Friday, June 19, 2009

ನಾ ಹೇಗೆ ಬಡವನು ನಾ ಹೇಗೆ ಪರದೇಶಿ...

ಅಭಿವೃದ್ಧಿಯ ಮಾತನಾಡುವಾಗಲೆಲ್ಲಾ ಬಡತನದ ರೇಖೆಯ ಮಾತು ಸಹಜವಾಗಿ ಬರುತ್ತದೆ. ಬಡತನದ ರೇಖೆಯ ಮೇಲಿರುವ ಜನಸಂಖ್ಯೆ ಪ್ರಮಾಣ ಅಭಿವೃದ್ಧಿಯ ಅನೇಕ ಮಾಪಕಗಳಲ್ಲಿ ಒಂದು. ಭಾರತದಲ್ಲಿ ಈ ರೇಖೆಯನ್ನು ನಿರ್ಧರಿಸಲು ಕ್ಯಾಲೋರಿಫಿಕ್ ವ್ಯಾಲ್ಯೂ ಆಧಾರದ ಮೇಲೆ [ಅಂದರೆ ಇಂತಿಷ್ಟು ಶಕ್ತಿಯನ್ನು ಆರ್ಜಿಸಲು ಬೇಕಾದ ಆಹಾರವನ್ನು ಕೊಳ್ಳಲು ಆಗುವ ಖರ್ಚಿನ ಆಧಾರದ ಮೇಲೆ] ವಾರ್ಷಿಕ ಆದಾಯವನ್ನು ನಿಗದಿ ಮಾಡಲಾಗಿದೆ. ಪ್ರತೀ ವರ್ಷ ಸರಕಾರ ಇಂತಿಷ್ಟು ಮಂದಿ ಬಡತನದ ರೇಖೆಯನ್ನು ಉಲ್ಲಂಘಿಸಿದ್ದಾರೆಂದು ಘೋಷಿಸಿ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತದೆ. ಸರಕಾರದ ಯಾವುದೇ ಅಂಕಿ ಅಂಶಗಳನ್ನು ಅನುಮಾನದಿಂದ ನೋಡುವ ಜನ ಈ ಮಾಪನವನ್ನು ಸಹಜವಾಗಿ ಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಬಡತನವನ್ನು ಅಳೆಯಲು [ಸ್ಥಳೀಯ ಹಣದ ಖರೀದಿಯ ಶಕ್ತಿಯನುಸಾರ] ದಿನಕ್ಕೊಂದು ಡಾಲರ್ ಸಮಾನವಾದ ಆದಾಯವನ್ನು ಮಾಪಕವನ್ನಾಗಿ ಇಟ್ಟುಕೊಳ್ಳಲಾಗಿದೆ. ಈಗೀಗ ಇದನ್ನು ಎರಡು ಹಂತಗಳಲ್ಲಿ ಅಳೆಯುವುದೂ ಉಂಟು. ದಿನಕ್ಕೊಂದು ಡಾಲರ್‌ಗಿಂತ ಕಡಿಮೆ ಆರ್ಜಿಸುವ ಅತೀ-ಬಡವರು ಹಾಗೂ ಎರಡು ಡಾಲರ್‌ವರೆಗೆ ಆದಾಯವಿರುವ ಬಡವರು.

ಬಡತನದ ಅಧ್ಯಯನ ನಡೆಸುವ ಹೆಚ್ಚಿನಂಶ ಎಲ್ಲರ ಗಮನವೂ ಕೇಂದ್ರೀಕೃತವಾಗಿರುವುದು ಬಡವರು ಬಡತನದಿಂದ ಬಿಡುಗಡೆ ಪಡೆಯುವ ಪರಿಯ ಬಗ್ಗೆ. ಹೀಗಿರುವಾಗ ಈ ಬಗ್ಗೆ ಒಂದು ಹೊಸ ಒಳನೋಟವನ್ನು ಡ್ಯೂಕ್ ಯೂನಿವರ್ಸಿಟಿಯ ಅನಿರುದ್ಧ ಕೃಷ್ಣ ನಮಗೆ ನೀಡುವ ಯತ್ನ ಮಾಡುತ್ತಿದ್ದಾರೆ. ಅನಿರುದ್ಧ ಕೃಷ್ಣರ ಅಧ್ಯಯನ ಎರಡು ನಿಟ್ಟಿನಿಂದ ನಮಗೆ ಮುಖ್ಯವಾಗುತ್ತವೆ. ಒಂದು: ಅವರು ಬಡತನವನ್ನು ನಿರ್ಧರಿಸುವ ರೀತಿ ಎರಡು: ಅದರ ಬಡತನಕ್ಕೆ ಕಾರಣಗಳ ಅಧ್ಯಯನ.

ಅವರ ಪ್ರಕಾರ ಬಡತನ ಎನ್ನುವುದು ಒಂದು ಕಟ್ಟುನಿಟ್ಟಿನ ಗೆರೆಯಲ್ಲ. ಬದಲಿಗೆ ಯಾರು ಬಡವರು ಎನ್ನುವ ವರ್ಗೀಕರಣವನ್ನು ಸ್ಥಳೀಯ ಸಮಾಜ ಡೈನಮಿಕ್ ಆಗಿ ಮಾಡುತ್ತಲೇ ಇರುತ್ತದೆ. ಹೀಗಾಗಿ ಅವರು ಬಡತನವನ್ನು ಪ್ರಗತಿಯ ಹಂತಗಳ ಮೂಲಕ ಅಳೆಯಲು ಪ್ರಯತ್ನಿಸುತ್ತಾರೆ. ಇದನ್ನು ನಿರ್ಧರಿಸುವ ಅವರ ರೀತಿಯೂ ಕುತೂಹಲದ್ದು:

ಮೊದಲಿಗೆ ಅವರು ಒಂದು ಪ್ರಾಂತಕ್ಕೆ ಹೋಗಿ ಜನರನ್ನು ಒಂದೆಡೆ ಸೇರಿಸಿ "ಇಲ್ಲಿ ನೀವು ಯಾರನ್ನು ಬಡವರೆಂದು ಕರೆಯುತ್ತೀರಿ?" ಅನ್ನುವ ಪ್ರಶ್ನೆಯನ್ನು ಚರ್ಚಿಸುತ್ತಾರೆ. ಅವರ ಇತ್ತೀಚಿನ ಅಧ್ಯಯನದಲ್ಲಿ ಮೂರು ರಾಜ್ಯಗಳಲ್ಲಿ ಜನರನ್ನು ಕೇಳಿದಾಗ ಅವರಿಗೆ ಬಡತನದ ಪರಿಭಾಷೆ ಭಿನ್ನವಾಗಿ ಬಂದದ್ದು ಕುತೂಹಲದ ವಿಷಯವಾಗಿದೆ. ಮೊದಲಿಗೆ ಅವರು ಈ ಮಾಪನಕ್ಕೆ ಬಳಸಿದ [ಜನರೇ ನಿರ್ಧರಿಸಿದ] ಪಟ್ಟಿಯನ್ನು ಗಮನಿಸೋಣ - [೧] ಕುಟುಂಬಕ್ಕೆ ಉಣ್ಣಲು ಸಾಕಷ್ಟು ಆಹಾರ ಸಿಗುತ್ತದೆಯೇ? [೨] ಮಕ್ಕಳನ್ನು ಶಾಲೆಗೆ ಕಳಿಸುವ ತಾಕತ್ತಿದೆಯೇ? [೩] ಮನೆಯಾಚೆ ಧರಿಸಲು ಉತ್ತಮ ಬಟ್ಟೆಗಳಿವೆಯೇ? [೪] ಸಾಲದ ಕಂತನ್ನು ನಿಯಮಿತವಾಗಿ ಮರುಪಾವತಿ ಮಾಡುವ ತಕತ್ತಿದೆಯೇ? [೫] ಬಾವಿ ತೋಡುವ/ಹೈನು ಕೊಳ್ಳುವ/ ಮೋಟರ್ ಸೈಕಲ್ ಕೊಳ್ಳುವ ಶಕ್ತಿಯಿದೆಯೇ? ಹೀಗೆ ಊಟದಿಂದಾರಂಭವಾಗಿ ಬೈಕ್ ಕೊಳ್ಳುವವರೆಗೂ ಒಂದು ಪ್ರಗತಿಯ ಮೆಟ್ಟಿಲನ್ನು ಜನರೇ ಪಟ್ಟಿಮಾಡುತ್ತಾರೆ. ರಾಜಾಸ್ಥಾನದಲ್ಲಿ ಊಟ, ಬಟ್ಟೆ, ಮಕ್ಕಳ ಸ್ಕೂಲು, ಸಾಲಮರುಪವತಿಯ ಘಟ್ಟಗಳನ್ನು ದಾಟಿದವರನ್ನು ಬಡತನದ ರೇಖೆಯನ್ನು ಉಲ್ಲಂಘಿಸಿದವರೆಂದು ಸಮುದಾಯ ನಿರ್ಧರಿಸಿದೆ. ಅದೇ ಗುಜರಾತಿಗೆ ಬಂದರೆ ಈ ನಾಲ್ಕೂ ಅಲ್ಲದೇ, ಮನೆಯ ಸಣ್ಣ ಪುಟ್ಟ ಮರಮ್ಮತ್ತು ಮಡಿಸಬಲ್ಲವರೂ, ಗುತ್ತಿಗೆಗೆ ಭೂಮಿ ಪಡೆದು ಕೃಷಿ ಮಾಡಬಲ್ಲವರೂ ಬಡವರೇ - ಹೀಗಾಗಿ ರಾಜಾಸ್ಥಾನದ ನಾಲ್ಕೂ ಅಂಶಗಳಲ್ಲದೇ ಇನ್ನೆರಡು ಅಂಶಗಳ ಉಲ್ಲಂಘನೆಯೂ ಗುಜರಾತಿನಲ್ಲಿ ಸೇರಿಕೊಳ್ಳುತ್ತದೆ. ರಾಜಾಸ್ಥಾನಕ್ಕಿಂತ ಹೆಚ್ಚು ವಿಕಾಸಗೊಂಡಿರುವ ಗುಜರಾತ್ ರಾಜ್ಯದಲ್ಲಿ, ಗುತ್ತಿಗೆಗೆ ಭೂಮಿ ಪಡೆಯಬಲ್ಲವರೂ ಬಡವರೇ! ಆಂಧ್ರಪ್ರದೇಶದ್ದು ಗಮ್ಮತ್ತಿನ ವಿಚಾರ. ಅಲ್ಲಿ - ಮಕ್ಕಳನ್ನು ಸ್ಕೂಲಿಗೆ ಕಳಿಸುವವರನ್ನು ಬಡತನದ ರೇಖೆಯ ಉಲ್ಲಂಘನೆ ಮಾಡಿದವರನ್ನಾಗಿ ಸಮುದಾಯದವರು ಪರಿಗಣಿಸಿದ್ದಾರೆ! ಆದರೆ ಮನೆಯ ಮರಮ್ಮತ್ತು ಮಾಡಿಸುವ ತಾಕತ್ತಿರುವವರು ಬಡವಾಗಿಯೇ ಪರಿಗಣಿಸಲ್ಪಡುತ್ತಾರೆ!

