Sunday, February 14, 2010

ಯುದ್ಧಾನಂತರದ ಅಫಘಾನಿಸ್ತಾನ - ವಿರೋಧಾಭಾಸದ ನಡುವೊಂದಿಷ್ಟು ದೇಶಭಕ್ತಿ


ಅಫಘಾನಿಸ್ತಾನದ ಉಸ್ತುವಾರಿ ತಾಲಿಬಾನ್ ಕೈಯಿಂದ ಸ್ಥಳೀಯರ, ಪ್ರಜಾಪ್ರತಿನಿಧಿಗಳ ಕೈಗೆ ಸೇರಿ ಹಲವು ವರ್ಷಗಳಾಗಿವೆ. ಹಾಗೆಂದು ಆ ದೇಶದ ಸಂಪೂರ್ಣ ಸೂತ್ರಗಳು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಳೆಯ ಯುದ್ಧಕೋರರು, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಮಾಫಿಯಾ ಹಾಗೂ ಮತಾಂಧ ಮೂಲಭೂತವಾದಿಗಳು ಇನ್ನೂ ದೇಶದ ಬಹಳಷ್ಟು ಪ್ರಾಂತಗಳಲ್ಲಿ ಇದ್ದಾರೆ. ಆದರೂ ಆ ದೇಶದಲ್ಲಿ ಕೆಲವು ಗಮ್ಮತ್ತಿನ ವಿಚಾರಗಳು ನನಗೆ ಕಂಡುವು.

ಮೊದಲಿಗೆ ಅಫಘಾನಿಸ್ತಾನಕ್ಕೆ ವೀಸಾ ಸಿಗುವುದು, ಅಮೆರಿಕಕ್ಕೆ ಹೋಗಲು ವೀಸಾ ಸಿಕ್ಕಷ್ಟೇ ಕಷ್ಟದ ಮಾತು! ಆ ದೇಶದ ಕಾನೂನಿನ ಪ್ರಕಾರ ಮೊದಲಿಗೆ ನಮ್ಮನ್ನು ಕರೆಸಿಕೊಳ್ಳುವವರು ಅಲ್ಲಿನ ಆಂತರಿಕ ವ್ಯವಹಾರಗಳ ಮಂತ್ರಾಲಯದಿಂದ ಒಂದು ಫ್ಯಾಕ್ಸ್ ಕಳಿಸಿ ಒಂದು ಸಂಖ್ಯೆಯನ್ನು ನಮಗೆ ಕೊಡುತ್ತಾರೆ. ಆ ಸಂಖ್ಯೆಯಿದ್ದರೆ ಮಾತ್ರ ಎಂಬಸಿಯೊಳಗೆ ಪ್ರವೇಶ. ಹಾಗೂ ಮಿಕ್ಕ ದೇಶಗಳಿಗೆ ಬಹಳಷ್ಟು ಬಾರಿ ಯಾರಾದರೂ ನಮ್ಮ ಪ್ರತಿನಿಧಿಗಳನ್ನು ಕಳಿಸಬಹುದಾದರೂ ಅಮೆರಿಕದ ಹಾಗೂ ಅಫಘಾನಿಸ್ಥಾನದ ಎಂಬಸಿಗಳಲ್ಲಿ ಮಾತ್ರ ನಾವುಗಳೇ ಖುದ್ದಾಗಿ ಹೋಗಬೇಕು. ಅಲ್ಲಿ ಮಾಡುವ ಸಂದರ್ಶನದ ಆಧಾರದ ಮೇಲೆ ವೀಸಾ ಸಿಗುತ್ತದೆ. ಯಾರು ತಮ್ಮ ದೇಶಕ್ಕೆ ಪ್ರವೇಶಿಸಬಹುದು-ಬಾರದು ಅನ್ನುವಲ್ಲಿ ವಿಪರೀತ ಎಚ್ಚರ ವಹಿಸುತ್ತಿರುವಂತೆ ಕಂಡರೂ, ತಂತ್ರಜ್ಞಾನದ ಉಪಯೋಗದಲ್ಲಿ ಮಾತ್ರ ಈ ದೇಶಗಳು ಅಜಗಜಾಂತರ. ಅಮೆರಿಕದ ವೀಸಾಕ್ಕೆ ತಯಾರಿ ಅವರ ವೆಬ್ ಸೈಟ್ ಮೂಲಕ ಮಾಡಬಹುದಾದರೂ, ಅಫಘಾನಿಸ್ತಾನ ದೇಶದ ವೆಬ್ ಸೈಟಿನಲ್ಲಿ ಏನು ಮಾಡಲೂ, ಕನಿಷ್ಟ ವಿವರಗಳನ್ನು ಪಡೆಯಲೂ ಸಾಧ್ಯವಿಲ್ಲ... ಹೋದಬಾರಿ ನಾನು ಕಾಬೂಲಿಗೆ ಹೋಗುವ ಯತ್ನದ ತಯಾರಿಯಾಗಿ ವೀಸಾಕ್ಕೆ ದೆಹಲಿಗೆ ಹೋದಾಗ ಒಂದು ದಿನ ಹೆಚ್ಚು ಅಲ್ಲೇ ಉಳಿಯಬೇಕಾಯಿತು. ಕಾರಣ: ಎಂಬಸಿಯ ಪ್ರಿಂಟರ್ ಕೆಟ್ಟಿದ್ದರಿಂದ ವೀಸಾ ಮುದ್ರಿಸಲು ಆಗಲಿಲ್ಲವಂತೆ. ನಾಳೆ ಬಾ ಎಂದರು...

