Sunday, March 3, 2013

ರುದ್ರಮಾತಾದ ರಾಮಜೀಭಾಯಿ


ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!

ರುದ್ರಮಾತಾ ಅನ್ನುವುದು ಹೊಸದಾಗಿ - ಭೂಕಂಪದ ನಂತರ ನಿರ್ಮಾಣವಾದ ಗ್ರಾಮ. ಈ ಗ್ರಾಮದ ಮನೆಗಳೆಲ್ಲಾ ಗೋಳಾಕಾರ! ೧೯ನೇ ಶತಮಾನದಲ್ಲಿ ಆದ ಭೂಕಂಪದ ನಂತರ ಉತ್ತರ ಕಛ್ ಪ್ರದೇಶದಲ್ಲಿ ಈ ಗೋಳಾಕಾರದ ಮನೆಗಳು ನಿರ್ಮಾಣವಾದುವಂತೆ. ಯಾವುದೇ ಕೋನವಿಲ್ಲದ ಕಟ್ಟಡ ಭೂಕಂಪವನ್ನು ತಡೆದು ನಿಲ್ಲುತ್ತದೆ ಅನ್ನುವ ಮಾತನ್ನು ಅವರುಗಳು ಕಂಡುಕೊಂಡರಂತೆ. ಹೀಗಾಗಿ ಈ ಬಾರಿಯ ಭೂಕಂಪಾನಂತರ ಬನ್ನಿ ಪ್ರದೇಶದಲ್ಲೂ ಇದೇ ರೀತಿಯ ಗೋಳಾಕಾರದ ಮನೆಗಳು. ಒಂದೇ ಕೋಣೆ ಹಾಗೂ ಹಂಚಿನ ಸೂರು. ಈ ಸೂರಿನ ಕೆಳಗೆ ರಾಮಜಿಭಾಯಿ, ಅವನ ತಮ್ಮ, ಅಮ್ಮ, ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದಾರೆ.


ರಾಮಜಿಭಾಯಿ ಚರ್ಮಶಿಲ್ಪಿ. ಆದರೆ ಎಲ್ಲ ಚರ್ಮೋದ್ಯೋಗದವರೂ ಮಾಡುವಂತೆ ಬ್ಯಾಗುಗಳು, ಚಪ್ಪಲಿಗಳು, ಹೀಗೆ ಭಿನ್ನ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದೆಯೇ ಒಂದೇ ಪದಾರ್ಥವನ್ನು ಮಾಡುವ ’ಸ್ಪೆಷಲೈಸೇಷನ್’ ಹೊಂದಿದ್ದಾನೆ. ಈತ ತಯಾರಿಸುವ ಆ ಪದಾರ್ಥವೆಂದರೆ ಕುದುರೆಗಳಿಗೆ ಜೀನು, ಲಗಾಮು ತಯಾರಿಸುವುದು. ಕುದುರೆಯ ಬೆನ್ನಿಗೆ ಹಾಕುವ ಜೀನು, ಮತ್ತು ಅದಕ್ಕೆ ಹೊಂದುವ ಮಿಕ್ಕ ಚರ್ಮದ ಪರಿಕರಗಳನ್ನು ರಾಮಜಿಭಾಯಿ ತಯಾರಿಸುತ್ತಾನೆ. ಮಿಕ್ಕ ಪ್ರಾಂತದಲ್ಲಾದರೆ ಜೀನುಗಳು ಕುದುರೆಯ ಬೆನ್ನಮೇಲೆ ಸರಿಯಾಗಿ ಕುಳಿತುಕೊಳ್ಳುತ್ತದೆಯೇ ಹಾಗೂ ಅದರ ಮೇಲೆ ಸವಾರ ಕುಳಿತುಕೊಳ್ಳಲು ಆರಾಮವಾಗಿದೆಯೇ ಎಂದು ಪರೀಕ್ಷಿಸುತ್ತಾರಾದರೂ, ಈ ಪ್ರಾಂತದಲ್ಲಿ ಅದು ನೋಡಲು ಅಂದವಾಗಿದೆಯೇ ಹಾಗೂ ಅದರ ಮೇಲೆ ಮಾಡಿರುವ ಕೈಕುಸುರಿಕೆಲಸ ಸರಿಯಿದೆಯೇ ಎನ್ನುವುದನ್ನೂ ನೋಡುತ್ತಾರೆ.

