Sunday, March 3, 2013

ವಾಡಾಗಳ ಅರಗಿನರಮನೆ


ನಿರುನಾ ಗ್ರಾಮದಲ್ಲಿ ಮಾತ್ರವಲ್ಲ ಇಡೀ ಕಛ್ ಪ್ರಾಂತದಲ್ಲೇ ನಿಜಕ್ಕೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಈ ಬಾರಿ ನಾವು ರೋಗನ್ ಕಲೆಯಿಂದ ಮುಂದಕ್ಕೆ ಹೋಗಿ ಮರ ಮತ್ತು ಅರಗಿನ ಕಲಸ ಮಾಡುವ ’ವಾಡಾ’ಬುಡಕಟ್ಟಿನ ಜನಗಳ ಬಗ್ಗೆ ಯೋಚಿಸೋಣ. ವಾಡಾ ಬುಡಕಟ್ಟಿನವರು ಮೂಲಭೂತವಾಗಿ ಅಲೆಮಾರಿಗಳು, ಅರಣ್ಯ ಪ್ರಾಂತದಲ್ಲಿ ತಿರುಗಾಡುತ್ತಿರುವ ಈ ಬುಡಕಟ್ಟಿನ ಜನಾಂಗಕ್ಕೆ ಒಂದೇ ಜಾಗದಲ್ಲಿದ್ದು ಕೆಲಸ ಮಾಡುವುದು ತುಸು ಮುಜುಗರದ ಮಾತೇ. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಮರಗಳ ಬಗೆಗಿನ ಅವರ ಜ್ಞಾನ ಅದ್ಭುತವಾದದ್ದು. ಅವರ ಕರಕುಶಲತೆಯನ್ನು ನೋಡಿಯೇ ನಂಬಬೇಕು. ಆದರೆ ಕಲಾವಿದರಿಗೆ ತಮ್ಮ ಕಲೆಯ ಆಧಾರವಾಗಿಯೇ ಜೀವನ ಹೊರೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಲೋ ಎಂಬಂತೆ ಇವರುಗಳು ಸೈಡ್ ಬಿಜನೆಸ್ ಆಗಿ ಸಾರಾಯಿ ತಯಾರಿಸುವ ಕೆಲಸವನ್ನೂ ಮಾಡುತ್ತಾರೆ.

ವಾಡಾಗಳನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಯತ್ನಗಳು ಅಲ್ಲಲ್ಲಿ ನಡೆದಿವೆಯಾದರೂ ಅವರುಗಳು ಅಸ್ಪೃಷ್ಯರಾಗಿಯೇ ಉಳಿದಿದ್ದಾರೆ. ಹಲವು ವರ್ಷಗಳ ಕೆಳಗೆ ಇವರುಗಳೆಲ್ಲ ಇಸ್ಲಾಂಗೆ ಮತಾಂತರಗೊಂಡರೂ ಅವರ ಅಸ್ಪೃಷ್ಯತೆ ಮುಂದುವರೆದಿದೆ. ಕಛ್ ಪ್ರಾಂತದಲ್ಲಿ ಓಡಾಡಿದ ಪ್ರತಿಯೊಂದು ಜಾಗದಲ್ಲೂ ನಮಗೆ ನೀರು ಮತ್ತು ಚಹಾದ ಸೇವೆಯಿತ್ತಾದರೂ ವಾಡಾಗಳನ್ನು ನೋಡಹೋದಾಗ ಏನೂ ದಕ್ಕಲಿಲ್ಲ. ಅದಕ್ಕೆ ಕಾರಣ: ಅವರು ನೀಡುವುದನ್ನು ನಾವು ನಿರಾಕರಿಸಬಹುದು ಅನ್ನುವ ಅವರ ಭೀತಿ.