ಅಫಘಾನಿಸ್ಥಾನದಂತಹ ಯುದ್ಧಪೀಡಿತ ಜಾಗದಲ್ಲಿ ಒಂದು ಸಂಸ್ಥಾಗತವಾದ ವಿತ್ತೀಯ ಏರ್ಪಾಟನ್ನು ಮಾಡುವುದು ಹೇಗೆ? ಮೂವತ್ತು ವರ್ಷಗಳಿಗೂ ಹೆಚ್ಚು ಹೋರಾಡುವುದೇ ಸಾಮಾನ್ಯ ಜೀವನವಾಗಿರುವ ಆ ದೇಶದವರಿಗೆ, ಇದ್ದಕ್ಕಿದ್ದ ಹಾಗೆ, ಸರಕಾರ, ತೆರಿಗೆ, ಬ್ಯಾಂಕು ಈ ಎಲ್ಲವನ್ನೂ ಒದಗಿಸಿಕೊಡಬೇಕೆಂದರೆ ಅದಕ್ಕೆ ಅವರುಗಳು ಒಗ್ಗಬೇಕೆಂದರೆ ಅದು ಸರಳವಾದ ಮಾತೇನೂ ಅಲ್ಲ. ಒಂದು ಹೊಸ ದೇಶವನ್ನು, ಹೊಸ ಸಂವಿಧಾನವನ್ನೂ, ಹೂಸ ಕಾನೂನುಗಳನ್ನು, ಹೊಸ ಹಣಕಾಸಿನ ವ್ಯವಸ್ಥೆಯನ್ನೂ ಏರ್ಪಾಟು ಮಾಡಬೇಕು.

