Sunday, December 20, 2009

ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು.

ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.

ಈ ಮಾಹಿತಿಯನ್ನು ನಾವು ಹೇಗೆ ಅರ್ಥೈಸಬಹುದು? ಒಟ್ಟಾರೆ ಮಾಹಿತಿಯನ್ನು ನಾವು ರಾಷ್ರ್ಟೀಯ ಮಟ್ಟದಲ್ಲಿ ನೋಡಿದಾಗ ಬ್ಯಾಂಕುಗಳ ರಾಷ್ಟ್ರೀಕರಣದಿಂದ ಬಡವರಿಗೆ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲ - ಸಿಗುವಂತಾಯಿತು - ಹಾಗೂ ಒಂದು ದಶಕದಲ್ಲಿ ಆ ನೀತಿಯ ದೊಡ್ಡ ಪ್ರಭಾವ ನಮಗೆ ಕಾಣಿಸಿತು ಎನ್ನಬಹುದು. ಆ ನಂತರದ ನೀತಿಗಳು ಬಡ್ಡಿವ್ಯಾಪಾರಿಗಳ ವ್ಯಾಪಾರದ ಮೇಲೆ ದೊಡ್ಡ ಪ್ರಭಾವವನ್ನ ಬೀರಿಲ್ಲ. ನಿಧಾನವಾಗಿ ಒಂದಡೆ ಬೆಳೆಯುತ್ತಾ ಒಂದೆಡೆ ಕುಂಟುತ್ತಾ ಈ ಸೇವೆಗಳು ಮುಂದುವರೆದಿವೆ.

ರೋಹಿಣಿ ಪಾಂಡೆ ಮತ್ತು ರಾಬಿನ್ ಬರ್ಗೆಸ್ ಅವರುಗಳ ಈಚಿನ ಅಧ್ಯಯನದ ಪ್ರಕಾರ ಬ್ಯಾಂಕುಗಳ ರಾಷ್ಟ್ರೀಕರಣದಿಂದ - 1991ರ ಉದಾರೀಕರಣದವರೆಗಿನ ಕಾಲದ ಮಾಹಿತಿಯನ್ನು ಪರಿಶೀಲಿಸಿದಾಗ ಆ ಘಟ್ಟದಲ್ಲಿ ಒಟ್ಟಾರೆ ಬಡತನವೂ ಕಡಿಮೆಯಾಯಿತಲ್ಲದೇ, ಕೃಷಿಯ ಉತ್ಪತ್ತಿಯೂ ಹೆಚ್ಚಿತು - ಆದರೆ ತದನಂತರದ ಉದಾರೀಕರಣದ ನಂತರ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ಕಾಣಿಸುತ್ತಿದೆ ಎಂದು ಅವರುಗಳು ವಾದಿಸುತ್ತಾರೆ. ಇದು ಯಾಕೆ ಹೀಗಾಗಿರಬಹುದು ಅನ್ನುವುದು ಕುತೂಹಲದ ವಿಷಯ.

ಇದನ್ನು ಒಂದು ರಾಷ್ಟ್ರೀಕೃತ ಬ್ಯಾಂಕಿನ ದೃಷ್ಟಿಯಿಂದ ನೋಡೋಣ. ಬಡ್ಡಿವ್ಯಾಪಾರಿ ತಿಂಗಳಿಗೆ 3 ರರಿಂದ 5 ಪ್ರತಿಶತ ಬಡ್ಡಿ ಪಡೆಯುತ್ತಿರುವ ವಾತಾವರಣದಲ್ಲಿ ಬ್ಯಾಂಕುಗಳು ವ್ಯಾಪಾರ ಮಾಡಬೇಕು. ಆ ವಾತಾವರಣದಲ್ಲಿ ಸರಕಾರದ ಆದೇಶದ ಮೇರೆಗೆ ಕಡಿಮೆ ಬಡ್ಡಿ ದರದಲ್ಲಿ - ಕೃಷಿಗೆ ವರ್ಷಕ್ಕೆ 7 ಪ್ರತಿಶತ ಬಡ್ಡಿ, ಹಾಗೂ ಮಿಕ್ಕ ಸಾಲಗಳಿಗೂ ಪಿ.ಎಲ್.ಆರ್ - ಅತ್ಯುತ್ತಮ ಗ್ರಾಹಕರಿಗೆ ನೀಡುವ - ದರದಲ್ಲಿ ನೀಡಬೇಕು. ಸಾಲದ ಮೊತ್ತ ಸಣ್ಣದು. ಇದಕ್ಕಾಗುವ ಕೆಲಸ ಹೆಚ್ಚಿನದು. ಈ ಕೆಲಸವನ್ನು ಮಾಡಲು ಯಾರಿಗೆ ಆಸಕ್ತಿಯಿರಬಹುದು....

