Saturday, March 30, 2013

ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ


ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಯೋಜನೆಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿನ ಆರ್ಥಿಕ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.


ಹಾಗಾದರೆ ಈ ಕಾರ್ಯಕ್ರಮಗಳು ವ್ಯರ್ಥವೇ? ಏನೂ ಪ್ರಯೋಜನವಿಲ್ಲವೆಂದರೆ, ಇತರರ ಜೀವನವನ್ನು ಉದ್ಧಾರ ಮಾಡುತ್ತಿದ್ದೇವೆಂದೇ ಜೀವಿಸುತ್ತಿರುವ ಈ ವೃತ್ತಿಪರರ ಜೀವನೋಪಾಯಕ್ಕೇನಾಗಬೇಕು? ಡೆವಲಪ್‍ಮೆಂಟ್ ಫೈನಾನ್ಸ್ ನೆಟ್‍ವರ್ಕ್ ಅನ್ನುವ ಒಂದು ಚರ್ಚಾಕೂಟದಲ್ಲಿ ಈ ಚರ್ಚೆ ಈಮೈಲಿನ ಮೂಲಕ ನಡೆಯುತ್ತಿದೆ. ಕಾರ್ಯಕ್ರಮಗಳನ್ನು ನಡೆಸುವವರು ತಮಗೆ ಅನುಕೂಲವಾಗುವಂತೆ ಯಾವುದಾದರೂ ಒಂದು ಮಹಿಳೆಯ ಕಥೆಯನ್ನು ಹೇಳಿ ಯಶೋಗಾಥೆಯ ಪುರಾವೆಯನ್ನೊದಗಿಸಿಬಿಡುತ್ತಾರೆ. ಆದರೆ ಪ್ರತೀ ಯಶೋಗಾಥೆಯ ಹಿಂದೆ ನಮಗೆ ಕಾಣಿಸದ ಎಷ್ಟೋ ವೈಫಲ್ಯಗಳೂ ಇರುತ್ತವೆ, ಹಾಗೂ ಆ ಕಥೆಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲವೆನ್ನುವುದನ್ನೂ ನಾವು ಮನಗಾಣಬೇಕಾಗಿದೆ.

ಬಡತನದ ಮೇಲೆ ಯಾವುದೇ ಪ್ರಭಾವವಿಲ್ಲವೆಂದರೂ ಪ್ರಪಂಚದಾದ್ಯಂತ ಬಡವರು ಚಿಕ್ಕಸಾಲದ ಕಾರ್ಯಕ್ರಮಗಳನ್ನು ತಮ್ಮದಾಗಿಸಿಕೊಂಡು ಸಾಲವನ್ನು ಪಡೆದು ಮರುಪಾವತಿ ಮಾಡುತ್ತಿದ್ದಾರೆದರೆ ಅದರಲ್ಲೂ ಅರ್ಥವಿರಬೇಕು. ವಿಶ್ವದಾದ್ಯಂತ ಇರುವ ಚಿಕ್ಕಸಾಲದ ಕಾರ್ಯಕ್ರಮಗಳಲ್ಲಿ ತುಂಬಾ ಭಿನ್ನತೆಯಿದೆ. ಮೂಲಭೂತವಾಗಿ ಬಾಂಗ್ಲಾದೇಶ, ಭಾರತ್, ಪಾಕಿಸ್ತಾನದ ಕಾರ್ಯಕ್ರಮಗಳು ಮಹಿಳಾಪರ ಕಾರ್ಯಕ್ರಮಗಳು. ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಹಾಗೂ ಲ್ಯಾಟಿನ್ ಅಮೆರಿಕಾ ಪ್ರಾಂತದ ಕಾರ್ಯಕ್ರಮಗಳು ಪುರುಷ ಪ್ರಧಾನವಾದುವು. ಈ ಭಿನ್ನತೆಯಲ್ಲಿ ಮತ್ತೂ ಒಂದು ಅಂಶವನ್ನು ನಾವು ಕಾಣಬಹುದು. ಕೃಷಿಪ್ರಧಾನವಾದ ಕ್ಷೇತ್ರಗಳಲ್ಲಿ ಮಹಿಳೆಯರ ಚಿಕ್ಕಸಾಲದ ಕಾರ್ಯಕ್ರಮಗಳು ಹೆಚ್ಚಾಗಿ ಇವೆ. ಮಹಿಳಾಕೇಂದ್ರಿತವಾದ ಈ ಕಾರ್ಯಕ್ರಮಗಳಲ್ಲಿ ಗುಂಪುಗಳ ಪಾತ್ರವೂ ಪ್ರಮುಖವಾದದ್ದು. ಪುರುಷಕೇಂದ್ರಿತ ಚಿಕ್ಕಸಾಲದ ಕಾರ್ಯಕ್ರಮಗಳಲ್ಲಿ ನಮಗೆ ಗುಂಪುಗಳ ಪಾತ್ರ ಅಷ್ಟು ಮುಖ್ಯವಾಗಿ ಕಾಣಿಸುವುದಿಲ್ಲ. ಈ ಭಿನ್ನತೆಯಿಂದ ನಾವೇನಾದರೂ ಒಳನೋಟಗಳನ್ನು ಪಡೆಯಬಹುದೇ?

