ಗುಜರಾತಿನ ಕಛ್ ಪ್ರಾಂತದಲ್ಲಿ ಆದ ೨೦೦೧ರ ಭೂಕಂಪದ ಕಂಪನಗಳು ಈಗ್ಗೆ ಕಡಿಮೆಯಾಗುತ್ತಾ ಬಂದಿದೆಯೇನೋ. ಭೂಕಂಪವಾದ ನಂತರ ವಿಶ್ವದ ವಿವಿಧೆಡೆಗಳಿಂದ ಕಛ್ ಪ್ರಾಂತಕ್ಕೆ ಅನೇಕ ರೀತಿಯ ಅನುದಾನಗಳು ಬಂದುವು. ನಾನಾ ರೀತಿಯ ಸಂಸ್ಥೆಗಳು ಭೂಕಂಪದ ತಕ್ಷಣದ ದಿನಗಳಲ್ಲಿ ಆ ಜಿಲ್ಲೆಗೆ ಬಂದು ಗ್ರಾಮಗಳನ್ನು ದತ್ತು ತೆಗೆದು ಆ ಪ್ರಾಂತದ ಪುನರ್ನಿರ್ಮಾಣಕ್ಕೆ ಕೈಕೈ ಕೂಡಿಸಿದುವು. ಆದರೆ ಎಂಟು ವರ್ಷಗಳ ನಂತರ ಆ ಪ್ರಾಂತದ ಜನ ಹೇಗೆ ಜೀವಿಸುತ್ತಿದ್ದಾರೆ? ಭೂಕಂಪದಿಂದ ತತ್ತರಿಸಿದ ಹಲವು ಸಮುದಾಯಗಳು ಈಗ ಜೀವನ ಹೇಗೆ ನಡೆಸುತ್ತಿವೆ? ಈ ಎಲ್ಲ ಸಹಾಯ ಮತ್ತು ಒಳ್ಳೆಯತನದ ಫಲಿತವಾಗಿ ಏನಾದರೂ ಆಗಿದೆಯೇ ಅನ್ನುವುದು ಕುತೂಹಲದ ಮಾತು.
ಕಛ್ ಜಿಲ್ಲೆಯ, ನಕತ್ರಾಣ ತಾಲೂಕಿನ ನಿರೋನಾ ಗ್ರಾಮದಲ್ಲಿ ಒಂದೇ ಕುಟುಂಬ ’ರೋಗನ್’ ಅನ್ನುವ ಕಲಾಪ್ರಕಾರವನ್ನು ಅಭ್ಯಸಿಸುತ್ತಾ ಬಂದಿದೆ. ರೋಗನ್ ಕಲೆ ಅಪರೂಪದ್ದು, ಹಾಗೂ ಭೂಕಂಪ ಆಗದಿದ್ದರೆ ಬಹುಶಃ ಅದು ನಮಗೆ ದೃಷ್ಟಿಗೆ ಬೀಳುತ್ತಿರಲಿಲ್ಲವೇನೋ. ಮೊದಲಿಗೆ ಹರಳೆಣ್ಣೆಗೆ ಹಲವು ಸಹಜ-ಶಿಲಾವರ್ಣವನ್ನು ಸೇರಿಸಿ ಎರಡುದಿನಗಳ ಕಾಲ ಭಿನ್ನ ಭಿನ್ನ ರೀತಿಯಲ್ಲಿ ಕುದಿಸಿ ಬಣ್ಣದ ದಪ್ಪ ಲೋಳೆಯನ್ನು ತಯಾರಿಸಬೇಕು. ಆ ಲೋಳೆಯನ್ನು