Tuesday, August 25, 2009

ರೋಗನ್ ಕಲೆ, ಎಷ್ಟು ಬೆಲೆ?

ಗುಜರಾತಿನ ಕಛ್ ಪ್ರಾಂತದಲ್ಲಿ ಆದ ೨೦೦೧ರ ಭೂಕಂಪದ ಕಂಪನಗಳು ಈಗ್ಗೆ ಕಡಿಮೆಯಾಗುತ್ತಾ ಬಂದಿದೆಯೇನೋ. ಭೂಕಂಪವಾದ ನಂತರ ವಿಶ್ವದ ವಿವಿಧೆಡೆಗಳಿಂದ ಕಛ್ ಪ್ರಾಂತಕ್ಕೆ ಅನೇಕ ರೀತಿಯ ಅನುದಾನಗಳು ಬಂದುವು. ನಾನಾ ರೀತಿಯ ಸಂಸ್ಥೆಗಳು ಭೂಕಂಪದ ತಕ್ಷಣದ ದಿನಗಳಲ್ಲಿ ಆ ಜಿಲ್ಲೆಗೆ ಬಂದು ಗ್ರಾಮಗಳನ್ನು ದತ್ತು ತೆಗೆದು ಆ ಪ್ರಾಂತದ ಪುನರ್ನಿರ್ಮಾಣಕ್ಕೆ ಕೈಕೈ ಕೂಡಿಸಿದುವು. ಆದರೆ ಎಂಟು ವರ್ಷಗಳ ನಂತರ ಆ ಪ್ರಾಂತದ ಜನ ಹೇಗೆ ಜೀವಿಸುತ್ತಿದ್ದಾರೆ? ಭೂಕಂಪದಿಂದ ತತ್ತರಿಸಿದ ಹಲವು ಸಮುದಾಯಗಳು ಈಗ ಜೀವನ ಹೇಗೆ ನಡೆಸುತ್ತಿವೆ? ಈ ಎಲ್ಲ ಸಹಾಯ ಮತ್ತು ಒಳ್ಳೆಯತನದ ಫಲಿತವಾಗಿ ಏನಾದರೂ ಆಗಿದೆಯೇ ಅನ್ನುವುದು ಕುತೂಹಲದ ಮಾತು.

ಕಛ್ ಜಿಲ್ಲೆಯ, ನಕತ್ರಾಣ ತಾಲೂಕಿನ ನಿರೋನಾ ಗ್ರಾಮದಲ್ಲಿ ಒಂದೇ ಕುಟುಂಬ ’ರೋಗನ್’ ಅನ್ನುವ ಕಲಾಪ್ರಕಾರವನ್ನು ಅಭ್ಯಸಿಸುತ್ತಾ ಬಂದಿದೆ. ರೋಗನ್ ಕಲೆ ಅಪರೂಪದ್ದು, ಹಾಗೂ ಭೂಕಂಪ ಆಗದಿದ್ದರೆ ಬಹುಶಃ ಅದು ನಮಗೆ ದೃಷ್ಟಿಗೆ ಬೀಳುತ್ತಿರಲಿಲ್ಲವೇನೋ. ಮೊದಲಿಗೆ ಹರಳೆಣ್ಣೆಗೆ ಹಲವು ಸಹಜ-ಶಿಲಾವರ್ಣವನ್ನು ಸೇರಿಸಿ ಎರಡುದಿನಗಳ ಕಾಲ ಭಿನ್ನ ಭಿನ್ನ ರೀತಿಯಲ್ಲಿ ಕುದಿಸಿ ಬಣ್ಣದ ದಪ್ಪ ಲೋಳೆಯನ್ನು ತಯಾರಿಸಬೇಕು. ಆ ಲೋಳೆಯನ್ನು ಅಂಗೈಯಲ್ಲಿ ಬಳಿದು ಆ ಬೊಟ್ಟಿನಿಂದ ಒಂದು ಸ್ಟೀಲಿನ ಕಡ್ಡಿಯಲ್ಲಿ - ಒಂದು ತುಂಡು ಬಟ್ಟೆಯ ಮೇಲೆ - ಒಂದು ಬದಿಗೆ ಮಾತ್ರ ಅದ್ಭುತ ಚಿತ್ರ ಬರುವಂತೆ ಕುಸುರಿಕಲೆ ಮಾಡಬೇಕು. ನಂತರ ಆ ಬಟ್ಟೆಯನ್ನು ಅರ್ಧಕ್ಕೆ ಮಡಚಿ ಎದುರಿನ ಬದಿಗೂ ಇದೇ ಕುಸುರಿ ಕಲೆಯ ನಕಲು ಬರುವಂತೆ ಮಾಡಬೇಕು. ನಾಲ್ಕಾರು ಘಂಟೆ ಬಿಸಿಲಲ್ಲಿ ಒಣಗಿಸಿದಾಗ ಒಂದು ಘಟ್ಟದ ಕೆಲಸ ಮುಗಿಯುತ್ತದೆ. ಈ ಅದ್ಭುತ ಕಲೆಯನ್ನು ಖತ್ರಿ-ದೌಡ್ ಸಂಸಾರದವರು [ಅಬ್ದುಲ್ ಗಫೂರ್, ಆರಬ್ ಹಾಶಮ್, ಸುಮರ್] ಮುಂದುವರೆಸುತ್ತಾ ಬಂದಿದ್ದಾರೆ.

ಇದರಲ್ಲಿ ಇರುವ ಕ್ಲಿಷ್ಟತೆ ನಮಗೆ ಅರ್ಥವಾಗುವುದು ಅಲ್ಲಿರುವ ಕಲೆಯ ವಿವರಗಳನ್ನು ಹಾಗೂ ಅವುಗಳ ವರ್ಣಗಳನ್ನು ಗಮನಿಸುವುದರಿಂದ. ಒಂದು ಬಾರಿಗೆ ಒಂದೇ ವರ್ಣವನ್ನು ಲೇಪಿಸಬೇಕು. ಅದು ಒಣಗಿದ ನಂತರ ಎರಡನೆಯ ವರ್ಣ. ಹಾಗೂ ಎರಡು ಬಾರಿಯೂ ಬಟ್ಟೆ ಮಡಚುವಾಗ ಏರುಪೇರಾಗದಂತೆ ಮಡಚಬೇಕು. ಎರಡು ವರ್ಣಗಳನ್ನು ತುಂಬಿದ ನಂತರ ಈ ಮಡಚುವ ಪ್ರಕ್ರಿಯೆ ಕಷ್ಟದ್ದಾಗುತ್ತದಾದ್ದರಿಂದ, ಮಿಕ್ಕ ವರ್ಣಗಳನ್ನೂ ವಿವರಗಳನ್ನೂ ನೇರವಾಗಿ ತುಂಬಿ ಒಣಗಿಸಬೇಕು. ಇಂಥದೊಂದು ಕಲಾಕೃತಿಯನ್ನು ತಯಾರಿಸಲು ನಾಲ್ಕು ದಿನಗಳಿಂದ ಹಲವು ತಿಂಗಳುಗಳ ವರೆಗಿನ ಕಾಲ ಹಿಡಿಯಬಹುದು!

ಭೂಕಂಪಕ್ಕೆ ಮುನ್ನವೂ ಬಹುಶಃ ಖತ್ರಿ-ದೌಡ್ ಸಂಸಾರ ಈ ಕಲೆಯನ್ನೇ ಆಧಾರವಾಗಿರಿಸಿಕೊಂಡು ಜೀವಿಸಿರಬೇಕು. ಅಬ್ದುಲ್ ಗಫೂರ್‌ಗೆ ೧೯೯೭ರಲ್ಲಿ ರಾಷ್ಟ್ರೀಯ ಪುರಸ್ಕಾರ ಬಂದಿತ್ತು. ಅರಬ್ ಹಾಶಮ್‍ಗೆ ಇನ್ನೂಮೊದಲು ೧೯೯೧ರಲ್ಲಿ ರಾಜ್ಯಪ್ರಶಸ್ತಿ ಬಂದಿತ್ತು. ಸುಮರ್ ದೌಡ್‌ಗೆ ಮಾತ್ರ ಭೂಕಂಪದ ನಂತರ ೨೦೦೩ರಲ್ಲಿ ರಾಜ್ಯ ಪ್ರಶಸ್ತಿ ಬಂದಿದೆ. ಮೂರೂ ಜನರನ್ನು ಸರಕಾರ ಹಾಗೂ ಮಾರುಕಟ್ಟೆ ಗುರುತಿಸಿದೆ. ಇದು ಸಾಲದ್ದಕ್ಕೆ ಈ ಕಲೆ ನಿರ್ನಾಮವಾಗಬಾರದೆಂದು ಬಯಸುವ ಹಿತೈಷಿಗಳು ರೋಗನ್ ಕಲಾಕೃತಿಗಳನ್ನು ಕೊಂಡು ಅದಕ್ಕೆ ಮಾರುಕಟ್ಟೆಯನ್ನೊದಗಿಸುತ್ತಾ ಬಂದಿದ್ದಾರೆ.

ಈ ರೀತಿಯ ಕಲಾವಿದರಿಗೆ ಹೊರಗಿನ ಸಹಾಯ - ಆ ಕಲೆ ಅಳಿಯದಂತೆ ಉಳಿಸುವ ಕೆಲಸವನ್ನು ಯಾವರೀತಿಯಲ್ಲಿ ಮಾಡಬಹುದು? ಮಿಕ್ಕೆಲ್ಲ ರೀತಿಯ ವಿಕಾಸ ಕಾರ್ಯದಲ್ಲಿ ಉತ್ತಮ ತಂತ್ರಜ್ಞಾನವನ್ನು ಉತ್ತಮ ಡಿಸೈನುಗಳನ್ನು ಅಳವಡಿಸಿ ಅವುಗಳನ್ನು ಆಧುನಿಕಗೊಳಿಸಬಹುದು. ಆದರೆ ಒಂದು ಕಲಾಪ್ರಕಾರವನ್ನು ಆಧುನಿಕಗೊಳಿಸಲು ಸಾಧ್ಯವೇ? ಈ ಪ್ರಶ್ನೆ ಎದ್ದಾಗ ಹೊರಗಿನಿಂದ ಆಗಬಹುದಾದ ಸಹಾಯ ಒಂದೇ - ಈ ಇಂಥ ಕಲೆಗೆ ಒಂದು ಮಾರುಕಟ್ಟೆ ಮತ್ತು ಅದರದೇ ವ್ಯಕ್ತಿತ್ವ ಮತ್ತು ಪ್ರತ್ಯೇಕತೆಯನ್ನು ಗುರುತಿಸಬಲ್ಲ ಸ್ಥಾನಮಾನಗಳನ್ನು ಒದಗಿಸುವುದರಿಂದ ಮಾತ್ರ ಒಂದು ರೀತಿಯ ಸಹಾಯ ಮಾಡಬಹುದು. ಕಛ್‍ನಲ್ಲಿ ಆಗಿರುವುದೂ ಅದೇ. ರೋಗನ್ ಕಲೆಗೆ ಒಂದು ಖ್ಯಾತಿ ಭೂಕಂಪದ ನಂತರ ಬಂದಿದೆ. ಅಲ್ಲಿಗೆ ಬಂದಿರುವ ಅನೇಕ ಸಂಸ್ಥೆಗಳು, ಹಾಗೂ ಅನೇಕ ವಿದೇಶೀ ಪ್ರವಾಸಿಗಳ ಆಗಮನದ ಫಲವಾಗಿ ಖತ್ರಿ-ದೌಡ್ ಸಂಸಾರಕ್ಕೆ ಒಳ್ಳೆಯ ಮಾರುಕಟ್ಟೆ ದೊರೆತಿದೆ. ಈಚೆಗೆ ಇಫ್ಕೋ ಸಂಸ್ಥೆ ವರ್ಷಕ್ಕೆ ಇಂತಿಷ್ಟು ಕಲಾಕೃತಿಗಳನ್ನು ಕೊಳ್ಳುವ ಭರವಸೆ ನೀಡಿದೆಯಂತೆ. ಹೀಗಾಗಿ ಈ ಕಲೆಯನ್ನು ನಶಿಸುವುದರಿಂದ ಬಚಾವು ಮಾಡುವುದರಲ್ಲಿ, ಇದಕ್ಕೆ ಒಂದು ವ್ಯಕ್ತಿತ್ವವನ್ನು ನೀಡುವುದರಲ್ಲಿ ಭೂಕಂಪದ್ದೂ ಒಂದು ಪಾತ್ರವಿದೆ!

