Wednesday, March 27, 2013

ಸಾಲಮನ್ನಾ ರಾಜಕಾರಣ


ಕರ್ನಾಟಕದಲ್ಲಿ ಚುನಾವಣೆಯ ಬಿಸಿಯೇರುತ್ತಿದ್ದಂತೆ, ಅನೇಕ ಹೊಸ ಆಶ್ವಾಸನೆಗಳು, ಹೊಸ ಭರವಸೆಗಳನ್ನು ವಿವಿಧ ಪಕ್ಷಗಳು ನೀಡುತ್ತಿವೆ. ಸಾಮಾನ್ಯವಾಗಿ ಗ್ರಾಮೀಣ ಮತದಾರರನ್ನು ಓಲೈಸಲು ಪಕ್ಷಗಳು ಕೃಷಿ, ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮಾತನ್ನಾಡುವುದನ್ನು ನಾವು ಕಂಡೇ ಇದ್ದೇವೆ. ಎಲ್ಲ ಪಕ್ಷಗಳಿಗೂ ಪ್ರಿಯವಾದ ಯೋಜನೆಗಳೆಂದರೆ ಕೃಷಿ ಸಂಬಂಧಿತವಾದ ಸಾಲವನ್ನು ಮನ್ನಾ ಮಾಡುವುದು, ಅಥವಾ ಕೃಷಿ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತವನ್ನು ಘೋಷಿಸುವುದು, ಉಚಿತ ವಿದ್ಯುತ್ ಸರಬರಾಜಿನ ಭರವಸೆ ನೀಡುವುದು ಹಾಗೂ ಕರುಣಾನಿಧಿಯವರ ಕರುಣೆಯ ನಂತರ ಹೊಸತಾಗಿ ಚುನಾವಣಾ ಭರವಸೆಗೆ ಸೇರಿರುವ ಉಚಿತ ಬಣ್ಣದ ಟೀವಿಗಳನ್ನು ಹಂಚುವುದು. ಮೊದಲಿಗೆ ಯಾವುದಾದರೂ ಯೋಜನೆಯಿದ್ದಲ್ಲಿ ಅದರ ಕರ್ತೃವಿನ ಛಾಪು ಇರುತ್ತಿತ್ತು. ಉದಾಹರಣೆಗೆ ೨ ರೂಪಾಯಿಗಳಿಗೊಂದು ಕಿಲೋ ಅಕ್ಕಿಯನ್ನು ಕೊಡಲು ಪ್ರಾರಂಭಿಸಿದವರು ತೆಲುಗುದೇಶಂ ಪಕ್ಷದ ನಾಯಕರಾಗಿದ್ದ ಎನ್.ಟಿ.ರಾಮಾರಾವು ಅವರು. ಆದರೆ ಅದನ್ನು ಕಾಂಗ್ರೆಸ್ ಪಕ್ಷ ಈಗ ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ಉಚಿತ ವಿದ್ಯುತ್ತಿನ ಬಗ್ಗೆ ಮಾತಾಡುತ್ತಿರುವಾಗಲೇ ಅವರದೇ ಪಕ್ಷದ ಸರಕಾರ ಗುಜರಾತಿನಲ್ಲಿ ವಿದ್ಯುತ್ತಿಗೆ ಪೂರ್ಣ ಶುಲ್ಕವನ್ನು ವಿಧಿಸಿಯೂ ಚುನಾವಣೆ ಗೆದ್ದಿದೆ. ಡಿಎಂಕೆ ನೀಡಿದ ಬಣ್ಣದ ಟೀವಿಯ ಭರವಸೆಯನ್ನು ಕಾಂಗ್ರೆಸ್ ತನ್ನದೇ ಎಂಬಂತೆ ಸ್ವೀಕರಿಸಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಿಗೂ ಪ್ರಾಂತೀಯ ಪಕ್ಷಗಳಿಗೂ ವ್ಯತ್ಯಾಸವೇ ಕಾಣದಂತಾಗಿದೆ. 

ನಮ್ಮ ಅನೇಕ ಸಾಂಸದರು ಗ್ರಾಮೀಣ ಪ್ರದೇಶಗಳಿಂದ ಚುನಾಯಿತರಾಗಿ ಬರುತ್ತಾರೆ. ಅವರುಗಳಿಗೆ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು ನಮ್ಮೆಲ್ಲರಿಗಿಂತ ಚೆನ್ನಾಗಿಯೇ ಗೊತ್ತಿರುತ್ತದೆ. ಸಮಸ್ಯೆಗಳು ತಿಳಿದಿರುವಾಗ ಅದಕ್ಕೆ ತಕ್ಕ ಸಮಾಧಾನದ ಬಗ್ಗೆಯೂ ಅವರಿಗೆ ಉತ್ತಮ ಅವಗಾಹನೆಯಿರುತ್ತದೆ. ಬಹಳಷ್ಟು ವ್ಯಂಗ್ಯಚಿತ್ರಗಳಲ್ಲಿ ಚಿತ್ರಿಸುವಂತೆ ನಮ್ಮ ರಾಜಕಾರಣಿಗಳು ಮೂರ್ಖರಲ್ಲ. ಸಿನೇಮಾಗಳಲ್ಲಿ ಚಿತ್ರಿಸುವಂತೆ ಖಳರೂ ಅಲ್ಲ. ಪಾರ್ಲಮೆಂಟರಿ ಸ್ಟಾಂಡಿಂಗ್ ಕಮಿಟಿಗಳ ಚರ್ಚೆಯ ವಿವರಗಳನ್ನು ನೋಡಿದರೆ, ಅವರುಗಳು ಪಕ್ಷಗಳ ಭಿನ್ನತೆಗಳನ್ನು ಬಿಟ್ಟು ಮೂಲ ವಿಷಯಗಳ ಬಗ್ಗೆ ಗಹನವಾಗಿ ಚರ್ಚಿಸಬಲ್ಲರು ಅನ್ನುವುದು ವೇದ್ಯವಾಗುತ್ತದೆ. ಕ್ಯಾಮರಾ ಎದುರಿಗಿಲ್ಲದಾಗ, "ಪಕ್ಷದ ಹಿತ" ಅನ್ನುವ ವಿಚಿತ್ರ ನಾಟಕೀಯ ಪರಿಸ್ಥಿತಿ ಇಲ್ಲದಾಗ ಇತರ ಪಕ್ಷದ ಕಾರ್ಯಕರ್ತರೊಂದಿಗೆ ಸ್ನೇಹದಿಂದ, ಎಷ್ಟೋ ಭಿನ್ನ ವಿಷಯಗಳನ್ನು ಚರ್ಚಿಸುವುದನ್ನು ಕಾಣಬಹುದು. ಉದಾಹರಣೆಗೆ ಈಚೆಗೆ ತಮ್ಮ ಪುಸ್ತಕ ಬಿಡುಗಡೆಯಾದಾಗ ಅದ್ವಾನಿಯವರು ತಮಗೂ ರಾಹುಲ್ ಗಾಂಧಿಗೂ ದೆಹಲಿಯ ವಿಮಾನ ನಿಲ್ದಾಣದ ಲೌಂಜಿನಲ್ಲಿ ನಡೆದ ಸಂಭಾಷಣೆಯ ಬಗ್ಗೆ ಮಾತನಾಡಿದ್ದರು. ಇಂತಹ ಮಾತುಕತೆಗಳು ಬಹಳವೇ ಸಾಮಾನ್ಯ. ಆದರೂ ಚುನಾವಣೆ, ಸಂಸತ್ತಿನ ಕೆಲಸಕ್ಕೆ ಬಂದಾಗ ತಮ್ಮ ಸ್ವಂತ ಅಭಿಪ್ರಾಯವನ್ನೂ ಮೀರಿ, ತಾವು ಖುದ್ದಾಗಿ ಬಹುಶಃ ನಂಬದ ವಿಚಾರದ ಬಗ್ಗೆ ಮೇಜುಗುದ್ದಿ ಮಾತನಾಡುವ ಶಕ್ತಿಯೂ ಅವರುಗಳಿಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮಂಡಿಸಿದ ೬೦,೦೦೦ ಕೋಟಿರೂಪಾಯಿಯ ಸಾಲ ಮನ್ನಾ ಯೋಜನೆಯನ್ನು ಒಳ್ಳೆಯ ಯೋಜನೆಯೆಂದು ಚಿದಂಬರಂ ಅವರು ನಿಜಕ್ಕೂ ನಂಬಿದ್ದಾರೆಯೇ? ಅದೇ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೃಷಿಗೇ ಬಳಸಬಹುದಿತ್ತೇ? 
ಈ ಪ್ರಶ್ನೆಗಳನ್ನು ಕೇಳಿದಾಗ ಚಿದಂಬರಂ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ಬರಲಿರುವ ಚುನಾವಣೆಗಾಗಿ ತಯಾರಿ ನಡೆಸಬೇಕೆಂದಿರುವ ಕಾಂಗ್ರೆಸ್ ಪಕ್ಷಕ್ಕೆ ಬೇಕಿರುವ, ಜನರನ್ನು ಆಕರ್ಷಿಸಬಹುದಾದ "ಒಂದು ಸಾಲಿನ ಕಥೆ"ಯ ಒತ್ತಡಕ್ಕೂ ಇರಬಹುದಾದ ಜಟಾಪಟಿ ನಮಗೆ ಕಾಣಿಸುತ್ತದೆ.

