Tuesday, November 24, 2009

ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು

ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ. ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.

ಚಿಕ್ಕಸಾಲಕ್ಕಿಂತ ಚಿಕ್ಕ ಉಳಿತಾಯದ ಕಾರ್ಯಕ್ರಮಗಳು ಹೆಚ್ಚು ಸಂಕೀರ್ಣವಾದವು. ಇದಕ್ಕೆ ಕಾರಣ ಉಳಿತಾಯವನ್ನು ಸ್ವೀಕರಿಸಬಹುದಾದ ಬಗ್ಗೆ ಇರುವ ಕಾನೂನು ವ್ಯವಸ್ಥೆ. ವಿತ್ತೀಯ ವ್ಯವಹಾರಗಳ ಮೇಲ್ವಿಚಾರಣೆ ನಡೆಸುವ ಭಾರತೀಯ ರಿಜರ್ವ್ ಬ್ಯಾಂಕು ಯಾವುದಾದರೂ ಕಂಪನಿ ಸಾಲವನ್ನು ಕೊಟ್ಟಾಗ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಾದರೂ, ಉಳಿತಾಯವನ್ನು ಸ್ವೀಕರಿಸುವುದಕ್ಕೆ ಅನೇಕ ಅಡಚಣೆಗಳನ್ನು ಮುಂದಾಗಿಸಿದೆ. ಇದಕ್ಕೆ ಕಾರಣವಿಷ್ಟೇ: ಸಂಸ್ಥೆಗಳು ಸಾಲ ನೀಡುವಾಗ ಅಲ್ಲಿ ಒಳಗೊಂಡಿರುವುದು ಬಂಡವಾಳ ಹೂಡಿದವರ ಹಣ. ಆದರೆ ಉಳಿತಾಯವನ್ನು ಸ್ವೀಕರಿಸಿದಾಗ - ಅದು ಬಡವರನ್ನೊಳಗೊಂಡ ’ಪಬ್ಲಿಕ್’ ಹಣ. ಹೀಗೆ ಒಂದು ಸಂಸ್ಥೆ ಜನಸಾಮಾನ್ಯರಿಂದ ಹಣವನ್ನು ಸ್ವೀಕರಿಸಿದ ನಂತರ ಮಾಯವಾದರೆ, ಅಥವಾ ವಿಫಲಗೊಂಡರೆ, ನಷ್ಟವಾಗುವುದು ಅಂಥ ಸಂಸ್ಥೆಗಳಲ್ಲಿ ಹಣ ಹೂಡಿದವಿರಿಗೇ ಆದ್ದರಿಂದ, ಜನಸಾಮಾನ್ಯರ ಹಿತದೃಷ್ಟಿಯನ್ನು ಕಾಪಾಡಲು ರಿಜರ್ವ್ ಬ್ಯಾಂಕು ಈ ಕ್ಷೇತ್ರದಲ್ಲಿ ಕೆಲವು ಅಡಚಣೆಗಳನ್ನು ಒಡ್ಡಿದೆ. ಹೀಗಾಗಿ ಬಡವರಿಗೆ ಸುಲಭವಾಗಿ ಮೈಕ್ರೋಫೈನಾನ್ಸ್ ನಿಂದ ಸಾಲ ಸಿಗಬಹುದಾದರೂ, ಅದೇ ಸಂಸ್ಥೆಗಳಲ್ಲಿ ಉಳಿತಾಯ ಮಾಡುವುದು ಸಾಧ್ಯವಾಗದ ಮಾತಾಗುತ್ತದೆ.

ಈ ಹಿನ್ನೆಲೆಯಲ್ಲಿ ಬಡವರೊಂದಿಗೆ ಕೆಲಸ ಮಾಡುವ ಸಂಸ್ಥೆಗಳು ಅವರು ಹೆಚ್ಚು ಉಳಿತಾಯ ಮಾಡುವಂತೆ ಪ್ರೋತ್ಸಾಹಿಸುವುದೂ, ಅದಕ್ಕೆ ಒಂದು ಮಾರ್ಗವನ್ನು ತೋರಿಸಿಕೊಡುವುದು ಹೇಗೆ ಅನ್ನುವ ಪ್ರಶ್ನೆ ದೊಡ್ಡ ಸವಾಲಾಗಿ ನಿಲ್ಲುತ್ತದೆ. ಆದರೆ ನಿಜಕ್ಕೂ ಬಡವರಿಗೆ ಉಳಿತಾಯಕ್ಕೆ ಬ್ಯಾಂಕುಗಳನ್ನು ಬಿಟ್ಟರೆ ಬೇರೆ ಮಾರ್ಗಗಳೇ ಇಲ್ಲ ಅನ್ನುವುದೂ ನಿಜವಲ್ಲ. ಅಂಚೆ ಕಛೇರಿಯಲ್ಲಿ, ಹಾಗೂ ಸಹಕಾರೀ ಸಂಸ್ಥೆಗಳಲ್ಲಿ ಜನ ಉಳಿತಾಯವನ್ನು ಹೂಡಬಹುದು. ಹಾಗೆಯೇ ಸ್ವ-ಸಹಾಯ ಗುಂಪುಗಳೂ ಉಳಿತಾಯವನ್ನು ಸ್ವೀಕರಿಸಬಹುದು. ಸಹಕಾರೀ ಸಂಸ್ಥೆಗಳೂ, ಸ್ವ-ಸಹಾಯ ಗುಂಪುಗಳೂ ಜನರೇ ನಿರ್ವಹಿಸುವ ಸ್ಥಳೀಯ ಕಾರ್ಯಕ್ರಮಗಳಾದ್ದರಿಂದ ಇಂಥ ಸಂಸ್ಥೆಗಳಿಗೆ ಉಳಿತಾಯವನ್ನು ಸ್ವೀಕರಿಸುವ ಹಕ್ಕನ್ನು ಕಾನೂನು ನೀಡಿದೆ. ಆದ್ದರಿಂದಲೇ ಸಮುದಾಯ ಕೇಂದ್ರಿತ ಸ್ವ-ಸಹಾಯ ಗುಂಪುಗಳ ಮಾದರಿಯ ಮೈಕ್ರೊಫೈನಾನ್ಸ್ ಗ್ರಾಮೀಣ್ ಮಾದರಿಯ ಮೈಕ್ರೊಫೈನಾನ್ಸ್ ಗಿಂತ ಉತ್ತಮವೆಂದು ಹಲವರು ವಾದಿಸುತ್ತಾರೆ.