ಆದರೆ ಭೂಕಂಪದ ನಂತರದ ಅನುಕಂಪ ಮತ್ತು ’ಸಹಾಯ’ ಎಷ್ಟುದಿನಗಳ ಕಾಲ ಉಳಿಯುವುದು ಅನ್ನುವುದು ಯೋಚಿಸಬೇಕಾದ ಮಾತು. ಹಾಗೆ ನೋಡಿದರೆ ೨೦೦೧ರ ನಂತರದ ಕಛ್‍ನ ಅರ್ಥವ್ಯವಸ್ಥೆ ’ನಿಜ’ವಾದ ಅರ್ಥವ್ಯವಸ್ಥೆಯೇ ಅಲ್ಲ. ಕಛ್ ಪ್ರಾಂತ ಕಲೆಗಾರಿಕೆಗೆ ಪ್ರಖ್ಯಾತಿಯನ್ನು ಪಡೆದಿತ್ತು. ಅಲ್ಲಿ ಮನೆ ಕಟ್ಟಿದರೆ ಗೋಡೆಯ ಮೇಲೆ ಕುಸುರಿ ಕೆಲಸ, ದೇವಸ್ಥಾನಗಳ ಮೇಲೆ ಎಲ್ಲಿಗಿಂತಲೂ ಹೆಚ್ಚು ರಂಗು, ಬಟ್ಟೆಗಳ ಬಣ್ಣಗಳೂ ಭವ್ಯವಾದವೇ, ಕಡೆಗೆ ಒಂದು ಕುರ್ಚಿ ಮೇಜನ್ನು ಮಾಡಿದರೂ ಅದರ ಮೇಲೆ ನಾಲ್ಕಾರು ಚಿತ್ತಾರಗಳು. ಹೀಗಾಗಿ ಭೂಕಂಪದ ನಂತರ ಆ ಪ್ರಾಂತದ ಪುನರ್ನಿಮಾಣಕ್ಕಾಗಿ ಬಂದವರೆಲ್ಲಾ, ಅಲ್ಲಿಯ ಕಲೆಗೆ ಒಂದು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ನಿಸಿದವರೇ. ಒಳ್ಳೆಯ-ಕೆಟ್ಟ ಸಾಧಾರಣ ಅನ್ನುವ ಪ್ರಮೇಯವಿಲ್ಲದೆಯೇ ಎಲ್ಲ ಕಲಾಪ್ರಕಾರಗಳಿಗೂ ಇದ್ದಕ್ಕಿದ್ದಂತೆ ಒಂದು ಮಾರುಕಟ್ಟೆ ಉದ್ಭವವಾಯಿತು. ಈಗ ಎಂಟು ವರ್ಷಗಳ ನಂತರ, ಪುನರ್ನಿರ್ಮಾಣಕ್ಕಾಗಿ ಬಂದ್ದಿದ ಎಲ್ಲ ಸಹಾಯಕ ಸಂಸ್ಥೆಗಳೂ [ಏಡ್ ಏಜೆನ್ಸಿ] ಅಲ್ಲಿಂದ ಒಂದೊಂದಾಗಿ, ಕ್ರಮಕ್ರಮೇಣ ಹೊರಬೀಳುವ ಪ್ರಕ್ರಿಯೆಯಲ್ಲಿರುವಾಗ ಈ ಸ್ಥಳೀಯ ಕಲೆಗೆ ಮಾರುಕಟ್ಟೆಯೊಂದಿಗಿದ್ದ ಕೊಂಡಿ ಹೇಗೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

ಖತ್ರಿ-ದೌಡ್ ಸಂಸಾರ ಭೂಕಂಪದ ನಂತರ ತೆರೆದುಕೊಂಡ ಮಾರುಕಟ್ಟೆಯ ಲಾಭವನ್ನು ಪಡೆದಿದ್ದಾರೆ. ಇಂದು ಅವರ ರೋಗನ್ ಕಲಾಕೃತಿಯ ಬೆಲೆ ರೂ.೨,೦೦೦ದಿಂದ ಪ್ರಾರಂಭವಾಗಿ ಎರಡೂವರೆ ಲಕ್ಷದ ವರೆಗೆ ಮುಟ್ಟಿದೆ. ರೋಗನ್ ಕಲೆಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳೂ ಬಂದು ಈಗ ಈ ಸಂಸಾರಕ್ಕೆ ಟೂರಿಸ್ಟ್ ಮಾರುಕಟ್ಟೆ ದೊರೆತಿದೆ. ಈ ಮಾರುಕಟ್ಟೆಯ ಫಲಿತವೂ ಗಮ್ಮತ್ತಿನದ್ದು. ಅವರನ್ನು ನೋಡಲು ನಾನು ನಿರೋನಾಗೆ ಹೋದಾಗ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳನ್ನೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನೂ ತೋರಿಸಿದ ಆ ಸಂಸಾರ, ತಮ್ಮ ಕಲೆಯ ಬಗ್ಗೆಗೂ ಮಾತನಾಡಿತು. ಆದರೆ ೨೦೦೫ರಲ್ಲಿ ಬಂದ ಒಂದು ಇಂಡಿಯಾ ಟುಡೇ ಲೇಖನದಲ್ಲಿ ಅವರ ಕೈಯಿಂದ ಒಂದು ತಿದ್ದುಪಡಿ ಕಂಡಿತ್ತು - ಲೇಖನದ ಒಂದು ಭಾಗ ಇಂತಿದೆ:

"ಹೂವಿನ ಚಿತ್ತಾರಗಳು, ಪ್ರಾಣಿಗಳು ಹಾಗೂ ಹಳೆಯ ಶಾಸ್ತ್ರೀಯ ಕಟ್ಟಡಗಳು ಈ ಕಲಾವಿದರ ಪ್ರಮುಖ ಆಸಕ್ತಿಯ ಪ್ರತೀಕಗಳು. ಒಂದು ಚಿತ್ರ ಮುಗಿಸಲು ಮೂರು ತಿಂಗಳ ಕಾಲವೂ ಹಿಡಿಯಬಹುದು. ರೋಗನ್ ಕಲೆಯ ಚಿತ್ರಕ್ಕೆ ರೂ.೮,೦೦೦ದಿಂದ ರೂ.೧೨,೦೦೦ರದ ವರೆಗೆ ಬೆಲೆ ಬರಬಹುದು. ಇತ್ತೀಚೆಗೆ ಮಾರಾಟವಾದ ’ಜೀವನ ವೃಕ್ಷ’ಕ್ಕೆ ರೂ.೧೮,೦೦೦ರದ ಬೆಲೆ ಬಂತು."

ಲೇಖನವೇನೋ ಚೆನ್ನಾಗಿಯೇ ಇತ್ತು. ಆದರೆ ಖತ್ರಿ-ದೌಡ್ ಸಂಸಾರದಲ್ಲಿ ಇದ್ದ ಇಂಡಿಯಾ ಟುಡೇದ ಪ್ರತಿಯಲ್ಲಿ ೧೮,೦೦೦ ವನ್ನು ಪೂರ್ತಿಯಾಗಿ ಕರ್ರಗಾಗಿಸಿ ಆ ಜಾಗದಲ್ಲಿ ರೂ.೧,೫೦,೦೦೦ ಎಂದು ಕೈಯಲ್ಲಿ ಬರೆಯಲಾಗಿತ್ತು. ಹೆಚ್ಚು ಹೆಚ್ಚು ಗ್ರಾಹಕರು ಬರುತ್ತಿದ್ದಂತೆ ಈ ಅಪರೂಪದ ಕಲೆಯ ಜಟಿಲತೆಯೂ ಹೆಚ್ಚಾಗುತ್ತಾ ಹೋಗಿರಬಹುದು ಅದಕ್ಕೆ ಮಾರುಕಟ್ಟೆಯೂ ಜಾಸ್ತಿಯಾಗುತ್ತಾ ಹೋಗಿರಬಹುದು. ಆದರೆ ಕೆಲಸ ಮಾಡುತ್ತಿರುವವರು ಈ ಖತ್ರಿ-ದೌಡ್ ಸಂಸಾರದವರು ಮಾತ್ರ. ಪುನರ್ನಿರ್ಮಾಣದ ಫಲಿತ ಇಲ್ಲಿನ ಜನರಿಗೆ ತಲುಪಿದೆಯೇ ಅನ್ನುವ ಪ್ರಶ್ನೆಗೆ ಇದು ಒಂದು ಒಳ್ಳೆಯ ಉದಾಹರಣೆ ಅನ್ನಬಹುದು.

ಆದರೆ ನನ್ನ ಯೋಚನೆ ಇಷ್ಟೇ. ಈ ಎಂಟು ವರ್ಷಗಳಲ್ಲಿ ಇದ್ದ ಸಹಾಯಕ ಸಂಸ್ಥೆಗಳು ಇಲ್ಲಿಂದ ಹೊರಟ ಮೇಲೆ, ಪ್ರವಾಸಿಗಳ ಸಂಖ್ಯೆ ಕಡಿಮೆಯಾದ ಮೇಲೆ, ಇನ್ನೈದು ವರ್ಷಗಳ ನಂತರ ಖತ್ರಿ-ದೌಡ್ ಸಂಸಾರದ ಕೆಲಸಕ್ಕೆ ಇಷ್ಟೇ ಬೆಲೆ ದಕ್ಕಬಹುದೇ? ಅದೇ ರೀತಿಯ ಬೆಲೆ ದಕ್ಕುವುದಾದರೆ ಹೆಚ್ಚು ಜನ ಈ ರೋಗನ್ ಕಲೆಯನ್ನು ಅಭ್ಯಾಸ ಮಾಡಬಹುದೇ? ಅಥವಾ ಮಾರುಕಟ್ಟೆ ಕುಸಿದು ಈ ಕಲೆ ಕ್ಷೀಣಿಸಬಹುದೇ? ಇನ್ನೂ ಹೊರಗಿನವರ ಆಸಕ್ತಿಯಿರುವ ಈ ಸಮಯದಲ್ಲಿ ಇದಕ್ಕೆ ಸುಲಭ ಉತ್ತರವಿಲ್ಲ. ಆದರೆ ಪುನರ್ನಿರ್ಮಣದ ಅತಿವೃಷ್ಟಿಯನಂತರ ಕಛ್ ಈಗ ಸಮಾನ್ಯ ಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ರೋಗನ್ ಕಲೆಯ ಭವಿಷ್ಯ ಹಾಗೂ ಖತ್ರಿ-ದೌಡ್ ಸಂಸಾರದ ಕಲಾನೈಪುಣ್ಯ ಮತ್ತು ಅದರಿಂದ ಬರುತ್ತಿರುವ ಹಣದ ಪರಿಮಾಣವನ್ನು ನಾವು ಒಂದೈದು ವರ್ಷಗಳ ನಂತರ ಅಧ್ಯಯನ ಮಾಡಿದಾಗ ಈ ಅತಿವೃಷ್ಟಿಯ ಪೂರ್ಣ ಪರಿಣಾಮ ನಮಗೆ ಅರ್ಥವಾಗಬಹುದು.



Tuesday, August 11, 2009

ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ


ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.

ಮೂಲತಃ ದೀಪ್ ನಡೆಸಿದ್ದ ಪ್ರದಾನ್ [Professional Assistance for Development Action] ಅನ್ನುವ ಸಂಸ್ಥೆಯ ಮೂಲಸೆಲೆ ಹುಟ್ಟಿದ್ದು ವಿಜಯ್ ಮಹಾಜನ್ ಅವರ ಮನಮಸ್ತಕದಲ್ಲಿ. ವಿಜಯ್ ಐಐಎಂ, ಅಹಮದಾಬಾದಿನಲ್ಲಿ ಓದುತ್ತಿದ್ದ ಕಾಲದಲ್ಲಿ ಅಲ್ಲಿನ ಮೊದಲ ನಿರ್ದೇಶಕರಾಗಿದ್ದ ರವಿ ಮಥಾಯಿಯಿಂದ ಬಹಳವೇ ಪ್ರಭಾವಿತರಗಿದ್ದರು. ರವಿ ತಮ್ಮ ೩೮ನೇ ವಯಸ್ಸಿನಲ್ಲಿ ಐಐಎಂನ ಪ್ರಥಮ ಪೂರ್ಣಾವಧಿ ನಿರ್ದೇಶಕರಾಗಿ ನಿಯಮಿತಗೊಂಡರು. ೪೫ನೇ ವಯಸ್ಸಿಗೆ ಆತ ಆ ಪದವಿಯನ್ನು ತ್ಯಜಿಸಿ ಸಾಧಾರಣ ಪ್ರೊಫೆಸರ್ ಆಗಿ ಅಲ್ಲಿ ಮುಂದುವರೆದರು. ಆಗ ಅವರು ರಾಜಾಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತೊಗಲು ಕಾರ್ಮಿಕರನ್ನು ಒಟ್ಟುಗೂಡಿಸಿ ಅವರ ಉತ್ಪತ್ತಿಗೆ ಮಾರುಕಟ್ಟೆಯನ್ನು ಹುಡುಕಿಕೊಡುವ - ಆಕ್ಷಣ್ ರಿಸರ್ಚ್ ಮಾಡುತ್ತಿದ್ದರು. ವಿಜಯ್ ರವಿಯ ವಿಕಾಸದ ಕೆಲಸದಿಂದಲೂ, ಹಾಗೂ ಅವರು ತಮ್ಮ ಪದವಿಯನ್ನು ಕಿರಿವಯಸ್ಸಿನಲ್ಲಿಯೇ ಕೈಬಿಟ್ಟು ಬೇರೆ ಅರ್ಥಗಭಿತ ಕೆಲಸವನ್ನು ಹುಡುಕಿ ಹೊರಟಿದ್ದನ್ನೂ ಕಂಡು ಪ್ರಭಾವಿತರಾದರು. ಹೀಗಾಗಿ ಐಐಎಂನಿಂದ ಪಾಸಾದ ಕೂಡಲೇ ವಿಜಯ್ ಯಾವುದೇ ಕಾರ್ಪೊರೇಟ್ ಕೆಲಸವನ್ನು ಹುಡುಕದೇ ಸೀದಾ ಬಿಹಾರಕ್ಕೆ ಒಂದು ಸ್ವಯಂ ಸೇವಾಸಂಸ್ಥೆಯ ಜೊತೆ ಕೆಲಸ ಮಾಡಲು ಹೊರಟರು.

ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಕೆಲಸ ಮಾಡಿದ ವಿಜಯ್‌ಗೆ ತಿಳಿದ ಮೊದಲ ವಿಚಾರವೆಂದರೆ, ಈ ಥರದ ಸಂಸ್ಥೆಗಳಲ್ಲಿ ಒಳಿತು ಮಾಡಬೇಕೆಂಬ ತೀವ್ರ ಬಯಕೆಯಿರುವ ಹೃದಯವಂತರಿರುತ್ತಾರೆ. ಆದರೆ ಅವರುಗಳಿದೆ ಆಧುನಿಕ ನಿರ್ವಹಣಾ ತಂತ್ರಗಳ ಪರಿಚಯವಿರುವುದಿಲ್ಲವಾದ್ದರಿಂದ, ಅವರುಗಳ ಕೆಲಸ ಒಂದು ಸೀಮಿತ ಪರಧಿಯಲ್ಲಿದ್ದುಬಿಡುತ್ತದೆ. ಒಂದು ರೀತಿಯಲ್ಲಿ ಒಳಿತುಮಾಡುವ ಸ್ವಯಂಸೇವಾ ಸಂಸ್ಥೆಗಳ ಹೃದಯವಂತಿಕೆಗೂ, ನಿರ್ವಹಣಾತಂತ್ರಗಳನ್ನು ತಿಳಿದ ಐಐಎಂನಂತಹ ’ಬುದ್ಧಿವಂತ’ರ ಪರಿಣಿತಿಗೂ ಬೆಸುಗೆ ಹಾಕಿದರೆ ವಿಕಾಸದ ಪರಿಭಾಷೆಯನ್ನೇ ಬದಲಾಯಿಸಬಹುದೆಂದು ವಿಜಯ್ ನಂಬಿದ್ದರು.