ಬ್ಯಾಂಕಿನ ಉನ್ನತಾಧಿಕಾರಿಗಳಾದ ಚೇರ್ಮನ್ನರ ದೃಷ್ಟಿಯಿಂದ ನೋಡಿದರೆ ಅವರ ಕೆಲಸವೂ ಕಷ್ಟದ್ದೇ. ಉದಾರೀಕರಣದ ನಂತರ ಅವರುಗಳು ತಮ್ಮ ಬ್ಯಾಂಕುಗಳ ಲಾಭಾಂಶವನ್ನೂ ಗಮನದಲ್ಲಿಡುತ್ತಾ - ಷೇರ್ ಬಜಾರಿನಲ್ಲಿ ತಮ್ಮ ಬ್ಯಾಂಕಿನ ಕಿಮ್ಮತ್ತು ಆರಕ್ಕೇಳುತ್ತಿದೆಯೋ, ಮೂರಕ್ಕಿಳಿಯುತ್ತಿದೆಯೋ - ಗಮನಿಸುತ್ತಲೇ, ಸರಕಾರಕ್ಕೆ ವಾರ್ಷಿಕ ಲಾಭಾಂಶವನ್ನು ನೀಡುತ್ತಲೇ ಬಡವರ ಸೇವೆಯನ್ನು ಲಾಭರಹಿತವಾಗಿ ಮಾಡಬೇಕಿದೆ. ಈ ಎಲ್ಲದರ ಬ್ಯಾಂಕಿಗೂ ಅದರ ಗ್ರಾಹಕರಿಗೂ ಇರುವ ಪತಿ-ಪತ್ನಿಯ ಸಂಬಂಧದ ನಡುವೆ ಸರಕಾರ ಮೂಗು ತೂರಿಸಿ ಸಾಲಮನ್ನಾದಂತಹ ಕಾರ್ಯಕ್ರಮಗಳಿಂದ ಉಂಟುಮಾಡುವ ವಿರಸವನ್ನೂ ಮೀರಿ ಕೆಲಸ ಮಾಡಬೇಕಿದೆ. ಈ ಸರ್ಕಸ್ಸು ಸರಳವಾದದ್ದೇನೂ ಅಲ್ಲ. ಒಮ್ಮೆ ಖಾಸಗಿಯಾಗಿ ರಾಷ್ಟ್ರೀಕೃತ ಬ್ಯಾಂಕಿನ ಅಧ್ಯಕ್ಷರೊಬ್ಬರು ರಿಜರ್ವ್ ಬ್ಯಾಂಕಿನ ಉಪ-ಗವರ್ನರ್ ಗೆ "ನಮಗೆ ಗ್ರಾಮೀಣ ಗ್ರಾಹಕರಿಂದ 16 ಪ್ರತಿಶತ ಬಡ್ಡಿ ಪಡೆಯಲು ಬಿಟ್ಟರೆ ನಾವುಗಳು ನೀವು ಹೇಳಿದಷ್ಟು ಸಾಲ ಕೊಡುವುದೇ ಅಲ್ಲದೇ ಬಂದ ಪ್ರತೀ ಗ್ರಾಹಕರಿಗೂ ಚಹಾ ಕುಡಿಸುತ್ತೇವೆ." ಎಂದು ಹೇಳಿದ್ದನ್ನು ನಾನು ಕಂಡಿದ್ದೆ. ಇದರ ಅರ್ಥವಿಷ್ಟೇ - ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನು ಬಿಟ್ಟರೆ, ನಮ್ಮನ್ನು ಮುಕ್ತವಾಗಿ ಮಾರುಕಟ್ಟೆಯ ಸೂತ್ರಗಳ ಆಧಾರದ ಮೇಲೆ ವ್ಯಾಪಾರ ಮಾಡಲು ಬಿಡಿ. ಹೀಗೆ ಲಾಭವೇ ಮಾಡದಂತಹ ವ್ಯಾಪಾರವನ್ನು ನಾವು ಬ್ಯಾಂಕುಗಳ ಮೇಲೆ ಹೇರಿ ತಮಾಷೆ ನೋಡುತ್ತಿದ್ದೇವೆ.

ಚೇರ್ಮನ್ನರ ವಿಷಯ ಒತ್ತಟ್ಟಿಗಿಟ್ಟು ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್ ಅಧಿಕಾರಿಯ ದೃಷ್ಟಿಯಿಂದ ನೋಡಿದರೂ ನಮಗೆ ಕಾಣುವ ಚಿತ್ರ ಅದ್ಭುತವಾದದ್ದೇನೂ ಅಲ್ಲ. ಗ್ರಾಮೀಣ ಪ್ರಾಂತದ ಶಾಖೆಗಳಲ್ಲಿ ಕೆಲಸಮಾಡುವ ಅಧಿಕಾರಿಗಳು ವರ್ಗಾವಣೆಯ ನೀತಿಯಿಂದಾಗಿ, ಬಹುತೇಕ ಹೊರಗಿನಿಂದ ಬಂದವರಾಗಿರುತ್ತಾರೆ. ಗ್ರಾಮೀಣ ಶಾಖೆಗಳಲ್ಲಿ ಇಬ್ಬರು ಅಥವಾ ಮೂವ್ವರು ಉದ್ಯೋಗಿಗಳಿರುತ್ತಾರೆ. ಅಲ್ಲಿ ಸಣ್ಣ ಮೊಬಲಗಿನ ಸಾವಿರಾರು ವ್ಯವಹಾರಗಳಿರುತ್ತವೆ. ಜೊತೆಗೆ ಬಹುತೇಕ ಪ್ರದೇಶಗಳಲ್ಲಿ ಸುತ್ತಮುತ್ತಲ ಪ್ರಾಂತದಲ್ಲಿ ಅದು ಯಾವುದೇ ಬ್ಯಾಂಕಿನ ಏಕೈಕ ಶಾಖೆಯಾಗಿರುತ್ತಾದ್ದರಿಂದ - ಆ ಪ್ರಾಂತದ ಎಲ್ಲ ಹಣವೂ - ಅಂಚೆ ಕಛೇರಿ, ಪಂಚಾಯ್ತಿಯಿಂದ ಹಿಡಿದು ನರೇಗಾದವರೆಗೂ - ಆ ಶಾಖೆಯ ಮೂಲಕವೇ ಹರಿಯುತ್ತದೆ. ಇಷ್ಟೇ ಆ ಅಧಿಕಾರಿಯ ತೊಂದರೆಯೆಂದರೂ ತಪ್ಪಾದೀತು. ಆತನ ಅನೇಕ ಗ್ರಾಹಕರು ಅನಕ್ಷರಸ್ಥರು. ಅವರಿಗೆ ವ್ಯವಹಾರವನ್ನು ವಿವರಿಸುವುದಲ್ಲದೇ, ಅವರುಗಳ ಪತ್ರಗಳನ್ನೂ ತಾನೇ ತುಂಬಿಸಬೇಕು. ಒಂದು ರೀತಿಯಲ್ಲಿ - ರೋಗಿಗೆ ಟ್ರೀಟ್ಮೆಂಟ್ ಕೊಡುತ್ತಿರುವ ವೈದ್ಯರಂತೆ, ತನ್ನ ಗ್ರಾಹಕನೊಂದಿಗೆ ವರ್ತಿಸಬೇಕು.