ಈ ರೀತಿಯ ವರ್ಗೀಕರಣದಿಂದಾಗಿ ನಮಗೆ ದೇಶದ ಭಿನ್ನ ಪ್ರಾಂತದಲ್ಲಿರುವ ನಂಬುಗೆಗಳ ಪರಿಚಯವಾಗುತ್ತದೆ. ಇದರಿಂದ ಸ್ಪಷ್ಟ ನೀತಿಗಳನ್ನೂ ಸರಕಾರಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಅಂಕಿಸಂಖ್ಯೆಗಳ ಮಾತಿಗೆ ಬಂದಾಗ ಈ ಪದ್ಧತಿಯ ಪ್ರಯೋಜನ ಅಷ್ಟಕ್ಕಷ್ಟೇ. ಯೂನಿವರ್ಸಿಟಿಗಳಲ್ಲಿ ಅನಿರುದ್ಧ ಮತ್ತು ನನ್ನಂತಹವರು ಮಾಡುವ ಅಧ್ಯಯನಕ್ಕೂ ಸರಕಾರದ ನೀತಿ ರೂಪುಗೊಳ್ಳುವುದಕ್ಕೂ ಇರುವ ಅಂತರ ಇದೇ. ನಾವುಗಳು ಒಂದು ಪ್ರಾಂತದ ವಿವರವನ್ನು ಹಿಡಿದು ತೋರಿಸಬಲ್ಲೆವು. ಆದರೆ ನಮ್ಮ ಪದ್ಧತಿಯನ್ನು ಸರಕಾರ ಅಳವಡಿಸ ಹೋದರೆ ಇರುವ ಬಜೆಟ್ಟೆಲ್ಲಾ ಮಾಹಿತಿ ಸಂಗ್ರಹಿಸುವುದರಲ್ಲೇ ಖರ್ಚಾಗಿಬಿಡಬಹುದು! ಹೀಗಿದ್ದಾಗ್ಯೂ ಈ ಅಧ್ಯಯನಗಳಿಂದ ಸರಕಾರದ ಪದ್ಧತಿಗಳಿಗೆ ಉಂಟುಮಾಡಬಹುದಾದ ಸುಧಾರಣೆಯನ್ನು ನಾವು ಸೂಚಿಸಲು ಸಾಧ್ಯವಾಗುತ್ತದೇನೋ.

ಅನಿರುದ್ಧರ ಮಾಹಿತಿ ಸಂಗ್ರಹಣೆ ಬಡತನವನ್ನು ನಿರ್ಧರಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಬದಲಿಗೆ ಅವರು ಮಾಡಿದ ಅಧ್ಯಯನದ ಮುಖ್ಯ ಭಾಗವೆಂದರೆ - ಬಡತನದಿಂದ ಮುಕ್ತರಾದವರ ಸಂಖ್ಯೆಯನ್ನು ಸರಕಾರ ನೀಡುತ್ತಲೇ ಇರುತ್ತದಾದರೂ, ಬಡವರಾಗಿಲ್ಲದಿದ್ದು - ಬಡತನಕ್ಕೆ ಜಾರಿದವರ ಸಂಖ್ಯೆಯನ್ನು ಯಾರೂ ನೋಡುವುದೇ ಇಲ್ಲ ಅನ್ನುವ ಅತೀ ಮುಖ್ಯ ಅಂಶಕ್ಕೆ ಸಂಬಂಧಿಸಿದ್ದು. ಅವರು ಅಧ್ಯಯನ ಮಾಡಿದ ಮೂರು ರಾಜ್ಯಗಳಲ್ಲಿ, ಕಳೆದ ಇಪ್ಪತ್ತೈದು ವರ್ಷಗಳಲ್ಲಿನ ಅಂಕಿ ಸಂಖ್ಯೆಯಿಂದ ತಿಳಿಯುದು ಇದು: ರಾಜಾಸ್ಥಾನದಲ್ಲಿ ೧೧ ಪ್ರತಿಶತ ಜನ ಬಡತನವನ್ನು ಉಲ್ಲಂಘಿಸಿ ಮುಂದುವರೆದರೆ, ೮ ಪ್ರತಿಶತ ಬಡವರಲ್ಲದ ಜನ ಬಡತನಕ್ಕೆ ಜಾರಿದರು. ಒಟ್ಟಾರೆ ನಿವ್ವಳ ಪ್ರಗತಿ ೩ ಪ್ರತಿಶತ ಮಾತ್ರ. ಹಾಗೇ ಗುಜರಾತಿನಲ್ಲಿ ೩ ಮತ್ತು ಆಂಧ್ರಪ್ರದೇಶದಲ್ಲಿ ೨ ಪ್ರತಿಶತ ಮಾತ್ರ ನಿವ್ವಳ ಪ್ರಗತಿಯಾಗಿದೆ.

ಅಂದರೆ ಸರಕಾರೀ ನೀತಿಗಳಲ್ಲಿ ಬಡವರನ್ನು ಮೇಲೆತ್ತುವ ಕಾರ್ಯಕ್ರಮಗಳು ನಮಗೆ ಕಾಣಿಸಿದರೂ ಜನ ಬಡತನಕ್ಕೆ ಜಾರದಿರುವಂತೆ ನೋಡಿಕೊಳ್ಳುವ, ಬಡತನಕ್ಕೆ ಪತನವಾಗದಿರುವ ನೀತಿಗಳು ಹೆಚ್ಚಾಗಿ ಕಾಣುವುದಿಲ್ಲ. ಇದನ್ನು ಬಗೆದು ನೋಡುವುದು ಅವಶ್ಯಕ. ಬಡತನವನ್ನು ಭೇದಿಸಿ ಹೊರಬರುವುದಕ್ಕೆ ಮತ್ತು ಪತನಕ್ಕೆ ಕಾರಣಗಳು ತೀರಾ ಭಿನ್ನ ಎಂದು ಅನಿರುದ್ಧ ಹೇಳುತ್ತಾರೆ.

ಬಡತನದಿಂದ ಹೊರಬರಲು ಕಾರಣಗಳು ಮುಖ್ಯತಃ ಮಾಡುತ್ತಿರುವ ವೃತ್ತಿಯ ವೈವಿಧ್ಯತೆಯಿಂದಾಗಿ ಉಂಟಾಗುತ್ತದೆ. ಅರ್ಥಾತ್: ಕೃಷಿಯ ಜೊತೆಜೊತೆಗೇ ಮತ್ತೊಂದು ಆದಾಯವೂ ಆ ಕುಟುಂಬಕ್ಕೆ ಇದ್ದಲ್ಲಿ ಅನೇಕ ದಾರಿಗಳಿಂದ ಮನೆಗೆ ಹಣ ಬರುತ್ತಿದ್ದಲ್ಲಿ ಆರ್ಥಿಕವಾಗಿ ಕುಟುಂಬಗಳು ಉದ್ಧಾರವಾಗಲು ಸಾಧ್ಯ. ಹಾಗೆಯೇ ಸರಕಾರಿ ಅಥವಾ ಖಾಸಗೀ ನೌಕರಿ ಸಿಕ್ಕಾಗ, ಕೃಷಿಗೆ ನೀರಿನ ಸದುಪಾಯ ಒದಗಿ ಬಂದಾಗ ಜನ ಬಡತನದಿಂದ ಹೊರಬರುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

ಅದೇ ಬಡತನಕ್ಕೆ ಜಾರಲು ಕಾರಣಗಳೇನಿರಬಹುದು? ಸೋಮಾರಿತನದಿಂದ ಅಥವಾ ಮದ್ಯಪಾನದಿಂದ ಸಂಸಾರ ಸರ್ವನಾಶವಾಗುತ್ತದೆ ಅನ್ನುವುದಕ್ಕೆ ತಮ್ಮ ಬಳಿ ಯಾವುದೇ ಮಾಹಿತಿಯಿಲ್ಲವೆಂದು ಅನಿರುದ್ಧ ಹೇಳುತ್ತಾರೆ. ಪತನಕ್ಕೆ - ಅನಾರೋಗ್ಯದಿಂದಾಗಿ ಆಗುವ ಖರ್ಚು, ಮದುವೆ, ಶ್ರಾದ್ಧ, ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳಿಗಾಗುವ ಖರ್ಚು ಮತ್ತು ಅನಾವೃಷ್ಟಿಯಿಂದಾಗ ಕೃಷಿ ವಿಫಲಗೊಳ್ಳುವುದು ಹೀಗೆ ಮೂರು ಮುಖ್ಯ ಕಾರಣಗಳನ್ನು ಹಾಗೂ ಈ ಎಲ್ಲಕ್ಕಾಗಿ ಮಾಡುವ ಸಾಲ ಮತ್ತು ಅದನ್ನು ತೀರಿಸಲಾರದ ಪರಿಸ್ಥಿತಿ ನಾಲ್ಕನೇ ಕಾರಣವೆಂದೂ ಅವರು ಕಂಡುಕೊಂಡಿದ್ದಾರೆ.