ಆ ವಾದವಿವಾದಳು ಏನೇ ಇದ್ದರೂ, ಉಳಿತಾಯದ ಪರಿಭಾಷೆಯನ್ನು ನಾವು ವಿಸ್ತರಿಸಿ ನೋಡಿದಾಗ ನಮ್ಮ ದೇಶದಲ್ಲಿ ಅನೇಕ ಕುತೂಹಲಕಾರಿ ಪ್ರಯೋಗಗಳು ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಉಳಿತಾಯವನ್ನು ಸ್ವೀಕರಿಸಲು ಕಷ್ಟವಾದರೂ, ಖರ್ಚನ್ನು ಕಡಿಮೆ ಮಾಡುವ ಪ್ರಯೋಗವನ್ನು ಮಾಡಬಹುದಲ್ಲವೇ? ಖರ್ಚು ಕಡಿಮೆಯಾಗುವುದರಿಂದ ಬಡ ಸಂಸಾರಗಳಿಗೂ ಒಂದು ರೀತಿಯ ಒಳಿತೇ ಆಗಬಹುದು. ಆದರೆ ಖರ್ಚು ಕಡಿಮೆ ಮಾಡುವುದರ ಪರಿಭಾಷೆ ಯಾವರೀತಿಯದ್ದು? ನಮ್ಮ ಸೂಪರ್ ಬಜಾರುಗಳು ನೀಡುವ ಜಾಹೀರಾತಿನಿಂತೆ, ಸ್ಪೆಂಡ್ ಮೋರ್ - ಸೇವ್ ಮೋರ್ ರೀತಿಯದ್ದೇ?

ಆಂಧ್ರಪ್ರದೇಶ ಸರಕಾರದ ಸಂಸ್ಥೆಯಾದ ಸೊಸೈಟಿ ಫರ್ ಎಲಿಮಿನೇಷನ್ ಆಫ್ ರೂರಲ್ ಪಾವರ್ಟಿ [ಸರ್ಪ್] ನಡೆಸುವ ವೆಲುಗು [ಇದು ಚಂದ್ರಬಾಬು ನಾಯ್ಡು ಕಾಲದಲ್ಲಿ ಕೊಟ್ಟ ಹೆಸರು. ಅಲ್ಲಿ ಸರಕಾರ ಬದಲಾಗಿ ರಾಜಶೇಖರ ರೆಡ್ಡಿ ಬಂದಾಗ ಈ ಕಾರ್ಯಕ್ರಮಕ್ಕೆ ಇಂದಿರಾ ಕ್ರಾಂತಿ ಪಥಂ ಅನ್ನುವ ಹೊಸ ನಾಮಕರಣವಾದರೂ, ಜನ ಇನ್ನೂ ಈ ಯೋಜನೆಯನ್ನು ವೆಲುಗು ಎಂದೇ ಕರೆಯುತ್ತಾರೆ] ಅನ್ನುವ ಬಡತನಾ ನಿರ್ಮೂಲನದ ಕಾರ್ಯಕ್ರಮದಲ್ಲಿರುವ ಅನೇಕ ಯೋಜನೆಗಳಲ್ಲಿ ರೈಸ್ ಕ್ರೆಡಿಟ್ ಲೈನ್ ಅನ್ನುವುದೂ ಒಂದು ಪುಟ್ಟ ಕಾರ್ಯಕ್ರಮ. ಈ ಕಾರ್ಯಕ್ರಮದನುಸಾರ, ಸರ್ಪ್ ಯೋಜಿಸಿದ ಮಹಿಳೆಯರ ಸ್ವಸಹಾಯ ಗುಂಪುಗಳು ತಮಗೆ ಬೇಕಾಗಬಹುದಾದ ತಿಂಗಳ ಅಕ್ಕಿಯನ್ನು ಇಡಿಯಾಗಿ ಕೊಂಡು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಇದರಿಂದ ಆಗುವ ಲಾಭವೇನು?

ಒಂದು: ಗುಂಪಿನ ಎಲ್ಲರ ಮನೆಗೂ ತಿಂಗಳಿಗೆ ಬೇಕಾಗಬಹುದಾದ ಅಕ್ಕಿಯ ಪ್ರಮಾಣವನ್ನು ಕೂಡಿದಾಗ ಎಷ್ಟು ಅಕ್ಕಿ ಅವರಿಗೆ ಬೇಕಾಗಬಹುದು? ಒಂದು ಗ್ರಾಮದಲ್ಲಿನ ಎಲ್ಲ ಗುಂಪುಗಳ ಬೇಡಿಕೆಯನ್ನು ಒಟ್ಟುಗೂಡಿಸಿದರೆ ಎಷ್ಟು? ಈ ಪ್ರಮಾಣದ ಅಕ್ಕಿಯನ್ನು ಒಂದೇ ಬಾರಿಗೆ ಕೊಳ್ಳುವುದೆಂದರೆ, ಸ್ಥಳೀಯ ಕಿರಾಣಿಯಂಗಡಿಗೆ ಹೋಗದೇ ಸಗಟು ವ್ಯಾಪಾರಿಗಳ ಬಳಿಗೆ ಹೋಗಬಹುದು. ಆಗ ಕೊಳ್ಳುವ ಬೆಲೆಯಲ್ಲಿ ಉಳಿತಾಯವಾಗುವುದಿಲ್ಲವೇ? ಇದು ಸರಕಾರೀ ಕಾರ್ಯಕ್ರಮವಾದ್ದರಿಂದ ನೇರವಾಗಿ ಫುಡ್ ಕಾರ್ಪರೇಷನ್ನಿನಿಂದ ಅಕ್ಕಿಕೊಳ್ಳಲು ಸಾಧ್ಯವಾದರೆ? ಇನ್ನೂ ಹೆಚ್ಚಿನ ಫಾಯಿದೆಯೇ! ಜೊತೆಗೆ ಹಣ ಕೊಟ್ಟು ಕೊಳ್ಳುತ್ತಿರುವುದರಿಂದ ಒಳ್ಳೆಯ ಎಲ್ಲರಿಗೂ ಒಪ್ಪಿಗೆಯಾಗುವಂಥಹ ಅಕ್ಕಿಯನ್ನೇ ಕೊಳ್ಳಬಹುದು. ಈ ಖರೀದಿಗೆ ಗುಂಪಿನಿಂದ ಸಾಲವೂ ಸಿಕ್ಕಿದರೆ, ಒಟ್ಟಾರೆ ಒಂದು ತಿಂಗಳಿಗೆ ಬೇಕಾದ ಮೂಲ ಆಹಾರದ ದಾಸ್ತಾನು ಮನೆಯಲ್ಲಿದ್ದಂತೆಯೇ!

ಎರಡು: ಸಗಟು ವ್ಯಾಪಾರದಿಂದ ಹಣ ಉಳಿತಾಯವಾಗುವುದಲ್ಲದೇ, ಮನೆಯಲ್ಲಿ ತಿಂಗಳ ಅಕ್ಕಿ ದಾಸ್ತಾನಿರುವ ಕುಟುಂಬಗಳ ಆತ್ಮ ವಿಶ್ವಾಸಕ್ಕೇನಾಗಬಹುದು? ದಿನಗೂಲಿಯ ಆಧಾರದ ಮೇಲೆ ಬದುಕುವ ಈ ಜನರಿಗೆ ಕೆಲವೊಂದು ದಿನ ಕೂಲಿ ಸಿಗದಿದ್ದರೆ ಯಾರೂ ಉಪವಾಸ ಮಲಗುವುದಿಲ್ಲ, ಅಥವಾ ಸಮರ್ಪಕ ಕೂಲಿ ಸಿಗದಿದ್ದರೆ ಚೌಕಾಶಿ ಮಾಡುವ ಆತ್ಮವಿಶ್ವಾಸ ಸಹಜವಾಗಿ ಇರುವುದರಿಂದ, ಒಟ್ಟಾರೆ ಅವರಿಗೆ ಹೆಚ್ಚಿನ ಶಕ್ತಿಬಂದಂತೆ ಆಗುವುದು. ಹೀಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡನಂತರ ಆ ಪ್ರಾಂತದ ದಿನಗೂಲಿಯ ಮೊಬಲಗು ತುಸು ಹೆಚ್ಚಾಯಿತೆಂದು ಸುದ್ದಿ. ಹೀಗೆ ಖರ್ಚೂ ಕಡಿಮೆಯಾಗಿ ಆದಾಯವೂ ಹೆಚ್ಚಿದರೆ ಉಳಿತಾಯವೂ ಹೆಚ್ಚಾಗಬಹುದಲ್ಲವೇ?