ಈ ಎಲ್ಲ ಮಾಡುವ ಆ ಅಧಿಕಾರಿಗೆ ದಸರಾ-ದೀಪಾವಳಿಗೂ ರೀಪ್ಲೇಸ್ಮೆಂಟ್ ಇಲ್ಲವೆನ್ನುವ ಕಾರಣವಾಗಿ ರಜೆ ಸಿಗುವುದಿಲ್ಲ. ಆ ಬಡಪಾಯಿ ಅಧಿಕಾರಿ ಮಕ್ಕಳ ವಿದ್ಯಾಭ್ಯಾಸವೆಂದು ಹೆಂಡತಿ ಮಕ್ಕಳನ್ನು ನಗರದಲ್ಲಿಯೇ ಬಿಟ್ಟು, ಡಬಲ್ ಖರ್ಚು ಮಾಡುತ್ತಾ ಅಥವಾ ಅಪ್-ಡೌನ್ ಮಾಡುತ್ತಾ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸಬೇಕು. ಈ ಎಲ್ಲವನ್ನೂ ಯೋಚಿಸಿದಾಗ - ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿರುವ ಸಾಧನೆ ಯಾವ ಜಾದೂವಿಗಿಂತಲೂ ಕಡಿಮೆಯಿಲ್ಲ. ಹಾಗೆ ನೋಡಿದರೆ - ಮೈಕ್ರೋಫೈನಾನ್ಸ್ ಮತ್ತು ಸ್ವ-ಸಹಾಯ ಗುಂಪುಗಳ ಹಣವನ್ನೂ ದಿನದಂತ್ಯದಲ್ಲಿ ಎಣಿಸಿ ಜೋಪಾನವಾಗಿಡುವವರು ಬ್ಯಾಂಕಿನವರೇ ಅಲ್ಲವೇ?

ಹಾಗಾದರೆ ಸಂಸ್ಥಾಗತ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲದ ಸೌಲಭ್ಯ - ಈಗಿರುವ ಸುಮಾರು 60 ಪ್ರತಿಶತದಷ್ಟೇ ಪಾಲಿನಲ್ಲಿ ಸ್ಥಗಿತಗೊಂಡಿರುತ್ತವೆಯೋ - ಅಥವಾ ಅದು ಬೆಳೆಯಬಹುದೋ.. ಸಾಕಷ್ಟು ಸುದ್ದಿ ಮಾಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಬಡ್ಡಿವ್ಯಾಪಾರಿಯನ್ನು ಹೊರಗಟ್ಟುತ್ತವೆಯೋ ಅಥವಾ ಬ್ಯಾಂಕುಗಳ ಧಂಧೆಯನ್ನು ಕಬಳಿಸುತ್ತವೆಯೋ ಅನ್ನುವುದು ಕುತೂಹಲದ ಮಾತು. ಬ್ಯಾಂಕುಗಳಿಂದಲೇ ದೊಡ್ಡ ಸಾಲವನ್ನ ಪಡೆದು - ಪುಟ್ಟಸಾಲಗಳನ್ನಾಗಿ ಹಂಚುತ್ತಿರುವ ಮೈಕ್ರೊಫೈನಾನ್ಸ್ ಸಂಸ್ಥೆಗಳು 18 ರಿಂದ 28 ಪ್ರತಿಶತ ಬಡ್ಡಿಯನ್ನು ಬಡವರಿಂದ ಪಡೆಯುತ್ತ ಬ್ಯಾಂಕುಗಳು ಮಾಡಲಾಗದ, ಆದರೆ ಮಾಡಲು ಸಾಧ್ಯವಿರಬಹುದಾದ ಕೆಲಸವನ್ನು ಮಾಡಿ ತೋರಿಸುತ್ತಿವೆ. ಆದರೂ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಸೇರಿ ಒಟ್ಟಾರೆ ರೂ.20,000 ಕೋಟಿಗಿಂತ ಕಡಿಮೆ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಅವರುಗಳು ಬ್ಯಾಂಕುಗಳಿಗೆ ಜೋರಾದ ಪೈಪೋಟಿ ನೀಡುವುದು ಕಷ್ಟದ ಮಾತೇ. ಅದೂ ಅಲ್ಲದೆ ಈ ಸಂಸ್ಥೆಗಳ ಬಡ್ಡಿದರ ಮತ್ತು ವಸೂಲಿ ವಿಧಾನಗಳನ್ನು ಕಂಡವರು ಇಂಥ ಸಂಸ್ಥೆಗಳನ್ನು ಸಂಸ್ಥಾಗತ ಬಡ್ಡಿವ್ಯಾಪಾರಿಗಳೆಂದೂ ಕರೆಯುತ್ತಾರೆ.

ಸಣ್ಣ ಮೊತ್ತದ ಸಾಲದಲ್ಲಿ ಬಡ್ಡಿಯ ಪಾತ್ರ ಹಿರಿದಾದದ್ದೇನೂ ಅಲ್ಲವೆನ್ನುವ ವಾದವನ್ನು ನನ್ನನ್ನೊಳಗೊಂಡು ಅನೇಕರು ಮಂಡಿಸಿದ್ದಾರೆ. ಅದರೂ ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿಹಾಕಿ ಮುಕ್ತಮಾರುಕಟ್ಟೆಯ ಅಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ. ಈ ಸಂಸ್ಥೆಗಳನ್ನು ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡಲು ಬಿಟ್ಟರೆ, ಪ್ರತೀ ಗ್ರಾಮೀಣ ಶಾಖೆಯಲ್ಲೂ ಐದಾರು ಉದ್ಯೋಗಿಗಳು ಹಾಗೂ ಪ್ರತೀ ಗ್ರಾಹಕನಿಗೂ ಒಂದು ಕಪ್ ಚಹಾ ಸಿಗುವ ದಿನಗಳು ದೂರವಿರಲಾರವು. ಆದರೆ ಬಡ್ಡಿ ದರವನ್ನೇ ಉಸಿರಾಡುವ - ಎರಡು ದಶಕಗಳಿಗೊಮ್ಮೆ ಸಾಲಮನ್ನಾ ಮಾಡುವ ಸರಕಾರಕ್ಕೆ ತಿಳಿಹೇಳುವವರು ಯಾರು?