ಹೀಗೆ ಬಡತನವನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಸರಿಯಾದ ನೀತಿಗಳನ್ನು ರೂಪಿಸಲು ಈ ರೀತಿಯ ಅಧ್ಯಯನಗಳಿಂದ ಸಾಧ್ಯವಾಗಬಹುದು. ಇದನ್ನು ಗಮನದಲ್ಲಿಟ್ಟಾಗ ಬಹುಶಃ ಹಿಂದಿನ ಸರಕಾರ ಮಾಡಿದ ಸಾಲಮನ್ನಾ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ ಎಂದು ಒಪ್ಪಿಕೊಳ್ಳಬೇಕಾಗಬಹುದೇನೋ. ಆದರೂ ಅದು ನಾಲ್ಕನೆಯ ಕಾರಣ. ಮೂಲಭೂತ ಕಾರಣದ ಬಗ್ಗೆ ಯಾವ ರೀತಿಯ ನೀತಿಗಳನ್ನು ರೂಪಿಸಬಹುದು ಅನ್ನುವುದೇ ಸರಕಾರ ನಡೆಸಬೇಕಾದ ಕಸರತ್ತಿನ ವಿಷಯ. ಈ ನಿಟ್ಟಿನಲ್ಲಿ ಅನಿರುದ್ಧ ಕೇವಲ ದಿಕ್ಕು ತೋರಿಸಿ ಏನೂ ಹೇಳದೇ ಇದ್ದುಬಿಟ್ಟಿದ್ದಾರೆ. ಐ‌ಏ‌ಎಸ್ ಅಧಿಕಾರಿಯಾಗಿದ್ದು ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಆ ಕೆಲಸವನ್ನು ಒಗೆದು ಯೂನಿವರ್ಸಿಟಿಯಲ್ಲಿ ಅಧ್ಯಯನಗಳನ್ನು ಮಾಡುವುದಕ್ಕೆ ಯಾಕೆ ತೊಡಗಿದರೋ ಅನ್ನುವಷ್ಟೇ ಚಿದಂಬರ ರಹಸ್ಯ, ಸರಕಾರವನ್ನು ಒಳಗಿನಿಂದ ಬಲ್ಲ ಅವರು ತಮ್ಮ ಅಧ್ಯಯನದಿಂದ ನೀತಿಗಳನ್ನು ಹೇಗೆ ರೂಪಿಸಬಹುದು ಅನ್ನುವುದನ್ನು ಯಾಕೆ ಸೂಚಿಸಿಲ್ಲ ಅನ್ನುವುದು.


Tuesday, June 16, 2009

ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ

ಕಳೆದ ವರ್ಷ ನಾವುಗಳು ಕ್ಯಾತದೇವರಗುಡಿಯ ಅರಣ್ಯದ ಪ್ರಾಂತಕ್ಕೆ ಪ್ರವಾಸ ಹೋದಾಗ ಜಂಗಲ್ ಲಾಡ್ಜಸ್‍ನ ಗೈಡ್ ಕಂ ಡ್ರೈವರ್ ಹರ್ ಬಹದ್ದೂರ್ ಥಾಪಾ ಜೊತೆ ಮಾತು ಬೆಳೆಸಿದ್ದೆ. ಥಾಪಾ ಹಿಮಾಚಲ ಪ್ರದೇಶದವನು, ಭಾರತೀಯ ಸೇನೆಯಲ್ಲಿದ್ದು ಯಾವುದೋ ಲಕ್-ಬೈ-ಚಾನ್ಸ್ ಆಗಿ ಇಲ್ಲಿ ಕೆಲಸ ಸಿಕ್ಕಿತ್ತಂತೆ. ದೂರದ ಹಿಮಾಚಲಕ್ಕೆ ಅವನು ಹಣ ಪಾವತಿಸುವುದು ಹೇಗೆ ಅನ್ನುವ ಕುತೂಹಲ ನನ್ನಲ್ಲಿತ್ತು. ವಲೆಸೆ ಹೋಗುವ ಕೆಲಸಗಾರರಿಗೆ ಇದು ದೊಡ್ಡ ಸವಾಲೆನ್ನುವುದನ್ನು ನಾವುಗಳು ಅನೇಕ ಅಧ್ಯಯನಗಳಲ್ಲಿ ಕಂಡುಕೊಂಡಿದ್ದೆವು. ಸಾಮಾನ್ಯವಾಗಿ ವಲೆಸೆ ಹೋಗುವ ಕೆಲಸಗಾರರು ತಮ್ಮ ಮುಕದ್ದಂ [ಮೇಸ್ತ್ರಿಗಳ] ಮೂಲಕವೇ ಎಲ್ಲ ವ್ಯವಹಾರವನ್ನೂ ಮಾಡುತ್ತಾರೆ. ಆದರೆ ಮುಕದ್ದಂ ಇಲ್ಲದ ಕೆಲಸದಲ್ಲಿರುವ ಈತ ಕರ್ನಾಟಕದಲ್ಲಿ ಸಂಪಾದಿಸುವ ಹಣವನ್ನು ಹಿಮಾಚಲಕ್ಕೆ ತಲುಪಿಸುವುದೂ ಅಥವಾ ಸೂರತ್‍ನ ವಜ್ರದ ಯೂನಿಟ್ಟುಗಳಲ್ಲಿ ಕೆಲಸ ಮಾಡುವ ಒಡಿಯಾ ಕೆಲಸಗಾರರು ಒರಿಸ್ಸಾಗೆ ಹಣ ತಲುಪಿಸುವುದೂ ಒಂದು ಸವಾಲೇ ಆಗಿತ್ತು. ಕಾರಣಗಳು ಅನೇಕ.

- ಮನಿ ಆರ್ಡರ್ ಮಾಡುವುದು ದುಬಾರಿ, ಸಾಲದ್ದಕ್ಕೆ ಪೋಸ್ಟ್ ಮನ್ ತನ್ನ ಪುಟ್ಟ ಪಾಲನ್ನು ಹಣ ತಲುಪಿಸಿದ್ದಕ್ಕೆ ಪಡೆಯುವ ಪರಿಪಾಠವೂ ಕಾಣಸಿಗುವುದು ಸಾಮಾನ್ಯ.

- ಬ್ಯಾಂಕಿನ ಡಿಡಿ ತೆಗೆದು ಕಳಿಸುವುದೂ ಪಿರಿಪಿರಿಯ ಕೆಲಸ ಅದಕ್ಕಾಗಿ ಪಾವತಿ ಮಾಡುವ ಕೇಂದ್ರದಲ್ಲಿ ಬ್ಯಾಂಕಿಗೆ ಒಂದಕ್ಕಿಂತ ಹೆಚ್ಚು ಬಾರಿ ಹೋಗಬೇಕಾದ್ದಲ್ಲದೇ [ಚೆಲಾನ್ ಕಟ್ಟಲು, ಹಾಗೂ ಡಿಡಿ ಪಡೆಯಲು] - ಹಣ ಪಡೆಯುವ ಜಾಗದಲ್ಲಿ ಡಿಡಿಯನ್ನು ಎಕೌಂಟಿಗೆ ಜಮಾ ಮಾಡಿ ಹಣ ಪಡೆಯಲು ಒಂದು ದಿನ ಕಾಯಬೇಕು.

