Thursday, September 24, 2009

ರುದ್ರಮಾತಾದ ರಾಮಜೀಭಾಯಿ

ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!

ರುದ್ರಮಾತಾ ಅನ್ನುವುದು ಹೊಸದಾಗಿ - ಭೂಕಂಪದ ನಂತರ ನಿರ್ಮಾಣವಾದ ಗ್ರಾಮ. ಈ ಗ್ರಾಮದ ಮನೆಗಳೆಲ್ಲಾ ಗೋಳಾಕಾರ! ೧೯ನೇ ಶತಮಾನದಲ್ಲಿ ಆದ ಭೂಕಂಪದ ನಂತರ ಉತ್ತರ ಕಛ್ ಪ್ರದೇಶದಲ್ಲಿ ಈ ಗೋಳಾಕಾರದ ಮನೆಗಳು ನಿರ್ಮಾಣವಾದುವಂತೆ. ಯಾವುದೇ ಕೋನವಿಲ್ಲದ ಕಟ್ಟಡ ಭೂಕಂಪವನ್ನು ತಡೆದು ನಿಲ್ಲುತ್ತದೆ ಅನ್ನುವ ಮಾತನ್ನು ಅವರುಗಳು ಕಂಡುಕೊಂಡರಂತೆ. ಹೀಗಾಗಿ ಈ ಬಾರಿಯ ಭೂಕಂಪಾನಂತರ ಬನ್ನಿ ಪ್ರದೇಶದಲ್ಲೂ ಇದೇ ರೀತಿಯ ಗೋಳಾಕಾರದ ಮನೆಗಳು. ಒಂದೇ ಕೋಣೆ ಹಾಗೂ ಹಂಚಿನ ಸೂರು. ಈ ಸೂರಿನ ಕೆಳಗೆ ರಾಮಜಿಭಾಯಿ, ಅವನ ತಮ್ಮ, ಅಮ್ಮ, ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದಾರೆ.

ರಾಮಜಿಭಾಯಿ ಚರ್ಮಶಿಲ್ಪಿ. ಆದರೆ ಎಲ್ಲ ಚರ್ಮೋದ್ಯೋಗದವರೂ ಮಾಡುವಂತೆ ಬ್ಯಾಗುಗಳು, ಚಪ್ಪಲಿಗಳು, ಹೀಗೆ ಭಿನ್ನ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದೆಯೇ ಒಂದೇ ಪದಾರ್ಥವನ್ನು ಮಾಡುವ ’ಸ್ಪೆಷಲೈಸೇಷನ್’ ಹೊಂದಿದ್ದಾನೆ. ಈತ ತಯಾರಿಸುವ ಆ ಪದಾರ್ಥವೆಂದರೆ ಕುದುರೆಗಳಿಗೆ ಜೀನು, ಲಗಾಮು ತಯಾರಿಸುವುದು. ಕುದುರೆಯ ಬೆನ್ನಿಗೆ ಹಾಕುವ ಜೀನು, ಮತ್ತು ಅದಕ್ಕೆ ಹೊಂದುವ ಮಿಕ್ಕ ಚರ್ಮದ ಪರಿಕರಗಳನ್ನು ರಾಮಜಿಭಾಯಿ ತಯಾರಿಸುತ್ತಾನೆ. ಮಿಕ್ಕ ಪ್ರಾಂತದಲ್ಲಾದರೆ ಜೀನುಗಳು ಕುದುರೆಯ ಬೆನ್ನಮೇಲೆ ಸರಿಯಾಗಿ ಕುಳಿತುಕೊಳ್ಳುತ್ತದೆಯೇ ಹಾಗೂ ಅದರ ಮೇಲೆ ಸವಾರ ಕುಳಿತುಕೊಳ್ಳಲು ಆರಾಮವಾಗಿದೆಯೇ ಎಂದು ಪರೀಕ್ಷಿಸುತ್ತಾರಾದರೂ, ಈ ಪ್ರಾಂತದಲ್ಲಿ ಅದು ನೋಡಲು ಅಂದವಾಗಿದೆಯೇ ಹಾಗೂ ಅದರ ಮೇಲೆ ಮಾಡಿರುವ ಕೈಕುಸುರಿಕೆಲಸ ಸರಿಯಿದೆಯೇ ಎನ್ನುವುದನ್ನೂ ನೋಡುತ್ತಾರೆ.

ಒಂದು ಜೀನನ್ನು ತಯಾರಿಸಬೇಕಾದರೆ ಅದರ ಚರ್ಮದ ಕೆಲಸ ಮುಗಿಸಿ, ಬಂಗಾರ ಹಾಗೂ ಬೆಳ್ಳಿಯ ಬಣ್ಣದ ಡಿಸೈನನ್ನು ಅದಕ್ಕೆ ಹೆಣೆಯ ಬೇಕು. ಈ ಕುಸುರಿಕೆಲಸಕ್ಕೆ ಸಮಯ ಹಿಡಿಯುತ್ತದೆ. ಭುಜ್‌ನಿಂದ ದೊಡ್ಡ ಬಂಗಾರ ಬಣ್ಣದ ಪ್ಲಾಸ್ಟಿಕ್ ಷೀಟುಗಳನ್ನು ಕೊಂಡುತಂದು ಅವುಗಳಲ್ಲಿ ಎರಡು ಮಿ.ಮಿ ಅಗಲದ ’ದಾರ’ವನ್ನು ಮಾಡಿಕೊಂಡು ಅದರಲ್ಲಿ ರಾಮಜಿಭಾಯಿ ಡಿಸೈನುಗಳನ್ನು ಹಣೆಯುತ್ತಾನೆ. ಒಂದು ಜೀನು ತಯಾರಿಸಲು ಅವನಿಗೆ ಸುಮಾರು ಒಂದು ತಿಂಗಳು ಹಿಡಿಯುತ್ತದೆ. ಪ್ರತಿ ಜೀನೂ ಸುಮಾರು ಹತ್ತು ವರ್ಷಕಾಲ ಬಾಳಿಕೆ ಬರುತ್ತದಂತೆ. ಒಂದು ಜೀನನ್ನು ತಯಾರಿಸಲು ಬೇಕಾದ ಸಾಮಾನು - ತೊಗಲು, ಇತರ ಅಲಂಕಾರದ ವಸ್ತುಗಳು ಸುಮಾರು ಎರಡು ಸಾವಿರ ರೂಪಾಯಿಯ ಖರ್ಚನ್ನು ಹೊಂದಿರುತ್ತದೆ. ಒಂದು ತಿಂಗಳುಕಾಲ ಇಬ್ಬರು ಅದರ ಮೇಲೆ ಕೆಲಸ ಮಾಡುತ್ತಾರೆ. ಅದು ಹತ್ತುಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಅಂದರೆ ಶ್ರಮಕ್ಕೆ ನಾವು ಲೆಕ್ಕ ಕಟ್ಟದಿದ್ದರೆ ಆ ಸಂಸಾರಕ್ಕೆ ನಿವ್ವಳ ಆದಾಯ ಎಂಟು ಸಾವಿರ ರೂಪಾಯಿ. ರಾಮಜಿಭಾಯಿ ಸಂತೋಷದಿಂದ ನನ್ನ ಸಂಸಾರ ನಡೆಸಲು ಇಷ್ಟು ಸಾಕು ಅನ್ನುತ್ತಾನೆ.

