Wednesday, March 27, 2013

ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು


ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.

ಈ ಮಾಹಿತಿಯನ್ನು ನಾವು ಹೇಗೆ ಅರ್ಥೈಸಬಹುದು? ಒಟ್ಟಾರೆ ಮಾಹಿತಿಯನ್ನು ನಾವು ರಾಷ್ರ್ಟೀಯ ಮಟ್ಟದಲ್ಲಿ ನೋಡಿದಾಗ ಬ್ಯಾಂಕುಗಳ ರಾಷ್ಟ್ರೀಕರಣದಿಂದ ಬಡವರಿಗೆ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲ - ಸಿಗುವಂತಾಯಿತು - ಹಾಗೂ ಒಂದು ದಶಕದಲ್ಲಿ ಆ ನೀತಿಯ ದೊಡ್ಡ ಪ್ರಭಾವ ನಮಗೆ ಕಾಣಿಸಿತು ಎನ್ನಬಹುದು. ಆ ನಂತರದ ನೀತಿಗಳು ಬಡ್ಡಿವ್ಯಾಪಾರಿಗಳ ವ್ಯಾಪಾರದ ಮೇಲೆ ದೊಡ್ಡ ಪ್ರಭಾವವನ್ನ ಬೀರಿಲ್ಲ. ನಿಧಾನವಾಗಿ ಒಂದಡೆ ಬೆಳೆಯುತ್ತಾ ಒಂದೆಡೆ ಕುಂಟುತ್ತಾ ಈ ಸೇವೆಗಳು ಮುಂದುವರೆದಿವೆ.

ರೋಹಿಣಿ ಪಾಂಡೆ ಮತ್ತು ರಾಬಿನ್ ಬರ್ಗೆಸ್ ಅವರುಗಳ ಈಚಿನ ಅಧ್ಯಯನದ ಪ್ರಕಾರ ಬ್ಯಾಂಕುಗಳ ರಾಷ್ಟ್ರೀಕರಣದಿಂದ - 1991ರ ಉದಾರೀಕರಣದವರೆಗಿನ ಕಾಲದ ಮಾಹಿತಿಯನ್ನು ಪರಿಶೀಲಿಸಿದಾಗ ಆ ಘಟ್ಟದಲ್ಲಿ ಒಟ್ಟಾರೆ ಬಡತನವೂ ಕಡಿಮೆಯಾಯಿತಲ್ಲದೇ, ಕೃಷಿಯ ಉತ್ಪತ್ತಿಯೂ ಹೆಚ್ಚಿತು - ಆದರೆ ತದನಂತರದ ಉದಾರೀಕರಣದ ನಂತರ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ಕಾಣಿಸುತ್ತಿದೆ ಎಂದು ಅವರುಗಳು ವಾದಿಸುತ್ತಾರೆ. ಇದು ಯಾಕೆ ಹೀಗಾಗಿರಬಹುದು ಅನ್ನುವುದು ಕುತೂಹಲದ ವಿಷಯ.

ಇದನ್ನು ಒಂದು ರಾಷ್ಟ್ರೀಕೃತ ಬ್ಯಾಂಕಿನ ದೃಷ್ಟಿಯಿಂದ ನೋಡೋಣ. ಬಡ್ಡಿವ್ಯಾಪಾರಿ ತಿಂಗಳಿಗೆ 3 ರರಿಂದ 5 ಪ್ರತಿಶತ ಬಡ್ಡಿ ಪಡೆಯುತ್ತಿರುವ ವಾತಾವರಣದಲ್ಲಿ ಬ್ಯಾಂಕುಗಳು ವ್ಯಾಪಾರ ಮಾಡಬೇಕು. ಆ ವಾತಾವರಣದಲ್ಲಿ ಸರಕಾರದ ಆದೇಶದ ಮೇರೆಗೆ ಕಡಿಮೆ ಬಡ್ಡಿ ದರದಲ್ಲಿ - ಕೃಷಿಗೆ ವರ್ಷಕ್ಕೆ 7 ಪ್ರತಿಶತ ಬಡ್ಡಿ, ಹಾಗೂ ಮಿಕ್ಕ ಸಾಲಗಳಿಗೂ ಪಿ.ಎಲ್.ಆರ್ - ಅತ್ಯುತ್ತಮ ಗ್ರಾಹಕರಿಗೆ ನೀಡುವ - ದರದಲ್ಲಿ ನೀಡಬೇಕು. ಸಾಲದ ಮೊತ್ತ ಸಣ್ಣದು. ಇದಕ್ಕಾಗುವ ಕೆಲಸ ಹೆಚ್ಚಿನದು. ಈ ಕೆಲಸವನ್ನು ಮಾಡಲು ಯಾರಿಗೆ ಆಸಕ್ತಿಯಿರಬಹುದು....


