Saturday, April 6, 2013

ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ
ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.

ಗ್ರಾಮೀಣ್ ಬ್ಯಾಂಕ್ ಬಡವರಿಗೆ ಸಾಲ ನೀಡುತ್ತಿದ್ದ ರೀತಿ ಅತೀ ಸರಳವಾದದ್ದು. ಬಡವರಿಗೆ ವಿತ್ತೀಯ ಸೇವೆಗಳು ಸಂದಬೇಕಾದರೆ ಬ್ಯಾಂಕೇ ಅವರ ಬಳಿಗೆ ಹೋಗಬೇಕೆಂದು ನಂಬಿದವರು ಯೂನಸ್. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಿನ ಬಹುತೇಕ ವ್ಯಾಪಾರ ಹಳ್ಳಿಯ ನಡುವಿನಲ್ಲಿ ನಿಗದಿತ ಸಮಯಾನುಸಾರ ಶಿಸ್ತಿನಿಂದ ನಡೆಯುತ್ತದೆ. ಗ್ರಾಮೀಣ್ ಬ್ಯಾಂಕಿನ ಪದ್ಧತಿ ಎಷ್ಟು ಸರಳವೆಂದರೆ ಅದರ ಸೂತ್ರಗಳನ್ನು ವಿಶ್ವದ ಅನೇಕ ಮೂಲೆಗಳಲ್ಲಿ ಅಳವಡಿಸಿ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಿದೆ. ಭಾರತದಲ್ಲೂ ನಾವು ಮೈಕ್ರೋಫೈನಾನ್ಸ್ ಅಂದಾಗ ನಮಗೆ ಸ್ವಸಹಾಯ ಗುಂಪುಗಳ ಜೊತೆಗೇ ಕಾಣುವುದು ಗ್ರಾಮೀಣ್ ಬ್ಯಾಂಕ್ ಮಾದರಿಯ ಸಂಸ್ಥೆಗಳು. ದೊಡ್ಡದಾಗಿ ಬೆಳೆದಿರುವ ಎಸ್.ಕೆ.ಸ್, ಷೇರ್, ಸ್ಪಂದನಾ, ಕರ್ನಾಟಕದಲ್ಲಿನ ಗ್ರಾಮೀಣ ಕೂಟ - ಎಲ್ಲವೂ ಗ್ರಾಮೀಣ್ ಬ್ಯಾಂಕಿನ ಸೂತ್ರಗಳನ್ನೇ ಅಳವಡಿಸಿ ತಮ್ಮ ಕಾರ್ಯಕ್ರಮವನ್ನು ಮುಂದುವರೆಸುತ್ತಿವೆ. ಆದರೂ ವಿಶ್ವದ ಅನೇಕ ಮೂಲೆಗಳಲ್ಲಿ ಹಬ್ಬಿರುವ ಈ ಕಾರ್ಯಕ್ರಮದ ಬಗ್ಗೆ ಯೂನಸ್ ಆಗಾಗ ಅಸಹನೆ ವ್ಯಕ್ತಪಡಿಸುತ್ತಾರೆ.