ನಮ್ಮ ವ್ಯಾಪಾರದ ಮಕ್ಕಾದಲ್ಲಿ ಈ ಸಮಸ್ಯೆಯನ್ನು ನಿರೂಪಿಸಿದರೆ ಅದರ ವಿಶ್ಲೇಷಣೆ ನಡೆಯುವುದು ಈ ರೀತಿಯಾಗಿ: ಕುದುರೆಗಳಿಗೆ ಅಲಂಕಾರದ ಜೀನುಗಳನ್ನು ತಯಾರಿಸುವ ಕಾಯಕವನ್ನು ಸನ್‍ಸೆಟ್ [ಅಂದರೆ ಹೆಚ್ಚು ಭವಿಷ್ಯವಿಲ್ಲದ ಸೂರ್ಯಾಸ್ತದತ್ತ ಹೋಗುತ್ತಿರುವ] ಕಾಯಕ ಎನ್ನಬಹುದು. ಅದಕ್ಕೆ ಕಾರಣಗಳನ್ನು ಅಂಕಿ ಸಂಖ್ಯೆಗಳೊಂದಿಗೆ ನಿರೂಪಿಸಲೂಬಹುದು - ಒಟ್ಟಾರೆ ಕುದುರೆಗಳ ಸಂಖ್ಯೆ - ಅವುಗಳಲ್ಲಿ ರೇಸಿಗೆ, ಸೈನ್ಯಕ್ಕೆ, ಪೊಲೀಸ್ ಪಡೆಗೆ ಬಳಸುತ್ತಿರುವ ಕುದುರೆಗಳ ಸಂಖ್ಯೆ ಎಷ್ಟು - ಆಚೆ ಖಾಸಗಿಯಾಗಿ ಇರುವ ಕುದುರೆಗಳೆಷ್ಟು ಎನ್ನುವುದನ್ನು ಲೆಕ್ಕ ಕಟ್ಟಿಬಿಡಬಹುದು. ಈಗ ರಾಜರೂ ರಾಜ್ಯಗಳೂ, ಕುದುರೆ ಸಾರೋಟುಗಳೂ, ಟಾಂಗಾಗಳೂ ಇಲ್ಲದ್ದರಿಂದ - ಖಾಸಗೀ ಮಾಲೀಕತ್ವದಲ್ಲಿ ಇರುವುದು ಕೆಲವಷ್ಟೇ ಕುದುರೆಗಳೆಂದೂ ನಿರೂಪಿಸಬಹುದು. ಇದರ ಮೇಲೆ ಒಂದು ಕುದುರೆಯ ಜೀನು ಹತ್ತು ವರ್ಷಕಾಲ ಬಾಳುವುದಾದರೆ ರಾಮ್‍ಜಿಭಾಯಿ ಜೀವನವನ್ನು ಇದೇ ರೀತಿ ಬೆಳೆಸಲು ಎಷ್ಟು ಕುದುರೆಗಳು ಆ ಪ್ರಾಂತದಲ್ಲಿರಬೇಕು ಅನ್ನುವುದನ್ನೂ ಲೆಕ್ಕ ಕಟ್ಟಬಹುದು.

ಆದರೆ ಈ ವಿಶ್ಲೇಷಣೆಯನ್ನು ಹಿಡಿದು ಹೊರಟರೆ, ರಾಮಜಿಭಾಯಿ ಜೀನುಗಳನ್ನು ತಯಾರಿಸುವುದನ್ನು ಬಿಟ್ಟು ತಕ್ಷಣವೇ ಡೈವರ್ಸಿಫೈ ಮಾಡಬೇಕು. ಯಾವುದಾದರೂ ಉತ್ತಮ ಡಿಸೈನರ್ ಜೊತೆ ಸೇರಿ, ಹೆಂಗಸರ ಪರ್ಸುಗಳನ್ನು ತಯಾರಿಸಿ ಅದಕ್ಕೆ ಕುಸುರಿ ಕೆಲಸವನ್ನು ಮಾಡಬೇಕು - ತೊಗಲಿನ ವ್ಯಾಪಾರದಲ್ಲಿ ಭವಿಷ್ಯವಿರುವುದೇ ಅಲ್ಲಿ. ಹೀಗೆ ನಾವುಗಳು ಉಪದೇಶ ನೀಡಲು ಸಾಧ್ಯ.