ಬ್ಯಾಂಕಿನ ಉನ್ನತಾಧಿಕಾರಿಗಳಾದ ಚೇರ್ಮನ್ನರ ದೃಷ್ಟಿಯಿಂದ ನೋಡಿದರೆ ಅವರ ಕೆಲಸವೂ ಕಷ್ಟದ್ದೇ. ಉದಾರೀಕರಣದ ನಂತರ ಅವರುಗಳು ತಮ್ಮ ಬ್ಯಾಂಕುಗಳ ಲಾಭಾಂಶವನ್ನೂ ಗಮನದಲ್ಲಿಡುತ್ತಾ - ಷೇರ್ ಬಜಾರಿನಲ್ಲಿ ತಮ್ಮ ಬ್ಯಾಂಕಿನ ಕಿಮ್ಮತ್ತು ಆರಕ್ಕೇಳುತ್ತಿದೆಯೋ, ಮೂರಕ್ಕಿಳಿಯುತ್ತಿದೆಯೋ - ಗಮನಿಸುತ್ತಲೇ, ಸರಕಾರಕ್ಕೆ ವಾರ್ಷಿಕ ಲಾಭಾಂಶವನ್ನು ನೀಡುತ್ತಲೇ ಬಡವರ ಸೇವೆಯನ್ನು ಲಾಭರಹಿತವಾಗಿ ಮಾಡಬೇಕಿದೆ. ಈ ಎಲ್ಲದರ ಬ್ಯಾಂಕಿಗೂ ಅದರ ಗ್ರಾಹಕರಿಗೂ ಇರುವ ಪತಿ-ಪತ್ನಿಯ ಸಂಬಂಧದ ನಡುವೆ ಸರಕಾರ ಮೂಗು ತೂರಿಸಿ ಸಾಲಮನ್ನಾದಂತಹ ಕಾರ್ಯಕ್ರಮಗಳಿಂದ ಉಂಟುಮಾಡುವ ವಿರಸವನ್ನೂ ಮೀರಿ ಕೆಲಸ ಮಾಡಬೇಕಿದೆ. ಈ ಸರ್ಕಸ್ಸು ಸರಳವಾದದ್ದೇನೂ ಅಲ್ಲ. ಒಮ್ಮೆ ಖಾಸಗಿಯಾಗಿ ರಾಷ್ಟ್ರೀಕೃತ ಬ್ಯಾಂಕಿನ ಅಧ್ಯಕ್ಷರೊಬ್ಬರು ರಿಜರ್ವ್ ಬ್ಯಾಂಕಿನ ಉಪ-ಗವರ್ನರ್ ಗೆ "ನಮಗೆ ಗ್ರಾಮೀಣ ಗ್ರಾಹಕರಿಂದ 16 ಪ್ರತಿಶತ ಬಡ್ಡಿ ಪಡೆಯಲು ಬಿಟ್ಟರೆ ನಾವುಗಳು ನೀವು ಹೇಳಿದಷ್ಟು ಸಾಲ ಕೊಡುವುದೇ ಅಲ್ಲದೇ ಬಂದ ಪ್ರತೀ ಗ್ರಾಹಕರಿಗೂ ಚಹಾ ಕುಡಿಸುತ್ತೇವೆ." ಎಂದು ಹೇಳಿದ್ದನ್ನು ನಾನು ಕಂಡಿದ್ದೆ. ಇದರ ಅರ್ಥವಿಷ್ಟೇ - ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನು ಬಿಟ್ಟರೆ, ನಮ್ಮನ್ನು ಮುಕ್ತವಾಗಿ ಮಾರುಕಟ್ಟೆಯ ಸೂತ್ರಗಳ ಆಧಾರದ ಮೇಲೆ ವ್ಯಾಪಾರ ಮಾಡಲು ಬಿಡಿ. ಹೀಗೆ ಲಾಭವೇ ಮಾಡದಂತಹ ವ್ಯಾಪಾರವನ್ನು ನಾವು ಬ್ಯಾಂಕುಗಳ ಮೇಲೆ ಹೇರಿ ತಮಾಷೆ ನೋಡುತ್ತಿದ್ದೇವೆ.
