Sunday, January 31, 2010

ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು


ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಸ್ತಿತ್ವದ ಗುರುತಿನ ಚೀಟಿ ಕೊಡಬೇಕೆಂದೇ ನಿಯಮಿಸಲ್ಪಟ್ಟ ಯುನಿಕ್ ಐಡಿ ಅಥಾರಿಟಿಯ ಮುಂದಿರುವುದು ಸುಲಭವಾದ ಸವಾಲೇನೂ ಅಲ್ಲ. ಈ ಸ್ಥರದ ಕೆಲಸ ಈವರೆಗೆ ಯಾವುದೇ ದೇಶದಲ್ಲಿ ನಡೆದಿಲ್ಲ. ಒಂದು ನೂರು ಕೋಟಿಕೂ ಹೆಚ್ಚಿನ ಜನಸಂಖ್ಯೆಯ ಗುರುತನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಿ ಆ ಸಂಖ್ಯೆ ಹೊಂದಿದ ವ್ಯಕ್ತಿಯ ಗುರುತನ್ನು ಒಂದೆಡೆ ಕಾಯ್ದಿಡುವುದಲ್ಲದೇ - ಬೇಕೆಂದಾಗ ತ್ವರಿತ ಗತಿಯಲ್ಲಿ ಆ ಗುರುತನ್ನು ಪರಿಶೀಲಿಸಿ ಧೃವೀಕರಿಸಹೊರಟಿರುವ ಈ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯುಐಡಿ ಮುಂದಿರುವ ಸವಾಲುಗಳು ಮಹತ್ತರವಾದವು. ಅಂಥ ಸವಾಲನ್ನು ಎದುರಿಸಲು ಸಿದ್ಧರಾಗಿ ನಿಂತಿರುವ ನಂದನ್ ನಿಲೇಕಣಿ ಸಫಲರಾಗುವರೇ? ನಂದನ್ ಅವರ ಕೆಲಸ ಚುನಾವಣೆಗಳಿಗೆ ಗುರುತಿನ ಚೀಟಿ ಕೊಡಲು ಹೊರಟ ಶೇಷನ್ ಗಿಂತ ಎಷ್ಟು ಭಿನ್ನ ಹಾಗೂ ಎಷ್ಟು ಜಟಿಲ... ಹಾಗೂ ಅವರ ಸಾಫಲ್ಯಕ್ಕೆ ಮಾಪಕಗಳು ಏನು?

ಸರಿಯಾದ ಮಾಪಕಗಳಿಲ್ಲದಿದ್ದರೆ ಈ ಇಂಥ ಒಂದು ಯೋಜನೆ ವಿಫಲವಾಗುವುದಕ್ಕೆ ಸಾಧ್ಯವೇ ಇಲ್ಲ. ಶೇಷನ್ ಪ್ರಾರಂಭಿಸಿದ ಚುನಾವಣಾ ಗುರುತಿನ ಚೀಟಿಯ ಕಾರ್ಯಕ್ರಮವೂ ವಿಫಲವಾಗಿದೆ ಎಂದು ಹೇಳಲು ಒಂದು ರೀತಿಯಿಂದ ಸಾಧ್ಯವಿಲ್ಲ. ಏಕೆಂದರೆ ಈಗಲೂ ಆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಸಾಫಲ್ಯತೆ-ವೈಫಲ್ಯಗಳನ್ನು ಒಂದು ಕಾಲಘಟ್ಟದಲ್ಲಿಟ್ಟು ಒಂದು ಗುರಿಯನ್ನು ತಲುಪುವ ಪ್ರಕ್ರಿಯೆಯಲ್ಲಿ ಮಾತ್ರ ಅಳೆಯಬಹುದು. ಶೇಷನ್ ಗುರುತಿನ ಚೀಟಿಗಳಿಲ್ಲದಿದ್ದರೆ ಓಟು ಹಾಕಲು ಸಾಧ್ಯವಿಲ್ಲ ಎನ್ನವ ಅಂಶವನ್ನು ಸಾಧಿಸಿದರೇ ವಿನಃ ಅದು ಓಟು ಹಾಕಲೆಂದೇ ವಿಶಿಷ್ಟವಾಗಿ ನೀಡಿದ ಗುರುತಿನ ಚೀಟಿ ಅನ್ನುವ ತಮ್ಮ ಗುರಿಯನ್ನು ಸಾಧಿಸಲಾರದೇ ಹೋದರು. ಹೀಗಾಗಿ ಅವರ ಯೋಜನೆ ಸಾಫಲ್ಯತೆಯ ಬಗ್ಗೆ ಕೆಲವು ಪ್ರಶ್ನೆಗಳನ್ನ ಎತ್ತಬಹುದು. ನಂದನ್ ಅವರ ಹಿನ್ನೆಲೆ ಗುರಿ-ಉದ್ದೇಶಗಳನ್ನು ವ್ಯಕ್ತ ಪಡಿಸುವ, ಅದನ್ನು ಸಾಧಿಸುವ ಅಂಕಿಸಂಖ್ಯೆಗಳ ಕಾರ್ಪೊರೇಟ್ ಜಗತ್ತಿನದ್ದು. ಹೀಗಾಗಿ ಅವರು ತಮ್ಮ ಜವಾಬ್ದಾರಿ ಕೈಗೊಂಡ ಕೆಲವು ದಿನಗಳಲ್ಲಿಯೇ ತಮ್ಮ ಉದ್ದೇಶಿತ ಸಾಧನೆಯ ಅಂಕಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಐದು ವರ್ಷಗಳಲ್ಲಿ 60 ಕೋಟಿ ಜನರ ಗುರುತನ್ನು ಸಂಗ್ರಹಿಸಿ ಅವರಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುವ ಗುರಿಯನ್ನು ಹೊಂದಿದ್ದಾರೆ. ಹೀಗಾಗಿ ನಮಗೆ ನಂದನ್ ಸಾಫಲ್ಯತೆಯ ಒಂದು ಮಾಪನವನ್ನಂತೂ ಅವರೇ ನೀಡಿದ್ದಾರೆ.

ನಂದನ್ ಇಷ್ಟು ಜನರ ಗುರುತನ್ನು 5 ವರ್ಷಗಳಲ್ಲಿ ಸಂಗ್ರಹಿಸುವುದಲ್ಲದೇ, ಆ ಗುರುತನ್ನು ಪರಿಶೀಲಿಸಿ ಧೃವೀಕರಿಸುವ ಯಂತ್ರಾಂಗವನ್ನು ನೆಲದ ಮೇಲೆ ಇಳಿಸುವ ಮಹತ್ತರ ಉದ್ದೇಶವನ್ನು ಹೊಂದಿದ್ದಾರೆ. ಆದರೆ ಆ ಗುರಿ ಮಹತ್ವಾಕಾಂಕ್ಷೆಯ ಗುರಿ ಎಂದು ನಮಗನ್ನಿಸುವುದಕ್ಕೆ ಮುಖ್ಯ ಕಾರಣ ಸರಕಾರ ಕೆಲಸ ಮಾಡುವ ರೀತಿಯೇ ಆಗಿದೆ. ಆ ಕಷ್ಟಗಳನ್ನು ನಂದನ್ ಅಂದಾಜು ಮಾಡುವುದರಲ್ಲಿ ಎಡವಿರಬಹುದು. ನಂದನ್ ಬಹು ಬೇಗನೇ ಸರಕಾರದ ಅಡಚಣೆಗಳನ್ನು ಅನುಭವಿಸಲಿದ್ದಾರೆ. ಆ ಅಡಚಣೆಗಳು ಈ ಮಹತ್ತರ ಕೆಲಸಕ್ಕೆ ಬೇಕಾದ ತಂತ್ರಜ್ಞಾನದ ಖರೀದಿಯಿಂದ ಹಿಡಿದು ಈ ಯೋಜನೆಗಿರುವ ಆರ್ಥಿಕ ಸದುಪಾಯದ ಉಪಯೋಗದವರೆಗೆ ಅನೇಕ ಕೊಕ್ಕಿಗಳನ್ನು ಎದುರಿಸಬೇಕಾಗುತ್ತದೆ. ಇವು ಯಾವುವೂ ಖಾಸಗೀ ಕ್ಷೇತ್ರದಲ್ಲಿ ದೊಡ್ಡ ಅಡಚಣೆಗಳಲ್ಲ. ಈ ಅಡಚಣೆಗಳು ಒಂದು ಕಡೆ ಸರಕಾರಗಳಲ್ಲಿರುವ ಭ್ರಷ್ಟಾಚಾರದ ಕಾರಣವಾಗಿ ಆದರೆ, ಮತ್ತೊಂದು ಕಡೆ ಆ ಭ್ರಷ್ಟಾಚಾರವನ್ನು ತಡೆಗಟ್ಟುವ ಯಂತ್ರಾಂಗದ ಕಾರಣವಾಗಿಯೂ ಆಗಬಹುದು. ಆರ್.ಟಿ.ಐ, ಮತ್ತು ಸಿ.ವಿ.ಸಿ [ಮಾಹಿತಿ ಕೇಳುವ ಅಧಿಕಾರ ಮತ್ತು ಕೇಂದ್ರೀಯ ವಿಜಿಲೆಂಸ್ ವಿಭಾಗ] ಎನ್ನುವ ಪದಗಳು ನಂದನ್ ಕಿವಿಯಲ್ಲಿ ಆಗಾಗ ರಿಂಗಣಿಸಲಿವೆ.

