ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ. ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.
ಚಿಕ್ಕಸಾಲಕ್ಕಿಂತ ಚಿಕ್ಕ ಉಳಿತಾಯದ ಕಾರ್ಯಕ್ರಮಗಳು ಹೆಚ್ಚು ಸಂಕೀರ್ಣವಾದವು. ಇದಕ್ಕೆ ಕಾರಣ ಉಳಿತಾಯವನ್ನು ಸ್ವೀಕರಿಸಬಹುದಾದ ಬಗ್ಗೆ ಇರುವ ಕಾನೂನು ವ್ಯವಸ್ಥೆ. ವಿತ್ತೀಯ ವ್ಯವಹಾರಗಳ ಮೇಲ್ವಿಚಾರಣೆ ನಡೆಸುವ ಭಾರತೀಯ ರಿಜರ್ವ್ ಬ್ಯಾಂಕು ಯಾವುದಾದರೂ ಕಂಪನಿ ಸಾಲವನ್ನು ಕೊಟ್ಟಾಗ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಾದರೂ, ಉಳಿತಾಯವನ್ನು ಸ್ವೀಕರಿಸುವುದಕ್ಕೆ ಅನೇಕ ಅಡಚಣೆಗಳನ್ನು ಮುಂದಾಗಿಸಿದೆ. ಇದಕ್ಕೆ ಕಾರಣವಿಷ್ಟೇ: ಸಂಸ್ಥೆಗಳು ಸಾಲ ನೀಡುವಾಗ ಅಲ್ಲಿ ಒಳಗೊಂಡಿರುವುದು ಬಂಡವಾಳ ಹೂಡಿದವರ ಹಣ. ಆದರೆ ಉಳಿತಾಯವನ್ನು ಸ್ವೀಕರಿಸಿದಾಗ - ಅದು ಬಡವರನ್ನೊಳಗೊಂಡ ’ಪಬ್ಲಿಕ್’ ಹಣ. ಹೀಗೆ ಒಂದು ಸಂಸ್ಥೆ ಜನಸಾಮಾನ್ಯರಿಂದ ಹಣವನ್ನು ಸ್ವೀಕರಿಸಿದ ನಂತರ ಮಾಯವಾದರೆ, ಅಥವಾ ವಿಫಲಗೊಂಡರೆ, ನಷ್ಟವಾಗುವುದು ಅಂಥ ಸಂಸ್ಥೆಗಳಲ್ಲಿ ಹಣ ಹೂಡಿದವಿರಿಗೇ ಆದ್ದರಿಂದ, ಜನಸಾಮಾನ್ಯರ ಹಿತದೃಷ್ಟಿಯನ್ನು ಕಾಪಾಡಲು ರಿಜರ್ವ್ ಬ್ಯಾಂಕು ಈ ಕ್ಷೇತ್ರದಲ್ಲಿ ಕೆಲವು ಅಡಚಣೆಗಳನ್ನು ಒಡ್ಡಿದೆ. ಹೀಗಾಗಿ ಬಡವರಿಗೆ ಸುಲಭವಾಗಿ ಮೈಕ್ರೋಫೈನಾನ್ಸ್ ನಿಂದ ಸಾಲ ಸಿಗಬಹುದಾದರೂ, ಅದೇ ಸಂಸ್ಥೆಗಳಲ್ಲಿ ಉಳಿತಾಯ ಮಾಡುವುದು ಸಾಧ್ಯವಾಗದ ಮಾತಾಗುತ್ತದೆ.