ಹೀಗೆ ಬ್ಯಾಂಕುಗಳಿಗಾಗುವ ಖರ್ಚನ್ನು ಸಂಪಾದಿಸುವ ಸ್ಥರಕ್ಕೆ ಬಡ್ಡಿದರ ಹೆಚ್ಚಿದರೂ ಬಡಗ್ರಾಹಕರು ಸಾಲಪಡೆಯುವುದನ್ನು ಮುಂದುವರೆಸುತ್ತಾರೆಂಬ ವಾದ ಪ್ರಶ್ನಾತೀತವೇನದ ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿರುವ ಅಧ್ಯಯನದ ಆಧಾರದ ಮೇಲೆ ದಹೇಜಿಯಾ, ಮಾಂಟಗಮರಿ ಮತ್ತು ಮುರ್ಡೋಕ್ ಈ ವಾದವನ್ನು ಪ್ರಶ್ನಿಸುತ್ತಾರೆ. ಅವರ ಪ್ರಕಾರ - ಹೆಚ್ಚಿದ ಬಡ್ಡಿದರದಲ್ಲೂ ಜನ ಸಾಲ ಪಡೆಯಲು ತಯಾರಿರಬಹುದಾದರೂ ಸಂಸ್ಥೆಯ ಗ್ರಾಹಕ ಸಮೂಹ ಕಡುಬಡವರಿಂದ ತುಸು ದೂರ ಹೋಗುತ್ತಿರುವುದನ್ನು ಅವರುಗಳು ದಾಖಲಿಸಿದ್ದಾರೆ. ಸಂಸ್ಥಾಗತ ಮೂಲಗಳಿಂದ ಕೊಡುವ ಸಾಲದ ಪಾಲು ಒಟ್ಟಾರೆ 80-85 ಪ್ರತಿಶತ ತಲುಪುವವರೆಗೂ ರಾಜಕಾರಣಿಗಳು - ಸರಕಾರೀ ಯಂತ್ರಾಂಗದವರೂ ಈ ಪೇಪರನ್ನು ಓದದಿರುವುದೇ ಒಳಿತು.



Friday, December 4, 2009

ಬಡ್ಡಿವ್ಯಾಪಾರಿಗಳ ಕಥೆಗಳು

ಗ್ರಾಮೀಣ ಪ್ರದೇಶಗಳಲ್ಲಿನ ಬಡ್ಡಿವ್ಯಾಪಾರಿಗಳೆಂದರೆ ನಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಬಡ್ಡಿವ್ಯಾಪಾರಿಗಳೆಂದರೆ ದುಷ್ಟರು, ಶೋಷಕರು, ಬಡವರ ಜಮೀನನ್ನು ಒತ್ತುವರಿಮಾಡಿಕೊಳ್ಳುವವರು, ಹಾಗೂ ನಾನಾ ರೀತಿಯಲ್ಲಿ ಹಿಂಸಿಸುವ ಹೃದಯಹೀನರು ಅನ್ನುವ ಚಿತ್ರ ನಮ್ಮ ಮನಸ್ಸಿನಲ್ಲಿ ಬಂದರೆ ಅದು ಆಶ್ಚರ್ಯವನ್ನು ಉಂಟುಮಾಡಬಾರದು. ನಾನು ಪುಟ್ಟವನಾಗಿದ್ದಾಗಿನಿಂದಲೂ ಓದಿದ ಸಾಹಿತ್ಯ, ಕಂಡ ಸಿನೇಮಾ ಹಾಗೂ ಬೆಳೆದು ನಿಂತಾಗ ಓದಿದ ಬೌದ್ಧಿಕ ಬರಹಗಳೆಲ್ಲ ಈ ಚಿತ್ರವನ್ನು ನಮ್ಮ ಮುಂದಿಡುವುದರಲ್ಲಿ ಸಫಲವಾಗಿದ್ದುವು. ಇದೂ ಸಾಲದೆಂಬಂತೆ, ಸರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ನಮಗೆ "ಬಡವರನ್ನು ಸಾಲಮುಕ್ತರನ್ನಾಗಿ ಮಾಡುವುದೂ", "ಬಡ್ಡಿವ್ಯಾಪಾರಿಗಳ ಹಿಡಿತದಿಂದ ಬಿಡಿಸುವುದೂ" ಮುಖ್ಯ ಕಾರ್ಯಕ್ರಮಗಳಾಗಿ ಕಾಣುತ್ತಿದ್ದುವು.

ಗ್ರಾಮೀಣ ಪ್ರಾಂತದಲ್ಲಿ ಅನೇಕ ವರ್ಷಗಳಿಂದ ಓಡಾಡುತ್ತಿರುವ ನನಗೆ ಒಬ್ಬ ಬಡ್ಡಿವ್ಯಾಪಾರಿಯೂ ಕಂಡಿಲ್ಲ. ಕಿರಾಣೆಯಂಗಡಿಯವರನ್ನು, ಸರಪಂಚರನ್ನೂ, ಗ್ರಾಮ ಲೆಕ್ಕಿಗನನ್ನು, ದೇವಸ್ಥಾನದ ಅರ್ಚಕರನ್ನೂ, ಸ್ಕೂಲು ಮಾಸ್ತರುಗಳನ್ನೂ ಭೇಟಿಯಾಗಿರುವ ನನಗೆ ಯಾರೂ, ’ನಾನು ಈ ಗ್ರಾಮದ ಬಡ್ಡಿವ್ಯಾಪಾರಿ’ ಎಂದು ಪರಿಚಯಿಸಿಕೊಂಡ ಕಾರ್ಡು ಕೊಟ್ಟ ಅನುಭವವಿಲ್ಲ. ಹಾಗೆಂದು ಬಡ್ಡಿವ್ಯಾಪಾರಿಗಳು ನಮ್ಮ ಊಹೆಯಲ್ಲಿ ಮಾತ್ರವಿರುವ ರಾಕ್ಷಸರು ಎಂದು ನಾನೇನೂ ವಾದಿಸ ಹೊರಟಿಲ್ಲ. ಆದರೆ ಬಡ್ಡಿವ್ಯಾಪಾರಿಗಳು ತಮ್ಮ ಸಮಾಜದಲ್ಲಿ ಯಾವ ಭೂಮಿಕೆಯನ್ನು ನಿರ್ವಹಿಸುತ್ತಿರಬಹುದು ಅನ್ನುವ ಕುತೂಹಲವನ್ನು ನಾವು ಪರಿಹರಿಸಿಕೊಳ್ಳಲು ಸಾಧ್ಯವಾಗಬಹುದೇ? ಈಗಲೂ ಸ್ವ-ಸಹಾಯ ಗುಂಪುಗಳಲ್ಲಿ ಶಾಮೀಲಾಗಿರುವ ಮಹಿಳೆಯರನ್ನು ಮಾತನಾಡಿಸಿದರೆ ಅವರುಗಳು ಬಡ್ಡಿವ್ಯಾಪಾರಿಗಳಿಂದ ಸಾಲ ಪಡೆಯುತ್ತಿದ್ದ, ಅದಕ್ಕೆ ಅವರುಗಳು ಕಟ್ಟುತ್ತಿದ್ದ ಬಡ್ಡಿಯ ಕಥೆಗಳನ್ನು ನಮಗೆ ಕಣ್ಣೀರು ಬರುವಂತೆ ವಿವರಿಸುತ್ತಾರೆ.