ಹೀಗೆ ಎಲ್ಲರ ಗುರುತೂ ಸುಲಭವಾಗಿ ಸಿಗುವುದಾದರೆ, ಅನೇಕ ಜಾಗಗಳ - ನಕಲಿ ಗ್ಯಾಸ್ ಕನೆಕ್ಷನ್, ನಕಲಿ ರೇಷನ್ ಕಾರ್ಡು ಹೀಗೆ - ಸದ್ಯದ ಸಂತೋಷದ ಸ್ಥಿತಿಗೆ ಧಕ್ಕೆ ಒದಗಬಹುದಾದ್ದರಿಂದ ಅವರ ಯೋಜನೆಯನ್ನು ವಿಫಲಗೊಳಿಸಲು ಕೈಕಟ್ಟಿ ನಿಂತ, ಕೆಲಸವನ್ನು ಕೆಡಿಸುವ ಒಂದು ಪಡೆಯೇ ತಯಾರಾಗಿ ನಿಂತಿರುತ್ತದೆ. ಈ ಪಡೆ, ಸಾಮ, ದಾನ, ಭೇದ, ದಂಡೋಪಾಯಗಳನ್ನು ಉಪಯೋಗಿಸಲು ಹೇಸುವುದಿಲ್ಲ. ಒಂದೊಂದು ಜಾಗದಲ್ಲಿ ಮಾಹಿತಿ ಸಂಗ್ರಹಣೆಗೆ ಅನೇಕ ರಿಜಿಸ್ಟಾರುಗಳನ್ನು ಉಪಯೋಗಿಸುವುದಾಗಿ ನಂದನ್ ಹೇಳಿದ್ದಾರೆ. ಅವರುಗಳ ಗುಣಮಟ್ಟದಲ್ಲಿ ಸ್ವಲ್ಪವೂ ಸಡಿಲಾಗದಂತೆ ಯುಐಡಿ ನೋಡಿಕೊಳ್ಳಬೇಕಾಗುತ್ತದೆ. ಇದು ಸರಳವಾದ ಮಾತೇನೂ ಅಲ್ಲ.

ನಂದನ್ ಬುದ್ಧಿವಂತರು - ಹೀಗಾಗಿಯೇ ಎರಡು ವಿವಾದಾಸ್ಪದ ವಿಷಯಗಳ ಬಗ್ಗೆ ತಕ್ಷಣದ ನಿಲುವನ್ನು ತೆಗೆದುಕೊಂಡು ಬಚಾವಾಗಿದ್ದಾರೆ. ಮೊದಲನೆಯದ್ದೆಂದರೆ ಯಐಡಿ ಯಾರಿಗೂ ಗುರುತಿನ ಚೀಟಿಯನ್ನು ನೀಡುವುದಿಲ್ಲ ಎಂದು ಹೇಳಿ - ಆ ಮೂಲಕ ಆಗಬಹುದಾಗಿದ್ದ ಸ್ಮಾರ್ಟ್ ಕಾರ್ಡೇ - ಅದರಲ್ಲಿ ಏನು ವಿವರಗಳನ್ನ ಅಡಕಮಾಡಬೇಕು, ಈ ಎಲ್ಲ ಗೊಂದಲಗಳಿಂದ ಪಾರಾಗಿ - ಕೇವಲ ಒಂದು ಹದಿನಾರಂಕೆಯ ಗುರುತಿನ ಸಂಖ್ಯೆಯನ್ನು ಮಾತ್ರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾರ್ಡು ಅದರ ಕಾಂಟ್ರಾಕ್ಟು ಪೈರವಿ ಮತ್ತು ಆಗಬಹುದಾಗಿದ್ದ ಭ್ರಷ್ಟಾಚಾರದಿಂದ ಅವರು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಕಾರ್ಡು ಇಲ್ಲದಿದ್ದರೂ, ಮಾಹಿತಿ ಹಲವು ಕೇಂದ್ರೀಕೃತ ಯಂತ್ರಗಳಲ್ಲಿ ಅಡಕವಾಗಿ ಕೂತಿರುತ್ತದೆ. ನಂದನ್ ಪ್ರಕಾರ, ಈ ಯಂತ್ರಗಳು ಜನತೆಯ ಬೆರಳ ಗುರುತಿನ ಆಧಾರದ ಮೇಲೆ ಅವರ ಅಸ್ತಿತ್ವವನ್ನು ಧೃವೀಕರಿಸಿಬಿಡುತ್ತದೆ. ಎರಡನೆಯ ಬುದ್ದಿವಂತಿಕೆಯ ವಿಷಯವೆಂದರೆ ನಂದನ್ ಇದಕ್ಕಾಗಿ ಮುಕ್ತ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸುವುದಾಗಿ ಹೇಳಿ ತಮ್ಮ ಇನ್ಫೋಸಿಸ್ ಮತ್ತು ಇತರ ಐಟಿ ಕಂಪನಿಗಳಿಗೆ ದೊಡ್ಡ ಲಾಭದ ಕಾಂಟ್ರಾಕ್ಟುಗಳನ್ನು ಕೊಡಬಹುದಾದ ಸಾಧ್ಯತೆಯನ್ನು ಇಲ್ಲವಾಗಿಸಿದ್ದಾರೆ.

ಆದರೆ ನಂದನ್ ಸ್ವತಃ ಒಪ್ಪುವಂತೆ - ಪ್ರತಿಯೊಬ್ಬರ ಹತ್ತೂ ಬೆರಳುಗಳು, ಮುಖ, ಹಾಗೂ ಕಣ್ಣಿನ ಮಾಹಿತಿಯನ್ನ ಸಂಗ್ರಹಿಸಿ ಇಡುವುದು, ಯಾವದೇ ಕ್ವೆರಿ ಬಂದ ತಕ್ಷಣ 5 ಸೆಕೆಂಡುಗಳಲ್ಲಿ ಅದನ್ನು ಧೃವೀಕರಿಸುವುದು ಸರಳವಾದ ಮಾತೇನೂ ಅಲ್ಲ.

ಯಾವುದೇ ಕಾರ್ಡು ಅಥವಾ ಗುರುತಿನ ಚೀಟಿಯನ್ನು ಯುಐಡಿ ನೀಡುವುದಿಲ್ಲವೆಂದಾದ ಮೇಲೆ ಜನತೆ ಮಾಹಿತಿ ಪರಿಶೀಲಿಸುವ ಯಂತ್ರಗಳಿಲ್ಲದ ಜಾಗದಲ್ಲಿ ಏನು ಮಾಡಬೇಕು? ಅಥವಾ ಆ ಮಟ್ಟಿಗೆ ಯಂತ್ರಾಂಗವನ್ನು ಇಳಿಸಲು ತ್ವರಿತಗತಿಯಲ್ಲಿ ಸಾಧ್ಯವೇ? ತಮ್ಮ ಅಸ್ತಿತ್ವವನ್ನ ಹೇಗೆ ನಿರೂಪಿಸಬೇಕು? ಈ ಎಲ್ಲದಕ್ಕೂ ಪರಿಹಾರ ಮತ್ತೆ ಬೇರಾರಾದರೂ ನೀಡಿದ ಗುರುತಿನ ಚೀಟಿಯ ಮೊರೆ ಹೋಗಬೇಕಾಗಬಹುದು. ದಿನನಿತ್ಯದ ಅವಶ್ಯಕತೆಗಳಿಗೆ ಮತ್ತೆ - ಪ್ಯಾನ್ ಕಾರ್ಡು, ಎಪಿಕ್, ಪಾಸ್ ಪೋರ್ಟ್, ರೇಶನ್ ಕಾರ್ಡು - ಹೀಗೆ ಈಗಿರುವ ಅಸ್ತಿತ್ವದ ಚೀಟಿಗಳ ಮೇಲೆ ನಂದನ್ ನೀಡಿದ ಸಂಖ್ಯೆಯನ್ನು ಅಡಕಮಾಡಬೇಕಾಗುತ್ತದೆ. ಹೀಗಾಗಿ ಅಸ್ತಿತ್ವದ ಮಾಹಿತಿ ಮೂಲಭೂತವಾಗಿ ಯಐಡಿಯ ಮಾಹಿತಿ ಜಾಲದಲ್ಲಿ ಅಡಕವಾಗಿದ್ದರೂ ಅದನ್ನು ವ್ಯಕ್ತ ಪಡಿಸಲು ಮತ್ತೊಂದು ಮಾಧ್ಯಮವನ್ನು ಅವರು ಹುಡುಕಬೇಕಾಗುತ್ತದೆ.