ಅಂಗೈಯಲ್ಲಿ ಬಳಿದು ಆ ಬೊಟ್ಟಿನಿಂದ ಒಂದು ಸ್ಟೀಲಿನ ಕಡ್ಡಿಯಲ್ಲಿ - ಒಂದು ತುಂಡು ಬಟ್ಟೆಯ ಮೇಲೆ - ಒಂದು ಬದಿಗೆ ಮಾತ್ರ ಅದ್ಭುತ ಚಿತ್ರ ಬರುವಂತೆ ಕುಸುರಿಕಲೆ ಮಾಡಬೇಕು. ನಂತರ ಆ ಬಟ್ಟೆಯನ್ನು ಅರ್ಧಕ್ಕೆ ಮಡಚಿ ಎದುರಿನ ಬದಿಗೂ ಇದೇ ಕುಸುರಿ ಕಲೆಯ ನಕಲು ಬರುವಂತೆ ಮಾಡಬೇಕು. ನಾಲ್ಕಾರು ಘಂಟೆ ಬಿಸಿಲಲ್ಲಿ ಒಣಗಿಸಿದಾಗ ಒಂದು ಘಟ್ಟದ ಕೆಲಸ ಮುಗಿಯುತ್ತದೆ. ಈ ಅದ್ಭುತ ಕಲೆಯನ್ನು ಖತ್ರಿ-ದೌಡ್ ಸಂಸಾರದವರು [ಅಬ್ದುಲ್ ಗಫೂರ್, ಆರಬ್ ಹಾಶಮ್, ಸುಮರ್] ಮುಂದುವರೆಸುತ್ತಾ ಬಂದಿದ್ದಾರೆ.
ಇದರಲ್ಲಿ ಇರುವ ಕ್ಲಿಷ್ಟತೆ ನಮಗೆ ಅರ್ಥವಾಗುವುದು ಅಲ್ಲಿರುವ ಕಲೆಯ ವಿವರಗಳನ್ನು ಹಾಗೂ ಅವುಗಳ ವರ್ಣಗಳನ್ನು ಗಮನಿಸುವುದರಿಂದ. ಒಂದು ಬಾರಿಗೆ ಒಂದೇ ವರ್ಣವನ್ನು ಲೇಪಿಸಬೇಕು. ಅದು ಒಣಗಿದ ನಂತರ ಎರಡನೆಯ ವರ್ಣ. ಹಾಗೂ ಎರಡು ಬಾರಿಯೂ ಬಟ್ಟೆ ಮಡಚುವಾಗ ಏರುಪೇರಾಗದಂತೆ ಮಡಚಬೇಕು. ಎರಡು ವರ್ಣಗಳನ್ನು ತುಂಬಿದ ನಂತರ ಈ ಮಡಚುವ ಪ್ರಕ್ರಿಯೆ ಕಷ್ಟದ್ದಾಗುತ್ತದಾದ್ದರಿಂದ, ಮಿಕ್ಕ ವರ್ಣಗಳನ್ನೂ ವಿವರಗಳನ್ನೂ ನೇರವಾಗಿ ತುಂಬಿ ಒಣಗಿಸಬೇಕು. ಇಂಥದೊಂದು ಕಲಾಕೃತಿಯನ್ನು ತಯಾರಿಸಲು ನಾಲ್ಕು ದಿನಗಳಿಂದ ಹಲವು ತಿಂಗಳುಗಳ ವರೆಗಿನ ಕಾಲ ಹಿಡಿಯಬಹುದು!