- ಇವೆರಡೂ ಬಿಟ್ಟರೆ ವಲಸೆ ಕಾರ್ಮಿಕರು ಉಪಯೋಗಿಸಿಕೊಳ್ಳುತ್ತಿದ್ದ ಮೂರನೆಯ ದಾರಿಯೆಂದರೆ - ತಮ್ಮ ಊರಿನವರು ಯಾರಾದರೂ ಅತ್ತ ಹೋಗುತ್ತಿದ್ದರೆ ಅವರ ಕೈಯಲ್ಲಿ ಹಣ ಕಳುಹಿಸುವುದು. ಇದರಲ್ಲೂ ಸಮಯ ಹಿಡಿಯುವುದಲ್ಲದೇ ಒಂದು ವಿಚಿತ್ರ ಅಪಾಯವಿದೆಯೆಂದು ವಲಸೆ ಕಾರ್ಮಿಕರು ಅನೇಕ ಬಾರಿ ಮಾತನಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ [ಹೆಚ್ಚಿನಂಶ ರಿಜರ್ವೇಶನ್ ಇಲ್ಲದ ಬೋಗಿಯಲ್ಲಿ ಇವರುಗಳು ಹೋಗುವುದರಿಂದ] ಹಣ ಕಳ್ಳತನವಾಗುವ ಸಾಧ್ಯತೆಗಳಿದ್ದುವು. ಇನ್ನೂ ಕುತೂಹಲದ ಭೀತಿಯೆಂದರೆ ರೈಲ್ವೇ ಪೋಲೀಸರದ್ದು. ಹೆಚ್ಚಿನ ಹಣ ಹೊತ್ತೊಯ್ಯುವ ಬಡವರನ್ನು ಆರ್.ಪಿ.ಎಫ್.ನವರು ಅನುಮಾನದಿಂದ ನೋಡುತ್ತಾರಂತೆ. ಹೀಗಾಗಿ ಪೋಲೀಸರ ಪಿರಿಪಿರಿಯೂ, ಹಾಗೂ ಒಮ್ಮೊಮ್ಮೆ ಅವರಿಗೇ ಹಣವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ.

ಹೀಗೆ ವಲಸೆ ಬಂದು ನಾಲ್ಕು ಕಾಸು ಸಂಪಾದಿಸಿ ಹೋಗುವವರಿಗೆ ಉಳಿತಾಯವೇ ಇಲ್ಲದಂತೆ ಆಗುವ ಅಪಾಯವಿದೆ. ಎಲ್ಲರೀತಿಯಿಂದಲೂ ಇದು ಸವಾಲೇ. ಹೀಗಾಗಿ ವಲಸೆ ಬಂದ ಥಾಪಾ, ಈಚೆಗೆ ನಾನು ಕಟ್ಟಿಸಿದ ಮನೆಯಲ್ಲಿ ಮರದಕೆಲಸಕ್ಕೆ ಪಾಲಿಶ್ ಕೆಲಸ ಮಾಡಿದ ಗೊರಖ್‍ಪುರದ ರಾಧೇಶ್ಯಾಂ ಮತ್ತವನ ತಂಡದವರ ಸವಾಲೂ ಇದೇ ಇರಬಹುದು ಎಂದು ನಾನು ಕುತೂಹಲದಿಂದ ಅವರನ್ನು ಮನೆಗೆ ಹಣ ಕಳಿಸುವ ವಿಧಾನದ ಬಗ್ಗೆ ಕೇಳಿದೆ. ಕಳೆದ ವರ್ಷ ಥಾಪಾಜಿ, ಈಚೆಗೆ ರಾಧೇಶ್ಯಾಂ ಇಬ್ಬರೂ ಒಂದೇ ಉತ್ತರವನ್ನು ನೀಡಿದರು: ಬ್ಯಾಂಕುಗಳಲ್ಲಿ ಸಿ.ಬಿ.ಎಸ್. [ಇದರ ವಿವರ ಮುಂದೆ ನೋಡಿ!] ಆಗಿರುವುದರಿಂದ ನಮಗೆ ಅನುಕೂಲವಾಗಿದೆ. ತೊಂದರೆಯೇನೂ ಇಲ್ಲ. ಖರ್ಚಿಲ್ಲದೇ ನಾವುಗಳು ಹಣವನ್ನು ಮನೆಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದರು.

ಹಲವು ದಶಕಗಳಿಂದ ಬ್ಯಾಂಕುಗಳ ಗಣಕೀಕರಣ ನಡೆಯುತ್ತಿದೆ. ಮೊದಮೊದಲಿಗೆ ಬ್ಯಾಂಕಿನ ಕಾರ್ಮಿಕ ಸಂಘಗಳು ಈ ಗಣಕೀಕರಣವನ್ನು ವಿರೋಧಿಸಿದ್ದು ಉಂಟು. ಕೆಳವರ್ಗದ ಕಾರ್ಮಿಕರ ಕೆಲಸಗಳು ಗಣಕೀಕರಣದಿಂದ ಹರಣವಾಗುತ್ತದೆ ಅನ್ನುವುದು ಅವರ ವಾದವಾಗಿತ್ತು. ಹೀಗಾಗಿ ನಮ್ಮ ಬ್ಯಾಂಕುಗಳಲ್ಲಿ ಗಣಕೀಕರಣ ನಿಧಾನಗತಿಯಲ್ಲಿಯೇ ನಡೆಯಿತು.

ಇದರ ಫಾಯಿದೆಯೂ ನಮಗಾಯಿತೆನ್ನಿ. ೨೦೦೦ ಇಸವಿಯಲ್ಲಿ ಉದ್ಭವವಾಗುತ್ತದೆಂದು ಗುಲ್ಲೆಬ್ಬಿಸಿದ್ದ ವೈ-ಟೂ-ಕೆ ಸಮಸ್ಯೆ ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ತಟ್ಟಲಿತ್ತು. ಆದರೆ ಆಗ್ಗೆ ಹೆಚ್ಚು ಬ್ಯಾಂಕುಗಳು ಗಣಕೀಕೃತವಾಗಿರಲಿಲ್ಲವಾದ್ದರಿಂದ ಅದು ನಮ್ಮನ್ನು ಹೆಚ್ಚಾಗಿ ತಟ್ಟಲಿಲ್ಲ ಹಾಗೂ ಅದರ ಖರ್ಚನ್ನು ಬ್ಯಾಂಕುಗಳು ಉಳಿಸಿಬಿಟ್ಟವು. ಆಗ್ಗೆ ಇಂಟರ್ನೆಟ್‌ನಲ್ಲಿ ಹರಿಯುತ್ತಿದ್ದ ಒಂದು ನಗೆ ಚಟಾಕಿ ಇಂತಿತ್ತು: "ಭಾರತೀಯ ಬ್ಯಾಂಕುಗಳಲ್ಲಿ ೭೦% ವೈ-ಟೂ-ಕೆ ರೆಡಿ - ಅಂದರೆ ೨೦೦೦ ಇಸವಿಯ ಸಮಸ್ಯೆಯನ್ನು ಪರಿಹರಿಸಿವೆ" ಎಂದು ರಿಜರ್ವ್ ಬ್ಯಾಂಕು ಇತ್ತ ಒಂದು ಅಂಕಿಗೆ ಯಾರೋ ಜೋಡಿಸಿದ್ದ ಬಾಲಂಗೋಚಿ ಅಂದರೆ "ಮಿಕ್ಕ ೩೦% ಬ್ಯಾಂಕುಗಳು ಗಣಕೀಕೃತವಾಗಿವೆ!!" ಅರ್ಥಾತ್ ಗಣಕೀಕರಣವೇ ಇಲ್ಲದ ಬ್ಯಾಂಕುಗಳಲ್ಲಿ ಈ ಸಮಸ್ಯೆ ಸಮಸ್ಯೆಯೇ ಅಲ್ಲವಾಗಿತ್ತು!

ಹೀಗಿದ್ದ, ಬಡವರ ವಿರೋಧಿ ಎಂದು ಕರೆಯಲ್ಪಡುತ್ತಿದ್ದ, ಗಣಕೀಕರಣವನ್ನೂ ಆ ಹೆಸರಿನಿಂದ ಕರೆಯದೇ ಹಿಂಬಾಗಿಲಿನಿಂದ ಆಟೋಮ್ಯಾಟಿಕ್ ಲೆಡ್ಜರ್ ಪೋಸ್ಟಿಂಗ್ ಮಶೀನ್ ಎಂದು ಕಂಪ್ಯೂಟರುಗಳಿಗೆ ಹೊಸ ಹೆಸರು ನೀಡಿ ಗುಪ್ತವಾಗಿ ತರಬೇಕಿದ್ದ ಕಾಲದಿಂದ, ಇಂದಿಗೆ ಬ್ಯಾಂಕುಗಳು ಅದ್ಭುತ ಪ್ರಗತಿಯನ್ನು ಸಾಧಿಸಿಬಿಟ್ಟಿವೆ. ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕಿನಂತಹ ಬ್ಯಾಂಕುಗಳು ತಮ್ಮ ಎಲ್ಲ ಶಾಖೆಗಳೂ ಸಿ.ಬಿ.ಎಸ್. [ಕೋರ್ ಬ್ಯಾಂಕಿಂಗ್ ಸಲ್ಯೂಷನ್] ಅಳವಡಿಸಿವೆ ಅನ್ನುವುದನ್ನು ಘೋಷಿಸಿವೆ. ಈ ಸುದ್ದಿಯ ಮಹತ್ವ ಕಡಿಮೆಯದ್ದೇನೂ ಅಲ್ಲ. ಅದರಲ್ಲೂ ಸರಕಾರೀ ಬ್ಯಾಂಕುಗಳ ಶಾಖೆಗಳು ನಗರ ಪ್ರದೇಶದಲ್ಲಲ್ಲದೇ ಹಳ್ಳಿಗಾಡಿನಲ್ಲೂ ಇರುವುದರಿಂದ [ಒಟ್ಟಾರೆ ೭೦,೦೦೦ ಶಾಖೆಗಳಿರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಮಾರು ೪೫,೦೦೦ ಶಾಖೆಗಳು ನಗರೇತರ ಪ್ರದೇಶದಲ್ಲಿವೆ] ತಂತ್ರಜ್ಞಾನದ ಫಾಯಿದೆ ಅಲ್ಲಿಗೂ ಹಬ್ಬುತ್ತಿದೆ. ಎಷ್ಟೋ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲು ಹೊಸ ವಿ-ಸ್ಯಾಟ್‌ಗಳನ್ನು ಹಾಕಿಸಬೇಕಾಯಿತು. ವಿದ್ಯುತ್ ಸರಬರಾಜು ಇಲ್ಲದ, ಅಥವಾ ಅದರ ಖಾತ್ರಿಯಿಲ್ಲದ ಜಾಗಗಳಲ್ಲಿ ವಿಶೇಷ ಏರ್ಪಾಟುಗಳನ್ನು ಮಾಡಬೇಕಾಯಿತು. ಇದರಿಂದಾಗಿ ರಾಧೇಶ್ಯಾಂ ಮತ್ತು ಥಾಪಾಗೆ ಖರ್ಚಿಲ್ಲದೇ ಮನೆಗೆ ಹಣ ಕಳಿಸುವುದು ಸಾಧ್ಯವಾಗುತ್ತಿದೆ.