ಸರ್ಪ್ ಸಂಸ್ಥೆಯವರು ಅಕ್ಕಿಯಿಂದ ಮಿಕ್ಕ ದಿನಸಿಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಬಹುದೇ? ಇದೇ ವಾದ ಬೇಳೆ, ಎಣ್ಣೆ, ಸಕ್ಕರೆಗೂ ವರ್ತಿಸಬಹುದಾದ್ದರಿಂದ ತಿಂಗಳಿಗೊಮ್ಮೆ ಈ ರೀತಿಯ ಖರೀದಿಯ ’ರೂರಲ್ ಪ್ರಾವಿಷನ್ ಸ್ಟೋರ್’ ಅನ್ನುವ ಯೋಜನೆಯನ್ನು ಹಾಕಿದರು. ಇದನ್ನು ವಿಸ್ತರಿಸಿ ಸಾಬೂನಿಗೆ, ಬಟ್ಟೆಗೆ, ಜೀರಿಗೆ ಮೆಣಸಿಗೆ ವಿಸ್ತರಿಸಿದರೆ? ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಿ ನಿಲ್ಲಿಸಬೇಕು ಅನ್ನುವ ಅರಿವು, ಪ್ರಬುದ್ಧತೆ ಇಲ್ಲದಿದ್ದರೆ ಇಲ್ಲದ ಖರ್ಚನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಆದರೆ ಸರ್ಪ್ ಈ ಕಾರ್ಯಕ್ರಮವನ್ನು ಅಕ್ಕಿ, ಬೇಳೆ, ಎಣ್ಣೆ ಮತ್ತು ಸಕ್ಕರೆಗೆ ಮಾತ್ರ ಸೀಮಿತಗೊಳಿಸಿತು.

ಇದೇ ಮಾದರಿಯ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಚಿಕ್ಕಸಾಲದ ಕಾರ್ಯಕ್ರಮ ನಡೆಸುವ ಈಕ್ವಿಟಾಸ್ ಸಂಸ್ಥೆ ನಡೆಸುತ್ತಿದೆ. ಆದರೆ ಇದು ತುಸು ಭಿನ್ನ. ಒಂದು ಈಕ್ವಿಟಾಸ್ ಹೆಚ್ಚಾಗಿ ನಗರ ಪ್ರದೇಶದಲ್ಲಿ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರ ಪ್ರದೇಶದಲ್ಲಿ ಒಂದು ಖಾಯಂ ಅಂಗಡಿ ನಡೆಸಬೇಕೆಂದರೆ, ಬಾಡಿಗೆ ಕಟ್ಟಬೇಕು, ಅಂಗಡಿ ನಡೆಸುವವರ ಸಂಬಳವನ್ನೂ ಸಂಭಾಳಿಸಬೇಕು. ಹೀಗಾಗಿ ಸರ್ಪ್ ಮಾದರಿ ಈಕ್ವಿಟಾಸ್‍ಗೆ ವರ್ತಿಸುವುದಿಲ್ಲ. ಸಾಲದ್ದಕ್ಕೆ ಈಕ್ವಿಟಾಸ್ ಸಂಸ್ಥೆ ಸಮುದಾಯದ ಆಧಾರದ ಮೇಲೆ ಕಟ್ಟಿದ್ದೂ ಅಲ್ಲ. ಅವರು ತಮ್ಮ ಚಿಕ್ಕಸಾಲದ ಕಾರ್ಯಕ್ರಮವನ್ನು ಲಾಭಕ್ಕಾಗಿ ನಡೆಸುತ್ತಾರೆ. ಆದರೂ ಒಂದು ಕಡೆ ಲಾಭವನ್ನು ಆರ್ಜಿಸುತ್ತಿರುವಾಗಲೇ ಒಳಿತನ್ನೂ ಮಾಡಬೇಕೆನ್ನುವ ದೃಷ್ಟಿಯಿಂದ ದಿನಸಿಯನ್ನು ಮಾರುವ ಅಂಗಡಿಗಳನ್ನು ತೆಗೆಯುತ್ತಿದ್ದಾರೆ. ಆದರೆ ಇದರಲ್ಲಿ ಮುಖ್ಯವಿಚಾರವೆಂದರೆ ಸಾಲದ ಕಾರ್ಯಕ್ರಮಕ್ಕೂ ದಿನಸಿಯ ಕಾರ್ಯಕ್ರಮಕ್ಕೂ ಕೊಂಡಿ ಹಾಕದೇ, ಎರಡನ್ನೂ ಭಿನ್ನವಾಗಿ ಇಟ್ಟಿದ್ದಾರೆ. ಆದರೆ ಆ ಅಂಗಡಿಯನ್ನು ಲಾಭಾರ್ಜನೆಯಿಲ್ಲದೆಯೇ ನಡೆಸುತ್ತಿದ್ದಾರಾದ್ದರಿಂದ, ಈಕ್ವಿಟಾಸ್ ಸಂಸ್ಥೆಯಲ್ಲಿ ಸಾಲಪಡೆದು ಹೆಚ್ಚಿನ ಬಡ್ಡಿ ಕಟ್ಟುತ್ತಿರುವ ಬಡವರಿಗೆ ಭಿನ್ನ ರೀತಿಯಿಂದ ಉಳಿತಾಯವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈಕ್ವಿಟಾಸ್ ಸಂಸ್ಥೆಯ ಗ್ರಾಹಕರಲ್ಲದವರಿಗೆ ಈ ದಿನಸಿಯನ್ನು ಕೊಳ್ಳುವ ಅವಕಾಶವಿಲ್ಲ! ಇದೊಂದು ರೀತಿಯ ಕಾವ್ಯ ನ್ಯಾಯ.