ಅಲೆಮಾರಿ ವಾಡಾಗಳು ಕುಶಲ ಕರ್ಮಿಗಳು. ಒಂದು ಕೊಡಲಿ, ಒಂದು ಕೆತ್ತುವ ಪರಿಕರ, ಒಂದಿಷ್ಟು ಅಗಲದ ಸ್ಯಾಂಡ್ ಪೇಪರ್ ಹಾಗೂ ಬಬೂಲ್ ಮರ ಇವುಗಳಷ್ಟೇ ಕೈಯಲ್ಲಿ ಹಿಡಿದು ಆಟಿಕೆಗಳನ್ನೂ, ಲಟ್ಟಣಿಗೆಯನ್ನೂ, ಮರದ ಚಮಚಾ, ಸ್ಪಾಟುಲಾಗಳನ್ನು ಐದೇ ನಿಮಿಷದಲ್ಲಿ ಮಾಡಿ ತೋರಿಸಬಲ್ಲರು. ಎರಡು ಮರದ ತುಕಡಿಗಳಿಗೆ ಅಂಚಿನಲ್ಲಿ ಚೂಪಾದ ಮೊಳೆಯಾಕಾರದ ಅಂಚುಗಳನ್ನು ಮಾಡಿ ಎರಡೂ ಚೂಪಾದ ಅಂಚಿನ ನಡುವೆ ಒಂದು ಮರದ ಚೂರನ್ನು ಸಿಗಿಸಿ ಒಂದು ಪ್ಲಾಸ್ಟಿಕ್ ಹುರಿದಾರ ಸುತ್ತಿ ಅದನ್ನು ತಿರುಗಿಸುತ್ತಾ, ಚೂಪಾದ ಒಂದು ಕಬ್ಬಿಣದ ಪರಿಕರವನ್ನು ಹಿಡಿದು ಆ ಮರದ ತುಂಡನ್ನು ಗುಂಡಾಗಿ ಕೆತ್ತಿಡಬಲ್ಲರು. ಅದಕ್ಕೆ ಒಂದಿಷ್ಟು ಸ್ಯಾಂಡ್ ಪೇಪರ್ ತಿಕ್ಕಿದರೆ ಲೇಥಿನ ಮೇಲೆ ಯಂತ್ರದಿಂದ ಮಾಡಿದರೆ ಬರುವಷ್ಟೇ ಉತ್ತಮ ಫಿನಿಶ್ ಬರುತ್ತದೆ. ಆ ಗುಂಡು ಹಿಡಿಕೆಯ ಮೇಲೆ ಭಿನ್ನ ಬಣ್ಣಗಳಿಂದ ರಂಗಿಸಿದ ಅರಗಿನ ಚೂರುಗಳಿಂದ ಬಣ್ಣ ಲೇಪಿಸಿ ಒಂದು ಬಟ್ಟೆಯನ್ನು ಹಿಡಿದು ಮತ್ತೆ ಆ ಚೂಪಾದ ಅಂಚಿನ ನಡುವೆ ಇರುವ ಮರದ ತುಂಡನ್ನು ತಿರುಗಿಸುತ್ತಾ - ವೇಗವನ್ನೂ ಬಟ್ಟೆ ಒತ್ತುವ ತೀವ್ರತೆಯನ್ನೂ ಬದಲಾಯಿಸುತ್ತಾ ಹೋದರೆ ಲಟ್ಟಣಿಗೆಯ ಮೇಲೊಂದು ಅದ್ಭುತವಾದ ಡಿಜೈನು ಬರುತ್ತದೆ. ಬ್ರಶ್ ಹಿಡಿದು ಗಂಟೆಗಟ್ಟಲೆ ಪೈಂಟ್ ಮಾಡಿರಬಹುದು ಅನ್ನಿಸುವ ಈ ಕಲಾಕೃತಿಯನ್ನು ಹಲವು ನಿಮಿಷಗಳಲ್ಲಿ ಮಾಡಿ ನಿಮ್ಮ ಮುಂದಿಡುವ ಕುಶಲತೆಯನ್ನು ಈ ವಾಡಾಗಳು ಹೊಂದಿದ್ದಾರೆ.