ಈ ಹಿನ್ನೆಲೆಯಲ್ಲಿ ಬಡವರೊಂದಿಗೆ ಕೆಲಸ ಮಾಡುವ ಸಂಸ್ಥೆಗಳು ಅವರು ಹೆಚ್ಚು ಉಳಿತಾಯ ಮಾಡುವಂತೆ ಪ್ರೋತ್ಸಾಹಿಸುವುದೂ, ಅದಕ್ಕೆ ಒಂದು ಮಾರ್ಗವನ್ನು ತೋರಿಸಿಕೊಡುವುದು ಹೇಗೆ ಅನ್ನುವ ಪ್ರಶ್ನೆ ದೊಡ್ಡ ಸವಾಲಾಗಿ ನಿಲ್ಲುತ್ತದೆ. ಆದರೆ ನಿಜಕ್ಕೂ ಬಡವರಿಗೆ ಉಳಿತಾಯಕ್ಕೆ ಬ್ಯಾಂಕುಗಳನ್ನು ಬಿಟ್ಟರೆ ಬೇರೆ ಮಾರ್ಗಗಳೇ ಇಲ್ಲ ಅನ್ನುವುದೂ ನಿಜವಲ್ಲ. ಅಂಚೆ ಕಛೇರಿಯಲ್ಲಿ, ಹಾಗೂ ಸಹಕಾರೀ ಸಂಸ್ಥೆಗಳಲ್ಲಿ ಜನ ಉಳಿತಾಯವನ್ನು ಹೂಡಬಹುದು. ಹಾಗೆಯೇ ಸ್ವ-ಸಹಾಯ ಗುಂಪುಗಳೂ ಉಳಿತಾಯವನ್ನು ಸ್ವೀಕರಿಸಬಹುದು. ಸಹಕಾರೀ ಸಂಸ್ಥೆಗಳೂ, ಸ್ವ-ಸಹಾಯ ಗುಂಪುಗಳೂ ಜನರೇ ನಿರ್ವಹಿಸುವ ಸ್ಥಳೀಯ ಕಾರ್ಯಕ್ರಮಗಳಾದ್ದರಿಂದ ಇಂಥ ಸಂಸ್ಥೆಗಳಿಗೆ ಉಳಿತಾಯವನ್ನು ಸ್ವೀಕರಿಸುವ ಹಕ್ಕನ್ನು ಕಾನೂನು ನೀಡಿದೆ. ಆದ್ದರಿಂದಲೇ ಸಮುದಾಯ ಕೇಂದ್ರಿತ ಸ್ವ-ಸಹಾಯ ಗುಂಪುಗಳ ಮಾದರಿಯ ಮೈಕ್ರೊಫೈನಾನ್ಸ್ ಗ್ರಾಮೀಣ್ ಮಾದರಿಯ ಮೈಕ್ರೊಫೈನಾನ್ಸ್ ಗಿಂತ ಉತ್ತಮವೆಂದು ಹಲವರು ವಾದಿಸುತ್ತಾರೆ.
ಆ ವಾದವಿವಾದಳು ಏನೇ ಇದ್ದರೂ, ಉಳಿತಾಯದ ಪರಿಭಾಷೆಯನ್ನು ನಾವು ವಿಸ್ತರಿಸಿ ನೋಡಿದಾಗ ನಮ್ಮ ದೇಶದಲ್ಲಿ ಅನೇಕ ಕುತೂಹಲಕಾರಿ ಪ್ರಯೋಗಗಳು ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಉಳಿತಾಯವನ್ನು ಸ್ವೀಕರಿಸಲು ಕಷ್ಟವಾದರೂ, ಖರ್ಚನ್ನು ಕಡಿಮೆ ಮಾಡುವ ಪ್ರಯೋಗವನ್ನು ಮಾಡಬಹುದಲ್ಲವೇ? ಖರ್ಚು ಕಡಿಮೆಯಾಗುವುದರಿಂದ ಬಡ ಸಂಸಾರಗಳಿಗೂ ಒಂದು ರೀತಿಯ ಒಳಿತೇ ಆಗಬಹುದು. ಆದರೆ ಖರ್ಚು ಕಡಿಮೆ ಮಾಡುವುದರ ಪರಿಭಾಷೆ ಯಾವರೀತಿಯದ್ದು? ನಮ್ಮ ಸೂಪರ್ ಬಜಾರುಗಳು ನೀಡುವ ಜಾಹೀರಾತಿನಿಂತೆ, ಸ್ಪೆಂಡ್ ಮೋರ್ - ಸೇವ್ ಮೋರ್ ರೀತಿಯದ್ದೇ?