ಮೂರನೆಯ ಮಾದರಿ ಆಂಧ್ರ ಪ್ರದೇಶದಲ್ಲಿ ಪ್ರಾರಂಭ ಮಾಡಿ ನಂತರ ನಿಲ್ಲಿಸಿದ ಸ್ಪಂದನಾ ಸಂಸ್ಥೆಯವರದ್ದು. ಸ್ಪಂದನಾ ಸಂಸ್ಥೆ ಗುಂಟೂರಿನಲ್ಲಿ ತನ್ನ ಮುಖ್ಯಕಾರ್ಯಾಲವನ್ನು ನಡೆಸುತ್ತಿದ್ದ ದಿನಗಳಲ್ಲಿ ಒಂದು ದಿನ ಆ ಸಂಸ್ಥೆಯ ಮುಖ್ಯಸ್ಥೆ ಪದ್ಮಜಾ ರೆಡ್ಡಿ ತಮ್ಮ ಗ್ರಾಹಕರೊಬ್ಬರ ಮನೆಗೆ ಹೋಗಿದ್ದಾಗ ಅಲ್ಲಿದ್ದ ಕುಡಿಯುವ ನೀರಿನ ಫಿಲ್ಟರ್ ನೋಡಿ ಕುತೂಹಲದಿಂದ ಆ ಫಿಲ್ಟರಿನ ಚರಿತ್ರೆಯನ್ನು ಕೇಳಿದರಂತೆ. ಆಗ ಆ ಬಡ ಗ್ರಾಹಕರಿಂದ ತಿಳಿದದ್ದಿಷ್ಟು. ಆ ಫಿಲ್ಟರನ್ನು ಆ ಕುಟುಂಬದವರು ಕಂತಿನ ಮೇಲೆ ಕೊಂಡಿದ್ದರು. ತಿಂಗಳಿಗೆ ನೂರು ರೂಪಾಯಿಯಂತೆ ಒಂದು ವರ್ಷ ಕಂತನ್ನು ಕಟ್ಟಬೇಕಿತ್ತು. ಪದ್ಮಜಾ ಅದನ್ನು ನೋಡಿ ’ಓಹೋ’ ಅಂದುಕೊಂಡು ವಾಪಸ್ಸಾದರು. ಆದರೆ ಗುಂಟೂರು ನಗರವನ್ನು ಪ್ರವೇಶಿಸುತ್ತಿದ್ದಂತೆ ಕುತೂಹಲದಿಂದ ಫಿಲ್ಟರಿನ ಬೆಲೆ ಎಷ್ಟಿರಬಹುದು ಎಂದು ಕೇಳಿದಾಗ ಅವರಿಗೆ ಆಶ್ಚರ್ಯ ಕಾದಿತ್ತು: ಆ ಫಿಲ್ಟರಿನ ಬೆಲೆ ಕೇವಲ ೭೦೦ ರೂಪಾಯಿಗಳಾಗಿದ್ದುವು! ಆಗ ಆಕೆಯ ಮನಸ್ಸಿನಲ್ಲಿ ಈ ಬಗ್ಗೆ ಒಂದು ವಿಚಿತ್ರ ಹೊಳಹು ಬಂತು. ಇಂಥ ಫಿಲ್ಟರನ್ನು ತಾವೇ ಅತೀ ಕಡಿಮೆ ಲಾಭಕ್ಕೆ ತಮ್ಮ ಗ್ರಾಹಕರಿಗೆ ಮಾರಾಟಮಾಡಿದರೆ? - ಹೀಗೆ ಬಡ ಗ್ರಾಹಕರಿಗೆ ಹಣದ ’ಉಳಿತಾಯ’ವನ್ನು ಖರ್ಚಿನ ಮೂಲಕ ಮಾಡಬಹುದೆಂದು ಆಕೆಗೆ ಅನ್ನಿಸಿತು.

ಹೀಗೆ ಪ್ರಾರಂಭವಾದ ಸ್ಪಂದನಾದ ’ಗ್ರಾಹಕ ಸಾಲ’ವನ್ನು ಮೈಕ್ರೊಫೈನಾನ್ಸ್ ಲೋಕ ಸ್ವಾಗತಿಸಿತು! ನೀರಿನ ಫಿಲ್ಟರ್ ಇದ್ದರೆ ಬಡವರು ಶುದ್ಧನೀರನ್ನು ಕುಡಿಯುತ್ತಾರೆ, ಶುದ್ಧ ನೀರನ್ನು ಕುಡಿಯುವವರಿಗೆ ರೋಗ ಅಂಟುವ ಸಾಧ್ಯತೆಗಳು ಕಡಿಮೆ, ಹೀಗಾಗಿ ಕೆಲಸದ ದಿನಗಳು ಹೆಚ್ಚುವುದಲ್ಲದೇ ಡಾಕ್ಟರ ಖರ್ಚೂ ಕಡಿಮೆಯಾಗುವುದೆಂದು ಜನ ವಾದಿಸಿದರು. ಸ್ಪಂದನಾಗೆ ಈ ಕೆಲಸಕ್ಕಾಗಿ ಒಂದು ಅವಾರ್ಡೂ ಬಂತು. ಸರಿ, ಸ್ಪಂದನಾ ಈ ಯೋಚನೆಯನ್ನು ತುಸು ಮುಂದುವರೆಸಿತು. ಗ್ರಾಹಕ ಸಾಲದಲ್ಲಿ ಪ್ರೆಶರ್ ಕುಕ್ಕರನ್ನು ಸೇರಿಸಿತು. ಅದನ್ನೂ ಜನ ಒಪ್ಪಿದರು. ಮಹಿಳೆಗೆ ಅಡುಗೆ ಮನೆಯಲ್ಲಿನ ಏಕತಾನತೆಯನ್ನು ಕಡಿಮೆ ಮಾಡಲು ಇದು ಸಹಾಯಕವಗಿರಬಹುದಾದ್ದರಿಂದ ಹೆಚ್ಚಿನ ಆದಾಯವನ್ನು ಸಂತೋಷವನ್ನೂ ಸಂಪಾದಿಸಬಹುದು! ಹಾಗಾದರೆ ಗ್ಯಾಸ್ ಸ್ಟವ್? ಅದನ್ನೂ ಸ್ವಾಗತಿಸಿದರು. ಹೀಗೆ ಒಂದೊಂದಾಗೇ ಹೊಸ ಹೊಸ ಸಾಮಾನನ್ನು ತಮ್ಮ ಅಂಗಡಿಯಲ್ಲಿಡುತ್ತಾ ಒಂದು ವರ್ಷದೊಳಗಾಗಿ ಸ್ಪಂದನಾದ ರೀಟೈಲ್ ಅಂಗಡಿ ಗುಂಟೂರಿನ ಅತೀ ದೊಡ್ಡ ಸೂಪರ್ ಬಜಾರ್ ಆಗಿಬಿಟ್ಟಿತು. ಗುಂಪಿನ ಮೀಟಿಂಗಿನಲ್ಲಿ ಸಾಲದ ಚೀಟಿ ಪಡೆಯುವುದು - ಆ ಚೀಟಿಯನ್ನು ತಂದು ಈ ಬಜಾರಿನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗಿ ಬಡ್ಡಿಯ ಮೇಲೆ ಆ ಸಾಲವನ್ನು ತೀರಿಸುವುದು. ಎಲ್ಲ ವಸ್ತುಗಳ ಬೆಲೆಗಳೂ ಮಾರುಕಟ್ಟೆಯ ಇತರ ಅಂಗಡಿಗಳಿಗಿಂತ ಕಡಿಮೆಯಿದ್ದದ್ದರಿಂದ ಸ್ಪಂದನಾದ ಅಂಗಡಿಯಲ್ಲಿ ಕೊಳ್ಳುವುದರಲ್ಲಿ ’ಉಳಿತಾಯ’ವಿತ್ತು. ಆದರೆ ಮೊದಲಿಗೆ ಮೆಚ್ಚಿಕೊಂಡವರೇ ಈಗ ಆ ಸಂಸ್ಥೆಯನ್ನು ಟೀಕಿಸಲು ಪ್ರಾರಂಭಿಸಿದರು. ಶುದ್ಧ ನೀರು, ಕುಕ್ಕರ್, ಅಡಿಗೆ ಅನಿಲ ಈ ಯಾದಿ ವಾಷಿಂಗ್ ಮಶೀನು, ಫ್ರಿಜ್ಜು, ಮಂಚ, ಅಲಮಾರಿ, ಚಿನ್ನಾಭರಣ ಹೀಗೆ ಬೆಳೆಯುತ್ತಾ ಹೋದಾಗ - ಯಾವುದು ’ಉಳಿತಾಯ’ ಮತ್ತು ’ಆದಾಯ ಹೆಚ್ಚಲು’ ಪೂರಕವೆನ್ನಲಾಗಿತ್ತೋ ಅದೇ ಈಗ ದುಂದಿನ ಖರ್ಚಾಗಿ, ಸಾಲದ ಸುರಳಿಯಲ್ಲಿ ಬಡವರನ್ನು ಇರುಕಿಸುತ್ತಿದೆ ಎನ್ನುವ ಟೀಕೆಗೆ ಒಳಗಾಯಿತು.

