Sunday, March 3, 2013

ಬುದ್ಧಿವಂತಿಕೆಯ ಗೆರೆಒಂದು ಸ್ವಯಂ ಸೇವಾ ಸಂಸ್ಥೆ ಯಾವ ಕೆಲಸವನ್ನು ಎಷ್ಟು ಮಾಡಬೇಕು - ಎಲ್ಲಿ ಅದನ್ನು ನಿಲ್ಲಿಸಬೇಕು ಅನ್ನುವುದು ಕುತೂಹಲದ ವಿಷಯ. ಇದು ನಮ್ಮ ಗ್ರಾಮೀಣ ಪ್ರಾಂತದಲ್ಲಿ ಕೆಲಸ ಮಾಡುತ್ತಿರುವ ಒಳ್ಳೆಯ ಸಂಸ್ಥೆಗಳ ಮುಂದೆ ಆಗಾಗ ತಲೆಯೆತ್ತಿ ನಿಲ್ಲುವ ದ್ವಂದ್ವ. ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪ್ರದಾನ್ [ಪ್ರೊಫೆಷನಲ್ ಅಸಿಸ್ಟೆಂಸ್ ಫರ್ ಡೆವೆಲಪ್ಮೆಂಟ್ ಆಕ್ಷನ್] ಸಂಸ್ಥೆಯ ಕಾರ್ಯಕಲಾಪಗಳು ಹೀಗೆ ಗ್ರಾಮೀಣ ಬಡವರ ಬದುಕಿನ ಅನೇಕ ಮಜಲುಗಳನ್ನು ಮುಟ್ಟಿ ಹೋಗುತ್ತದೆ. ಕೆಲ ವರ್ಷಗಳ ಹಿಂದೆ ನಾನು ಝಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಗೆ ಅವರ ಕೆಲಸವನ್ನು ನೋಡಲು ಹೋಗಿದ್ದೆ. ಅಲ್ಲಿ ಕೆಲಸ ಪ್ರಾರಂಭವಾದದ್ದು ಸ್ವ-ಸಹಾಯ ಗುಂಪುಗಳನ್ನು ಏರ್ಪಾಟು ಮಾಡಿ ಆ ಮೂಲಕ ಉಳಿತಾಯ-ಸಾಲದ ಚಟುವಟಿಕೆಯನ್ನು ತಮ್ಮ ನಡುವೆಯೇ ನಡೆಸಿಕೊಳ್ಳುವುದರ ಮೂಲಕ. ಆದರೆ ಬಡವರು ಕೇವಲ ಉಳಿತಾಯ ಮಾಡುವುದು - ಸುಲಭವಾಗಿ ಸಾಲ ಪಡೆಯುವುದು - ಈ ಎರಡರಿಂದಾಗಿಯೇ ಅಭಿವೃದ್ಧಿಯಾಗುತ್ತದೆ ಎಂದು ನಾವು ನಂಬುವುದಕ್ಕೆ ಆಗುವುದಿಲ್ಲ. ಏಕೆಂದರೆ ಹೀಗೆ ಸಾಲವಾಗಿ ಪಡೆದ ಹಣವನ್ನು ಹೇಗೆ ಉಪಯೋಗಿಸಬೇಕು ಅದರಿಂದ ಹೇಗೆ ಹೆಚ್ಚು ಆದಾಯ ಪಡೆಯಬೇಕು ಅನ್ನುವ ಪ್ರಶ್ನೆಯನ್ನೂ ನಾವು ಎದುರಿಸಬೇಕಾಗುತ್ತದೆ. ಮೈಕ್ರೋಫೈನಾನ್ಸ್ [ಚಿಕ್ಕಸಾಲ] ದಿಂದ ಲೈವ್ಲಿಹುಡ್ ಫೈನಾನ್ಸ್ [ಜೀವನೋಪಾಧಿಯ ಸಾಲ]ಕ್ಕೆ ಬೆಳೆಯುವ ಬಗ್ಗೆ ಸಾಕಷ್ಟು ಚರ್ಚೆ ಈಚಿನ ದಿನಗಳಲ್ಲಿ ನಡೆಯುತ್ತಿದೆ.