ಸಿನೇಮಾ ರಂಗದಲ್ಲಿ "single line story" ಅನ್ನುವ ಮಾತು ಪ್ರಚಲಿತವಿದೆ. ಸಿಂಗಲ್ ಲೈನ್ ಕಥೆಯೆಂದರೆ, ಚಿತ್ರಕಥೆಯ ಮುಖ್ಯಾಂಶಗಳು ಏನೆಂದು ಸರಳವಾಗಿ ವಿವರಿಸುವ ವ್ಯೂಹ. ಇದರಿಂದಾಗಿ ಆ ಚಿತ್ರದಲ್ಲಿ ಏನು ನಿರೀಕ್ಷಿಸಬಹುದು ಎಂದು ಅದರ ತಯಾರಿಯಲ್ಲಿ ತೊಡಗಿರುವವರಿಗೆ ಅರ್ಥವಾಗುತ್ತದೆ. ಹಾಗೂ ಅದು ಬಾಕ್ಸ್ ಆಫೀಸಿನಲ್ಲಿ ಗೆಲ್ಲಬಹುದೋ ಅನ್ನುವ ಒಂದು ಅಂದಾಜೂ ಸಿಗುತ್ತದೆ. ಆದರೆ ಎಷ್ಟೋ ಇಂಥಹ ಪ್ರಯೋಗಗಳು ಮಣ್ಣುಮುಕ್ಕುವುದನ್ನು ನಾವು ಕಂಡಿದ್ದರೂ "ಲವ್ ಸ್ಟೋರಿ, ಸೆಂಟಿಮೆಂಟು ಇದೆ, ಪಕ್ಕದ ಕಾಮೆಡಿಯ ಟ್ರಾಕಿನಲ್ಲಿ ಹೀಗೆ ನಡೆಯುತ್ತದೆ.. ೮ ಹಾಡುಗಳು, ೬ ಫೈಟುಗಳು, ಯೂತ್‍ಗೆ ಅಪೀಲ್ ಆಗುತ್ತದೆ" ಅನ್ನುವಂಥಹ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೇ. ಚುನಾವಣೆಗೆ ಮುನ್ನ ಬರುವ ಘೋಷಣಾ ಪತ್ರಗಳೂ ರಾಜಕೀಯ showmanshipನ ಸಿಂಗಲ್ ಲೈನ್ ಕಥೆಗಳೇ ಆಗಿವೆ. ಈ ಸಿಂಗಲ್ ಲೈನ್ ಕಥೆಗಳ ಬಂಧನವನ್ನು ಮೀರಿ ನಿಂತಾಗ ಅನಿರೀಕ್ಷಿತ ಗೆಲುವುಗಳು ಸಿಗುತ್ತವೆ ಅನ್ನುವುದನ್ನು ರಾಜಕೀಯ ಪಕ್ಷಗಳು ಗಮನಿಸಿದಂತಿಲ್ಲ. ಗೆಲ್ಲುತ್ತಾರೆಂದು ನಂಬಿದ್ದ ಚಂದ್ರಬಾಬುವಿನ ಸೋಲು, ಸೋಲುತ್ತಾರೆಂದು ನಂಬಿದ್ದ ಮಾಯಾವತಿಯ ಗೆಲುವು, ಯಾವುದೇ ಭರವಸೆಗಳನ್ನು ನೀಡದೇ - ಕೆಲಸದ ಆಧಾರದ ಮೇಲೆ ಓಟು ಕೇಳಿ ಗೆದ್ದ ನರೇಂದ್ರ ಮೋದಿಯ ಮಾಯ, ಅದೇ ಇಂಡಿಯಾ ಶೈನಿಂಗ್ ಉಪಯೋಗಿಸಿ ನೆಲಕಚ್ಚಿದ ಬಿಜೆಪಿ, ಈ ಎಲ್ಲವನ್ನೂ ನೋಡಿದಾಗ ಯಾವುದೇ ಗೆಲುವಿಗೆ ನಿರ್ದಿಷ್ಟ ಫಾರ್ಮುಲಾ ಇಲ್ಲವೆಂಬುದು ವೇದ್ಯವಾಗುತ್ತದೆ. ಆದರೂ, ಪ್ರತಿ ಸಿನೇಮಾದಲ್ಲೂ ಇರುವ ೮ ಹಾಡು ೨ ಮಾನಭಂಗ ಪ್ರಸಂಗಗಳಂತೆ ಘೋಷಣಾಪತ್ರಗಳು ಇಂಥದೇ ಒಂದು ಫಾರ್ಮುಲಾ ಹುಡುಕಿ ಮುಂದೆ ನಡೆದಿವೆ. ಗೆದ್ದ ಸಿನೇಮಾದ ಕಥೆಯನ್ನು ರೀಮೇಕ್ ಮಾಡಿದಂತೆಯೇ ರಾಜಕೀಯ ಯೋಜನೆಗಳೂ ಎರವಲು ನೀತಿಯ ಮೇಲೆಯೇ ನಿಂತಂತಿದೆ! 

ನೀತಿಗಳನ್ನು ಯೋಜನೆಗಳನ್ನೂ ರೂಪಿಸುವಾಗ ನಾವುಗಳು ಕೆಲವು ಮಿಥ್ಯೆಗಳಿಗೆ ಬಲಿಯಾಗುತ್ತೇವೆ. ಅದರಲ್ಲಿ ಒಂದು ದೊಡ್ಡ ಮಿಥ್ಯೆಯೆಂದರೆ ಗ್ರಾಮೀಣ ಪ್ರದೇಶದ ನೀತಿಗಳನ್ನು ರೂಪಿಸುವಾಗ ಅದು ಪೂರ್ಣವಾಗಿ ಕೃಷಿಯಲ್ಲಿ ಅಡಕವಾಗಿರಬೇಕೆಂಬ ಮಿಥ್ಯೆ. ಈಚಿನ ಸೆನ್ಸಸ್ ಮಾಹಿತಿಯನುಸಾರ ದೇಶದ ಗ್ರಾಮೀಣ ಪ್ರಾಂತದಲ್ಲಿ ಕೃಷಿಕರು [ಕಲ್ಟಿವೇಟರ್ಸ್] ಕೇವಲ ೪೦% ಜನ ಮಾತ್ರ ೩೩% ಜನ ವ್ಯವಸಾಯ ಕೂಲಿಗಳು. ಹೀಗಾಗಿ ಕೃಷಿಯಾಧಾರಿತ ನೀತಿಗಳನ್ನು ಯೋಜಿಸಿದಾಗ ಹೆಚ್ಚಿನಂಶ ಪ್ರಯೋಜನವಾಗುವುದು ಈ ೪೦% ಜನರಿಗೆ ಮಾತ್ರ. ಆದರೂ ಬಡತನದ ಮಾತಾಡುವಾಗ ಅದನ್ನು ಗ್ರಾಮೀಣ ಪ್ರದೇಶಕ್ಕೆ ಸೀಮಿತಗೊಳಿಸುವ ಮಿಥ್ಯೆ. ಹೀಗಾಗಿ ಬಡತನ=ಗ್ರಾಮೀಣ ಪ್ರದೇಶ = ಕೃಷಿ ಅನ್ನುವ ಸರಳೀಕರಣದ ಆಧಾರದ ಮೇಲೆ ಅನೇಕ ನೀತಿಗಳು ರೂಪಿತವಾಗುತ್ತವೆ. ಕಳೆದ ಹಲವು ದಶಕಗಳಲ್ಲಿ ಭಿನ್ನ ಸರಕಾರಗಳು ರೂಪಿಸಿರುವ ಗ್ರಾಮೀಣ ವಿತ್ತ ನೀತಿಯನ್ನು ಗಮನಿಸಿದಾಗ ನಮಗೆ ಈ ನೀತಿಗಳು ಎಷ್ಟು ದೂರದೃಷ್ಟಿರಹಿತವಾಗಿದ್ದವು ಅನ್ನುವ ಮಾತು ಮನವರಿಕೆಯಾಗುತ್ತದೆ.
 