ಹೀಗೆ ಖರ್ಚಿನಿಂದ ಆಗಬಹುದಾದ ಉಳಿತಾಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಅದೂ ಬಡತನದಲ್ಲಿ ಬೇಯುತ್ತಿರುವವರಿಗೆ ಗ್ರಾಹಕವಸ್ತುಗಳ ಕನಸನ್ನು ನಾವು ತೋರುವಾಗ ಹಾಕಬೇಕಾದ ಗೆರೆ ಎಲ್ಲೆಂದು ಯೋಚಿಸದಿದ್ದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ ಅನ್ನುವ ಪಾಠವನ್ನು ಸ್ಪಂದನಾ ಬೇಗನೇ ಕಲಿಯಿತು. ಆ ಪಾಠವನ್ನು ಎಲ್ಲರೂ ಕಲಿತರೇ? ಈಚೆಗೆ ಎಸ್.ಕೆ.ಎಸ್ ಅನ್ನುವ ದೊಡ್ಡ ಮಕ್ರೋಫೈನಾನ್ಸ್ ಸಂಸ್ಥೆ ನೋಕಿಯಾ ಜೊತೆಗೂಡಿ ಬಡವರಿಗೆ ಮೊಬೈಲುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆಯಂತೆ. ಹಾಗೂ ಆ ಸಂಸ್ಥೆಯ ಮುಖ್ಯಸ್ಥ ಗುರುಮಣಿ ತಮ್ಮ ಕಾರ್ಯಕ್ರಮದ ಮೂಲಕ ತಲುಪುವ ಗ್ರಾಹಕರ ದೊಡ್ಡ ಸಂಖ್ಯೆಯ ನೆಟ್‍ವರ್ಕನ್ನು ಹೆಚ್ಚಿನ ಲಾಭಕ್ಕಾಗಿ ಹೇಗೆ ಉಪಯೋಗಿಸಬಹುದು ಅನ್ನುವುದನ್ನು ಹಾಗೂ ಅವರಿಗೆ ಕಡಿಮೆ ಬೆಲೆಯಲ್ಲಿ ಗ್ರಾಹಕ ವಸ್ತುಗಳನ್ನು ತಲುಪಿಸುವುದು ಹೇಗೆ ಎನ್ನುವ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಎಲ್ಲೋ ಹೇಳಿದ್ದಾರೆ. ಚರಿತ್ರೆ ಮರುಕಳಿಸುತ್ತದೆ. ಬಡವರನ್ನು ಮೇಲಕ್ಕೆತ್ತುವ ಉತ್ಸಾಹದಲ್ಲಿ ನಾವು ಅವರನ್ನು ಇನ್ನೂ ಕೆಳಕ್ಕೆ ತಳ್ಳುತ್ತಿದ್ದೇವೆಯೇ? ಖರ್ಚಿನಿಂದ ಉಳಿತಾಯವಾಗುತ್ತದೆಯೇ? ಆಗುವುದೇ ಆದರೆ ಯಾವರೀತಿಯ ಖರ್ಚುಗಳನ್ನು ಪ್ರೋತ್ಸಾಹಿಸಬೇಕು ಅನ್ನುವ ಪ್ರಶ್ನೆಗಳು ಉಳಿದೇ ಇವೆ. ಅವಕ್ಕೆ ಉತ್ತರ ಸರಳವಾದದ್ದೇನೂ ಅಲ್ಲ.

ನವಂಬರ್ ೨೦೦೯



Tuesday, November 17, 2009

ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ

ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಪ್ರಣಾಲಿಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿರಬಹುದಾದ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.

ಹಾಗಾದರೆ ಈ ಕಾರ್ಯಕ್ರಮಗಳು ವ್ಯರ್ಥವೇ? ಏನೂ ಪ್ರಯೋಜನವಿಲ್ಲವೆಂದರೆ, ಇತರರ ಜೀವನವನ್ನು ಉದ್ಧಾರ ಮಾಡುತ್ತಿದ್ದೇವೆಂದೇ - ಜೀವಿಸುತ್ತಿರುವ ಈ ವೃತ್ತಿಪರರ ಜೀವನೋಪಾಯಕ್ಕೇನಾಗಬೇಕು? ಡೆವಲಪ್‍ಮೆಂಟ್ ಫೈನಾನ್ಸ್ ನೆಟ್‍ವರ್ಕ್ ಅನ್ನುವ ಒಂದು ಚರ್ಚಾಕೂಟದಲ್ಲಿ ಈ ಚರ್ಚೆ ಈಮೈಲಿನ ಮೂಲಕ ನಡೆಯುತ್ತಿದೆ. ಕಾರ್ಯಕ್ರಮಗಳನ್ನು ನಡೆಸುವವರು ತಮಗೆ ಅನುಕೂಲವಾಗುವಂತೆ ಯಾವುದಾದರೂ ಒಂದು ಮಹಿಳೆಯ ಕಥೆಯನ್ನು ಹೇಳಿ ಯಶೋಗಾಥೆಯ ಪುರಾವೆಯನ್ನೊದಗಿಸಿಬಿಡುತ್ತಾರೆ. ಆದರೆ ಪ್ರತೀ ಯಶೋಗಾಥೆಯ ಹಿಂದೆ ನಮಗೆ ಕಾಣಿಸದ ಎಷ್ಟೋ ವೈಫಲ್ಯಗಳೂ ಇರುತ್ತವೆ, ಹಾಗೂ ಆ ಕಥೆಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲವೆನ್ನುವುದನ್ನೂ ನಾವು ಮನಗಾಣಬೇಕಾಗಿದೆ.