ಈ ಎಲ್ಲ ಅಂಶಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು ಯೋಚನೆ ಮಾಡಿದಾಗ ನಮ್ಮ ಪ್ರಾಂತದ ಚಿಕ್ಕಸಾಲದ ಕಾರ್ಯಕ್ರಮ ಈ ರೀತಿ ಬೆಳವಣಿಗೆಯಾದದ್ದಕ್ಕೆ ಒಂದು ಗಮ್ಮತ್ತಿನ ಕಥೆಯನ್ನ ಕಟ್ಟಬಹುದೇನೋ.. [ಇದು ವಾಸ್ತವವೆಂದು ನಿರೂಪಿಸಲು ಗಟ್ಟಿಯಾದ ಮಾಹಿತಿಯಿಲ್ಲವಾದ್ದರಿಂದ, ಇದನ್ನು ಕಥೆಯೆಂದೇ ಪರಿಗಣಿಸಬೇಕಾಗುತ್ತದೆ]. ಕಥೆ ಹೀಗಿರಬಹುದು:

ಪುರುಷರಿಗೆ ’ಚಿಕ್ಕ’ ಸಾಲದಲ್ಲಿ ಆಸಕ್ತಿಯಿಲ್ಲ. ಕಾರಣವೇನಿರಬಹುದು?

೧. ಕೃಷಿಯೇ ಪ್ರಧಾನವಾದ ಕೆಲಸವಾದರೆ - ಅದಕ್ಕೂ ಚಿಕ್ಕಸಾಲಕ್ಕೂ ಒಳ್ಳೆಯ ನಂಟನ್ನು ಹಚ್ಚುವುದು ಕಷ್ಟ. ಕೃಷಿಯಲ್ಲಿ ಉತ್ತುವುದರಿಂದಾದಿಯಾಗಿ  ಫಲಸನ್ನು ಮಾರಾಟಮಾಡುವವರೆಗೂ ನಮಗೆ ಖರ್ಚೇ ಕಾಣಿಸುತ್ತದೆ. ಆ ಕಾಲದಲ್ಲಿ ಕೃಷಿಯಿಂದ ಯಾವುದೇ ಆದಾಯ ಬರುವುದಿಲ್ಲ. ಚಿಕ್ಕ ಸಾಲದ ನಿಯಮಾವಳಿಯ ಪ್ರಕಾರ, ಒಂದು ಸಾಲ ಕೊಟ್ಟರೆ ಅದನ್ನು ಮುಂದಿನ ವಾರ/ತಿಂಗಳಿನಿಂದ ಮರುಪಾವತಿ ಮಾಡುವುದು ಅನಿವಾರ್ಯ. ಹೀಗಾಗಿ ಕೃಷಿಯ ವಿತ್ತೀಯ ಹರಿವಿಗೂ ಚಿಕ್ಕಸಾಲದ ನಿರೀಕ್ಷೆಗೂ ತಾಳೆಯಿಲ್ಲ. ಪುರುಷ ಪ್ರಧಾನವಾದ ಕೃಷಿಗೆ ಇದು ತಕ್ಕ ಸಾಲವಲ್ಲ.

