ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?
ಐಟಿಸಿ ಸಂಸ್ಥೆಯ ಈಚಿನ ಖ್ಯಾತಿ ಅವರು ರೈತರಿಗಾಗಿ ನಡೆಸುತ್ತಿರುವ ಈ-ಚೌಪಾಲ್ ಕಾರ್ಯಕ್ರಮದಿಂದಾಗಿ ಹೆಚ್ಚಿದೆ. ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಒಯ್ದು ಅದರಿಂದಾಗಿ ಒಳಿತು ಮಾಡಿರುವುದಕ್ಕಾಗಿ ಈ ಸಂಸ್ಥೆ ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಚೌಪಾಲ್ ನಿಂದಾಗಿ ರೈತರಿಗೆ ಮಂಡಿಗೆ ಹೋಗುವುದಕ್ಕೆ ಮುನ್ನವೇ ಬೆಲೆಯ ಅರಿವಾಗುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸ್ಥಳದಲ್ಲೇ ಲಭ್ಯವಾಗುತ್ತದೆ. ಕೃಷಿಯಿಂದಾಗಿ ಬರುವ ಆದಾಯ ಹೆಚ್ಚುವುದರಲ್ಲೂ, ಖರ್ಚನ್ನು ಕಡಿಮೆ ಮಾಡುವುದರಲ್ಲೂ ಚೌಪಾಲ್ ಸಹಾಯಕವಾಗಿದೆ. ಇದರಿಂದಾಗಿ ರೈತರ ಇಳುವರಿಯನ್ನು ಕೊಳ್ಳುವ ಐಟಿಸಿಗೂ ಒಟ್ಟಾರೆ ಖರ್ಚು ಕಡಿಮೆಯಾಗಿ ಎಲ್ಲರೂ ಗೆಲ್ಲುವ ವಿನ್-ವಿನ್ ಪರಿಸ್ಥಿತಿ ಉಂಟಾಗಿದೆಯಂತೆ. ಹೀಗೆ ಐಟಿಸಿ ಅದ್ಭುತವಾದ ತಂತ್ರಜ್ಞಾನವನ್ನೂ ಲಾಭವನ್ನೂ ಒಳಿತಿಗೆ ಉಪಯೋಗಿಸಿದ ಸಂಸ್ಥೆಯಾಗಿ ಕೊಂಡಾಡಲ್ಪಡುತ್ತದೆ.
ಆದರೆ ಇದರಲ್ಲಿರುವ ವ್ಯಂಗ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಬಾರಿಯ ವಾರ್ಷಿಕ ವರದಿಯಲ್ಲಿ ಐಟಿಸಿಯ ಮುಖ್ಯಸ್ಥ ದೇವೇಶ್ವರ್ ತಮ್ಮ ಭಾಷಣದಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ಮಾತಾಡುತ್ತಾ ಸಂಸ್ಥೆಯ ವಿವಿಧ ವಿಭಾಗಗಳನ್ನು ಕೊಂಡಾಡುತ್ತಾರೆ. ಹಾಗೂ ಜಾಗತಿಕ ಹವಾಮಾನದಲ್ಲಾಗುತ್ತಿರುವ ಏರುಪೇರು ಮತ್ತು ಪರಿಸರದ ಬಗ್ಗೆ ಮಾತನಾಡುತ್ತಾರೆ. ತಾವು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಈ ಮಧ್ಯೆ ನಮ್ಮ ಕಣ್ಣಿಗೆ ಕಾಣದಿರಬಹುದಾದ ವಿವರಗಳು - ತಂಬಾಕು ವ್ಯಾಪಾರದಿಂದ ಕಳೆದ ವರ್ಷದ ವ್ಯಾಪಾರದ ಆಧಾರದ ಮೇಲೆ ಬೆಳೆದ ಮಾರಾಟ ರೂ ೧೩೦೦ ಕೋಟಿ, ಒಟ್ಟಾರೆ ಮಿಕ್ಕ ವ್ಯಾಪಾರಗಳಿಂದ ಹೆಚ್ಚಾದ ಮಾರಾಟ ರೂ.೫೦೦ ಕೋಟಿ. ತಂಬಾಕಿನಿಂದ ಬಂದ ಲಾಭಾಂಶ ಸುಮಾರು ರೂ.೪,೨೦೦ ಕೋಟಿ, ಮಿಕ್ಕೆಲ್ಲ ವ್ಯಾಪಾರಗಳಿಂದ ಬಂದ ಲಾಭಾಂಶ ಸುಮಾರು ರೂ.೪೦೦ ಕೋಟಿ. ಆದರೂ ಒಟ್ಟಾರೆ ಲಾಭಾಂಶದ ೮೯% ತರುವ ತಂಬಾಕಿನ ವ್ಯಾಪಾರದ ಬಗ್ಗೆ ಮುಖ್ಯಸ್ಥರು ಒಂದೂ ಪದವನ್ನು ತಮ್ಮ ಭಾಷಣದಲ್ಲಿ ಆಡುವುದಿಲ್ಲ. ಯಾಕೆಂದರೆ ತಾವು ’ಒಳಿತು’ ಮಾಡಿ ಲಾಭ ಮಾಡುತ್ತಿರುವ ಸಂಸ್ಥೆ ಎಂದು ಹೇಳಿಕೊಳ್ಳುವ, ಅದನ್ನು ಚೌಪಾಲ್ ವ್ಯಾಪಾರಗಳಂತಹ ಪ್ರಯೋಗಗಳಿಂದ ತೋರಿಸಿಕೊಳ್ಳುವ ತುರ್ತು ಇರುವ ಸಂಸ್ಥೆ ಕ್ಯಾನ್ಸರಿನಂತಹ ಭಯಾನಕ ರೋಗವನ್ನುಂಟು ಮಾಡುವ ತಂಬಾಕು ವ್ಯಪಾರವಿರುವಾಗಲೂ ಈ ಸಂಸ್ಥೆ ಮಾಡುತ್ತಿರುವ ಒಳಿತನ್ನು ನಾವು ಹೇಗೆ ಗ್ರಹಿಸಬೇಕು? ತಂಬಾಕಿನ ಲಾಭದಿಂದ ಮಿಕ್ಕ ವ್ಯಾಪಾರಗಳ ಒಳಿತು ನಡೆಯುತ್ತಿದೆ ಅನ್ನಬಹುದೇ?
ಫ್ಯಾಬ್ಇಂಡಿಯಾ ಅನ್ನುವ ಸಂಸ್ಥೆಯನ್ನು ಜಾನ್ ಬಿಸೆಲ್ ೧೯೬೦ನೇ ಇಸವಿಯಲ್ಲಿ ಸ್ಥಾಪಿಸಿದರು. ಜಾನ್ ಬಿಸೆಲ್ ಕೈಮಗ್ಗದ ಮತ್ತು ಗ್ರಾಮೀಣ ಕುಶಲ ಕರ್ಮಿಗಳ ಒಳಿತನ್ನು ಯೋಚಿಸುತ್ತಲೇ ಫ್ಯಾಬ್‍ಇಂಡಿಯಾದ ಮೂಲಕ ವ್ಯಪಾರವನ್ನು ಮಾಡಲು ಹೊರಟವರು. ಹೀಗಾಗಿ ಫ್ಯಾಬ್‍ಇಂಡಿಯಾದ ವ್ಯಾಪಾರಕ್ಕೆ ಒಂದು ರೀತಿಯ ವ್ಯಕ್ತಿತ್ವವನ್ನು ಒದಗಿಸಿದ, ಹಾಗೂ ಆ ಮೂಲಕ ಕುಶಲಕರ್ಮಿಗಳಿಗೆ ಕೆಲಸವನ್ನು ಕಲ್ಪಿಸಿಕೊಟ್ಟ - ಒಳಿತು ಮಾಡುತ್ತಲೇ ಲಾಭವನ್ನೂ ಆರ್ಜಿಸುವ ಕೆಲಸವನ್ನು ಆತ ಪ್ರಾರಂಭಿಸಿದರು.