ಬಡತನದ ಮೇಲೆ ಯಾವುದೇ ಪ್ರಭಾವವಿಲ್ಲವೆಂದರೂ ಪ್ರಪಂಚದಾದ್ಯಂತ ಬಡವರು ಚಿಕ್ಕಸಾಲದ ಕಾರ್ಯಕ್ರಮಗಳನ್ನು ತಮ್ಮದಾಗಿಸಿಕೊಂಡು ಸಾಲವನ್ನು ಪಡೆದು ಮರುಪಾವತಿ ಮಾಡುತ್ತಿದ್ದಾರೆದರೆ ಅದರಲ್ಲೂ ಅರ್ಥವಿರಬೇಕು. ವಿಶ್ವದಾದ್ಯಂತ ಇರುವ ಚಿಕ್ಕಸಾಲದ ಕಾರ್ಯಕ್ರಮಗಳಲ್ಲಿ ತುಂಬಾ ಭಿನ್ನತೆಯಿದೆ. ಮೂಲಭೂತವಾಗಿ ಬಾಂಗ್ಲಾದೇಶ, ಭಾರತ್, ಪಾಕಿಸ್ತಾನದ ಕಾರ್ಯಕ್ರಮಗಳು ಮಹಿಳಾಪರ ಕಾರ್ಯಕ್ರಮಗಳು. ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಹಾಗೂ ಲ್ಯಾಟಿನ್ ಅಮೆರಿಕಾ ಪ್ರಾಂತದ ಕಾರ್ಯಕ್ರಮಗಳು ಪುರುಷ ಪ್ರಧಾನವಾದುವು. ಈ ಭಿನ್ನತೆಯಲ್ಲಿ ಮತ್ತೂ ಒಂದು ಅಂಶವನ್ನು ನಾವು ಕಾಣಬಹುದು. ಕೃಷಿಪ್ರಧಾನವಾದ ಕ್ಷೇತ್ರಗಳಲ್ಲಿ ಮಹಿಳೆಯರ ಗುಂಪುಗಳು ಹೆಚ್ಚಾಗಿ ಇವೆ. ಮಹಿಳಾಪ್ರಧಾನವಾದ ಕಾರ್ಯಕ್ರಮದಲ್ಲಿ ಗುಂಪುಗಳ ಪಾತ್ರವೂ ಪ್ರಮುಖವಾದದ್ದು. ಈ ಭಿನ್ನತೆಯಿಂದ ನಾವೇನಾದರೂ ಒಳನೋಟಗಳನ್ನು ಪಡೆಯಬಹುದೇ?

ಈ ಎಲ್ಲ ಅಂಶಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು ಯೋಚನೆ ಮಾಡಿದಾಗ ನಮ್ಮ ಪ್ರಾಂತದ ಚಿಕ್ಕಸಾಲದ ಕಾರ್ಯಕ್ರಮ ಈ ರೀತಿ ಬೆಳವಣಿಗೆಯಾದದ್ದಕ್ಕೆ ಒಂದು ಗಮ್ಮತ್ತಿನ ಕಥೆಯನ್ನ ಕಟ್ಟಬಹುದೇನೋ.. [ಈ ಕಥೆ ನಿಜವೆಂದು ನಿರೂಪಿಸಲು ಗಟ್ಟಿಯಾದ ಮಾಹಿತಿಯಿಲ್ಲವಾದ್ದರಿಂದ, ಇದನ್ನು ಕಥೆಯೆಂದೇ ಪರಿಗಣಿಸಬೇಕಾಗುತ್ತದೆ]. ಕಥೆ ಹೀಗಿರಬಹುದು:

ಪುರುಷರಿಗೆ ’ಚಿಕ್ಕ’ ಸಾಲದಲ್ಲಿ ಆಸಕ್ತಿಯಿಲ್ಲ. ಕಾರಣವೇನಿರಬಹುದು?

೧. ಕೃಷಿಯೇ ಪ್ರಧಾನವಾದ ಕೆಲಸವಾದರೆ - ಅದಕ್ಕೂ ಚಿಕ್ಕಸಾಲಕ್ಕೂ ಒಳ್ಳೆಯ ನಂಟನ್ನು ಹಚ್ಚುವುದು ಕಷ್ಟ. ಕೃಷಿಗೆ ಉತ್ತುವುದರಿಂದಾದಿಯಾಗಿ ಕುಯಿಲಿನ, ಫಲಸನ್ನು ಮಾರಾಟಮಾಡುವವರೆಗೂ ಜೇಬಿನಿಂದ ಹಣ ಹೊರಕ್ಕೆ ಹೋಗುತ್ತದೆಯೇ ಹೊರತು ಒಳಬರುವುದಿಲ್ಲ. ಆದರೆ ಚಿಕ್ಕ ಸಾಲದ ನಿಯಮಾವಳಿಯ ಪ್ರಕಾರ, ಒಂದು ಸಾಲ ಕೊಟ್ಟರೆ ಅದನ್ನು ಮುಂದಿ ವಾರ/ತಿಂಗಳಿನಿಂದ ಮರುಪಾವತಿ ಮಾಡುವುದು ಅನಿವಾರ್ಯ. ಹೀಗಾಗಿ ಕೃಷಿಯ ವಿತ್ತೀಯ ಹರಿವಿಗೂ ಚಿಕ್ಕಸಾಲದ ನಿರೀಕ್ಷೆಗೂ ತಾಳೆಯಿಲ್ಲ. ಪುರುಷ ಪ್ರಧಾನವಾದ ಕೃಷಿಗೆ ಇದು ತಕ್ಕ ಸಾಲವಲ್ಲ.

೨. ಚಿಕ್ಕ ಸಾಲದ ಮೊತ್ತಗಳ ಮೂರು ಸಾವಿರದಿಂದ ಆರಂಭವಾಗಿ ಕ್ರಮಕ್ರಮೇಣ ಬೆಳೆದು ಹತ್ತುಸಾವಿರದ ವರೆಗೂ ಹೋಗಬಹುದು. ಈ ಮೊತ್ತ ಪುರುಷರ ’ಕನಸು’ಗಳಿಗೆ ’ಆಶಯ’ಕ್ಕೆ ತೀರಾ ಕಡಿಮೆಯಿರಬಹುದು. ಮಾಡಿದರೆ ದೊಡ್ಡ ಧಂಧೆ ಮಾಡಬೇಕು - ಈ ಪುಟ್ಟಪುಟ್ಟ ವ್ಯಾಪಾರದಿಂದ ಕೊಳ್ಳೆ ಹಾಕುವುದು ಏನು ಅನ್ನುವ ಪ್ರಶ್ನೆ ಅವರುಗಳ ಮನಸ್ಸಿನಲ್ಲಿ ಇರಬಹುದು. ಜೊತೆಗೆ ಇಷ್ಟು ಪುಟ್ಟ ಮೊತ್ತಕ್ಕೆ ಪ್ರತೀ ವಾರ ಸಭೆಗೆ ಹಾಜರಾಗುವುದು, ಪ್ರಾರ್ಥನೆ ಮಾಡುವುದು, ಲೆಕ್ಕ ಇಡುವುದು - ಇತ್ಯಾದಿ ತಲೆ ಶೂಲೆಯ ಕೆಲಸವನ್ನು ಯಾಕೆ ಮಾಡಬೇಕು ಎನ್ನುತ್ತಲೇ ಪುರುಷರು ಬೀಡಿ ಬೆಳಗಿಸಬಹುದು.

ಮಹಿಳೆಯರಿಗೆ ಚಿಕ್ಕಸಾಲದಲ್ಲಿ ಸಾಕಷ್ಟು ಆಸಕ್ತಿಯಿರುವಂತೆ ಕಾಣುತ್ತದೆ. ಕಾರಣವೇನಿರಬಹುದು?