ರಿಜರ್ವ್ ಬ್ಯಾಂಕಿನಂತಹ ಒಂದು ಬಲವಾದ ಕೇಂದ್ರೀಯ ವ್ಯವಸ್ಥೆ ಇಲ್ಲದಿದ್ದಾಗ, ಸ್ಥಳೀಯ ಕರೆಂಸಿಗೆಯನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಾಗದ ಎಲ್ಲ ಸವಾಲುಗಳೂ ನಮಗೆ ಆ ದೇಶದಲ್ಲಿ ಕಾಣಿಸುತ್ತವೆ. ಹೀಗಾಗಿಯೇ ಕಾಬೂಲಿನಲ್ಲಿ ಸ್ಥಳೀಯ ಕರೆಂಸಿ ಅಫಘನಿಯ ಜೊತೆಜೊತೆಗೇ ಭಾರತೀಯ ರೂಪಾಯಿಗಳೂ, ಡಾಲರುಗಳೂ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು. ರಸ್ತೆಯಲ್ಲಿ ನೋಟಿನ ಕಂತೆಯನ್ನೂ, ಟೆಲಿಫೋನ್ ಸಿಮ್ ಕಾರ್ಡುಗಳನ್ನೂ ಮಾರುವ ಜನರನ್ನು ನೋಡಬಹುದು. ಬಹಳ ಹಿಂದುಳಿದ ಜಾಗಕ್ಕೂ ಬಹಳ ವಿಕಸಿತ ಜಾಗಕ್ಕೂ ಇರುವ ಸಾಮ್ಯ ಹಣಕಾಸಿನ ಲಾವಾದೇವಿಯಲ್ಲಿ ನಾವು ಕಾಣಬಹುದು - ಯಾವುದೇ ವಿಕಸಿತ ದೇಶಗಳಂತೆಯೇ ಇಲ್ಲಿಯೂ ಇತರ ದೇಶದ ಕರೆಂಸಿಯನ್ನು ಸುಲಭವಾಗಿ ಪರಿವರ್ತಿಸಬಹುದು. ಆದರೆ ಇದಕ್ಕೆ ಕಾರಣ ಅವರ ಕೇಂದ್ರೀಯ ವ್ಯವಸ್ಥೆ ಬಲವಾಗಿಲ್ಲದ್ದೇ ಆಗಿದೆ!


ರಸ್ತೆಗಳಿಲ್ಲದಿರಬಹುದು, ನಲ್ಲಿಯಲ್ಲಿ ನೀರಿಲ್ಲದಿರಬಹುದು, ವಿದ್ಯುತ್ತಿನ ಸರಬರಾಜು ಅಷ್ಟಕ್ಕಷ್ಟೇ ಇರಬಹುದು, ಆದರೆ ಜಗತ್ತಿನ ಯಾವುದೇ ಹಿಂದುಳಿದ ಜಾಗವನ್ನು ನೋಡಿದರೂ, ಯಾವುದೇ ದೇಶವನ್ನ ನೋಡಿದರೂ ನಮಗೆ ಕಾಣಸಿಗುವುದು ಒಂದು ಅದ್ಭುತ ವಿಚಾರ. ಎಲ್ಲರ ಕೈಯಲ್ಲೂ ಒಂದಾದರೂ ಸೆಲ್ ಫೋನ್ ಇರುತ್ತದೆ. ತಮ್ಮ ಯೋಗ್ಯತೆಗನುಸಾರವಾಗಿ, ಮಿಸ್ಡ್ ಕಾಲುಗಳ ರೂಪದಲ್ಲೇ ಮಾತುಕತೆ ನಡೆಸುವ ತಂತ್ರ ನಮಗೆ ಎಲ್ಲೆಲ್ಲೂ ದೊರೆಯುತ್ತದೆ. ಇದೊಂದು ವಿಚಾರದಲ್ಲಿ ಕಾಬೂಲಿಗೂ, ದೆಹಲಿಗೂ, ನ್ಯೂಯಾರ್ಕಿಗೂ ವ್ಯತ್ಯಾಸವೇ ಇಲ್ಲವೆನ್ನಿಸುತ್ತದೆ. ತೊಡುವ ಬಟ್ಟೆಗೆ ಉಣ್ಣುವ ಊಟಕ್ಕೆ ಜಾತಿ ಮತದ ಲೇಪವನ್ನು ಕೊಡಬಹುದಾದರೂ ಮೊಬೈಲಿಗೆ ಮಾತ್ರ ಯಾವುದೂ ಅಡ್ಡಬಹುವುದಿಲ್ಲ. ಕರೆಂಸಿ ಬಲವಾಗಿಲ್ಲದ ಯುದ್ಧಪೀಡಿತ ಅಫಘಾನಿಸ್ತಾನದಲ್ಲಿ ಸಿಮ್ ಕಾರ್ಡೇ ಬ್ಯಾಂಕು, ಡೆಬಿಟ್ ಕಾರ್ಡು ಎಲ್ಲ... ಒಂದು ಮೊಬೈಲಿನಿಂದ ಇನ್ನೊಂದಕ್ಕೆ ಯಾವ ತೊಂದರೆಯೂ ಇಲ್ಲದೇ ಹಣ ಪಾವತಿ ಮಾಡಬಹುದು. ಇದು ಮಾತ್ರ ಯಾವುದೇ ವಿಕಸಿತ ದೇಶಕ್ಕಿಂತ ಕೆಲ ಹೆಜ್ಜೆಗಳು ಮುಂದೇ ಎನ್ನಬಹುದು.. ವಾಟ್ ಎನ್ ಐಡಿಯಾ ಸರ್ ಜೀ.