ಆದರೆ ರಾಮಜಿಭಾಯಿಗೆ ಇದು ಯಾವುದೂ ಬೇಕಿಲ್ಲ. ತಿಂಗಳಿಗೊಂದು ಜೀನು ತಯಾರಿಸುತ್ತೇನೆ. ಅದು ಮಾರಾಟವಾಗುತ್ತದೆ. ನಾನು ಸಂತೋಷದಿಂದ ಇದ್ದೇನೆ ಅನ್ನುತ್ತಾನೆ. ಆ ಪ್ರಾಂತದಲ್ಲಿ ಒಂದೈವತ್ತು ಕುದುರೆಗಳಿವೆ, ಅವುಗಳನ್ನು ಶೋಕಿಗಾಗಿ ಜನ ಸಾಕಿಕೊಂಡಿದ್ದಾರೆ. ತಾನು ಕುದುರೆಯ ಜೀನುಗಳನ್ನು ಮಾಡುವುದನ್ನು ಜನರು ಬಲ್ಲರು. ಹೀಗಾಗಿ ಜೀನುಗಳಿಗೆಂದೇ ರಾಮಜಿಭಾಯಿಯ ಬಳಿ ಬಂದು ಅದು ತಯಾರಾದ ಕೂಡಲೇ ತೆಗೆದೊಯ್ಯುವ ಗಿರಾಕಿಗಳಿದ್ದಾರೆ. ರಾಮಜಿಭಾಯಿಯ ಪ್ರಕಾರ ತನ್ನ ಕಲೆಗೆ ಸಾಕಷ್ಟು ಗ್ರಾಹಕರೂ, ಬೆಲೆಯೂ, ಮನ್ನಣೆಯೂ, ದೊರೆತಿದೆ. ಹೀಗಾಗಿ ಬೇರೇನನ್ನೂ ಮಾಡಬೇಕೆಂದಾದಲೀ, ತಾನು ಮಾಡುವ ಜೀನುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಹೊರಗೆ ಮಾರಟ ಮಾಡಬೇಕೆಂದಾಗಲೀ ಅವನಿಗನ್ನಿಸುವುದಿಲ್ಲ.


ಬರುವ ಸಂಪಾದನೆಯಲ್ಲಿ ಸಂತೋಷದಿಂದಿರುವ ರಾಮಜಿಭಾಯಿಯ ಸಂತೃಪ್ತಿ ಇನ್ನಷ್ಟು ಜಾಗಗಳಲ್ಲಿ ಇದ್ದರೆ ನಮ್ಮ ದೇಶದ ಸ್ವಯಂಸೇವಾ ಸಂಸ್ಥೆಗಳ ಗತಿಯೇನು ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಎಲ್ಲರೂ ರಾಮಜಿಭಾಯಿಯ ಹಾಗಿದ್ದರೆ ಕುದುರೆಗಳನ್ನು ಸಾಕುವ ಶೊಕಿಯೂ ಇರುವುದಿಲ್ಲ - ಅವುಗಳಿಗೆ ಜೀನುಗಳನ್ನು ಕೊಳ್ಳುವ ಶೋಕಿಯೂ ಇರುವುದಿಲ್ಲವೇನೋ! ಭೂಕಂಪದಿಂದ ಮನೆ ಕಳೆದುಕೊಂಡು, ತನ್ನು ಊರಿನಿಂದ ಈ ಹೊಸದಾಗಿ ನಿರ್ಮಾಣಗೊಂಡ ರುದ್ರಮಾತಾಗೆ ಬಂದು ನೆಲೆಸಿರುವ ರಾಮಜಿಭಾಯಿ ನಮಗೆ ಸಂತೋಷದಿಂದ ಜೀವಿಸುವ ಪಾಠಗಳನ್ನೂ ಸಂತೃಪ್ತಿಯನ್ನೂ ಕಲಿಸುತ್ತಾನೆ. ಅವನ ಸಂತೋಷಕ್ಕಾಗಿ ಅವನು ಎಲ್ಲೂ ಹೋಗಬೇಕಿಲ್ಲ. ತನಗೆ ತಿಳಿದಿರುವ ಕಲೆಯನ್ನು ಅಭ್ಯಸಿಸುತ್ತಾ ಇದ್ದಲ್ಲಿ, ಅವನಿಗವಶ್ಯವಿದ್ದಷ್ಟು ಮಾರುಕಟ್ಟೆ ಅವನನ್ನೇ ಹುಡುಕಿ ಬರುತ್ತದೆ. ತಿಂಗಳಿಗೆ ಹತ್ತು ಸಾವಿರ ರೂಪಾಯಿಯ ವ್ಯಾಪಾರ ನನಗೆ ಸಾಕು ಅನ್ನುವ ತೃಪ್ತಿ ಹೊಂದಿದಾಗ ಸಮಸ್ಯೆಗಳೇ ಕಾಣಿಸುವುದಿಲ್ಲ. ಇಂಥ ಖುಷಿಯ ಜೀವನ ನಡೆಸುತ್ತಿರುವ ತೃಪ್ತರನ್ನು ಉದ್ಧಾರ ಮಾಡುವ ತೆವಲು ನಮಗೆ - ಸ್ವಯಂ ಸೇವಾ ಸಂಸ್ಥೆ, ವಿದ್ಯಾಸಂಸ್ಥೆಗಳಿಗೆ - ಯಾಕೆ ಅನ್ನುವುದೂ ಒಂದು ಆಸಕ್ತಿಕರ ವಿಚಾರವೇ.