ಆದರೆ ಇದರಿಂದ ಆಂತರಿಕವಾಗಿ ಬ್ಯಾಂಕುಗಳಿಗೆ ಕೆಲವು ಪುಟ್ಟ ಸವಾಲುಗಳು ಹುಟ್ಟಿಕೊಂಡಿವೆ. ಈಗ ಬ್ಯಾಂಕುಗಳು ಶಾಖೆಗಳ ಸುತ್ತ ಏರ್ಪಾಟಾಗಿವೆ. ಆದರೆ ಈಗಿನ ತಂತ್ರಜ್ಞಾನದಿಂದ ಅಲ್ಲಿನ ಲಾವಾದೇವಿ ಶಾಖೆಯನುಸಾರ ನಡೆಯಬೇಕೆಂಬ ನಿಯಮವೇನೂ ಇಲ್ಲ. ಥಾಪಾ ಕೆ.ಗುಡಿಯ ಬ್ಯಾಂಕಿನ ಶಾಖೆಗೆ ಹೋಗಿ ತನ್ನು ಹಿಮಾಚಲದ ಎಕೌಂಟಿನಿಂದ ಹಣ ತೆಗೆಯಬಹುದು/ಪಾವತಿ ಮಾಡಬಹುದು. ಆದರೆ ಆ ಲಾವಾದೇವಿಯ ಲಾಭನಷ್ಟ ಸಲ್ಲುವುದು ಹಿಮಾಚಲದ ಎಕೌಂಟಿರುವ ಶಾಖೆಗೆ!

ಹೀಗಾಗಿ ಉತ್ತರಪ್ರದೇಶದಿಂದ ವಲಸೆ ಬಂದು ಮುಂಬಯಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಅನೇಕರಿಗೆ ಪ್ರಭಾದೇವಿಯ ಶಾಖೆಯಲ್ಲಿ ಹಣ ತುಂಬಲು ಕಿರಿಕಿರಿಯಾಗುತ್ತಿದೆಯಂತೆ... ಕಾರಣ, ಪ್ರಭಾದೇವಿಯ ಶಾಖೆಯಲ್ಲಿನ ಸರಾಸರಿ ಲಾವಾದೇವಿಯ ಮೊತ್ತಕ್ಕೆ ಹೋಲಿಸಿನೋಡಿದರೆ ಈ ಮೊತ್ತ ಸಣ್ಣದು. ಹೀಗಾಗಿ ಆ ಬ್ಯಾಂಕಿನ ಉದ್ಯೋಗಿಗಳಿಗೆ, ತಮ್ಮ ಶಾಖೆಯ ಲೆಕ್ಕಕ್ಕೇ ಬರದ ಈ ಪಾವತಿಯ ಕೆಲಸವನ್ನು ಅವರು ಮಾಡಬೇಕಾಗಿದೆ! ಬ್ಯಾಂಕಿಗೆ ಮುಂಚೆ ಡಿಡಿ ಕಮಿಷನ್ ಎಂದು ಬರುತ್ತಿದ್ದ ಆದಾಯವೂ ಖೋತಾ ಆಗಿದೆ. ಆದರೆ ಈ ಎಲ್ಲಕ್ಕೂ ಅಳವಡಿಸಿರುವ ತಂತ್ರಜ್ಞಾನಕ್ಕೆ ಖರ್ಚಂತೂ ಆಗಿದೆ!! ಹೀಗೆ ಬ್ಯಾಂಕುಗಳು ಈಗ ಎದುರಿಸಬೇಕಾಗಿರುವ ಸವಾಲುಗಳೇ ಭಿನ್ನರೀತಿಯಾದವು.

ಈ ತಂತ್ರಜ್ಞಾನದ ಬೆಳವಣಿಗೆಯಿಂದ ಥಾಪಾಗೂ, ರಾಧೇಶ್ಯಾಂಗೂ ಫಾಯಿದೆಯಾಗಿದೆಯಾದರೂ ಇವರು ಪ್ರತಿನಿಧಿಸುವುದು ಎಲ್ಲ ವಲಸೆ ಕಾರ್ಮಿಕರನ್ನಲ್ಲ. ಇವರುಗಳಿಗೆ ಬ್ಯಾಂಕಿನಲ್ಲಿ ಒಂದು ಎಕೌಂಟ್ ಇತ್ತು, ಅಥವಾ ಎಕೌಂಟು ತೆರೆಯಲು ಸಾಧ್ಯವಾಯಿತು. ಆದರೆ ಮರಗೆಲಸ ಮಾಡಲು ಜೋಧ್‍ಪುರದಿಂದ ಬಂದಿರುವ ಸವಾಯಿರಾಮ್‍ನ ತಂಡದ ಯಾರೊಬ್ಬರಿಗೂ ಬ್ಯಾಂಕಿನಲ್ಲಿ ಖಾತೆ ಇಲ್ಲ. ಹೀಗಾಗಿ ಈ ತಂತ್ರಜ್ಞಾನದ ಫಲ ಇನ್ನೂ ವ್ಯಾಪಕ ರೀತಿಯಲ್ಲಿ ಆಗಲು ಸಾಧ್ಯವಾಗಿಲ್ಲ.

ದಕ್ಷಿಣ ಆಫ್ರಿಕಾದ ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಫಾಯಿದೆಯನ್ನು ಒಂದು ಮಜಲು ಕೆಳಕ್ಕೆ ಒಯ್ದಿದ್ದಾರೆ. ಭಾರತದಲ್ಲಿ ಈ ತಂತ್ರಜ್ಞಾನದ ಪೂರ್ತಿ ಫಾಯಿದೆ ಎಲ್ಲಿ ಬ್ಯಾಂಕುಗಳ ಶಾಖೆ ಭೌತಿಕವಾಗಿ ನಿಂತಿದೆಯೋ ಆ ಕ್ಷೇತ್ರಗಳಿಗೆ ಸೀಮಿತವಾಗುತ್ತದೆ. ಅಂದರೆ ಹಣ ಪಾವತಿ ಮಾಡಲು, ಪಡೆಯಲು ಬ್ಯಾಂಕಿನ ಶಾಖೆಗೆ ಪ್ರಯಾಣ ಬೆಳೆಸಬೇಕಾದ್ದು ಅನಿವಾರ್ಯ. ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಬಳಕೆಯ ರೀತಿಯೇ ಕುತೂಹಲದ್ದು. ಅಲ್ಲಿಯ ಗ್ರಾಹಕರಿಗೆ ಬ್ಯಾಂಕು ಒಂದು ಕಾರ್ಡನ್ನು ನೀಡುತ್ತದೆ. ಆ ಕಾರ್ಡನ್ನು ಗ್ರಾಹಕರು ಕಿರಾಣೆಯಂಗಡಿಯಲ್ಲಿ ಉಪಯೋಗಿಸಬಹುದು. ಇದರಲ್ಲಿ ಹೊಸದೇನು ಎಂದು ಹುಬ್ಬೇರಿಸುವ ಮುನ್ನ ಒಂದು ಗಮ್ಮತ್ತಿನ ವಿಷಯವನ್ನು ಹೇಳುತ್ತೇನೆ -- ನಾವೆಲ್ಲರೂ ಡೆಬಿಟ್ ಕಾರ್ಡನ್ನು ಉಪಯೋಗಿಸಿದಾಗ ಮೂಲತಃ ಹಣ ನಮ್ಮ ಖಾತೆಯಿಂದ ಖಾಲಿಯಾಗಿ ಅಂಗಡಿಯವನ ಖಾತೆಗೆ ಸೇರುತ್ತದೆ. ಆದರೆ ಇದರ ವಿರುದ್ಧವಾದ ಉಪಯೋಗದಬಗ್ಗೆ ಯೋಚಿಸಬಹುದೇ? ಕಿರಾಣಿಯಂಗಡಿಯಲ್ಲಿ ಹಣ ಪಾವತಿ ಮಾಡಿ ಅದು ನಮ್ಮ ಖಾತೆಗೆ ಹೋದರೆ? ಹೀಗೆ ಭಾರತದಲ್ಲಿ ಕಾರ್ಡಿನ ಮೂಲಕ ಒಂದು ಮೊಬಲಗಿನ ಸಮಾನವಾದ ಸರಕನ್ನು ಪಡೆಯಬಹುದಾದ ಅರ್ಧ ಫಾಯಿದೆ ಮಾತ್ರವಿದ್ದರೆ, ಟೇಬಾಬ್ಯಾಂಕಿನವರು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಡೆಬಿಟ್ ಕಾರ್ಡನ್ನು ಸ್ವೀಕರಿಸುವ ಪ್ರತಿ ಕಿರಾಣೆಯಂಗಡಿಯೂ ಒಂದು ಪುಟ್ಟ ಲಾವಾದೇವಿಯ ಬ್ಯಾಂಕೇ ಆಗಿಬಿಡುತ್ತದೆ! ಈ ಪದ್ಧತಿಯನುಸಾರ ನಮ್ಮ ದೇಶದಲ್ಲಿ ೭೦,೦೦೦ ಶಾಖೆಗಳಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಎಷ್ಟು ಹೊಸ
ಕೊಂಡಿಗಳು ಸೇರಿಕೊಳ್ಳಬಹುದೋ ಊಹಿಸಿ!