ನಾನು ಉಳಿದುಕೊಂಡಿದ್ದ ಜೈಸಿದಿ/ದೇವಘರ್ ನಗರದಿಂದ ಗೊಡ್ಡಾ ಜಿಲ್ಲೆಯ ರಾಸ್ದಾ ಗ್ರಾಮಕ್ಕೆ ಅಲ್ಲಿನ ಗುಂಪುಗಳನ್ನು ನೋಡಲೆಂದೇ ಪ್ರಯಾಣ ಬೆಳೆಸಿದೆವು. ದೇವಘರ್ ಮತ್ತು ಗೊಡ್ಡಾ ಎರಡೂ ಝಾರ್ಖಂಡ್ ರಾಜ್ಯದಲ್ಲೇ ಇದ್ದರೂ, ದಾರಿಯಲ್ಲಿ ಅನೇಕ ಬಾರಿ ಬಿಹಾರದ ರಸ್ತೆಗಳನ್ನು ದಾಟಿಹೋಗಬೇಕಿತ್ತು. ರಸ್ತೆ ಮುಗಿದರೆ ಬಿಹಾರಕ್ಕೆ ಪಾದಾರ್ಪಣೆ ಮಾಡಿದ್ದೇವೆ ಅಂದುಕೊಳ್ಳಬಹುದು ಎಂದು ನನ್ನ ಜೊತೆಗಿದ್ದ ಸತ್ಯಬ್ರತ ಹೇಳಿದ! ಈಗ ಪರಿಸ್ಥಿತಿ ಬದಲಾಗಿರಬಹುದು.

ದಾರಿಯಲ್ಲಿ ನಾವು ಹಲವು ಕಡೆ ಇಳಿದು ಸುತ್ತಮುತ್ತಲಿನ ಪರಿಸರವನ್ನು ನೋಡಿದೆವು. ರಾಸ್ದಾದಲ್ಲಿರುವ ಗುಂಪುಗಳ ಜೊತೆಗೆ ಚಿಕ್ಕಸಾಲದ ಕೆಲಸವನ್ನಲ್ಲದೇ ಜೀವನೋಪಾಧಿಯ ಕೆಲಸವನ್ನೂ - ಕೃಷಿಯನ್ನು ಉತ್ತಮ ಪಡಿಸುವ, ನೀರು, ಮಣ್ಣನ್ನು ಉಳಿಸುವ ಕೆಲಸವನ್ನೂ ಪ್ರದಾನ್ ಸಂಸ್ಥೆ ಮಾಡುತ್ತಿದೆ. ಜೀವನೋಪಾಧಿಗೆ ಟಸರ್ ರೇಷ್ಮೆಯ ಕೆಲಸವನ್ನು ಅಲ್ಲಿ ಮಾಡುತ್ತಿದ್ದಾರೆ. ಟಸರ್ ಮಾಮೂಲಿ ರೇಷ್ಮೆಯಂತಲ್ಲ. ರೇಷ್ಮೆ ಹುಳುಗಳಿಂದ ಬರುವ ರೇಷ್ಮೆ ನಯವಾಗಿರುತ್ತದೆ. ಟಸರ್ ಸ್ವಲ್ಪ ಒರಟು, ಅದೇ ಅದರ ಅಂದವೂ ಕೂಡ. 