ರಾಮಜಿಭಾಯಿ ಹಾಗೂ ಇತರ ಕುಶಲ ಕರ್ಮಿಗಳನ್ನು ಮಾರುಕಟ್ಟೆಗಳೊಂದಿಗೆ ಯಾಕೆ ಸೇರಿಸಬೇಕು ಅನ್ನುವ ಪ್ರಶ್ನೆಯನ್ನು ಆಗಾಗ ನಾವು ಕೇಳಿಕೊಳ್ಳಬೇಕು. ನಾಳೆ ಜೀನುಗಳನ್ನು ತೊಡಿಸಲು ಕುದುರೆಗಳೇ ಇಲ್ಲವಾದಲ್ಲಿ ರಾಮಜಿಭಾಯಿ ಉಪವಾಸ ಸಾಯುವುದಿಲ್ಲ. ಬದಲಿಗೆ ಆ ಕಾಲಕ್ಕೆ ತಕ್ಕ ಯಾವುದಾದರೂ ಚರ್ಮದ ಕೆಲಸವನ್ನು ಕೈಗೊಂಡು ತನ್ನ ಕುಶಲತೆಯಾಧಾರದ ಮೇಲೆಯೇ ಜೀವಿಸಬಲ್ಲ ಶಕ್ತಿ ಅವನಿಗಿದೆ. ಕುದುರೆಗಳಿಲ್ಲದಿದ್ದರೆ ಆ ಪ್ರಾಂತದಲ್ಲಿ ಒಂಟೆಗಳಿವೆ. ಏನೂ ಇಲ್ಲದಿದ್ದಾಗ ಲೂಯಿ ವುಟ್ಟೋನ್ ಜೊತೆ ಸೇರಿ ಹೆಂಗಸರ ಪರ್ಸುಗಳನ್ನೂ ಆತ ಮಾಡಬಲ್ಲನೇನೋ.

ಹಿಂದೊಮ್ಮೆ ಕಂಜರಿ ಗ್ರಾಮದಲ್ಲಿ ಕೆಲಸಮಾಡುವ ಕುಂಬಾರ ದಯಾಭಾಯಿ ಪ್ರಜಾಪತಿಯ ಜೊತೆ ಹರಟುತ್ತಾ ನಾನು ಕೇಳಿದ್ದೆ: "ಇಲ್ಲಿ ನೀನು ಮಾರಾಟ ಮಾಡುವು ಈ ಹುಕ್ಕಾ, ದಿಯಾ, ಮತ್ತು ಮಿಕ್ಕ ಮಡಿಕೆಗಳಿಗೆ ಟೆರ್ರಾಕೋಟಾ ಅನ್ನುವ ಹೆಸರಿಟ್ಟು ಇಲ್ಲಿಂದ ಕೇವಲ ೪೦ ಕಿಲೋಮೀಟರ್ ದೂರದಲ್ಲಿರುವ ಬರೋಡಾದಲ್ಲಿ ಎಷ್ಟಕ್ಕೆ ಮಾರುತ್ತಿದ್ದಾರೆ ಗೊತ್ತಾ?" - ಅದಕ್ಕೆ ದಯಾಭಾಯಿ ಉತ್ತರಿಸಿದ್ದ: "ಗೊತ್ತು. ನಾನು ಇಲ್ಲಿ ಮಾರಾಟ ಮಾಡುವ ಬೆಲೆಗೆ ಮೂರರಷ್ಟು ಬೆಲೆಯನ್ನು ಆತ ಪಡೆಯುತ್ತಾನೆ. ಅದು ವಿದೇಶಕ್ಕೆ ಹೋದರೆ ಇನ್ನೂ ಹೆಚ್ಚು ಹಣ. ಆದರೆ ನಾನು ಕುಂಬಾರ, ನನಗಿರುವ ಸಮಯದಲ್ಲಿ ನಾನು ಮಣ್ಣಿನ ಮೇಲೆ ಕೆಲಸ ಮಾಡಲೋ - ಮಾರುಕಟ್ಟೆ ಅಲೆಯಲೋ? ಹೀಗೆ, ಇಲ್ಲಿ ಕೂತು ನನ್ನ ಜೀವನಕ್ಕೆ ಅಗತ್ಯವೆನ್ನುವ ರೀತಿಯಲ್ಲಿ ನನ್ನ ಶ್ರಮಕ್ಕೆ ಫಲ ಸಿಗುವ ರೀತಿಯಲ್ಲಿ ನಾನು ಬೆಲೆ ಕಟ್ಟುತ್ತೇನೆ. ಈ ಬೆಲೆಗೆ ಯಾರಾದರೂ ಕೊಂಡರೆ ನನ್ನ ಜೀವನ ಸಾಗುತ್ತದೆ. ಆ ನಂತರ ಅವರೇನು ಮಾಡುತ್ತಾರೆ ಅನ್ನುವುದನ್ನು ಯೋಚಿಸುತ್ತಾ ತಲೆ ಕೆಡಿಸಿಕೊಂಡರೆ ನನ್ನ ಕಾಯಕ ಎಲ್ಲಿಗೆ ಹೋಗುತ್ತದೋ ಯೋಚಿಸಿ!"

ಹೀಗೆ ರಾಮಜಿಭಾಯಿ, ದಯಾಭಾಯಿಗಳನ್ನು ಭೇಟಿಯಾದಾಗ - ಮಹಾತ್ಮಾ ಗಾಂಧಿ ಹೇಳಿದ ನೀಡ್ [ಅವಶ್ಯಕತೆ]ಗೂ ಗ್ರೀಡ್ [ದುರಾಸೆ]ಗೂ ಇರುವ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಕಾಣುತ್ತದೆ.