ಈಚೆಗೆ ಫೋರ್ಬ್ಸ್ ಪತ್ರಿಕೆಯಲ್ಲಿ ಎಸ್.ಕೆ.ಎಸ್ ಬಗ್ಗೆ ಬಂದ ಲೇಖನದಲ್ಲೂ ಯೂನಸ್ ಆ ಸಂಸ್ಥೆಯ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವಿಷ್ಟೇ: ಮಿಕ್ಕೆಲ್ಲ ಗ್ರಾಮೀಣ್ ಥರದ ಕಾರ್ಯಕ್ರಮಗಳಿಗೂ ಯೂನಸ್ ನಡೆಸುವ ಕಾರ್ಯಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ವ್ಯತ್ಯಾಸವೆಂದರೆ ಕಾರ್ಯಕ್ರಮದ ವ್ಯಾಪಾರದಿಂದ ಆರ್ಜಿಸಿದ ಲಾಭ ಯಾರ ಕೈಗೆ ಹೋಗುತ್ತದೆ ಅನ್ನುವುದಾಗಿದೆ. ಗ್ರಾಮೀಣ್ ಬ್ಯಾಂಕಿನ ೯೦ ಪ್ರತಿಶತಕ್ಕೂ ಹೆಚ್ಚು ಮಾಲೀಕತ್ವ ಇರುವುದು ಆ ಸಂಸ್ಥೆಯ ಗ್ರಾಹಕ ಮಹಿಳೆಯರ ಕೈಯಲ್ಲಿ. ಹೀಗಾಗಿ ಗ್ರಾಹಕರಿಂದ ಆರ್ಜಿಸಿದ ಲಾಭವೆಲ್ಲಾ ಅವರ ಕೈಯಲ್ಲಿಯೇ ಇರುತ್ತದೆ. ನಮ್ಮ ಸ್ವ ಸಹಾಯ ಗುಂಪುಗಳ ಸೂತ್ರವೂ ಇದೇ. ಗುಂಪುಗಳು ಆರ್ಜಿಸಿದ ಲಾಭ ಗುಂಪಿನ ಕೈಯಲ್ಲೇ ಇರುತ್ತದೆ. ಎಸ್.ಕೆ.ಎಸ್ ಅಥವಾ ಗ್ರಾಮೀಣ ಕೂಟದಂಥಹ ಸಂಸ್ಥೆಯಲ್ಲಿ ಹೀಗೆ ಬಡ ಗ್ರಾಹಕರಿಂದ ಆರ್ಜಿಸಿದ ಧನ ಲಾಭಾಂಶವಾಗಿ ಹೂಡಿಕೆದಾರರ ಕೈಗೆ ಹೋಗುತ್ತದೆ.

ವಿತ್ತೀಯ ಸೇವೆಯನ್ನು ಒದಗಿಸುವದೇ ಒಂದು ಉದ್ದೇಶ - ಅದರಿಂದಲೇ ಬಡವರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ, ಹಾಗೂ ಲಾಭವನ್ನು ಹೂಡಿಕೆದಾರರಿಗೆ ನೀಡಿದರೆ ಅವರುಗಳು ಇನ್ನೂ ಹೆಚ್ಚು ಹೂಡಿಕೆಯನ್ನು ಹಾಕುತ್ತಾರೆ, ಅದರಿಂದ ಹೆಚ್ಚಿನ ಜನರಿಗೆ, ಹೆಚ್ಚು ಕ್ಷೇತ್ರಗಳಲ್ಲಿನ ಬಡವರಿಗೆ ವಿತ್ತೀಯ ಸೇವೆಗಳನ್ನೊದಗಿಸಬಹುದು ಅನ್ನುವುದು ಎಸ್.ಕೆ.ಎಸ್.ನ ವಿಕ್ರಂ ಅವರ ವಾದ. ಈ ಬಗ್ಗೆ ಮೈಕ್ರೋಫೈನಾನ್ಸ್ ಜಗತ್ತಿನಲ್ಲಿ ವಾದವಿವಾದಗಳು ನಡೆಯುತ್ತಲೇ ಇವೆ. ಕೆಲ ವರ್ಷಗಳ ಹಿಂದೆ ಮೆಕ್ಸಿಕೊ ದೇಶದ ಕಂಪಾರ್ತಮೋಸ್ ಅನ್ನುವ ಚಿಕ್ಕಸಾಲದ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಷೇರುಗಳನ್ನು ಮಾರಾಟ ಮಾಡಿ ಅದಕ್ಕೆ ಹೆಚ್ಚಿನ ಬೆಲೆ ಬಂದಾಗಲೂ ಈ ಚರ್ಚೆ ತುಂಬಾ ಕಾವನ್ನು ಪಡೆದಿತ್ತು.