ರಾಸ್ದಾ ಗ್ರಾಮದಲ್ಲಿ ಟಸರ್ ರೇಷ್ಮೆಯನ್ನು ನೂಲುತ್ತಿದ್ದ ಕೆಲ ಮಹಿಳೆಯರನ್ನು ಕಂಡು ಮಾತನಾಡಿಸಿದೆವು. ಹೆಂಗಸರ ಗುಂಪುಗಳನ್ನು ಏರ್ಪಾಟು ಮಾಡುವುದು, ಅವುಗಳು ಒಂದು ನಿಟ್ಟಿನಲ್ಲಿ ನಡೆಯಲು ಹೋಗುವ ಘಟ್ಟಗಳ [Forming- ಏರ್ಪಾಟು, storming - ಮಥನ, norming - ಒಂದು ಚೌಕಟ್ಟಿಗನ್ವಯವಾಗಿ ನಡೆಯುವುದು and ಮತ್ತು performing - ಸಾಧನೆ] ಬಗ್ಗೆ ಈಗಾಗಲೇ ಸಾಕಷ್ಟು ಸಾಹಿತ್ಯವಿದೆ. ಸುಮ್ಮನೆ ಹೀಗೇ ಲೆಕ್ಕ ಹಾಕಿದರೆ ಈ ಕಾಯಕದಿಂದಾಗಿ ಮಹಿಳೆಯರಿಗೆ ತಿಂಗಳಿಗೆ ರೂ.೧,೦೦೦ದಿಂದ ರೂ.೧,೫೦೦ ರ ವರೆಗೆ ಅಧಿಕ ಆದಾಯ ಬರುತ್ತಿರಬಹುದು ಎಂದು ನಾವು ಅಂದಾಜು ಹಾಕಿದೆವು. ಆದರೂ ನನ್ನನ್ನು ತಟ್ಟಿದ್ದೆಂದರೆ ಆ ಮಹಿಳೆಯರು ನೂಲುವ ಕೆಲಸವನ್ನು ನಿಂತು ಮಾಡುತ್ತಿದ್ದರು. ಗೂಡನ್ನು ಬೇಯಿಸಿದ ನಂತರ ಒಳ್ಳೆಯ ಏ ಗ್ರೇಡ್ ದರ ದೊರೆಯಬೇಕಾದರೆ ಅದನ್ನು ಆದಷ್ಟು ಬೇಗ ನೂಲಿಗೆ ಪರಿವರ್ತಿಸಬೇಕು. ಮಹಿಳೆಯರು ಈ ಕೆಲಸವನ್ನು ದಿನವಿಡೀ ಮಾಡುತ್ತಾರೆ. ಟಸರ್ ನೂಲುವ ಯಂತ್ರ ಎತ್ತರದ್ದು. ಆದರೂ ಕೂಡುವುದಕ್ಕೆ ಒಂದು ಸ್ಟೂಲನ್ನಾದರೂ ಇಟ್ಟುಕೊಳ್ಳಬಹುದಿತ್ತು ಅನ್ನಿಸಿತು. ದಿನದ ಹಲವು ಘಂಟೆಗಳನ್ನು ಇದೇ ಕಾಯಕದಲ್ಲಿ ಕಳೆವ ಮಹಿಳೆಯರಿಗೆ ಒಂದು ಸ್ಟೂಲನ್ನು ಹಾಕಿ ಕೂತುಕೊಂಡು ಕೆಲಸ ಮಾಡಬೇಕೆಂದು ಯಾಕೆ ತೋಚಲಿಲ್ಲ? 

ದಿಗ್ವಿಜಯ್ ಸಿಂಗ್ [ಸಂಯುಕ್ತ ಜನತಾದಳ?]ಅವರ ಕ್ಷೇತ್ರವಾದ ಗೊಡ್ಡಾ ಜಿಲ್ಲೆಯಲ್ಲಿ ಬರುವ ಈ ಗ್ರಾಮಕ್ಕೆ ಎಂ.ಪಿ.ಕ್ಷೇತ್ರಾಭಿವೃದ್ಧಿ ಧನದಿಂದ ಒಂದು ಕಾರ್ಯಭವನವನ್ನು ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದೆಯಂತೆ. ಇದರಿಂದಾಗಿ ಮಹಿಳೆಯರ ಕಾರ್ಯ ಸಂದರ್ಭ ಉತ್ತಮಗೊಂಡೀತು. ಆದರೆ ಈ ಭವನದ ನಿರ್ಮಾಣವಾದ ಕೂಡಲೇ ಮಹಿಳೆಯರು ಅದನು ಉಪಯೋಗಿಸುತ್ತಾರೆಯೇ? ಮನೆಯಿಂದ ಆಚೆ ಬಂದು - ಮನೆಯ ಯಾವುದೇ ತೊಂದರೆಯಿಲ್ಲದೆಯೇ ನಾಲ್ಕಾರು ಘಂಟೆಗಳ ಕಾಲ ಕೆಲಸಮಾಡಬಹುದು ಅನ್ನಿಸಿದರೆ ಅವರುಗಳು ಈ ಭವನವನ್ನು ಉಪಯೋಗಿಸಬಹುದು. ಆದರೆ ಮನೆಗೆಲಸದ - ಅಡುಗೆ, ಬಟ್ಟೆಯ ಕಾರ್ಯದ ನಡುವೆ ಅವರುಗಳು ನೂಲುತಿದ್ದರೆ ಈ ಕಾರ್ಯಭವನ ಖಾಲಿಯಾಗಿಯೇ ಉಳಿದೀತು. ಬುದ್ಧಿವಂತಿಕೆ ಕಾರ್ಯಭವನ ನಿರ್ಮಿಸುವುದರಲ್ಲಿದೆಯೋ ಇಲ್ಲವೋ ತಿಳಿಯುವುದು ಬಹುಶಃ ಭವನ ನಿರ್ಮಾಣವಾದ ಮೇಲೆಯೇ. ಈಗ ಕೇಳಿದರೆ ಮಹಿಳೆಯರೆಲ್ಲಾ ಭವನ ಇರಲಿ ಎಂದೇ ಹೇಳುತ್ತಾರೆ - ಭವನವನ್ನು ಉಪಯೋಗಿಸುವ ಮತ್ತು ಸ್ಟೂಲಿನ ಮೇಲೆ ಕೂತು ನೂಲುವ ಪ್ರಕ್ರಿಯೆಗೂ ಯಾವುದೋ ಒಂದು ಕೊಂಡಿ ಇರಬಹುದು! 