ಖಾದೀ ಗ್ರಾಮೋದ್ಯೋಗ ಸಂಸ್ಥೆಗಳು, ಸರಕಾರಗಳು ನಡೆಸುವ ಹ್ಯಾಂಡ್‍ಲೂಮ್ ಹೌಸ್, ಕೋ-ಆಪ್ಟೆಕ್ಸ್, ಪ್ರಿಯದರ್ಶಿನಿ, ಆಪ್ಕೋಗಳನ್ನೂ - ಫ್ಯಾಬ್‍ಇಂಡಿಯಾ ಅಂಗಡಿಗಳನ್ನೂ ನೋಡಿದರೆ ಎರಡಕ್ಕೂ ಇರುವ ವ್ಯತ್ಯಾಸ ನಮಗೆ ವೇದ್ಯವಾಗುತ್ತದೆ. ಹೀಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಗ್ರಾಮೀಣ ಕುಶಲ ಕರ್ಮಿಗಳಿಗೆ ಹೆಚ್ಚು ಉಪಾಧಿಯನ್ನು ಕಲ್ಪಿಸುವ ಕೆಲಸವನ್ನು ಫ್ಯಾಬ್‍ಇಂಡಿಯಾ ತನ್ನ ಮಟ್ಟಿಗೆ ತಾನು ಮಾಡುತ್ತಿತ್ತು. ಪಾರ್ಟಿಗಳಿಗೆ ಹೋಗುವ ದೆಹಲಿಯ ಸಿರಿವಂತರಲ್ಲಿ ಫ್ಯಾಬ್‍ಇಂಡಿಯಾ ಕುರ್ತಾಧರಿಸಿ ಹೋಗುವುದೂ ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗುವ ಮಟ್ಟಿಗೆ ಫ್ಯಾಬ್‍ಇಂಡಿಯಾ ಬೆಳೆದುಬಿಟ್ಟಿತು. ಆದರೆ ೧೯೬೦ರಿಂದ ೧೯೯೪ರವರೆಗೆ ಫ್ಯಾಬ್‍ಇಂಡಿಯಾ ದೆಹಲಿಯಲ್ಲಿ ಒಂದು ಅಂಗಡಿಯ ಮೂಲಕ ವ್ಯಾಪಾರ ಮಾಡುತ್ತಿತ್ತು. ೧೯೯೪ರಲ್ಲಿ ಜಾನ್ ಬಿಸೆಲ್ ಮಗ ವಿಲಿಯಂ ಬಿಸೆಲ್ ಕಂಪನಿಯ ರೂವಾರಿಯಾದರು. ಅಲ್ಲಿಂದ ಫ್ಯಾಬ್‍ಇಂಡಿಯಾದ ಬೆಳವಣಿಗೆಯ ಕಥೆ ಪ್ರಾರಂಭವಾಗಿ ಇಂದು ಭಾರತದಾದ್ಯಂತ ಈ ಲಾಭಾರ್ಜನೆಯ ವ್ಯಾಪಾರ ೧೦೪ ಅಂಗಡಿಗಳ ಮೂಲಕ ನಡೆಯುತ್ತಿದೆ.