ಗ್ರಾಮೀಣ ವಿತ್ತದ ದುರಂತದ ದೊಡ್ಡ ಘಟ್ಟ ಆರಂಭವಾದದ್ದು ಬಹುಶಃ ೧೯೮೯ರಲ್ಲಿ. ಆದರೆ ಅದಕ್ಕೂ ಮುಂಚೆ ಆ ದುರಂತದ ಮುನ್ಸೂಚನೆಗಳನ್ನು ಭಿನ್ನ ಸರಕಾರಗಳು ನೀಡುತ್ತಲೇ ಬಂದಿದ್ದವು. ಆದರೆ ೫೦ರಿಂದ ೭೦ರ ದಶಕದವರೆಗೂ ಸರಕಾರದ ನೀತಿಗಳು ಮೇಲ್ಮುಖವಾಗಿದ್ದವೆಂದೇ ಹೇಳಬೇಕು. ೧೯೫೦ರ ಅಖಿಲ ಭಾರತ ಗ್ರಾಮೀಣ ಋಣ ಸರ್ವೆ, ಮತ್ತು ದಶಕಕ್ಕೊಮ್ಮೆ ಬರುವ ಅಖಿಲ ಭಾರತ ಋಣ ಮತ್ತು ಹೂಡಿಕೆಯ ಸರ್ವೆ [ಆಲ್ ಇಂಡಿಯಾ ರೂರಲ್ ಕ್ರೆಡಿಟ್ ಸರ್ವೆ/ಗೋರ್ವಾಲಾ ಸಮಿತಿ, ಆಲ್ ಇಂಡಿಯಾ ಡೆಟ್ ಅಂಡ್ ಇನ್ವೆಸ್ಟ್ಮೆಂಟ್ ಸರ್ವೆ] ಮಾಹಿತಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಿತ್ತೀಯ ಸದುಪಾಯ ಹೆಚ್ಚಿನಂಶ ಬಡ್ಡೀ ವ್ಯಾಪಾರಿಗಳು ಪೂರೈಸುತ್ತಿದ್ದು ಸಂಸ್ಥಾಗತ ಮೂಲದಿಂದ ಬರುತ್ತಿದ್ದ ಭಾಗ ಅಲ್ಪವಾಗಿತ್ತು. ಹೀಗಾಗಿಯೇ ಸಹಕಾರೀ ಸಂಸ್ಥೆಗಳಲ್ಲಿ ಸರಕಾರದ ಭಾಗಸ್ವಾಮ್ಯವಿರಬೇಕೆಂದು ಗೊರ್‍ವಾಲಾ ಸಮಿತಿ ಸೂಚಿಸಿತ್ತು. ಹೆಚ್ಚಿನಂಶ ನಮ್ಮ ಸಹಕಾರೀ ನೀತಿಗಳು ಈ ಸಮಿತಿಯ ಸೂಚನೆಗಳ ಆಧಾರದ ಮೇಲೆ ಆ ದಶಕಗಳಲ್ಲಿ ರೂಪಿತವಾದವು.
೧೯೭೦ರ ವೇಳೆಗೆ ಗ್ರಾಮೀಣ ವಿತ್ತ ರಂಗದಲ್ಲಿ ಸಂಸ್ಥಾಗತ ಮೂಲಗಳ ಪಾತ್ರವನ್ನು ಹಿಗ್ಗಿಸಲು ಬ್ಯಾಂಕುಗಳ ರಾಷ್ಟ್ರೀಕರಣವನ್ನೂ ಮಾಡಲಾಯಿತು. ಅದರಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಲಾಭವಾಯಿತೆಂದು ರೋಹಿಣಿ ಪಾಂಡೇ ಮತ್ತು ಬರ್ಗಸ್ ತಮ್ಮ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಇದಕ್ಕೆ ಪೂರಕವಾದ ವಿತ್ತೀಯ ನೀತಿಯಲ್ಲಿ ಎರಡು ಅಂಶಗಳಿದ್ದವು.
  • ೧. ಈಗಾಗಲೇ ಬೇರೆ ಯಾವುದಾದರೂ ಬ್ಯಾಂಕಿನ ಶಾಖೆಯಿರುವ ನಗರ ಪ್ರದೇಶದಲ್ಲಿ ಹೊಸ ಶಾಖೆಯನ್ನು ತೆರೆಯಬೇಕಾದರೆ, ಬ್ಯಾಂಕಿಲ್ಲದ ನಾಲ್ಕು ಹಳ್ಳಿಗಳಲ್ಲಿ ಶಾಖೆ ತೆಗೆದಾಗ ಮಾತ್ರ ಅದಕ್ಕೆ ಲೈಸೆನ್ಸ್ ಸಿಗುತ್ತಿತ್ತು.
  • ೨. ಒಟ್ಟಾರೆ ಸಾಲದ ೧೮ ಪ್ರತಿಶತ ಕೃಷಿಗಾಗಿಯೇ ನೀಡುವುದು ಅನಿವಾರ್ಯವಾಗಿತ್ತು. ಅದರಲ್ಲೂ ೧೩.೫% ಕೃಷಿಗೆ ನೇರವಾಗಿ ನೀಡಬೇಕಾದ ಸಾಲವಾಗಿತ್ತು.
ಮೊದಲ ನೀತಿಯನ್ನು ೧೯೯೦ರ ದಶಕದಲ್ಲಿ ಕೈಬಿಡಲಾಯಿತಾದರೂ, ಎರಡನೆಯ ನೀತಿಯನ್ನು ಇಂದಿಗೂ ಪಾಲಿಸುತ್ತಿದ್ದೇವೆ. ಈ ನೀತಿ ಒಳ್ಳೆಯದೇ, ಆದರೆ ಒಟ್ಟಾರೆ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರಬೇಕು ಅನ್ನುವ ನೀತಿಯಿಂದ ಮುಂದೆ ಹೋಗಿ ಆ ಸಂಸ್ಥೆಗಳು ಯಾವರೀತಿಯಾದಂತಹ ಪಾತ್ರವನ್ನು ವಹಿಸಬೇಕು - ಯಾವ ರೀತಿಯ ಋಣ ಸದುಪಾಯವನ್ನು ಯಾವ ಯೋಜನೆಗಳ ಮೂಲಕ, ನೀಡಬೇಕೆನ್ನುವುದನ್ನು ಸರಕಾರ ರೂಪಿಸತೊಡಗಿದಾಗ ಸರಕಾರದ ನೀತಿಯ ಪತನ ಕಾಣಿಸಿತು ಅನ್ನಿಸುತ್ತದೆ. ಈ ಪತನದ ಮುಖ್ಯ ಮೈಲಿಗಲ್ಲುಗಳೆಂದರೆ -
  • ೧. ಕೇಂದ್ರದಲ್ಲಿ ರೂಪಿತವಾಗಿ ಬ್ಯಾಂಕು, ಸಹಕಾರಿ ಸಂಘಗಳ ಗಂಟಲುಗಳಿಗೆ ತುರುಕಿದ, ಬಹುಷಃ ಅನೇಕ ಪ್ರದೇಶಗಳಿಗೆ ಸಮರ್ಪಕವಾಗಿಲ್ಲದ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಸಾಲಗಳು.
  • ೨. ಊರೂರಲ್ಲಿ ಗ್ರಾಮಗ್ರಾಮಗಳಲ್ಲಿ ಮಂತ್ರಿಗಳ ಮೂಲಕ ನಡೆದ ಬ್ಯಾಂಕುಗಳ ಸಾಲ ಮೇಳ ಕಾರ್ಯಕ್ರಮಗಳು.
ಈ ಎರಡೂ ಕಾರ್ಯಕ್ರಮಗಳಿಂದಾಗಿ, ಸಾಲ ಕೇಳದ ಜನರಿಗೆ, ಅವರ ಮನೆಯ ಬಾಗಿಲಿಗೇ ಹೋಗಿ ಅವರಿಗೆ ಸಮರ್ಪಕವಾಗಿಲ್ಲದ ಉದ್ದೇಶಕ್ಕಾಗಿ ಸಾಲ ನೀಡುವುದು. ಅಥವಾ ನೀಡಿದಂತೆ ಬರಕೊಳ್ಳುವ ಪ್ರಕ್ರಿಯ ಪ್ರಾರಂಭವಾಯಿತು. ಯಾವುದೇ ಆಗಿರಲಿ ಇದು ಒಂದು ಟೈಂ ಬಾಂಬಿನಂತೆ, ಸಿಡಿಯಲು ತಯಾರಾದ ವಿಷಯವಾಗಿತ್ತು. ಇದು ಎಷ್ಟರ ಮಟ್ಟಿಗೆ ದುರಂತಮಯ ವಿಷಯವಾಗಿತ್ತೆಂದರೆ, "ಲೋನಿ"ಗೂ "ಸಾಲ"ಕ್ಕೂ ಇರುವ ವ್ಯತ್ಯಾಸ ಭಾಷಾಂತರದ ವಿಷಯವಾಗದೆ, ಲೋನೆಂದರೆ, ಬ್ಯಾಂಕಿನಿಂದ ಬರುವ ಮೊಬಲಗು, ಅದನ್ನು ವಾಪಸ್ಸು ಕಟ್ಟುವ ಅವಶ್ಯಕತೆಯಿಲ್ಲ, ಸಾಲವೆಂದರೆ ಬಡ್ಡಿವ್ಯಾಪಾರಿಗಳಿಂದ ಬರುವುದು, ಅದನ್ನು ಕಟ್ಟುವ ಅವಶ್ಯಕತೆ ಇದ್ದೇ ಇದೆ ಅನ್ನುವ ಮಾತನ್ನು ಜನ ಗ್ರಹಿಸಿಬಿಟ್ಟಿದ್ದರು ಎಂದು ಅಲೋಷಿಯಸ್ ಫರ್ನಾಂಡಿಸ್ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ. ಆಡುಭಾಷೆಯನ್ನೇ ಬದಲಾವಣೆ ಮಾಡಿದ ಕೀರ್ತಿ ಕರ್ನಾಟಕದ ಜನಾರ್ಧನ ಪೂಜಾರಿಯವರಿಗೆ ಸಲ್ಲುತ್ತದೆ!!
ಈ ಎರಡೂ ಕಾರ್ಯಕ್ರಮಗಳಿಂದ ಆಗಿದ್ದೇನೆಂದರೆ ಸಹಕಾರಿ ಸಂಘಗಳು ಸಹಕಾರಿ ಸಂಘಗಳಾಗಿ ಉಳಿಯದೇ ಸರಕಾರೀ ವಿಭಾಗಗಳಾಗಿ ತಯಾರಾದದ್ದು. ಬ್ಯಾಂಕುಗಳು ಸಾಲ ಮೇಳಗಳ ಒತ್ತಡಕ್ಕೆ ಬಲಿಯಾಗಿ ಹಣವನ್ನು ಹಂಚಿದ್ದು. ಕೆಟ್ಟ ತಿರುಗಿಬರಲಾರದ ಸಾಲದ ದೊಡ್ಡ ಬೆಟ್ಟವೇ ಭಾರತದ ಆರ್ಥಿಕ ಸ್ಥಿತಿಯ ಮೇಲೆ ಒಂದು ಒತ್ತಡವಾಗಿ ನಿಂತಿತ್ತು. ೧೯೮೯ರಲ್ಲಿ ಚೌಧರೀ ದೇವೀಲಾಲರ ಪ್ರಿಯಯೋಜನೆಯಾದ ಸಾಲಮನ್ನಾ ಕಾರ್ಯಕ್ರಮವನ್ನು ಮೊದಲಬಾರಿಗೆ ದೇಶಾದ್ಯಂತ ಘೋಷಿಸಲಾಯಿತು. ಆ ಯೋಜನೆಯನ್ನು ಮಂಡಿಸಿದವರು ಅಂದಿನ ವಿತ್ತ ಮಂತ್ರಿಯಾಗಿದ ಮಧು ದಂಡವತೆಯವರಾಗಿದ್ದರೂ, ದೇವೀಲಾಲರ ಯೋಜನೆಯೆಂದೇ ಅದು ತನ್ನ ಖ್ಯಾತಿಯನ್ನು ಪಡೆಯಿತು. ಈ ಕಾರ್ಯಕ್ರಮ ಗ್ರಾಮೀಣ ವಿತ್ತೀಯ ಯೋಜನೆಯ ಮೇಲೆ ಸರಕಾರ ನೀಡಿದ ಒಂದು ಬಲವಾದ ಪ್ರಹಾರವಾಗಿತ್ತು. ಇದರಿಂದೇನಾಯಿತು? ಲೋನ್ ಅನ್ನುವುದು ಸರಕಾರದ ದೇಣಿಗೆ ಎನ್ನುವ ಮಾತು ಸತ್ಯವಾಗುತ್ತಾ ಹೋಯಿತು. ಹೌದು, ಸಾಲ ತಿರುಗಿ ಕಟ್ಟಿದವರು ಕೋಡಂಗಿಗಳಾದರು. ತೀರಿಸದೇ ಓಡಾಡಿದವರು ಈರಭದ್ರರಾದರು! ಇದರ ಪ್ರಭಾವವನ್ನು ಆ ಕ್ಷಣಕ್ಕೆ ಲೆಕ್ಕ ಕಟ್ಟಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ, ಸರಕಾರ "ಹೇಗೂ ವಾಪಸ್ಸು ಬರುವುದಿಲ್ಲ" ಎಂದು ನಂಬಿದ್ದ ಹಣವನ್ನು ಸಹಕಾರ ಸಂಘಗಳಿಗೆ, ಗ್ರಾಮೀಣ ಬ್ಯಾಂಕುಗಳಿಗೆ ಮತ್ತು ಬ್ಯಾಂಕುಗಳಿಗೆ ನೀಡಿದ್ದರಿಂದ ಈ ಸಂಸ್ಥೆಗಳ ಬ್ಯಾಲೆನ್ಸ್ ಷೀಟ್ ಚೆನ್ನಾಗಿ ಕಾಣತೊಡಗಿತು. ಆದರೆ ಆ ನಂತರದ ದಶಕದಲ್ಲಿ ನಮಗೆ ಸ್ಪಷ್ಟವಾಗಿ ಕಂಡದ್ದು ಸಹಕಾರಿ ಸಂಘಗಳ ಅವಸಾನ, ಮತ್ತು ಗ್ರಾಮೀಣ ಬ್ಯಾಂಕುಗಳು ನಷ್ಟದ ಪ್ರಪಾತದಲ್ಲಿ ತೂರಿಹೋದ ದುರಂತ ಗಾಥೆ. 