ಹೀಗೆ, ೧೯೮೩ರಲ್ಲಿ ಪ್ರದಾನ್ ವಿಜಯ್ ಮಹಾಜನ್ ಅವರ ನೇತೃತ್ವದಲ್ಲಿ ಜನ್ಮ ತಾಳಿತು. ಆಗಿನ ದಿನಗಳಲ್ಲಿ ವಿಜಯ್ ತಮ್ಮಂತೆಯೇ ಇದ್ದ ಇತರರನ್ನೂ ತಮ್ಮ ಜೊತೆಗೂಡಿಸಿಕೊಂಡರು - ಈಗ ಧಾನ್ ಫೌಂಡೇಷನ್ ನಡೆಸುವ ವಾಸಿಮಲೈ, ಬೆಂಗಳೂರಿನ ವಿದ್ಯಾಪೋಷಕ/ಪ್ರೇರಣಾ ಸಂಸ್ಥೆಯ ಪ್ರಮೋದ್ ಕುಲಕರ್ಣಿ, ಐಐಟಿಯಿಂದ ಆಗಷ್ಟೇ ಹೊರಬಿದ್ದಿದ್ದ ಅಚಿಂತ್ಯ ಘೋಷ್, ಐಐಎಂ ಸಹಪಾಠಿ ವೇದ್ ಆರ್ಯ - ಹೀಗೆ ಈ ಆಲೋಚನಾಲಹರಿಯನ್ನು ಹೊತ್ತ ಜನರ ಒಂದು ಗುಂಪು ಒಂದಾಗಿದ್ದರು. ಈ ಸಂಸ್ಥೆಯ ಮೂಲ ಪ್ರವರ್ತಕರಲ್ಲಿ ಎಲ್ಲರೂ ಸಮಾನರು. ಎರಡೆರಡು ವರ್ಷಗಳ ನಾಯಕತ್ವವನ್ನು ಅವರುಗಳು ನಿರ್ವಹಿಸಿ ಮತ್ತೆ ವಿಕಾಸದ ಕೆಲಸದಲ್ಲಿ ತೊಡಗುವುದು ಎನ್ನುವಂತಹ ಪ್ರಕ್ರಿಯೆಯನ್ನು ಅವರ ನಾಯಕತ್ವದ ಸೂತ್ರದಲ್ಲಿ ಅಳವಡಿಸಲಾಯಿತು. ಆಗ ದೀಪ್ ಜೋಶಿ ಫೋರ್‍ಡ್ ಫೌಂಡೇಷನ್ ಅನ್ನುವ ಅನುದಾನಗಳನ್ನು ನೀಡುವ ಸಂಸ್ಥೆಯಲ್ಲಿ ಪ್ರೋಗ್ರಾಮ್ ಆಫೀಸರ್ ಆಗಿದ್ದರು. ಪ್ರದಾನ್ ತಮ್ಮ ಕೆಲಸಕ್ಕೆ ಅನುದಾನವನ್ನು ಪಡೆಯಲು ಹೋದಾಗ ಈ ವಿಚಾರವನ್ನು ಪ್ರೋತ್ಸಾಹಿಸಿ, ಮೊದಲ ಅನುದಾನ ಬರುವಂತೆ ನೋಡಿದ ಜವಾಬ್ದಾರಿ ದೀಪ್ ಜೋಶಿಯದ್ದಾಗಿತ್ತು. ಆಗಲೇ ದೀಪ್‍ಗೆ ಈ ಕೆಲಸದ ಬಗ್ಗೆ ಎಷ್ಟು ಅದಮ್ಯ ನಂಬಿಕೆ ಉಂಟಾಗಿತ್ತೆಂದರೆ, ಆತ ತನ್ನ ಡಾಲರ್ ಸಂಬಳದ ಕೆಲಸವನ್ನು ಬಿಟ್ಟು ಈ ಗೆಳೆಯರೊಂದಿಗೆ ಸೇರಿಬಿಟ್ಟರು.

ಪ್ರದಾನ್ ಸಂಸ್ಥೆಯ ರಚನಾ ಸೂತ್ರ ಸರಳವಾಗಿತ್ತು. ಐಐಟಿ, ಐಐಎಂ, ಇರ್ಮಾ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಫಾರೆಸ್ಟ್ ಮ್ಯಾನೇಜ್‍ಮೆಂಟ್ ಇತ್ಯಾದಿ ಸಂಸ್ಥೆಗಳಿಂದ ನಿರ್ವಹಣಾಸೂತ್ರಗಳನ್ನು ಕಲಿತ, ತಂತ್ರಜ್ಞಾನದಲ್ಲಿ ತರಬೇತಿಯಿದ್ದ ಯುವಕರನ್ನು ಆಯ್ದು ಒಂದೆಡೆಗೆ ಹಾಕುವುದು. ಈ ಪ್ರದಾನ್ ಗುಂಪು ದೇಶದ ಯಾವುದೇ ಭಾಗದಲ್ಲಿ ಹಂಚಿಹೋಗಿರುವ ವಿಕಾಸದ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತದೆ. ಹೀಗೆ ತಮಗೆ ಆಸಕ್ತಿಯಿರುವ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದ ಈ ಜನ ಎರವಲಿನ ಮೇಲೆ ಹೋಗಿ ಕೆಲಸ ಮಾಡಬಹುದು. ಹಾಗೆ ಕೆಲಸ ಮಾಡಿದ ಸಂಸ್ಥೆ ಅವರಿಗೆ ಒಗ್ಗಿ ಬಂದರೆ, ಅಲ್ಲಿಯೇ ಕೆಲಸಕ್ಕೆ ಖಾಯಂ ಆಗಿ ಸೇರಿಬಿಡಲೂ ಬಹುದು. ಅಕಸ್ಮಾತ್ ಅವರಿಗೆ ಆ ಸಂಸ್ಥೆಗಳು ಒಗ್ಗಲಿಲ್ಲವೆಂದರೆ ಅವರು ಪ್ರದಾನ್‍ಗೆ ವಾಪಸ್ಸಾಗಿ ಮಿಕ್ಕ ಯಾವುದೇ ಸಂಸ್ಥೆಗಳಲ್ಲಿ ಸೇರುವ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಾಗ ಹೃದಯದಿಂದಲೇ ಕೆಲಸ ಸಾಗಿಸುವ ಏಕ್ಟಿವಿಸ್ಟ್ ಸಂಸ್ಥೆಗಳಿಗೂ, ಮಸ್ತಕದಿಂದ ಎಲ್ಲವನ್ನೂ ವಿಶ್ಲೇಷಿಸಿ ಮುಂದುವರೆವ ತಂತ್ರಿಕರಿಗೂ ಒಂದು ಅದ್ಭುತ ಬೆಸುಗೆಯನ್ನು ಹಾಕಿದ ಹಾಗಾಗುತ್ತದೆ. ಅಕಸ್ಮಾತ್ ಈ ಬೆಸುಗೆ ಕುಸಿದರೆ ಆ ವ್ಯಕ್ತಿ ವಿಕಾಸದ ಕ್ಷೇತ್ರವನ್ನು ಬಿಟ್ಟು ಹೊರಹೋಗುವುದಕ್ಕೆ ಬದಲು, ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೂ
ಅಲ್ಲಿ ಇಲ್ಲಿ ಚದುರಿ ಹೋಗಿರುವ ಈ ’ಬುದ್ಧಿವಂತ’ರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಹಾಗೂ ವರುಷಕ್ಕೊಮ್ಮೆ ತಮ್ಮ ಹಿಂದಿನ ವರ್ಷದ ಪುನರಾವಲೋಕನ ಮಾಡಿಕೊಳ್ಳಲೂ ಈ ಸಂಸ್ಥೆ ಅನುವು ಮಾಡಿಕೊಟ್ಟಿತ್ತು. ಈ ದಿನ ನಾವುಗಳು ಹಿಂದಿರುಗಿ ನೋಡಿದಾಗ - ಉತ್ತಮ ವಿಕಾಸ ಶೀಲ ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿರುವ ಅನೇಕರು ಪ್ರದಾನ್‍ನಲ್ಲಿ ತಮ್ಮ ಆರಂಭದ ಜೀವನವನ್ನು ಕಳೆದು ಕಡಿದಾದ ಈ ಕೆಲಸದ ಸೂತ್ರಗಳನ್ನು ಕಂಡುಕೊಂಡವರೇ.

ಈ ಆರಂಭದ ಘಟ್ಟದಲ್ಲಿ ವಿಜಯ್ ಪ್ರದಾನ್ ಸಂಸ್ಥೆಯ ನಾಯಕತ್ವವನ್ನು ನಿರ್ವಹಿಸುತ್ತಿದ್ದರು. ಆದರೆ ವಿಜಯ್ ಮೊದಲೇ ತಮ್ಮ ಎರಡು ವರ್ಷಗಳ ಅವಧಿಯ ನಂತರ ದೀಪ್ ಜೋಶಿಗೆ ನಾಯಕತ್ವವನ್ನು ಹಸ್ತಾಂತರ ಮಾಡುವುದಾಗಿ ಘೋಷಿಸಿದ್ದರು. ವಿಜಯ್ ನಾಯಕತ್ವದಲ್ಲಿ ಪ್ರದಾನ್ ಸಂಸ್ಥೆ ತನ್ನ ಮೂಲ ಸೂತ್ರಗಳಿಗೆ ಬದ್ಧವಾಗಿ ಒಳ್ಳೆಯ ವಿದ್ಯೆ-ಹೃದಯವಂತಿಕೆ ಇದ್ದ ಜನರನ್ನು ಹುಡುಕುವ ಅವರುಗಳನ್ನು ಸ್ವಯಂಸೇವಾ ಸಂಸ್ಥೆಗಳಲ್ಲಿ ಸೇರಿಸುವ ಕೆಲಸವನ್ನು ಮಾಡುತ್ತಿತ್ತು. ದೀಪ್ ಈ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಳ್ಳುವ ವೇಳೆಗೆ ಈ ಸೂತ್ರಗಳನ್ನು ಪ್ರಶ್ನಿಸುವ ಸಮಯ ಬಂದಿತ್ತು. ಹೊರಗಿನ ಜಗತ್ತು ಬದಲಾಗಿದ್ದು - ಐಐಂ-ಐಐಟಿಯಂತಹ ಸಂಸ್ಥೆಗಳಿಂದ ಉತ್ತೀರ್ಣರಾಗುವ ತಂತ್ರಜ್ಞರಿಗೆ ಸಿಗುವ ಸಂಬಳಗಳು ತಾರಕಕ್ಕೇರಿ ಅವರುಗಳು ಇಂಥಹ ಒಂದು ಉದ್ಯೋಗಾವಕಾಶವನ್ನು ಸ್ವೀಕರಿಸುವುದು ಕಡಿಮೆಯಾಗುತ್ತಾ ಹೋಯಿತು. ಪ್ರದಾನ್ ಸಂಸ್ಥೆಗೂ ತನ್ನದೇ ಚಟುವಟಿಕೆಗಳನ್ನು ಮಾಡಬೇಕೆನ್ನುವ - ಒಂದು ಮೂಲ ಸೂತ್ರವನ್ನು ಹಿಡಿದು ಹೊರಡಬೇಕೆನ್ನುವ ತುರ್ತೂ ಉಂಟಾಯಿತು. ಹೀಗಾಗಿ ಪ್ರದಾನ್ ತಾನೇ ಒಂದು ಸ್ವಯಂಸೇವಾ ಸಂಸ್ಥೆಯ - ನೇರವಾಗಿ ಕಾರ್ಯಮಾಡುವ ಸಂಸ್ಥೆಯಾಗಿ ರೂಪುಗೊಂಡಿತು. ಹೀಗೆ ರೂಪುಗೊಂಡ ಮೇಲಿನ ನಂತರದ ನಾಯಕತ್ವವನ್ನು ದೀಪ್, ನೇರವಾಗಿ ಹಾಗೂ ಪರೋಕ್ಷವಾಗಿ ನಿರ್ವಹಿಸಿ ಬಂದರು.

ಪ್ರದಾನ್ ಸಂಸ್ಥೆ ನೇರವಾಗಿ ವಿಕಾಸದ ಕೆಲಸವನ್ನು ಕೈಗೊಂಡಾಗ ಅಳವಡಿಸಿಕೊಂಡ ಕೆಲವು ಸೂತ್ರಗಳನ್ನು ಇಂದಿಗೂ ಪಾಲಿಸುತ್ತಿದೆ. ಮೊದಲನೆಯ ಸೂತ್ರವೆಂದರೆ ಆ ಸಂಸ್ಥೆ ನಡೆಸುವ ಕೆಲಸಗಳಲ್ಲಿ ಸಮೂಹದ ಪಾತ್ರ ಹಿರಿಯದ್ದಾಗಿರುತ್ತದೆ. ಹೀಗಾಗಿಯೇ ಅವರು ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಸ್ವ-ಸಹಾಯ ಗುಂಪುಗಳ ಸೂತ್ರವನ್ನು ಹಿಡಿದು ಹೊರಡುತ್ತಾರೆಯೇ ಹೊರತು - ಅತೀ ಶೀಘ್ರವಾಗಿ ಬೆಳೆಯುವ ಗ್ರಾಮೀಣ್ ಮಾದರಿಯನ್ನು ಹಿಡಿದು ಹೊರಡುವುದಿಲ್ಲ. ದೇಶದ ದೊಡ್ಡ ರಾಜ್ಯಗಳಾದ - ಮಧ್ಯಪ್ರದೇಶ ಝಾರ್‌ಖಂಡ್, ಛತ್ತೀಸ್‌ಘಡ, ಬಿಹಾರ್, ರಾಜಾಸ್ಥಾನ ದಂತಹ ಕಠಿಣ ಪ್ರದೇಶಗಳಲ್ಲಿ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಪ್ರದಾನ್ ತನ್ನ ಕೆಲಸದ ವ್ಯಾಪ್ತಿಯನ್ನು ಹೊತ್ತು ನಡೆದಿದೆ. ಲಘುವಿತ್ತ ಅಲ್ಲದೇ, ಜಲಸಂಪನ್ಮೂಲ, ಸ್ಥಳೀಯ ಜೀವನೋಪಾಧಿಗಳನ್ನು ಪೋಷಿಸುವ ಕೆಲಸವನ್ನು ಪ್ರದಾನ್ ನಡೆಸುತ್ತಾ ಬಂದಿದೆ. ಪ್ರತೀ ಕ್ಷೇತ್ರಕ್ಕೂ ಭಿನ್ನವಾದ ಉಪಾಯ, ಪ್ರತೀ ಸಮಸ್ಯೆಗೂ ಭಿನ್ನವಾದ ಸಮಾಧಾನವಿರುತ್ತದೆನ್ನುವುದನ್ನು ಆ ಸಂಸ್ಥೆ ಗುರುತಿಸಿದೆ. ಹೀಗಾಗಿಯೇ ಬಿಹಾರದ ಗೊಡ್ಡಾದಲ್ಲಿ ಅವರ ಕೆಲಸ ಟಸರ್ ರೇಷ್ಮೆಗೆ ಸಂಬಂಧಿಸಿದ್ದೂ, ಮಧ್ಯಪ್ರದೇಶದ ಸುಖತವಾದಲ್ಲಿ ಕೋಳಿಸಾಕಣೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಿದ್ದನ್ನು ನಾವು ಕಾಣಬಹುದು.

ಉನ್ನತ ವಿದ್ಯಾಸಂಸ್ಥೆಗಳಿಂದ ಉತ್ತೀರ್ಣರಾದ ಯುವಕರನ್ನು ನಿಯಮಿಸುವುದನ್ನು ನಿಲ್ಲಿಸಿದ ಪ್ರದಾನ್ ತನ್ನ ಹೆಸರಿನಲ್ಲಿನ ’ಪ್ರೊಫೆಷನಲ್’ ಅನ್ನುವ ಪದಕ್ಕೆ ಇನ್ನೂ ನ್ಯಾಯ ಒದಗಿಸುತ್ತಿದೆಯೇ? ದೀಪ್ ಜೋಶಿ ನಾಯಕತ್ವದಲ್ಲಿ ನಡೆದ ರೂಪಾಂತರದಲ್ಲಿ ಆತ ಕಂಡುಕೊಂಡದ್ದು ಒಂದು ನಿಜ - ಪ್ರೊಫೆಷನಲ್ ಅಂದ ಕೂಡಲೇ ಅದು ಐಐಟಿ, ಐಐಎಂ ಆಗಿರಬೇಕಿಲ್ಲ. ಅಲ್ಲಿಂದ ಪ್ರಾರಂಭ ಮಾಡಿದರೂ ದೇಶದಲ್ಲಿ ಅನೇಕ ಭಾಗಗಳಲ್ಲಿರುವ ಉತ್ತಮ ಇಂಜಿನಿಯರಿಂಗ್ ಹಾಗೂ ಇತರ ತಂತ್ರಿಕ, ನಿರ್ವಹಣಾ ಸಂಸ್ಥೆಗಳಿವೆ. ಅಲ್ಲಿಂದಲೂ ಜನರನ್ನು ನಿಯಮಿಸಬಹುದು ಅನ್ನುವುದನ್ನು ಆತ ತೋರಿಸಿಕೊಟ್ಟರು. ಪ್ರತೀ ವರ್ಷ ಸುಮಾರು ನೂರಕ್ಕೂ ಹೆಚ್ಚು ಜನರನ್ನು ದೇಶಾದಾದ್ಯಂತ ಹಂಚಿಹೋಗಿರುವ ಕಾಲೇಜುಗಳಿಂದ ಹೆಕ್ಕಿ ಅವರಿಗೆ ಒಂದು ವರುಷದ ’ಅಪ್ರೆಂಟಿಸ್ ಶಿಪ್’ ತರಬೇತಿ ನೀಡಿ ವಿಕಾಸದ ಕೆಲಸಕ್ಕೆ, ಕಡಿದಾದ, ಕಠಿಣವಾದ ಜಾಗದಲ್ಲಿ ಜೀವನ ನಡೆಸಲು - ಹೃದಯವಂತಿಕೆಯನ್ನು ಬೆಳೆಸಿಕೊಳ್ಳಲು ತಯಾರು ಮಾಡುವ ಕೆಲಸವನ್ನು ಪ್ರದಾನ್ ಮಾಡುತ್ತಿದೆ.

ಈ ಅಪ್ರೆಂಟಿಸಿಶಿಪ್ ಕೂಡ ಎಷ್ಟು ಯೋಜನಾಬದ್ಧವಾಗಿದೆಯೆಂದರೆ ತರಬೇತಿಗೇ ಒಂದು ಭಿನ್ನ ಕ್ಯಾಂಪಸ್ಸನ್ನು ಮಧ್ಯಪ್ರದೇಶದ ಗ್ರಾಮಾಂತರ ಇಲಾಖೆಯಲ್ಲಿ ಇಟಾರ್ಸಿ ಬಳಿಯಿರುವ ಕೇಸ್ಲಾ ಗ್ರಾಮದಲ್ಲಿ ಕಟ್ಟಿಸಿದ್ದಾರೆ. ಅಲ್ಲಿನ ತರಬೇತಿಗೆ ಬೇಕಾದ ಓದಿನ ಪರಿಕರಗಳನ್ನು ಪರಿಣಿತರಿಂದ ತಯಾರು ಮಾಡಿಸಿದ್ದಾರೆ. ಒಂದು ರೀತಿಯಲ್ಲಿ ಐ.ಎ.ಎಸ್ ಅಧಿಕಾರಿಗಳಿಗೆ ಮಸೂರಿಯಲ್ಲಿ ನಡೆಯುವ ತರಬೇತಿಯ ರೀತಿಯಲ್ಲಿ ಒಂದು ವರ್ಷದ ತರಬೇತಿಯನ್ನು ಪ್ರದಾನ್ ನೀಡುತ್ತದೆ. ಈ ನೂರೂ ಜನ ಪ್ರದಾನ್ ನಲ್ಲಿ ಕೆಲಸ ಮುಂದುವರೆಸದಿರಬಹುದು. ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ಸೇರಬಹುದು ಅಥವಾ ಎಲ್ಲವನ್ನೂ ಬಿಟ್ಟು ಕಾರ್ಪರೇಟ್ ಜಗತ್ತಿಗೂ ಹೋಗಬಹುದು. ಆದರೆ ಈ ಒಂದು ವರ್ಷದ ಅನುಭವದ ಫಲವಾಗಿ ಅವರ ಮೂಲ ವಿಚಾರಗಳು ವಿಕಾಸರ ಹೃದಯವಂತಿಯತ್ತ ತಿರುಗುವುದರಲ್ಲೆಯೇ ಈ ಕಾರ್ಯಕ್ರಮದ ಸಾಫಲ್ಯತೆಯಿದೆ!

ಹೀಗೆ ಪ್ರದಾನ್‍ಗೆ ಬಂದ ಯುವಕರನ್ನು ಯೋಚಿಸಲು, ಹೊಸ ಯೋಜನೆಗಳನ್ನು, ಸಮಸ್ಯೆಗಳಿಗೆ ಹೊಸ ಸೃಜನಶೀಲ ಸಮಾಧಾನಗಳನ್ನು ಕಂಡುಕೊಳ್ಳಲು ಅದನ್ನು ಕಾರ್ಯರೂಪಕ್ಕಿಳಿಸಲು ಪ್ರದಾನ್ ಪ್ರೋತ್ಸಾಹಿಸಿದೆ. ಈ ಎಲ್ಲದರ ಹಿಂದಿನ ಹಾಗೂ ಈ ಎಲ್ಲ ಭಿನ್ನ ಸೂತ್ರಗಳನ್ನು ಒಂದೆಡೆಗೆ ಜೋಡಿಸುವ ಶಕ್ತಿ ದೀಪ್ ಜೋಶಿ.

ದೀಪ್ ಜೋಶಿಗೆ ಈ ಪ್ರಶಸ್ತಿ ಬಂದದ್ದು ಅವರನ್ನು ಬಲ್ಲವರಿಗೆಲ್ಲ ಸಮಾನ ಖುಷಿಯನ್ನು ನೀಡಿದೆ. ಆ ಸಾಫಲ್ಯತೆ ಅವರಿಗೆ ಸಹಜವಾಗಿಯೇ ಸಲ್ಲಬೇಕಾಗಿದೆ. ಅಭಿನಂದನೆಗಳು.



Sunday, August 2, 2009

ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು

ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?

ಐಟಿಸಿ ಸಂಸ್ಥೆಯ ಈಚಿನ ಖ್ಯಾತಿ ಅವರು ರೈತರಿಗಾಗಿ ನಡೆಸುತ್ತಿರುವ ಈ-ಚೌಪಾಲ್ ಕಾರ್ಯಕ್ರಮದಿಂದಾಗಿ ಹೆಚ್ಚಿದೆ. ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಒಯ್ದು ಅದರಿಂದಾಗಿ ಒಳಿತು ಮಾಡಿರುವುದಕ್ಕಾಗಿ ಈ ಸಂಸ್ಥೆ ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಚೌಪಾಲ್ ನಿಂದಾಗಿ ರೈತರಿಗೆ ಮಂಡಿಗೆ ಹೋಗುವುದಕ್ಕೆ ಮುನ್ನವೇ ಬೆಲೆಯ ಅರಿವಾಗುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸ್ಥಳದಲ್ಲೇ ಲಭ್ಯವಾಗುತ್ತದೆ. ಕೃಷಿಯಿಂದಾಗಿ ಬರುವ ಆದಾಯ ಹೆಚ್ಚುವುದರಲ್ಲೂ, ಖರ್ಚನ್ನು ಕಡಿಮೆ ಮಾಡುವುದರಲ್ಲೂ ಚೌಪಾಲ್ ಸಹಾಯಕವಾಗಿದೆ. ಇದರಿಂದಾಗಿ ರೈತರ ಇಳುವರಿಯನ್ನು ಕೊಳ್ಳುವ ಐಟಿಸಿಗೂ ಒಟ್ಟಾರೆ ಖರ್ಚು ಕಡಿಮೆಯಾಗಿ ಎಲ್ಲರೂ ಗೆಲ್ಲುವ ವಿನ್-ವಿನ್ ಪರಿಸ್ಥಿತಿ ಉಂಟಾಗಿದೆಯಂತೆ. ಹೀಗೆ ಐಟಿಸಿ ಅದ್ಭುತವಾದ ತಂತ್ರಜ್ಞಾನವನ್ನೂ ಲಾಭವನ್ನೂ ಒಳಿತಿಗೆ ಉಪಯೋಗಿಸಿದ ಸಂಸ್ಥೆಯಾಗಿ ಕೊಂಡಾಡಲ್ಪಡುತ್ತದೆ.

ಆದರೆ ಇದರಲ್ಲಿರುವ ವ್ಯಂಗ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಬಾರಿಯ ವಾರ್ಷಿಕ ವರದಿಯಲ್ಲಿ ಐಟಿಸಿಯ ಮುಖ್ಯಸ್ಥ ದೇವೇಶ್ವರ್ ತಮ್ಮ ಭಾಷಣದಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ಮಾತಾಡುತ್ತಾ ಸಂಸ್ಥೆಯ ವಿವಿಧ ವಿಭಾಗಗಳನ್ನು ಕೊಂಡಾಡುತ್ತಾರೆ. ಹಾಗೂ ಜಾಗತಿಕ ಹವಾಮಾನದಲ್ಲಾಗುತ್ತಿರುವ ಏರುಪೇರು ಮತ್ತು ಪರಿಸರದ ಬಗ್ಗೆ ಮಾತನಾಡುತ್ತಾರೆ. ತಾವು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಈ ಮಧ್ಯೆ ನಮ್ಮ ಕಣ್ಣಿಗೆ ಕಾಣದಿರಬಹುದಾದ ವಿವರಗಳು - ತಂಬಾಕು ವ್ಯಾಪಾರದಿಂದ ಕಳೆದ ವರ್ಷದ ವ್ಯಾಪಾರದ ಆಧಾರದ ಮೇಲೆ ಬೆಳೆದ ಮಾರಾಟ ರೂ ೧೩೦೦ ಕೋಟಿ, ಒಟ್ಟಾರೆ ಮಿಕ್ಕ ವ್ಯಾಪಾರಗಳಿಂದ ಹೆಚ್ಚಾದ ಮಾರಾಟ ರೂ.೫೦೦ ಕೋಟಿ. ತಂಬಾಕಿನಿಂದ ಬಂದ ಲಾಭಾಂಶ ಸುಮಾರು ರೂ.೪,೨೦೦ ಕೋಟಿ, ಮಿಕ್ಕೆಲ್ಲ ವ್ಯಾಪಾರಗಳಿಂದ ಬಂದ ಲಾಭಾಂಶ ಸುಮಾರು ರೂ.೪೦೦ ಕೋಟಿ. ಆದರೂ ಒಟ್ಟಾರೆ ಲಾಭಾಂಶದ ೮೯% ತರುವ ತಂಬಾಕಿನ ವ್ಯಾಪಾರದ ಬಗ್ಗೆ ಮುಖ್ಯಸ್ಥರು ಒಂದೂ ಪದವನ್ನು ತಮ್ಮ ಭಾಷಣದಲ್ಲಿ ಆಡುವುದಿಲ್ಲ. ಯಾಕೆಂದರೆ ತಾವು ’ಒಳಿತು’ ಮಾಡಿ ಲಾಭ ಮಾಡುತ್ತಿರುವ ಸಂಸ್ಥೆ ಎಂದು ಹೇಳಿಕೊಳ್ಳುವ, ಅದನ್ನು ಚೌಪಾಲ್ ವ್ಯಾಪಾರಗಳಂತಹ ಪ್ರಯೋಗಗಳಿಂದ ತೋರಿಸಿಕೊಳ್ಳುವ ತುರ್ತು ಇರುವ ಸಂಸ್ಥೆ ಕ್ಯಾನ್ಸರಿನಂತಹ ಭಯಾನಕ ರೋಗವನ್ನುಂಟು ಮಾಡುವ ತಂಬಾಕು ವ್ಯಪಾರವಿರುವಾಗಲೂ ಈ ಸಂಸ್ಥೆ ಮಾಡುತ್ತಿರುವ ಒಳಿತನ್ನು ನಾವು ಹೇಗೆ ಗ್ರಹಿಸಬೇಕು? ತಂಬಾಕಿನ ಲಾಭದಿಂದ ಮಿಕ್ಕ ವ್ಯಾಪಾರಗಳ ಒಳಿತು ನಡೆಯುತ್ತಿದೆ ಅನ್ನಬಹುದೇ?