೨. ಚಿಕ್ಕ ಸಾಲದ ಮೊತ್ತಗಳ ಮೂರು ಸಾವಿರದಿಂದ ಆರಂಭವಾಗಿ ಕ್ರಮಕ್ರಮೇಣ ಬೆಳೆದು ಹತ್ತುಸಾವಿರದ ವರೆಗೂ ಹೋಗಬಹುದು. ಈ ಮೊತ್ತ ಪುರುಷರ ’ಕನಸು’ಗಳಿಗೆ ’ಆಶಯ’ಕ್ಕೆ ತೀರಾ ಕಡಿಮೆಯಿರಬಹುದು. ಮಾಡಿದರೆ ದೊಡ್ಡ ಧಂಧೆ ಮಾಡಬೇಕು - ಈ ಪುಟ್ಟಪುಟ್ಟ ವ್ಯಾಪಾರದಿಂದ ಕೊಳ್ಳೆ ಹಾಕುವುದು ಏನು ಅನ್ನುವ ಪ್ರಶ್ನೆ ಅವರುಗಳ ಮನಸ್ಸಿನಲ್ಲಿ ಇರಬಹುದು. ಜೊತೆಗೆ ಇಷ್ಟು ಪುಟ್ಟ ಮೊತ್ತಕ್ಕೆ ಪ್ರತೀ ವಾರ ಸಭೆಗೆ ಹಾಜರಾಗುವುದು, ಪ್ರಾರ್ಥನೆ ಮಾಡುವುದು, ಲೆಕ್ಕ ಇಡುವುದು - ಇತ್ಯಾದಿ ತಲೆ ಶೂಲೆಯ ಕೆಲಸವನ್ನು ಯಾಕೆ ಮಾಡಬೇಕು ಎನ್ನುತ್ತಲೇ ಪುರುಷರು ಬೀಡಿ ಬೆಳಗಿಸಬಹುದು.

ಮಹಿಳೆಯರಿಗೆ ಚಿಕ್ಕಸಾಲದಲ್ಲಿ ಸಾಕಷ್ಟು ಆಸಕ್ತಿಯಿರುವಂತೆ ಕಾಣುತ್ತದೆ. ಕಾರಣವೇನಿರಬಹುದು?

೧. ಸಂಸಾರದಲ್ಲಿ ಮಹಿಳೆಯರ ಮೂಲಭೂತವಾಗಿ ’ಹೆಂಡತಿ’ ಮತು ’ತಾಯಿ’ಯ ಪಾತ್ರಗಳ ಸುತ್ತಲೂ ಭ್ರಮಣ ಮಾಡುತ್ತದೆ. [ನಾನು ಈ ಮಾತನ್ನು ಸ್ಟೀರಿಯೋಟೈಪ್ ಮಾಡಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದೇನೆಂದು ಸ್ತ್ರೀವಾದಿಗಳು ಅನ್ನಬಹುದು, ಆದರೆ ನಾನು ಚಿಕ್ಕಸಾಲದ ಮಹಿಳಾಪರತೆಗೆ ಒಂದು ಕಾರಣವನ್ನು ಹುಡುಕುತ್ತಿದ್ದೇನೆಯೇ ಹೊರತು ಮಹಿಳೆಯರು ಈ ಎರಡೂ ಪಾತ್ರಕ್ಕೆ ಸೀಮಿತರಾಗಬೇಕೆದು ಪ್ರತಿಪಾದಿಸುತ್ತಿಲ್ಲ.] ಗ್ರಾಮೀಣ ಮಹಿಳೆಯರ ಪಾತ್ರ ಚಾರಿತ್ರಿಕವಾಗಿ ಅವರನ್ನು ಮನೆಯೊಳಕ್ಕೇ ಕೂಡಿಹಾಕಿರುತ್ವುತದೆ. ಮನೆಯಿಂದ ಹೊರಬಂದು ಗುಂಪಿನ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ಒಂದು ವಿತ್ತೀಯ ಅವಶ್ಯಕತೆಯೆಂದೇ ಸೀಮಿತವಾಗಿ ನೋಡುವುದು ಸಮರ್ಪಕವಾದ ದೃಷ್ಟಿಯಲ್ಲ. ಇದು ಮಿಕ್ಕ ಮಹಿಳೆಯರನ್ನು ಭೇಟಿಮಾಡುವ ಸಾಮಾಜಿಕ ಅವಶ್ಯಕತೆಯೂ ಆಗುವುದು. ಹೀಗಾಗಿ ಮಹಿಳೆಯರು ಬಹುಶಃ ಖುಷಿಯಿಂದಲೇ ತಮ್ಮ ಗುಂಪಿನ ಸಭೆಗೆ ಬರುತ್ತಾರೇನೋ. [ಪುರುಷರು ದಿನವೂ ಗಡುಂಗಿನಲ್ಲಿ ಸಭೆ ಸೇರುವುದರಿಂದ ಅವರಿಗೆ ಹೀಗೆ ಸಭೆ ಸೇರುವ ಅವಶ್ಯಕತೆಯಿಲ್ಲದಿರಬಹುದು!!]