೫೦ರ ದಶಕದಲ್ಲಿ ಗ್ರಾಮೀಣ ಕುಟುಂಬಗಳು ಪಡೆದ ಒಟ್ಟಾರೆ ಸಾಲದಲ್ಲಿ ಸಂಸ್ಥಾಗತ ಮೂಲಗಳಿಂದ ಪಡೆದದ್ದು ಕೇವಲ ೭.೩ ಪ್ರತಿಶತವಾಗಿತ್ತು. ಆ ಸಂದರ್ಭದಲ್ಲಿಯೇ ಗೋರ್‌ವಾಲಾ ಸಮಿತಿ ಸಹಕಾರಿ ಸಂಘಗಳು ಸರಕಾರದ ಭಾಗಸ್ವಾಮ್ಯದಲ್ಲಿ ಕೆಲಸ ಮಾಡಬೇಕೆಂದು ಕರೆಯಿತ್ತದ್ದು. ೧೯೬೧ರ ವೇಳೆಗ ಸಂಸ್ಥಾಗತ ಮೂಲಗಳ ಪಾಲು ೧೮.೭% ಸೇರಿತ್ತು. ೧೯೭೧ರ ವೇಳೆಗೆ ಇದು ಇನ್ನೂ ಹೆಚ್ಚಾಗಿ ೩೨%ವಾಗಿತ್ತು. ಆಗಷ್ಟೇ ಬ್ಯಾಂಕುಗಳ ರಾಷ್ಟ್ರೀಕರಣ, ಮತ್ತು ೭೦ ದಶಕದಲ್ಲಿ ಪ್ರಾರಂಭವಾದ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯಿಂದಾಗಿ ಒಂದೇ ದಶಕದಲ್ಲಿ ಸಂಸ್ಥಾಗತ ಮೂಲದಿಂದ ಬಂದ ಸಾಲದ ದುಪ್ಪಟ್ಟಾಗಿ ೬೩ ಪ್ರತಿಶತವಾಯಿತು. ೧೯೯೧ರವರೆಗೂ ಇದು ಬೆಳವಣಿಗೆಯದಿಕ್ಕನ್ನೇ ಹೊಂದಿತ್ತು. ೧೯೯೧ರ ಸರ್ವೇ ಪ್ರಕಾರ ಸಂಸ್ಥಾಗತ ಮೂಲದ ಪಾಲು ೬೬ ಪ್ರತಿಶತವಾಯಿತು. ಆದರೆ ೧೯೮೯ರ ಮನ್ನಾದ ನಂತರ ಈ ಪಾಲು ೬೧%ಗೆ ಇಳಿದದ್ದನ್ನು ನಾವು ಕಾಣಬಹುದಾಗಿದೆ. ಆದರೆ ಇದರಲ್ಲಿನ ಇನ್ನೂ ಗಹನವಾದ ವಿಚಾರವೆಂದರೆ ಸಂಸ್ಥಾಗತ ಋಣದ ಭಾಗದಲ್ಲಿ ಸಹಕಾರ ಸಂಘಗಳ ಪಾಲು ೧೯೮೦ರ ದಶಕದಿಂದಲೇ ಕಿರಿದಾಗುತ್ತಾ ಹೋಗಿದ್ದು.
ಹೀಗಿರುವಾಗ ಋಣ ನೀಡುವ ಈ ಸಂಸ್ಥೆಗಳನ್ನು ಮುಗಿಸಿಬಿಡಬಹುದಾದ ಈ ಆಶ್ವಾಸನೆಗಳನ್ನು ಪೈಪೋಟಿಯ ಮೇಲೆ ಪಕ್ಷಗಳು ಯಾಕೆ ನೀಡುತ್ತವೆ ಎನ್ನುವುದು ಅರ್ಥವಾಗದಿರುವ ಮಾತಾಗಿದೆ. ೧೯೯೧ರ ನಂತರ ಬ್ಯಾಂಕುಗಳಿಗೆ ಸಾಕಷ್ಟು ಸ್ವಾಯತ್ತತೆಯನ್ನು ಸರಕಾರ ನೀಡಿತ್ತು. ಒಟ್ಟಾರೆ ಋಣದಲ್ಲಿ ೪೦ ಪ್ರತಿಶತ ಕಾಯ್ದಿಟ್ಟ ಕೆಲವು ವಲಯಗಳಿಗೆ ನೀಡಬೇಕೆಂದೂ, ೧೮ ಪ್ರತಿಶತ ಋಣ ಕೃಷಿಗಾಗಿಯೇ ನೀಡಬೇಕೆಂಬ ನೀತಿಯನ್ನು ಪಾಲಿಸುವುದರಿಂದಾಗಿ, ಆರ್ಥಿಕವಾಗಿ ಮಿಕ್ಕ ಕ್ಷೇತ್ರಗಳು ಬೆಳೆದ ಗತಿಯಲ್ಲಿ ಕೃಷಿಗೂ ಋಣ ಲಭ್ಯವಾಗುವ ನೀತಿಯಂತೂ ಇದ್ದೇ ಇತ್ತು. ಆದರೆ ಕೃಷಿ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಆರ್ಥಿಕ ಪರಿಹಾರವನ್ನು ಹುಡುಕುವವರೆಗೂ ಸಾಲ, ಬಡ್ಡಿಗೆ ಸಂಬಂಧಿಸಿದ ನೀತಿಗಳು ಮರುಕಳಿಸುತ್ತಲೇ ಇರುತ್ತವೆ. ೧೯೯೧ರ ನಂತರ ಆರ್ಥಿಕ ನೀತಿಯಲ್ಲಿ ಒಂದೆರಡು ಹೆಜ್ಜೆ ಮುಂದೆ ಹೋಗಿದ್ದ ಸರಕಾರ ೨೧ನೇ ಶತಮಾನ ಪ್ರವೇಶಿಸುವ ವೇಳೆಗೆ ಹಿಂದಕ್ಕೆ ನಾಲ್ಕಾರು ಹೆಜ್ಜೆಗಳನ್ನು ಹಾಕಬೇಕೆಂದು ನಿರ್ಧರಿಸಿದಂತಿದೆ!

ಈಬಾರಿ ಕೇಂದ್ರ ಸರಕಾರ ಘೋಷಿಸಿರುವ ಸಾಲ ಮನ್ನಾದ ಮೂಲ ಸರಕಾರದ ಕಳೆದ ನಾಲ್ಕಾರು ವರ್ಷಗಳ ನೀತಿಯಲ್ಲಿ ನಾವು ಕಾಣಬಹುದಾಗಿದೆ. ಮೊದಲನೆಯದಾಗಿ ಕೃಷಿಯಲ್ಲಿ ಬಿಕ್ಕಟ್ಟು ಕಂಡಾಗಲೆಲ್ಲಾ ಸರಕಾರ ಮತ್ತು ರಾಜಕೀಯ ಪಕ್ಷಗಳ ಉತ್ತರ ಋಣವನ್ನು ಸುಲಭವಾಗಿ ರೈತರಿಗೆ ಒದಗಿಸುವತ್ತಲೇ ವಾಲುತ್ತದೆ. ಇದಕ್ಕೆ ಕಾರಣ ಬಹುಶಃ "ಸಿಂಗಲ್ ಲೈನ್ ಕಥೆ"ಗೆ ಇದು ಪೂರಕವಾಗಿರಬಹುದಾದ್ದೇ ಇರಬಹುದು. ಹೀಗಾಗಿ "ಮೂರು ವರ್ಷಗಳಲ್ಲಿ ಕೃಷಿ ಸಾಲ ದ್ವಿಗುಣ" ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಅದನ್ನು ಸಾಧಿಸಿದ್ದೇವೆಂದು ಘೋಷಿಸುವುದೂ ಸುಲಭ, ಅದರಬಗ್ಗೆ ಸಂಸ್ಥೆಗಳ ಕೈ ತಿರುಚುವುದೂ ಸುಲಭ. ಅದೇ ಕೃಷಿಗೆ ಸಂಬಧಿತ ವಿಸ್ತರಣೆಯ ಕಾರ್ಯಕ್ರಮಗಳನ್ನು ಅದರ ಮೇಲಾದ ಖರ್ಚಿನಿಂದ ಮಾತ್ರ ಅಳೆಯಬಹುದಾಗಿ, ಸಿಂಗಲ್ ಲೈನ್ ಕಥೆಗೆ ಇದು ಪೂರಕವಾಗುವುದಿಲ್ಲವಾದ್ದರಿಂದ ಇದು ಆಕರ್ಷಕ ನೀತಿಯಾಗುವುದಿಲ್ಲ.
ಅರ್ಥಾತ್ ಆಕರ್ಷಕ ಘೋಷಣೆಯಾಗಬಲ್ಲಂಥದ್ದೇ ಆಕರ್ಷಕ ನೀತಿಯಾಗಬಹುದು. ಅಷ್ಟೇ. 