ಈ ಎಲ್ಲಕ್ಕಿಂತ ಮುಖ್ಯವೆಂದರೆ, ಅಫಘಾನಿಸ್ತಾನಕ್ಕೂ ಮುಂದುವರೆದ ಅಮೆರಿಕಕ್ಕೂ ಮತ್ತೊಂದು ಸಾಮ್ಯವೆಂದರೆ ಕೆಲಸ ಮಾಡುವ ಜನರ ರಾಷ್ಟ್ರೀಯತೆಯ ಭಿನ್ನತೆಗೆ ಸಂಬಂಧಿಸಿದ್ದು. ಅಮೆರಿಕದಲ್ಲಿ ಭಿನ್ನ ರಾಷ್ಟ್ರೀಯತೆಯ ಜನರನ್ನು ಸ್ವಾಗತಿಸಿ ತಮ್ಮ ದೇಶವನ್ನು ಅವರು ಕಟ್ಟಿದರೆ ಅಫಘಾನಿಸ್ತಾನದಲ್ಲಿಯೂ ಅದೇ ನಡೆಯುತ್ತಿದೆ. ಆದರೆ ಕಾರಣಗಳು ಮಾತ್ರ ಭಿನ್ನ. ಅಫಘಾನಿಸ್ತಾನದಲ್ಲಿ ಕೆಲಸ ಮಾಡಬಲ್ಲ ಸ್ಥಳೀಯ ವಿದ್ಯಾವಂತರಿಲ್ಲ. ತಾಲಿಬಾನ್ ಮಾಡಿದ ಕ್ರೌರ್ಯದಲ್ಲಿ ಅತೀ ಮುಖ್ಯವಾದದ್ದು ಒಂದು ಇಡೀ ದೇಶಕ್ಕೇ ವಿದ್ಯೆಯಿಲ್ಲದಂತೆ ಮಾಡಿ ಶಿಲಾಯುಗಕ್ಕೆ ಒಂದಿಡೀ ತಲೆಮಾರನ್ನು ಕೊಂಡೊಯ್ದುಬಿಟ್ಟದ್ದು. ಹೀಗಾಗಿ ಅಲ್ಲಿ ಲೆಕ್ಕ ಬರೆಯಲು, ರಸ್ತೆ, ಸೇತುವೆ, ವಿಮಾನಾಶ್ರಯಗಳನ್ನು ರೂಪಿಸಲು ಹೊರಗಿನವರೇ ಬೇಕು. ಬಹುಶಃ ಸರಕಾರದಲ್ಲಿರುವ ಅನೇಕರು ಅಫಘಾನಿಸ್ತಾನದ ಮೂಲದವರಾದರೂ ಇತರ ದೇಶದಲ್ಲಿ ಬೆಳೆದು ವಿದ್ಯಾವಂತರಾದವರಿರಬೇಕು. ಕೆಲವರಂತೂ ಅಫಘಾನಿಸ್ತಾನದ ಪಾಸ್ ಪೋರ್ಟನ್ನೂ ಹೊಂದಿಲ್ಲವೆನ್ನಿಸುತ್ತದೆ. ಒಬಾಮಾರನ್ನು ಆಫ್ರಕನ್ ಅಮೆರಿಕನ್ ಎಂದೂ ಆತನ ಪೂರ್ವಜರ ಹುಟ್ಟಿನ ಮೂಲಕ ಗುರುತಿಸಿದರೆ, ಇಲ್ಲಿ ಭಿನ್ನವಾಗಿ, ಅಮೆರಿಕನ್ ಆಫ್ಘನ್ ಎಂದು, ಮೂಲ ಇಲ್ಲೇ ಇದ್ದರೂ ಕೊಂಕಣವನ್ನು ಸುತ್ತಿ ಹೊರಗಿನವರಾಗಿ ಒಳಬಂದವರು ಈಗ ಆ ದೇಶವನ್ನು ನಡೆಸುತ್ತಿದ್ದಾರೆ.