ಒಂದು ಜೀನನ್ನು ತಯಾರಿಸಬೇಕಾದರೆ ಅದರ ಚರ್ಮದ ಕೆಲಸ ಮುಗಿಸಿ, ಬಂಗಾರ ಹಾಗೂ ಬೆಳ್ಳಿಯ ಬಣ್ಣದ ಡಿಸೈನನ್ನು ಅದಕ್ಕೆ ಹೆಣೆಯ ಬೇಕು. ಈ ಕುಸುರಿಕೆಲಸಕ್ಕೆ ಸಮಯ ಹಿಡಿಯುತ್ತದೆ. ಭುಜ್‌ನಿಂದ ದೊಡ್ಡ ಬಂಗಾರ ಬಣ್ಣದ ಪ್ಲಾಸ್ಟಿಕ್ ಷೀಟುಗಳನ್ನು ಕೊಂಡುತಂದು ಅವುಗಳಲ್ಲಿ ಎರಡು ಮಿ.ಮಿ ಅಗಲದ ’ದಾರ’ವನ್ನು ಮಾಡಿಕೊಂಡು ಅದರಲ್ಲಿ ರಾಮಜಿಭಾಯಿ ಡಿಸೈನುಗಳನ್ನು ಹಣೆಯುತ್ತಾನೆ. ಒಂದು ಜೀನು ತಯಾರಿಸಲು ಅವನಿಗೆ ಸುಮಾರು ಒಂದು ತಿಂಗಳು ಹಿಡಿಯುತ್ತದೆ. ಪ್ರತಿ ಜೀನೂ ಸುಮಾರು ಹತ್ತು ವರ್ಷಕಾಲ ಬಾಳಿಕೆ ಬರುತ್ತದಂತೆ. ಒಂದು ಜೀನನ್ನು ತಯಾರಿಸಲು ಬೇಕಾದ ಸಾಮಾನು - ತೊಗಲು, ಇತರ ಅಲಂಕಾರದ ವಸ್ತುಗಳು ಸುಮಾರು ಎರಡು ಸಾವಿರ ರೂಪಾಯಿಯ ಖರ್ಚನ್ನು ಹೊಂದಿರುತ್ತದೆ. ಒಂದು ತಿಂಗಳುಕಾಲ ಇಬ್ಬರು ಅದರ ಮೇಲೆ ಕೆಲಸ ಮಾಡುತ್ತಾರೆ. ಅದು ಹತ್ತುಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಅಂದರೆ ಶ್ರಮಕ್ಕೆ ನಾವು ಲೆಕ್ಕ ಕಟ್ಟದಿದ್ದರೆ ಆ ಸಂಸಾರಕ್ಕೆ ನಿವ್ವಳ ಆದಾಯ ಎಂಟು ಸಾವಿರ ರೂಪಾಯಿ. ರಾಮಜಿಭಾಯಿ ಸಂತೋಷದಿಂದ ನನ್ನ ಸಂಸಾರ ನಡೆಸಲು ಇಷ್ಟು ಸಾಕು ಅನ್ನುತ್ತಾನೆ.


ನಮ್ಮ ವ್ಯಾಪಾರದ ಮಕ್ಕಾದಲ್ಲಿ ಈ ಸಮಸ್ಯೆಯನ್ನು ನಿರೂಪಿಸಿದರೆ ಅದರ ವಿಶ್ಲೇಷಣೆ ನಡೆಯುವುದು ಈ ರೀತಿಯಾಗಿ: ಕುದುರೆಗಳಿಗೆ ಅಲಂಕಾರದ ಜೀನುಗಳನ್ನು ತಯಾರಿಸುವ ಕಾಯಕವನ್ನು ಸನ್‍ಸೆಟ್ [ಅಂದರೆ ಹೆಚ್ಚು ಭವಿಷ್ಯವಿಲ್ಲದ ಸೂರ್ಯಾಸ್ತದತ್ತ ಹೋಗುತ್ತಿರುವ] ಕಾಯಕ ಎನ್ನಬಹುದು. ಅದಕ್ಕೆ ಕಾರಣಗಳನ್ನು ಅಂಕಿ ಸಂಖ್ಯೆಗಳೊಂದಿಗೆ ನಿರೂಪಿಸಲೂಬಹುದು - ಒಟ್ಟಾರೆ ಕುದುರೆಗಳ ಸಂಖ್ಯೆ - ಅವುಗಳಲ್ಲಿ ರೇಸಿಗೆ, ಸೈನ್ಯಕ್ಕೆ, ಪೊಲೀಸ್ ಪಡೆಗೆ ಬಳಸುತ್ತಿರುವ ಕುದುರೆಗಳ ಸಂಖ್ಯೆ ಎಷ್ಟು - ಆಚೆ ಖಾಸಗಿಯಾಗಿ ಇರುವ ಕುದುರೆಗಳೆಷ್ಟು ಎನ್ನುವುದನ್ನು ಲೆಕ್ಕ ಕಟ್ಟಿಬಿಡಬಹುದು. ಈಗ ರಾಜರೂ ರಾಜ್ಯಗಳೂ, ಕುದುರೆ ಸಾರೋಟುಗಳೂ, ಟಾಂಗಾಗಳೂ ಇಲ್ಲದ್ದರಿಂದ - ಖಾಸಗೀ ಮಾಲೀಕತ್ವದಲ್ಲಿ ಇರುವುದು ಕೆಲವಷ್ಟೇ ಕುದುರೆಗಳೆಂದೂ ನಿರೂಪಿಸಬಹುದು. ಇದರ ಮೇಲೆ ಒಂದು ಕುದುರೆಯ ಜೀನು ಹತ್ತು ವರ್ಷಕಾಲ ಬಾಳುವುದಾದರೆ ರಾಮ್‍ಜಿಭಾಯಿ ಜೀವನವನ್ನು ಇದೇ ರೀತಿ ಬೆಳೆಸಲು ಎಷ್ಟು ಕುದುರೆಗಳು ಆ ಪ್ರಾಂತದಲ್ಲಿರಬೇಕು ಅನ್ನುವುದನ್ನೂ ಲೆಕ್ಕ ಕಟ್ಟಬಹುದು.