ಆದರೆ ನನ್ನ ಕುತೂಹಲ ಸ್ಟೂಲುಗಳಿಗೆ ಸಂಬಂಧಿಸಿದ್ದು ಮಾತ್ರವಾಗಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ನನ್ನನ್ನು ಕಾಡಿದ್ದು ಹಣಕಾಸಿಗೆ ಸಂಬಂಧಿಸಿದ ವಿಷಯ. ಈ ಕಾಯಕದಿಂದ ತಿಂಗಳಿಗೆ ಸಾವಿರ ರೂಪಾಯಿಯ ಆದಾಯವಿದ್ದರೆ ಮಹಿಳೆಯರೇ ತಮ್ಮ ಸ್ಟೂಲುಗಳನ್ನ ಕೊಳ್ಳುತ್ತಿದ್ದ್ದರು. ಆದರೆ ಅದು ಕೊಳ್ಳದಿರಲು ಏನು ಕಾರಣವಿರಬಹುದು? ಪ್ರದಾನ್ ಸಂಸ್ಠೆಯವರು ಈ ಬಗ್ಗೆ  ಏನಾದರೂ ಮಾಡಬಹುದೆಂದು ಕಾಯುತ್ತಿರಬಹುದು, ಇಲ್ಲವೇ ಸ್ಟೂಲಿನ ಮೇಲೆ ಕೂತು ಕೆಲಸ ಮಾಡುವುದು ನಿಂತು ಮಾಡುವುದಕ್ಕಿಂತ ಕಷ್ಟಕರವಾಗಿರಬಹುದು. ಮೊದಲೆನೆಯ ಕಾರಣವೇ ನಿಜವಾದರೆ - ಒಂದು ಸ್ವಯಂಸೇವಾ ಸಂಸ್ಥೆಯ ಜವಾಬ್ದಾರಿ ಎಲ್ಲಿಯವರೆಗೆ ಹಬ್ಬಿರಬಹುದೆಂದು ಊಹಿಸಿ!! ಅಲ್ಲಿದ್ದ ಓರ್ವ ಮಹಿಳೆಯೊಂದಿಗೆ ಮಾತನಾಡಿದಾಗ ಆಕೆಯೂ ಪ್ರದಾನ್ ಹೇಳಿಲ್ಲವಾದ್ದರಿಂದ ತಾನು ಸ್ಟೂಲುಗಳನ್ನು ಕೊಳ್ಳಲಿಲ್ಲ ಎಂದು ಹೇಳಬೇಕೇ?!! ಆದರೆ ನನಗೆ ವಿಶೇಷವೆನ್ನಿಸಿದ್ದು ಮಿಕ್ಕ ವಿಷಯಗಳು. ಈ ಮಹಿಳೆಯರೆಲ್ಲಾ ಸ್ವ-ಸಹಾಯ ಗುಂಪುಗಳಿಗೆ ಸೇರಿದ್ದಾರೆ. ಅನೇಕ ವರ್ಷಗಳಿಂದ ಈ ಗುಂಪುಗಳು ನಡೆಯುತ್ತಿವೆಯಾದರೂ, ಗೂಡನ್ನು ಸಾಲದ ಮೇಲೆ ಕೊಂಡುತರುತ್ತಾರೆ. 