ಈ ಎಲ್ಲ ವಿರೋಧಾಭಾಸಗಳಿದ್ದಾಗ್ಯೂ ಹೀಗೆ ಒಂದು ಹೊಸ ದೇಶವನ್ನು ನಿರ್ಮಿತಿ ಮಾಡುವ ಕೆಲಸ ಸಾಮಾನ್ಯದ್ದಲ್ಲ. ಬಡವರಿಗೆ ವಿತ್ತೀಯ ಸಹಾಯವನ್ನು ಮಾಡಬೇಕಾದರೆ, ಯಾವುದಕ್ಕೆ ಸಾಲ ನೀಡಬೇಕು, ಹಾಗೂ ಆ ಸಾಲವನ್ನು ಹೇಗೆ ವಸೂಲು ಮಾಡಬೇಕು ಅನ್ನುವುದೇ ಒಂದು ದೊಡ್ಡ ಸವಾಲಾಗುತ್ತದೆ. ಹಣ್ಣು ತರಕಾರಿಗಳಿಂದ ಹಿಡಿದು ಅನೇಕ ದಿನನಿತ್ಯದ ವಸ್ತುಗಳು ಹೊರಗಿನಿಂದ ಆಮದಾಗುವ ಸಂದರ್ಭದಲ್ಲಿ - ಮನೆಯ ಹಿಂಭಾಗದಲ್ಲಿ ಅಸ್ತ್ರಗಳನ್ನು ತಯಾರಿಸುವ ಒಂದು ಪುಟ್ಟ ಕಾರ್ಖಾನೆ ಹಾಕಿ ಯುದ್ಧವನ್ನು ಪೋಷಿಸುತ್ತಾ ಬದುಕಬಹುದೇ? ವಿಮಾನಾಶ್ರಯದಲ್ಲಿ ಬಗೆದು ಬಗೆದು ನೋಡುವ, ವೀಸಾಕ್ಕೆ ಅನೇಕ ಅಡಚಣೆಗಳನ್ನು ಹಾಕುವ ಈ ದೇಶಕ್ಕೆ ಒಂದೆಡೆ ಪಾಕಿಸ್ತಾನ, ಇರಾನ, ತಜಿಕಿಸ್ತಾನ, ಉಜ್ಬೇಕಿಸ್ತಾನದಂತಹ ದೇಶಗಳ ಸರಹದ್ದು ಎಲ್ಲೆಂದು ತಿಳಿಯದಿದ್ದಾಗ ಆ ಗೆರೆಯೇ ಇಲ್ಲದಿರುವಾಗ ಏನು ಮಾಡುವುದು ಸಾಧ್ಯ?