ಆದರೆ ಈ ವಿಶ್ಲೇಷಣೆಯನ್ನು ಹಿಡಿದು ಹೊರಟರೆ, ರಾಮಜಿಭಾಯಿ ಜೀನುಗಳನ್ನು ತಯಾರಿಸುವುದನ್ನು ಬಿಟ್ಟು ತಕ್ಷಣವೇ ಡೈವರ್ಸಿಫೈ ಮಾಡಬೇಕು. ಯಾವುದಾದರೂ ಉತ್ತಮ ಡಿಸೈನರ್ ಜೊತೆ ಸೇರಿ, ಹೆಂಗಸರ ಪರ್ಸುಗಳನ್ನು ತಯಾರಿಸಿ ಅದಕ್ಕೆ ಕುಸುರಿ ಕೆಲಸವನ್ನು ಮಾಡಬೇಕು - ತೊಗಲಿನ ವ್ಯಾಪಾರದಲ್ಲಿ ಭವಿಷ್ಯವಿರುವುದೇ ಅಲ್ಲಿ. ಹೀಗೆ ನಾವುಗಳು ಉಪದೇಶ ನೀಡಲು ಸಾಧ್ಯ.


ಆದರೆ ರಾಮಜಿಭಾಯಿಗೆ ಇದು ಯಾವುದೂ ಬೇಕಿಲ್ಲ. ತಿಂಗಳಿಗೊಂದು ಜೀನು ತಯಾರಿಸುತ್ತೇನೆ. ಅದು ಮಾರಾಟವಾಗುತ್ತದೆ. ನಾನು ಸಂತೋಷದಿಂದ ಇದ್ದೇನೆ ಅನ್ನುತ್ತಾನೆ. ಆ ಪ್ರಾಂತದಲ್ಲಿ ಒಂದೈವತ್ತು ಕುದುರೆಗಳಿವೆ, ಅವುಗಳನ್ನು ಶೋಕಿಗಾಗಿ ಜನ ಸಾಕಿಕೊಂಡಿದ್ದಾರೆ. ತಾನು ಕುದುರೆಯ ಜೀನುಗಳನ್ನು ಮಾಡುವುದನ್ನು ಜನರು ಬಲ್ಲರು. ಹೀಗಾಗಿ ಜೀನುಗಳಿಗೆಂದೇ ರಾಮಜಿಭಾಯಿಯ ಬಳಿ ಬಂದು ಅದು ತಯಾರಾದ ಕೂಡಲೇ ತೆಗೆದೊಯ್ಯುವ ಗಿರಾಕಿಗಳಿದ್ದಾರೆ. ರಾಮಜಿಭಾಯಿಯ ಪ್ರಕಾರ ತನ್ನ ಕಲೆಗೆ ಸಾಕಷ್ಟು ಗ್ರಾಹಕರೂ, ಬೆಲೆಯೂ, ಮನ್ನಣೆಯೂ, ದೊರೆತಿದೆ. ಹೀಗಾಗಿ ಬೇರೇನನ್ನೂ ಮಾಡಬೇಕೆಂದಾದಲೀ, ತಾನು ಮಾಡುವ ಜೀನುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಹೊರಗೆ ಮಾರಟ ಮಾಡಬೇಕೆಂದಾಗಲೀ ಅವನಿಗನ್ನಿಸುವುದಿಲ್ಲ.ಬರುವ ಸಂಪಾದನೆಯಲ್ಲಿ ಸಂತೋಷದಿಂದಿರುವ ರಾಮಜಿಭಾಯಿಯ ಸಂತೃಪ್ತಿ ಇನ್ನಷ್ಟು ಜಾಗಗಳಲ್ಲಿ ಇದ್ದರೆ ನಮ್ಮ ದೇಶದ ಸ್ವಯಂಸೇವಾ ಸಂಸ್ಥೆಗಳ ಗತಿಯೇನು ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಎಲ್ಲರೂ ರಾಮಜಿಭಾಯಿಯ ಹಾಗಿದ್ದರೆ ಕುದುರೆಗಳನ್ನು