ಈ ಎಲ್ಲವನ್ನೂ ಟೀಕಿಸುತ್ತಲೇ ಯೂನಸ್ ಪ್ರಪಂಚಕ್ಕೆ ಒಂದು ಭಿನ್ನ ವ್ಯಾಪಾರ ಮಾದರಿಯನ್ನು ಒದಗಿಸುತ್ತಾರೆ. ಯೂನಸ್ ಒಬ್ಬ ಕನಸುಗಾರ ಅನ್ನುವುದಕ್ಕೆ ಅವರ ಈಚಿನ ಬರವಣಿಗೆಯೇ ಸಾಕ್ಷಿ. ಅವರ ಪ್ರಕಾರ ತಮ್ಮ ಜೀವನದ ಉದ್ದೇಶವೆಂದರೆ ಬಡತನವನ್ನು ಸಂಗ್ರಹಾಲಯದ ಪ್ರದರ್ಶನಕ್ಕೆ ಅಟ್ಟುವುದು. ಅರ್ಥಾತ್: ಮುಂದಿನ ಪೀಳಿಗೆಗೆ ನಾವು ಚರಿತ್ರೆಯನ್ನು ವಿವರಿಸುತ್ತಾ, ಒಂದಾನೊಂದು ಕಾಲದಲ್ಲಿ ಬಡತನವೆನ್ನುವ ಮಾತಿತ್ತು. ಬಡವರೆನ್ನುವವರು ಹೀಗಲ್ಲಾ ಜೀವಿಸುತ್ತಿದ್ದರು - ಅವರಿಗೆ ಊಟಕ್ಕೆ, ಬಟ್ಟೆಗೆ, ವಸತಿಗೆ ಕಷ್ಟವಾಗುತ್ತಿತ್ತು ಅನ್ನುವ ಕಥೆಗಳನ್ನು ಹೇಳುವ, ಬಡತನವೆಂದರೆ ಹೇಗಿತ್ತು ಅನ್ನುವ ಕುತೂಹಲದ ಅಧ್ಯಯನ ಆಗುವ ಸ್ಥಿತಿಗೆ ಬರುವಷ್ಟರ ಮಟ್ಟಿಗೆ ನಾವು ಪ್ರಗತಿ ಸಾಧಿಸಬೇಕು. ಬಡತನವನ್ನು ಹೀಗೆ ಸಂಗ್ರಹಾಲಯಕ್ಕೆ ಅಟ್ಟುವ ಅವರ ಮಹಾದೃಷ್ಟಿಯ ಬಗ್ಗೆ ಯೂನಸ್ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಆ ಪುಸ್ತಕದಲ್ಲಿ ಶಾಂತಿ, ವ್ಯಾಪಾರ, ಮತ್ತು ಬಡತನದ ಬಗ್ಗೆ ಅನೇಕ ಗಮ್ಮತ್ತಿನ ವಿಚಾರಗಳಿವೆ.

ಬಡತನವೇ ಅಶಾಂತಿಗೆ ಮೂಲ ಕಾರಣ ಎಂದು ತಮ್ಮ ನೊಬೆಲ್ ಪುರಸ್ಕಾರದ ಸ್ವೀಕಾರದಲ್ಲಿ ಹೇಳಿ ಯೂನಸ್ ತಮಗೂ ಗ್ರಾಮೀಣ್ ಬ್ಯಾಂಕಿಗೂ ಬಂದಿರುವ ಶಾಂತಿ ಪುರಸ್ಕಾರವನ್ನು ಅರ್ಥೈಸುತ್ತಾರೆ. ಆದರೆ ಬಡತನದ ನಿರ್ಮೂಲನೆಗೆ ದೇಣಿಗೆಯ ರೀತಿಯ ವಿಕಾಸದ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಬದಲು ಸಾಮಾಜಿಕ ವ್ಯಾಪಾರವನ್ನು ಮಾಡುವುದು ಒಳ್ಳೆಯದೆಂದು ಆತ ಹೇಳುತ್ತಾರೆ. ತಮ್ಮ ವಾದವನ್ನು ಮಂಡಿಸುತ್ತಾ ಯೂನಸ್ ಎರಡು ರೀತಿಯ ಸಾಮಾಜಿಕ ವ್ಯಾಪಾರಗಳನ್ನು ವಿಶ್ಲೇಷಿಸುತ್ತಾರೆ.