ಬಡವರನ್ನು ಈ ಎಲ್ಲ ವಿಕಾಸ ತಲುಪುವುದು ಹೇಗೆ? ಒಂದು ಡಾಲರಿನ ಸಾಲ ಕೊಡಲು ಖರ್ಚೆಷ್ಟು ಆಗಬಹುದು? ಜನ ಓಡಾಡಬೇಕು. ಯುದ್ಧ ನಿಂತಿದೆಯೋ ಮುಂದುವರೆಯುತ್ತಿದೆಯೋ ತಿಳಿಯದ ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವ ಅತೀವೃಷ್ಟಿ, ಅನಾವೃಷ್ಟಿ, ರೋಗ ರುಜಿನಗಳ ಮಧ್ಯೆ ಹಾಗೂ ಹೀಗೂ ಒಂದು ರತ್ನಗಂಬಳಿಯನ್ನು ನೇಯ್ದರೆ, ಅಥವಾ ಒಂದಿಷ್ಟು ಕಲ್ಲಂಗಡಿಯನ್ನು ಬೆಳೆದರೆ ಅದನ್ನು ಮಾರುವಷ್ಟರಲ್ಲಿ ಯಾವುದೋ ಬಾಂಬಿನ ಸಿಡತಕ್ಕೆ, ಗುಂಡಿಗೆ ಅದು ಸಿಕ್ಕಿ ನಾಶವಾಗಬಹುದು. ಯುದ್ಧದಲ್ಲಿ ಕೈಕಾಲುಗಳನ್ನು ಕೆಳೆದುಕೊಂಡವರ ಸಂಖ್ಯೆಯೂ ಅಧಿಕವಾಗಿರುವ ಈ ದೇಶದ ಸವಾಲುಗಳನ್ನು ಕಂಡಾಗ ನಾವು ಸ್ವರ್ಗದಲ್ಲಿದ್ದೇವೆ ಅನ್ನಿಸುವುದರಲ್ಲಿ ಅನುಮಾನವಿಲ್ಲ.

ಕಡೆಗೂ ಇಂಥ ಜಾಗವನ್ನು ನೋಡಿದಾಗ ಮಾರುಕಟ್ಟೆಯ ಮಿತಿಯ ಬಗ್ಗೆಯೂ ನಮಗೆ ಮನದಟ್ಟಾಗುತ್ತದೆ. ಹೆಚ್ಚು ಕಾನೂನು ಕಾಯಿದೆಗಳಿಲ್ಲದ ಜಾಗದಲ್ಲಿ ಜನ ತಮಗೆ ಇಷ್ಟಬಂದ ಹಾಗೆ ವ್ಯಾಪಾರ ಮಾಡಬಹುದು. ಸರಕಾರಿ ಯಂತ್ರಾಂಗ ಅನ್ನುವುದೇ ಇಲ್ಲವಾದಲ್ಲಿ ಸ್ಥಳೀಯ ಜನರು ಮುಕ್ತ ಮಾರುಕಟ್ಟೆಯಲ್ಲಿದ್ದಂತೆಯೇ ಅಲ್ಲವೇ. ಆ ರೀತಿಯಿಂದಲೂ ವಿಕಸಿತ ದೇಶಕ್ಕೂ ಇಲ್ಲಗೂ ತಂಬಾ ಸಾಮ್ಯತೆಗಳಿವೆ. ಆದರೆ ಮುಕ್ತ ಮಾರುಕಟ್ಟೆಯ ಪರಿಹಾರ ಅತ್ಯುತ್ತಮವಾದದ್ದಲ್ಲ ಅನ್ನುವುದನ್ನು ಈ ದೇಶ ನಿರೂಪಿಸುತ್ತದೆ. (ಅಮೆರಿಕವೂ ಅದನ್ನು ಈಚೆಗೆ ತನ್ನ ವಿತ್ತೀಯ ವ್ಯವಸ್ಧೆಯ ಕುಸಿತದ ಮೂಲಕ ನಿರೂಪಿಸಿಬಿಟ್ಟಿತು). ಆದರೆ ಇಂಥ ಸರಹದ್ದಿಲ್ಲದ, ವಿದ್ಯಾವಂತರ ಬೀಡಿಲ್ಲದ, ಕಾನೂನು ವ್ಯವಸ್ಥೆಯಿಲ್ಲದ, ಒಟ್ಟಾರೆ ಕಡಿದಾದ ಪ್ರದೇಶವನ್ನು ಜೀವನದ ರೀತಿನೀತಿಯ ಚೌಕಟ್ಟಿನಲ್ಲಿ, ವ್ಯವಸ್ಥಾಗತವಾಗಿ ರೂಪಿಸುವುದು. ಹಾಗೆ ರೂಪಿಸುತ್ತಾ ಬಡವರನ್ನು ಒಳಗೊಳ್ಳುವುದು ಸುಲಭವಾದ ಸವಾಲೇನೂ ಅಲ್ಲ. ಕೆಲ ವರ್ಷಗಳಲ್ಲಿ ನ್ಯಾಟೋ ಪಡೆಗಳು ಅಲ್ಲಿಂದ ಹೊರಟುಬಿಡುತ್ತವೆ. ಸ್ಥಳೀಯರೇ ತಮ್ಮ ದೇಶವನ್ನು ನಿರ್ವಹಿಸಲು ಬಿಟ್ಟು ಬಿಡುತ್ತಾರೆ. ಆ ಸಮಯಕ್ಕೆ ಅಫಘಾನಿಸ್ತಾನ ತಯಾರಿಯನ್ನು ನಡೆಸುತ್ತಿದೆಯೇ ಅನ್ನುವುದನ್ನು ನಾವುಗಳು ಪರಿಶೀಲಿಸಬೇಕು. ಅದಕ್ಕೆ ಉತ್ತರ ಪ್ರೋತ್ಸಾಹದಾಯಕವಾಗೇನೂ ಇಲ್ಲ. ಹೀಗಾಗಿಯೇ ಅಮೆರಿಕದ ಮಿಲಿಟರಿ ಸಹಾಯಕ್ಕಿಂತ ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ ಸಹಾಯವೇ ಮಹತ್ವದ್ದೇನೋ...