ಕೃಷಿ ಸಾಲ ದ್ವಿಗುಣ ಕಾರ್ಯಕ್ರಮ, ಕೃಷಿ ಸಾಲದ ಮೇಲೆ ಬಡ್ಡಿದರದಲ್ಲಿ ರಿಯಾಯಿತಿ, ಈ ಎರಡರಿಂದ ಕೃಷಿ ಉತ್ಪಾದನೆಯಲ್ಲಿ ತುಸುವಾದರೂ ಬೆಳವಣಿಗೆ ಕಾಣಬೇಕಿತ್ತು. ಆದರೆ ಒಟ್ಟಾರೆ ಉತ್ಪಾದಕತೆ ಮತ್ತು ಉತ್ಪಾದನೆ ಸ್ಥಗಿತವಾಗಿಯೇ ಉಳಿದಿದೆ. ಅರ್ಥಾತ್: ಹಣದ ಹೊಳೆಯಿಂದ ಬೆಳೆ ಬೆಳೆಯುವುದಿಲ್ಲ. ಅದಕ್ಕೆ ಬೇಕಾದ್ದು ಬೀಜ, ಗೊಬ್ಬರ, ನೀರು ಮತ್ತು ಉತ್ತಮ ಮಾರುಕಟ್ಟೆ. ಈ ನಾಲ್ಕನ್ನು ಒದಗಿಸದೇ ಬರೇ ಹಣವನ್ನು ಸಾಲದ ರೂಪದಲ್ಲಿ ಒದಗಿಸಿದರೆ ಏನು ಸಾಧಿಸಿದಂತಾಯಿತು? ಸಾಧಿಸಿದ್ದು ಇಷ್ಟೇ: ಸಾಲಕ್ಕೂಳಗಾದ, ಆತ್ಮಹತ್ಯೆಗೆ ತಯಾರಾದ ಕೃಷಿಕರು. ಈ ಕೃಷಿಕರೂ ಯಾವ ಸ್ಥರದವರು? ರಿಜರ್ವ್ ಬ್ಯಾಂಕಿನ ಅಂಕಿ ಅಂಶದ ಪ್ರಕಾರ ಕೃಷಿಸಾಲದ ಮೊತ್ತ ಬೆಳೆಯಿತಾದರೂ, ಅದನ್ನು ತೆಗೆದುಕೊಂಡ ಕೃಷಿಕರ ಸಂಖ್ಯೆ ಕಡಿಮೆಯಾಯಿತು. ಪ್ರತಿ ಸಾಲದ ಎಕೌಂಟಿನ ಸರಾಸರಿ ಮೊತ್ತ ಬೆಳೆಯಿತು. ಒಟ್ಟಾರೆ ಭೂ ಹಿಡುವಳಿಯ ಸರಾಸರಿ ವಿಸ್ತಾರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿಕರಿಗೆ ಕೊಡುತ್ತಿರುವ ಸರಾಸರಿ ಸಾಲ ಹೆಚ್ಚಾಗಿ, ಸಾಲ ಪಡೆವ ಕೃಷಿಕರು ಕಡಿಮೆಯಾಗುತ್ತಿದ್ದಾರೆಂದರೆ ಈ ಸಾಲ ದೊಡ್ಡ ಹಿಡುವಳಿಯಿದ್ದವರ ಕಡೆಗೆ ವಾಲಿದೆ ಅನ್ನುವುದನ್ನು ಹೇಳಲು ಯಾವ ಸಂಖ್ಯಾಶಾಸ್ತ್ರದ ಗಹನ ಫಾರ್ಮುಲಾವನ್ನೂ ಬಳಸುವ ಅವಶ್ಯಕತೆಯಿಲ್ಲ. ಒಟ್ಟಾರೆ ಉತ್ಪಾದಕತೆ, ಉತ್ಪಾದನೆ ಬೆಳೆಯದೆಯೇ ಸಾಲ ಬೆಳೆಯುತ್ತಿದೆ ಅಂದರೆ ಅದನ್ನು ತಿರುಗಿಕಟ್ಟಬಲ್ಲ ಕ್ಷಮತೆ ಕಡೆಮೆಯಾದದ್ದೇ ಸರಿಯಿರಬಹುದಲ್ಲ. ಇಲ್ಲ ಆ ಸಾಲ ಕೃಷಿಗಲ್ಲದೇ ಬೇರೆ ಯಾವುದೋ ಕಾರ್ಯಕ್ಕಾಗಿ ಉಪಯೋಗವಾಗುತ್ತಿರಬೇಕು. ಹೀಗಾಗಿ ದ್ವಿಗುಣಗೊಂಡ ಸಾಲದಲ್ಲಿ ಒಂದು ದೊಡ್ಡ ಗೊಂದಲದ ಟೈಂ ಬಾಂಬು ಇರುವುದು ವೇದ್ಯವೇ ಆಗಿತ್ತು.


ಹೀಗೆ ಕೃಷಿ ಸಾಲದಬಗೆಗಿನ ನೀತಿಗಳನ್ನು ಸರಕಾರ ಮತ್ತು ರಾಜಕೀಯ ಪಕ್ಷಗಳು ರೂಪಿಸುತ್ತಿದ್ದ ಕಾಲದಲ್ಲಿ ಕೃಷಿಗೇನಾಗುತ್ತಿತ್ತು? ಇದು ಆಸಕ್ತಿಯ ವಿಚಾರವೇ ಸರಿ. ಹರಿತ ಕ್ರಾಂತಿ ಬಂದಾಗಿನಿಂದಲೂ ಕೃಷಿಗಿದ್ದ ಜ್ಞಾನ ಮತ್ತು ಸಂಪನ್ಮೂಲಗಳು ರೈತನ ಕೈಯಿಂದ ಜಾರಿ ಹೊರಗಿನವರ ಕೈಗೆ ಹೋಗುವುದನ್ನು ನಾವು ಕಂಡಿದ್ದೇವೆ - ಮೊದಲಿಗೆ ರೈತ ತನ್ನ ಬೆಳೆಯಲ್ಲಿನ ಭಾಗವನ್ನೇ ಮುಂದಿನ ಬಿತ್ತನೆಗೆ ಬೀಜವಾಗಿ ಬಳಸುತ್ತಿದ್ದ. ಆದರೆ ಎಚ್.ವೈ.ವಿ ಬಂದಾಗಿನಿಂದ ಬೀಜವನ್ನು ಆತ ಕೊಳ್ಳಬೇಕಾಯಿತು. ಆ ಬೀಜವನ್ನು ಕೊಂಡ ಕೂಡಲೇ ಅದನ್ನು ಉಪಯೋಗಿಸಬೇಕಾದ ರೀತಿಯನ್ನು ಬೀಜ ಒದಗಿಸುವವರು ಸೂಚಿಸಿದ ಕ್ರಮವನ್ನು ಪಾಲಿಸಬೇಕಾಯಿತು. ಅರ್ಥಾತ್ ಕೃಷಿ ಮಾಡಬೇಕಾದ ತಂತ್ರವೂ ರೈತನ ಕೈಯಿಂದ ಆಚೆಗೆ ಹೋಯಿತು. ಇದೇ ಕಥೆ ಇತರ ಸಂಪನ್ಮೂಲಗಳಿಗೂ ವರ್ತಿಸುತ್ತದೆ. ಗೊಬ್ಬರವೂ, ಕೀಟನಾಶಕವೂ ರೈತನ ಕೈಯಿಂದ ತಪ್ಪಿ ಕಂಪನಿಗಳ ಕೈಗೆ ಸೇರಿದವು. ಸರಕಾರ ಒದಗಿಸುತ್ತಿದ್ದ "ಕೃಷಿ ವಿಸ್ತಾರ ಸೇವೆ" ಇಲ್ಲದಾದಾಗ ಮೊರೆ ಹೋಗಬೇಕಾದದ್ದು ಬೀಜ/ಕೀಟನಾಶಕ ತಯಾರಿಸುವ ಕಂಪನಿಗಳು ಒದಗಿಸುವ "ವಿಸ್ತಾರ ಸೇವೆ"ಗಳತ್ತ. ಯಾವ ಕೀಟನಾಶಕ ಕಂಪನಿ "ಕೀಟನಾಶಕಗಳನ್ನು ಉಪಯೋಗಿಸಬೇಡ" ಅನ್ನುವ ಉಪದೇಶವನ್ನು ನೀಡಬಹುದು? ಯೋಚಿಸಿ ನೋಡಿ! ಹೀಗಾಗಿ ಸಾಲ ಹೆಚ್ಚಾದರೂ ಮಿಕ್ಕ ಸೇವಗಳ ಬಗ್ಗೆ ಸರಕಾರ ಹೆಚ್ಚಿನ ಗಮನವನ್ನು ಹರಿಸಲಿಲ್ಲ. ಸಿಂಗಲ್ ಲೈನ್ ಕಥೆಯಲ್ಲಿ ಈ ಉಪಕಥೆಗಳಿಗೆ ತಾವಿಲ್ಲ. ಸಿನೆಮಾದಲ್ಲಿರುವ ಕಾಮೆಡಿ ಟ್ರಾಕಿನಂತೆ, ಇಲ್ಲಿ ಯಾರಿಗೂ ತಿಳಿಯದೆಯೇ ಒಂದು ಟ್ರಾಜೆಡಿ ಟ್ರಾಕಾಗಿ ವಿಸ್ತಾರ ಸೇವೆಗಳು ನಿಂತುಬಿಟ್ಟವು. 