ನಿರುನಾದಲ್ಲಿ ಈ ಅರಗಿನ ಕೆಲಸ ಮಾಡುವ ವಾಡಾಗಳ ಸಂಸಾರಗಳ ಸಂಖ್ಯೆ ೧೦, ಅವರುಗಳಲ್ಲಿ ನಾಲ್ಕು ಮನೆಗಳು ಅರಗಿನ ಕಲೆಯ ವ್ಯಾಪಾರ ಮಾಡುತ್ತಿದ್ದಾರೆ. ಎಲ್ಲಾದರೂ ಕಛ್ ಕಲೆಗಳ ಪ್ರದರ್ಶನವಾದರೆ ಈ ಅರಗಿನ ಕಲಾಕೃತಿಗಳನ್ನು ಒಯ್ದು ಮಾರಾಟ ಮಾಡಿಬರುತ್ತಾರೆ. ನಿರುನಾಗೆ ಬರುವ ಒಂದೋ ಎರಡೋ ಪ್ರವಾಸಿಗಳಿಗೆ ಮಾರುತ್ತಾರೆ. ಈ ಕಲೆಯ ವಸ್ತುಗಳನ್ನು ಜೋಪಾನವಾಗಿಡುವುದೂ ಕಷ್ಟವೇ. ಏನಾದರೂ ತಗುಲಿ ಗೆರೆ ಬಿದ್ದಲ್ಲಿ ಡಿಸೈನನ್ನು ಸರಿಮಾಡಲಾಗುವುದಿಲ್ಲ. ಅಷ್ಟೇ ಅಲ್ಲ, ಅದು ಹಳೆತಾದಂತೆ ಕಂಡು ಅದಕ್ಕೆ ಯಾವ ಬೆಲೆಯೂ ಗಿಟ್ಟುವುದಿಲ್ಲ. ಮೇಲಾಗಿ ಈ ಲಟ್ಟಣಿಗೆ - ಮರದ ಚಮಚಾಗಳನ್ನು ದಿನನಿತ್ಯದ ಉಪಯೋಗಕ್ಕೆ ಹಾಕಿಕೊಳ್ಳಬಹುದಾದರೂ, ಅದನ್ನು ಕೊಂಡವರು ಅದರ ಮೇಲಿರುವ ಚಿತ್ತಾರದಿಂದಾಗಿ ಹೆಚ್ಚಾಗಿ ಅವುಗಳನ್ನು ಪ್ರದರ್ಶಿಸುವುದೇ ಹೆಚ್ಚು.

ವಾಡಾಗಳ ಜೊತೆ ಕೆಲಸ ಮಾಡಬೇಕೆಂದು ಹೊರಟರೆ ಯಾವರೀತಿಯಿಂದಾಗಿ ಅವರಿಗೆ ಸಹಾಯ ಮಾಡಬಹುದು? ಈ ದಿನದ ತಂತ್ರಜ್ಞಾನದ ಸಹಾಯದಿಂದಾಗಿ ಅವರ ಆರ್ಥಿಕ ಪರಿಸ್ಥಿತಿಯನ್ನಾಗಲೀ ಸಾಮಾಜಿಕ ಸ್ಥಿತಿಯನ್ನಾಗಲೀ ಉತ್ತಮಗೊಳಿಸುವುದು ಸಾಧ್ಯವೇ? ಸಾಧುವೇ? ಈ ಪ್ರಶ್ನೆಗಳನ್ನು ಸ್ವಯಂಸೇವಾ ಸಂಸ್ಥೆಗಳು ಎದುರಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಅವರಿಗೆ ಬೇಡದ ’ವಿಕಾಸ’ ಉತ್ತಮಿಕೆಯನ್ನು ಅವರ ಮೇಲೆ ಹೇರುವುದು ಎಷ್ಟು ಸಮಂಜಸ - ಹೊರಗಿನ ಸಂಸ್ಥೆ/ವ್ಯಕ್ತಿಗಳು ಅವರ ಜೀವನ ಶೈಲಿಯಲ್ಲಿ ಕೈ ಹಾಕುವುದು ಎಷ್ಟು ಸಮಂಜಸ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಲೇ ಇರಬಹುದಾದ ಸಾಧ್ಯತೆಗಲನ್ನು ಪರಿಶೀಲಿಸಬೇಕಾಗುತ್ತದೆ.