೧. ಸಂಸಾರದಲ್ಲಿ ಮಹಿಳೆಯರ ಮೂಲಭೂತವಾದ ಪಾತ್ರ ’ಹೆಂಡತಿ’ ಮತು ’ತಾಯಿ’ಯ ಪಾತ್ರದ ಸುತ್ತಲೂ ಭ್ರಮಣ ಮಾಡುತ್ತದೆ. [ನಾನು ಈ ಮಾತನ್ನು ಸ್ಟೀರಿಯೋಟೈಪ್ ಮಾಡಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದೇನೆಂದು ಸ್ತ್ರೀವಾದಿಗಳು ಅನ್ನಬಹುದು, ಆದರೆ ನಾನು ಚಿಕ್ಕಸಾಲದ ಮಹಿಳಾಪರತೆಗೆ ಒಂದು ಕಾರಣವನ್ನು ಹುಡುಕುತ್ತಿದ್ದೇನೆಯೇ ಹೊರತು ಮಹಿಳೆಯರು ಈ ಎರಡೂ ಪಾತ್ರಕ್ಕೆ ಸೀಮಿತರಾಗಬೇಕೆದು ಪ್ರತಿಪಾದಿಸುತ್ತಿಲ್ಲ.] ಗ್ರಾಮೀಣ ಮಹಿಳೆಯರ ಪಾತ್ರ ಚಾರಿತ್ರಿಕವಾಗಿ ಅವರನ್ನು ಮನೆಯೊಳಕ್ಕೇ ಕೂಡಿಹಾಕುವುದರಿಂದ ಅವರಿಗೆ ಹೊರಬಂದು ಒಂದು ಗುಂಪಿನ ಸಭೆಯಲ್ಲಿ ಪಾಲ್ಗೊಳ್ಳುವುದು ಒಂದು ವಿತ್ತೀಯ ಅವಶ್ಯಕತೆಯಲ್ಲದೇ - ಮಿಕ್ಕ ಮಹಿಳೆಯರನ್ನು ಭೇಟಿಮಾಡುವ ಸಾಮಾಜಿಕ ಅವಶ್ಯಕತೆಯೂ ಆಗುವುದು. ಹೀಗಾಗಿ ಮಹಿಳೆಯರು ಬಹುಶಃ ಖುಷಿಯಿಂದಲೇ ತಮ್ಮ ಗುಂಪಿನ ಸಭೆಗೆ ಬರುತ್ತಾರೇನೋ. [ಪುರುಷರು ದಿನವೂ ಗಡುಂಗಿನಲ್ಲಿ ಸಭೆ ಸೇರುವುದರಿಂದ ಅವರಿಗೆ ಹೀಗೆ ಸಭೆ ಸೇರುವ ಅವಶ್ಯಕತೆಯಿಲ್ಲದಿರಬಹುದು!!]

೨. ಪುಟ್ಟ ಮೊತ್ತದ ವಿತ್ತೀಯ ಒತ್ತಡಗಳು ಯಾವಾಗಲೂ ಮಹಿಳೆಯ ಮೇಲೆಯೇ ಬೀಳುತ್ತವೆ - ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳು ಅನೇಕ.

೩. ಮನೆಯಲ್ಲಿ ಇರುವ, ಆಗಾಗ ಕೂಲಿಗೆ ಹೋಗುವ ಮಹಿಳೆಯರಿಗೆ ತಮ್ಮ ಸಮಯದ ನಡುವೆ ಆದಾಯ ಆರ್ಜಿಸುವ ಪುಟ್ಟ ವ್ಯಾಪಾರವನ್ನು ಮಾಡುವುದು ಸಾಧ್ಯವಾಗಬಹುದು. ಅದು ಒಂದು ಎಮ್ಮೆಯನ್ನು ಹಿತ್ತಲಲ್ಲಿ ಕಟ್ಟುವುದಿರಬಹುದು, ಮನೆಯ ಮುಂಭಾಗದಲ್ಲಿ ಒಂದು ಪುಟ್ಟ ಕಿರಾಣೆಯಂಗಡಿಯನ್ನು ಹಾಕುವುದಿರಬಹುದು ಅಥವಾ ಒಂದು ಟೀ ಅಂಗಡಿಯನ್ನು ನಡೆಸುವುದಿರಬಹುದು, ಒಂದು ಯಂತ್ರವನ್ನು ಕೊಂಡು ಹೊಲಿಗೆ ಕೆಲಸ ಮಾಡುವುದಿರಬಹುದು. ಈ ರೀತಿಯಾದ ಪುಟ್ಟ ಪಾರ್ಟ್ ಟೈಂ ಕೆಲಸಕ್ಕೆ ಚಿಕ್ಕಸಾಲದ ಮೊತ್ತಗಳು ಪುಟ್ಟ ಹೂಡಿಕೆಯಾಗಿ ಮಹಿಳೆಯರಿಗೆ ಸಹಾಯಕವಾಗಿ ಬರಬಹುದು.

ನಾವು ಮೇಲಿನ ಅಂಶವನ್ನು ಪರಿಶೀಲಿಸಿದಾಗ ಒಂದು ಅಂಶ ನಮಗೆ ವೇದ್ಯವಾಗುತ್ತದೆ. ಅದೆಂದರೆ: ಚಿಕ್ಕಸಾಲದಿಂದಾಗಿ ಬಡತನ ನಿರ್ಮೂಲನವಾಗುವುದು ದೂರದ ಕನಸೇ ಇರಬಹುದು. ಹತ್ತು ಸಾವಿರ ರೂಪಾಯಿಗಳ ಸಾಲದಿಂದ, ಅದಕ್ಕೆ ಸರಾಸರಿ ತಿಂಗಳಿಗೆರಡು ಪ್ರತಿಶತ ಬಡ್ಡಿ ಕಟ್ಟುತ್ತಾ, ಕಿಸ್ತನ್ನೂ ತೀರಿಸುತ್ತಾ ನಡೆಸುವ ವ್ಯಾಪಾರಿದಿಂದ - ಆ ವ್ಯಾಪಾರ ಯಾವುದೇ ಆಗಿರಲಿ - ಎಷ್ಟು ಮಹಾ ಆದಾಯ ಬರಬಹುದು, ಆ ಆದಾಯ ದೈನಿಕ ಆದಾಯಕ್ಕೆ ಇಳಿಸಿದರೆ ಪ್ರಸ್ತುತ ಪರಿಸ್ಥಿತಿಗಿಂತ ಎಷ್ಟು ಭಿನ್ನ ಹಾಗೂ ಅಧಿಕವಾಗಿರಬಹುದು. ಆ ಆದಾಯದಿಂದ ಎಷ್ಟು ಮಾತ್ರ ಬಡತನ ದೂರವಾಗಬಹುದು?