ಆದರೂ ಈ ಯೋಜನೆ ಸಫಲಗೊಂಡರೆ, ಗೆದ್ದರೆ ಜನರಿಗೆ ಉಪಯೋಗವಾಗುವುದರಲ್ಲಿ ಅನುಮಾನವೇ ಇಲ್ಲ. ಮುಖ್ಯತಃ ಬಡವರಿಗೆ ಇದರಿಂದ ಬಹಳಷ್ಟು ಉಪಯೋಗವಾಗಬಹುದು. ಇದು ನಿಶುಲ್ಕ ಸೇವೆಯಾದ್ದರಿಂದ ಒಮ್ಮೆ ತಮ್ಮ ಮಾಹಿತಿಯನ್ನು ದಾಖಲಿಸಿದರೆ, ಪ್ರತಿಬಾರಿಯೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕಾಗದವನ್ನು ಹಿಡಿದು ಸಹಿಗಾಗಿ ಓಡಾಡುವ ಅವಶ್ಯಕತೆಯಿರುವುದಿಲ್ಲ. ನಂದನ್ ಅವರ ಉದ್ದೇಶ ಗೆದ್ದರೆ, ಪ್ರತಿ ವ್ಯಕ್ತಿಗೂ ಬ್ಯಾಂಕಿನ ಎಕೌಂಟು ಸಹಜವಾಗಿ ತೆರೆಯುವ ಹಕ್ಕು ಬಂದು ಬಿಡುತ್ತದೆ. ಹೀಗಾಗಿ ಸರಕಾರೀ ಯೋಜನೆಗಳ ಮೂಲಕ ಬರಬೇಕಾದ ಧನ ರಾಶಿ - ನರೇಗಾದ ಕೂಲಿ ಹಣ, ಪಿಂಚನಿ, ಎಲ್ಲವೂ ಯಾವುದೇ ಮಧ್ಯವರ್ತಿಯ ಮುಲಾಜಿಲ್ಲದೇ ನೇರವಾಗಿ ಬಡವರಿಗೆ ಸೇರುತ್ತದೆ. ತಂತ್ರಜ್ಞಾನ ಹೆಚ್ಚಿ ತಿಳಿದವರ ಮೂಲಕವಲ್ಲದೇ ಮಾಹಿತಿಯ ಆಧಾರದ ಮೇಲೆ ಕೆಲಸಗಳನ್ನು ನಾವು ಮಾಡಿಕೊಳ್ಳಲು ಸಾಧ್ಯವಾದರೆ ದೇಶದ ಜುಗಾಡ್ ಏಜೆಂಟುಗಳ ಭ್ರಷ್ಟಾಚಾರವನ್ನೂ ಒಂದು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ರೈಲಿನ ಟಿಕೇಟು ಕಾದಿರಿಸುವುದಕ್ಕಾಗಿ ಮಾಡುತ್ತಿದ್ದ ಸರ್ಕಸ್ಸನ್ನು ನೆನಪು ಮಾಡಿಕೊಂಡರೆ ತಂತ್ರಜ್ಞಾನದ - ಹಾಗೂ ತಂತ್ರಜ್ಞಾನ ಎಲ್ಲರನ್ನೂ ಸಮಾನರನ್ನಾಗಿ ಕಾಣುವ ಪ್ರಕ್ರಿಯೆಯ ಶಕ್ತಿಯನ್ನು ನಾವು ಕಾಣುವುದಕ್ಕೆ ಸಾಧ್ಯವಾಗುತ್ತದೆ.

ಹೀಗಾಗಿಯೇ ಯಐಡಿ ಮಹತ್ವದ ಯೋಜನೆ. ಅದರ ಪ್ರಾಮುಖ್ಯತೆಯನ್ನು ನಾವು ಅಲ್ಲಗಳೆಯಲೇ ಬಾರದು. ಈ ಯೋಜನೆಗೆ ಅನೇಕ ಸ್ಥರಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವ, ಜನರ ಕೈಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ ಆದ್ದರಿಂದಲೇ ಇದು ವಿಫಲವಾಗುವ ಸಾಧ್ಯತೆಯನ್ನು ಹೊಂದಿದೆ. ಆ ಶಕ್ತಿಗಳನ್ನೂ ಮೀರಿ ಸರಕಾರಿ ಯಂತ್ರಾಂಗದ ನಡುವೆ ಇಕ್ಕಟ್ಟಾದ ಜಾಗದಲ್ಲಿ ನಂದನ್ ಕೆಲಸ ಮಾಡಬೇಕಾಗಿದೆ. ಅವರು ಸಫಲರಾದರೆ ದೇಶ ಸಫಲವಾದಂತೆ. ಆದರೆ ಆಗುವರೇ... ಸ್ಯಾಮ್ ಪಿತ್ರೋಡಾ ದೇಶಕ್ಕೆ ಟೆಲಿಕಾಂ ಕ್ರಾಂತಿ ತಂದಂತೆ ನಂದನ್ ಅಸ್ತಿತ್ವದ ಕ್ರಾಂತಿ ತರುವರೇ.....


Sunday, January 17, 2010

ಅಸ್ತಿತ್ವದ ಗುರುತಿನ ಚೀಟಿ

ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು.

ಆದರೆ ನಾವು ಯಾರು ಅನ್ನುವ ವಿಷಯ ದಿನನಿತ್ಯದ ಜೀವನದಲ್ಲಿ ಅನೇಕ ಬಾರಿ ನಾವು ಎದುರಿಸಬೇಕಾಗುತ್ತದೆ. ಹೀಗಾಗಿಯೇ ಎಲ್ಲಿ ಏನು ಹೊಸ ಕೆಲಸ ಮಾಡಬೇಕಿದ್ದರೂ ನಾನು ನಾನೇ ಅನ್ನುವುದನ್ನು ನಿರೂಪಿಸಿಯೇ ಮುಂದುವರೆಯಬೇಕಾಗುತ್ತದೆ. ಕೆಲವಾರು ಕಡೆ - ಉದಾಹರಣೆಗೆ ಹೊಸ ಗ್ಯಾಸ್ ಕನೆಕ್ಷನ್ ಪಡೆಯಲೋ, ಸರಕಾರೀ ಬಿಎಸ್ಎನ್ಎಲ್ ನಿಂದ ಲ್ಯಾಂಡ್ ಲೈನ್ ಪಡೆಯಲೋ ಪ್ರಯತ್ನಿಸಿದಾಗಲೂ ಅವರುಗಳು ಕೇಳುವ ನೀವುಯಾರು ಅನ್ನುವ ಪ್ರಶ್ನೆಗೆ ಅವರಿಗೆ ಸಮಾಧಾನಕರವಾದ ಉತ್ತರ ನೀಡಲು ಒಮ್ಮೊಮ್ಮೆ ನಾವೂ ವೇದಾಂತದ ಮೊರೆ ಹೋಗಬೇಕಾಗುತ್ತದೆ.