ಆಂಧ್ರಪ್ರದೇಶ ಸರಕಾರದ ಸಂಸ್ಥೆಯಾದ ಸೊಸೈಟಿ ಫರ್ ಎಲಿಮಿನೇಷನ್ ಆಫ್ ರೂರಲ್ ಪಾವರ್ಟಿ [ಸರ್ಪ್] ನಡೆಸುವ ವೆಲುಗು [ಇದು ಚಂದ್ರಬಾಬು ನಾಯ್ಡು ಕಾಲದಲ್ಲಿ ಕೊಟ್ಟ ಹೆಸರು. ಅಲ್ಲಿ ಸರಕಾರ ಬದಲಾಗಿ ರಾಜಶೇಖರ ರೆಡ್ಡಿ ಬಂದಾಗ ಈ ಕಾರ್ಯಕ್ರಮಕ್ಕೆ ಇಂದಿರಾ ಕ್ರಾಂತಿ ಪಥಂ ಅನ್ನುವ ಹೊಸ ನಾಮಕರಣವಾದರೂ, ಜನ ಇನ್ನೂ ಈ ಯೋಜನೆಯನ್ನು ವೆಲುಗು ಎಂದೇ ಕರೆಯುತ್ತಾರೆ] ಅನ್ನುವ ಬಡತನಾ ನಿರ್ಮೂಲನದ ಕಾರ್ಯಕ್ರಮದಲ್ಲಿರುವ ಅನೇಕ ಯೋಜನೆಗಳಲ್ಲಿ ರೈಸ್ ಕ್ರೆಡಿಟ್ ಲೈನ್ ಅನ್ನುವುದೂ ಒಂದು ಪುಟ್ಟ ಕಾರ್ಯಕ್ರಮ. ಈ ಕಾರ್ಯಕ್ರಮದನುಸಾರ, ಸರ್ಪ್ ಯೋಜಿಸಿದ ಮಹಿಳೆಯರ ಸ್ವಸಹಾಯ ಗುಂಪುಗಳು ತಮಗೆ ಬೇಕಾಗಬಹುದಾದ ತಿಂಗಳ ಅಕ್ಕಿಯನ್ನು ಇಡಿಯಾಗಿ ಕೊಂಡು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಇದರಿಂದ ಆಗುವ ಲಾಭವೇನು?
ಒಂದು: ಗುಂಪಿನ ಎಲ್ಲರ ಮನೆಗೂ ತಿಂಗಳಿಗೆ ಬೇಕಾಗಬಹುದಾದ ಅಕ್ಕಿಯ ಪ್ರಮಾಣವನ್ನು ಕೂಡಿದಾಗ ಎಷ್ಟು ಅಕ್ಕಿ ಅವರಿಗೆ ಬೇಕಾಗಬಹುದು? ಒಂದು ಗ್ರಾಮದಲ್ಲಿನ ಎಲ್ಲ ಗುಂಪುಗಳ ಬೇಡಿಕೆಯನ್ನು ಒಟ್ಟುಗೂಡಿಸಿದರೆ ಎಷ್ಟು? ಈ ಪ್ರಮಾಣದ ಅಕ್ಕಿಯನ್ನು ಒಂದೇ ಬಾರಿಗೆ ಕೊಳ್ಳುವುದೆಂದರೆ, ಸ್ಥಳೀಯ ಕಿರಾಣಿಯಂಗಡಿಗೆ ಹೋಗದೇ ಸಗಟು ವ್ಯಾಪಾರಿಗಳ ಬಳಿಗೆ ಹೋಗಬಹುದು. ಆಗ ಕೊಳ್ಳುವ ಬೆಲೆಯಲ್ಲಿ ಉಳಿತಾಯವಾಗುವುದಿಲ್ಲವೇ? ಇದು ಸರಕಾರೀ ಕಾರ್ಯಕ್ರಮವಾದ್ದರಿಂದ ನೇರವಾಗಿ ಫುಡ್ ಕಾರ್ಪರೇಷನ್ನಿನಿಂದ ಅಕ್ಕಿಕೊಳ್ಳಲು ಸಾಧ್ಯವಾದರೆ? ಇನ್ನೂ ಹೆಚ್ಚಿನ ಫಾಯಿದೆಯೇ! ಜೊತೆಗೆ ಹಣ ಕೊಟ್ಟು ಕೊಳ್ಳುತ್ತಿರುವುದರಿಂದ ಒಳ್ಳೆಯ ಎಲ್ಲರಿಗೂ ಒಪ್ಪಿಗೆಯಾಗುವಂಥಹ ಅಕ್ಕಿಯನ್ನೇ ಕೊಳ್ಳಬಹುದು. ಈ ಖರೀದಿಗೆ ಗುಂಪಿನಿಂದ ಸಾಲವೂ ಸಿಕ್ಕಿದರೆ, ಒಟ್ಟಾರೆ ಒಂದು ತಿಂಗಳಿಗೆ ಬೇಕಾದ ಮೂಲ ಆಹಾರದ ದಾಸ್ತಾನು ಮನೆಯಲ್ಲಿದ್ದಂತೆಯೇ!