ಚೇರ್ಮನ್ನರ ವಿಷಯ ಒತ್ತಟ್ಟಿಗಿಟ್ಟು ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್ ಅಧಿಕಾರಿಯ ದೃಷ್ಟಿಯಿಂದ ನೋಡಿದರೂ ನಮಗೆ ಕಾಣುವ ಚಿತ್ರ ಅದ್ಭುತವಾದದ್ದೇನೂ ಅಲ್ಲ. ಗ್ರಾಮೀಣ ಪ್ರಾಂತದ ಶಾಖೆಗಳಲ್ಲಿ ಕೆಲಸಮಾಡುವ ಅಧಿಕಾರಿಗಳು ವರ್ಗಾವಣೆಯ ನೀತಿಯಿಂದಾಗಿ, ಬಹುತೇಕ ಹೊರಗಿನಿಂದ ಬಂದವರಾಗಿರುತ್ತಾರೆ. ಗ್ರಾಮೀಣ ಶಾಖೆಗಳಲ್ಲಿ ಇಬ್ಬರು ಅಥವಾ ಮೂವ್ವರು ಉದ್ಯೋಗಿಗಳಿರುತ್ತಾರೆ. ಅಲ್ಲಿ ಸಣ್ಣ ಮೊಬಲಗಿನ ಸಾವಿರಾರು ವ್ಯವಹಾರಗಳಿರುತ್ತವೆ. ಜೊತೆಗೆ ಬಹುತೇಕ ಪ್ರದೇಶಗಳಲ್ಲಿ ಸುತ್ತಮುತ್ತಲ ಪ್ರಾಂತದಲ್ಲಿ ಅದು ಯಾವುದೇ ಬ್ಯಾಂಕಿನ ಏಕೈಕ ಶಾಖೆಯಾಗಿರುತ್ತಾದ್ದರಿಂದ - ಆ ಪ್ರಾಂತದ ಎಲ್ಲ ಹಣವೂ - ಅಂಚೆ ಕಛೇರಿ, ಪಂಚಾಯ್ತಿಯಿಂದ ಹಿಡಿದು ನರೇಗಾದವರೆಗೂ - ಆ ಶಾಖೆಯ ಮೂಲಕವೇ ಹರಿಯುತ್ತದೆ. ಇಷ್ಟೇ ಆ ಅಧಿಕಾರಿಯ ತೊಂದರೆಯೆಂದರೂ ತಪ್ಪಾದೀತು. ಆತನ ಅನೇಕ ಗ್ರಾಹಕರು ಅನಕ್ಷರಸ್ಥರು. ಅವರಿಗೆ ವ್ಯವಹಾರವನ್ನು ವಿವರಿಸುವುದಲ್ಲದೇ, ಅವರುಗಳ ಪತ್ರಗಳನ್ನೂ ತಾನೇ ತುಂಬಿಸಬೇಕು. ಒಂದು ರೀತಿಯಲ್ಲಿ - ರೋಗಿಗೆ ಟ್ರೀಟ್ಮೆಂಟ್ ಕೊಡುತ್ತಿರುವ ವೈದ್ಯರಂತೆ, ತನ್ನ ಗ್ರಾಹಕನೊಂದಿಗೆ ವರ್ತಿಸಬೇಕು.