ಇದ್ದಕ್ಕಿದ್ದ ಹಾಗೆ ಫ್ಯಾಬ್‍ಇಂಡಿಯಾದ ವ್ಯಾಪಾರದ ಬಗ್ಗೆ ನಮಗೆ ಯಾಕೆ ಕುತೂಹಲ ಉಂಟಾಗಬೇಕು? ಕಾರಣವಿಷ್ಟೇ - ಒಳಿತನ್ನೂ ಲಾಭವನ್ನೂ ಆರ್ಜಿಸುವ ಉದ್ದೇಶ ಹೊತ್ತ ಸಂಸ್ಥೆಗಳು ಒಳಿತು-ಲಾಭಗಳ ಸಮತೌಲ್ಯವನ್ನು ಕಾಪಾಡುವುದರಲ್ಲಿ ತುಸು ವಿಫಲರಾಗಬಹುದಾದ್ದರಿಂದ ಅಂಥಹ ಸಂಸ್ಥೆಯ ಯಶಸ್ಸನ್ನು ತೀಕ್ಷ್ಣ ಪರಿಶೀನನೆಗೆ ಹಚ್ಚುವುದು ಸಹಜವೇ ಆಗುತ್ತದೆ. ಆದರೆ ಈ ರೀತಿಯ ಸಂಸ್ಥೆಗಳು ’ಬೆಳವಣಿಗೆ’ಯ ಪಥ ಹಿಡಿದಾಗ, ಕುಶಲಕರ್ಮಿಗಳ ಬೆಳವಣಿಗೆಯ ಗತಿಗಿಂತಾ ಹೆಚ್ಚಿನ ಗತಿಯಲ್ಲಿ ಸಂಸ್ಥೆ ಬೆಳೆಯಲು ತೊಡಗಿದಾಗ ’ಒಳಿತು’ ಹಿನ್ನೆಲೆಗೆ ಹೋಗಿ ’ಲಾಭ’ ಮುಂಚೂಣಿಗೆ ಬರುತ್ತದೆ. ಹೀಗಾಗಿಯೇ ಫ್ಯಾಬ್‍ಇಂಡಿಯಾದ ಈಚಿನ ಬೆಳವಣಿಗೆಯ ಗತಿಯಲ್ಲಿ ನೇಕಾರರು - ಕುಶಲ ಕರ್ಮಿಗಳಿಂದ ಬಂದ ಉತ್ಪತ್ತಿಯನ್ನು ಮಾತ್ರ ಮಾರುತ್ತಿದ್ದ ಸಂಸ್ಥೆ ನಿಧಾನವಾಗಿ ನಾವು ಮಾರುವ ಯಾವುದೇ ವಸ್ತುವಿನಲ್ಲಿ ಕುಶಲ ಕರ್ಮಿಗಳ ’ಕೆಲಸದ’ ಅಂಶ ಇರುತ್ತದೆ ಅನ್ನುವ ಮಾತನ್ನು ಹೇಳುತ್ತಾರೆ. ಹೀಗೆ ಹೇಳಿದಾಗ ಮಿಲ್ಲಿನ ಬಟ್ಟೆಗೆ ಹಾಕಿದ ಬ್ಲಾಕ್ ಪ್ರಿಂಟು, ಅಥವಾ ಕೈಯಿಂದ ಮಾಡಿದ ಕಸೂತಿಯ ವಸ್ತ್ರಗಳೂ ಆ ವ್ಯಾಪಾರಕ್ಕೆ ಸೇರುತ್ತವೆ, ಜೊತೆಗೆ ಸಂಬಂಧವೇ ಇಲ್ಲದ ಆರ್ಗ್ಯಾನಿಕ್ ಉಪ್ಪಿನಕಾಯಿ ಇತರ ವಸ್ತುಗಳು ಆ ವ್ಯಾಪಾರದಲ್ಲಿ ಮನೆ ಮಾಡುತ್ತವೆ. ಹೀಗೆ ಒಳಿತು ಕ್ರಮಕ್ರಮೇಣ ಹಿನ್ನೆಲೆಗೆ ಹೋಗಿ ಲಾಭ ಮತ್ತು ಬೆಳವಣಿಗೆ ಮುಖ್ಯವಾಗುತ್ತವೆ. ಹೀಗಾಗಿ ಈ ಇಂಥ ಸಂಸ್ಥೆಗಳು ಒಳಿತನ್ನು ಮಾಡುವುದನ್ನು ಮುಂದುವರೆಸಿದರೂ ಈ ಕಷ್ಟದ ಪ್ರಶ್ನೆಗಳನ್ನು ಎದುರಿಸಲೇ ಬೇಕಾಗಿದೆ! ಹೌದು ಇಂದಿಗೂ ಫ್ಯಾಬ್‍ಇಂಡಿಯಾ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅದರ ಒಟ್ಟಾರೆ ಮಾರಾಟದಲ್ಲಿ ಕುಶಲಕರ್ಮಿಗಳ ಪ್ರತಿಶತ ಕಡಿಮೆಯಾಗುತ್ತಿದೆ. ಹೀಗೆ ಲಾಭ ಒಳಿತನ್ನು ನಿಧಾನವಾಗಿ ಕಬಳಿಸಿಬಿಡುತ್ತದೆ.