೨. ಪುಟ್ಟ ಮೊತ್ತದ ವಿತ್ತೀಯ ಒತ್ತಡಗಳು ಯಾವಾಗಲೂ ಮಹಿಳೆಯ ಮೇಲೆಯೇ ಬೀಳುತ್ತವೆ - ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳು ಅನೇಕ.

೩. ಮನೆಯಲ್ಲಿ ಇರುವ, ಆಗಾಗ ಕೂಲಿಗೆ ಹೋಗುವ ಮಹಿಳೆಯರಿಗೆ ತಮ್ಮ ಸಮಯದ ನಡುವೆ ಆದಾಯ ಆರ್ಜಿಸುವ ಪುಟ್ಟ ವ್ಯಾಪಾರವನ್ನು ಮಾಡುವುದು ಸಾಧ್ಯವಾಗಬಹುದು. ಅದು ಒಂದು ಎಮ್ಮೆಯನ್ನು ಹಿತ್ತಲಲ್ಲಿ ಕಟ್ಟುವುದಿರಬಹುದು, ಮನೆಯ ಮುಂಭಾಗದಲ್ಲಿ ಒಂದು ಪುಟ್ಟ ಕಿರಾಣೆಯಂಗಡಿಯನ್ನು ಹಾಕುವುದಿರಬಹುದು ಅಥವಾ ಒಂದು ಟೀ ಅಂಗಡಿಯನ್ನು ನಡೆಸುವುದಿರಬಹುದು, ಒಂದು ಯಂತ್ರವನ್ನು ಕೊಂಡು ಹೊಲಿಗೆ ಕೆಲಸ ಮಾಡುವುದಿರಬಹುದು. ಈ ರೀತಿಯಾದ ಪುಟ್ಟ ಪಾರ್ಟ್ ಟೈಂ ಕೆಲಸಕ್ಕೆ ಚಿಕ್ಕಸಾಲದ ಮೊತ್ತಗಳು ಪುಟ್ಟ ಹೂಡಿಕೆಯಾಗಿ ಮಹಿಳೆಯರಿಗೆ ಸಹಾಯಕವಾಗಿ ಬರಬಹುದು.

ನಾವು ಮೇಲಿನ ಅಂಶವನ್ನು ಪರಿಶೀಲಿಸಿದಾಗ ಒಂದು ಅಂಶ ನಮಗೆ ವೇದ್ಯವಾಗುತ್ತದೆ. ಅದೆಂದರೆ: ಚಿಕ್ಕಸಾಲದಿಂದಾಗಿ ಬಡತನ ನಿರ್ಮೂಲನವಾಗುವುದು ದೂರದ ಕನಸೇ ಇರಬಹುದು. ಹತ್ತು ಸಾವಿರ ರೂಪಾಯಿಗಳ ಸಾಲದಿಂದ, ಅದಕ್ಕೆ ಸರಾಸರಿ ತಿಂಗಳಿಗೆರಡು ಪ್ರತಿಶತ ಬಡ್ಡಿ ಕಟ್ಟುತ್ತಾ, ಕಿಸ್ತನ್ನೂ ತೀರಿಸುತ್ತಾ ನಡೆಸುವ ವ್ಯಾಪಾರಿದಿಂದ - ಆ ವ್ಯಾಪಾರ ಯಾವುದೇ ಆಗಿರಲಿ - ಎಷ್ಟು ಮಹಾ ಆದಾಯ ಬರಬಹುದು, ಆ ಆದಾಯವನ್ನು ದೈನಿಕ ಆದಾಯಕ್ಕೆ ಪರಿವರ್ತಿಸಿದರೆ ಪ್ರಸ್ತುತ ಪರಿಸ್ಥಿತಿಗಿಂತ ಎಷ್ಟು ಭಿನ್ನ ಹಾಗೂ ಅಧಿಕವಾಗಿರಬಹುದು. ಆ ಆದಾಯದಿಂದ ಎಷ್ಟು ಮಾತ್ರ ಬಡತನ ದೂರವಾಗಬಹುದು?