Wednesday, September 9, 2009

ವಾಡಾಗಳ ಅರಗಿನರಮನೆ

ನಿರುನಾ ಗ್ರಾಮದಲ್ಲಿ ಮಾತ್ರವಲ್ಲ ಇಡೀ ಕಛ್ ಪ್ರಾಂತದಲ್ಲೇ ನಿಜಕ್ಕೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಈ ಬಾರಿ ನಾವು ರೋಗನ್ ಕಲೆಯಿಂದ ಮುಂದಕ್ಕೆ ಹೋಗಿ ಮರ ಮತ್ತು ಅರಗಿನ ಕಲಸ ಮಾಡುವ ’ವಾಡಾ’ಬುಡಕಟ್ಟಿನ ಜನಗಳ ಬಗ್ಗೆ ಯೋಚಿಸೋಣ. ವಾಡಾ ಬುಡಕಟ್ಟಿನವರು ಮೂಲಭೂತವಾಗಿ ಅಲೆಮಾರಿಗಳು, ಅರಣ್ಯ ಪ್ರಾಂತದಲ್ಲಿ ತಿರುಗಾಡುತ್ತಿರುವ ಈ ಬುಡಕಟ್ಟಿನ ಜನಾಂಗಕ್ಕೆ ಒಂದೇ ಜಾಗದಲ್ಲಿದ್ದು ಕೆಲಸ ಮಾಡುವುದು ತುಸು ಮುಜುಗರದ ಮಾತೇ. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಮರಗಳ ಬಗೆಗಿನ ಅವರ ಜ್ಞಾನ ಅದ್ಭುತವಾದದ್ದು. ಅವರ ಕರಕುಶಲತೆಯನ್ನು ನೋಡಿಯೇ ನಂಬಬೇಕು. ಆದರೆ ಕಲಾವಿದರಿಗೆ ತಮ್ಮ ಕಲೆಯ ಆಧಾರವಾಗಿಯೇ ಜೀವನ ಹೊರೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಲೋ ಎಂಬಂತೆ ಇವರುಗಳು ಸೈಡ್ ಬಿಜನೆಸ್ ಆಗಿ ಸಾರಾಯಿ ತಯಾರಿಸುವ ಕೆಲಸವನ್ನೂ ಮಾಡುತ್ತಾರೆ.

ವಾಡಾಗಳನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಯತ್ನಗಳು ಅಲ್ಲಲ್ಲಿ ನಡೆದಿವೆಯಾದರೂ ಅವರುಗಳು ಅಸ್ಪೃಷ್ಯರಾಗಿಯೇ ಉಳಿದಿದ್ದಾರೆ. ಹಲವು ವರ್ಷಗಳ ಕೆಳಗೆ ಇವರುಗಳೆಲ್ಲ ಇಸ್ಲಾಂಗೆ ಮತಾಂತರಗೊಂಡರೂ ಅವರ ಅಸ್ಪೃಷ್ಯತೆ ಮುಂದುವರೆದಿದೆ. ಕಛ್ ಪ್ರಾಂತದಲ್ಲಿ ಓಡಾಡಿದ ಪ್ರತಿಯೊಂದು ಜಾಗದಲ್ಲೂ ನಮಗೆ ನೀರು ಮತ್ತು ಚಹಾದ ಸೇವೆಯಿತ್ತಾದರೂ ವಾಡಾಗಳನ್ನು ನೋಡಹೋದಾಗ ಏನೂ ದಕ್ಕಲಿಲ್ಲ. ಅದಕ್ಕೆ ಕಾರಣ: ಅವರು ನೀಡುವುದನ್ನು ನಾವು ನಿರಾಕರಿಸಬಹುದು ಅನ್ನುವ ಅವರ ಭೀತಿ.

ಅಲೆಮಾರಿ ವಾಡಾಗಳು ಕುಶಲ ಕರ್ಮಿಗಳು. ಒಂದು ಕೊಡಲಿ, ಒಂದು ಕೆತ್ತುವ ಪರಿಕರ, ಒಂದಿಷ್ಟು ಅಗಲದ ಸ್ಯಾಂಡ್ ಪೇಪರ್ ಹಾಗೂ ಬಬೂಲ್ ಮರ ಇವುಗಳಷ್ಟೇ ಕೈಯಲ್ಲಿ ಹಿಡಿದು ಆಟಿಕೆಗಳನ್ನೂ, ಲಟ್ಟಣಿಗೆಯನ್ನೂ, ಮರದ ಚಮಚಾ, ಸ್ಪಾಟುಲಾಗಳನ್ನು ಐದೇ ನಿಮಿಷದಲ್ಲಿ ಮಾಡಿ ತೋರಿಸಬಲ್ಲರು. ಎರಡು ಮರದ ತುಕಡಿಗಳಿಗೆ ಅಂಚಿನಲ್ಲಿ ಚೂಪಾದ ಮೊಳೆಯಾಕಾರದ ಅಂಚುಗಳನ್ನು ಮಾಡಿ ಎರಡೂ ಚೂಪಾದ ಅಂಚಿನ ನಡುವೆ ಒಂದು ಮರದ ಚೂರನ್ನು ಸಿಗಿಸಿ ಒಂದು ಪ್ಲಾಸ್ಟಿಕ್ ಹುರಿದಾರ ಸುತ್ತಿ ಅದನ್ನು ತಿರುಗಿಸುತ್ತಾ, ಚೂಪಾದ ಒಂದು ಕಬ್ಬಿಣದ ಪರಿಕರವನ್ನು ಹಿಡಿದು ಆ ಮರದ ತುಂಡನ್ನು ಗುಂಡಾಗಿ ಕೆತ್ತಿಡಬಲ್ಲರು. ಅದಕ್ಕೆ ಒಂದಿಷ್ಟು ಸ್ಯಾಂಡ್ ಪೇಪರ್ ತಿಕ್ಕಿದರೆ ಲೇಥಿನ ಮೇಲೆ ಯಂತ್ರದಿಂದ ಮಾಡಿದರೆ ಬರುವಷ್ಟೇ ಉತ್ತಮ ಫಿನಿಶ್ ಬರುತ್ತದೆ. ಆ ಗುಂಡು ಹಿಡಿಕೆಯ ಮೇಲೆ ಭಿನ್ನ ಬಣ್ಣಗಳಿಂದ ರಂಗಿಸಿದ ಅರಗಿನ ಚೂರುಗಳಿಂದ ಬಣ್ಣ ಲೇಪಿಸಿ ಒಂದು ಬಟ್ಟೆಯನ್ನು ಹಿಡಿದು ಮತ್ತೆ ಆ ಚೂಪಾದ ಅಂಚಿನ ನಡುವೆ ಇರುವ ಮರದ ತುಂಡನ್ನು ತಿರುಗಿಸುತ್ತಾ - ವೇಗವನ್ನೂ ಬಟ್ಟೆ ಒತ್ತುವ ತೀವ್ರತೆಯನ್ನೂ ಬದಲಾಯಿಸುತ್ತಾ ಹೋದರೆ ಲಟ್ಟಣಿಗೆಯ ಮೇಲೊಂದು ಅದ್ಭುತವಾದ ಡಿಜೈನು ಬರುತ್ತದೆ. ಬ್ರಶ್ ಹಿಡಿದು ಗಂಟೆಗಟ್ಟಲೆ ಪೈಂಟ್ ಮಾಡಿರಬಹುದು ಅನ್ನಿಸುವ ಈ ಕಲಾಕೃತಿಯನ್ನು ಹಲವು ನಿಮಿಷಗಳಲ್ಲಿ ಮಾಡಿ ನಿಮ್ಮ ಮುಂದಿಡುವ ಕುಶಲತೆಯನ್ನು ಈ ವಾಡಾಗಳು ಹೊಂದಿದ್ದಾರೆ.