ಫ್ಯಾಬ್ಇಂಡಿಯಾ ಅನ್ನುವ ಸಂಸ್ಥೆಯನ್ನು ಜಾನ್ ಬಿಸೆಲ್ ೧೯೬೦ನೇ ಇಸವಿಯಲ್ಲಿ ಸ್ಥಾಪಿಸಿದರು. ಜಾನ್ ಬಿಸೆಲ್ ಕೈಮಗ್ಗದ ಮತ್ತು ಗ್ರಾಮೀಣ ಕುಶಲ ಕರ್ಮಿಗಳ ಒಳಿತನ್ನು ಯೋಚಿಸುತ್ತಲೇ ಫ್ಯಾಬ್‍ಇಂಡಿಯಾದ ಮೂಲಕ ವ್ಯಪಾರವನ್ನು ಮಾಡಲು ಹೊರಟವರು. ಹೀಗಾಗಿ ಫ್ಯಾಬ್‍ಇಂಡಿಯಾದ ವ್ಯಾಪಾರಕ್ಕೆ ಒಂದು ರೀತಿಯ ವ್ಯಕ್ತಿತ್ವವನ್ನು ಒದಗಿಸಿದ, ಹಾಗೂ ಆ ಮೂಲಕ ಕುಶಲಕರ್ಮಿಗಳಿಗೆ ಕೆಲಸವನ್ನು ಕಲ್ಪಿಸಿಕೊಟ್ಟ - ಒಳಿತು ಮಾಡುತ್ತಲೇ ಲಾಭವನ್ನೂ ಆರ್ಜಿಸುವ ಕೆಲಸವನ್ನು ಆತ ಪ್ರಾರಂಭಿಸಿದರು.

ಖಾದೀ ಗ್ರಾಮೋದ್ಯೋಗ ಸಂಸ್ಥೆಗಳು, ಸರಕಾರಗಳು ನಡೆಸುವ ಹ್ಯಾಂಡ್‍ಲೂಮ್ ಹೌಸ್, ಕೋ-ಆಪ್ಟೆಕ್ಸ್, ಪ್ರಿಯದರ್ಶಿನಿ, ಆಪ್ಕೋಗಳನ್ನೂ - ಫ್ಯಾಬ್‍ಇಂಡಿಯಾ ಅಂಗಡಿಗಳನ್ನೂ ನೋಡಿದರೆ ಎರಡಕ್ಕೂ ಇರುವ ವ್ಯತ್ಯಾಸ ನಮಗೆ ವೇದ್ಯವಾಗುತ್ತದೆ. ಹೀಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಗ್ರಾಮೀಣ ಕುಶಲ ಕರ್ಮಿಗಳಿಗೆ ಹೆಚ್ಚು ಉಪಾಧಿಯನ್ನು ಕಲ್ಪಿಸುವ ಕೆಲಸವನ್ನು ಫ್ಯಾಬ್‍ಇಂಡಿಯಾ ತನ್ನ ಮಟ್ಟಿಗೆ ತಾನು ಮಾಡುತ್ತಿತ್ತು. ಪಾರ್ಟಿಗಳಿಗೆ ಹೋಗುವ ದೆಹಲಿಯ ಸಿರಿವಂತರಲ್ಲಿ ಫ್ಯಾಬ್‍ಇಂಡಿಯಾ ಕುರ್ತಾಧರಿಸಿ ಹೋಗುವುದೂ ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗುವ ಮಟ್ಟಿಗೆ ಫ್ಯಾಬ್‍ಇಂಡಿಯಾ ಬೆಳೆದುಬಿಟ್ಟಿತು. ಆದರೆ ೧೯೬೦ರಿಂದ ೧೯೯೪ರವರೆಗೆ ಫ್ಯಾಬ್‍ಇಂಡಿಯಾ ದೆಹಲಿಯಲ್ಲಿ ಒಂದು ಅಂಗಡಿಯ ಮೂಲಕ ವ್ಯಾಪಾರ ಮಾಡುತ್ತಿತ್ತು. ೧೯೯೪ರಲ್ಲಿ ಜಾನ್ ಬಿಸೆಲ್ ಮಗ ವಿಲಿಯಂ ಬಿಸೆಲ್ ಕಂಪನಿಯ ರೂವಾರಿಯಾದರು. ಅಲ್ಲಿಂದ ಫ್ಯಾಬ್‍ಇಂಡಿಯಾದ ಬೆಳವಣಿಗೆಯ ಕಥೆ ಪ್ರಾರಂಭವಾಗಿ ಇಂದು ಭಾರತದಾದ್ಯಂತ ಈ ಲಾಭಾರ್ಜನೆಯ ವ್ಯಾಪಾರ ೧೦೪ ಅಂಗಡಿಗಳ ಮೂಲಕ ನಡೆಯುತ್ತಿದೆ.

ಇದ್ದಕ್ಕಿದ್ದ ಹಾಗೆ ಫ್ಯಾಬ್‍ಇಂಡಿಯಾದ ವ್ಯಾಪಾರದ ಬಗ್ಗೆ ನಮಗೆ ಯಾಕೆ ಕುತೂಹಲ ಉಂಟಾಗಬೇಕು? ಕಾರಣವಿಷ್ಟೇ - ಒಳಿತನ್ನೂ ಲಾಭವನ್ನೂ ಆರ್ಜಿಸುವ ಉದ್ದೇಶ ಹೊತ್ತ ಸಂಸ್ಥೆಗಳು ಒಳಿತು-ಲಾಭಗಳ ಸಮತೌಲ್ಯವನ್ನು ಕಾಪಾಡುವುದರಲ್ಲಿ ತುಸು ವಿಫಲರಾಗಬಹುದಾದ್ದರಿಂದ ಅಂಥಹ ಸಂಸ್ಥೆಯ ಯಶಸ್ಸನ್ನು ತೀಕ್ಷ್ಣ ಪರಿಶೀನನೆಗೆ ಹಚ್ಚುವುದು ಸಹಜವೇ ಆಗುತ್ತದೆ. ಆದರೆ ಈ ರೀತಿಯ ಸಂಸ್ಥೆಗಳು ’ಬೆಳವಣಿಗೆ’ಯ ಪಥ ಹಿಡಿದಾಗ, ಕುಶಲಕರ್ಮಿಗಳ ಬೆಳವಣಿಗೆಯ ಗತಿಗಿಂತಾ ಹೆಚ್ಚಿನ ಗತಿಯಲ್ಲಿ ಸಂಸ್ಥೆ ಬೆಳೆಯಲು ತೊಡಗಿದಾಗ ’ಒಳಿತು’ ಹಿನ್ನೆಲೆಗೆ ಹೋಗಿ ’ಲಾಭ’ ಮುಂಚೂಣಿಗೆ ಬರುತ್ತದೆ. ಹೀಗಾಗಿಯೇ ಫ್ಯಾಬ್‍ಇಂಡಿಯಾದ ಈಚಿನ ಬೆಳವಣಿಗೆಯ ಗತಿಯಲ್ಲಿ ನೇಕಾರರು - ಕುಶಲ ಕರ್ಮಿಗಳಿಂದ ಬಂದ ಉತ್ಪತ್ತಿಯನ್ನು ಮಾತ್ರ ಮಾರುತ್ತಿದ್ದ ಸಂಸ್ಥೆ ನಿಧಾನವಾಗಿ ನಾವು ಮಾರುವ ಯಾವುದೇ ವಸ್ತುವಿನಲ್ಲಿ ಕುಶಲ ಕರ್ಮಿಗಳ ’ಕೆಲಸದ’ ಅಂಶ ಇರುತ್ತದೆ ಅನ್ನುವ ಮಾತನ್ನು ಹೇಳುತ್ತಾರೆ. ಹೀಗೆ ಹೇಳಿದಾಗ ಮಿಲ್ಲಿನ ಬಟ್ಟೆಗೆ ಹಾಕಿದ ಬ್ಲಾಕ್ ಪ್ರಿಂಟು, ಅಥವಾ ಕೈಯಿಂದ ಮಾಡಿದ ಕಸೂತಿಯ ವಸ್ತ್ರಗಳೂ ಆ ವ್ಯಾಪಾರಕ್ಕೆ ಸೇರುತ್ತವೆ, ಜೊತೆಗೆ ಸಂಬಂಧವೇ ಇಲ್ಲದ ಆರ್ಗ್ಯಾನಿಕ್ ಉಪ್ಪಿನಕಾಯಿ ಇತರ ವಸ್ತುಗಳು ಆ ವ್ಯಾಪಾರದಲ್ಲಿ ಮನೆ ಮಾಡುತ್ತವೆ. ಹೀಗೆ ಒಳಿತು ಕ್ರಮಕ್ರಮೇಣ ಹಿನ್ನೆಲೆಗೆ ಹೋಗಿ ಲಾಭ ಮತ್ತು ಬೆಳವಣಿಗೆ ಮುಖ್ಯವಾಗುತ್ತವೆ. ಹೀಗಾಗಿ ಈ ಇಂಥ ಸಂಸ್ಥೆಗಳು ಒಳಿತನ್ನು ಮಾಡುವುದನ್ನು ಮುಂದುವರೆಸಿದರೂ ಈ ಕಷ್ಟದ ಪ್ರಶ್ನೆಗಳನ್ನು ಎದುರಿಸಲೇ ಬೇಕಾಗಿದೆ! ಹೌದು ಇಂದಿಗೂ ಫ್ಯಾಬ್‍ಇಂಡಿಯಾ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅದರ ಒಟ್ಟಾರೆ ಮಾರಾಟದಲ್ಲಿ ಕುಶಲಕರ್ಮಿಗಳ ಪ್ರತಿಶತ ಕಡಿಮೆಯಾಗುತ್ತಿದೆ. ಹೀಗೆ ಲಾಭ ಒಳಿತನ್ನು ನಿಧಾನವಾಗಿ ಕಬಳಿಸಿಬಿಡುತ್ತದೆ.

ಅದೇ ಲಾಭ ಗಳಿಸುವುದೇ ಒಳಿತು ಮಾಡಲು ಅನ್ನುವಂಥಹ ಸಂಸ್ಥೆಗಳೂ ನಮ್ಮಲ್ಲಿವೆ. ಇಂಥ ಸಂಸ್ಥೆಗಳಲ್ಲಿ ಬಂಡವಾಳ ಮತ್ತು ಲಾಭ ಮುಂಚೂಣಿಗೆ ಬರದೇ ಮೂಲ ಉದ್ದೇಶ ಒಳಿತು ಮಾಡುವುದೇ ಆಗಿದೆ. ಮದುರೈನಲ್ಲಿರುವ ಅರವಿಂದ ಐ ಕೇರ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದನ್ನು ಸ್ಥಾಪಿಸಿದ [ಹಾಗೂ ಈಚೆಗೆ ತೀರಿಕೊಂಡ] ಗೋವಿಂದಪ್ಪಾ ವೆಂಕಟಸ್ವಾಮಿಯವರ ಉದ್ದೇಶ ಜನರ ದೃಷ್ಟಿಯನ್ನು ಉತ್ತಮಗೊಳಿಸುವುದೇ ಆಗಿತ್ತು. ಆತನಿಗೆ ಅದರಿಂದ ಯಾವ ಲಾಭವೂ ಬೇಕಿರಲಿಲ್ಲ. ಆದರೆ ಆತ ಕೇಳುತ್ತಿದ್ದ ಪ್ರಶ್ನೆಗಳೆಲ್ಲಾ ಲಾಭಗಳಿಸುವ ಸಂಸ್ಥೆಗಳು ಕೇಳಬಹುದಾದ ಪ್ರಶ್ನೆಗಳೇ. ಹೇಗೆ ಕುಶಲತೆಯಿಂದ ಕೆಲಸ ಮಾಡಬಹುದು, ಎಲ್ಲಿ ಖರ್ಚನ್ನು ಕಡಿಮೆ ಮಾಡಬಹುದು, ಗುಣಮಟ್ಟವನ್ನು ಹೇಗೆ ಕಾಯ್ದಿಟ್ಟುಕೊಳ್ಳಬಹುದು.. ಹೀಗೆ ಅವರು ಕೇಳಿದ ಪ್ರಶ್ನೆಗಳ ಫಲವಾಗಿ ಅರವಿಂದ್ ಐ ಕೇರ್ ಸಂಸ್ಥೆಗಳು ಗುಣಮಟ್ಟದ ಸೇವೆಗಳನ್ನೊದಗಿಸುತ್ತಾ ತನ್ನ ಲಾಭಾಂಶವನ್ನು ಶ್ರೀಮಂತರಿಂದ ಗಳಿಸಿ ಬಡವರಿಗೆ ಒಳಿತನ್ನು ಮಾಡುತ್ತಿದೆ. ಅಕಸ್ಮಾತ್ ಹೆಚ್ಚಿನ ಲಾಭಾಂಶವನ್ನು ಗಳಿಸಿದರೂ ಅದನ್ನು ಹಂಚುವ ಭಾರ ಆ ಸಂಸ್ಥೆಯ ಮೇಲೆ ಇಲ್ಲವಾದ್ದರಿಂದ ಆ ಸಂಸ್ಥೆಯ ಬೆಳವಣಿಗೆಯ ಗತಿ, ಫ್ಯಾಬ್‍ಇಂಡಿಯಾದ ಲಾಭಾರ್ಜನೆಯ ಬೆಳವಣಿಗೆಯ ಗತಿಗಿಂತ ಭಿನ್ನವಾಗಿರುತ್ತದೆ. ಆದರೂ ಅರವಿಂದ್ ಥರದ ಸಂಸ್ಥೆಗಳು ಒಳಿತನ್ನು ಮಾಡಲು ಯಾರ ಅನುದಾನವನ್ನೂ ಅಪೇಕ್ಷಿಸುವಿದಿಲ್ಲ.