ಮೊದಲನೆಯ ರೀತಿಯ ವ್ಯಾಪಾರ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬೆಳೆಯುತ್ತಿರುವ ಬಂಡವಾಳಶಾಹಿಗಳೂ - ಸಾಮಾಜಿಕ ಕಾಳಜಿಯುಳ್ಳ ಗ್ರಾಮೀಣ್ ಸಂಸ್ಥೆಯಂತಹ ’ವಿಕಾಸ’ದ ಹೃದಯವುಳ್ಳ ಸಂಸ್ಥೆಗಳ ನಡುವಿನ ಭಾಗಸ್ವಾಮ್ಯದ ಮಾದರಿಯನ್ನು ಅವರು ಪ್ರತಿಪಾದಿಸುತ್ತಾರೆ. ಈ ವ್ಯಾಪಾರದಲ್ಲಿ ಲಾಭ ಉಂಟಾಗಬಹುದಾದರೂ, ಆ ಲಾಭವನ್ನು ಯಾರಿಗೂ ಹಂಚಲು ಸಾಧ್ಯವಿಲ್ಲ, ಬದಲಿಗೆ ಅಂಥಹ ಲಾಭ ಭಿನ್ನಭಿನ್ನ ಸಾಮಾಜಿಕ ವ್ಯಾಪಾರಗಳಲ್ಲಿ ಹೂಡಿಕೆಯಾಗಿ ಮುಂದುವರೆಯುತ್ತದೆ. ಹೀಗಾಗಿ ಸಾಮಾಜಿಕ ಉನ್ನತಿಯೇ ಉದ್ದೇಶವಾಗಿರುವ, ಲಾಭದ ಬಯಕೆಯಿಲ್ಲದ ಸಾಮಾಜಿಕ ವ್ಯಾಪಾರಗಳು ಪ್ರಪಂಚದಾದ್ಯಂತ ಉದ್ಭವವಾಗುತ್ತದೆಂದು ಅವರ ನಂಬಿಕೆ. ಗ್ರಾಮೀಣ್ ಬ್ಯಾಂಕ್ ಮತ್ತು ಡಾನೋನ್ ಸಂಸ್ಥೆಯ ನಡುವಿನ ಭಾಗಸ್ವಾಮ್ಯದಲ್ಲಿ ಬಡವರ ಸೇವನೆಗೆಂದು ಪುಷ್ಟಿಕರ ಮೊಸರಿನ ಕಾರ್ಖಾನೆಯನ್ನು ಸ್ಥಾಪಿಸಿರುವ ಉದಾಹರಣೆಯನ್ನು ಯೂನಸ್ ತಮ್ಮ ಬರವಣಿಗೆಯಲ್ಲಿ ಮಂಡಿಸುತ್ತಾರೆ.

ಎರಡನೆಯ ರೀತಿಯ ವ್ಯಾಪಾರ, ಬಡವರೇ ಮಾಲೀಕತ್ವ ಪಡೆದಿರುವ [ಗ್ರಾಮೀಣ್ ಬ್ಯಾಂಕಿನಂತಹ] ಸಂಸ್ಥೆಗಳು ನಡೆಸುವ ವ್ಯಾಪಾರ. ಅಲ್ಲಿ ಹೂಡಿಕೆಯೆಲ್ಲ ಬಡವರಿಂದಲೇ ಬರುವುದರಿಂದ, ಬಡವರು ಆ ಸಂಸ್ಥೆಯಿಂದ ಪಡೆಯುವ ಲಾಭಾಂಶ ಅವರಿಗೇ ಹೋಗಿ ಒಂದು ರೀತಿಯ ಸಮತಾಭಾವ ಉಂಟಾಗುತ್ತದೆಂದು ಯೂನಸ್ ವಾದಿಸುತ್ತಾರೆ.

ಅರ್ಥಶಾಸ್ತ್ರವನ್ನು ಓದಿರುವ ಯಾರಾದರೂ ಈ ರೀತಿಯ ವ್ಯಾಪಾರ ವಿಧಾನದಲ್ಲಿರುವ ತೊಡಕುಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಹೇಗೆ ಸಾಮಾಜಿಕ ವ್ಯಾಪಾರ ಸಹಜ ಗತಿಯಲ್ಲಿ ಬೆಳೆಯುವುದಿಲ್ಲ, ಹೇಗೆ ಯೂನಸ್ ವಿಚಾರಗಳು ಸಹಜ ಮಾನವ ಪ್ರವರ್ತನೆಯಾದ ’ಸ್ವಾರ್ಥಪರತೆ’ಯಿಂದ ದೂರವಾಗಿದೆ ಎನ್ನುವುದನ್ನು ವಾದಿಸಿ ತೋರಬಹುದು. ಸಾಲದ್ದಕ್ಕೆ ವಿಕ್ರಂ ಆಕುಲಾ ಥರದ ವ್ಯಕ್ತಿಗಳು ಗ್ರಾಮೀಣ್ ಬ್ಯಾಂಕಿನ ಬೆಳವಣಿಗೆಯ ಗತಿಯನ್ನೂ ಎಸ್.ಕೆ.ಎಸ್ ಸಂಸ್ಥೆ ಬೆಳೆದ ಗತಿಯನ್ನೂ ತಾಳೆ ಹಾಕಿ, ಲಾಭಾಂಶದ ಆಮಿಷವಿದ್ದಾಗ ವ್ಯಾಪಾರಗಳು ಹೇಗೆ ಸಹಜವಾಗಿ ಬೆಳೆದು ವಿಕಾಸದ ಗತಿಯನ್ನು ತೀವ್ರಗೊಳಿಸುತ್ತದೆನ್ನುವುದನ್ನು ನಿದರ್ಶನದ ಮೂಲಕ ತೋರಿಸಬಹುದು. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಯೂನಸ್ ಆ ಸೂತ್ರಗಳಿಗೆ ವಿರುದ್ಧವಾಗಿ ವಾದಿಸುವುದನ್ನ ಲೇವಡಿ ಮಾಡಲೂ ಬಹುದು. ಯಾವ ರ್‍ಯಾಷನಲ್ ವ್ಯಕ್ತಿಯೂ ಯೂನಸ್ ಅವರ ವಾದದ ಪ್ರಕಾರ ಸಂಸ್ಥೆಗಳು ಸ್ಥಾಪಿಸಿದರೆ, ಉಳಿದು ಬೆಳೆಯುತ್ತವೆ ಅನ್ನುವುದನ್ನ ನಂಬಲು ಸಾಧ್ಯವಿಲ್ಲ.