ಎರಡು: ಸಗಟು ವ್ಯಾಪಾರದಿಂದ ಹಣ ಉಳಿತಾಯವಾಗುವುದಲ್ಲದೇ, ಮನೆಯಲ್ಲಿ ತಿಂಗಳ ಅಕ್ಕಿ ದಾಸ್ತಾನಿರುವ ಕುಟುಂಬಗಳ ಆತ್ಮ ವಿಶ್ವಾಸಕ್ಕೇನಾಗಬಹುದು? ದಿನಗೂಲಿಯ ಆಧಾರದ ಮೇಲೆ ಬದುಕುವ ಈ ಜನರಿಗೆ ಕೆಲವೊಂದು ದಿನ ಕೂಲಿ ಸಿಗದಿದ್ದರೆ ಯಾರೂ ಉಪವಾಸ ಮಲಗುವುದಿಲ್ಲ, ಅಥವಾ ಸಮರ್ಪಕ ಕೂಲಿ ಸಿಗದಿದ್ದರೆ ಚೌಕಾಶಿ ಮಾಡುವ ಆತ್ಮವಿಶ್ವಾಸ ಸಹಜವಾಗಿ ಇರುವುದರಿಂದ, ಒಟ್ಟಾರೆ ಅವರಿಗೆ ಹೆಚ್ಚಿನ ಶಕ್ತಿಬಂದಂತೆ ಆಗುವುದು. ಹೀಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡನಂತರ ಆ ಪ್ರಾಂತದ ದಿನಗೂಲಿಯ ಮೊಬಲಗು ತುಸು ಹೆಚ್ಚಾಯಿತೆಂದು ಸುದ್ದಿ. ಹೀಗೆ ಖರ್ಚೂ ಕಡಿಮೆಯಾಗಿ ಆದಾಯವೂ ಹೆಚ್ಚಿದರೆ ಉಳಿತಾಯವೂ ಹೆಚ್ಚಾಗಬಹುದಲ್ಲವೇ?
ಸರ್ಪ್ ಸಂಸ್ಥೆಯವರು ಅಕ್ಕಿಯಿಂದ ಮಿಕ್ಕ ದಿನಸಿಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಬಹುದೇ? ಇದೇ ವಾದ ಬೇಳೆ, ಎಣ್ಣೆ, ಸಕ್ಕರೆಗೂ ವರ್ತಿಸಬಹುದಾದ್ದರಿಂದ ತಿಂಗಳಿಗೊಮ್ಮೆ ಈ ರೀತಿಯ ಖರೀದಿಯ ’ರೂರಲ್ ಪ್ರಾವಿಷನ್ ಸ್ಟೋರ್’ ಅನ್ನುವ ಯೋಜನೆಯನ್ನು ಹಾಕಿದರು. ಇದನ್ನು ವಿಸ್ತರಿಸಿ ಸಾಬೂನಿಗೆ, ಬಟ್ಟೆಗೆ, ಜೀರಿಗೆ ಮೆಣಸಿಗೆ ವಿಸ್ತರಿಸಿದರೆ? ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಿ ನಿಲ್ಲಿಸಬೇಕು ಅನ್ನುವ ಅರಿವು, ಪ್ರಬುದ್ಧತೆ ಇಲ್ಲದಿದ್ದರೆ ಇಲ್ಲದ ಖರ್ಚನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಆದರೆ ಸರ್ಪ್ ಈ ಕಾರ್ಯಕ್ರಮವನ್ನು ಅಕ್ಕಿ, ಬೇಳೆ, ಎಣ್ಣೆ ಮತ್ತು ಸಕ್ಕರೆಗೆ ಮಾತ್ರ ಸೀಮಿತಗೊಳಿಸಿತು.