ಉದಾಹರಣೆಗೆ ಅಲ್ಲೇ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಯ ಇಂಜಿನಿಯರ್ ಒಬ್ಬ ಅವರುಗಳು ಉಪಯೋಗಿಸುವ ಮರದ ಚೂರುಗಳ ಜಾಗಕ್ಕೆ ಒಂದು ಕೈಯಲ್ಲಿ ನಡೆಸಬಹುದಾದ ಲೇಥ್ ಥರದ ಒಂದು ಚೌಕಟ್ಟನ್ನು ರೂಪಿಸಿದ್ದಾನೆ. ಆ ಚೌಕಟ್ಟನ್ನು ಉಪಯೋಗಿಸಿದರರೆ ಮರದ ಚೂರುಗಳನ್ನು ನೆಲಕ್ಕೆ ಕುಟ್ಟುವ ಹಾಗೂ ಅಂಚುಗಳ ನಡುವೆ ಮರದ ದಿಮ್ಮಿಯನ್ನು ಕೂಡಿಸುವ ಕೆಲಸ ಸರಳವಾಗುತ್ತದೆ. ಒಂದಿಷ್ಟು ಸಮಯ ಉಳಿಯುತ್ತದೆ. ವಾಡಾಗಳ ಕುಶಲತೆ ಅರಗಿನ ಬಣ್ಣ ಲೇಪಿಸುವುದರಲ್ಲಿದ್ದರೆ ಮತ್ತೆ ಈ ಹೆರೆಯುವ, ಕೆರೆಯುವ, ಹ್ಯಾಂಡಲ್ಲನ್ನು ಗುಂಡಾಗಿಸುವ ಕೆಲಸವನ್ನು ಯಂತ್ರದಲ್ಲಿಯೇ ಯಾಕೆ ಮಾಡಬಾರದು ಅನ್ನುವ ಪ್ರಶ್ನೆಯನ್ನೂ ಹೊರಗಿನವರು ಕೇಳಬಹುದು. ಆದರೆ ಅಂಥಹ ಸಲಹೆಯನ್ನು ವಾಡಾಗಳು ಒಪ್ಪಿಲ್ಲವಂತೆ.