ಸಾಕುವ ಶೊಕಿಯೂ ಇರುವುದಿಲ್ಲ - ಅವುಗಳಿಗೆ ಜೀನುಗಳನ್ನು ಕೊಳ್ಳುವ ಶೋಕಿಯೂ ಇರುವುದಿಲ್ಲವೇನೋ! ಭೂಕಂಪದಿಂದ ಮನೆ ಕಳೆದುಕೊಂಡು, ತನ್ನು ಊರಿನಿಂದ ಈ ಹೊಸದಾಗಿ ನಿರ್ಮಾಣಗೊಂಡ ರುದ್ರಮಾತಾಗೆ ಬಂದು ನೆಲೆಸಿರುವ ರಾಮಜಿಭಾಯಿ ನಮಗೆ ಸಂತೋಷದಿಂದ ಜೀವಿಸುವ ಪಾಠಗಳನ್ನೂ ಸಂತೃಪ್ತಿಯನ್ನೂ ಕಲಿಸುತ್ತಾನೆ. ಅವನ ಸಂತೋಷಕ್ಕಾಗಿ ಅವನು ಎಲ್ಲೂ ಹೋಗಬೇಕಿಲ್ಲ. ತನಗೆ ತಿಳಿದಿರುವ ಕಲೆಯನ್ನು ಅಭ್ಯಸಿಸುತ್ತಾ ಇದ್ದಲ್ಲಿ, ಅವನಿಗವಶ್ಯವಿದ್ದಷ್ಟು ಮಾರುಕಟ್ಟೆ ಅವನನ್ನೇ ಹುಡುಕಿ ಬರುತ್ತದೆ. ತಿಂಗಳಿಗೆ ಹತ್ತು ಸಾವಿರ ರೂಪಾಯಿಯ ವ್ಯಾಪಾರ ನನಗೆ ಸಾಕು ಅನ್ನುವ ತೃಪ್ತಿ ಹೊಂದಿದಾಗ ಸಮಸ್ಯೆಗಳೇ ಕಾಣಿಸುವುದಿಲ್ಲ. ಇಂಥ ಖುಷಿಯ ಜೀವನ ನಡೆಸುತ್ತಿರುವ ತೃಪ್ತರನ್ನು ಉದ್ಧಾರ ಮಾಡುವ ತೆವಲು ನಮಗೆ - ಸ್ವಯಂ ಸೇವಾ ಸಂಸ್ಥೆ, ವಿದ್ಯಾಸಂಸ್ಥೆಗಳಿಗೆ - ಯಾಕೆ ಅನ್ನುವುದೂ ಒಂದು ಆಸಕ್ತಿಕರ ವಿಚಾರವೇ.

ರಾಮಜಿಭಾಯಿ ಹಾಗೂ ಇತರ ಕುಶಲ ಕರ್ಮಿಗಳನ್ನು ಮಾರುಕಟ್ಟೆಗಳೊಂದಿಗೆ ಯಾಕೆ ಸೇರಿಸಬೇಕು ಅನ್ನುವ ಪ್ರಶ್ನೆಯನ್ನು ಆಗಾಗ ನಾವು ಕೇಳಿಕೊಳ್ಳಬೇಕು. ನಾಳೆ ಜೀನುಗಳನ್ನು ತೊಡಿಸಲು ಕುದುರೆಗಳೇ ಇಲ್ಲವಾದಲ್ಲಿ ರಾಮಜಿಭಾಯಿ ಉಪವಾಸ ಸಾಯುವುದಿಲ್ಲ. ಬದಲಿಗೆ ಆ ಕಾಲಕ್ಕೆ ತಕ್ಕ ಯಾವುದಾದರೂ ಚರ್ಮದ ಕೆಲಸವನ್ನು ಕೈಗೊಂಡು ತನ್ನ ಕುಶಲತೆಯಾಧಾರದ ಮೇಲೆಯೇ ಜೀವಿಸಬಲ್ಲ ಶಕ್ತಿ ಅವನಿಗಿದೆ. ಕುದುರೆಗಳಿಲ್ಲದಿದ್ದರೆ ಆ ಪ್ರಾಂತದಲ್ಲಿ ಒಂಟೆಗಳಿವೆ. ಏನೂ ಇಲ್ಲದಿದ್ದಾಗ ಲೂಯಿ ವುಟ್ಟೋನ್ ಜೊತೆ ಸೇರಿ ಹೆಂಗಸರ ಪರ್ಸುಗಳನ್ನೂ ಆತ ಮಾಡಬಲ್ಲನೇನೋ.