ನಾನು ಯಾರು ಅನ್ನುವ ಈ ಗಹನ ಪ್ರಶ್ನೆ ಈಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತಿದ್ದರೂ, ಹಾಗೂ ಈ ಪ್ರಶ್ನೆಯನ್ನು ತಲೆತಲಾಂತರದಿಂದ ನಾವುಗಳು ಕೇಳಿಕೊಳ್ಳುತ್ತಾ ಬಂದಿದ್ದರೂ ಇದನ್ನು ಒಂದು ಅಜೆಂಡಾ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ಕೇಳಿದವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು. ದೇಶದ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಶೇಷನ್ ಅವರಿಗೆ ಈ ವಿಷಯ ಮುಖ್ಯವಾದದ್ದು ಯಾಕೆ - ಅವರಿಗಿಂತ ಮೊದಲೂ ಚುನಾವಣಾ ಆಯುಕ್ತರಿದ್ದರು, ಒಂದೇ ದಿನದಲ್ಲಿ ಇಡೀ ದೇಶದಲ್ಲಿ ಚುನಾವಣೆಗಳಾಗುತ್ತಿದ್ದುವು, ಎರಡು ದಿನಗಳಕಾಲ ಮತಗಣನೆ ನಡೆಯುತ್ತಿತ್ತು. ಆದರೆ ಶೇಷನ್ ತಮ್ಮ ಕಾರ್ಯವ್ಯಾಪ್ತಿಯ ಪರಿಭಾಷೆಯನ್ನು ಮೂಲಭೂತವಾಗಿ ಪರಿವರ್ತಿಸಿಬಿಟ್ಟರು. ಚುನಾವಣೆ ನಡೆಸುವ ಲಾಜಿಸ್ಟಿಕ್ ಕೆಲಸವನ್ನು ಅವರು ಪ್ರಜಾತಂತ್ರದ ಮೂಲಭೂತ ಸೂತ್ರಗಳನ್ನು ಕಾಪಾಡುವ ಕೆಲಸವಾಗಿ ಪರಿಗಣಿಸಲು ಪ್ರಯತ್ನಿಸಿದರು. ಹೀಗಾಗಿ ಶೇಷನ್ ತಮ್ಮ ಕಾಲದಲ್ಲಿ ಜನಪ್ರತಿನಿಧಿಗಳು ನಿಜಕ್ಕೂ ಜನಪ್ರತಿನಿಧಿಗಳಾಗಿರಬೇಕೆಂದು ನಂಬಿದ್ದರಿಂದ - ಎರಡು ಕೆಲಸಗಳನ್ನು ಕೈಗೊಂಡರು. ಚುನಾವಣೆಯನ್ನು ಕಾಗದದ ಮೇಲೆ ಮತ ಗುದ್ದುವ ಪ್ರಕ್ರಯೆಯಿಂದ ಯಂತ್ರದ ಮೇಲೆ ಗುಂಡಿ ಒತ್ತುವ ಪ್ರಕ್ರಿಯೆಯನ್ನಾಗಿ ಪರಿವರ್ತಿಸುವುದು ಮೊದಲನೆಯದ್ದಾದರೆ, ಈ ಒತ್ತುವ ವ್ಯಕ್ತಿ ಯಾರು ಎನ್ನುವ ಪುರಾವೆಯನ್ನೂ ಆತ ಕೇಳಿದರು. ಹೀಗೆ ಮೊದಲಬಾರಿಗೆ ದೇಶವ್ಯಾಪಿಯಾಗಿ ನಾನು ಯಾರು ಅನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಶೇಷನ್ ನಮನ್ನೆಲ್ಲ ಪ್ರೋತ್ಸಾಹಿಸಿದರು. ಆಗಿನ ದಿನಗಳಲ್ಲಿ ಶೇಷನ್ ಊರೂರು ಅಲೆದು ಈ ಬಗ್ಗೆ ಭಾಷಣಗಳನ್ನು ಬಿಗಿದರು, ಹೆದರಿದವರನ್ನು ಹೆದರಿಸಿದರು. ಚುನಾವಣೆಯನ್ನು ಈ ಕಾರಣಕ್ಕಾಗಿ ತಮಗೆ ಕೈಲಾದಷ್ಟು ಮುಂದೂಡಿದರು.... ಹೀಗೆ ಮಾಡಿದ ಅಸ್ತಿತ್ವದ ಅನ್ವೇಷಣೆಗೆ ಶೇಷನ್ ಅವರ ಕೊಡುಗೆ ಮಹತ್ವದ್ದೆಂದು ನಾವು ಒಪ್ಪಲೇಬೇಕಾಗುತ್ತದೆ.

ದೇಶದಲ್ಲಿ ಓಟು ಚಲಾಯಿಸುವ ಪ್ರತಿವ್ಯಕ್ತಿಯೂ ಎಪಿಕ್ - ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ - ಹೊಂದಿರಬೇಕು ಎನ್ನುವ ನಿಯಮ ಒಂದು ರೀತಿಯಲ್ಲಿ ಚಾಲನೆಗೆ ಬಂತಾದರೂ ಈ ಗುರುತಿನ ಚೀಟಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಮೇಲೆ ಹೇರಲಾಯಿತು. ಅನೇಕರಿಗೆ ಕಾಂಟ್ರಾಕ್ಟುಗಳನ್ನು ಕೊಡಲಾಯಿತು. ಕೈದಿಗಳ ರೀತಿಯಲ್ಲಿ ಸ್ಲೇಟಿನ ಮೇಲೆ ಹಸರನ್ನು ಬರೆದು ಫೋಟೋ ಇಳಿದದ್ದೂ ಆಯಿತು. ಆದರೆ ಈ ಯೋಜನೆ ಒಂದೇ ಕೇಂದ್ರದಿಂದ ಬರಲಿಲ್ಲವಾದ್ದರಿಂದ - ಇಂಗ್ಲೀಷ್ ಅಲ್ಲದೇ ಸ್ಥಳೀಯ ಭಾಷೆಯಲ್ಲೂ ವಿವರಗಳನ್ನು ಮುದ್ರಿಸಬೇಕಾಯಿತಾದ್ದರಿಂದ, ವಿಪರೀತ ತಪ್ಪುಗಳು ನಡೆದವು. ಅನೇಕ ಜನರ ಲಿಂಗವೇ ಈ ಪ್ರಕ್ರಿಯೆಯ ಮೂಲಕ ಬದಲಾಗಿಬಿಟ್ಟಿತ್ತು. ಫೋಟೋದಲ್ಲಿ ಗಿರಿಜಾ ಮೀಸೆ ಹೊತ್ತ ಗಂಡಸಿನ ಲಿಂಗವನ್ನು ಸ್ತ್ರೀ ಎಂದು ಅಕ್ಷರಗಳಲ್ಲಿ ಘೋಷಿಸಲಾಗಿತ್ತು. ನಮ್ಮ ಕ್ಯಾಂಪಸ್ಸಿನಲ್ಲಿದ್ದ ಎಲ್ಲ ಮಹಿಳೆಯರಿಗೂ ಮದುವೆ ಮಾಡಿಸಿದ್ದಲ್ಲದೇ, ಎಲ್ಲರನ್ನೂ ವಾಸ್ವಾನಿ ಅನ್ನುವ ಮನುಷ್ಯನ ಪತ್ನಿಯನ್ನಾಗಿ ಈ ಗುರುತಿನ ಚೀಟಿಗಳು ಮಾಡಿಬಿಟ್ಟಿದ್ದುವು! ಗುರುತಿನ ಚೀಟಿಯ ಫಲವಾಗಿ ಕೆಲವರು ಗುರುತೇ ತಿಳಿಯದಂತೆ ಬದಲಾಗಿಬಿಟ್ಟಿದ್ದರು.

ಹೀಗೆ ಉದಾತ್ತ ಉದ್ದೇಶದಿಂದ ಪ್ರಾರಂಭಿಸಿದ ಈ ಗುರುತಿನ ಚೀಟಿಯ ಕಾರ್ಯಕ್ರಮ ಜನರ ಅಸ್ತಿತ್ವವನ್ನೇ ಬದಲಿಸುವ ಕಾರ್ಯಕ್ರಮವಾದ್ದರಿಂದ - ಭಾರತೀಯನ ಪ್ರಾಥಮಿಕ ಗುರುತಿನ ಚೀಟಿಯಾಗದೇ - ಮತ್ತೂ ಒಂದು ಗುರುತಿನ ಚೀಟಿಯಾಗಿಬಿಟ್ಟಿತು. ದೇಶದ ಭದ್ರತೆಯನ್ನು ಕಾಪಾಡಲು, ಈ ರೀತಿಯ ಗುರುತಿನ ಚೀಟಿಗಳ ಅವಶ್ಯಕತೆಯಿದೆ ಅನ್ನುವುದರಲ್ಲಿ ಹೆಚ್ಚು ಅನುಮಾನವಿದ್ದಂತಿಲ್ಲ. ಆದರೆ ಈ ಗುರುತಿನ ಚೀಟಿ ಈಗ ಅನೇಕ ರೂಪಗಳನ್ನು ಪಡೆದಿದೆ. ವಿದೇಶಕ್ಕೆ ಹೋಗುವ ಆಲೋಚನೆಯಿದ್ದರೆ ಪಾಸ್ಪೋರ್ಟೂ, ಆದಾಯ ತೆರಿಗೆ ತೆತ್ತಿದರೆ ಪ್ಯಾನ್ ಕಾರ್ಡೂ, ವಾಹನ ಚಲಾಯಿಸುವವರಿಗೆ ಕೊಟ್ಟಿರುವ ಲೈಸೆನ್ಸು, ಪಡಿತರ ಚೀಟಿ... ಯಾವುದೂ ನಮ್ಮ ಗುರುತಿನ ಚೀಟಿಯಾಗಬಹುದು. ಅಲ್ಲಿ ನೋಂದಾಯಿಸುವ ವಿವರಾನುಸಾರ ನಾವುಗಳು ಏಕಕಾಲಕ್ಕೆ ಭಿನ್ನ ವ್ಯಕ್ತಿಗಳೂ ಆಗಬಹುದು....