ಆದರೂ, ಯೂನಸ್ ತಮ್ಮ ವಿಚಾರಗಳನ್ನು ಮಂಡಿಸುವಲ್ಲಿ ಹಿಂಜರಿಯುವುದಿಲ್ಲ. ಯೂನಸ್ ವಾದದಲ್ಲಿರುವ - ಹಾಗೂ ವಿಕ್ರಂ ವಾದದಲ್ಲಿ ಕಾಣಸಿಗದ ಮೂಲ ಅಂಶವೇನು? ಏಕೆಂದರೆ ಲಾಭ ಹೆಚ್ಚಾದಷ್ಟೂ ಆ ವ್ಯಾಪಾರದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಅನ್ನುವುದು ಸ್ವಯಂ-ವೇದ್ಯವಾಗಿದೆ. ಆದರೆ ಬಡವರೇ - ಹಾಗೂ ಕೇವಲ ಬಡವರು ಮಾತ್ರವೇ - ನಿಮ್ಮ ವ್ಯಾಪಾರದ ಗ್ರಾಹಕರಾಗಿದ್ದರೆ ಅದರಲ್ಲಿ ಒಟ್ಟಾರೆ ನ್ಯಾಯದ ಪ್ರಶ್ನೆ ಉದ್ಭವವಾಗುತ್ತದೆ. ಅತೀ ಬಡವರಿಗೆ ಸಾಲ ನೀಡಿ ಅದರಿಂದ ಆರ್ಜಿಸಿದ ಬಡ್ಡಿಯ ಲಾಭದಲ್ಲಿ ಒಂದು ದೊಡ್ಡ ಸೌಧವನ್ನು ಕಟ್ಟಿ ಅದರಲ್ಲಿ ಜೀವಿಸಿದರೆ - ಆ ಲಾಭವನ್ನು ನ್ಯಾಯವಾದ ಮಾರ್ಗದಲ್ಲಿ ಆರ್ಜಿಸಿದ್ದರೂ - ಅನೇಕ ಹುಬ್ಬುಗಳು ಮೇಲೆ ಹೋಗುವುದನ್ನು ನಾವು ಕಾಣಬಹುದು. ಈ ಪ್ರಶ್ನೆ ಬೇರೆ ವ್ಯಾಪಾರದಿಂದ ಧನಾರ್ಜನೆ ಮಾಡಿದಾಗ ಉದ್ಭವವಾಗುವುದಿಲ್ಲ. ಒಂದು ರೀತಿಯಲ್ಲಿ ಏನೂ ಇಲ್ಲದ ಜನರಿಂದ ಲಾಭ ಮಾಡಿ ಸುಖಜೀವನ ನಡೆಸಿದರೆ ಅದು ಇರುವವರ -ಇಲ್ಲದವರ ಬಡವ-ಬಲ್ಲಿದರ ನಡುವಿನ ವ್ಯತ್ಯಾಸವನ್ನು ತೀವ್ರಗೊಳಿಸಿ ತೋರಿಸುತ್ತದಲ್ಲದೆ, ಬಡವರಿಂದ ಬಲ್ಲಿದರು ಹೆಚ್ಚೆಚ್ಚು ಶ್ರೀಮಂತರಾಗುವುದನ್ನೂ ನಿದರ್ಶಿಸುತ್ತದೆ. ಹೀಗಾಗಿ ಆ ಲಾಭವನ್ನು ಗ್ರಾಹಕರೊಂದಿಗೆ ಹಂಚಿಕೊಂಡರೆ, ಅಥವಾ ಆ ಲಾಭವನ್ನು ವ್ಯಾಪಾರಿಗಳು ಸ್ವೀಕರಿಸದಿದ್ದರೆ - ಒಟ್ಟಾರೆ ಒಂದು ಸಮತಾಭಾವ ಉಂಟಾಗಿ ಅದರಿಂದ ಶಾಂತಿ ಉದ್ಭವವಾಗಬಹುದು ಅನ್ನುವುದು ಯೂನಸ್ ಅವರ ವಾದ.