ಭೂಕಂಪಕ್ಕೆ ಮುನ್ನವೂ ಬಹುಶಃ ಖತ್ರಿ-ದೌಡ್ ಸಂಸಾರ ಈ ಕಲೆಯನ್ನೇ ಆಧಾರವಾಗಿರಿಸಿಕೊಂಡು ಜೀವಿಸಿರಬೇಕು. ಅಬ್ದುಲ್ ಗಫೂರ್‌ಗೆ ೧೯೯೭ರಲ್ಲಿ ರಾಷ್ಟ್ರೀಯ ಪುರಸ್ಕಾರ ಬಂದಿತ್ತು. ಅರಬ್ ಹಾಶಮ್‍ಗೆ ಇನ್ನೂಮೊದಲು ೧೯೯೧ರಲ್ಲಿ ರಾಜ್ಯಪ್ರಶಸ್ತಿ ಬಂದಿತ್ತು. ಸುಮರ್ ದೌಡ್‌ಗೆ ಮಾತ್ರ ಭೂಕಂಪದ ನಂತರ ೨೦೦೩ರಲ್ಲಿ ರಾಜ್ಯ ಪ್ರಶಸ್ತಿ ಬಂದಿದೆ. ಮೂರೂ ಜನರನ್ನು ಸರಕಾರ ಹಾಗೂ ಮಾರುಕಟ್ಟೆ ಗುರುತಿಸಿದೆ. ಇದು ಸಾಲದ್ದಕ್ಕೆ ಈ ಕಲೆ ನಿರ್ನಾಮವಾಗಬಾರದೆಂದು ಬಯಸುವ ಹಿತೈಷಿಗಳು ರೋಗನ್ ಕಲಾಕೃತಿಗಳನ್ನು ಕೊಂಡು ಅದಕ್ಕೆ ಮಾರುಕಟ್ಟೆಯನ್ನೊದಗಿಸುತ್ತಾ ಬಂದಿದ್ದಾರೆ.
ಈ ರೀತಿಯ ಕಲಾವಿದರಿಗೆ ಹೊರಗಿನ ಸಹಾಯ - ಆ ಕಲೆ ಅಳಿಯದಂತೆ ಉಳಿಸುವ ಕೆಲಸವನ್ನು ಯಾವರೀತಿಯಲ್ಲಿ ಮಾಡಬಹುದು? ಮಿಕ್ಕೆಲ್ಲ ರೀತಿಯ ವಿಕಾಸ ಕಾರ್ಯದಲ್ಲಿ ಉತ್ತಮ ತಂತ್ರಜ್ಞಾನವನ್ನು ಉತ್ತಮ ಡಿಸೈನುಗಳನ್ನು ಅಳವಡಿಸಿ ಅವುಗಳನ್ನು ಆಧುನಿಕಗೊಳಿಸಬಹುದು. ಆದರೆ ಒಂದು ಕಲಾಪ್ರಕಾರವನ್ನು ಆಧುನಿಕಗೊಳಿಸಲು ಸಾಧ್ಯವೇ? ಈ ಪ್ರಶ್ನೆ ಎದ್ದಾಗ ಹೊರಗಿನಿಂದ ಆಗಬಹುದಾದ ಸಹಾಯ ಒಂದೇ - ಈ ಇಂಥ ಕಲೆಗೆ ಒಂದು ಮಾರುಕಟ್ಟೆ ಮತ್ತು ಅದರದೇ ವ್ಯಕ್ತಿತ್ವ ಮತ್ತು ಪ್ರತ್ಯೇಕತೆಯನ್ನು ಗುರುತಿಸಬಲ್ಲ ಸ್ಥಾನಮಾನಗಳನ್ನು ಒದಗಿಸುವುದರಿಂದ ಮಾತ್ರ ಒಂದು ರೀತಿಯ ಸಹಾಯ ಮಾಡಬಹುದು. ಕಛ್‍ನಲ್ಲಿ ಆಗಿರುವುದೂ ಅದೇ. ರೋಗನ್ ಕಲೆಗೆ ಒಂದು ಖ್ಯಾತಿ ಭೂಕಂಪದ ನಂತರ ಬಂದಿದೆ. ಅಲ್ಲಿಗೆ ಬಂದಿರುವ ಅನೇಕ ಸಂಸ್ಥೆಗಳು, ಹಾಗೂ ಅನೇಕ ವಿದೇಶೀ ಪ್ರವಾಸಿಗಳ ಆಗಮನದ ಫಲವಾಗಿ ಖತ್ರಿ-ದೌಡ್ ಸಂಸಾರಕ್ಕೆ ಒಳ್ಳೆಯ ಮಾರುಕಟ್ಟೆ ದೊರೆತಿದೆ. ಈಚೆಗೆ ಇಫ್ಕೋ ಸಂಸ್ಥೆ ವರ್ಷಕ್ಕೆ ಇಂತಿಷ್ಟು ಕಲಾಕೃತಿಗಳನ್ನು ಕೊಳ್ಳುವ ಭರವಸೆ ನೀಡಿದೆಯಂತೆ. ಹೀಗಾಗಿ ಈ ಕಲೆಯನ್ನು ನಶಿಸುವುದರಿಂದ ಬಚಾವು ಮಾಡುವುದರಲ್ಲಿ, ಇದಕ್ಕೆ ಒಂದು ವ್ಯಕ್ತಿತ್ವವನ್ನು ನೀಡುವುದರಲ್ಲಿ ಭೂಕಂಪದ್ದೂ ಒಂದು ಪಾತ್ರವಿದೆ!