ಆದರೆ ಟೇಬಾಬ್ಯಾಂಕಿನ ಉದಾಹರಣೆಗೂ ಬ್ಯಾಂಕಿನ ಎಕೌಂಟ್ ಬೇಕು. ಬ್ಯಾಂಕೇ ಇಲ್ಲದೆ ಹಣ ಪಾವತಿ ಮಾಡುವ ತಂತ್ರಜ್ಞಾನವಿರಬಹುದೇ? ಇದಕ್ಕೆ ನಮಗೆ ಉದಾಹರಣೆ ಸಿಗುವುದು ಕೀನ್ಯಾ ಮತ್ತು ಅಫಘಾನಿಸ್ಥಾನ ದೇಶಗಳಲ್ಲಿ. ಅರ್ಥಾತ್: ಉತ್ತಮವಾದ ಕೆಲವು ಪಾಠಗಳನ್ನು ಕಲಿಯಲು ನಾವು ಪಶ್ಚಿಮಾಭಿಮುಖವಾಗಿ ವಿಕಸಿತ ದೇಶಗಳನ್ನೇ ನೋಡಬೇಕಾಗಿಲ್ಲ. ಅಫಘಾನಿಸ್ಥಾನದಲ್ಲಿ ನಿಮಗೆ ರೋಷಾನೆ ಸಂಸ್ಥೆಯ ಮೊಬೈಲ್ ಫೋನಿದ್ದಲ್ಲಿ - ಬ್ಯಾಂಕಿನ ಎಕೌಂಟೂ ಬೇಕಿಲ್ಲ. ಏರ್ಟೈಮ್ ಮಾರುವ ಯಾವುದೇ ಮೂಲೆಯಂಗಡಿಗೆ ಹೋಗಿ ಹಣ ಪಾವತಿ ಮಾಡಿದರೆ ಆ ಬದಿಯಲ್ಲಿರುವ ಮೊಬೈಲ್ ಗ್ರಾಹಕನಿಗೆ ಒಂದು ಕೋಡ್ ಇರುವ ಎಸ್ಸೆಮ್ಮೆಸ್ ಹೋಗುತ್ತದೆ. ಆ ಎಸ್ಸೆಮ್ಮೆಸ್ಸನ್ನು ಹಿಡಿದು ಆತ ತನ್ನ ಸಮೀಪದ ಏರ್ಟೈಮ್ ಮಾರುವವನ ಬಳಿ ಹೋಗಿ ಹಣ ಪಡೆಯಬಹುದು. ಬ್ಯಾಂಕೂ ಬೇಡ, ಅಕೌಂಟೂ ಬೇಡ, ಖರ್ಚೂ ಕಡಿಮೆ, ಕಳುವೂ ಆಗುವುದಿಲ್ಲ, ತಕ್ಷಣ ಪಾವತಿ. ಬ್ಯಾಂಕಿನ ಶಾಖೆಗಳೇ ಇಲ್ಲದ ದಿನಗಳನ್ನು ನನ್ನ ಬದುಕಿನ ಕಾಲದಲ್ಲಿಯೇ ನೋಡಬಹುದೇ? ಟೆಲಿಪೋನ್ ಕಂಪನಿಯೇ ಬ್ಯಾಂಕಾಗುವುದನ್ನು ಕಾಣಬಹುದೇ. ಪೇಪರ್ ದುಡ್ಡೇ ಇಲ್ಲದ ದಿನವನ್ನು ನೋಡಬಹುದೇ? ಹಗಲುಗನಸುಗಳಿಗೆ ಅಂತ್ಯವಿಲ್ಲ.. ಆದರೂ ಒಂದೆಡೆಯಿಂದ ಇನ್ನೊಂದೆಡೆಗ ಬಡವರ ಹಣ ತಂತ್ರಜ್ಞಾನದ ಆಧಾರದ ಮೇಲೆ ಹೆಚ್ಚು ಖರ್ಚಿಲ್ಲದೇ ಓಡಾಡುತ್ತಿರುವುದೇ ಒಂದು ಮೌನ ಕ್ರಾಂತಿಯಲ್ಲವೇ?



Wednesday, June 3, 2009

ಗೋದಾವರಿಯ ಅಕ್ಷರಸ್ಥರೂ, ಧರ್ಮಪುರಿಯ ವಿದ್ಯಾವಂತರೂ..


ಈಚೆಗೆ ಒಂದು ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳಿಂದ ನಾವು ಮಾಹಿತಿಯನ್ನು ಸಂಗ್ರಹಿಸಿದೆವು. ಪಶ್ಚಿಮ ಗೋದಾವರಿ ಜಿಲ್ಲೆ ಎಲ್ಲ ರೀತಿಯಿಂದಲೂ ಧರ್ಮಪುರಿಗಿಂತ ಹೆಚ್ಚು ವಿಕಾಸ ಕಂಡಿರುವ ಜಿಲ್ಲೆ ಅನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಮಳೆಯೂ ಧರ್ಮಪುರಿಗಿಂತ ಹೆಚ್ಚು. ಪಶ್ಚಿಮ ಗೋದಾವರಿಯಲ್ಲಿ ೮೦ ಪ್ರತಿಶತ ಕೃಷಿ ಭೂಮಿಗೆ ನೀರಾವರಿಯ ವ್ಯವಸ್ಥೆ ಇದ್ದರೆ ಧರ್ಮಪುರಿಯಲ್ಲಿ ಅದು ಅರ್ಧಕ್ಕಿಂತಲೂ ಕಡಿಮೆ. ಸೆನ್ಸಸ್ ಮತ್ತು ಜಿಲ್ಲಾ ಮಾಹಿತಿಯನ್ನು ಗಮನಿಸಿದಾಗ ನಮಗೆ ಒಟ್ಟಾರೆ ಎಲ್ಲ ವಿಭಾಗಗಳಲ್ಲೂ ಧರ್ಮಪುರಿ ಹಿಂದುಳಿದಿರುವುದು ಕಾಣಿಸುತ್ತದೆ. ಉದಾಹರಣೆಗೆ, ಆರುವರುಷಕ್ಕೆ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿಯನ್ನು ಕಂಡಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ ಕೇವಲ ೮೩೩ ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಈ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಆಗುತ್ತಿರಬಹುದಾದ ಸಾಧ್ಯತೆಯನ್ನೂ ನಾವುಗಳು ತಳ್ಳಿಹಾಕುವಂತಿಲ್ಲ.

ಹೀಗೆ ಅನೇಕ ಮಾನದಂಡದನುಸಾರ ಧರ್ಮಪುರಿ ಹಿಂದುಳಿದಿದೆ ಅನ್ನುವುದಕ್ಕೆ ನಮಗೆ ಪುರಾವೆ ಸಿಕ್ಕಿತ್ತು. ವಿದ್ಯೆಗೆ ಸಂಬಂಧಿಸಿದಂತೆ ಕೂಡಾ ನಮಗೆ ಇಂಥದೇ ಮಾಹಿತಿ ಎದುರಾಗಬಹುದೆಂದು ನಾವು ಊಹಿಸಿದ್ದೆವು.  ಗೋದಾವರಿಯಲ್ಲಿ ೭೧ ಪ್ರತಿಶತ ಜನ ಅಕ್ಷರಸ್ಥರು ಹಾಗೂ ಇದು ಆಂಧ್ರಪ್ರದೇಶದ ಒಟ್ಟಾರೆ ಮಾಹಿತಿಗಿಂತ ಉತ್ತಮವಾಗಿತ್ತು, ಧರ್ಮಪುರಿಯಲ್ಲಿ ೬೧ ಪ್ರತಿಶತ ಜನ ಅಕ್ಷರಸ್ಥರು ಹಾಗೂ ಇದು ತಮಿಳು ನಾಡಿನ ಮಾಹಿತಿಗಿಂತ ಕಡಿಮೆಯಿತ್ತು. ಇವೆಲ್ಲಾ ಸರಕಾರಿ ಮಾಹಿತಿಯಾದರೆ ನಾವು ಈ ಜಿಲ್ಲೆಗಳಲ್ಲಿ ಸುಮಾರು ೧೨೦೦ ಕುಟುಂಬಗಳಿಂದ ಸಂಗ್ರಹಿಸಿದ  ಮಾಹಿತಿಯಲ್ಲಿ ಒಂದು ಪುಟ್ಟ ವಿಚರ ಮಾತ್ರ ನಮ್ಮನ್ನು ವಿಚಲಿತಗೊಳಿಸಿದ್ದು ನಿಜ.

