಂದು ಗ್ರಾಮೀಣ್ ಸಂಸ್ಥೆಯ ಉದ್ಯೋಗಿಯ ಎದುರು ಕುಳಿತುಕೊಳ್ಳುತ್ತಿದ್ದರೆ, ಈಗ ದೊಡ್ಡ ಕಂಪನಿಗಳ ಬೋರ್ಡ್ ರೂಂನಲ್ಲಿ ಇರುವ ಕುದುರೆಯ ಲಾಳದ ಆಕಾರದಲ್ಲಿ ಅವರು ಕುಳಿತುಕೊಳ್ಳುತ್ತಾರೆ. ಆ ಸಂಸ್ಥೆ ಬೆಳೆದು ಬಂದ ರೀತಿಗೆ ಇದೊಂದು ಪ್ರಭಾವೀ ಚಿನ್ಹೆ ಎಂದೇ ಹೇಳಬಹುದು. ಇದಲ್ಲದೇ ಸಾಲ ಮರುಪಾವತಿಯಾಗದಿದ್ದಲ್ಲಿ ಆ ನಷ್ಟವನ್ನು ಭರಿಸಲು ಇತರ ಸೂತ್ರಗಳನ್ನು ಅಳವಡಿಸಲಾಗಿದೆ. ಸಾಲಗಾರರ ಸಾವು ಉಂಟಾದರೆ ಅದಕ್ಕೂ ಇನ್ಶೂರೆನ್ಸ್ ಪದ್ಧತಿಯನ್ನು ಅಳವಡಿಸಲಾಗಿದೆ. ಈ ಎಲ್ಲ ಬದಲಾವಣೆಯಲ್ಲೂ ಹೇರಿಕೆಯ ಅಂಶಗಳನ್ನು ಇಲ್ಲವಾಗಿಸಿ ಸ್ವಯಂ-ಪ್ರೇರಣೆಗೆ ಒತ್ತು ಕೊಟ್ಟಿರುವುದು ಗಮನಿಸಬೇಕಾದ ವಿಷಯ.

ಗ್ರಾಮೀಣ್-೨ ನಮಗೆ ಹೇಳುವುದು ಒಂದು ಕಿರುಸಾಲದ ಸಂಸ್ಥೆ ಬೆಳೆದು ಘನವಾಗಿ ಒಂದು ಲಘುವಿತ್ತ ಸಂಸ್ಥೆಯಾದ ಕಥೆಯನ್ನು. ಗ್ರಾಹಕರ ಸಾಲ ಮರುಪಾವತಿಗೆ ಬೇಕಾದ ಅನೇಕ ಅಂಶಗಳನ್ನು ತನ್ನ ಹೊಸ ರೂಪದಲ್ಲಿ ಗ್ರಾಮೀಣ್ ಅಳವಡಿಸಿದೆಯಲ್ಲದೇ ಗ್ರಾಹಕರ ವಿತ್ತಸ್ಥಿತಿ ಉತ್ತಮಗೊಳ್ಳುವತ್ತಲೂ ಅವರ ಮೂಲಭೂತ ಇಡಿಗಂಟು ಹೆಚ್ಚುವತ್ತಲೂ ಅದು ಒತ್ತು ನೀಡಿದೆ. ಪೆನ್ಷನ್ ಪದ್ಧತಿ ಮತ್ತು ಉಳಿತಾಯದ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಅವಕಾಶವನ್ನೂ ಅದು ಬಡವರಿಗೆ ಒದಗಿಸಿಕೊಡುತ್ತಿದೆ. 

ಗ್ರಾಮೀಣ್‌-೨ರಲ್ಲಿ ಆಗಿರುವ ಮಹತ್ವದ ಬದಲಾವಣೆಯೆಂದರೆ ಅವರು ತಮ್ಮ ಸದಸ್ಯರಲ್ಲದವರಿಂದಲೂ ಠೇವಣಿಗಳನ್ನು ಸಂಗ್ರಹಿಸಲು ಆರಂಭಿಸಿರುವುದು. ಈ ಸಂಸ್ಥೆ ಈಗ ನಿಜಕ್ಕೂ ಬ್ಯಾಂಕ್ ಆಗಿದೆ ಅನ್ನುವುದಕ್ಕೆ ಇದು ಅಂತಿಮ ಪುರಾವೆ. ಜನರಿಂದ ಠೇವಣಿಗಳನ್ನು ಸಂಗ್ರಹಿಸುವ ಸಂಸ್ಥೆ ತನ್ನನ್ನು ಹೆಚ್ಚಿನ ಪರಿಶೀಲನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಆದರೆ ಬರೇ ಸಾಲದ ಯಂತ್ರವಾಗಿದ್ದ ಗ್ರಾಮೀಣ್ ಸಂಸ್ಥೆ ಹೀಗೆ ವಿಕಾಸಗೊಂಡಿರುವುದು ಒಳ್ಳೆಯ ಸುದ್ದಿಯೆಂದೇ ಹೇಳಬೇಕು. ಎರಡನೆಯ ಹಂತದ ಕಲಿಕೆಗೆ ಈಗ ಗ್ರಾಮೀಣ್ ಸಿದ್ಧವಾಗಬೇಕು. ಯೂನಸ್‌ಗೆ ನೊಬೆಲ್ ಬಂದಿರುವುದರಿಂದ ಗ್ರಾಮೀಣ್ ಸಂಸ್ಥೆಯನ್ನು ಇನ್ನೂ ಹತ್ತಿರದಿಂದ ಈಗ [ಗ್ರಾಮೀಣ್ ಅಭಿಮಾನಿಗಳೂ, ವಿಮರ್ಶಕರೂ ಒಳಗೊಂಡಂತೆ] ಪ್ರಪಂಚವೇ ಪರಿಶೀಲಿಸುವುದು. ಇದಕ್ಕೆ ಆ ಸಂಸ್ಥೆ ತಯಾರಾಗಬೇಕು. 

ಗ್ರಾ
ಮೀಣ್-೨ ಬಗೆಗಿನ ಪುಸ್ತಕ ಈ ಬದಲಾವಣೆಗಳನ್ನು ಹೇಗೆ ಕಾರ್ಯಗತ ಮಾಡಲಾಯಿತು ಅನ್ನುವುದರ ವಿವರವಾದ ಗಾಥೆ. ನಿಜಕ್ಕೊ ಈಗ ಗ್ರಾಮೀಣ್ ತನ್ನ ಹೆಸರಾದ ಗ್ರಾಮೀಣ್ "ಬ್ಯಾಂಕ್" ಎಂದು ಕರೆಯಿಸಿಕೊಳ್ಳುವುದಕ್ಕೆ ಅರ್ಹತೆ ಪಡೆದಿದೆ.


No comments:

Post a Comment