ಆದರೆ ಭೂಕಂಪದ ನಂತರದ ಅನುಕಂಪ ಮತ್ತು ’ಸಹಾಯ’ ಎಷ್ಟುದಿನಗಳ ಕಾಲ ಉಳಿಯುವುದು ಅನ್ನುವುದು ಯೋಚಿಸಬೇಕಾದ ಮಾತು. ಹಾಗೆ ನೋಡಿದರೆ ೨೦೦೧ರ ನಂತರದ ಕಛ್‍ನ ಅರ್ಥವ್ಯವಸ್ಥೆ ’ನಿಜ’ವಾದ ಅರ್ಥವ್ಯವಸ್ಥೆಯೇ ಅಲ್ಲ. ಕಛ್ ಪ್ರಾಂತ ಕಲೆಗಾರಿಕೆಗೆ ಪ್ರಖ್ಯಾತಿಯನ್ನು ಪಡೆದಿತ್ತು. ಅಲ್ಲಿ ಮನೆ ಕಟ್ಟಿದರೆ ಗೋಡೆಯ ಮೇಲೆ ಕುಸುರಿ ಕೆಲಸ, ದೇವಸ್ಥಾನಗಳ ಮೇಲೆ ಎಲ್ಲಿಗಿಂತಲೂ ಹೆಚ್ಚು ರಂಗು, ಬಟ್ಟೆಗಳ ಬಣ್ಣಗಳೂ ಭವ್ಯವಾದವೇ, ಕಡೆಗೆ ಒಂದು ಕುರ್ಚಿ ಮೇಜನ್ನು ಮಾಡಿದರೂ ಅದರ ಮೇಲೆ ನಾಲ್ಕಾರು ಚಿತ್ತಾರಗಳು. ಹೀಗಾಗಿ ಭೂಕಂಪದ ನಂತರ ಆ ಪ್ರಾಂತದ ಪುನರ್ನಿಮಾಣಕ್ಕಾಗಿ ಬಂದವರೆಲ್ಲಾ, ಅಲ್ಲಿಯ ಕಲೆಗೆ ಒಂದು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ನಿಸಿದವರೇ. ಒಳ್ಳೆಯ-ಕೆಟ್ಟ ಸಾಧಾರಣ ಅನ್ನುವ ಪ್ರಮೇಯವಿಲ್ಲದೆಯೇ ಎಲ್ಲ ಕಲಾಪ್ರಕಾರಗಳಿಗೂ ಇದ್ದಕ್ಕಿದ್ದಂತೆ ಒಂದು ಮಾರುಕಟ್ಟೆ ಉದ್ಭವವಾಯಿತು. ಈಗ ಎಂಟು ವರ್ಷಗಳ ನಂತರ, ಪುನರ್ನಿರ್ಮಾಣಕ್ಕಾಗಿ ಬಂದ್ದಿದ ಎಲ್ಲ ಸಹಾಯಕ ಸಂಸ್ಥೆಗಳೂ [ಏಡ್ ಏಜೆನ್ಸಿ] ಅಲ್ಲಿಂದ ಒಂದೊಂದಾಗಿ, ಕ್ರಮಕ್ರಮೇಣ ಹೊರಬೀಳುವ ಪ್ರಕ್ರಿಯೆಯಲ್ಲಿರುವಾಗ ಈ ಸ್ಥಳೀಯ ಕಲೆಗೆ ಮಾರುಕಟ್ಟೆಯೊಂದಿಗಿದ್ದ ಕೊಂಡಿ ಹೇಗೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.