ಇದರ ಜೊತೆಗೆ ಕ್ಯಾಪಿಟಲ್ ಫಾರ್ಮೇಶನ್ [ದೀರ್ಘಕಾಲ ಪ್ರಯೋಜನವಾಗುವಂತಹ ಹೂಡಿಕೆಗಳು] ಸರಕಾರೀ ವಲಯದಲ್ಲಲ್ಲದೇ ಹೆಚ್ಚಾಗಿ ಖಾಸಗೀ ವಲಯದಲ್ಲಿ ಆಗತೊಡಗಿದೆ. ಸರಳವಾಗಿ ಇದರ ಕಥೆಯನ್ನು ಇಂತು ನಿರೂಪಿಸಬಹುದು: ಸರಕಾರದ ಯೋಜನೆಯಡಿ ನೀರಾವರಿ ಒದಗಿಸಿದರೆ, ಅದರ ಎಲ್ಲ ಖರ್ಚೂ ಸರಕಾರದ್ದು. ಕಾಲುವೆಗಳಮೂಲಕ ಬಂದ ನೀರಾವರಿಯ ಲಾಭ ಕೃಷಿಕನಿಗೆ. ಅದೇ ಕೃಷಿಕ ಕೊಳವೆಬಾವಿ ತೋಡಿ, ಅದಕ್ಕೆ ಪಂಪು ಜೋಡಿಸಿದರೆ, ಅದರ ಖರ್ಚು ಅವನದೇ, ಅದರ ಸಾಲಕ್ಕಾಗುವ ಬಡ್ಡಿಯನ್ನೂ ಅವನೇ ತುಂಬಬೇಕು. ಮೊದಲ ಹಂತದಲ್ಲಿ ನೀರಾವರಿಯಿರುವುದರಿಂದ ಹೆಚ್ಚಾಗುವ ಪೈರಿನಿಂದಾಗಿ ಅದರಿಂದ ಬರುವ ಆದಾಯದಿಂದಾಗಿ ಈ ಖರ್ಚು ಅವನನ್ನು ಹೆಚ್ಚಾಗಿ ತಟ್ಟಲಾರದು. ಆದರೆ ಆ ಕೊಳವೆ ಬಾವಿ ಒಣಗಿ ಅದರ ಆಳವನ್ನು ಗಹನಗೊಳಿಸಬೇಕಿದ್ದರೆ, ಅದಕ್ಕೆ ಹೆಚ್ಚಿನ ಶಕ್ತಿಯ ಪಂಪನ್ನು ಹಾಕಬೇಕಿದ್ದರೆ, ಆಗ, ಇರುವ ಸಂಪನ್ಮೂಲಗಳಿಂದ ಬರುವ ಆದಾಯದ ಸ್ಥರವನ್ನು ಉಳಿಸಿಕೊಳ್ಳಲು, ಅಷ್ಟೇ ಪೈರನ್ನು ಉತ್ಪಾದಿಸಲು ಹೆಚ್ಚಿನ ಸಾಲ, ಹೆಚ್ಚಿನ ಬಡ್ಡಿ, ಹೆಚ್ಚಿನ ವಿದ್ಯುತ್ ಖರ್ಚುಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಇರುವ ಸ್ಥಳದಲ್ಲೇ ಇರಲು ಓಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಕಳೆದ ಹಲವು ವರ್ಷಗಳಲ್ಲಿ ಕ್ಯಾಪಿಟಲ್ ಫಾರ್ಮೇಷನ್ ಹೆಚ್ಚು ಖಾಸಗೀ ವಲಯದಲ್ಲೇ ಆಗಿದೆ.
 

ಕೃಷಿಯಾಧಾರಿತ ಸೇವೆಗಳನ್ನೊದಗಿಸುವ ರೀಟೈಲ್ ಕ್ರಾಂತಿಯಾಗುತ್ತಿರುವ ಕಾಲದಲ್ಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದುರಂತಗಾಥೆಯ ವಿಪರ್ಯಾಸ ರಾಜಕೀಯ ಪಕ್ಷಗಳಿಗೆ ತಟ್ಟುತ್ತಿಲ್ಲವೇ? ಟಾಟಾ
ಪ್ರಾರಂಭಿಸಿದ ಸ್ಟಾರ್ ಇಂಡಿಯಾ ಬಜಾರ್, ಬಿರ್ಲಾ ಪ್ರಾರಂಭಿಸಿದ ಮೋರ್ ಫರ್ ಯೂ, ಅಂಬಾನಿಯ ರಿಲಯನ್ಸ್ ಫ್ರೆಶ್, ಐ.ಟಿ.ಸಿ ಯ ಚೌಪಾಲ್ ಸಾಗರ್, ಬಿಯಾನಿಯ ಬಿಗ್ ಬಜಾರ್, ಆರ್.ಪಿ.ಜಿಯ ಸ್ಪೆನ್ಸರ್ಸ್, ಹಾಂಗ್‍ಕಾಂಗ್‌ನಿಂದ ಬಂದು ನೆಲೆಸಿರುವ ಡೈರೀಫಾರ್ಮ್ ನ ಫುಡ್ ವರ್ಲ್ಡ್, ಬೆಂಗಳೂರಿನಲ್ಲಿ ಕೂತು ಬಿಜಿನೆಸ್ ಮಾಡುತ್ತಿರುವ ಜರ್ಮನಿಯ ಮೆಟ್ರೋ, ನಮ್ಮ ದೇಶದ ಮೂಲೆಮೂಲೆಗೆ ಅಂಗಡಿತೆರೆಯಬೇಕೆಂದಿರುವ ಅಮೆರಿಕದ ವಾಲ್‌ಮಾರ್ಟ್-ಭಾರತಿ.. ಎಲ್ಲ ಸಂಸ್ಥೆಗಳೂ ಕೃಷಿಯಾಧಾರಿತ ಈ ಧಂಧೆಯಲ್ಲಿ ಹಣವನ್ನು ಹೂಡುತ್ತಿರುವ ಸಮಯದಲ್ಲಿಯೇ ಕೃಷಿಯಲ್ಲಿ ಈ ಬಿಕ್ಕಟ್ಟು ಬಂದಿರುವುದರ ಮರ್ಮವೇನು? ಹಾಗೂ ಹೆಚ್ಚು ಹೆಚ್ಚು ಸಾಲ, ಕಡಿಮೆ ಬಡ್ಡಿದರ, ಈ ಎರಡೂ ಸಮಸ್ಯಗೆ ಪರಿಹಾರವೇ? ಎಂಬ ಪ್ರಶ್ನೆಗಳೂ ನಮ್ಮ ಮುಂದೆ ಎದ್ದು ನಿಲ್ಲುತ್ತವೆ. ಬಹಳಹಿಂದೆ ದಲಿತ ಕವಿ ಸಿದ್ಧಲಿಂಗಯ್ಯ ಕೇಳಿದ್ದ ಯಾರಿಗೆ ಬಂತು ಯಾರಿಗೆ ಬಂತು ೪೭ರ ಸ್ವಾತಂತ್ರ ಅನ್ನುವ ಪ್ರಶ್ನೆಯನ್ನು ೬೦ ವರ್ಷಗಳನಂತರವೂ ಅನುರಣಿಸುವ ಅವಶ್ಯಕತೆ ಕಾಣಿಸುತ್ತದೆ.
ರಿಜರ್ವ್ ಬ್ಯಾಂಕಿನ ಡೆಪ್ಯುಟಿ ಗವರ್‍ನರ್ ಆದ ರಾಕೇಶ್ ಮೋಹನ್ ಈಚೆಗೆ ಬರೆದ ಪ್ರಬಂಧದಲ್ಲಿ ಕೊಟ್ಟಿರುವ ಕೆಲವು ಅಂಕಿ ಸಂಖ್ಯೆಗಳ ಪ್ರಕಾರ, ಕೃಷಿಯ ಉತ್ಪತ್ತಿಯಲ್ಲಿ ಹೂಡಿಕೆಗೊಳ್ಳುವ ನೂರು ರೂಪಾಯಿಯಲ್ಲಿ ಋಣದ ಭಾಗ ಕೇವಲ ೨೦ರಿಂದ ೨೫ ಪ್ರತಿಶತ. ಉತ್ಪಾದನೆಯಾಗಿ ಮಾರುಕಟ್ಟೆಯಲ್ಲಿ ದೊರೆವ ಮೊಬಲಗಿನಲ್ಲಿ ಇದು ಕೇವಲ ೫ ಪ್ರತಿಶತ. ಹೀಗಾಗಿ "ಸಾಲ"ದ ಮೇಲೆ ಕೇಂದ್ರೀಕೃತವಾಗಿರುವ ರಾಜಕೀಯ ಪಕ್ಷಗಳ ದೃಷ್ಟಿ ಬಹುಶಃ ಅವಶ್ಯಕತೆಗಿಂತ ಹೆಚ್ಚಿನ ಗಮನವನ್ನು ಸೆಳೆಯುತ್ತಿರಬಹುದೇ? ಒಟ್ಟಾರೆ ಖರ್ಚಿನಲ್ಲಿ ಕೇವಲ ೨೦ ಪ್ರತಿಶತ ಸಂಸ್ಥಾಗತ ಸಾಲದ ಮೂಲಕ ಪೂರೈಸುವುದಾದರೆ ಅದರೆ ಮೇಲಿನ ಬಡ್ಡಿ ಧರದಲ್ಲಿ ಏರುಪೇರುಮಾಡುವುದರಿಂದ ಒಟ್ಟಾರೆ ಆಗುವ ಖರ್ಚಿನ ಏರುಪೇರು ಎಷ್ಟು? ಸಂಸ್ಥಾಗತ ಸಾಲದ ಬಡ್ಡಿಧರದಲ್ಲಿ ಏರುಪೇರು ಮಾಡಿದ್ದರಿಂದ ಏನಾದರೂ ಸಾಧಿಸಿದಂತಾಗುವುದೇ? ಕೇವಲ ೨೦ ಪ್ರತಿಶತ ಸಂಸ್ಥಾಗತ ಮೂಲಗಳಿಂದ ಬರುತ್ತಿರುವ ಋಣವಾದರೆ ಈ ಪಾಲನ್ನು ಹೆಚ್ಚಿಸಬಹುದೇ? ಹೌದು. ಆದರೆ ಹೆಚ್ಚಿಸುವುದರಿಂದ ಎಷ್ಟು ರೈತರಿಗೆ ಎಷ್ಟು ಲಾಭವಾಗಬಹುದು? ೬೦ರ ದಶಕದಿಂದ ಈ ಪಾಲನ್ನು ಹೆಚ್ಚಿಸುತ್ತಾ ಬಂದ ಬಂಗಾರದ ಮೊಟ್ಟೆಗಳನ್ನು ನೀಡುತ್ತಿದ್ದ ಸಂಸ್ಥೆಗಳ ಮೇಲೆ ಹೀಗೆ ಹಲ್ಲೆ ನಡೆಸುವುದರ ಪ್ರತಿಫಲವನ್ನು ನಾವು ನೋಡಿದ್ದೇವೆ.
೭೦ ದಶದದ ನೀತಿಗಳ ಬೆಲೆಯನ್ನು ೯೦ರ ದಶಕದಲ್ಲಿ ದೇಶ ತೆತ್ತಿತು. ಮೊದಲಿಗೆ ವಾಣಿಜ್ಯಬ್ಯಾಂಕುಗಳ ಪುನರ್ನಿರ್ಮಾಣ, ಅನೇಕ ಬ್ಯಾಂಕುಗಳಿಗೆ ಹೆಚ್ಚಿನ ಇಡುವಳಿ ಕೊಟ್ಟು ಅವುಗಳನ್ನು ರಕ್ಷಿಸಲಾಯಿತು. ಇದರಿಂದಾಗಿ ಈಗ ಆ ಬ್ಯಾಂಕುಗಳು ತಮ್ಮ ಕಾಲ ಮೇಲೆ ನಿಂತು, ತಮ್ಮ ಜವಾಬ್ದಾರಿಯನ್ನು ಪೂರೈಸುತ್ತಿವೆ. ೯೧ರ ನಂತರ ಆದ ಬದಲಾವಣೆಯೆಂದರೆ, ಬ್ಯಾಂಕುಗಳ ನಷ್ಟಕ್ಕೆ ಅವರೇ ಬಾಧ್ಯರಾದದ್ದು. ಇಂದಿನ ಯಾವುದೇ ಬ್ಯಾಂಕನ್ನು ನೋಡಿದರೆ ಅವು ತಮ್ಮ ಲಾಭಾಂಶದ ಬಗೆಗಿನ ಕಳಕಳಿಯಿಂದ ವರ್ತಿಸುತ್ತಿರುವುದು ವೇದ್ಯವಾಗುತ್ತದೆ. ವಾಣಿಜ್ಯಲೋಕದಲ್ಲಿರುವ ಸಂಸ್ಥೆಗಳ ನೀತಿ ಹಾಗೆಯೇ ಇರಬೇಕು. ವಾಣಿಜ್ಯ ಬ್ಯಾಂಕುಗಳನಂತರ ಗ್ರಾಮೀಣ ಬ್ಯಾಂಕುಗಳ ಕಾಯಕಲ್ಪವನ್ನೂ ಸರಕಾರ ಮಾಡಿತು. ಈ ಎರಡು ಕಾಯಕಲ್ಪಗಳನ್ನು ಮಾಡಿದಾಗ ನಾವು ನಿರೀಕ್ಷಿಸಿದ್ದು ಸರಕಾರಗಳು ಇನ್ನು ಈ ಸಂಸ್ಥೆಗಳ ದಿನನಿತ್ಯದ ಕಾರ್ಯದಲ್ಲಿ ಮೂಗು ತೂರಿಸುವುದಿಲ್ಲವೆಂದೇ. 