ಅವರುಗಳ ಕಲೆಯನ್ನು ಅವರೇ ಗ್ರಹಿಸುವ ರೀತಿಗೂ, ಹೊರಗಿನವರು ಗ್ರಹಿಸುವ ರೀತಿಗೂ ಇರುವ ವ್ಯತ್ಯಾಸದಿಂದಾಗಿ ಹೀಗಾಗುತ್ತದೆಯೇನೋ. ಅವರುಗಳಿಗೆ ಅರಗಿನ ರಂಗನ್ನು ಅಂಟಿಸುವುದು ಎಷ್ಟು ಮುಖ್ಯವಾದ ಕಲೆಗಾರಿಕೆಯೋ, ಇರುವ ಕೊಡಲಿ, ಹಾಗೂ ಚೂಪಾದ ಹೆರೆಯುವ ಯಂತ್ರದಲ್ಲಿ ಅದ್ಭುತವಾದ ನಾಜೂಕುತನವನ್ನು ತರಿಸುವುದೂ ಅಷ್ಟೇ ಕಲೆಗಾರಿಕೆಯ ವಿಷಯ. ಹೊರಗಿನವರಾದ ನಮಗೆ ಯಂತ್ರದಲ್ಲಿ ಆ ಮರವನ್ನು ಆ ಆಕಾರಕ್ಕೆ ತರಲು ಸಾಧ್ಯ ಎನ್ನುವುದು ಗೊತ್ತು. ಆದರೆ ಅದರ ಮೇಲಿನ ಅರಗಿನ ಚಿತ್ತಾರವನ್ನು ನಾವು ಯಂತ್ರದಿಂದ ತರಿಸಲು ಸಾಧ್ಯವಿಲ್ಲ ಅನ್ನುವುದೂ ನಮಗೆ ಮನವರಿಕೆಯಾಗಿದೆ. ಹೀಗಾಗಿ, ಯಂತ್ರದಿಂದಾಗುವ ಕೆಲಸವನ್ನು ಅಲ್ಲಿ ಮಾಡಿಸಿ ಕುಶಲತೆಗೆ ಮಾತ್ರ ವಾಡಾಗಳು ತಮ್ಮ ಸಮಯವನ್ನು ಕಳೆಯಬೇಕೆಂದು ನಮ್ಮಂಥಹ ಹೊರಗಿನವರು ಹೇಳಬಹುದು. ಆದರೆ ಇಲ್ಲಿರುವ ಪ್ರಶ್ನೆ ಅವರು ಮಾರಟ ಮಾಡುವ ವಸ್ತುವಿಗೆ ಸಂಬಂಧಿಸಿದ್ದಲ್ಲ. ಅದು ಅ ವಸ್ತು ತಯಾರಾಗುವ ಪ್ರಕ್ರಿಯೆಗೆ ಸಂಬಂಧಿಸಿದ್ದು. ಇದೇ ವಾದವನ್ನು ನಾವು ಜವಳಿಯ ಕ್ಷೇತ್ರಕ್ಕೆ ಅನ್ವಯಿಸಿದರೆ, ನೇಯ್ಗೆಯನ್ನು ಮಿಲ್ಲಿನಲ್ಲಿ ಮಾಡಿಸಿ, ಅದರ ಮೇಲಿನ ಕಸೂತಿಗೆ ಮಾತ್ರ ಜನರ ಕುಶಲತೆಯನ್ನು ಉಪಯೋಗಿಸಬೇಕು ಎಂದು ವಾದಿಸಿದಂತೆ ಆಗುತ್ತದೆ. ಆದರೂ ನೇಕಾರರಿಗೆ ಕೈಮಗ್ಗ ಕೇವಲ ಬಟ್ಟೆ ನೇಯುವ ರೀತಿ ಮಾತ್ರವಾಗಿರದೇ ಅದು ಜೀವನವನ್ನು ಜೀವಿಸುವ ವಿಧಾನವೇ ಆಗಿದೆ ಅನ್ನುವುದನ್ನು ಮನಗಂಡರೆ, ವಾಡಾಗಳು ಯಂತ್ರದಿಂದ ಮೂರುನಿಮಿಷದಲ್ಲಾಗಬಹುದಾದ ಕೆಲಸಕ್ಕೆ ತಮ್ಮ ಕೈಯಿಂದ ಕೆತ್ತಿ ಅರ್ಧ ಗಂಟೆ ಯಾಕೆ ವ್ಯಯ ಮಾಡುತ್ತಾರೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.

ಅರಗಿನ ರಂಗಿರದ ಮರದ ಕೆತ್ತನೆಯ ಕೆಲಸವನ್ನು ಮಾಡಿ ಕೊಡಿ ಎಂದು ಮಾರುಕಟ್ಟೆಯಲ್ಲಿ ಯಾರೋ ಕೇಳಿದರೆಂದು ಅದನ್ನು ಖುಷಿಯಿಂದ ಮಾಡುವ ಇವರುಗಳು, ಕೆತ್ತನೆಯನ್ನು ಬಿಟ್ಟು ಕೇವಲ ಅರಗಿನ ರಂಗನ್ನು ಹಾಕಿ ಎನ್ನುವುದಕ್ಕೆ ಯಾವರೀತಿಯಲ್ಲಿ ಪ್ರತಿಕ್ರಿಯಿಸಬಹುದು ಅನ್ನುವುದನ್ನು ಊಹಿಸಿಕೊಂಡೇ ಹೊರಗಿನವರು ಅವರಿಗೆ ’ಉತ್ತಮ ಜೀವನ’ದ ಕನಸನ್ನು ’ಮಾರ’ಬೇಕಾಗಿದೆ! ನಮಗೆ ಉತ್ತಮವೆನ್ನಿಸಿದ್ದು ಅವರಿಗೂ ಉತ್ತಮವೆನ್ನಿಸಬೇಕಲ್ಲವೇ!