ಈ ಎಲ್ಲ ಮಾಡುವ ಆ ಅಧಿಕಾರಿಗೆ ದಸರಾ-ದೀಪಾವಳಿಗೂ ರೀಪ್ಲೇಸ್ಮೆಂಟ್ ಇಲ್ಲವೆನ್ನುವ ಕಾರಣವಾಗಿ ರಜೆ ಸಿಗುವುದಿಲ್ಲ. ಆ ಬಡಪಾಯಿ ಅಧಿಕಾರಿ ಮಕ್ಕಳ ವಿದ್ಯಾಭ್ಯಾಸವೆಂದು ಹೆಂಡತಿ ಮಕ್ಕಳನ್ನು ನಗರದಲ್ಲಿಯೇ ಬಿಟ್ಟು, ಡಬಲ್ ಖರ್ಚು ಮಾಡುತ್ತಾ ಅಥವಾ ಅಪ್-ಡೌನ್ ಮಾಡುತ್ತಾ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸಬೇಕು. ಈ ಎಲ್ಲವನ್ನೂ ಯೋಚಿಸಿದಾಗ - ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿರುವ ಸಾಧನೆ ಯಾವ ಜಾದೂವಿಗಿಂತಲೂ ಕಡಿಮೆಯಿಲ್ಲ. ಹಾಗೆ ನೋಡಿದರೆ - ಮೈಕ್ರೋಫೈನಾನ್ಸ್ ಮತ್ತು ಸ್ವ-ಸಹಾಯ ಗುಂಪುಗಳ ಹಣವನ್ನೂ ದಿನದಂತ್ಯದಲ್ಲಿ ಎಣಿಸಿ ಜೋಪಾನವಾಗಿಡುವವರು ಬ್ಯಾಂಕಿನವರೇ ಅಲ್ಲವೇ?
ಹಾಗಾದರೆ ಸಂಸ್ಥಾಗತ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲದ ಸೌಲಭ್ಯ - ಈಗಿರುವ ಸುಮಾರು 60 ಪ್ರತಿಶತದಷ್ಟೇ ಪಾಲಿನಲ್ಲಿ ಸ್ಥಗಿತಗೊಂಡಿರುತ್ತವೆಯೋ - ಅಥವಾ ಅದು ಬೆಳೆಯಬಹುದೋ.. ಸಾಕಷ್ಟು ಸುದ್ದಿ ಮಾಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಬಡ್ಡಿವ್ಯಾಪಾರಿಯನ್ನು ಹೊರಗಟ್ಟುತ್ತವೆಯೋ ಅಥವಾ ಬ್ಯಾಂಕುಗಳ ಧಂಧೆಯನ್ನು ಕಬಳಿಸುತ್ತವೆಯೋ ಅನ್ನುವುದು ಕುತೂಹಲದ ಮಾತು. ಬ್ಯಾಂಕುಗಳಿಂದಲೇ ದೊಡ್ಡ ಸಾಲವನ್ನ ಪಡೆದು - ಪುಟ್ಟಸಾಲಗಳನ್ನಾಗಿ ಹಂಚುತ್ತಿರುವ ಮೈಕ್ರೊಫೈನಾನ್ಸ್ ಸಂಸ್ಥೆಗಳು 18 ರಿಂದ 28 ಪ್ರತಿಶತ ಬಡ್ಡಿಯನ್ನು ಬಡವರಿಂದ ಪಡೆಯುತ್ತ ಬ್ಯಾಂಕುಗಳು ಮಾಡಲಾಗದ, ಆದರೆ ಮಾಡಲು ಸಾಧ್ಯವಿರಬಹುದಾದ ಕೆಲಸವನ್ನು ಮಾಡಿ ತೋರಿಸುತ್ತಿವೆ. ಆದರೂ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಸೇರಿ ಒಟ್ಟಾರೆ ರೂ.20,000 ಕೋಟಿಗಿಂತ ಕಡಿಮೆ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಅವರುಗಳು ಬ್ಯಾಂಕುಗಳಿಗೆ ಜೋರಾದ ಪೈಪೋಟಿ ನೀಡುವುದು ಕಷ್ಟದ ಮಾತೇ. ಅದೂ ಅಲ್ಲದೆ ಈ ಸಂಸ್ಥೆಗಳ ಬಡ್ಡಿದರ ಮತ್ತು ವಸೂಲಿ ವಿಧಾನಗಳನ್ನು ಕಂಡವರು ಇಂಥ ಸಂಸ್ಥೆಗಳನ್ನು ಸಂಸ್ಥಾಗತ ಬಡ್ಡಿವ್ಯಾಪಾರಿಗಳೆಂದೂ ಕರೆಯುತ್ತಾರೆ.