ಈ ಅಸ್ತಿತ್ವ ಮತ್ತು ಗುರುತಿನ ಚೀಟಿ, ನಮ್ಮಂತಹ ದೇಶದಲ್ಲಿ ಯಾಕೆ ಮುಖ್ಯವಾಗುತ್ತದೆ ಅನ್ನುವುದು ಕುತೂಹಲದ ಪ್ರಶ್ನೆ. ಎಲ್ಲರಿಗೂ ಗುರುತಿನ ಚೀಟಿ ಕೊಡುವುದರಿಂದ, ದೇಶದ ಭದ್ರತೆಯನ್ನು ಕಾಪಾಡಿದಂತಾಗುವುದೇ? - ಮುಂಬಯಿ ಕಾಂಡದಲ್ಲಿ ಭಾಗವಹಿಸಿದ್ದ ಭಯೋತ್ಪಾದಕರು ಯಾವ ಗುರುತಿನ ಪತ್ರವನ್ನೂ ಹೊಂದಿರಲಿಲ್ಲ ಎನ್ನುವುದನ್ನು ಶಶಿ ಥರೂರ್ ತಮ್ಮದೇ ರೀತಿಯಲ್ಲಿ ಹೇಳಿ ಹೊಸ ವೀಸಾದ ನಿಯಮವನ್ನು ಲೇವಡಿ ಮಾಡಿದ್ದಾರೆ. ಅದೇ ವಾದಸರಣಿ ಗುರುತಿನ ಚೀಟಿಗೂ ಅನ್ವಯಿಸುತ್ತದೆ. ಆದರೂ ಗುರುತಿನ ಚೀಟಿ ಅನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಒಂದು ದಶಕದ ಹಿಂದೆ ಕಾಣದಿದ್ದ ಈಗ ಎಲ್ಲೆಲ್ಲೂ ಕಾಣುವ ಅಂಶವೆಂದರೆ ಎಲ್ಲರ ಕತ್ತಿನಲ್ಲೂ ಒಂದಲ್ಲ ಒಂದು ರೀತಿಯ ಗುರುತಿನ ಚೀಟಿಯ ಹಾರವನ್ನು ಕೆಲಸದ ವೇಳೆಯಲ್ಲಿ ಕಾಣಬಹುದು.

ಇದಕ್ಕೆ ಕಾರಣ ಬರೇ ಭದ್ರತೆ ಮಾತ್ರವಲ್ಲ, ಬದಲಿಗೆ ತಂತ್ರಜ್ಞಾನವೂ ಮೂಲಭೂತವಾಗಿ ಬದಲಾಗುತ್ತಿದೆ. ಮೊದಲು ನಮ್ಮದೇ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ವಾಚ್ ಮನ್ ಆಗಿ ನಿಯಮಿಸುತ್ತಿದ್ದೆವು ಎಂದುಕೊಳ್ಳಿ. ಈಗ ಆ ಕೆಲಸ ಹೊರಗಿನ ಸೆಕ್ಯೂರಿಟಿ ಸಂಸ್ಥೆಗೆ ಔಟ್ ಸೊರ್ಸ್ ಮಾಡಲಾಗಿದೆ. ಹೀಗಾಗಿ ವಾಚ್ ಮನ್ ಆಗಿ ಅಲ್ಲಿ ನಿಲ್ಲುವವನಿಗೆ ಕಂಪನಿಯ ಚೇರ್ಮನ್ನರಿಂದ ಹಿಡಿದು ಚಪ್ರಾಸಿಯವರೆಗೂ ಎಲ್ಲರೂ ಸಮಾನರೇ.. ಗುರುತಿನ ಚೀಟಿಯ ಆಧಾರವೇ ಪ್ರವೇಶಕ್ಕೆ ಮೂಲ ದಾಖಲೆಯಾಗುತ್ತದೆ. ಇನ್ಪೋಸಿಸ್ ನಲ್ಲಿ ನಾರಾಯಣ ಮೂರ್ತಿಯನ್ನು ಗುರುತಿನ ಚೀಟಿ ಕೇಳಿದ ಸೆಕ್ಯೂರಿಟಿ ಗಾರ್ಡಿನ ಕಥೆ ಜನಜನಿತವಾಗಿಯೇ ಇದೆ. ಹೀಗೆ ಒಬ್ಬ ವ್ಯಕ್ತಿಗೆ ಒಂದು ಗುರುತಿನ ಚೀಟಿ, ಒಂದು ಗುರುತಿನ ಚೀಟಿಗೆ ಒಬ್ಬ ವ್ಯಕ್ತಿ ಅನ್ನುವ ನಿಯಮದ ಮೇಲೆ ಇದು ನಡೆಯುತ್ತಿದೆ.

ತಂತ್ರಜ್ಞಾನ ಮಾತ್ರ ಗುರುತಿನ ಚೀಟಿಗಳು ಮುಖ್ಯವಾಗುವುದಕ್ಕೆ ಕಾರಣವಲ್ಲ. ನಾವುಗಳು ನಮ್ಮ ಮಧ್ಯತರಗತಿಯ ನೌಕರಿಯ ಚೌಕಟ್ಟಿನಾಚೆಗೆ ಹೋದರೆ ಇದರ ಮಹತ್ವದ ಭಿನ್ನ ಮಜಲುಗಳು ನಮಗೆ ಅರ್ಥವಾಗುತ್ತದೆ. ಸರಕಾರೀ ಸಹಾಯ ಒದಗಿಸಬೇಕಾದರೆ, ಆ ಸಹಾಯ ಅಥವಾ ಸಬ್ಸಡಿ ಕೇವಲ ಬಡವರಿಗೆ ಮಾತ್ರ ತಲುಪಬೇಕು ಅನ್ನುವುದಾದರೆ, ನರೇಗಾದಡಿಯಲ್ಲಿ ನೂರುದಿನಗಳ ಕೆಲಸ ಬಡವರಿಗೆ ಒದಗಿಸಬೇಕಾದರೆ - ಅದು ಯಶಸ್ವಿಯಾಗಿ ತಲುಪಬೇಕಾದವರಿಗೆ ತಲುಪಲು ಯಾರು ಎನ್ನುವ ಗುರುತು ಅನಿವಾರ್ಯವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬೊಬ್ಬರಿಗೂ ಅನೇಕ ಗುರುತಿನ ಚೀಟಿಗಳು ಇರುವ ಸಾಧ್ಯತೆಯಿದೆ. ಅಥವಾ ಗುರುತಿನ ಚೀಟಿ ಲಭಿಸದೇ ಇರುವ ಸಾಧ್ಯತೆಯೂ ಇದೆ.. ನಾನು ಯಾರೆಂದು ತಿಳಿಯದಯೇ ಇದ್ದರೆ ನನಗೆ ನೀವು ಕೆಲಸ ಕೊಡುವುದಾದರೂ ಹೇಗೆ... ಹೀಗಾಗಿ ಸರಕಾರದ ಸೇವೆಗಳು ಹೆಚ್ಚೆಚ್ಚು ಗುರಿ ಮುಟ್ಟಬೇಕೆಂದಿದ್ದರೆ, ಅದು ಸರಿಯಾದ ಗುರಿಯನ್ನು ಮುಟ್ಟುತ್ತಿದೆ ಅನ್ನುವ ಪುರಾವೆಯೂ ನಮಗೆ ಬೇಕಾಗುತ್ತದೆ. ಏನೂ ಇಲ್ಲದ ಬಡವರಿಗೆ - ಗುರುತಿನ ಚೀಟಿಯ ಅಸ್ತಿತ್ವ ಸಿಕ್ಕರೆ - ಅದೇ ಅವರ ಆತ್ಮಭಿಮಾನಕ್ಕೆ ಎಷ್ಟು ಪೂರಕವಾಗಬಹುದು ಅನ್ನುವದನ್ನು ಯೋಚಿಸಿನೋಡಿದಾಗ ಈ ಗುರುತಿನ ಚೀಟಿಗಳ ಮಹತ್ವದ ಅರಿವು ನಮಗಾಗುತ್ತದೆ.