ಒಳಿತಿಗೂ ಲಾಭಕ್ಕೂ ಇರುವ ಸಂಬಂಧ ಹೀಗೆ ಬಹಳ ಗಹನವಾದದ್ದು!




ಮರೆತೇನೆಂದರು ಮರೆಯಲಿ ಹ್ಯಾಂಗ?

ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.

ವಿಕ್ರಂರ ಈ ತ್ವರಿತ ಪ್ರಗತಿಯಾದದ್ದು ಎಸ್.ಕೆ.ಎಸ್ ಸಂಸ್ಥೆಯ ಪ್ರಗತಿಯಿಂದಾಗಿ. ಆದರೆ ನಿಜದ ವಿಷಯವೆಂದರೆ ಎಸ್.ಕೆ.ಎಸ್ ಅತ್ಯಂತ ನಾಜೂಕಾದ ಪರಿಸ್ಥಿತಿಯಲ್ಲಿದ್ದಾಗ ಶೈಶವಾವಸ್ಥೆಯಲ್ಲಿ ಅದನ್ನು ಪೋಷಿಸಿ ಬೆಳೆಸಿದ ವ್ಯಕ್ತಿ ಎಲೆಮರೆಯ ಕಾಯಿಯಂತೆ, ಖ್ಯಾತಿಯನ್ನೂ ಸಂಪಾದಿಸದೇ, ಹೆಚ್ಚು ಹಣವನ್ನೂ ಈ ಸಂಸ್ಥೆಯಿಂದ ಪಡೆಯದೆಯೇ ಮರೆಯಾದರು. ಆ ವ್ಯಕ್ತಿಯ ಹೆಸರು ಸೀತಾರಾಮ್ ರಾವ್.

ಸೀತಾರಾಮ್ ಸದಾ ಹಸನ್ಮುಖಿಯಾಗಿ ಇರುತ್ತಿದ್ದ ವ್ಯಕ್ತಿ. ಅವರಲ್ಲಿ ಎಂದೂ ತುಳುಕುತ್ತಿದ್ದ ಉತ್ಸಾಹ, ಹಾಗೂ ಕುತೂಹಲ. ಮೇಲಾಗಿ ಬಡತನದ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಾತುಗಳ ಭಾಷಣವನ್ನು ಕೊಚ್ಚುವ ರೋಗ ಅವರಿಗೆ ಇರಲೇ ಇಲ್ಲ. ಅವರು ಎಷ್ಟರ ಮಟ್ಟಿಗೆ ಬಡವರ ಪರವಾದ - ಮಕ್ರೋಫೈನಾನ್ಸ್ ಕ್ಷೇತ್ರದ ಪರವಾದ ಮಾತುಗಳನ್ನಾಡುತ್ತಿದ್ದರು ಎಂದರೆ ಬಹುಮಟ್ಟಿನ ಜನರು ಅವರನ್ನು ಎಸ್.ಕೆ.ಎಸ್ ಸಂಸ್ಥೆಯ ಜೊತೆಗೆ ಗುರುತಿಸದೇ, ಗ್ರಾಮೀಣ ಅರ್ಥಪದ್ಧತಿಯ ಜೊತೆಗೆ ಆತನನ್ನು ಗುರುತಿಸುತ್ತಿದ್ದರು.

ಎಸ್.ಕೆ.ಎಸ್ ಸ್ಥಾಪಿಸಿದ ವಿಕ್ರಂ ಆಕುಲಾ ಒಂದು ಘಟ್ಟದಲ್ಲಿ ಅದನ್ನು ಹೆಚ್ಚೂ ಕಡಿಮೆ ಬಿಟ್ಟು ತಮ್ಮ ಉನ್ನತ ಪದವಿಗಾಗಿ ಶಿಕಾಗೋಗೆ ವಾಪಸ್ಸಾದಾಗ ನಾವೆಲ್ಲಾ ವಿಕ್ರಂ ಎಸ್.ಕೆ.ಎಸ್.ನಿಂದ ಕೈತೊಳೆದುಕೊಂಡುಬಿಟ್ಟಿದ್ದಾರೆ ಅಂದುಕೊಂಡಿದ್ದೆವು. ಆ ಕಾಲದಲ್ಲಿ ವಿಕ್ರಂ ಎಸ್.ಕೆ.ಎಸ್‌ನ ಉಸ್ತುವಾರಿಯನ್ನು ಸೀತಾರಾಮ್ ಕೈಗೆ ಇಟ್ಟು ಹೋದರು. ವಿಕ್ರಂ ತಮ್ಮ ಮಹಾಪ್ರಬಂಧ ಮುಗಿಸಿಬರುವ ವೇಳೆಗೆ ಆ ಸಂಸ್ಥೆ ಬೆಳೆದು ನಿಂತಿತ್ತು. ವಿಕ್ರಂ ಹಾಗೆ ಬೆಳೆದು ನಿಂತಿದ್ದ ಸಂಸ್ಥೆಯನ್ನು ಇನ್ನೂ ತ್ವರಿತಗತಿಯಲ್ಲಿ ಬೆಳೆಸಿದರೂ ಅದರ ಅಡಿಪಾಯವನ್ನು ಸೀತಾರಾಮ್ ಹಾಕಿದರು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ವಿಕ್ರಂ ಕೊಟ್ಟಿರುವ ಅಸಂಖ್ಯ ಸಂದರ್ಶನಗಳಲ್ಲಿ ಸೀತಾರಾಮ್ ಹೆಸರನ್ನು ಎತ್ತಿರುವುದನ್ನು ನಾನು ಕಂಡೇ ಇಲ್ಲ. ಆದರೆ ಸೀತಾರಾಂ ಮಾತ್ರ ತಾವು ಆ ಸಂಸ್ಥೆಯಿಂದ ಹೊರಬಿದ್ದಾಗ ಎಲ್ಲರಿಗೂ ಕಳಿಸಿದ ಒಂದು ಪತ್ರದಲ್ಲಿ ತಮ್ಮೊಡನೆ ಇದ್ದ ಪ್ರತೀ ವ್ಯಕ್ತಿಯನ್ನೂ ಅವರ ಪಾತ್ರದ ಮಹತ್ವವನ್ನೂ ವಿವರಿಸಿದ್ದರು.

ಒಂದು ರೀತಿಯ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡಿದ್ದ ಸೀತಾರಾಮ್ ಹಿಂದೆ ನೋಡಿ ಬೇಸರ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಅವರು ಎಸ್.ಕೆ.ಎಸ್. ಬಿಟ್ಟಾಗ ಹೇಳಿದ್ದ ಮಾತುಗಳಲ್ಲಿ ಮುಖ್ಯವಾದದ್ದು "ಬಡವರ ಆಹಾರ ಸ್ವಾವಲಂಬನೆಯ ಬಗ್ಗೆ ನಾನು ಮುಂದಿನ ಕೆಲಸ ಮಾಡಬೇಕೆಂದಿದ್ದೇನೆ" ಎಂದು ಬರೆದಿದ್ದರು.

ಈಗ ಕೂತು ಸೀತಾರಾಮ್ ಬಗ್ಗೆ ಬರೆಯುತ್ತಿರುವಾಗ ನನಗೆ ಎಷ್ಟೆಲ್ಲಾ ವಿವರಗಳು ನೆನಪಾಗುತ್ತಿವೆ. ಒಂದು ಸೀತಾರಾಮ್ ಅವರ ಒಂದೂ ಫೋಟೋ ನನ್ನ ಬಳಿಯಿಲ್ಲ. ಎರಡು: ಸೀತಾರಾಮ್ ಅವರ ಜೀವನದ ಖಾಸಗೀ ವಿವರಗಳು ಒಂದೂ ನನಗೆ ತಿಳಿದಿಲ್ಲ - ಅವರಿಗೆ ಮದುವೆಯಾಗಿದೆಯೋ, ಸ್ವಂತ ಮನೆಯಿದೆಯೋ, ಈ ಹಿಂದೆ ಏನು ಮಾಡುತ್ತಿದ್ದರು - ಯಾವುದೂ ಗೊತ್ತಿಲ್ಲ.

ಯಾಕೆಂದರೆ ಸೀತಾರಾಮ್ ನಮ್ಮೆದುರಿಗೆ ಒಂದು ಸಂಪೂರ್ಣ ವ್ಯಕ್ತಿಯಾಗಿ ನಿಲ್ಲುತ್ತಿದ್ದರು. ಹೀಗಾಗಿ ಈ ಎಲ್ಲ ವಿವರಗಳ ಆಸರೆ ಅವರ ವ್ಯಕ್ತಿತ್ವಕ್ಕೆ ಬೇಕಿರಲಿಲ್ಲ. ನಾನಿಂಥವನ ಮಗ, ಇಂಥವನ ಗಂಡ, ಇಂಥಿಂಥ ಕಡೆ ಕೆಲಸ ಮಾಡಿದೆ.. ಯಾವುದೂ ಈ ಕ್ಷಣದ ಕೆಲಸಕ್ಕೆ ಮುಖ್ಯವಲ್ಲ. ಈ ಕ್ಷಣದ ಕೆಲಸಕ್ಕೆ ಮುಖ್ಯವಾದದ್ದು - ಕೈಮೇಲಿರುವ ಸಮಸ್ಯೆಯನ್ನು ಸಾಧಿಸುವ ಬಗೆ ಹೇಗೆ ಅನ್ನುವುದರ ಆಲೋಚನೆ ಮಾತ್ರ. ಇದರಿಂದಾಗಿ ನನಗೆ ಖ್ಯಾತಿ ಬರುತ್ತದೋ ಇಲ್ಲವೋ ಅನ್ನುವುದು ಮುಖ್ಯವಲ್ಲ - ಸಮಸ್ಯೆ ಪರಿಹಾರವಾಯಿತೋ ಇಲ್ಲವೋ ಅನ್ನುವುದು ಮುಖ್ಯ...

ಬಹುಶಃ ಸೀತಾರಾಮ್ ಈ ಥರದ ಆಲೋಚನೆಗಳಲ್ಲಿ ತೊಡಗಿದ್ದಿರಬಹುದು. ಮುಂಬೈನಲ್ಲಿ ಆರ್ಟ್ ಪ್ಲಾಜಾ ಮಾಡಿ, ಉದಯೋನ್ಮುಖ ಕಲಾವಿದರಿಗೆ ಜಹಾಂಗೀರ್ ಆರ್ಟ್ ಗ್ಯಾಲರಿಯೆದುರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಕಮಲಾಕ್ಷ ಶಣೈ, ಅನೇಕ ಜನರ ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತರಲು, ಕವಿಗಳನ್ನು ಕಾಲೇಜಿನ ಹಂತದಲ್ಲಿಯೇ ಗುರುತಿಸಿ ಪ್ರ್ಹೊತ್ಸಾಹಿಸಿದ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸ ರಾಜು ಈ ಎಲ್ಲರಲ್ಲೂ ಕೆಲವು ಸಮಾನವಾದ ಗುಣಗಳಿದ್ದುವು. ಎಲ್ಲರೂ ಮಿತಭಾಷಿಗಳು. ಎಲ್ಲರೂ ತಮ್ಮ ಖ್ಯಾತಿ ಹೆಸರಿನ ಬಗ್ಗೆ ಯೋಚಿಸಿದವರೇ ಅಲ್ಲ. ತಾವು ನಂಬಿದ್ದನ್ನು ತಮ್ಮ ಕಾಯಕವೆಂದು ಕೈಗೊಂಡು ಸಮಾಜಕ್ಕೆ ಪ್ರಯೋಜನವಾಗುವಂತೆ ಜೀವಿಸಿದವರು. ಈ ಹಲವರ ಜೊತೆಗೆ, ಎಲೆ ಮರೆಯ ಕಾಯಿಯಾಗಿ ಭುಜಕ್ಕೆ ಭುಜ ಸೇರಿಸಿ ಸೀತಾರಾಮ್ ನಿಂತಿದ್ದಾರೆ.