ಹಿಂದೊಮ್ಮೆ ಕಂಜರಿ ಗ್ರಾಮದಲ್ಲಿ ಕೆಲಸಮಾಡುವ ಕುಂಬಾರ ದಯಾಭಾಯಿ ಪ್ರಜಾಪತಿಯ ಜೊತೆ ಹರಟುತ್ತಾ ನಾನು ಕೇಳಿದ್ದೆ: "ಇಲ್ಲಿ ನೀನು ಮಾರಾಟ ಮಾಡುವು ಈ ಹುಕ್ಕಾ, ದಿಯಾ, ಮತ್ತು ಮಿಕ್ಕ ಮಡಿಕೆಗಳಿಗೆ ಟೆರ್ರಾಕೋಟಾ ಅನ್ನುವ ಹೆಸರಿಟ್ಟು ಇಲ್ಲಿಂದ ಕೇವಲ ೪೦ ಕಿಲೋಮೀಟರ್ ದೂರದಲ್ಲಿರುವ ಬರೋಡಾದಲ್ಲಿ ಎಷ್ಟಕ್ಕೆ ಮಾರುತ್ತಿದ್ದಾರೆ ಗೊತ್ತಾ?" - ಅದಕ್ಕೆ ದಯಾಭಾಯಿ ಉತ್ತರಿಸಿದ್ದ: "ಗೊತ್ತು. ನಾನು ಇಲ್ಲಿ ಮಾರಾಟ ಮಾಡುವ ಬೆಲೆಗೆ ಮೂರರಷ್ಟು ಬೆಲೆಯನ್ನು ಆತ ಪಡೆಯುತ್ತಾನೆ. ಅದು ವಿದೇಶಕ್ಕೆ ಹೋದರೆ ಇನ್ನೂ ಹೆಚ್ಚು ಹಣ. ಆದರೆ ನಾನು ಕುಂಬಾರ, ನನಗಿರುವ ಸಮಯದಲ್ಲಿ ನಾನು ಮಣ್ಣಿನ ಮೇಲೆ ಕೆಲಸ ಮಾಡಲೋ - ಮಾರುಕಟ್ಟೆ ಅಲೆಯಲೋ? ಹೀಗೆ, ಇಲ್ಲಿ ಕೂತು ನನ್ನ ಜೀವನಕ್ಕೆ ಅಗತ್ಯವೆನ್ನುವ ರೀತಿಯಲ್ಲಿ ನನ್ನ ಶ್ರಮಕ್ಕೆ ಫಲ ಸಿಗುವ ರೀತಿಯಲ್ಲಿ ನಾನು ಬೆಲೆ ಕಟ್ಟುತ್ತೇನೆ. ಈ ಬೆಲೆಗೆ ಯಾರಾದರೂ ಕೊಂಡರೆ ನನ್ನ ಜೀವನ ಸಾಗುತ್ತದೆ. ಆ ನಂತರ ಅವರೇನು ಮಾಡುತ್ತಾರೆ ಅನ್ನುವುದನ್ನು ಯೋಚಿಸುತ್ತಾ ತಲೆ ಕೆಡಿಸಿಕೊಂಡರೆ ನನ್ನ ಕಾಯಕ ಎಲ್ಲಿಗೆ ಹೋಗುತ್ತದೋ ಯೋಚಿಸಿ!"

ಹೀಗೆ ರಾಮಜಿಭಾಯಿ, ದಯಾಭಾಯಿಗಳನ್ನು ಭೇಟಿಯಾದಾಗ - ಮಹಾತ್ಮಾ ಗಾಂಧಿ ಹೇಳಿದ ನೀಡ್ [ಅವಶ್ಯಕತೆ]ಗೂ ಗ್ರೀಡ್ [ದುರಾಸೆ]ಗೂ ಇರುವ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಕಾಣುತ್ತದೆ.No comments:

Post a Comment