ಬಡ್ಡಿವ್ಯಾಪಾರಿಗಳು ಇಷ್ಟು ದುಷ್ಟರಾದರೆ ಅವರು ಹೇಗೆ ಇನ್ನೂ ವ್ಯಾಪಾರವನ್ನು ನಡೆಸುತ್ತಿದ್ದಾರೆ? ಅವರು ಬಡ್ಡಿವ್ಯಾಪಾರದಿಂದ ಅಷ್ಟೊಂದು ಹಣವನ್ನು ಸಂಪಾದಿಸುವುದೇ ಆಗಿದ್ದರೆ ನಮಗೆ ಗ್ರಾಮೀಣ ಪ್ರಾಂತದಲ್ಲಿ ಈ ವ್ಯಾಪಾರ ಮಾಡಿ ದೊಡ್ಡ ವ್ಯಾಪಾರಿಯಾಗಿ ಒಂದು ಬ್ಯಾಂಕಿನ/ಕಂಪನಿಯ ಸ್ಥರಕ್ಕೆ ಬೆಳೆದ ಬಡ್ಡಿವ್ಯಾಪಾರಿಗಳು ಯಾಕೆ ಕಾಣಸಿಗುವುದಿಲ್ಲ? ಈ ರೀತಿಯ ಪ್ರಶ್ನೆಗಳನ್ನು ನಾವು ಪರೀಕ್ಷಿಸಿದಾಗ ನಮಗೆ ಸಮಾಜದಲ್ಲಿ ಬಡ್ಡಿವ್ಯಾಪಾರಿಗಳ ಪಾತ್ರದ ಬಗೆಗಿನ ವಿವಿಧ ಪದರಗಳು ಕಾಣಸಿಗಬಹುದೇನೋ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಂಶೋಧನೆಯನ್ನಲ್ಲದೇ ಸಾಹಿತ್ಯದ ಪರಿಕರಗಳನ್ನೂ ಬಳಸಿಕೊಳ್ಳುತ್ತೇನೆ.

ಬೆಂಗಳೂರಿನ ಐಐಎಂನಲ್ಲಿ ಸಂಶೋಧನಾ ಫೆಲೊ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ ರೆಡ್ಡಿ ಅನಂತಪುರದ ಒಬ್ಬ ಬಡ್ಡಿವ್ಯಾಪಾರಿಯ ಲೆಕ್ಕದ ಪುಸ್ತಕಗಳನ್ನು ತಂದು ಅದನ್ನು ವಿಶ್ಲೇಷಿಸಿದ್ದರು. ದುರಾದೃಷ್ಟವಶಾತ್ ಆ ಸಂಶೋಧನೆ ಪೂರ್ಣಗೊಳ್ಳುವುದಕ್ಕೆ ಮೊದಲೇ ಸೋಮ್ ಹೃದಯಾಘಾತಕ್ಕೀಡಾದರು. ಆದರೂ ಸೋಮ್ ಬರೆದಿದ್ದ ಪೇಪರಿನ ಮೊದಲ ಆವೃತ್ತಿಯಿಂದ ಕೆಲವಾರು ಕುತೂಹಲಕಾರಿ ವಿಷಯಗಳು ನಮಗೆ ವೇದ್ಯವಾಗುತ್ತವೆ. ಅವರ ವರದಿಯಿಂದ [ಇದು ಅನಂತಪುರ ಜಿಲ್ಲೆಗೆ ಸಂಬಂಧಿಸಿದ ಒಂದು ಗ್ರಾಮದ ಕಥೆ, ಹೀಗಾಗಿ ಇದು ಎಲ್ಲೆಡೆ ವರ್ತಿಸುತ್ತದೆ ಎಂದು ನಾವು ನಂಬುವುದು ಅಸಮರ್ಪಕವಾಗುತ್ತದೆ] ನಮಗೆ ತಿಳಿಯುವುದೆಂದರೆ ಅಲ್ಲಿನ ಬಡ್ಡಿವ್ಯಾಪಾರಿಗಳು ಬರೇ ಬಡ್ಡಿವ್ಯಾಪಾರಿಗಳಾಗಿರದೇ ಮಿಕ್ಕ ವ್ಯಾಪಾರಗಳನ್ನೂ ಮಾಡುತ್ತಿದ್ದರು. ಹೀಗಾಗಿ ಅವರುಗಳು ಸಾಲ ನೀಡುತ್ತಿದ್ದುದ್ದು ತಮಗೆ ತಿಳಿದ ತಮ್ಮೊಂದಿಗೆ ಯಾವುದಾದರೂ ಆರ್ಥಿಕ ಸಂಬಂಧವಿದ್ದ ಸಂಸಾರಗಳಿಗೆ ಮಾತ್ರ. ಮಿಕ್ಕವರು ಇನ್ನೆಲ್ಲಾದರೂ ಸಾಲವನ್ನು ಪಡೆಯುತ್ತಿದ್ದರು. ಈ ಕಥೆಯೂ ನಮಗೆ ತಿಳಿದದ್ದೇ. ಆದರೆ ಬಡ್ಡಿ ವ್ಯಾಪಾರಿಗಳು ತಮ್ಮ ಸಾಲಗಾರರನ್ನು ಯಾವ ಯಾವ ರೀತಿಯಲ್ಲಿ ಹೀರಲು ಸಾಧ್ಯವೋ ಆ ಎಲ್ಲರೀತಿಯಲ್ಲೂ ಹೀರಲು ತಯಾರಿರುತ್ತಾರೆ ಅನ್ನುವ ಕಥೆಗಳನ್ನು ನಾವು ಕೇಳಿಯೇ ಇದ್ದೇವೆ.