ಆ ವಾದವನ್ನು ಒಪ್ಪಿದರೂ, ಮೂಲಭೂತವಾಗಿ ಸ್ವಾರ್ಥ ಮತ್ತು ಅತಿಯಾಸೆಯ ಸೂತ್ರಗಳ ಮೇಲೆ ಬದುಕುವ ಮಾನವಸಹಜ ಪ್ರವೃತ್ತಿಗೆ ಇದು ವಿರುದ್ಧವಾಗಿದೆ ಅನ್ನುವುದನ್ನು ನಾವು ಮನಗಾಣಬೇಕು. ಯೂನಸ್, ಮಹಾತ್ಮಾಗಾಂಧಿಯಂತಹ ದೊಡ್ಡ ಹೃದಯದ ವ್ಯಕ್ತಿಗಳು ಮಾತ್ರ ಈ ಸೂತ್ರವನ್ನು ಮೀರಿ, ಮಿತವಾದ ಆದಾಯದಲ್ಲಿ, ಮಿತವಾದ ಬಯಕೆಗಳೊಂದಿಗೆ ಜೀವಿಸಬಲ್ಲರಾದ್ದರಿಂದ ಯೂನಸ್ ವಾದಗಳನ್ನು ಒಂದು ರೊಮ್ಯಾಂಟಿಕ್ ಕನಸುಗಾರನ - ನಿಜಜೀವನದಲ್ಲಿ ಪ್ರದರ್ಶಿಸಲು ಸಾಧ್ಯವಾಗದ - ವಾದ ಎಂದು ತಳ್ಳಿಹಾಗಬಹುದು.

ಆದರೆ ಯೂನಸ್ ತಮ್ಮ ಈ ಕನಸುಗಳನ್ನ ಜನರಿಗೆ ಹೇಳಲು ಹಿಂಜರಿಯುವುದಿಲ್ಲ. ಬಡತನವನ್ನು ಸಂಗ್ರಹಾಲಕ್ಕೆ ಕಳಿಸುತ್ತೇನೆ ಎನ್ನುವ ಉದಾತ್ತ ಆದರೆ ಇಂಪ್ರಾಕ್ಟಿಕಲ್ ಆಗಿ ಕಾಣುವ ಕನಸನ್ನು ವಿವರಿಸುವುದಕ್ಕೆ ಹಿಂಜರಿಯುವುದಿಲ್ಲ. ಬಹುಶಃ ಈ ರೀತಿಯ ಆಶಾವಾದಿ ಕನಸುಗಳು ಮತ್ತು ಆ ಕನಸುಗಳ ಮೇಲಿನ ನಂಬಿಕೆಯಿಂದಾಗಿಯೇ ಯೂನಸ್ ಅಂತಹವರು ಯಶಸ್ವಿಯಾಗುತ್ತಾರೇನೋ. ಅವರ ಅಸಹಜ ಆರ್ಥಿಕ ಸೂತ್ರಗಳ ’ಸಾಮಾಜಿಕ ವ್ಯಾಪಾರ’ಗಳನ್ನು ಹುಟ್ಟುಹಾಕುವ ಪ್ರಯತ್ನವನ್ನು ಕನಸುಗಾರ ಯೂನಸ್ ಮಾಡುತ್ತಲೇ ಇದ್ದಾರೆ. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಲ್ಲದೇ ೨೪ ಇತರ ವ್ಯಾಪಾರಗಳನ್ನು ಆತ ತನ್ನ ಸೂತ್ರದನುಸಾರ ಪ್ರಾರಂಭಿಸಿದ್ದಾರೆ. ಎಲ್ಲವೂ ಸಫಲವಾಗಿಲ್ಲ. ಆದರೆ ಪ್ರಯತ್ನವೇ ಮಾಡದಿದ್ದರೆ ಸಫಲವಾಗುವುದು ಹೇಗೆ? ವೈಫಲ್ಯದಿಂದ ಪಾಠ ಕಲಿತು ಮತ್ತೆ ಪ್ರಯೋಗ ಮಾಡಬೇಕೆನ್ನುವುದೇ ಅವರ ಸೂತ್ರ.