ಹೀಗೆ ಜಗತ್ತಿನ್ನು ತನ್ನ ವಿಕಾಸಕ್ಕೆ ಆಹ್ವಾನಿಸುತ್ತಿರುವ ಮುಕ್ತ ಮಾರುಕಟ್ಟೆಯಲ್ಲಿ ನಮಗೆ ಕಾಣುವುದು ಏನು? ಅಲ್ಲಿ ಸಿಟಿ ಬ್ಯಾಂಕಿನ ಒಂದು ಶಾಖೆಯೂ ಇಲ್ಲ. ಎಟಿಎಂ ಇಲ್ಲ. ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಒಂದು ಶಾಖೆ ಇದೆ. ಅಲ್ಲಿ ಐದು ಭಾರತೀಯರೂ ನಾಲ್ವರು ಅಪಘನಿಗಳೂ ಸೇರಿ ಅದನ್ನು ನಡೆಸುತ್ತಿದ್ದಾರೆ. ಅಲ್ಲಿನ ರಸ್ತೆಗಳನ್ನು ನಮ್ಮ ದೇಶದವರು ಕಟ್ಟುತ್ತಿದ್ದಾರೆ. ಅವರ ಸಂಸದ್ ಸದನವನ್ನ ಭಾರತ ನಿರ್ಮಿಸಿ ಕೊಡುತ್ತಿದೆ. ಹಾಗೂ ಯಾವ ಪಾಶ್ಚಾತ್ಯ ದೇಶದ ವಿಮಾನವೂ ಹೋಗದೆಡೆಯಲ್ಲಿ ಏರ್ ಇಂಡಿಯಾ ಪ್ರತಿನಿತ್ಯದ ಫ್ಲೈಟನ್ನು ಹಾರಿಸುತ್ತಿದೆ. ಭಾರತೀಯರಾಗಿ ನಾವು ಹೆಮ್ಮೆಪಡಲು ಈ ಎಲ್ಲವೂ ಸಾಲದೇ? ವಿಕಸಿತ ದೇಶಗಳೆಲ್ಲಾ ಶಸ್ತ್ರಾಸ್ತ್ರಗಳನ್ನು ಕೊಡುತ್ತಿರುವ ಸಂದರ್ಭದಲ್ಲಿ ಭಾರತದ ಮಹತ್ವವನ್ನು ನಾವು ಸಂಭ್ರಮದಿಂದ ಕೊಂಡಾಡಬೇಕಾಗಿದೆ.. ಭಾರತೀಯರಿಗೆ ಅಲ್ಲಿಗೆ ಹೋಗಲು ವೀಸಾದ ಚಾರ್ಜು ಸೊನ್ನೆ. ಅಮೆರಿಕನ್ನರಿಗೆ ಮೂವ್ವತ್ತು ಡಾಲರುಗಳು. ಸಹಜವೇ ಅಲ್ಲವೇ?

No comments:

Post a Comment