ಆದರೆ ಸೋಮ್ ಅಧ್ಯಯನದಲ್ಲಿ ನಮಗೆ ಕಾಣಿಸುವ ಅತ್ಯಂತ ಮಹತ್ವದ ವಿಷಯವೆಂದರೆ ಈ ಬಡ್ಡಿವ್ಯಾಪಾರಿಗಳು ತಮ್ಮ ಸಾಲಗಾರರಿಗೆ ಎಷ್ಟು ಸಾಲ ನೀಡುತ್ತಿದ್ದರು ಅನ್ನುವ ಅಂಕಿ. ಅವರು ಅಧ್ಯಯನ ಮಾಡಿರುವ ೧೫೦೦ ಸಾಲಗಳಲ್ಲಿ ರೂ.೧೦,೦೦೦ ದಾಟಿದ ಸಾಲಗಳು ಕೇವಲ ಎರಡು. ರೂ. ೫೦ಕ್ಕೂ ಕಡಿಮೆ ಸಾಲ ಕೊಟ್ಟಿರುವುದು ೪೪೨ ಬಾರಿ. ಅರ್ಥಾತ್: ಈ ಸಾಲಗಳನ್ನು
ಬಡ್ಡಿವ್ಯಾಪಾರಿಯಲ್ಲದೇ ಬೇರೆ ಯಾರಾದರೂ ನೀಡಲು ಸಾಧ್ಯವಿತ್ತೇ? ಒಂದು ರೀತಿಯಲ್ಲಿ ಗ್ರಾಮೀಣ ಬಡ್ಡಿವ್ಯಾಪಾರಿ ಬಡವರ ಕ್ರೆಡಿಟ್ ಕಾರ್ಡಿನಂತೆ ವರ್ತಿಸುತ್ತಿದ್ದಾನೆ ಅನ್ನಿಸುವುದಿಲ್ಲವೇ? ಅಂದ ಹಾಗೆ ಕ್ರೆಡಿಟ್ ಕಾರ್ಡಿನ ಸಾಲಕ್ಕೆ ನಾವು ಬ್ಯಾಂಕುಗಳಿಗೆ ಕಟ್ಟಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿದರೆ ತಿಂಗಳಿಗೆ ಎರಡು/ಮೂರು ಪ್ರತಿಶತ ಬಡ್ಡಿ ಪಡೆವ ಗ್ರಾಮೀಣ ಬಡ್ಡಿವ್ಯಾಪಾರಿ ಅಷ್ಟೇನೂ ದುಷ್ಟನಾಗಿ ಕಾಣುವುದಿಲ್ಲ.


ಸತ್ಯಂ ಶಂಕರ ಮಂಚಿ ಅನ್ನುವ ಲೇಖಕರ ಅದ್ಭುತ ಪುಸ್ತಕ ’ಅಮರಾವತಿ ಕಥಲು’ವಿನಲ್ಲಿ ಒಂದು ’ಬಾಕೀ ಸಂತಾನ’ ಅನ್ನುವ ಕಥೆಯಿದೆ. ರಂಗಯ್ಯ ಅನ್ನುವ ಬಡರೈತನ ಮೇಲೆ ತನ್ನ ತಂದೆ ಮಾಡಿದ ಸಾಲದ ಭಾರವಿದೆ. ಅದನ್ನು ವಸೂಲು ಮಾಡಲು ಅವನಿಗೆ ಸಾಲ ನೀಡಿದ ಮಾಸ್ತರು ಅವನ ದನವನ್ನು ತಂದು ತಮ್ಮ ಮನೆಯಲ್ಲಿ ಕಟ್ಟಿಹಾಕುತ್ತಾರೆ. ರಂಗಯ್ಯ ಸಿಟ್ಟಿನಿಂದ ಮಾಸ್ತರನ್ನು ಕೊಂದೇ ಬಿಡುತ್ತೇನೆ ಅನ್ನುವ ಹಾಗೆ ಬರುತ್ತಾನೆ. ಆದರೆ ಮಾಸ್ತರು ಅವನನ್ನು ಕರೆದು ಹೇಳುವ ಮಾತು "ಈ ಸಾಲ ತೀರಿದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಅಂತಷ್ಟೇ ನಾನು ನಿನ್ನ ದನವನ್ನು ತಂದೆ, ತೆಗೋ ನಿನ್ನ ಪತ್ರ, ನಿನ್ನ ಸಾಲ ಮಾಫಾಯಿತು. ಹೋಗು" ಅನ್ನುತ್ತಾನೆ. ಆಗ್ಗೆ ರಂಗಯ್ಯ ಅವನ ಕಾಲಿಗೆ ಬಿದ್ದು ತಾನಲ್ಲದಿದ್ದರೆ ತನ್ನ ಮಗನಾದರೂ ಆ ಸಾಲವನ್ನು ತೀರಿಸುವ ಶಪಥವನ್ನು ಮಾಡುತ್ತಾನೆ--- ಇದನ್ನು ನಾವು ಪರಿಶೀಲಿಸಿದಾಗ ಇಲ್ಲಿ ಶೋಷಣೆಯ ಅಂಶವಂತೂ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅದಕ್ಕಿರುವ ಮಿತಿಯೂ ಕಾಣುವುದಿಲ್ಲವೇ? ಬಡ್ಡಿವ್ಯಾಪಾರಿ ಅದೇ ಸಮಾಜದಲ್ಲಿ ಬದುಕಬೇಕು- ಅದೇ ಜನರನ್ನು ದಿನವೂ ನೋಡಬೇಕು ಹೀಗಾಗಿ ಆತ ಒಂದು ಮಿತಿಯಲ್ಲಿ ಇರದಿದ್ದರೆ ಆತನ ಮೇಲಿನ ಸಿಟ್ಟು ಹದ್ದು ಮೀರುತ್ತದೆ ಅನ್ನುವುದನ್ನು ಮಂಚಿ ತಮ್ಮ ಕಥೆಯಲ್ಲಿ ಅದ್ಭುತವಾಗಿ ತೋರಿಸುತ್ತಾರೆ.