ನಾವು ಕುಟುಂಬಗಳಿಂದ ಸಂಗ್ರಹಿಸಿದ ಅಕ್ಷರಸ್ಥರ ಮಾಹಿತಿ ಒಟ್ಟಾರೆ ಮಾಹಿತಿಗೆ ಹೋಲುತ್ತಿತ್ತು. ಆದರೆ ಮಾಹಿತಿಯಲ್ಲಿ ನಾವು ಹೆಚ್ಚಿನ ವಿವರಗಳನ್ನು ಕೇಳಿದ್ದೆವು. ಅಕ್ಷರಸ್ಥರನ್ನು ನಾವು ಐದು ಭಾಗಗಳಲ್ಲಿ ವಿಂಗಡಿಸಿದ್ದೆವು - ಪ್ರಾಥಮಿಕ ಶಾಲೆ ಕಂಡವರು [ಸಹಿ ಹಾಕ ಬಲ್ಲವರು], ಪ್ರಾಥಮಿಕ ಶಾಲೆ ಮುಗಿಸಿದವರು, ಎಸ್ಸೆಸ್ಸೆಲ್ಸಿ ಪಾಸಾದವರು ಪದವಿ ಪಡೆದವರು, ಹಾಗೂ ಉನ್ನತ ಪದವಿ ಪಡೆದವರು. ಪದವಿ ಮುಗಿಸಿದವರ ಮಾಹಿತಿಯಲ್ಲಿ ಪ.ಗೋದಾವರಿಗೂ ಧರ್ಮಪುರಿಗೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಒಟ್ಟಾರೆ ಐದು ಪ್ರತಿಶತ ಜನ ಈ ಘಟ್ಟವನ್ನು ದಾಟಿದ್ದರು. ಆದರೆ ನಮ್ಮನ್ನು ಅವಾಕ್ಕುಗೊಳಿಸಿದ್ದು ನಡುವಿನ ಮಾಹಿತಿ. ನಾವು ಸಂಗ್ರಹಿಸಿದ ಮನೆಗಳಿಂದ ಪ.ಗೊದಾವರಿ ಜಿಲ್ಲೆಯಲ್ಲಿ ಸುಮಾರು ೨೮ ಪ್ರತಿಶತ ಅಕ್ಷರಸ್ಥರು, ಕೇವಲ ಅಕ್ಷರಸ್ಥರು ಮಾತ್ರವೇ ಆಗಿದ್ದು ’ವಿದ್ಯಾವಂತ’ರಾಗಿರಲಿಲ್ಲ - ಅರ್ಥಾತ್ ಅವರುಗಳು ಕೇವಲ ಹಸ್ತಾಕ್ಷರ ಹಾಕುವಷ್ಟರ ಮಟ್ಟಿಗೆ ಮಾತ್ರ ಅಕ್ಷರಸ್ಥರಾಗಿದ್ದರು. ಅದೇ ಧರ್ಮಪುರಿಯಲ್ಲಿ ಒಟ್ಟಾರೆ ೭ ಪ್ರತಿಶತ ಜನಮಾತ್ರ ಹಸ್ತಾಕ್ಷರಸ್ಥರಾಗಿದ್ದು ಮಿಕ್ಕವರು ಶಾಲೆಯನ್ನು ದಾಟಿದ್ದಲ್ಲದೇ ೨೬ ಪ್ರತಿಶತ ಜನ ಎಸ್ಸೆಸ್ಸೆಲ್ಸಿಯನ್ನು ಪಾಸುಮಾಡಿದ್ದರು.

ಈ ಮಾಹಿತಿ ಗಮ್ಮತ್ತಿನದ್ದು ಯಾಕೆಂದರೆ ಒಟ್ಟಾರೆ ಮಾಹಿತಿಯಲ್ಲಿ ನಮಗೆ ಧರ್ಮಪುರಿ ಪ.ಗೋದಾವರಿಗಿಂತ ’ಅನಕ್ಷರಸ್ಥ’ ಜಿಲ್ಲೆಯಾಗಿ ಕಾಣಿಸುತ್ತದೆ. ಅಕ್ಷರಸ್ಥರ ಮಾಹಿತಿಯನ್ನು ಬಿಡಿಸಿನೋಡಿದಾಗ ಧರ್ಮಪುರಿಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚು ಎನ್ನುವುದು ವೇದ್ಯವಾಗುತ್ತದೆ. ಇದಕ್ಕೆ ಕಾರಣಗಳೇನಿರಬಹುದು? ಯಾಕೆ ಇದ್ದಕ್ಕಿದ್ದಂತೆ ಧರ್ಮಪುರಿಯಲ್ಲಿ ಈ ಜಾದೂ ನಡೆಯಿತು, ಅಥವಾ ನಮ್ಮ ಮಾಹಿತಿಯಲ್ಲಿಯೇ ಏನಾದರೂ ಹುಳುಕಿದೆಯೇ ಅನ್ನುವ ಅನುಮಾನ ನಮ್ಮನ್ನಾವರಿಸುವುದು ಸಹಜವೇ ಆಗಿತ್ತು.

ಹೀಗೆ ಮಾಹಿತಿಯಲ್ಲಿ ವಿಚಿತ್ರ ಧೋರಣೆಗಳು ಕಂಡಾಗ ಅದನ್ನು ಬಗೆಯಬೇಕು ಅನ್ನಿಸುವುದು ಸಹಜ. ಈ ಮಾಹಿತಿ ನಮ್ಮ ಮುಂದೆ ಬಂದಾಕ್ಷಣಕ್ಕೆ ನಾವು ನೋಡಿದ್ದು ಎರಡೂ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಉನ್ನತ ಪ್ರಾಥಮಿಕ ಶಾಲೆಗಳ ಸಂಖ್ಯೆ. ಎರಡೂ ಜಿಲ್ಲೆಗಳ ವಿಸ್ತಾರ ಮತ್ತು ಜನಸಂಖ್ಯೆ ಭಿನ್ನವಾದ್ದರಿಂದ ಪ್ರತಿ ಲಕ್ಷ ಜನಸಂಖ್ಯೆಗೆ ಎಷ್ಟು ಶಾಲೆಗಳಿವೆ ಎನ್ನುವುದೇ ಸರಿಯಾದ ಮಾಹಿತಿಯಾಗುತ್ತದೆ. ಈ ಮಾಹಿತಿಯನ್ನು ನಾವು ನೋಡಿದಾಗ ಅವಾಕ್ಕಾಗದೇ ಇರಲಾಗಲಿಲ್ಲ. ಧರ್ಮಪುರಿಯಲ್ಲಿ ಪ್ರತಿಲಕ್ಷ ಜನಸಂಖ್ಯೆಗೆ ೮೫ ಪ್ರಾಥಮಿಕ ಶಾಲೆಗಳೂ, ೨೪ ಉನ್ನತ ಪ್ರಾಥಮಿಕ ಶಾಲೆಗಳೂ ಇದ್ದುವು. ಪ.ಗೋದಾವರಿಯಲ್ಲಿ ಇದು ೬೯ ಮತ್ತು ೧೧ರ ಮಟ್ಟದಲ್ಲಿತ್ತು. ಧರ್ಮಪುರಿಯ ಸರಾಸರಿ ತಮಿಳುನಾಡಿನ ಒಟ್ಟಾರೆ ಸರಾಸರಿಯಾದ ೫೦ ಪ್ರಾಥಮಿಕ, ೧೩ ಉನ್ನತ ಪ್ರಾಥಮಿಕ ಶಾಲೆಗಳಿಗಿಂತ ಉತ್ತಮ. ಅದೇ ಪ.ಗೋದಾವರಿಯಲ್ಲಿ ಪ್ರಾಥಮಿಕ ಶಾಲೆಗಳ ಸರಾಸರಿ ತುಸು ಉತ್ತಮವಾದರೂ ಉನ್ನತ ಪ್ರಾಥಮಿಕ ಶಾಲೆಗಳ ಸರಾಸರಿ ರಾಜ್ಯಕ್ಕಿಂತ ಕಡಿಮೆಯಿತ್ತು. 

ಇದರ ಜೊತೆಗೇ ಮತ್ತೊಂದು ಮಾಹಿತಿಯೂ ನಮಗೆ ಮುಖ್ಯ ಅಂತ ಅನ್ನಿಸಿತು. ಧರ್ಮಪುರಿಯ ಜನಸಂಖ್ಯಾಸಾಂದ್ರತೆ ಪ.ಗೋದಾವರಿಗಿಂತ ಬಹಳವೇ ಕಡಿಮೆ. ಅರ್ಥಾತ್ ಒಂದು ಚದರ ಕಿಲೋಮೀಟರಿನಲ್ಲಿ ಪ.ಗೋದಾವರಿ ಜಿಲ್ಲೆಯಲ್ಲಿ ಧರ್ಮಪುರಿಗಿಂತ ಹೆಚ್ಚು ಜನ ಕಾಣಸಿಗುತ್ತಾರೆ. ಆದರೆ ಧರ್ಮಪುರಿಯ ೬೫ ಪ್ರತಿಶತ ಹಳ್ಳಿಗಳಿಗೆ ಪಕ್ಕಾ ರಸ್ತೆಯಿದೆ. ವಿಕಸಿತ ಪ.ಗೋದಾವರಿ ಜಿಲ್ಲೆಯಲ್ಲಿ ಈ ಅಂಕಿ ಕೇವಲ ೨೨ ಪ್ರತಿಶತ ಮಾತ್ರವಿದೆ. 