ಇದೇ ಮಾದರಿಯ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಚಿಕ್ಕಸಾಲದ ಕಾರ್ಯಕ್ರಮ ನಡೆಸುವ ಈಕ್ವಿಟಾಸ್ ಸಂಸ್ಥೆ ನಡೆಸುತ್ತಿದೆ. ಆದರೆ ಇದು ತುಸು ಭಿನ್ನ. ಒಂದು ಈಕ್ವಿಟಾಸ್ ಹೆಚ್ಚಾಗಿ ನಗರ ಪ್ರದೇಶದಲ್ಲಿ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರ ಪ್ರದೇಶದಲ್ಲಿ ಒಂದು ಖಾಯಂ ಅಂಗಡಿ ನಡೆಸಬೇಕೆಂದರೆ, ಬಾಡಿಗೆ ಕಟ್ಟಬೇಕು, ಅಂಗಡಿ ನಡೆಸುವವರ ಸಂಬಳವನ್ನೂ ಸಂಭಾಳಿಸಬೇಕು. ಹೀಗಾಗಿ ಸರ್ಪ್ ಮಾದರಿ ಈಕ್ವಿಟಾಸ್‍ಗೆ ವರ್ತಿಸುವುದಿಲ್ಲ. ಸಾಲದ್ದಕ್ಕೆ ಈಕ್ವಿಟಾಸ್ ಸಂಸ್ಥೆ ಸಮುದಾಯದ ಆಧಾರದ ಮೇಲೆ ಕಟ್ಟಿದ್ದೂ ಅಲ್ಲ. ಅವರು ತಮ್ಮ ಚಿಕ್ಕಸಾಲದ ಕಾರ್ಯಕ್ರಮವನ್ನು ಲಾಭಕ್ಕಾಗಿ ನಡೆಸುತ್ತಾರೆ. ಆದರೂ ಒಂದು ಕಡೆ ಲಾಭವನ್ನು ಆರ್ಜಿಸುತ್ತಿರುವಾಗಲೇ ಒಳಿತನ್ನೂ ಮಾಡಬೇಕೆನ್ನುವ ದೃಷ್ಟಿಯಿಂದ ದಿನಸಿಯನ್ನು ಮಾರುವ ಅಂಗಡಿಗಳನ್ನು ತೆಗೆಯುತ್ತಿದ್ದಾರೆ. ಆದರೆ ಇದರಲ್ಲಿ ಮುಖ್ಯವಿಚಾರವೆಂದರೆ ಸಾಲದ ಕಾರ್ಯಕ್ರಮಕ್ಕೂ ದಿನಸಿಯ ಕಾರ್ಯಕ್ರಮಕ್ಕೂ ಕೊಂಡಿ ಹಾಕದೇ, ಎರಡನ್ನೂ ಭಿನ್ನವಾಗಿ ಇಟ್ಟಿದ್ದಾರೆ. ಆದರೆ ಆ ಅಂಗಡಿಯನ್ನು ಲಾಭಾರ್ಜನೆಯಿಲ್ಲದೆಯೇ ನಡೆಸುತ್ತಿದ್ದಾರಾದ್ದರಿಂದ, ಈಕ್ವಿಟಾಸ್ ಸಂಸ್ಥೆಯಲ್ಲಿ ಸಾಲಪಡೆದು ಹೆಚ್ಚಿನ ಬಡ್ಡಿ ಕಟ್ಟುತ್ತಿರುವ ಬಡವರಿಗೆ ಭಿನ್ನ ರೀತಿಯಿಂದ ಉಳಿತಾಯವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈಕ್ವಿಟಾಸ್ ಸಂಸ್ಥೆಯ ಗ್ರಾಹಕರಲ್ಲದವರಿಗೆ ಈ ದಿನಸಿಯನ್ನು ಕೊಳ್ಳುವ ಅವಕಾಶವಿಲ್ಲ! ಇದೊಂದು ರೀತಿಯ ಕಾವ್ಯ ನ್ಯಾಯ.