ಹಾಗಾದರೆ ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲವಾದರೆ, ವಿಶ್ವದಾದ್ಯಂತ ಚಿಕ್ಕಸಾಲದ ಯಶೋಗಾಥೆಗಳು ಬಳೆಯಲು ಕಾರಣವೇನಿರಬಹುದು? ಸ್ವಲ್ಪ ಆಲೋಚಿಸಿದರೆ ನಾವು ಈ ರೀತಿಯಾದ ಕಥೆಯನ್ನು ಕಟ್ಟಬಹುದು:

ಮೂಲತಃ ಚಿಕ್ಕಸಾಲವೆನ್ನುವುದು ಒಂದು ಅರ್ಥಶಾಸ್ತ್ರದಲ್ಲಿ ಕರೆಯುವ ಸಪ್ಲೈ ಸೈಡ್ ಪರಿಹಾರ. ಅಂದರೆ, ಅಲ್ಲಿ ಸಮಸ್ಯೆ ಏನು ಅನ್ನುವುದು ಮುಖ್ಯವಾಗದೇ ಪರಿಹಾರವೇ ಸಮಸ್ಯೆಯನ್ನು ಹುಡುಕಿ ಹೊರಡುವ ಒಂದು ವಿಚಿತ್ರ ಪರಿ! ಇನ್ನಷ್ಟು ವಿವರಿಸಬೇಕೆಂದರೆ ಹೀಗೆ ಯೋಚಿಸೋಣ. ಒಂದು ಬಡ ಸಂಸಾರದಲ್ಲಿರುವ ಗ್ರಾಮೀಣ ಮಹಿಳೆ ತನ್ನ ಜೀವನವನ್ನು ತಾನು ಯಥಾರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಳು. ಒಂದು ಮುಂಜಾನೆ ಯಾರೋ ಬಂದು "ಸಾಲ ಬೇಕೇ ಸಾಲ?" ಎಂದು ಕೇಳಿದರು. ಅಲ್ಲಿಯವರೆಗೆ ತಾನು ಸಾಲವನ್ನು ಪಡೆಯಬಹುದೆಂದಾಗಲೀ ಯಾರಾದರೂ ತನಗೆ ಸಾಲ ಕೊಡಬಹುದೆಂದಾಗಲೀ ಆಕೆ ಊಹಿಸಿಯೇ ಇರಲಿಲ್ಲ. ಹೀಗಾಗಿ ಆಕೆಯ ಮನಸ್ಸಿನಲ್ಲಿ ಸಾಲ - ಚಿಕ್ಕಸಾಲವಾದರೂ ಸರಿಯೇ - ಪಡೆಯುವುದು ಒಂದು ಪರಿಹಾರವಾಗಿ ಕಾಣಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಈ ಕಿಟಕಿ ತೆರೆದುಕೊಳ್ಳುತ್ತಿದೆ. ಸಾಲದ ಮೊತ್ತ ದೊಡ್ಡದಾಗಿ ಕಾಣುತ್ತಿಲ್ಲ. ವಾರಕ್ಕೆ ಕಟ್ಟಬೇಕಾದ ಕಿಸ್ತನ್ನು ಯಾವರೀತಿಯಲ್ಲಿ ಕಟ್ಟಬಹುದು ಅನ್ನುವುದನ್ನ ಯೋಚಿಸಿದರೆ ಈ ಸಾಲವನ್ನು ಆಕೆ ಪಡೆಯಬಹುದು!

ಕೃಷಿಯೇ ಪ್ರಧಾನವಾಗಿರುವ ಗ್ರಾಮೀಣ ಪ್ರಾಂತದಲ್ಲಿ ಕುಯಿಲಿನ ಕಾಲಕ್ಕೆ ಹಣದ ಚಾಲನೆ ಹೆಚ್ಚಾಗುತ್ತದೆ. ಎಲ್ಲರೂ ಹೊಸ ಬಟ್ಟೆಗಳನ್ನೂ ದೊಡ್ಡ ಖರ್ಚುಗಳನ್ನೂ ಆಗ ಮಾಡುತ್ತಾರೆ. ಮಿಕ್ಕಂತೆ ಹಣದ ಚಾಲನೆ [ಕೃಷಿಯನ್ನಧಾರಿಸದ] ನಗರ ಪ್ರಾಂತಕ್ಕಿಂತ ಕಡಿಮೆ ಎಂದೇ ಹೇಳಬೇಕು. ಆ ಅಂಥ ಪ್ರಾಂತದಲ್ಲಿ, ವರುಷಕ್ಕೆರಡು ಬಾರಿ ಮಾತ್ರ ಧನದರ್ಶನವಾಗಬಹುದಾದ ಮಹಿಳೆಯ ಕೈಯಿಗೆ - ಮೊಬಲಗು ಚಿಕ್ಕದಾದರೂ - ಪ್ರತೀ ವಾರ ಹಣವನ್ನು ಹಾಕುವ, ಅದನ್ನು ಎಣಿಸುವ, ವಾಪಸ್ಸು ಮಾಡುವ ಪ್ರಕ್ರಿಯೆಯನ್ನು ಚಿಕ್ಕ ಸಾಲ ಮಾಡಿದೆ. ಇದರಿಂದ ಬಡತನ ನಿರ್ಮೂಲನವಗಿದೆಯೇ - ಇಲ್ಲ. ಕಡಿಮೆಯಾಗಿದೆಯೇ - ಇಲ್ಲ.

ಆದರೆ ಪ್ರತಿವಾರವೂ ತನ್ನ ಕೈಯಿಂದಾಗಿ ತನ್ನದೇ ಆದಾಯದಿಂದಾಗಿ ಹಣ ಓಡಾಡುತ್ತಿರುವುದನ್ನು ಕಂಡ ಮಹಿಳೆಯ ಆತ್ಮಬಲ ಇದರಿಂದಾಗಿ ಹೆಚ್ಚಾಗಿದೆಯೇ? ಹೌದಲ್ಲವೇ. ದಿನನಿತ್ಯ ಧನದರ್ಶನವಾಗುವುದರಿಂದ ಜೀವನದಲ್ಲಿನ ಸಣ್ಣಪುಟ್ಟ ಏರುಪೇರುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆಯೇ? ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳಿಗೆ ತನ್ನ ಬಳಿ ಕಾಸಿದೆಯೇ... ಈ ಪ್ರಶ್ನೆಗೆ ಉತ್ತರ ಹೌದೆಂದಾದರೆ, ಬಹುಶಃ ಚಿಕ್ಕಸಾಲ ಬಡವರ ಬದುಕಿನಲ್ಲಿ ತಂದಿರಬಹುದಾದ ಚಿಕ್ಕ ಬದಲಾವಣೆಯ ಮಹತ್ವ ನಮಗೆ ಅರ್ಥವಾಗಬಹುದು.

ಹಾಗಾದರೆ ಪುರುಷರೇ ಪ್ರಧಾನವಾಗಿರುವ ಕೃಷಿಯೇತರ ಪ್ರಾಂತಗಳಲ್ಲಿನ ಚಿಕ್ಕಸಾಲದ ಯಶೋಗಾಥೆಯ ಹಿಂದಿನ ಕಥೆಯೇನಿರಬಹುದು. ಅದೃಷ್ಟವಶಾತ್ ಆ ಪ್ರಶ್ನೆ ಕೇಳುವ ವೇಳೆಗೆ ನನ್ನ ಬರವಣಿಗೆಯ ಪದಮಿತಿ ಮುಗಿಯುತ್ತದೆ. ಆ ಪರಿಸ್ಥಿತಿಯನ್ನು ಭಿನ್ನವಾಗಿಯೇ ಅರ್ಥೈಸಬೇಕಾಗುತ್ತದೆ. ಅದು ಮತ್ತೊಂದು ಬಾರಿ!

ನವಂಬರ್ ೨೦೦೯