ಒಂದು ತಿಂಗಳ ಕೆಳಗಷ್ಟೇ ಚೆನ್ನೈನಲ್ಲಿ ಸೀತಾರಾಮ್ ಅವರ ಭೇಟಿಯಾಗಿತ್ತು. ನಾಲ್ಕಾರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಸೀತಾರಾಮ್ ಸಾವಿನ ಅಂಚಿನಲ್ಲಿದ್ದ ತಮ್ಮ ಸಹೋದರನ ಪರಿಚಾರಿಕೆಯಲ್ಲಿದ್ದರಂತೆ. ಎಲ್ಲ ಡಾಕ್ಟರುಗಳೂ ಕೈ ಎತ್ತಿದ್ದ, ಕೋಮಾದಲ್ಲಿದ್ದ ತಮ್ಮ ಸಹೋದರನ ಜೀವವನ್ನು ವಾಪಸ್ಸು ಎಳೆದು ತಂದ ನಂತರವೇ ನಾನು ನನ್ನ ಕೆಲಸಕ್ಕೆ ವಾಪಸ್ಸಾದೆ ಎಂದು ಅವರು ಹೇಳಿದರು. ಹಳೆಯ ಕಥೆಗಳಲ್ಲಿರುವಂತೆ ಬಹುಶಃ ತಮ್ಮು ಆಯಸ್ಸನ್ನು ತಮ್ಮ ಸಹೋದರನಿಗೆ ಎರೆದು ಬಿಟ್ಟರೇನೋ. ಆದರೆ ಆ ಸಂದರ್ಭ ಸೀತಾರಾಮ್‍ಗೆ ತೃಪ್ತಿ ತಂದ ಸಂದರ್ಭವಿದ್ದಿರಬಹುದು. ಯಾಕೆಂದರೆ ಅಮಿತವಾಗಿ ಬದಲಾವಣೆಗಳನ್ನು ಕಾಣುವ ತಪನವಿರುವವರಲ್ಲೆಲ್ಲಾ ಒಂದು ಬದಲಾವಣೆಯ ಚಡಪಡಿಕೆಯನ್ನು ನಾವು ಕಾಣುತ್ತೇವೆ. ಒಂದು ಥರದ ತೀವ್ರತೆಯನ್ನು ಕಾಣುತ್ತೇವೆ. ಆದರೆ ಈ ಕ್ಷೇತ್ರದಲ್ಲಿ ಸ್ಥಿತಪ್ರಜ್ಞರಂತೆ ಕಾಣುವ, ಅತೃಪ್ತರಾಗಿದ್ದೂ ತೃಪ್ತರಂತೆ ಕಾಣುವ ಗಾಂಭೀರ್ಯ ಸೀತಾರಾಮ್‌ಗೆ ಇತ್ತು. ಆ ಥರದ ಗಾಂಭೀರ್ಯ ಇರುವ ಮತ್ತೂಬ್ಬರೆಂದರೆ ಸೇವಾ ಸಂಸ್ಥೆಯ ಇಳಾ ಭಟ್.

ಚೆನ್ನೈನಲ್ಲಿ ನಡೆದ ಅಂದಿನ ಕಾರ್ಯಕ್ರಮ ಆತನಿಗೆ ತೃಪ್ತಿ ನೀಡಿದ್ದಿರಬೇಕು. ಸೀತಾರಾಮ್ ಮಾತನಾಡುತ್ತಿದ್ದ ಆಹಾರ ಸ್ವಾವಲಂಬನೆಯತ್ತ ಒಂದು ಹೆಜ್ಜೆಯನ್ನಿಡುತ್ತಾ ಚೆನ್ನೈನ ಈಕ್ವಿಟಾಸ್ ಮೈಕ್ರೋಫೈನಾನ್ಸ್ ಸಂಸ್ಥೆ ತಮ್ಮ ಬಡ ಗ್ರಾಹಕರಿಗೆ ಲಾಭವಿಲ್ಲದೇ - ಸುಲಭ ಕಂತಿನ ಮೇಲೆ ಆಹಾರ ಪದಾರ್ಥಗಳನ್ನು ಪೂರೈಸುಯ ಯೋಜನೆಯ ಅಡಿಪಾಯವನ್ನು ಹಾಕಿತ್ತು. ಇದು ಸೀತಾರಾಮ್ ಹೇಳಿದ್ದರಿಂದಲೇ ನಾವು ಮಾಡಿದೆವು ಅನ್ನುವ ನಿಜವನ್ನೂ ಈಕ್ವಿಟಾಸ್ ಸಂಸ್ಥೆಯ ವಾಸು ಹೇಳಿದ್ದರು. ಹೀಗಾಗಿ ತಮ್ಮ ಕನಸಿನ ಒಂದು ಭಾಗವಾದರೂ ಸಾಕಾರಗೊಳ್ಳುತ್ತಿರುವುದನ್ನು ಕಂಡು ಸೀತಾರಾಮ್ ಅಸುನೀಗಿದರು ಅನ್ನುವುದೇ ಒಂದು ತೃಪ್ತಿ.

ನಮ್ಮ ಸಂಸ್ಥೆಯಲ್ಲಿ ಒಂದು ಸೆಮಿನಾರಿಗೆ ನಾವು ಸೀತಾರಾಮನ್ನು ಕರೆಸಿದ್ದೆವು. ದಿನವಿಡೀ ಎಲ್ಲರೂ ಮಾತು ಚರ್ಚೆಯಲ್ಲಿ ಪಾಲ್ಗೊಂಡರು. ಸೀತಾರಾಮ್ ಮಾತ್ರ ತಮ್ಮ ಎಡಗೈಯಲ್ಲಿ ಪ್ಯಾಡಿನಲ್ಲಿ ಟಿಪ್ಪಣಿ ಹಾಕಿಕೊಳ್ಳುತ್ತಿದ್ದರು. ಎಲ್ಲ ಆದ ಮೇಲೆ ಸಂಜೆಗೆ ನಾನು ಆತನನ್ನು ಕೇಳಿದೆ: "ನೀವು ಒಂದೂ ಮಾತನ್ನು ಆಡಲಿಲ್ಲವಲ್ಲಾ?" ಅದಕ್ಕೆ ಸೀತಾರಾಮ್ ಎಂದಿನ ನಗೆ ನಕ್ಕು "ಇಷ್ಟೊಂದು ಜನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು, ಅದನ್ನು ನೋಡಿ ನಾನು ಕಲಿಯುತ್ತಾ, ಏನೆಲ್ಲಾ ಮಾಡಬಹುದೆಂದು ಟಿಪ್ಪಣಿ ಹಾಕಿಕೊಳ್ಳುತ್ತಾ ಇದ್ದೆ, ಈ ಎಲ್ಲರ ನಡುವೆ ನಾನು ಹೇಳಿಕೊಳ್ಳುವುದೇನಿದೆ. ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ" ಎಂದಿದ್ದರು.

ಪಿಕ್ಚರ್ ಅಭೀ ಬಾಕೀ ಹೈ ಮೇರೇ ದೋಸ್ತ್....




ಆತ್ಮಹತ್ಯೆಗಳು: ರೈತರೇ ಏಕೆ?


ಒಂದು ವ್ಯಾಪಾರ ವಿಫಲಗೊಂಡಾಗ ಆ ವ್ಯಾಪಾರಿ ಏನು ಮಾಡಬಹುದು? ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅನೇಕ ಉತ್ತರಗಳು ಕಾಣಸಿಗುತ್ತವೆ. ಆ ವ್ಯಾಪಾರಿ ಹಳೆಯ ವ್ಯಾಪಾರವನ್ನು ಮುಚ್ಚಿ ಹೊಸ ವ್ಯಾಪಾರಕ್ಕೆ ಕಾಲಿಡಬಹುದು, ವ್ಯಾಪಾರವನ್ನೇ ಬಿಟ್ಟು ಹೊಸ ನೌಕರಿಯನ್ನು ಹಿಡಿಯಬಹುದು, ವಿಫಲಗೊಂಡ ವ್ಯಾಪಾರವನ್ನು ಯಾರಿಗಾದರೂ ಮಾರಿ ಸುಮ್ಮನಾಗಬಹುದು, ಆದರೆ ವಿಫಲ ವ್ಯಾಪಾರಿಗಳು ತಮ್ಮ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುವುದಿಲ್ಲ. ಎಲ್ಲೋ ಆಗಾಗ ವ್ಯಾಪಾರಿಗಳು ಸಾಲದ ಹೊರೆಯನ್ನು ತಾಳಲಾರದೇ ಪ್ರಾಣ ತೆಗೆದುಕೊಂಡದ್ದನ್ನು ನಾವು ಕಾಣುತ್ತೇವಾದರೂ ಈ ಆತ್ಮಹತ್ಯೆಗಳ ಸಂಖ್ಯೆ ರೈತರ ಆತ್ಮಹತ್ಯೆಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ.

ವ್ಯಾಪರಗಳ ವೈಫಲ್ಯತೆಗೆ ಕಾರಣಗಳು ಭಿನ್ನವಾಗಿ ಇರುತ್ತವೆ. ಆದರೆ ಕೃಷಿ ಮತ್ತು ಇತರ ದೊಡ್ಡ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯ ಭಿನ್ನತೆಯನ್ನು ನಾವು ಅರ್ಥಮಾಡಿಕೊಂಡರೆ ಆತ್ಮಹತ್ಯೆಗಳು ಕೃಷಿ ಕ್ಷೇತ್ರದಲ್ಲೇ ಯಾಕೆ ಹಚ್ಚು ಅನ್ನುವುದಕ್ಕೆ ಹೊಳಹುಗಳು ಸಿಗಬಹುದು.

ಸಾಮಾನ್ಯತಃ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯನ್ನು ಗಮನಿಸೋಣ - ಅವುಗಳಲ್ಲಿ ಏಕ ಯಾಜಮಾನ್ಯ, ಸಹಭಾಗಿತ್ವ ಹಾಗೂ ಖಾಸಗೀ ಕಂಪನಿಗಳನ್ನು ನಾವು ಕಾಣುತ್ತೇವೆ. ಜೊತೆಗೆ ಸಹಕಾರ ಸಂಘಗಳೂ ನಮಗೆ ಕಾಣಸಿಗಬಹುದು. ಈ ಸಂಸ್ಥೆಗಳು ನಡೆಸುವ ವ್ಯಾಪಾರಗಳು ವಿಫಲವಾಗುವುದಕ್ಕೆ ಹಲವು ಕಾರಣಗಳಿರಬಹುದಾದರೂ ಅದು ಹೆಚ್ಚಿನಂಶ ವ್ಯಾಪಾರಿಯ ಅಂದಾಜು-ಲೆಕ್ಕ ಏರುಪೇರಾಗುವುದರಿಂದಲೇ ವಿಫಲವಾಗುವುದು ಹೆಚ್ಚು. ನೈಸರ್ಗಿಕ ಕಾರಣಗಳಾದ ಮಳೆ, ಬೆಂಕಿ, ಗಾಳಿ, ಹವೆಯಿಂದಾಗಿ ಈ ರೀತಿಯ ವ್ಯಾಪಾರಗಳು ನಷ್ಟ ಹೊಂದುವುದು ವಿರಳ, ಹಾಗೂ ಆ ಥರದ ನಷ್ಟಕ್ಕೆ ವಿಮೆಯ ಸವಲತ್ತೂ ಇದ್ದು ವ್ಯಾಪಾರಿಗಳಿಗೆ ಇತರೆ ಕಾರಣಗಳಿಂದಾಗುವ ನಷ್ಟಕ್ಕೆ ಒಂದು ರಕ್ಷಾಕವಚ ಇರುತ್ತದೆ.

ಕೃಷಿ ವಿಫಲವಾಗುವುದಕ್ಕೆ ಮೂಲತಃ ನೈಸರ್ಗಿಕ ಕಾರಣಗಳೇ ಹೆಚ್ಚು. ಅಧಿಕ ಮಳೆ, ಬಿರುಗಾಳಿ, ಬರ, ಕೀಟಗಳ ಕಾಟ - ಹೀಗೆ ಕೃಷಿ ವ್ಯಾಪಾರಿಯ ಸ್ವಂತ ಬುದ್ಧಿವಂತಿಕೆಗೆ ಮೀರಿದ, ಚಾಣಾಕ್ಷತೆಗೆ ಸಂಬಂಧವಿಲ್ಲದ ಘಟನೆಗಳೇ ಕೃಷಿ ವಿಫಲವಾಗುವುದಕ್ಕೆ ಕಾರಣೀಭೂತವಾಗಿಬಿಡುತ್ತವೆ. ಕೃಷಿಯ ನಷ್ಟಕ್ಕೆ ಪರಿಹಾರವಾಗಿ ವಿಮಾ ಯೋಜನೆಗಳನ್ನು ರೂಪಿಸುವುದೂ ಕಷ್ಟ. ವಿಮೆಯ ವ್ಯಾಪಾರ ಸಫಲವಾಗಬೇಕಾದರೆ ಒಟ್ಟಾರೆ ವೈಫಲ್ಯದ ಮಟ್ಟ ಕಡಿಮೆಯಾಗಿದ್ದಾಗಲೇ ಅದಕ್ಕೆ ಸಲ್ಲುವ ಪ್ರೀಮಿಯಂ ಮೊತ್ತವನ್ನು ಕಟ್ಟಿ ಮುಂದುವರೆಯಲು ಸಾಧ್ಯ. ಆದರೆ ಮೂರು-ನಾಲ್ಕುವರ್ಷಗಳಿಗೊಮ್ಮೆ ಕೃಷಿ ಯಾವುದೇಕಾರಣಕ್ಕಾಗಿ ವಿಫಲವಾಯಿತೆಂದು ನಾವು ಅಂದುಕೊಂಡರೂ ಅದಕ್ಕೆ ಸಲ್ಲಬೇಕಾದ ಪ್ರೀಮಿಯಂ ಕನಿಷ್ಟ ಒಟ್ಟಾರೆ ಮೊತ್ತದ ೨೫ ಪ್ರತಿಶತಕ್ಕಿಂತ ಹೆಚ್ಚಾಗಿರಬೇಕೆನ್ನುವುದನ್ನು ಸರಳ ಲೆಕ್ಕಾಚಾರ ತಿಳಿಸುತ್ತದೆ. ಹೀಗಾಗಿ ಮೂಲತಃ ಹೆಚ್ಚಿನ ವೈಫಲ್ಯತೆಯಿಂದ ಕೂಡಿರುವ ಕೃಷಿಗೆ ವಿಮಾಕವಚ ತೊಡಿಸುವದೂ ಆಗದ ಮಾತು.