ಮೂರನೆಯ ಮಾದರಿ ಆಂಧ್ರ ಪ್ರದೇಶದಲ್ಲಿ ಪ್ರಾರಂಭ ಮಾಡಿ ನಂತರ ನಿಲ್ಲಿಸಿದ ಸ್ಪಂದನಾ ಸಂಸ್ಥೆಯವರದ್ದು. ಸ್ಪಂದನಾ ಸಂಸ್ಥೆ ಗುಂಟೂರಿನಲ್ಲಿ ತನ್ನ ಮುಖ್ಯಕಾರ್ಯಾಲವನ್ನು ನಡೆಸುತ್ತಿದ್ದ ದಿನಗಳಲ್ಲಿ ಒಂದು ದಿನ ಆ ಸಂಸ್ಥೆಯ ಮುಖ್ಯಸ್ಥೆ ಪದ್ಮಜಾ ರೆಡ್ಡಿ ತಮ್ಮ ಗ್ರಾಹಕರೊಬ್ಬರ ಮನೆಗೆ ಹೋಗಿದ್ದಾಗ ಅಲ್ಲಿದ್ದ ಕುಡಿಯುವ ನೀರಿನ ಫಿಲ್ಟರ್ ನೋಡಿ ಕುತೂಹಲದಿಂದ ಆ ಫಿಲ್ಟರಿನ ಚರಿತ್ರೆಯನ್ನು ಕೇಳಿದರಂತೆ. ಆಗ ಆ ಬಡ ಗ್ರಾಹಕರಿಂದ ತಿಳಿದದ್ದಿಷ್ಟು. ಆ ಫಿಲ್ಟರನ್ನು ಆ ಕುಟುಂಬದವರು ಕಂತಿನ ಮೇಲೆ ಕೊಂಡಿದ್ದರು. ತಿಂಗಳಿಗೆ ನೂರು ರೂಪಾಯಿಯಂತೆ ಒಂದು ವರ್ಷ ಕಂತನ್ನು ಕಟ್ಟಬೇಕಿತ್ತು. ಪದ್ಮಜಾ ಅದನ್ನು ನೋಡಿ ’ಓಹೋ’ ಅಂದುಕೊಂಡು ವಾಪಸ್ಸಾದರು. ಆದರೆ ಗುಂಟೂರು ನಗರವನ್ನು ಪ್ರವೇಶಿಸುತ್ತಿದ್ದಂತೆ ಕುತೂಹಲದಿಂದ ಫಿಲ್ಟರಿನ ಬೆಲೆ ಎಷ್ಟಿರಬಹುದು ಎಂದು ಕೇಳಿದಾಗ ಅವರಿಗೆ ಆಶ್ಚರ್ಯ ಕಾದಿತ್ತು: ಆ ಫಿಲ್ಟರಿನ ಬೆಲೆ ಕೇವಲ ೭೦೦ ರೂಪಾಯಿಗಳಾಗಿದ್ದುವು! ಆಗ ಆಕೆಯ ಮನಸ್ಸಿನಲ್ಲಿ ಈ ಬಗ್ಗೆ ಒಂದು ವಿಚಿತ್ರ ಹೊಳಹು ಬಂತು. ಇಂಥ ಫಿಲ್ಟರನ್ನು ತಾವೇ ಅತೀ ಕಡಿಮೆ ಲಾಭಕ್ಕೆ ತಮ್ಮ ಗ್ರಾಹಕರಿಗೆ ಮಾರಾಟಮಾಡಿದರೆ? - ಹೀಗೆ ಬಡ ಗ್ರಾಹಕರಿಗೆ ಹಣದ ’ಉಳಿತಾಯ’ವನ್ನು ಖರ್ಚಿನ ಮೂಲಕ ಮಾಡಬಹುದೆಂದು ಆಕೆಗೆ ಅನ್ನಿಸಿತು.