ತಮ್ಮ ವಿಚಾರಗಳನ್ನು ಮಂಡಿಸುತ್ತಾ ಯೂನಸ್ ಹೀಗನ್ನುತ್ತಾರೆ "ನಾನು ಪ್ರಾರಂಭ ಮಾಡಿದ ಅನೇಕ ವರ್ಷಗಳ ನಂತರ ನನಗನ್ನಿಸುತ್ತಿರುವುದು ಇದು - ಬ್ಯಾಂಕುಗಳು ಹೇಗೆ ಕೆಲಸ ಮಾಡುತ್ತವೆಂದು ತಿಳಿಯದ ಅಜ್ಞಾನವೇ ನನ್ನನ್ನು ಈ ದಿಶೆಯಲ್ಲಿ ಅಟ್ಟಿದ ಅಸ್ತ್ರವಾಯಿತು. ಬ್ಯಾಂಕಿಂಗ್ ಪದ್ಧತಿಗಳನ್ನು ತಿಳಿಯದ, ಬ್ಯಾಂಕನ್ನು ನಡೆಸುವ ಬಗ್ಗೆ ಯಾವತರಬೇತಿಯನ್ನೂ ಪಡೆಯದಿದ್ದದ್ದರಿಂದ ನಾನು ಭಿನ್ನ ರೀತಿಯಲ್ಲಿ ಆಲೋಚಿಸಲು ಸಾಧ್ಯವಾಯಿತು. ಬಹುಶಃ ನಾನು ಬ್ಯಾಂಕಿಂಗ್ ತಿಳಿದಿದ್ದರೆ ಅದನ್ನು ಬಡವರಿಗೆ ಹೇಗೆ ಅನ್ವಯಿಸಬಹುದು ಅನ್ನುವುದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲವೇನೋ.."

ಹೀಗೆ ಜಗತ್ತಿನ ಅತೀ ಕಷ್ಟದ ಸವಾಲುಗಳನ್ನೆದುರಿಸಲು ಸುಲಭ ಮಾರ್ಗಗಳನ್ನು ಕಂಡುಕೊಳ್ಳಬಹುದು, ಆ ಮಾರ್ಗಗಳು ಅಸಹಜವೆನ್ನಿಸಿದರೂ, ಅದರಲ್ಲಿ ನಂಬುಗೆಯಿದ್ದರೆ, ಜಗತ್ತಿನ ಟೀಕೆಗೆ ತಲೆಬಾಗಿಸದೇ ಹಠ ಹಿಡಿದು ಮುಂದುವರೆದರೆ ಬಹುಶಃ ಅನಿರೀಕ್ಷಿತ ಸಾಫಲ್ಯ ಸಿಕ್ಕಬಹುದೆಂದು ಯೂನಸ್ ನಿರೂಪಿಸುತ್ತಾರೆ. ಅವರಿಗೆ ಬೇಕಾದ್ದದ್ದು ಮೂರೇ ವಿಚಾರಗಳು - ೧. ತಮ್ಮ ವಿಚಾರದ ಬಗ್ಗೆ ಅದಮ್ಯ ನಂಬುಗೆ, ೨.ಜಗತ್ತನ್ನು ಬದಲಾಯಿಸಲೇಬೇಕೆಂಬ - ಬಡತನವನ್ನು ಪ್ರಪಂಚದಿಂದ ಕಿತ್ತೊಗೆಯಬೇಕೆಂಬ ಹಠವಾದಿಯ ಕನಸು ಹಾಗೂ ೩. ಟನ್ನುಗಟ್ಟಲೆ ಸಂಯಮ. ಈ ಎಲ್ಲವನ್ನೂ ಯೂನಸ್ ಒಂದು ಬಾರಿಯಲ್ಲ, ಅನೇಕ ಬಾರಿ ತೋರಿಸಿದ್ದಾರೆ.


No comments:

Post a Comment