ಅದೇ ಲಾಭ ಗಳಿಸುವುದೇ ಒಳಿತು ಮಾಡಲು ಅನ್ನುವಂಥಹ ಸಂಸ್ಥೆಗಳೂ ನಮ್ಮಲ್ಲಿವೆ. ಇಂಥ ಸಂಸ್ಥೆಗಳಲ್ಲಿ ಬಂಡವಾಳ ಮತ್ತು ಲಾಭ ಮುಂಚೂಣಿಗೆ ಬರದೇ ಮೂಲ ಉದ್ದೇಶ ಒಳಿತು ಮಾಡುವುದೇ ಆಗಿದೆ. ಮದುರೈನಲ್ಲಿರುವ ಅರವಿಂದ ಐ ಕೇರ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದನ್ನು ಸ್ಥಾಪಿಸಿದ [ಹಾಗೂ ಈಚೆಗೆ ತೀರಿಕೊಂಡ] ಗೋವಿಂದಪ್ಪಾ ವೆಂಕಟಸ್ವಾಮಿಯವರ ಉದ್ದೇಶ ಜನರ ದೃಷ್ಟಿಯನ್ನು ಉತ್ತಮಗೊಳಿಸುವುದೇ ಆಗಿತ್ತು. ಆತನಿಗೆ ಅದರಿಂದ ಯಾವ ಲಾಭವೂ ಬೇಕಿರಲಿಲ್ಲ. ಆದರೆ ಆತ ಕೇಳುತ್ತಿದ್ದ ಪ್ರಶ್ನೆಗಳೆಲ್ಲಾ ಲಾಭಗಳಿಸುವ ಸಂಸ್ಥೆಗಳು ಕೇಳಬಹುದಾದ ಪ್ರಶ್ನೆಗಳೇ. ಹೇಗೆ ಕುಶಲತೆಯಿಂದ ಕೆಲಸ ಮಾಡಬಹುದು, ಎಲ್ಲಿ ಖರ್ಚನ್ನು ಕಡಿಮೆ ಮಾಡಬಹುದು, ಗುಣಮಟ್ಟವನ್ನು ಹೇಗೆ ಕಾಯ್ದಿಟ್ಟುಕೊಳ್ಳಬಹುದು.. ಹೀಗೆ ಅವರು ಕೇಳಿದ ಪ್ರಶ್ನೆಗಳ ಫಲವಾಗಿ ಅರವಿಂದ್ ಐ ಕೇರ್ ಸಂಸ್ಥೆಗಳು ಗುಣಮಟ್ಟದ ಸೇವೆಗಳನ್ನೊದಗಿಸುತ್ತಾ ತನ್ನ ಲಾಭಾಂಶವನ್ನು ಶ್ರೀಮಂತರಿಂದ ಗಳಿಸಿ ಬಡವರಿಗೆ ಒಳಿತನ್ನು ಮಾಡುತ್ತಿದೆ. ಅಕಸ್ಮಾತ್ ಹೆಚ್ಚಿನ ಲಾಭಾಂಶವನ್ನು ಗಳಿಸಿದರೂ ಅದನ್ನು ಹಂಚುವ ಭಾರ ಆ ಸಂಸ್ಥೆಯ ಮೇಲೆ ಇಲ್ಲವಾದ್ದರಿಂದ ಆ ಸಂಸ್ಥೆಯ ಬೆಳವಣಿಗೆಯ ಗತಿ, ಫ್ಯಾಬ್‍ಇಂಡಿಯಾದ ಲಾಭಾರ್ಜನೆಯ ಬೆಳವಣಿಗೆಯ ಗತಿಗಿಂತ ಭಿನ್ನವಾಗಿರುತ್ತದೆ. ಆದರೂ ಅರವಿಂದ್ ಥರದ ಸಂಸ್ಥೆಗಳು ಒಳಿತನ್ನು ಮಾಡಲು ಯಾರ ಅನುದಾನವನ್ನೂ ಅಪೇಕ್ಷಿಸುವಿದಿಲ್ಲ.
ಒಳಿತಿಗೂ ಲಾಭಕ್ಕೂ ಇರುವ ಸಂಬಂಧ ಹೀಗೆ ಬಹಳ ಗಹನವಾದದ್ದು!
No comments:
Post a Comment