ಬಡ್ಡಿವ್ಯಾಪಾರಿಗಳ ಕಥೆಗಳನ್ನು ನಾವು ಕಂಡಾಗ, ಕೇಳಿದಾಗ ನಮಗೆ ಮನಸ್ಸಿಗೆ ತಟ್ಟುವುದು ಅವರುಗಳು ಎಷ್ಟು ಬಡ್ಡಿ ವಸೂಲು ಮಾಡುತ್ತಾರೆ ಅನ್ನುವ ಅಂಶ ಮಾತ್ರ. ಆದರೆ ನಮಗೆ ಅವರುಗಳ ಒಟ್ಟಾರೆ ವ್ಯಾಪಾರದ ಅಂಕಿ ಅಂಶಗಳು ಸಿಗುವುದೇ ಇಲ್ಲ. ಅವರು ಕೊಟ್ಟ ಸಾಲದಲ್ಲಿ ಬಾಕಿ ಉಳಿದು ವಸೂಲಾಗದ ಮೊತ್ತಗಳು ಎಷ್ಟಿರಬಹುದು? ಈ ಪ್ರಶ್ನೆಯನ್ನು ನಾವು ಕೇಳುವುದೇ ಇಲ್ಲ. ಕಾರಣ ಅವರು ಕೊಟ್ಟ ದುಡ್ಡೆಲ್ಲಾ ವಾಪಸ್ಸಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಬಗ್ಗೆ ಸೋಮ್ ಅವರ ಪೇಪರು ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ಆದರೆ ಎಷ್ಟೋ ಬಾರಿ ಮಂಚಿಯ ಕಥೆಯಲ್ಲಿನ ಮಾಸ್ತರರಂತೆ - ಆಯಿತು, ನಿನ್ನ ಸಾಲ ತೀರಿದಂತೆಯೇ, ಎಂದೋ, ಅಥವಾ ಕಟ್ಟಲು ಸಾಧ್ಯವಾಗದಿದ್ದರೆ ’ಪರವಾಗಿಲ್ಲ’ ಎಂದು ಸಾಲದ ಸಮಯವನ್ನು ಬೆಳೆಸುವುದನ್ನೂ ಇವರುಗಳು ಮಾಡಬಹುದು. ಆ ಬಗ್ಗೆ ನಮಗೆ ಮಾಹಿತಿ ಸಿಗುವುದು ಕಷ್ಟದ ಮಾತೇ ಆದ್ದರಿಂದ ಬಡ್ಡಿವ್ಯಾಪಾರಿಗಳ ಧಂಧೆಯನ್ನು ಮಿಕ್ಕ ಹಣಕಾಸಿನ ವ್ಯಾಪರಕ್ಕೆ ಹೋಲಿಸಿ ನೋಡುವುದೂ ಕಷ್ಟವಾಗುತ್ತದೆ.

ನಾನು ಸ್ವ ಸಹಾಯ ಗುಂಪುಗಳ ಬಗ್ಗೆ ಇತ್ತೀಚೆಗೆ ಮಾಡಿದ ಒಂದು ಅಧ್ಯಯನದಲ್ಲಿ ಈ ಗುಂಪುಗಳು ಬಡ್ಡಿವ್ಯಾಪಾರಿಗಳ ಮೇಲೆ ಏನಾದರೂ ಪರಿಣಾಮ ಬೀರಿರಬಹುದೇ ಅನ್ನುವ ಪ್ರಶ್ನೆಯನ್ನು ಪರಿಶೀಲಿಸುವುದು ಒಂದು ಭಾಗವಾಗಿತ್ತು. ಮಾಹಿತಿಯಿಂದ ನಮಗೆ ತಿಳಿದದ್ದೇನೆಂದರೆ - ಬಡ್ಡಿವ್ಯಾಪರಿಗಳ ವ್ಯಾಪಾರವೂ ಸ್ವ-ಸಾಹಯ ಗುಂಪುಗಳ ವ್ಯಾಪಾರದ ಜೊತೆಜೊತೆಗೇ ಬೆಳೆದಿದ್ದು ಒಟ್ಟಾರೆ ಆ ಮಹಿಳೆಯರು ಪಡೆದ ಸಾಲದ ಮೊತ್ತವೂ ಹೆಚ್ಚಾಗಿತ್ತು. ಇದರಿಂದ ನಾವು ಚಿಂತಿತರಾಗಬೇಕೇ? ಇಲ್ಲವೆನ್ನಿಸುತ್ತದೆ. ಒಟ್ಟಾರೆ ಈ ವರ್ಷಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತುಸು ಹೆಚ್ಚಿನ ಆದಾಯ ಪಡೆದಿದ್ದ ಈ ಸಂಸಾರಗಳು ಹೆಚ್ಚಿನ ಸಾಲವನ್ನು ಪಡೆವ ಶಕ್ತಿಯನ್ನೂ ಹೊಂದಿದ್ದವು. ಸ್ವಸಹಾಯ ಗುಂಪುಗಳನ್ನು ಸೇರುತ್ತಿದ್ದಂತೆ ಮುಫತ್ತಾಗಿ ದೊರೆಯುತ್ತಿದ್ದ ಕೈಗಡ ಕೊಡುತ್ತಿದ್ದ ನೆರೆಕೆರೆಯವರು ’ನಿಮಗೆ ಈಗ ಗುಂಪಿದೆಯಲ್ಲಾ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದದರಿಂದ ಆ ಕೈಗಡ ನಿಂತಿತ್ತು. ಹಾಗೂ ಸ್ವಸಹಾಯ ಗುಂಪುಗಳು ಕೆಲವೊಂದು ಉಪಯೋಗಕ್ಕೆ ಮಾತ್ರ ಸಾಲವನ್ನು ನೀಡುತ್ತಿದ್ದುವು. ಹೀಗೆ ಬಡ್ಡಿವ್ಯಾಪಾರಿ ಇವರುಗಳ ಜೀವನದಲ್ಲಿ ಅವಿನಾಭಾವ ಭಾಗವಾಗಿ ನಿಂತುಬಿಟ್ಟಿದ್ದ. ಹಾಗಾದರೆ ಗುಂಪುಗಳು ಸ್ಥಾಪಿತವಾದ್ದರಿಂದ ಪ್ರಯೋಜನವೇ ಇಲ್ಲವೇನು? ಈ ಪ್ರಶ್ನೆಗೆ ಉತ್ತರ ನಮಗೆ ಬಡ್ಡಿ ದರದಲ್ಲಿ ಕಾಣಿಸಿತು. ಮುಂಚೆ ತಿಂಗಳಿಗೆ ಸರಾಸರಿ ಮೂರು ಪ್ರತಿಶತ ಬಡ್ಡಿಕೊಡುತ್ತಿದ್ದ ಈ ಮಹಿಳೆಯರು, ಅದೇ ಬಡ್ಡಿವ್ಯಾಪಾರಿಗಳಿಗೆ ತಿಂಗಳಿಗೆ ಎರಡು ಪ್ರತಿಶತ ಬಡ್ಡಿಕೊಡುತ್ತಿದ್ದರು!