ನಿರುನಾದಲ್ಲಿ ಈ ಅರಗಿನ ಕೆಲಸ ಮಾಡುವ ವಾಡಾಗಳ ಸಂಸಾರಗಳ ಸಂಖ್ಯೆ ೧೦, ಅವರುಗಳಲ್ಲಿ ನಾಲ್ಕು ಮನೆಗಳು ಅರಗಿನ ಕಲೆಯ ವ್ಯಾಪಾರ ಮಾಡುತ್ತಿದ್ದಾರೆ. ಎಲ್ಲಾದರೂ ಕಛ್ ಕಲೆಗಳ ಪ್ರದರ್ಶನವಾದರೆ ಈ ಅರಗಿನ ಕಲಾಕೃತಿಗಳನ್ನು ಒಯ್ದು ಮಾರಾಟ ಮಾಡಿಬರುತ್ತಾರೆ. ನಿರುನಾಗೆ ಬರುವ ಒಂದೋ ಎರಡೋ ಪ್ರವಾಸಿಗಳಿಗೆ ಮಾರುತ್ತಾರೆ. ಈ ಕಲೆಯ ವಸ್ತುಗಳನ್ನು ಜೋಪಾನವಾಗಿಡುವುದೂ ಕಷ್ಟವೇ. ಏನಾದರೂ ತಗುಲಿ ಗೆರೆ ಬಿದ್ದಲ್ಲಿ ಡಿಸೈನನ್ನು ಸರಿಮಾಡಲಾಗುವುದಿಲ್ಲ. ಅಷ್ಟೇ ಅಲ್ಲ, ಅದು ಹಳೆತಾದಂತೆ ಕಂಡು ಅದಕ್ಕೆ ಯಾವ ಬೆಲೆಯೂ ಗಿಟ್ಟುವುದಿಲ್ಲ. ಮೇಲಾಗಿ ಈ ಲಟ್ಟಣಿಗೆ - ಮರದ ಚಮಚಾಗಳನ್ನು ದಿನನಿತ್ಯದ ಉಪಯೋಗಕ್ಕೆ ಹಾಕಿಕೊಳ್ಳಬಹುದಾದರೂ, ಅದನ್ನು ಕೊಂಡವರು ಅದರ ಮೇಲಿರುವ ಚಿತ್ತಾರದಿಂದಾಗಿ ಹೆಚ್ಚಾಗಿ ಅವುಗಳನ್ನು ಪ್ರದರ್ಶಿಸುವುದೇ ಹೆಚ್ಚು.

ವಾಡಾಗಳ ಜೊತೆ ಕೆಲಸ ಮಾಡಬೇಕೆಂದು ಹೊರಟರೆ ಯಾವರೀತಿಯಿಂದಾಗಿ ಅವರಿಗೆ ಸಹಾಯ ಮಾಡಬಹುದು? ಈ ದಿನದ ತಂತ್ರಜ್ಞಾನದ ಸಹಾಯದಿಂದಾಗಿ ಅವರ ಆರ್ಥಿಕ ಪರಿಸ್ಥಿತಿಯನ್ನಾಗಲೀ ಸಾಮಾಜಿಕ ಸ್ಥಿತಿಯನ್ನಾಗಲೀ ಉತ್ತಮಗೊಳಿಸುವುದು ಸಾಧ್ಯವೇ? ಸಾಧುವೇ? ಈ ಪ್ರಶ್ನೆಗಳನ್ನು ಸ್ವಯಂಸೇವಾ ಸಂಸ್ಥೆಗಳು ಎದುರಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಅವರಿಗೆ ಬೇಡದ ’ವಿಕಾಸ’ ಉತ್ತಮಿಕೆಯನ್ನು ಅವರ ಮೇಲೆ ಹೇರುವುದು ಎಷ್ಟು ಸಮಂಜಸ - ಹೊರಗಿನ ಸಂಸ್ಥೆ/ವ್ಯಕ್ತಿಗಳು ಅವರ ಜೀವನ ಶೈಲಿಯಲ್ಲಿ ಕೈ ಹಾಕುವುದು ಎಷ್ಟು ಸಮಂಜಸ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಲೇ ಇರಬಹುದಾದ ಸಾಧ್ಯತೆಗಲನ್ನು ಪರಿಶೀಲಿಸಬೇಕಾಗುತ್ತದೆ.