ಎರಡುವಾರಕ್ಕೊಮ್ಮೆ ಇಲ್ಲಿನ ಗುಂಪುಗಳು ಸೇರುತ್ತವೆ, ಅಲ್ಲಿ ಅವರುಗಳು ಉಳಿತಾಯ ಮತ್ತು ಸಾಲದ್ದೇ ಮಾತಾಡುತ್ತಾರೆ. ಲೆಕ್ಕ ಬರೆಯಲು ಹೊರಗಿನಿಂದ ಒಬ್ಬನನ್ನು ಕಮಿಷನ್ ಆಧಾರದ ಮೇಲೆ ನಿಯಮಿಸಿಕೊಂಡಿದ್ದಾರೆ. ಆತನಿಗೆ ಕೊಡುವ ಹಣ ತಮ್ಮ ಗುಂಪಿನ ಹಾಗೂ ಅವನ ಕಾರ್ಯಕ್ಷಮತೆಯ ಆಧಾರದ ಮೇಲೆ ಲೆಕ್ಕಕಟ್ಟಲಾಗುತ್ತದೆ. ಹೀಗೆ ಗುಂಪುಗಳು ಇಂಥ ಜಟಿಲತೆಯನ್ನು ಸಹಜವಾಗಿ ತಮ್ಮದಾಗಿಸಿಕೊಂಡಿರುವಾಗ ಗೂಡುಗಳನ್ನು ವರ್ತಕನ ಸಾಲದ ಮೇಲೆ ತರುವುದರಲ್ಲಿನ ಮಜಕೂರು ಏನಿರಬಹುದು?

ಪ್ರದಾನ್ ಸಂಸ್ಥೆಯ ಸ್ವ-ಸಹಾಯ ಗುಂಪುಗಳ ಕಲಸ ಮೊದಲಿಗೆ ಆಗಿತ್ತು. ಜೀವನೋಪಾಧಿಯ ಕೆಲಸವನ್ನು - ಟಸರ್ ಕೆಲಸವನ್ನು ಮಾಡುತ್ತಿರುವುದು ಆ ಸಂಸ್ಥೆಯ ಬೇರೆ ಸಿಬ್ಬಂದಿ. ಹೀಗೆ ಒಂದೇ ಸಂಸ್ಥೆಯವರು ಕೆಲಸ ಮಾಡುತ್ತಿರುವಾಗ ಯಾಕೆ ಈ ಎರಡೂ ಕಾರ್ಯಕ್ರಮಗಳ ನಡುವೆ ಕೊಂಡಿ ಏರ್ಪಟ್ಟಿಲ್ಲ ಎಂದು ಯೋಚಿಸಿದೆ. ಉತ್ತರ ಸುಲಭವಾಗಿ ಸಿಗುವುದಿಲ್ಲ. ಈ ಕೊಂಡಿಯನ್ನು ಪ್ರದಾನ್ ಸಂಸ್ಥೆಯವರು ಏರ್ಪಾಟು ಮಾಡಬೇಕೋ ಅಥವಾ ಇದು ಆ ಮಹಿಳೆಯರ ಮನದಲ್ಲಿ ಉಂಟಾಗಬೇಕಾದ ಕೊಂಡಿಯೋ ನನಗೆ ತಿಳಿಯಲಿಲ್ಲ.

ಬೆಂಗಳೂರಿನಲ್ಲಿ ಮನೆ ಕಟ್ಟಿಸುತ್ತಾ, ಬ್ಯಾಂಕಿನಲ್ಲಿ ದೊಡ್ಡ ಸಾಲ ಪಡೆಯುತ್ತಲೇ ನಾನು ಈ ವರ್ಷ ಪಿ.ಪಿ.ಎಫ್‍ನಲ್ಲಿನ ನನ್ನ ಉಳಿತಾಯವನ್ನೂ ಮುಂದುವರೆಸಿದ್ದೇನೆ. ಅಲ್ಲಿ ಇಲ್ಲಿ ಕೂಡಿಟ್ಟಿದ್ದ ಹಣವನ್ನು ಹಾಗೇ ಇಟ್ಟು ಸಾಲ ತೆಗೆದು ಮನೆ ಕಟ್ಟಿಸುತ್ತಿದ್ದೇನೆ. ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ ಅನ್ನುವುದಕ್ಕೆ ನಾನು ತುಸುಮಟ್ಟಿಗೆ ವಿವರಣೆಯನ್ನು ಕೊಡಬಲ್ಲೆ. ಅದರಲ್ಲಿ ಬಡ್ಡಿಧರದಲ್ಲಿನ ವ್ಯತ್ಯಾಸಗಳು - ಕಟ್ಟಬೇಕಾದ ಆದಾಯ ತೆರಿಗೆ - ಹೀಗೆ ವಿಚಿತ್ರ ಲೆಕ್ಕಾಚಾರಗಳಿವೆ. ಆದರೆ ರಾಸ್ದಾದ ಮಹಿಳೆಯರು ಹದಿನೈದು ವರ್ಷಗಳಿಂದ ಸ್ವಸಹಾಯ ಗುಂಪುಗಳನ್ನು ನಡೆಸುತ್ತಾ ಬಂದು, ಈಗಲೂ ಕೆಲವು ಅಂಶಗಳಿಗೆ ವರ್ತಕರ ಸಾಲಕ್ಕೆ ಮೊರೆಹೋಗುವುದರಲ್ಲಿನ ಮರ್ಮದಲ್ಲೂ ಇಂಥದೇ ಯಾವುದೋ ಬುದ್ಧಿವಂತಿಕೆ ಇರಬಹುದು. ಬಹುಶಃ ನನಗದು ಅರ್ಥವೇ ಆಗಿಲ್ಲವೇನೋ.