ಹೀಗೆ ಪ್ರಾರಂಭವಾದ ಸ್ಪಂದನಾದ ’ಗ್ರಾಹಕ ಸಾಲ’ವನ್ನು ಮೈಕ್ರೊಫೈನಾನ್ಸ್ ಲೋಕ ಸ್ವಾಗತಿಸಿತು! ನೀರಿನ ಫಿಲ್ಟರ್ ಇದ್ದರೆ ಬಡವರು ಶುದ್ಧನೀರನ್ನು ಕುಡಿಯುತ್ತಾರೆ, ಶುದ್ಧ ನೀರನ್ನು ಕುಡಿಯುವವರಿಗೆ ರೋಗ ಅಂಟುವ ಸಾಧ್ಯತೆಗಳು ಕಡಿಮೆ, ಹೀಗಾಗಿ ಕೆಲಸದ ದಿನಗಳು ಹೆಚ್ಚುವುದಲ್ಲದೇ ಡಾಕ್ಟರ ಖರ್ಚೂ ಕಡಿಮೆಯಾಗುವುದೆಂದು ಜನ ವಾದಿಸಿದರು. ಸ್ಪಂದನಾಗೆ ಈ ಕೆಲಸಕ್ಕಾಗಿ ಒಂದು ಅವಾರ್ಡೂ ಬಂತು. ಸರಿ, ಸ್ಪಂದನಾ ಈ ಯೋಚನೆಯನ್ನು ತುಸು ಮುಂದುವರೆಸಿತು. ಗ್ರಾಹಕ ಸಾಲದಲ್ಲಿ ಪ್ರೆಶರ್ ಕುಕ್ಕರನ್ನು ಸೇರಿಸಿತು. ಅದನ್ನೂ ಜನ ಒಪ್ಪಿದರು. ಮಹಿಳೆಗೆ ಅಡುಗೆ ಮನೆಯಲ್ಲಿನ ಏಕತಾನತೆಯನ್ನು ಕಡಿಮೆ ಮಾಡಲು ಇದು ಸಹಾಯಕವಗಿರಬಹುದಾದ್ದರಿಂದ ಹೆಚ್ಚಿನ ಆದಾಯವನ್ನು ಸಂತೋಷವನ್ನೂ ಸಂಪಾದಿಸಬಹುದು! ಹಾಗಾದರೆ ಗ್ಯಾಸ್ ಸ್ಟವ್? ಅದನ್ನೂ ಸ್ವಾಗತಿಸಿದರು. ಹೀಗೆ ಒಂದೊಂದಾಗೇ ಹೊಸ ಹೊಸ ಸಾಮಾನನ್ನು ತಮ್ಮ ಅಂಗಡಿಯಲ್ಲಿಡುತ್ತಾ ಒಂದು ವರ್ಷದೊಳಗಾಗಿ ಸ್ಪಂದನಾದ ರೀಟೈಲ್ ಅಂಗಡಿ ಗುಂಟೂರಿನ ಅತೀ ದೊಡ್ಡ ಸೂಪರ್ ಬಜಾರ್ ಆಗಿಬಿಟ್ಟಿತು. ಗುಂಪಿನ ಮೀಟಿಂಗಿನಲ್ಲಿ ಸಾಲದ ಚೀಟಿ ಪಡೆಯುವುದು - ಆ ಚೀಟಿಯನ್ನು ತಂದು ಈ ಬಜಾರಿನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗಿ ಬಡ್ಡಿಯ ಮೇಲೆ ಆ ಸಾಲವನ್ನು ತೀರಿಸುವುದು. ಎಲ್ಲ ವಸ್ತುಗಳ ಬೆಲೆಗಳೂ ಮಾರುಕಟ್ಟೆಯ ಇತರ ಅಂಗಡಿಗಳಿಗಿಂತ ಕಡಿಮೆಯಿದ್ದದ್ದರಿಂದ ಸ್ಪಂದನಾದ ಅಂಗಡಿಯಲ್ಲಿ ಕೊಳ್ಳುವುದರಲ್ಲಿ ’ಉಳಿತಾಯ’ವಿತ್ತು. ಆದರೆ ಮೊದಲಿಗೆ ಮೆಚ್ಚಿಕೊಂಡವರೇ ಈಗ ಆ ಸಂಸ್ಥೆಯನ್ನು ಟೀಕಿಸಲು ಪ್ರಾರಂಭಿಸಿದರು. ಶುದ್ಧ ನೀರು, ಕುಕ್ಕರ್, ಅಡಿಗೆ ಅನಿಲ ಈ ಯಾದಿ ವಾಷಿಂಗ್ ಮಶೀನು, ಫ್ರಿಜ್ಜು, ಮಂಚ, ಅಲಮಾರಿ, ಚಿನ್ನಾಭರಣ ಹೀಗೆ ಬೆಳೆಯುತ್ತಾ ಹೋದಾಗ - ಯಾವುದು ’ಉಳಿತಾಯ’ ಮತ್ತು ’ಆದಾಯ ಹೆಚ್ಚಲು’ ಪೂರಕವೆನ್ನಲಾಗಿತ್ತೋ ಅದೇ ಈಗ ದುಂದಿನ ಖರ್ಚಾಗಿ, ಸಾಲದ ಸುರಳಿಯಲ್ಲಿ ಬಡವರನ್ನು ಇರುಕಿಸುತ್ತಿದೆ ಎನ್ನುವ ಟೀಕೆಗೆ ಒಳಗಾಯಿತು.