ಹೀಗಾಗಿ ಸಹಕಾರ ಸಂಘಗಳ ಕಾಯಕಲ್ಪಕ್ಕೆ ೨೦೦೩-೦೪ರಲ್ಲಿ 
ವೈದ್ಯನಾಥನ್ ಸಮಿತಿಯನ್ನು ನಿಯಮಿಸಿದಾಗ, ಆರ್ಥಿಕ ರಂಗದ ಎಲ್ಲ ಅಂಗಗಳಿಗೂ ಕಾಯಕಲ್ಪ ನಡೆಸಿ ಸರಕಾರ ತನ್ನ ಕೈತೊಳೆದುಕೊಳ್ಳಬಹುದು ಎಂದು ಆಶಿಸಿದ್ದು ಸಹಜವೇ ಆಗಿತ್ತು. ವೈದ್ಯನಾಥನ್ ಸಮಿತಿಯ ಶಿಫಾರಸ್ಸುಗಳನ್ನು ಮಾಡುವಾಗ ಸರಕಾರ ಸಹಕಾರ ಸಂಘಗಳ ಕಾಯಕಲ್ಪ ಯಾಕೆ ಮಾಡಬೇಕು ಅನ್ನುವುದನ್ನು ಸಮರ್ಥಿಸುತ್ತಾ ಹೇಳಿದ್ದು - ಸಹಕಾರ ಸಂಘಗಳ ಈಗಿನ ದುಸ್ಥಿತಿಗೆ ಸರಕಾರವೇ ಕಾರಣವಾದ್ದರಿಂದ ಈ ಪಾಪವನ್ನು ತೊಳೆಯಲು ಸುಮಾರು ೧೫,೦೦೦ ಕೋಟಿಯ ಮೊಬಲಗನ್ನು, ಕೇವಲ ಒಮ್ಮೆ ತೆತ್ತಬೇಕು. ಆನಂತರ ಸಹಕಾರ ಸಂಘಗಳಿಗೆ ಸ್ವಾಯತ್ತತೆ ಕೊಟ್ಟು ಅವುಗಳ ಪಾಡಿಗೆ ಅವುಗಳನ್ನು ಬಿಟ್ಟುಬಿಡಬೇಕು ಅನ್ನುವುದು ಆಶಯವಾಗಿತ್ತು. ಮುಖ್ಯವಾಗಿ ಸಾಲಮನ್ನಾದ ಬಗ್ಗೆ - ಅಂಥ ಕ್ರಿಯಯಿಂದ ಆಗುವ ಆಘಾತದ ಬಗ್ಗೆ ವೈದ್ಯನಾಥನ್ ಸಮಿತಿ ಟಿಪ್ಪಣಿಗಳನ್ನು ಮಾಡಿತ್ತು. ಆದರೆ ಯಾವುದೇ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಸಮಗ್ರವಾಗಿ ಎಂದೂ ನೋಡುವುದಿಲ್ಲ. 

ಹೀಗಿದ್ದಾಗ ಪಕ್ಷದ ನಂತರ ಪಕ್ಷ ಓಟು ಕೇಳಲು ಮತ್ತೆ ಮತ್ತೆ ಯಾಕೆ ಈ ಇಂಥ ಯೋಜನೆಗಳನ್ನು ಘೋಷಿಸುತ್ತವೆ ಅನ್ನುವುದು ಅರ್ಥವಾಗದ ಮಾತೇ ಆಗಿದೆ. ಇದರಿಂದ ಓಟು ಗಿಟ್ಟುತ್ತದೆಂಬ ಭಾವನೆ ಎಲ್ಲಿಂದ ಬಂತು? ಒಂದು ಘೋಷಣೆ "ಪಾಪ್ಯುಲಿಸ್ಟ್" ಆಗಬೇಕಾದರೂ ಅದು ಅತ್ಯಂತ ಹೆಚ್ಚು ಜನರಿಗೆ ಲಾಭವುಂಟುಮಾಡುವಂಥಹದ್ದಾಗಿರಬೇಕು. ಸರಕಾರದ ಅಂಕಿಅಂಶಗಳ ಪ್ರಕಾರ ಕೇವಲ ೪೦% ಗ್ರಾಮೀಣ ಜನತೆ ಕೃಷಿಕರು. ಅವರಲ್ಲಿ ಕೇವಲ ೬೦% ರೈತ ಕುಟುಂಬಗಳು ಸಂಸ್ಥಾಗತ ಮೂಲದಿಂದ ಸಾಲ ಪಡೆದಿದ್ದಾರೆ. ಈಚಿನ ಅಂಕಿಗಳನ್ನು ನೋಡಿದರೆ ಹೆಚ್ಚಿನ ಸಾಲ ಪಡೆಯುತ್ತಿರುವುದು ದೊಡ್ಡ ಹಿಡುವಳಿಯ ರೈತರು. ಅನೇಕರು ಸಂಸ್ಥಾಗತ ಮೂಲದ ಸಾಲಗಳಿಂದ ವಂಚಿತರಾಗಿದ್ದಾರೆ. ಸರಕಾರ- ಪಕ್ಷಗಳು ಏನೇ ಮಾಡಿದರೂ, ತನ್ನ ಹದ್ದುಬಸ್ತಿನಲ್ಲಿರುವ ಬ್ಯಾಂಕು, ಸಹಕಾರ ಸಂಘಗಳ ಮೂಲಕವೇ ತನ್ನ ಕಾರ್ಯಕ್ರಮವನ್ನು ಜಾರಿಮಾಡಲು ಸಾಧ್ಯ. ಹೀಗಾಗಿ, ಈ ಇಂಥ ಘೋಷಣೆಗಳು ಉಪಯೋಗವಾಗುವುದು, ೪೦%ದ ೬೦% ರೈತ ಕುಟುಂಬಗಳ ಒಂದು ಪುಟ್ಟಭಾಗಕ್ಕೆ. ಕೃಷಿಕರಲ್ಲಿ ೪೦% ಕುಟುಂಬಗಳು ಸಂಸ್ಥಾಗತ ಮೂಲದಿಂದ ವಂಚಿತರಾಗಿದ್ದಾರೆ, ಮತ್ತು ಒಟ್ಟಾರೆ ಜನಸಂಖ್ಯೆಯಲ್ಲಿ ೬೦% ಕುಟುಂಬಗಳಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಇವರುಗಳೆಲ್ಲಾ ಈ ರಾಜಕೀಯ ಪಕ್ಷಗಳ ಬೂಟಾಟಿಕೆಯನ್ನು ಅರ್ಥ ಮಾಡಿಕೊಳ್ಳಬಲ್ಲವರು. ಬಡ್ಡಿಧರದ ಬದಲಾವಣೆಯಿಂದ ತಾವು ಯಾವಲಾಭವನ್ನೂ ಪಡೆಯುವುದಿಲ್ಲವಾದ್ದರಿಂದ ರಾಜಕೀಯ ಪಕ್ಷಗಳ ಯೋಜನೆಯಿಂದ ವಂಚಿತರಾಗಿದ್ದಾರೆನ್ನಿಸಿ ಸಹಜವಾಗಿಯೇ ಸಿಟ್ಟಾಗಿ, ವಂಚಿಸುವ ಪಕ್ಷದ ವಿರುದ್ಧ ನಿಲ್ಲಲಿದ್ದಾರೆ. 