ಉದಾಹರಣೆಗೆ ಅಲ್ಲೇ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಯ ಇಂಜಿನಿಯರ್ ಒಬ್ಬ ಅವರುಗಳು ಉಪಯೋಗಿಸುವ ಮರದ ಚೂರುಗಳ ಜಾಗಕ್ಕೆ ಒಂದು ಕೈಯಲ್ಲಿ ನಡೆಸಬಹುದಾದ ಲೇಥ್ ಥರದ ಒಂದು ಚೌಕಟ್ಟನ್ನು ರೂಪಿಸಿದ್ದಾನೆ. ಆ ಚೌಕಟ್ಟನ್ನು ಉಪಯೋಗಿಸಿದರರೆ ಮರದ ಚೂರುಗಳನ್ನು ನೆಲಕ್ಕೆ ಕುಟ್ಟುವ ಹಾಗೂ ಅಂಚುಗಳ ನಡುವೆ ಮರದ ದಿಮ್ಮಿಯನ್ನು ಕೂಡಿಸುವ ಕೆಲಸ ಸರಳವಾಗುತ್ತದೆ. ಒಂದಿಷ್ಟು ಸಮಯ ಉಳಿಯುತ್ತದೆ. ವಾಡಾಗಳ ಕುಶಲತೆ ಅರಗಿನ ಬಣ್ಣ ಲೇಪಿಸುವುದರಲ್ಲಿದ್ದರೆ ಮತ್ತೆ ಈ ಹೆರೆಯುವ, ಕೆರೆಯುವ, ಹ್ಯಾಂಡಲ್ಲನ್ನು ಗುಂಡಾಗಿಸುವ ಕೆಲಸವನ್ನು ಯಂತ್ರದಲ್ಲಿಯೇ ಯಾಕೆ ಮಾಡಬಾರದು ಅನ್ನುವ ಪ್ರಶ್ನೆಯನ್ನೂ ಹೊರಗಿನವರು ಕೇಳಬಹುದು. ಆದರೆ ಅಂಥಹ ಸಲಹೆಯನ್ನು ವಾಡಾಗಳು ಒಪ್ಪಿಲ್ಲವಂತೆ.

ಅವರುಗಳ ಕಲೆಯನ್ನು ಅವರೇ ಗ್ರಹಿಸುವ ರೀತಿಗೂ, ಹೊರಗಿನವರು ಗ್ರಹಿಸುವ ರೀತಿಗೂ ಇರುವ ವ್ಯತ್ಯಾಸದಿಂದಾಗಿ ಹೀಗಾಗುತ್ತದೆಯೇನೋ. ಅವರುಗಳಿಗೆ ಅರಗಿನ ರಂಗನ್ನು ಅಂಟಿಸುವುದು ಎಷ್ಟು ಮುಖ್ಯವಾದ ಕಲೆಗಾರಿಕೆಯೋ, ಇರುವ ಕೊಡಲಿ, ಹಾಗೂ ಚೂಪಾದ ಹೆರೆಯುವ ಯಂತ್ರದಲ್ಲಿ ಅದ್ಭುತವಾದ ನಾಜೂಕುತನವನ್ನು ತರಿಸುವುದೂ ಅಷ್ಟೇ ಕಲೆಗಾರಿಕೆಯ ವಿಷಯ. ಹೊರಗಿನವರಾದ ನಮಗೆ ಯಂತ್ರದಲ್ಲಿ ಆ ಮರವನ್ನು ಆ ಆಕಾರಕ್ಕೆ ತರಲು ಸಾಧ್ಯ ಎನ್ನುವುದು ಗೊತ್ತು. ಆದರೆ ಅದರ ಮೇಲಿನ ಅರಗಿನ ಚಿತ್ತಾರವನ್ನು ನಾವು ಯಂತ್ರದಿಂದ ತರಿಸಲು ಸಾಧ್ಯವಿಲ್ಲ ಅನ್ನುವುದೂ ನಮಗೆ ಮನವರಿಕೆಯಾಗಿದೆ. ಹೀಗಾಗಿ, ಯಂತ್ರದಿಂದಾಗುವ ಕೆಲಸವನ್ನು ಅಲ್ಲಿ ಮಾಡಿಸಿ ಕುಶಲತೆಗೆ ಮಾತ್ರ ವಾಡಾಗಳು ತಮ್ಮ ಸಮಯವನ್ನು ಕಳೆಯಬೇಕೆಂದು ನಮ್ಮಂಥಹ ಹೊರಗಿನವರು ಹೇಳಬಹುದು. ಆದರೆ ಇಲ್ಲಿರುವ ಪ್ರಶ್ನೆ ಅವರು ಮಾರಟ ಮಾಡುವ ವಸ್ತುವಿಗೆ ಸಂಬಂಧಿಸಿದ್ದಲ್ಲ. ಅದು ಅ ವಸ್ತು ತಯಾರಾಗುವ ಪ್ರಕ್ರಿಯೆಗೆ ಸಂಬಂಧಿಸಿದ್ದು. ಇದೇ ವಾದವನ್ನು ನಾವು ಜವಳಿಯ ಕ್ಷೇತ್ರಕ್ಕೆ ಅನ್ವಯಿಸಿದರೆ, ನೇಯ್ಗೆಯನ್ನು ಮಿಲ್ಲಿನಲ್ಲಿ ಮಾಡಿಸಿ, ಅದರ ಮೇಲಿನ ಕಸೂತಿಗೆ ಮಾತ್ರ ಜನರ ಕುಶಲತೆಯನ್ನು ಉಪಯೋಗಿಸಬೇಕು ಎಂದು ವಾದಿಸಿದಂತೆ ಆಗುತ್ತದೆ. ಆದರೂ ನೇಕಾರರಿಗೆ ಕೈಮಗ್ಗ ಕೇವಲ ಬಟ್ಟೆ ನೇಯುವ ರೀತಿ ಮಾತ್ರವಾಗಿರದೇ ಅದು ಜೀವನವನ್ನು ಜೀವಿಸುವ ವಿಧಾನವೇ ಆಗಿದೆ ಅನ್ನುವುದನ್ನು ಮನಗಂಡರೆ, ವಾಡಾಗಳು ಯಂತ್ರದಿಂದ ಮೂರುನಿಮಿಷದಲ್ಲಾಗಬಹುದಾದ ಕೆಲಸಕ್ಕೆ ತಮ್ಮ ಕೈಯಿಂದ ಕೆತ್ತಿ ಅರ್ಧ ಗಂಟೆ ಯಾಕೆ ವ್ಯಯ ಮಾಡುತ್ತಾರೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.