ಖತ್ರಿ-ದೌಡ್ ಸಂಸಾರ ಭೂಕಂಪದ ನಂತರ ತೆರೆದುಕೊಂಡ ಮಾರುಕಟ್ಟೆಯ ಲಾಭವನ್ನು ಪಡೆದಿದ್ದಾರೆ. ಇಂದು ಅವರ ರೋಗನ್ ಕಲಾಕೃತಿಯ ಬೆಲೆ ರೂ.೨,೦೦೦ದಿಂದ ಪ್ರಾರಂಭವಾಗಿ ಎರಡೂವರೆ ಲಕ್ಷದ ವರೆಗೆ ಮುಟ್ಟಿದೆ. ರೋಗನ್ ಕಲೆಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳೂ ಬಂದು ಈಗ ಈ ಸಂಸಾರಕ್ಕೆ ಟೂರಿಸ್ಟ್ ಮಾರುಕಟ್ಟೆ ದೊರೆತಿದೆ. ಈ ಮಾರುಕಟ್ಟೆಯ ಫಲಿತವೂ ಗಮ್ಮತ್ತಿನದ್ದು. ಅವರನ್ನು ನೋಡಲು ನಾನು ನಿರೋನಾಗೆ ಹೋದಾಗ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳನ್ನೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನೂ ತೋರಿಸಿದ ಆ ಸಂಸಾರ, ತಮ್ಮ ಕಲೆಯ ಬಗ್ಗೆಗೂ ಮಾತನಾಡಿತು. ಆದರೆ ೨೦೦೫ರಲ್ಲಿ ಬಂದ ಒಂದು ಇಂಡಿಯಾ ಟುಡೇ ಲೇಖನದಲ್ಲಿ ಅವರ ಕೈಯಿಂದ ಒಂದು ತಿದ್ದುಪಡಿ ಕಂಡಿತ್ತು - ಲೇಖನದ ಒಂದು ಭಾಗ ಇಂತಿದೆ:
"ಹೂವಿನ ಚಿತ್ತಾರಗಳು, ಪ್ರಾಣಿಗಳು ಹಾಗೂ ಹಳೆಯ ಶಾಸ್ತ್ರೀಯ ಕಟ್ಟಡಗಳು ಈ ಕಲಾವಿದರ ಪ್ರಮುಖ ಆಸಕ್ತಿಯ ಪ್ರತೀಕಗಳು. ಒಂದು ಚಿತ್ರ ಮುಗಿಸಲು ಮೂರು ತಿಂಗಳ ಕಾಲವೂ ಹಿಡಿಯಬಹುದು. ರೋಗನ್ ಕಲೆಯ ಚಿತ್ರಕ್ಕೆ ರೂ.೮,೦೦೦ದಿಂದ ರೂ.೧೨,೦೦೦ರದ ವರೆಗೆ ಬೆಲೆ ಬರಬಹುದು. ಇತ್ತೀಚೆಗೆ ಮಾರಾಟವಾದ ’ಜೀವನ ವೃಕ್ಷ’ಕ್ಕೆ ರೂ.೧೮,೦೦೦ರದ ಬೆಲೆ ಬಂತು."