ಎಲ್ಲಕ್ಕಿಂತ ವಿಚಿತ್ರ ಘೋಷಣೆ ಎಂದರೆ ಬಡ್ಡಿದರದಲ್ಲಿ ಕಡಿತ ಮಾಡುತ್ತೇವೆಂಬ ಘೋಷಣೆ. ಅದರಿಂದ ಯಾರಿಗೆ ಲಾಭ? ಒಟ್ಟಾರೆ ಕೃಷಿಗಾಗುವ ಖರ್ಚಿನಲ್ಲಿ ೨೦% ಸಂಸ್ಥಾಗತ ಸಾಲದ ಮೂಲಕ ಬಂದರೆ, ಆ ಸಾಲದ ಮೇಲೆ ಬಡ್ಡಿ ಕಡಿಮೆ ಮಾಡಿದರೆ ಆಗುವ ಲಾಭವಾದರೂ ಏನು? ಸರಿಯಾದ ಬೆಲೆ ಸಿಗದಿದ್ದಾಗ, ಪೈರೇ ನಾಶವಾಗಿ ಹೋಗುತ್ತಿರುವಾಗ, ನೀರಿನ ಸರುಪಾಯವಿಲ್ಲದಾಗ, ಬಡ್ಡಿಯ ಕಡಿತದಿಂದಾಗಿ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಈ ಪಕ್ಷಗಳಿಗೆ ವಿವರಿಸುವವರು ಯಾರು? ಅತೀ ಬಡವರಿಗೆ ಸಾಲಕೊಟ್ಟು ವಸೂಲಾತಿ ಮಾಡಿ ಭೇಷ್ ಅನ್ನಿಸಿಕೊಳ್ಳುತ್ತಿರುವ ಮೈಕ್ರೋಫೈನಾನ್ಸ್ ನಿಂದ ನಾವು ಕಲಿತಿರುವುದಾದರೂ ಏನು? ಹಣದ ಅವಶ್ಯಕತೆಯಿರುವಲ್ಲಿ ಅದನ್ನು ಒದಗಿಸುವುದು ಮೊದಲ ಪ್ರಾಮುಖ್ಯತೆ ಆಗುತ್ತದೆ. ಅದನ್ನು ಪೂರೈಕೆಗೆ ಜನ ತೆತ್ತಬೇಕಾದ ಬೆಲೆಯ ಪ್ರಾಮುಖ್ಯತೆ ಬರುವುದು ನಂತರ. ಬಡ್ಡಿ ದರದಲ್ಲಿ ಕಡಿತ ಘೋಷಿಸಿ ಸಾಲವೇ ಕೊಡದಿದ್ದಲ್ಲಿ, ಆ ಘೋಷಣೆಯ ಅರ್ಥವಾದರೂ ಏನು. ನಮಗಿಷ್ಟವಿಲ್ಲದಿದ್ದರೂ ನಾವು ಗುಜರಾತಿನ ಸರಕಾರ ವಿದ್ಯುತ್ ಪೂರೈಕೆಯಲ್ಲಿ ಮಾಡಿರುವ ಪ್ರಯೋಗವನ್ನು ಗಮನಿಸಬೇಕು. ಅಲ್ಲಿ ದಿನಕ್ಕೆ ೨೪ ತಾಸು ಅವಿರತ ವಿದ್ಯುತ್ ಸರಬರಾಜು ಹಳ್ಳಿಹಳ್ಳಿಯಲ್ಲೂ ಇದೆ. ಅದಕ್ಕೆ ತಕ್ಕ ಶುಲ್ಕವನ್ನು ಸರಕಾರ ತೆಗೆದುಕೊಳ್ಳುತ್ತಿದೆ. ಹಾಗೂ ಅದೇ ಪಕ್ಷ ಮತ್ತೆ ಚುನಾಯಿತವಾಗಿ ಬಂದಿದೆ.
 

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಗ್ಯಾರೆಂಟಿ ಕಾನೂನಿನನ್ವಯ ಕೊಡಬೇಕಿದ್ದ ಕೂಲಿ ಹಣವನ್ನು ಬ್ಯಾಂಕಿನ ಮೂಲಕ ಕೊಡುವುದಕ್ಕೆ ಸರಕಾರ ಸನ್ನದ್ಧವಾಗಿತ್ತು. ಸರ್ವರಿಗೂ ಒಂದು ಬ್ಯಾಂಕ್ ಅಕೌಂಟ್ ಇರಬೇಕೆಂಬ ಫೈನಾನ್ಶಿಯಲ್ ಇನ್ಕ್ಲೂಷನ್ ಪಥಕವನ್ನು ಹಾಕಿತ್ತು. ಈಗ ಈ ಸಾಲ ಮನ್ನಾದ ಮೂಲಕ ಬ್ಯಾಂಕಿಗೆ ಬರುತ್ತಿದ್ದ ಗಿರಾಕಿಗಳನ್ನು ಬರಬೇಡಿರೆಂದು ಸರಕಾರವೇ ಹೊರಗಟ್ಟುತ್ತಿದೆ. ಬಜೆಟ್ಟಿಗೆ ಮುನ್ನ ನಾಬಾರ್ಡ್ ವತಿಯಿಂದ ನಿಯಮಿಸಿದ ಒಂದು ಸಮಿತಿ ಬೇರೆಯೇ ಸಲಹೆಯನ್ನು ನೀಡಿತ್ತು. ರೈತರ ಸಾಲ ಮನ್ನಾ ಮಾಡಲೇ ಬೇಕೆಂದರೆ ಅದನ್ನು "ಸೆಟಲ್‍ಮೆಂಟ್" ಮೂಲಕ, ಅವರನ್ನು ಬ್ಯಾಂಕಿಗೆ ಆಹ್ವಾನಿಸಿ, ಅವರ ಪರಿಸ್ಥಿತಿಯನ್ನು ನೋಡಿ ಆ ಪ್ರಕಾರವಾಗಿ ಸಾಲದ ಇತ್ಯರ್ಥ ಮಾಡಬೇಕೆಂದೂ, ಹಾಗೂ ಸಾಲದ ಇತ್ಯರ್ಥವಾದಮೇಲೆ ಮರುಸಾಲ ಕೊಟ್ಟ ನಂತರವೇ ಬ್ಯಾಂಕಿಗೆ ಸರಕಾರ ನಷ್ಟಪರಿಹಾರ ಒದಗಿಸಬೇಕೆಂದೂ ಆ ಸಮಿತಿ ಸೂಚಿಸಿತ್ತು. ಹಾಗೆ ಮಾಡಿದ್ದಲ್ಲಿ ಬ್ಯಾಂಕು/ಸಹಕಾರ ಸಂಘಗಳು ತಮ್ಮ ಗಿರಾಕಿಗಳ ಪರಿಸ್ಥಿತಿಗನುಗುಣವಾಗಿ, ಅವರನ್ನು ಬ್ಯಾಂಕಿನ ಗಿರಾಕಿಗಳಾಗಿ ಉಳಿಸಿಕೂಳ್ಳುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗಿನ ಈ ಮನ್ನಾ, ಹಾಗೂ ಘೋಷಣಾ ಪತ್ರದಲ್ಲಿರುವ ಸಾಲದ ಬಡ್ಡಿದರ ಕಡಿಮೆ ಮಾಡುವುದರಿಂದ, ಬಡವರು ಬ್ಯಾಂಕಿನಿಂದ ದೂರವಾಗುವುದರಲ್ಲಿ ಅನುಮಾನವೇ ಇಲ್ಲ. ನಾಲ್ಕಾರು ವರ್ಷಗಳ ಮೇಲೆ ಬ್ಯಾಂಕುಗಳಿಗೆ ಮತ್ತೊಂದು ಸ್ಪೆಷಲ್ ಪ್ಯಾಕೇಜನ್ನು ಸರಕಾರ ಘೋಷಿಸಬೇಕಾಗುವುದು ಅನಿವಾರ್ಯವಾಗಬಹುದು.
 

ಋಣ ಒದಗಿಸಬೇಕು. ಅದನ್ನು ಮಾಡುವುದು ವಿತ್ತೀಯ ಸಂಸ್ಥೆಗಳು. ಆ ಕೆಲಸವನ್ನು ಅವರಿಗೇ ಬಿಟ್ಟು ಪಕ್ಷಗಳು ಸರಿಯಾದ ರಸ್ತೆ, ಸ್ಕೂಲು, ಆಸ್ಪತ್ರೆ, ಕೃಷಿ ವಿಸ್ತಾರ ಕಾರ್ಯಕ್ರಮಗಳತ್ತ ಗಮನ ಹರಿಸಿದರೆ, ರೈತರಲ್ಲದೇ ಇತರರೂ ಸುಖವಾಗಿರಬಹುದು.

ಎಂ.ಎಸ್.ಶ್ರೀರಾಮ್
೨೭ ಏಪ್ರಿಲ್ ೨೦೦೮

No comments:

Post a Comment