ಓಟು ಹಾಕುವುದು ಒಬ್ಬ ನಾಗರೀಕನಾಗಿ ನನಗೆ ದಕ್ಕಿರುವ ಹಕ್ಕು. ಆದರೆ ಓಟು ಹಾಕಲು ಹೋದ ದಿನ ನನ್ನ ಹೆಸರಿನಲ್ಲಿ ಯಾರೋ ಬೇರೂಬ್ಬರು ನನ್ನ ಮತವನ್ನು ಗುದ್ದಿ - ಅಥವಾ ಒತ್ತಿ - ಬಂದಿದ್ದರೆ -- ನನ್ನ ಹಕ್ಕನ್ನು ಯಾರೋ ಕಿತ್ತುಕೊಂಡಂತೆ ಆಗುವುದಲ್ಲದೇ, ನನ್ನ ಅಭಿಪ್ರಾಯ ನೋಂದಾಯಿತವಾಗದೆಯೇ ನನ್ನನ್ನು ಪ್ರತಿನಿಧಿಸುತ್ತೇನೆನ್ನುವ ವ್ಯಕ್ತಿ ಚುನಾಯಿತನಾಗುಬಿಡುತ್ತಾನೆ. ಹೀಗಾಗಿ ಪ್ರಜಾತಂತ್ರದಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಗುರುತಿನ ಚೀಟಿ ನಾನು ನಾನೇ ಎಂದು ನಿರೂಪಿಸಲು ಎಷ್ಟು ಮುಖ್ಯವೋ, ಬೇರಾರೂ ನಾನಲ್ಲ ಎಂದು ನಿರೂಪಿಸಲೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿಯೇ ಶೇಷನ್ ಅವರು ಹಾಕಿದ್ದ ಯೋಜನೆಯಲ್ಲಿ ಪ್ರಜಾತಂತ್ರವನ್ನು ಶಕ್ತಿಶಾಲಿಯನ್ನಾಗಿ ಮಾಡುವ ದೊಡ್ಡ ಅಜೆಂಡಾ ಇತ್ತು. ಬಹುಶಃ ಈ ಅಜೆಂಡಾ ಅಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿದ್ದರಿಂದಲೇ ವಿಫಲವಾಯಿತೋ ಏನೋ... ಆದರೂ ದೇಶಾದ್ಯಂತ ಕಾಗದ ಗುದ್ದುವುದರಿಂದ, ಗುಂಡಿ ಒತ್ತುವ ತಂತ್ರಜ್ಞಾನದತ್ತ ದೊಡ್ಡ ಹೆಜ್ಜೆಗಳನ್ನಿಡುವತ್ತ ಮಾತ್ರ ಶೇಷನ್ ಸಫಲರಾದರು.

ಶೇಷನ್ ಕಾಲಕ್ಕೂ ಈದಿನಕ್ಕೂ ಕಾಲ ಮತ್ತು ತಂತ್ರಜ್ಞಾನ ಎರಡೂ ಬದಲಾಗಿದೆ. ಈ ಬದಲಾವಣೆಯನ್ನು ಪ್ರತಿನಿಧಿಸುತ್ತಾ ಗುರುತಿನ ಚೀಟಿಗಳ ಅಜೆಂಡಾ ಹೊತ್ತು ನಂದನ್ ನಿಲೇಕಣಿ ಹೊರಟಿದ್ದಾರೆ. ಇದು ಈ ಬಾರಿ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಆದರೆ ನಂದನ್ ಸಫಲರಾಗುವರೇ.. ಅವರಿಗೆ ಸಾಫಲ್ಯ ಸುಲಭವಾಗಿ ದಕ್ಕುವುದಿಲ್ಲವಾದರೂ ಅವರು ಎದುರಿಸುವ ಸವಾಲುಗಳೇ ಬೇರೆ. ಹೀಗಾಗಿ ನಂದನ್ ವಿಫಲರಾಗುವುದಕ್ಕೆ ಇರುವ ಕಾರಣಗಳು ಅವರು ಸಫಲರಾಗುವುದಕ್ಕೆ ಇರುವ ಕಾರಣಗಳಿಗಿಂತ ಹೆಚ್ಚಾಗಿದೆ.!!!! ಆ ಬಗ್ಗೆ ಮುಂದಿನ ಬಾರಿ.






Monday, January 4, 2010

ಬಂಡವಾಳಶಾಹಿ ತತ್ವದ ನಿರಂತರತೆ?

ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.

ಅಂದು ವೇದಿಕೆಯ ಮೇಲೆ ಕೂತಿದ್ದವರನ್ನು ನಾನು ಅವಲೋಕಿಸಿದೆ. ಇದ್ದ ಐದು ಜನರಲ್ಲಿ ಇಬ್ಬರು ವ್ಯಾಪಾರ ಜಗತ್ತಿನಿಂದ ಬಂದವರು. ಇಬ್ಬರು ಸಮಾಜಸೇವೆ - ಜನರನ್ನೊಳಗೊಳ್ಳುನ ವಿಕಾಸವಾದವನ್ನು ಪ್ರತಿಪಾದಿಸುವವರು. ಐದನೆಯವನು - ಯಾವ ಕಡೆ ವಾಲಿದ್ದೇನೆಂದು ತಿಳಿಯದ ನಾನು.
ಈ ಗಹನ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು. ಈ ಲೋಕದಿಂದ ಅನಾಮಾನ್ಯತೆಯನ್ನು ಅಟ್ಟುವುದು ಎಷ್ಟು ಅಸಾಧ್ಯವೋ, ಬಂಡವಾಳಶಾಹಿ ವ್ಯಾಪಾರ ಸೂತ್ರಗಳನ್ನು ಕಿತ್ತೊಗೆಯುವುದು ಅಷ್ಟೇ ಕಷ್ಟದ, ಸಾಧಿಸಲಾಗದ ಮಾತು. ಇದು ಕೇಂದ್ರದ ಎಡಗಡೆಗೆ ವಾಲಿದ ಆ ಇಬ್ಬರಿಗೂ ಗೊತ್ತು. ಹಾಗೇ ಬಲಗಡೆಗೆ ವಾಲಿದ, ಜೀವನ ಸೂತ್ರವೇ ವ್ಯಾಪಾರಶಾಹೀತನವನ್ನು ನಂಬಿ ಬದುಕುತ್ತಿರುವ ಇನ್ನಿಬ್ಬರಿಗೂ ಗೂತ್ತು. ಅದೇ ಅವರ ಜೀವನ ಧರ್ಮವೂ ಆಗಿತ್ತು. ಹೀಗೆ ಸೆಮಿನಾರನ್ನು ರೂಪಿಸಿ, ಎಡಪಂಥದತ್ತ ವಾಲಿದವರಿಂದ, ಮಾರುಕಟ್ಟೆಯ ಸೂತ್ರಗಳನ್ನು ಒಂದಿಲ್ಲೊಂದು ರೀತಿಯಿಂದ ಟೀಕಿಸುತ್ತಿರುವ ನಮ್ಮಿಂದ - ಬಂಡವಾಳಶಾಹಿ ವ್ಯಾಪಾರವಿಲ್ಲದೇ ಬದುಕು ನಡೆಯದೆಂದು ಹೇಳಿಸಬೇಕೆನ್ನುವ ದುಷ್ಟ ಹುನ್ನಾರ ನಮ್ಮ ವಿದ್ಯಾರ್ಥಿಗಳದ್ದಿರಬಹುದೇ ಅನ್ನುವ ಅನುಮಾನವೂ ನನ್ನನ್ನು ಕಾಡದಿರಲಿಲ್ಲ.

ವೇದಿಕೆಯನ್ನೇರಲು ಒಪ್ಪಿದ್ದರಿಂದ ಈ ಬಗ್ಗೆ ಗಹನವಾಗಿ ಆಲೋಚಿಸುವ ಅನಿವಾರ್ಯತೆ ನಮ್ಮನ್ನೆಲ್ಲ ಸುತ್ತಿಕೊಂಡಿತ್ತು. ಸಮಾಜವಾದ, ಕಮ್ಯುನಿಸಂಗಳ ಪ್ರಯೋಗದ ವಿಫಲತೆ-ಸಾಫಲ್ಯವನ್ನು ವಿಶ್ವದ ಅನುಭವದ ಆಧಾರದ ಮೇಲೆ ಗಮನಿಸಿದಾಗ - ಮುಖ್ಯವಾಗಿ ಎಡಪಂಥೀಯ ವಿಚಾರಧಾರೆಯನ್ನು ಅಳವಡಿಸಿ ನಡೆದ ಸೋವಿಯತ್ ರಷ್ಯಾ, ಪೂರ್ವ ಯೂರೋಪ್, ಹಾಗೂ ಆ ವಿಚಾರಧಾರೆಯನ್ನು ಪ್ರತಿಪಾದಿಸುತ್ತಿದ್ದೇವೆಂದು ಘೋಷಿಸುತ್ತಾ ಮುಂದುವರೆವ ಚೀನಾ, ಹಾಗೂ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಸರಕಾರಗಳ ಸೂತ್ರಗಳನ್ನು ಗಮನಿಸಿದಾಗ ಎಡಪಂಥೀಯ ವಿಚಾರಧಾರೆಯ ಬಗ್ಗೆ ಅನುಮಾನ ಬರುವುದು ಅದರ ಮಿತಿಗಳ ಬಗ್ಗೆ ಮನವರಿಕೆಯಾಗುವುದು ಸಹಜವೇ ಆಗಿತ್ತು.