ಈ ಮಾಹಿತಿಯ ಬಗ್ಗೆ ಯೋಚಿಸಿದರೆ ಧರ್ಮಪುರಿ ಯಾಕೆ ಇಷ್ಟು ವಿಚಿತ್ರ ಅನ್ನಿಸದಿರುವುದಿಲ್ಲ. ಮಿಕ್ಕ ಸವಲತ್ತುಗಳಲ್ಲೆಲ್ಲಾ - ಪೋಸ್ಟಾಫೀಸು, ಬ್ಯಾಂಕುಗಳ ಸಂಖ್ಯೆ ಇತರ ಮಾಹಿತಿಯೆಲ್ಲವೂ ಗೋದಾವರಿಯ ಪರವಾಗಿಯೇ ಇದೆ. ಇದಕ್ಕೆ ಕಾರಣವೇನಿರಬಹುದು? ಈ ಬಗ್ಗೆ ನನ್ನ ಅಭಿಪ್ರಾಯ ಸ್ಪಷ್ಟವಾದದ್ದಲ್ಲ. ಯಾಕೆಂದರೆ ಈ ಮಾತುಗಳನ್ನು ಹೇಳಲು ನನಗೆ ಬಲವಾದ ಮಾಹಿತಿಯಿಲ್ಲ. ಆದರೂ ಯಾಕೆ ಹೀಗಾಗಿರಬಹುದೆನ್ನುವ ಕೆಲವು ಊಹೆಗಳನ್ನು ಹರಿಯಬಿಟ್ಟು ಚರ್ಚೆ ಮಾಡುವುದರಿಂದ ವಿಕಾಸದ ಗತಿ/ದಿಕ್ಕನ್ನು ಅರ್ಥೈಸಲು ಹೆಚ್ಚು ಉಪಯೋಗವಾಗಬಹುದೇನೋ.

  • ಪ್ರಧಾನ ವೃತ್ತಿ ಕೃಷಿಯಾದಾಗ, ಕೃಷಿ ಲಾಭದಾಯಕವಾಗಿ ನಡೆಯುವಾಗ ಅದು ಹೆಚ್ಚು ಬಂಡವಾಳದ ಮೇಲೆ ಆಧಾರಿತವಾಗಿರುತ್ತದೆ. ಹೀಗಾದಾಗ ಬಂಡವಾಳವನ್ನು ಹೂಡುವವರ ಕೈಯಲ್ಲಿ ಭೂಮಿ ಸೇರಿಕೊಳ್ಳುತ್ತದೆ. ಪ.ಗೋದಾವರಿಯಲ್ಲಿ ವ್ಯವಸಾಯ ನಡೆಸುವವರು ಸರಾಸರಿ ಕಡಿಮೆ. ವ್ಯವಸಾಯ ಕೂಲಿಗಳು ಸರಾಸರಿ ಹೆಚ್ಚು. ಧರ್ಮಪುರಿಯಲ್ಲಿ ಸ್ವಂತ ಕೃಷಿ ನಡೆಸುವವರು ಹೆಚ್ಚು [ಆದರೆ ಅವರಡಿಯಿರುವ ಭೂಭಾಗ ಕಡಿಮೆ] ವ್ಯವಸಾಯ ಕೂಲಿಗಳು ಕಡಿಮೆ. ಕೃಷಿಯನ್ನು ಆಧಾರವಾಗಿಟ್ಟುಕೊಳ್ಳದೇ ಇತರ ಕೆಲಸ ಮಾಡುವವರ ಪರಿಮಾಣ ಹೆಚ್ಚು.

  • ಧರ್ಮಪುರಿ ಜಿಲ್ಲೆಯಲ್ಲಿ ಪ್ರಾಥಮಿಕ, ಉನ್ನತ ಪ್ರಾಥಮಿಕ ಶಾಲೆಗಳು ಹೆಚ್ಚಾಗಿವೆ. ರಸ್ತೆಯೂ ತಕ್ಕಮಟ್ಟಿಗಿದೆ. ಕೃಷಿಯಲ್ಲಿ ಭವಿಷ್ಯ ಕಾಣದಿರುವುದರಿಂದ, ಜನ ವಿದ್ಯೆಯಾಧಾರಿತ ಕೆಲಸಗಳ ಮೊರೆ ಹೋಗಬೇಕು. ಹೀಗಾಗಿ ಮಕ್ಕಳು ಶಾಲೆಗೆ ಹೋದರೆ, ಅಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚು.

  • ಪ.ಗೋದಾವರಿಯಲ್ಲಿ ಶಾಲೆಗೆ ಹೋದರೂ, ವಿದ್ಯೆಯಿಂದ ಭವಿಷ್ಯ ಬಹುಶಃ ಭೂಮಾಲೀಕರಿಗೆ ಮಾತ್ರ ಕಾಣಿಸುತ್ತಿರಬಹುದು. ವ್ಯವಸಾಯ ಕೂಲಿಯಿಂದ ಒಳ್ಳೆಯ ಆದಾಯ ಬರಬಹುದಾದ್ದರಿಂದ ಸ್ಕೂಲಿನಲ್ಲಿ ಮುಂದುವರೆಯುವುದರ ಅರ್ಥ ಜನರಿಗೆ ಕಾಣುತ್ತಿಲ್ಲವೇನೋ. ಹೀಗಾಗಿ ಸಮೀಪದಲ್ಲಿ ಸ್ಕೂಲು ಕಾಣದಾಗ ವಿದ್ಯೆ ಮುಕ್ತಾಯವಾಗುತ್ತಿದೆ.

  • ವಿದ್ಯೆಗೂ ಭ್ರೂಣಹತ್ಯೆಯಂತಹ ಕ್ರಿಯೆಗೂ ಯಾವ ಬಾದರಾಯಣ ಸಂಬಂಧವೂ ಇದ್ದಂತಿಲ್ಲ. ಹೆಚ್ಚು ವಿದ್ಯಾವಂತರಿರುವ ಧರ್ಮಪುರಿಯಲ್ಲಿ ಒಟ್ಟಾರೆ ಮಹಿಳೆಯರ ಜನಸಂಖ್ಯೆ ಕಡಿಮೆಯೇ. ಆದರೆ ವಿಕಸಿತ ಪ್ರದೇಶಗಳಲ್ಲಿ ಇದು ಉತ್ತಮ ಎಂದು ಪ.ಗೋದಾವರಿಯ ಜಿಲ್ಲೆಯ ಮಾಹಿತಿಯ ಆಧಾರದ ಮೇಲೆ ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದಾಗ ಅಭಿವೃದ್ಧಿಗೊಂಡ ಪಂಬಾಜ್ ಹರ್ಯಾಣ ನಮ್ಮನ್ನು ಅಣಕಿಸುತ್ತವೆ.

  • ಹಾಂ, ಧರ್ಮಪುರಿಯಲ್ಲಿ ಚಿಕ್ಕಸಾಲದ ಸ್ವ-ಸಹಾಯ ಗುಂಪುಗಳು ಬಹಳ ಹಿಂದೆಯೇ ಏರ್ಪಾಟಾಗಿದ್ದುವು. ಬಹುಶಃ ಭಾರತದಲ್ಲೇ ಮೊದಲ ಗುಂಪುಗಳು ಇಲ್ಲಿ ಮೈರಾಡಾ ಮತ್ತು ತಮಿಳುನಾಡು ಸರಕಾರದ ವತಿಯಿಂದ ಏರ್ಪಾಟಾಗಿತ್ತು. ಹೆಚ್ಚು ಮಹಿಳೆಯರು ಈ ಕ್ರಾಂತಿಯ ಭಾಗವಾಗಿರುವುದನ್ನು ನಾವು ಕಾಣಬಹುದು. ಹೀಗಾಗಿ ಮಹಿಳೆಯರ ಕೈಯಲ್ಲಿ ಹಣ ಹೆಚ್ಚು ಓಡಾಡಿದಾಗ ಮಕ್ಕಳ ವಿದ್ಯೆಗೆ ದಾರಿಕಾಣಬಹುದು ಅನ್ನುವ ಮತ್ತೊಂದು ಬಾದರಾಯಣ ಸಂಬಂಧವನ್ನು ಹುಡುಕಬಹುದು. ಆದರೆ ಆ ಬಾದರಾಯಣ ಸಂಬಂಧದಿಂದ ಭ್ರೂಣ ಹತ್ಯೆ ಇಲ್ಲಿ ಯಾಕೆ ಗೋದಾವರಿಗಿಂತ ಹೆಚ್ಚು ಅನ್ನುವುದಕ್ಕೆ ಉತ್ತರ ದೊರೆಯುವುದಿಲ್ಲ.

ಹೀಗೆ ಸತ್ಯದ ಶೋಧನೆಯನ್ನು ಮುಂದುವರೆಸಲೇಬೇಕಾಗಿದೆ. ಒಂದಕ್ಕೊಂದು ಕೊಂಡಿಹಾಕಿಕೊಂಡಿರುವ ವಿಚಾರಗಳ ಈರುಳ್ಳಿಯನ್ನು ಬಿಡಿಸಬೇಕಾಗಿದೆ. ಆದರೆ ಈ ಎಲ್ಲದರ ನಡುವೆ ಯಾವ ವಿವರಣೆಯನ್ನೂ ನೀಡದೇ ಎದ್ದುನಿಂತಿರುವ ವಿಚಾರವೆಂದರೆ, ಧರ್ಮಪುರಿಯಲ್ಲಿ ಇಷ್ಟೊಂದು ಶಾಲೆಗಳು ಯಾವ ಜಾದೂವಿನಿಂದ ಬಂತು ಅನ್ನುವುದೇ......


೫ ಮೇ ೨೦೦೯