ಅರಗಿನ ರಂಗಿರದ ಮರದ ಕೆತ್ತನೆಯ ಕೆಲಸವನ್ನು ಮಾಡಿ ಕೊಡಿ ಎಂದು ಮಾರುಕಟ್ಟೆಯಲ್ಲಿ ಯಾರೋ ಕೇಳಿದರೆಂದು ಅದನ್ನು ಖುಷಿಯಿಂದ ಮಾಡುವ ಇವರುಗಳು, ಕೆತ್ತನೆಯನ್ನು ಬಿಟ್ಟು ಕೇವಲ ಅರಗಿನ ರಂಗನ್ನು ಹಾಕಿ ಎನ್ನುವುದಕ್ಕೆ ಯಾವರೀತಿಯಲ್ಲಿ ಪ್ರತಿಕ್ರಿಯಿಸಬಹುದು ಅನ್ನುವುದನ್ನು ಊಹಿಸಿಕೊಂಡೇ ಹೊರಗಿನವರು ಅವರಿಗೆ ’ಉತ್ತಮ ಜೀವನ’ದ ಕನಸನ್ನು ’ಮಾರ’ಬೇಕಾಗಿದೆ! ನಮಗೆ ಉತ್ತಮವೆನ್ನಿಸಿದ್ದು ಅವರಿಗೂ ಉತ್ತಮವೆನ್ನಿಸಬೇಕಲ್ಲವೇ!

ಈಗಿರುವ ಅವರ ಕರಕುಶಲ ತಂತ್ರಜ್ಞಾನದಲ್ಲಿ ಕೆಲವು ಮಿತಿಗಳ ಅಂತರ್ಗತವಾಗಿ ಇವರುಗಳು ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುವ ಮರದ ಉದ್ದ ಹೆಚ್ಚಿನಂಶ ಒಂದು-ಒಂದೂವರೆ ಅಡಿಗಿಂತ ಕಡಿಮೆಯಿರುತ್ತದೆ. ಹೆಚ್ಚೆಂದರೆ ಎರಡು ಮೂರು ಅಡಿಯ ದಿಮ್ಮಿಯಲ್ಲಿ ಕೆಲಸ ಮಾಡಿ ಒಂದು ಸ್ಟೂಲಿನ ಕಾಲನ್ನು ಚಿತ್ತಾರಗಳೊಂದಿಗೆ ಅವರು ಮಾಡಿಯಾರು. ಅವರು ಮಾಡುವ ಕೆಲಸ ಹೆಚ್ಚಾಗಿ ಗುಂಡಾಗಿ ಉದ್ದಕ್ಕಿರುತ್ತದೆ. ಈಗ ಅವರನ್ನು ಹೊಸ ಎಥ್ನಿಕ್ ಮನೆಗಳಿಗೆ ಮರದ ಕಂಬಗಳನ್ನು ರೂಪಿಸುವ ಕೆಲಸವನ್ನು ಮಾಡಲು ಒಂದು ಸ್ವಯಂ ಸೇವಾ ಸಂಸ್ಥೆ ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಅವರ ಮಾರುಕಟ್ಟೆ ಉತ್ತಮವಾಗಿ ಅರ್ಥಿಕತೆಯೂ ಉತ್ತಮಗೊಂಡೀತು ಅನ್ನುವುದು ಆ ಸಂಸ್ಥೆಯ ನಂಬುಗೆ. ಆದರೆ ಇದಕ್ಕೆ ವಾಡಾಗಳು ತಮ್ಮ ಕೈಕೆಲಸವನ್ನು ಬಿಟ್ಟು ದೊಡ್ಡ ದಿಮ್ಮಿಗಳನ್ನು ಲೇಥಿನ ಮೂಲಕ ಒಂದು ರೂಪಕ್ಕೆ ಹೆರೆಯಬೇಕು, ಆ ನಂತರ ಲೇಥ್ ನಡೆವ ವೇಗದ ಗತಿಯಲ್ಲಿ ಅರಗಿನ ಬಣ್ಣಗಳನ್ನು ಲೇಪಿಸಬೇಕು. ಇದಕ್ಕೆ ಹೊಸ ಅಭ್ಯಾಸ ಬೇಕಾಗುತ್ತದೆ. ವಾಡಾಗಳು ಈ ತಂತ್ರವನ್ನು ಕಲಿಯಲು ರಾಜಿಯಾಗುತ್ತಾರೆಯೇ? ಈ ತಂತ್ರವನ್ನು ಕಲಿತರೆ ಅವರ ಮಾರುಕಟ್ಟೆ ಉತ್ತಮವಾಗುವುದೇ? ಅಕಸ್ಮಾತ್ ಈ ತಂತ್ರಕ್ಕೆ ಶಾಶ್ವತವಾದ ಮಾರುಕಟ್ಟೆಯಿಲ್ಲವೆಂದಾದರೆ ಅವರುಗಳು ಕರಕುಶಲ ಮರದ ಕೆಲಸಕ್ಕೆ ವಾಪಸ್ಸಾಗಲು ತಯಾರಿರುತ್ತಾರೆಯೇ? ಹೊರಗಿನವರಾದ ನಾವುಗಳು ಇದನ್ನೆಲ್ಲಾ ಯೋಚಿಸಿಯೇ ಹೆಜ್ಜೆ ಮುಂದಿಡಬೇಕಾಗುತ್ತದೆ.

ಮಿಕ್ಕವರ ಜೀವನವನ್ನು ’ಉತ್ತಮ’ಗೊಳಿಸುವ ಕೆಲಸ ಸರಳವಾದದ್ದೇನೂ ಅಲ್ಲ!!