ಈಗಿರುವ ಅವರ ಕರಕುಶಲ ತಂತ್ರಜ್ಞಾನದಲ್ಲಿ ಕೆಲವು ಮಿತಿಗಳ ಅಂತರ್ಗತವಾಗಿ ಇವರುಗಳು ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುವ ಮರದ ಉದ್ದ ಹೆಚ್ಚಿನಂಶ ಒಂದು-ಒಂದೂವರೆ ಅಡಿಗಿಂತ ಕಡಿಮೆಯಿರುತ್ತದೆ. ಹೆಚ್ಚೆಂದರೆ ಎರಡು ಮೂರು ಅಡಿಯ ದಿಮ್ಮಿಯಲ್ಲಿ ಕೆಲಸ ಮಾಡಿ ಒಂದು ಸ್ಟೂಲಿನ ಕಾಲನ್ನು ಚಿತ್ತಾರಗಳೊಂದಿಗೆ ಅವರು ಮಾಡಿಯಾರು. ಅವರು ಮಾಡುವ ಕೆಲಸ ಹೆಚ್ಚಾಗಿ ಗುಂಡಾಗಿ ಉದ್ದಕ್ಕಿರುತ್ತದೆ. ಈಗ ಅವರನ್ನು ಹೊಸ ಎಥ್ನಿಕ್ ಮನೆಗಳಿಗೆ ಮರದ ಕಂಬಗಳನ್ನು ರೂಪಿಸುವ ಕೆಲಸವನ್ನು ಮಾಡಲು ಒಂದು ಸ್ವಯಂ ಸೇವಾ ಸಂಸ್ಥೆ ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಅವರ ಮಾರುಕಟ್ಟೆ ಉತ್ತಮವಾಗಿ ಅರ್ಥಿಕತೆಯೂ ಉತ್ತಮಗೊಂಡೀತು ಅನ್ನುವುದು ಆ ಸಂಸ್ಥೆಯ ನಂಬುಗೆ. ಆದರೆ ಇದಕ್ಕೆ ವಾಡಾಗಳು ತಮ್ಮ ಕೈಕೆಲಸವನ್ನು ಬಿಟ್ಟು ದೊಡ್ಡ ದಿಮ್ಮಿಗಳನ್ನು ಲೇಥಿನ ಮೂಲಕ ಒಂದು ರೂಪಕ್ಕೆ ಹೆರೆಯಬೇಕು, ಆ ನಂತರ ಲೇಥ್ ನಡೆವ ವೇಗದ ಗತಿಯಲ್ಲಿ ಅರಗಿನ ಬಣ್ಣಗಳನ್ನು ಲೇಪಿಸಬೇಕು. ಇದಕ್ಕೆ ಹೊಸ ಅಭ್ಯಾಸ ಬೇಕಾಗುತ್ತದೆ. ವಾಡಾಗಳು ಈ ತಂತ್ರವನ್ನು ಕಲಿಯಲು ರಾಜಿಯಾಗುತ್ತಾರೆಯೇ? ಈ ತಂತ್ರವನ್ನು ಕಲಿತರೆ ಅವರ ಮಾರುಕಟ್ಟೆ ಉತ್ತಮವಾಗುವುದೇ? ಅಕಸ್ಮಾತ್ ಈ ತಂತ್ರಕ್ಕೆ ಶಾಶ್ವತವಾದ ಮಾರುಕಟ್ಟೆಯಿಲ್ಲವೆಂದಾದರೆ ಅವರುಗಳು ಕರಕುಶಲ ಮರದ ಕೆಲಸಕ್ಕೆ ವಾಪಸ್ಸಾಗಲು ತಯಾರಿರುತ್ತಾರೆಯೇ? ಹೊರಗಿನವರಾದ ನಾವುಗಳು ಇದನ್ನೆಲ್ಲಾ ಯೋಚಿಸಿಯೇ ಹೆಜ್ಜೆ ಮುಂದಿಡಬೇಕಾಗುತ್ತದೆ.

ಮಿಕ್ಕವರ ಜೀವನವನ್ನು ’ಉತ್ತಮ’ಗೊಳಿಸುವ ಕೆಲಸ ಸರಳವಾದದ್ದೇನೂ ಅಲ್ಲ!!



No comments:

Post a Comment