ಆದರೆ ಇತ್ತ ವ್ಯಾಪಾರವಾದವನ್ನೂ ಆರಾಧಿಸದೇ, ಕಮ್ಯುನಿಸಂನ ಪ್ರತಿಪಾದಿಸದೇ ನೆಹರೂ ಪ್ರೇರಿತ ಸಮಾಜವಾದದ ಮಧ್ಯದಾರಿಯನ್ನು ಹಿಡಿದು ಹೊರಟರೆ, ಅರ್ಧ ಮಾರುಕಟ್ಟೆ, ಅರ್ಧ ಸರಕಾರಿ ಪ್ರೇರಿತ ವಿಕಾಸದ ದಾರಿಯಲ್ಲಿ ಹೋಗುವುದೂ ಕಷ್ಟದ ಮಾತೇ. ಅಮೆರಿಕದ ನಾಯಕತ್ವದಲ್ಲಿ ಅಳವಡಿಸಿಕೊಂಡ ವ್ಯಾಪಾರಶಾಹಿ ಸೂತ್ರಗಳ ಆಧಾರದ ಮೇಲೆ ನಡೆಸುತ್ತಿದ್ದ ವಿತ್ತೀಯ ಕ್ಷೇತ್ರ ವ್ಯಾಪಾರಿಗಳ ಅತಿಯಾಸೆ ಮತ್ತು ಲೋಲುಪತೆಗಳ ಫಲವಾಗಿ ತತ್ತರಿಸುತ್ತಿದ್ದಾಗ - ರಾಷ್ಟ್ರೀಕೃತ ಬ್ಯಾಂಕುಗಳ ನೇತೃತ್ವದಲ್ಲಿ ಸರಕಾರಿ ಭಾಗಸ್ವಮ್ಯದಲ್ಲಿ ನಡೆಯುತ್ತಿದ್ದ ಭಾರತೀಯ ವಿತ್ತೀಯ ಕ್ಷೇತ್ರ - ಯಾವ ವಿಕ್ಷೊಭಕ್ಕೂ ಒಳಗಾಗದೇ ವಿಶ್ವದಲ್ಲಿಯೇ ಒಂದು ಮಾದರಿಯಾಗಿ ನಿಂತುಬಿಟ್ಟಿತ್ತು. ಇದಕ್ಕೆ ಸಲ್ಲಬೇಕಾದ ಕೀರ್ತಿ ತಮ್ಮದೆಂದು ನಮ್ಮ ದೇಶದ ಎಡಪಂಥೀಯ ಪಕ್ಷಗಳು ಹೇಳಿಕೆಗಳನ್ನು ಕೊಟ್ಟದ್ದೂ ಉಂಟು. ಆದರೆ ಇದೊಂದು ಯಶಸ್ವೀ ಮಾರ್ಗವೆಂದು ಇದನ್ನು ನಂಬುವ ಮೊದಲೇ, ಸರಕಾರೀ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಏರ್ ಇಂಡಿಯಾ ಮಾರುಕಟ್ಟೆಯ ಪೈಪೋಟಿಯನ್ನು ತಡೆಯಲಾಗದೇ ಸರಕಾರೀ ಕವಚವಿದ್ದೂ ತೇಲಲಾಗದೇ ಅಧೋಗತಿಗಿಳಿದಿದ್ದನ್ನೂ ನಾವು ನೋಡಿದ್ದವು. ಹೀಗಾಗಿ ಈ ವಾದದಲ್ಲಿ ಎರಡರಲ್ಲೊಂದು ಪಕ್ಷ ಹಿಡಿದು ವಾದಿಸುವುದರಲ್ಲಿ ಅಪಾಯವೇ ಇತ್ತು.

ಹಾಗೆ ನೋಡಿದರೆ ಉತ್ತಮ ಪರಿಸರಕ್ಕಾಗಿ ಹೋರಾಡುವ ಪರಿಸರವಾದಿ ಕಾರ್ತಿಕೇಯ ಸಾರಾಭಾಯಿಗೂ, ಬಂಡವಾಳ ಹೂಡಿ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ನದಿಯಲ್ಲಿ ಹರಿಯಬಿಡಬಹುದಾದ ಉದ್ಯೋಗಪತಿಗೂ, ಮೂಲಭೂತ ವ್ಯತ್ಯಾಸ ಎಲ್ಲಿದೆ? ಯಾವ ವ್ಯಾಪರಿಯೂ ತನ್ನ ಗ್ರಾಹಕರ ಅನಾರೋಗ್ಯ ಮತ್ತು ಸಾವಿನ ಆಧಾರದ ಮೇಲೆ ಲಾಭ ಗಳಿಸಬೇಕೆಂದು ಆಶಿಸುವುದಿಲ್ಲ. ಹಾಗೆ ಆಶಿಸುವ ವ್ಯಾಪಾರಿಗಳ ಬಗ್ಗೆ ಈ ಚರ್ಚೆ ಅಲ್ಲ. ಆದರೆ ವ್ಯಾಪರವನ್ನು ನಡೆಸುವ, ಪರಿಸರ - ಜನಸಮುದಾಯವನ್ನು ಯಾವ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆನ್ನುವ ಮಿತಿಗಳು, ಭಿನ್ನ ವ್ಯಾಪಾರಗಳಿಗೆ- ವ್ಯಾಪಾರಿಗಳಿಗೆ, ಭಿನ್ನವಾಗಿರುತ್ತವೆ. ಪೆಪ್ಸಿ ಸಂಸ್ಥೆಯ ಮುಖ್ಯಸ್ತೆ ಇಂದಿರಾ ನೂಯಿಗೂ, ಆ ಬಗ್ಗೆ ಹುಯಿಲಬ್ಬಿಸಿದ ಪರಿಸರವಾದಿ ಸುನೀತಾ ನಾರಾಯಣ್ ಗೂ ಆಲೋಚನೆ ವಿಚಾರವಾದದ ಮಟ್ಟಿನಲ್ಲಿ ಮೂಲಭೂತ ಭಿನ್ನತೆ ಎಲ್ಲಿದೆ? ಎನ್ನುವ ಪ್ರಶ್ನೆ ಕುತೂಹಲದ್ದು. ಈ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಹೊರಟರೆ ಈ ವಿಚಾರಧಾರೆಯ ಭಿನ್ನತೆ ಸ್ವಲ್ಪ ಮಟ್ಟಿಗೆ ನಮಗೆ ಅರ್ಥವಾಗುತ್ತದೆ ಅನ್ನಿಸುತ್ತದೆ. ಆದರೆ ನಾನು ಹೇಳಹೊರಟಿರುವ ಭಿನ್ನತೆ ಜಟಿಲವಾದ ಸಮಸ್ಯೆಯ ಒಂದು ಆಯಾಮ ಮಾತ್ರವೆನ್ನುವುದನ್ನು ನಾವು ಮನಗಾಣಬೇಕು.

ಎಡಪಂಥೀಯರು ಸಮಾನತೆಯ ಮೂಲಸೂತ್ರವನ್ನು ಹಿಡಿದು ಹೊರಟವರು. ಮಾರುಕಟ್ಟೆಯನ್ನೇ ದೈವ ಮಾಡಿಕೊಂಡವರಿಗೆ ಈ ಸಮಾನತೆಯೇ ಅ-ಸಮಾನತೆಯ ಪ್ರತೀಕವಾಗಿ ಕಾಣುತ್ತದೆ. ಮಾರುಕಟ್ಟೆ ದೈವವಾದರೆ, ಹೆಚ್ಚಿನ ಕೆಲಸ ಮಾಡಿದವರಿಗೆ - ಹೆಚ್ಚಿನ ದಕ್ಷತೆ ತೋರಿದವರಿಗೆ ಹೆಚ್ಚಿನ ಫಾಯಿದೆಯಾಗಬೇಕು ಎನ್ನುವುದು ಸಹಜ ನಂಬಿಕೆ. ಸಮಾನತೆಯಿರುವುದು ದಕ್ಷತೆಯನ್ನ ಅಳೆಯುವ ಸೂತ್ರದಲ್ಲಿ ಅನ್ನುವ ವಾದವನ್ನು ಇವರು ಮಂಡಿಸುತ್ತಾರೆ. ಆದರೆ ಎಡಪಂಥೀಯರು ಈ ದಕ್ಷತೆ ಪ್ರಾಪ್ತವಾಗುವ ಪರಿಗಿರುವ ಚಾರಿತ್ರಿಕ ಕಾರಣಗಳ ಮೂಲಕ್ಕೆ ಹೋಗುತ್ತಾರೆ. ಹೀಗಾಗಿ ಅವರ ವಾದದ ಅನುಸಾರ ದಕ್ಷತೆಯನ್ನು ಆರ್ಜಿಸಲೇ ಒಂದೆರಡು ತಲೆಮಾರುಗಳು ಬೇಕಾಗಬಹದಾದ್ದರಿಂದ ಆ ನಡುವಿನ ಕಾಲದಲ್ಲಿ ಮಾಪನದ ದಂಡಗಳು ಭಿನ್ನವಾಗಿರಬೇಕು ಅನ್ನುವುದನ್ನು ನಾವು ಪರಿಗಣಿಸಬೇಕಾಗುತ್ತದೆ.