ಸಣ್ಣ ಮೊತ್ತದ ಸಾಲದಲ್ಲಿ ಬಡ್ಡಿಯ ಪಾತ್ರ ಹಿರಿದಾದದ್ದೇನೂ ಅಲ್ಲವೆನ್ನುವ ವಾದವನ್ನು ನನ್ನನ್ನೊಳಗೊಂಡು ಅನೇಕರು ಮಂಡಿಸಿದ್ದಾರೆ. ಅದರೂ ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿಹಾಕಿ ಮುಕ್ತಮಾರುಕಟ್ಟೆಯ ಅಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ. ಈ ಸಂಸ್ಥೆಗಳನ್ನು ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡಲು ಬಿಟ್ಟರೆ, ಪ್ರತೀ ಗ್ರಾಮೀಣ ಶಾಖೆಯಲ್ಲೂ ಐದಾರು ಉದ್ಯೋಗಿಗಳು ಹಾಗೂ ಪ್ರತೀ ಗ್ರಾಹಕನಿಗೂ ಒಂದು ಕಪ್ ಚಹಾ ಸಿಗುವ ದಿನಗಳು ದೂರವಿರಲಾರವು. ಆದರೆ ಬಡ್ಡಿ ದರವನ್ನೇ ಉಸಿರಾಡುವ - ಎರಡು ದಶಕಗಳಿಗೊಮ್ಮೆ ಸಾಲಮನ್ನಾ ಮಾಡುವ ಸರಕಾರಕ್ಕೆ ತಿಳಿಹೇಳುವವರು ಯಾರು?
ಹೀಗೆ ಬ್ಯಾಂಕುಗಳಿಗಾಗುವ ಖರ್ಚನ್ನು ಸಂಪಾದಿಸುವ ಸ್ಥರಕ್ಕೆ ಬಡ್ಡಿದರ ಹೆಚ್ಚಿದರೂ ಬಡಗ್ರಾಹಕರು ಸಾಲಪಡೆಯುವುದನ್ನು ಮುಂದುವರೆಸುತ್ತಾರೆಂಬ ವಾದ ಪ್ರಶ್ನಾತೀತವೇನದ ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿರುವ ಅಧ್ಯಯನದ ಆಧಾರದ ಮೇಲೆ ದಹೇಜಿಯಾ, ಮಾಂಟಗಮರಿ ಮತ್ತು ಮುರ್ಡೋಕ್ ಈ ವಾದವನ್ನು ಪ್ರಶ್ನಿಸುತ್ತಾರೆ. ಅವರ ಪ್ರಕಾರ - ಹೆಚ್ಚಿದ ಬಡ್ಡಿದರದಲ್ಲೂ ಜನ ಸಾಲ ಪಡೆಯಲು ತಯಾರಿರಬಹುದಾದರೂ ಸಂಸ್ಥೆಯ ಗ್ರಾಹಕ ಸಮೂಹ ಕಡುಬಡವರಿಂದ ತುಸು ದೂರ ಹೋಗುತ್ತಿರುವುದನ್ನು ಅವರುಗಳು ದಾಖಲಿಸಿದ್ದಾರೆ. ಸಂಸ್ಥಾಗತ ಮೂಲಗಳಿಂದ ಕೊಡುವ ಸಾಲದ ಪಾಲು ಒಟ್ಟಾರೆ 80-85 ಪ್ರತಿಶತ ತಲುಪುವವರೆಗೂ ರಾಜಕಾರಣಿಗಳು - ಸರಕಾರೀ ಯಂತ್ರಾಂಗದವರೂ ಈ ಪೇಪರನ್ನು ಓದದಿರುವುದೇ ಒಳಿತು.


No comments:

Post a Comment