ಹಾಗಾದರೆ ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲವಾದರೆ, ವಿಶ್ವದಾದ್ಯಂತ ಚಿಕ್ಕಸಾಲದ ಯಶೋಗಾಥೆಗಳು ಬಳೆಯಲು ಕಾರಣವೇನಿರಬಹುದು? ಸ್ವಲ್ಪ ಆಲೋಚಿಸಿದರೆ ನಾವು ಈ ರೀತಿಯಾದ ಕಥೆಯನ್ನು ಕಟ್ಟಬಹುದು:

ಮೂಲತಃ ಚಿಕ್ಕಸಾಲವೆನ್ನುವುದು ಅರ್ಥಶಾಸ್ತ್ರದಲ್ಲಿ ಹಾಗಂತ ಕರೆಯುವ ಒಂದುಸಪ್ಲೈ ಸೈಡ್ ಪರಿಹಾರ. ಅಂದರೆ, ಅಲ್ಲಿ ಸಮಸ್ಯೆ ಏನು ಅನ್ನುವುದು ಮುಖ್ಯವಾಗದೇ ಪರಿಹಾರವೇ ಸಮಸ್ಯೆಯನ್ನು ಹುಡುಕಿ ಹೊರಡುವ ಒಂದು ವಿಚಿತ್ರ ಪರಿ! ಇನ್ನಷ್ಟು ವಿವರಿಸಬೇಕೆಂದರೆ ಹೀಗೆ ಯೋಚಿಸೋಣ. ಒಂದು ಬಡ ಸಂಸಾರದಲ್ಲಿರುವ ಗ್ರಾಮೀಣ ಮಹಿಳೆ ತನ್ನ ಜೀವನವನ್ನು ತಾನು ಯಥಾರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಳು. ಒಂದು ಮುಂಜಾನೆ ಯಾರೋ ಬಂದು "ಸಾಲ ಬೇಕೇ ಸಾಲ?" ಎಂದು ಕೇಳಿದರು. ಅಲ್ಲಿಯವರೆಗೆ ತಾನು ಸಾಲವನ್ನು ಪಡೆಯಬಹುದೆಂದಾಗಲೀ ಯಾರಾದರೂ ತನಗೆ ಸಾಲ ಕೊಡಬಹುದೆಂದಾಗಲೀ ಆಕೆ ಊಹಿಸಿಯೇ ಇರಲಿಲ್ಲ. ಹೀಗಾಗಿ ಆಕೆಯ ಮನಸ್ಸಿನಲ್ಲಿ ಸಾಲ - ಚಿಕ್ಕಸಾಲವಾದರೂ ಸರಿಯೇ - ಪಡೆಯುವುದು ಒಂದು ಪರಿಹಾರವಾಗಿ ಕಾಣಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಈ ಕಿಟಕಿ ತೆರೆದುಕೊಳ್ಳುತ್ತಿದೆ. ಸಾಲದ ಮೊತ್ತ ದೊಡ್ಡದಾಗಿ ಕಾಣುತ್ತಿಲ್ಲ. ವಾರಕ್ಕೆ ಕಟ್ಟಬೇಕಾದ ಕಿಸ್ತನ್ನು ಯಾವರೀತಿಯಲ್ಲಿ ಕಟ್ಟಬಹುದು ಅನ್ನುವುದನ್ನ ಯೋಚಿಸಿದರೆ ಈ ಸಾಲವನ್ನು ಆಕೆ ಪಡೆಯಬಹುದು!