ಹೀಗೆ, ಮೂಲತಃ ವೈಫಲ್ಯತೆಯ ಅಪಾಯವಿರುವ, ವೈಫಲ್ಯತೆಗೆ ಕಾರಣಗಳು ನೈಸರ್ಗಿಕವಾಗಿರುವ, ವಿಮೆಯ ಸುರಕ್ಷಾಕವಚವಿಲ್ಲದ ವ್ಯಾಪಾರವನ್ನು ನಮ್ಮ ದೇಶದ ಕೃಷಿಕರು ನಡೆಸುತ್ತಾ ಬಂದಿದ್ದಾರೆ! ಮೂಲತಃ ಕೃಷಿಯಲ್ಲಿ ರಿಸ್ಕ್ ಹೆಚ್ಚಿದೆ ಅನ್ನುವುದನ್ನು ಒಪ್ಪುವುದಾದರೆ ಅದು ಆಯೋಜಿತವಾಗಿರುವ ರೀತಿಯಲ್ಲಿ ಆ ರಿಸ್ಕನ್ನು ಮೈಗೂಡಿಸಿಕೊಂಡು ಮುಂದುವರೆಯುವ ತಾಕತ್ತನ್ನು ಈ ವ್ಯಾಪಾರ ನೀಡುವುದಿಲ್ಲ. ಹಾಕಿದ ಬೆಳೆಗೆ ಎಷ್ಟು ಇಳುವರಿ ಬರುತ್ತದೆ ಅನ್ನುವುದು ಒಂದು ಆಯಾಮವಾದರೆ, ಆ ಇಳುವರಿಗೆ ಎಷ್ಟು ಬೆಲೆ ಬರಬಹುದು ಅನ್ನುವುದೂ ಅಪಾಯವಾಗಿಯೇ ಇರುತ್ತದೆ. ಕೃಷಿ ಉತ್ಪನ್ನ ಮಾಡುವುದು ಎಲ್ಲರ ಅಸ್ತಿತ್ವಕ್ಕೂ ಅವಶ್ಯಕವಾದ ಆಹಾರವನ್ನಾದ್ದರಿಂದ ಅದರಲ್ಲಿ ಮಿಕ್ಕ ವ್ಯಾಪಾರಗಳಂತೆ ವಿಪರೀತವಾದಂತಹ ಲಾಭವನ್ನು ಆರ್ಜಿಸುವುದು ಸಾಧ್ಯವೇ ಇಲ್ಲ. ಆಹಾರ ಪದಾರ್ಥಗಳ ಬೆಲೆಯನ್ನು ಹದ್ದುಬಸ್ತಿನಲ್ಲಿಡುವುದೂ ಸರಕಾರದ ಒಂದು ಜವಾಬ್ದಾರಿಯಾದ್ದರಿಂದ ಕೃಷಿಯ ಲಾಭಾಂಶಕ್ಕೆ ಒಂದು ರೀತಿಯ ಮೇಲ್ಮಿತಿಯನ್ನು ಸಹಜವಾಗಿಯೇ ಸರಕಾರ ಹಾಕಿಬಿಡುತ್ತದೆ. ಈ ವ್ಯಾಪಾರದಲ್ಲಿ ಇರುವ ಅಪಾಯಕ್ಕೂ ಬರುವ ಬೆಲೆಗೂ ಇರುವ ಸಂಬಂಧ ತೆಳುವಾದದ್ದಾಗಿದೆ.

ಮೇಲ್ಮಿತಿಯಿರುವ ಈ ವ್ಯಾಪಾರದಲ್ಲಿ ಆಗುವ ನಷ್ಟಕ್ಕೆ ತಳಮಿತಿ ಇಲ್ಲವೇ ಇಲ್ಲ. ಹಾಗೆಂದರೇನು? ಏಕಸ್ವಾಮ್ಯ ಮತ್ತು ಭಾಗಸ್ವಾಮ್ಯ ಸಂಸ್ಥೆಗಳನ್ನು ಬಿಟ್ಟರೆ, ಮಿಕ್ಕ ವ್ಯಪಾರಗಳು ಆಯೋಜಿತವಾಗಿರುವುದು ಕಂಪನಿ ಅಥವಾ ನಿಗಮಗಳಾಗಿ. ಈ ಸಂಸ್ಥೆಗಳ ಹೆಸರಿನ ಅಂತ್ಯದಲ್ಲಿ ಬರುವ "ಲಿಮಿಟೆಡ್" ಅಥವಾ "ನಿಯಮಿತ" ಅನ್ನುವ ಪದದಲ್ಲಿರುವ ಜಾದೂವಿನಿಂದಾಗಿ ನಮ್ಮ ದೇಶದಲ್ಲೇ ಅಲ್ಲ, ಬದಲಿಗೆ ಪ್ರಪಂಚದಾದ್ಯಂತ ’ವಿಫಲ’ ಸಂಸ್ಥೆಗಳಿದ್ದರೂ ಅದನ್ನು ನಡೆಸಿದ ವ್ಯಾಪಾರಿಗಳು ’ಸಫಲ’ರಾಗಿರುವುದನ್ನು ನಾವು ಕಾಣಬಹುದು. ಒಂದು ನಿಯಮಿತ ಕಂಪನಿಯಲ್ಲಿ ಹಣ ಹೂಡಿದರೆ - ಹೂಡಿಕೆದಾರರ ನಷ್ಟ ಅವರು ಒಪ್ಪಿರುವ ಮೊತ್ತಕ್ಕೆ ನಿಯಮಿತವಾಗಿರುತ್ತದೆ. ಹೀಗಾಗಿ ಆ ಸಂಸ್ಥೆ ನಷ್ಟಕ್ಕೆ ಹೋದರೂ, ಸಂಸ್ಥೆಯ ಮಾಲೀಕರು ಆ ಸಂಸ್ಥೆಯಲ್ಲಿ ಹೂಡಿದ ಹಣದ ಮಟ್ಟಿಗೆ ನಷ್ಟವನ್ನು ಅನುಭವಿಸಿ ಬಚಾವಾಗಬಹುದು! ಹೀಗಾಗಿ ಅವರ ವೈಯಕ್ತಿಕ ಸಂಪತ್ತು ಮತ್ತು ಆಸ್ತಿಯನ್ನು ಒಂದು ರೀತಿಯಲ್ಲಿ ಕಾಪಾಡಿಕೊಂಡೇ ವ್ಯಾಪಾರ ಮಾಡಬಹುದು. ಆಧುನಿಕ ಜಗತ್ತಿನ ಈ ಅದ್ಭುತ ಸಂಸ್ಥಾಗತ ಚೌಕಟ್ಟು ಇರುವುದರಿಂದ ’ವಿಫಲ’ತೆಗೆ ತಕ್ಕ ನಷ್ಟ ಇಲ್ಲದೇ ಹೋಗುತ್ತದೆ. ಒಂದು ವೇಳೆ ಹೂಡಿಕೆದಾರ ಹಾಕಿದ ಹಣಕ್ಕಿಂತ ಹೆಚ್ಚಿನ ನಷ್ಟವನ್ನು ಆ ಸಂಸ್ಥೆ ಅನುಭವಿಸಿದರೆ ಅದರ ವಿ’ಫಲ’ವನ್ನು ಪಡೆಯುವವರು ಅಂಥ ಸಂಸ್ಥೆಗೆ ಹಣ ನೀಡಿದ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳು [ಇದಕ್ಕೆ ಇಂಗ್ಲೀಷಿನಲ್ಲಿ ಹೇರ್‌ಕಟ್ ಅನ್ನುವ ಘನತೆಯ ಹೆಸರಿದ್ದರೂ, ನಾವು ಮಾತ್ರ ’ತಲೆ ಬೋಳಿಸುವುದು’ ಎನ್ನುವ ವಾಸ್ತವವನ್ನು ಯಾವ ಮುಲಾಜೂ ಇಲ್ಲದೇ ನೇರವಾಗಿ ಹೇಳುತ್ತೇವೆ].

ಹೀಗಿರುವಾಗ ವಿಫಲ ಸಂಸ್ಥೆಗಳನ್ನು ನಡೆಸಿದ ಹೂಡಿಕೆದಾರರು ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕಿ ಮರುಜನ್ಮ ಪಡೆಯಬಹುದು. ಗ್ಲೋಬಲ್ ಟ್ರಸ್ಟ್ ಬ್ಯಾಂಕನ್ನು ಸ್ಥಾಪಿಸಿ ಮುಳುಗಿಸಿದ ರಮೇಶ್ ಗೆಲ್ಲಿಯವರ ಖಾಸಗೀ ಆಸ್ತಿ, ಅಥವಾ ಸತ್ಯಂ ರಾಮಲಿಂಗ ರಾಜು ಅವರ ವೈಯಕ್ತಿಕ ಆಸ್ತಿಗೆ ಆ ಸಂಸ್ಥೆಗಳ ಗೊಂದಲಗಳಿಂದ ಯಾವ ಧಕ್ಕೆಯೂ ಬಂದಿಲ್ಲ. ಹೀಗೆ ಕೃಷಿಯೇತರ ಕ್ಷೇತ್ರದಲ್ಲಿ ನಮಗೆ ಲಭ್ಯವಿರುವ ಸಂಸ್ಥಾಗತ ಚೌಕಟ್ಟಿನಲ್ಲಿ ಹೂಡಿಕೆದಾರರು ತಮ್ಮ ರಿಸ್ಕನ್ನು ಒಂದು ಹದ್ದುಬಸ್ತಿನಲ್ಲಿಟ್ಟಿರಲು ಸಾಧ್ಯವಿದೆ. ಅದೇ ಆ ಸಂಸ್ಥೆ ಲಾಭವನ್ನು ಆರ್ಜಿಸಿದಲ್ಲಿ ಮೇಲ್ಮಿತಿಯಿಲ್ಲದೇ ಆ ಎಲ್ಲ ಲಾಭವೂ ಹೂಡಿಕೆದಾರರಿಗೇ ಸಂದುತ್ತದೆ. ಇಂದು ನಾವು ನೋಡುತ್ತಿರುವ ಅನೇಕ ಕೋಟ್ಯಾಧಿಪತಿಗಳು ಈ ಮೇಲ್ಮಿತಿಯಿಲ್ಲದಿರುವ ಲಾಭಾಂಶದ ಫಲಧಾರಿಗಳೇ.

ಹತ್ತು ಸಾವಿರ ರೂಪಾಯಿನ ಹೂಡಿಕೆಯಿಂದ ಪ್ರಾರಂಭಿಸಿ ಇನ್ಫಿಯನ್ನು ಈ ಮಟ್ಟಕ್ಕೆ ತಂದಿರುವ ಯಶೋಗಾಥೆ ನಮ್ಮ ಮುಂದಿದೆ. ಆದರೆ ಈ ಜಾದೂ ಕೃಷಿಕ್ಷೇತ್ರದಲ್ಲಿ ಕೆಲಸ ಮಾಡಿದ ಯಾರಿಗಾದರೂ [ಸಣ್ಣ, ದೊಡ್ಡ, ಮಧ್ಯಮವರ್ಗದ ರೈತರಿಗೆ] ಆಗಿದೆಯೇ ಅನ್ನುವ ಪ್ರಶ್ನೆ ಬಂದಾಗ ನಮಗೆ ಇಲ್ಲಿರುವ ಸಂಸ್ಥಾಗತ ಚೌಕಟ್ಟಿನ ಪದರಗಳ ಅರಿವು ಹೆಚ್ಚಾಗಿ ಆಗುತ್ತದೆ. ಕೃಷಿ ಅಷ್ಟು ಲಾಭದಾಯಕವಲ್ಲ. ರೈತರು ಹಣ ಮಾಡುತ್ತಿಲ್ಲ. ಆದರೆ ಆ ಕ್ಷೇತ್ರವನ್ನೇ ನಂಬಿ ಮುಂದುವರೆದ ಎಷ್ಟೋ ಸಂಸ್ಥೆಗಳು - ಐಟಿಸಿ, ಬ್ರಿಟಾನಿಯಾ, ಆಹಾರ ವ್ಯಾಪಾರದಲ್ಲಿ ತೊಡಗಿರುವ ಬೃಹತ್ ಸೂಪರ್ ಬಜಾರುಗಳು - ಎಲ್ಲರೂ ಲಾಭವನ್ನು ಆರ್ಜಿಸುವ ಸಾಧ್ಯತೆಯನ್ನು - ಮೇಲ್ಮಿತಿಯಿಲ್ಲದ ಲಾಭಾರ್ಜನೆಯ ಕನಸನ್ನು ಕಾಣಬಹುದಾದರೂ ಆ ಕನಸು ಕೃಷಿಕರಿಗೆ ಮಾತ್ರ ಇಲ್ಲವಾಗುತ್ತದೆ.

ಹೀಗಾಗಿ ಕೃಷಿ ಕೈಕೊಟ್ಟಾಗ - ಅನಿಯಮಿತ ಆರ್ಥಿಕ ಜವಾಬ್ದಾರಿಯನ್ನು ಹೊತ್ತು ನಡೆವ ರೈತರು ಮನೆ, ಆಸ್ತಿ, ಆಭರಣಗಳನ್ನು ಮಾರಿಕೊಳ್ಳಬೇಕಾಗಿ ಬಂದಾಗ - ಅವರಿಗೆ ಕಾಣುವ ದಾರಿ ಕರಾಳವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾದರೂ ಸಂಸ್ಥಾಗತ ಮೂಲಗಳು ಕೃಷಿಯಲ್ಲಿ ತೊಡಗಲು ನಮ್ಮ ಸರಕಾರಗಳು ಪರವಾನಗಿ ನೀಡುತ್ತಿಲ್ಲ - ಗುತ್ತಿಗೆ ಕೃಷಿಯೂ ನಮ್ಮ ದೇಶದಲ್ಲಿ ಪ್ರಚಲಿತವಿಲ್ಲ. ಮಿಕ್ಕ ವಿಕಸಿತ ದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ಜನಸಂಖ್ಯೆ ಕಡಿಮೆಯಾದ್ದರಿಂದ ಅವರಿಗೆ ಹೊಂದುವ ಪ್ರಣಾಲಿಗಳನ್ನು ರೂಪಿಸುವುದು ಆ ಸರಕಾರಗಳಿಗೆ ಸಾಧ್ಯವಾಗಿದೆಯಾದರೂ, ನಮ್ಮ ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಯನ್ನು ನಾವು ಗುರುತಿಸಿಯೇ ಇಲ್ಲ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿ ಆತ್ಮಹತ್ಯೆಗೆ ರೈತರೇ ಏಕೆ ಎಂದು ಕೇಳುವ ಪ್ರಶ್ನೆಯನ್ನು ರೈತರಲ್ಲದೆ ಇನ್ಯಾರು ಎಂದು ಕೇಳುವ ದುರಂತಮಯ ಸ್ಥಿತಿಗೆ ನಾವು ಬಂದುಬಿಟ್ಟಿದ್ದೇವೆ.