ಲೇಖನವೇನೋ ಚೆನ್ನಾಗಿಯೇ ಇತ್ತು. ಆದರೆ ಖತ್ರಿ-ದೌಡ್ ಸಂಸಾರದಲ್ಲಿ ಇದ್ದ ಇಂಡಿಯಾ ಟುಡೇದ ಪ್ರತಿಯಲ್ಲಿ ೧೮,೦೦೦ ವನ್ನು ಪೂರ್ತಿಯಾಗಿ ಕರ್ರಗಾಗಿಸಿ ಆ ಜಾಗದಲ್ಲಿ ರೂ.೧,೫೦,೦೦೦ ಎಂದು ಕೈಯಲ್ಲಿ ಬರೆಯಲಾಗಿತ್ತು. ಹೆಚ್ಚು ಹೆಚ್ಚು ಗ್ರಾಹಕರು ಬರುತ್ತಿದ್ದಂತೆ ಈ ಅಪರೂಪದ ಕಲೆಯ ಜಟಿಲತೆಯೂ ಹೆಚ್ಚಾಗುತ್ತಾ ಹೋಗಿರಬಹುದು ಅದಕ್ಕೆ ಮಾರುಕಟ್ಟೆಯೂ ಜಾಸ್ತಿಯಾಗುತ್ತಾ ಹೋಗಿರಬಹುದು. ಆದರೆ ಕೆಲಸ ಮಾಡುತ್ತಿರುವವರು ಈ ಖತ್ರಿ-ದೌಡ್ ಸಂಸಾರದವರು ಮಾತ್ರ. ಪುನರ್ನಿರ್ಮಾಣದ ಫಲಿತ ಇಲ್ಲಿನ ಜನರಿಗೆ ತಲುಪಿದೆಯೇ ಅನ್ನುವ ಪ್ರಶ್ನೆಗೆ ಇದು ಒಂದು ಒಳ್ಳೆಯ ಉದಾಹರಣೆ ಅನ್ನಬಹುದು.
ಆದರೆ ನನ್ನ ಯೋಚನೆ ಇಷ್ಟೇ. ಈ ಎಂಟು ವರ್ಷಗಳಲ್ಲಿ ಇದ್ದ ಸಹಾಯಕ ಸಂಸ್ಥೆಗಳು ಇಲ್ಲಿಂದ ಹೊರಟ ಮೇಲೆ, ಪ್ರವಾಸಿಗಳ ಸಂಖ್ಯೆ ಕಡಿಮೆಯಾದ ಮೇಲೆ, ಇನ್ನೈದು ವರ್ಷಗಳ ನಂತರ ಖತ್ರಿ-ದೌಡ್ ಸಂಸಾರದ ಕೆಲಸಕ್ಕೆ ಇಷ್ಟೇ ಬೆಲೆ ದಕ್ಕಬಹುದೇ? ಅದೇ ರೀತಿಯ ಬೆಲೆ ದಕ್ಕುವುದಾದರೆ ಹೆಚ್ಚು ಜನ ಈ ರೋಗನ್ ಕಲೆಯನ್ನು ಅಭ್ಯಾಸ ಮಾಡಬಹುದೇ? ಅಥವಾ ಮಾರುಕಟ್ಟೆ ಕುಸಿದು ಈ ಕಲೆ ಕ್ಷೀಣಿಸಬಹುದೇ? ಇನ್ನೂ ಹೊರಗಿನವರ ಆಸಕ್ತಿಯಿರುವ ಈ ಸಮಯದಲ್ಲಿ ಇದಕ್ಕೆ ಸುಲಭ ಉತ್ತರವಿಲ್ಲ. ಆದರೆ ಪುನರ್ನಿರ್ಮಣದ ಅತಿವೃಷ್ಟಿಯನಂತರ ಕಛ್ ಈಗ ಸಮಾನ್ಯ ಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ರೋಗನ್ ಕಲೆಯ ಭವಿಷ್ಯ ಹಾಗೂ ಖತ್ರಿ-ದೌಡ್ ಸಂಸಾರದ ಕಲಾನೈಪುಣ್ಯ ಮತ್ತು ಅದರಿಂದ ಬರುತ್ತಿರುವ ಹಣದ ಪರಿಮಾಣವನ್ನು ನಾವು ಒಂದೈದು ವರ್ಷಗಳ ನಂತರ ಅಧ್ಯಯನ ಮಾಡಿದಾಗ ಈ ಅತಿವೃಷ್ಟಿಯ ಪೂರ್ಣ ಪರಿಣಾಮ ನಮಗೆ ಅರ್ಥವಾಗಬಹುದು.
No comments:
Post a Comment