ಕೃಷಿಯೇ ಪ್ರಧಾನವಾಗಿರುವ ಗ್ರಾಮೀಣ ಪ್ರಾಂತದಲ್ಲಿ ಕುಯಿಲಿನ ಕಾಲಕ್ಕೆ ಹಣದ ಚಾಲನೆ ಹೆಚ್ಚಾಗುತ್ತದೆ. ಎಲ್ಲರೂ ಹೊಸ ಬಟ್ಟೆಗಳನ್ನೂ ದೊಡ್ಡ ಖರ್ಚುಗಳನ್ನೂ ಆಗ ಮಾಡುತ್ತಾರೆ. ಮಿಕ್ಕಂತೆ ಅಲ್ಲಿ ಹಣದ ಚಾಲನೆ [ಕೃಷಿಯನ್ನಧಾರಿಸದ] ನಗರ ಪ್ರಾಂತಕ್ಕಿಂತ ಕಡಿಮೆ ಎಂದೇ ಹೇಳಬೇಕು. ಆ ಅಂಥ ಪ್ರಾಂತದಲ್ಲಿ, ವರುಷಕ್ಕೆರಡು ಬಾರಿ ಮಾತ್ರ ಧನದರ್ಶನವಾಗಬಹುದಾದ ಮಹಿಳೆಯ ಕೈಯಿಗೆ - ಮೊಬಲಗು ಚಿಕ್ಕದಾದರೂ - ಪ್ರತೀ ವಾರ ಹಣವನ್ನು ಹಾಕುವ, ಅದನ್ನು ಎಣಿಸುವ, ವಾಪಸ್ಸು ಮಾಡುವ ಪ್ರಕ್ರಿಯೆಯನ್ನು ಚಿಕ್ಕ ಸಾಲ ಅನುಮಾಡಿದೆ. ಇದರಿಂದ ಬಡತನ ನಿರ್ಮೂಲನವಗಿದೆಯೇ - ಇಲ್ಲ. ಕಡಿಮೆಯಾಗಿದೆಯೇ - ಇಲ್ಲ.

ಆದರೆ ಪ್ರತಿವಾರವೂ ತನ್ನ ಕೈಯಿಂದ ತನ್ನದೇ ಆದಾಯದಿಂದ ಹಣ ಓಡಾಡುತ್ತಿರುವುದನ್ನು ಕಂಡ ಮಹಿಳೆಯ ಆತ್ಮಬಲ ಇದರಿಂದಾಗಿ ಹೆಚ್ಚಾಗಿದೆಯೇ? ಹೌದಲ್ಲವೇ. ದಿನನಿತ್ಯ ಧನದರ್ಶನವಾಗುವುದರಿಂದ ಜೀವನದಲ್ಲಿನ ಸಣ್ಣಪುಟ್ಟ ಏರುಪೇರುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆಯೇ? ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳಿಗೆ ತನ್ನ ಬಳಿ ಕಾಸಿದೆಯೇ... ಈ ಪ್ರಶ್ನೆಗೆ ಉತ್ತರ ಹೌದೆಂದಾದರೆ, ಬಹುಶಃ ಚಿಕ್ಕಸಾಲ ಬಡವರ ಬದುಕಿನಲ್ಲಿ ತಂದಿರಬಹುದಾದ ಚಿಕ್ಕ ಬದಲಾವಣೆಯ ಮಹತ್ವ ನಮಗೆ ಅರ್ಥವಾಗಬಹುದು.

ಹಾಗಾದರೆ ಪುರುಷರೇ ಪ್ರಧಾನವಾಗಿರುವ ಕೃಷಿಯೇತರ ಪ್ರಾಂತಗಳಲ್ಲಿನ ಚಿಕ್ಕಸಾಲದ ಯಶೋಗಾಥೆಯ ಹಿಂದಿನ ಕಥೆಯೇನಿರಬಹುದು. ಅದೃಷ್ಟವಶಾತ್ ಆ ಪ್ರಶ್ನೆ ಕೇಳುವ ವೇಳೆಗೆ ನನ್ನ ಬರವಣಿಗೆಯ ಪದಮಿತಿ ಮುಗಿಯುತ್ತದೆ. ಆ ಪರಿಸ್ಥಿತಿಯನ್ನು ಭಿನ್ನವಾಗಿಯೇ ಅರ್ಥೈಸಬೇಕಾಗುತ್ತದೆ. ಅದು ಮತ್ತೊಂದು ಬಾರಿ!

ನವಂಬರ್ ೨೦೦೯




No comments:

Post a Comment