ವಿಕಾಸದ ಕಾರ್ಯಕ್ರಮಗಳನ್ನು ಹಿಂದುಳಿದ ಪ್ರದೇಶಗಳಿಗೆ ಒಯ್ಯುವ ಕೆಲಸಗಾರರ ದ್ವಂದ್ವ ಹೀಗೇ ಇರುತ್ತದೆ. ತಮ್ಮ ಮನಸ್ಸಿಗೆ ಬಂದ ಆಲೋಚನೆ ಬೇರೆ ಯಾರಿಗೂ ಬಂದಿಲ್ಲವೆಂದರೆ ತಾನೇ ಬಹು ಬುದ್ಧಿವಂತ ಎಂದು ಬೀಗಬಹುದು. ಆದರೆ ಹೀಗೆ ಬಂದ ಆಲೋಚನೆ ಸ್ಥಳೀಯ ಸತ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದ್ದರಿಂದ ಉಂಟಾಗಿದ್ದರೆ ಆಗ ಬುದ್ಧಿವಂತರು ಯಾರು? ಸ್ವ-ಸಹಾಯ ಗುಂಪುಗಳಿಂದಲ್ಲದೇ ವರ್ತಕರಿಂದ ಹೆಚ್ಚು ಬಡ್ಡಿಯ ಮೇಲೆ ಟಸರ್ ಗೂಡುಗಳಿಗಾಗಿ ಸಾಲವನ್ನು ಪಡೆವ, ದಿನವೆಲ್ಲ ನಿಂತು ಗೂಡುಗಳನ್ನು ನೂಲುವ ಈ ಮಹಿಳೆಯರು ಸಹಜ ಬುದ್ಧಿವಂತರೋ, ಅಥವಾ ಅವರುಗಳಿಗೆ ನನಗೆ ಸಹಜವಾಗಿ ಕಂಡ ಅವಕಾಶಗಳು ಕಾಣುತ್ತಿಲ್ಲವೋ ತಿಳಿಯದೇ ತಬ್ಬಿಬ್ಬಾಗಿ ನಾನು ಹಿಂದಕ್ಕೆ ಬಂದೆ. ಇಂಥ ಪರಿಸ್ಥಿತಿಯಲ್ಲಿ ಅಲ್ಲಿ ಕೆಲಸಮಾಡುತ್ತಿರುವ ಸತ್ಯಬ್ರತನಂಥಹ ಜನರಿಗೆ ನನ್ನಂಥ ಹೊರಗಿನವರ ’ಉಪದೇಶ’ದಲ್ಲಿರುವ ಹುಳುಕು ತಕ್ಷಣವೇ ಕಾಣಿಸುತ್ತದೆ. ಆದರೆ ದುರಾದೃಷ್ಟವಶಾತ್ ರಾಸ್ದಾದಲ್ಲಿ ನನಗೆ ಯಾವುದೇ ಉತ್ತರ ದೊರೆಯಲಿಲ್ಲ.

ಅಷ್ಟೆಲ್ಲಾ ಟಸರ್ ನೂಲುವಿಕೆಯನ್ನು ನೋಡಿದ ನನಗೆ ಟಸರ್ ರೇಷ್ಮೆಯ ವಸ್ತ್ರವನ್ನು ಕೊಳ್ಳಬೇಕೆನ್ನಿಸಿತು. ಆದರೆ ಆ ನೂಲು ಭಾಗಲ್ಪುರಕ್ಕೆ ಹೋಗಿ, ಅಲ್ಲಿನ ಮಗ್ಗಗಳಲ್ಲಿ ನೇಯ್ದು, ಕಡೆಗೆ ಮಾರಾಟವಾಗುತ್ತಿದ್ದದ್ದು ದೆಹಲಿಯಲ್ಲಿ ಅಂತ ತಿಳಿಯಿತು. ಈ ಕೊಂಡಿಯಂತೂ ಸರಳವಾದ ಕೊಂಡಿಯಾಗಿರಲಿಲ್ಲ.No comments:

Post a Comment