ಪರಿಸರವಾದಿಗಳು ಯೋಚಿಸುವಾಗ ಅವರ ದೃಕ್ಪಥ ಸಾಮಾನ್ಯವಾಗಿ ಮುಂದಿನ ತಲೆಮಾರುಗಳಿಗೆ ನಾವು ಎಂಥಹ ಪರಿಸರವನ್ನು ಬಳುವಳಿಯಾಗಿ ನೀಡುತ್ತಿದ್ದೇವೆ ಅನ್ನುವ ಭವಿಷ್ಯವಾದೀ ದೃಕ್ಪಥವನ್ನು ಪ್ರತಿಪಾದಿಸುತ್ತಾರೆ. ಹೀಗಾಗಿ ಇವರುಗಳ ಕಾಲಮಾಪನವೂ ತಲೆಮಾರುಗಳಲ್ಲಿಯೇ ಇರುತ್ತದೆ. ವ್ಯತ್ಯಾಸವೆಂದರೆ - ಎಡಪಂಥೀಯರು ಅ-ಸಮಾನತೆಯ ಮೂಲವನ್ನು ಭೂತದಲ್ಲಿ ಹುಡುಕಿ ಅದಕ್ಕೊಂದು ಕಾವ್ಯನ್ಯಾಯವನ್ನೊದಗಿಸುವ ಮಾತನ್ನಾಡಿದರೆ, ಪರಿಸರವಾದಿಗಳ ಕಾಲದಿಗಂತ ಭವಿಷ್ಯದಲ್ಲಿರುತ್ತದೆ.

ಆದರೆ ಮಾರುಕಟ್ಟೆಯನ್ನು ನಂಬಿದವರ ಆಲೋಚನಾಲಹರಿ ಈಗಿಲ್ಲಿ - ಹಿಯರ್ ಆಂಡ್ ನೌ - ಎನ್ನುವ, ಬಹತೇಕ ತಮ್ಮ ಜೀವನಕಾಲದಲ್ಲಿ ಲಾಭಾರ್ಜನೆಯನ್ನು ಹೆಚ್ಚಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಜೀವನಕಾಲವೂ ದೊಡ್ಡಕಾಲಮಾಪನವೇ. ಲಾಭಾರ್ಜನೆಯ ಮಾಪನವನ್ನು ಅನೇಕ ವರ್ಷಗಳ ಮಾತಿರಲಿ, ವಾರ್ಷಿಕ ಮತ್ತು ಮೂರು ತಿಂಗಳಲ್ಲಿ ಎಷ್ಟು ಲಾಭವನ್ನಾರ್ಜಿಸಿದ್ದೇವೆನ್ನುವ, ಅವಧಿಗೆ ಆ ಕಾಲಮಾಪನವನ್ನು ಮಾರುಕಟ್ಟೆಗಳು ಇಳಿಸಿಬಿಟ್ಟಿವೆ. ಪೈಪೋಟಿಯ ಕಬಳಿಕೆಯ ಈ ವಾತಾವರಣದಲ್ಲಿ ಬಂಡವಾಳಶಾಹಿಗಳಿಗೂ, ಎಡಪಂಥೀಯರಿಗೂ, ಪರಿಸರವಾದಿಗಳಿಗೂ ಇರುವ ಮೂಲಭೂತ ವ್ಯತ್ಯಾಸ ಕಾಲ ದಿಗಂತದ್ದು ಅನ್ನಿಸುತ್ತದೆ. ನಾವು ಬಂಡವಾಳಶಾಹಿ ಸಂಸ್ಥೆಗಳನ್ನೇ ನೋಡಿದಾಗ - ಒಟ್ಟಾರೆ ಜನಮನದಲ್ಲಿ ಗೌರವವನ್ನು ಪಡೆದಿರುವ ಎಡಿಸನ್ ನಿರ್ಮಿಸಿದ ಜೆನರಲ್ ಎಲೆಕ್ಟ್ರಿಕ್, ಭಾರತದ ಟಾಟಾ ಸಂಸ್ಥೆಗಳಿಗೂ - ಇಂದಿದ್ದು ನಾಳೆ ಮಾಯವಾಗುವ ಕಂಪನಿಗಳಿಗೂ ಇರುವ ಮೂಲಭೂತ ವ್ಯತ್ಯಾಸವೂ ದಿಗಂತದ ದೃಕ್ಪಥಕ್ಕೆ ಸಂಬಂಧಿಸಿದ್ದೇ ಇರಬಹುದು.

ಹೀಗಾಗಿಯೇ ಬಂಡವಾಳಶಾಹಿ ತತ್ವದ ನಿರಂತರತೆಯನ್ನು ಎಡಪಂಥೀಯರೂ, ಪರಿಸರವಾದಿಗಳೂ, ಇಷ್ಟವಿಲ್ಲದಿದ್ದರೂ, ಒಪ್ಪುತ್ತಲೇ ತಮ್ಮ ತಮ್ಮ ಹೋರಾಟವನ್ನು ವ್ಯಾಪಾರವಾದಿಗಳ ಕಾಲದಿಗಂತವನ್ನು ವಿಸ್ತರಿಸುವ ಕೆಲಸ ಮಾಡಬೇಕಾಗುತ್ತದೆ. ಆದರೆ 150 ವರ್ಷಗಳ ಚರಿತ್ರೆ - ಅನೇಕ ತಲೆಮಾರುಗಳನ್ನು ಕಂಡ - ಲೀಮನ್ ಬ್ರದರ್ಸ್ ನಂತಹ ಸಂಸ್ಥೆ ರಾತ್ರೋರಾತ್ರಿ ಮುಳುಗಿದ್ದರ ಹಿನ್ನೆಲೆಯೇನು? ಅಲ್ಲಿಯೂ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ತಾವು ನಡೆಸುತ್ತಿರುವ ವ್ಯಪಾರಕ್ಕೆ ಸಲ್ಲುತ್ತಿರುವ ಲಾಭ ಸಮಂಜಸವಾದದ್ದೇ ಅನ್ನುವುದನ್ನ ಆಗಾಗ ಅವಲೋಕಿಸಿಕೊಳ್ಳಬೇಕಾಗುತ್ತದೆ. ಉಜ್ವಲ ಚರಿತ್ರೆಯಿರುವುದು ಭವ್ಯ ಭವಿಷ್ಯಕ್ಕೆ ನೀಡುವ ಗ್ಯಾರೆಂಟಿಯಂತೂ ಅಲ್ಲವೇ ಅಲ್ಲ. ಕೆಲವೇ ಸಾರ್ಥಪರ ಲೋಲುಪಿ ಮ್ಯಾನೇಜರುಗಳ ಅತಿಯಾಸೆ 150 ವರ್ಷಗಳ ಚರಿತ್ರೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಣ್ಣು ಮುಕ್ಕಿಸಬಹುದೆಂದು ಅನೇಕ ಬಾರಿ ನಿರೂಪಿಸಿದ್ದಾರೆ. ಹೀಗಾಗಿ ನಾವು ಕೇಳುತ್ತಿರುವ ಈ ಪ್ರಶ್ನೆ ವಿಚಾರಧಾರೆಯ ಪ್ರಶ್ನೆಯಲ್ಲವೇ ಅಲ್ಲ - ಬದಲಿಗೆ ಆ ವಿಚಾರಧಾರೆಯನ್ನು ಯಾವ ಚೌಕಟ್ಟಿನೊಳಗೆ, ಯಾವ ಮಿತಿಗಳೊಳಗೆ ಅರ್ಥೈಸುತ್ತೇವೆ, ಆ ಮಿತಿಗಳನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ ಅನ್ನುವ ಯೋಚನೆ ಮುಖ್ಯವಾದದ್ದು ಅನ್ನಿಸುತ್ತದೆ. ಹೀಗಾಗಿಯೇ ನನ್ನಂತಹ ಕುತೂಹಲಿ ಮೇಷ್ಟರುಗಳು ಎರಡೂ ವಾದಗಳನ್ನು ನೋಡುತ್ತಾ ಎಡಕ್ಕೂ ವಾಲದೇ, ಬಲಕ್ಕೂ ಬೀಳದೇ ಮುಂದುವರೆಯುವ ಕುಶಲಕೆಲಸವನ್ನು ಮಾಡಿ ಜೀವನ ನಡೆಸಬೇಕಾಗಿದೆ.