ಆ ಮಹಿಳೆಯರ ಜೊತೆ ನಾನು ಮಾತನಾಡುತ್ತಾ, ಇನ್ನೂ ಬಡ್ಡಿವ್ಯಾಪಾರಿಗಳ ಬಳಿ ಯಾಕೆ ಸಾಲ ಪಡೆಯುತ್ತಿದ್ದೀರಿ ಎಂದು ಕೆಲ ಮಹಿಳೆಯರನ್ನು ಕೇಳಿದ್ದೆ. ಅದಕ್ಕೆ ಅವರು "ಸಾರ್, ಮನೆಯಲ್ಲಿ ಮದುವೆ ಕಾರ್ಯಕ್ಕೆ ಸಾಲ ಬೇಕಾದರೆ ನಾವು ಬಡ್ಡಿವ್ಯಾಪಾರಿಗಳ ಬಳಿಗೇ ಹೋಗುತ್ತೇವೆ, ಯಾಕೆಂದರೆ ನಾವು ಗುಂಪಿನ ಬಳಿ ಇದಕ್ಕಾಗಿ ಸಾಲ ಕೇಳಲು ಹೋದರೆ ನಮಗೆ ದೊರೆಯುವುದು ಮದುವೆಯ ದುಂದಿನ ಬಗ್ಗೆ ಒಂದು ಭಾಷಣವೇ ಹೊರತು, ಹಣವಲ್ಲ" ಅಂದರು. ಈ ಬಗ್ಗೆ ನಾನು ಹೆಚ್ಚು ವಾದಿಸಲು ಹೋಗಲಿಲ್ಲ. ಕಾರಣ ಆಕೆ "ಸರ್ ನೀವು ನಿಮ್ಮ ಮದುವೆ ಎಲ್ಲಿ ಮಾಡಿಕೊಂಡಿರಿ, ಎಷ್ಟು ಖರ್ಚಾಯಿತು?" ಅನ್ನುವ ಅಣ್ವಸ್ತ್ರಗಳನ್ನು ನನ್ನಮೇಲೆ ಪ್ರಯೋಗಿಸಿದ್ದರಿಂದ, ನಮ್ಮ ಸಂಭಾಷಣೆ ಪಡೆವ ದಿಕ್ಕಿನ ಬಗ್ಗೆ ನನಗೆ ಅನುಮಾನವೇ ಇರಲಿಲ್ಲ. ಆಕೆಯ ಮಾತಿನ ಅರ್ಥವಿಷ್ಟೇ - ಬಡವರಾದ ಮಾತ್ರಕ್ಕೇ ಮದುವೆಯ ಸಂದರ್ಭದಲ್ಲಿ ಒಂದಿಷ್ಟು ಜನರಿಗೆ ಊಟ ಹಾಕಿ, ಒಂದು ಔತಣವನ್ನು ನೀಡುವುದು ’ದುಂದು’ ವೆಚ್ಚ ಎಂದು ಉಪದೇಶ ಮಾಡುವ ಹಕ್ಕು ನಮಗಾಗಲೀ, ಗುಂಪುಗಳನ್ನು ನಡೆಸುವವರಿಗಾಗಲೀ ಎಲ್ಲಿಂದ ಬಂತು ಅನ್ನುವುದನ್ನು ಆಕೆ ಕೇಳುತ್ತಿದ್ದರು. ಬಡ್ಡಿವ್ಯಾಪಾರಿಯಾದರೆ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ. ಆತನಿಗೆ ಈ ಅವಶ್ಯಕತೆಯ ಮಹತ್ವ ಗೊತ್ತು. ಹೀಗಾಗಿಯೇ:

ಹೀಗೆ ಬಡ್ಡಿವ್ಯಾಪಾರಿಗಳನ್ನು ಸುಲಭವಾಗಿ ನಾವು ತಳ್ಳಿಹಾಕುವಂತಿಲ್ಲ. ಬದಲಿಗೆ ಅವರ ಪಾತ್ರವೇನೆಂದು ಅರ್ಥಮಾಡಿಕೊಂಡು ಆ ರಾಕ್ಷಸೀ ವೃತ್ತಿಯಲ್ಲಿರಬಹುದಾದ ದೈವತ್ವವನ್ನು ನಾವು ಕಾಣಬೇಕಾಗಿದೆಯೇನೋ!!