ಹೀಗೆ ಖರ್ಚಿನಿಂದ ಆಗಬಹುದಾದ ಉಳಿತಾಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಅದೂ ಬಡತನದಲ್ಲಿ ಬೇಯುತ್ತಿರುವವರಿಗೆ ಗ್ರಾಹಕವಸ್ತುಗಳ ಕನಸನ್ನು ನಾವು ತೋರುವಾಗ ಹಾಕಬೇಕಾದ ಗೆರೆ ಎಲ್ಲೆಂದು ಯೋಚಿಸದಿದ್ದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ ಅನ್ನುವ ಪಾಠವನ್ನು ಸ್ಪಂದನಾ ಬೇಗನೇ ಕಲಿಯಿತು. ಆ ಪಾಠವನ್ನು ಎಲ್ಲರೂ ಕಲಿತರೇ? ಈಚೆಗೆ ಎಸ್.ಕೆ.ಎಸ್ ಅನ್ನುವ ದೊಡ್ಡ ಮಕ್ರೋಫೈನಾನ್ಸ್ ಸಂಸ್ಥೆ ನೋಕಿಯಾ ಜೊತೆಗೂಡಿ ಬಡವರಿಗೆ ಮೊಬೈಲುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆಯಂತೆ. ಹಾಗೂ ಆ ಸಂಸ್ಥೆಯ ಮುಖ್ಯಸ್ಥ ಗುರುಮಣಿ ತಮ್ಮ ಕಾರ್ಯಕ್ರಮದ ಮೂಲಕ ತಲುಪುವ ಗ್ರಾಹಕರ ದೊಡ್ಡ ಸಂಖ್ಯೆಯ ನೆಟ್‍ವರ್ಕನ್ನು ಹೆಚ್ಚಿನ ಲಾಭಕ್ಕಾಗಿ ಹೇಗೆ ಉಪಯೋಗಿಸಬಹುದು ಅನ್ನುವುದನ್ನು ಹಾಗೂ ಅವರಿಗೆ ಕಡಿಮೆ ಬೆಲೆಯಲ್ಲಿ ಗ್ರಾಹಕ ವಸ್ತುಗಳನ್ನು ತಲುಪಿಸುವುದು ಹೇಗೆ ಎನ್ನುವ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಎಲ್ಲೋ ಹೇಳಿದ್ದಾರೆ. ಚರಿತ್ರೆ ಮರುಕಳಿಸುತ್ತದೆ. ಬಡವರನ್ನು ಮೇಲಕ್ಕೆತ್ತುವ ಉತ್ಸಾಹದಲ್ಲಿ ನಾವು ಅವರನ್ನು ಇನ್ನೂ ಕೆಳಕ್ಕೆ ತಳ್ಳುತ್ತಿದ್ದೇವೆಯೇ? ಖರ್ಚಿನಿಂದ ಉಳಿತಾಯವಾಗುತ್ತದೆಯೇ? ಆಗುವುದೇ ಆದರೆ ಯಾವರೀತಿಯ ಖರ್ಚುಗಳನ್ನು ಪ್ರೋತ್ಸಾಹಿಸಬೇಕು ಅನ್ನುವ ಪ್ರಶ್ನೆಗಳು ಉಳಿದೇ ಇವೆ. ಅವಕ್ಕೆ ಉತ್ತರ ಸರಳವಾದದ್ದೇನೂ ಅಲ್ಲ.
ನವಂಬರ್ ೨೦೦೯
No comments:
Post a Comment